ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ ಆರಂಭ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation-RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಆರ್ ಕೆ ಶ್ರೀಕಂಠನ್ ಅವರ ೧೦೪ ನೆಯ ವರ್ಷದ ಸಂದರ್ಭದಲ್ಲಿ ಈ ಕನ್ನಡ ಆವೃತ್ತಿ ಬಿಡುಗಡೆಯಾಗುವುದಿತ್ತು. ಆದರೆ ಕೋವಿಡ್ ನ ಕಾರಣದಿಂದ ಅದು ಸದ್ಯದಲ್ಲೇ ಓದುಗರಿಗೆ ಸಿಗಲಿದೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಇನ್ನು ಮುಂದೆ ಧಾರಾವಾಹಿಯಾಗಿ ಪ್ರಕಟವಾಗಲಿದೆ.

ಈ ಅಂಕಣದಲ್ಲಿ ಈ ಕೃತಿಯನ್ನು ಬರೆದ ಅದ್ಭುತ ಪಯಣದ ಬಗ್ಗೆ ಲೇಖಕಿ ರಂಜನಿ ಗೋವಿಂದ್ ಅವರ ಮಾತುಗಳು ಇಲ್ಲಿವೆ-

1

This image has an empty alt attribute; its file name is ranjani-govind.jpg

ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಪ್ರತಿ ವರ್ಷ ಹೊಸ ಸುಗ್ಗಿಯಿಂದ ಸಂಭ್ರಮಿಸುವ ಮತ್ತು ಋತುವಿನ ನವೀನ ಕೃಷಿ ಉತ್ಪನ್ನಗಳನ್ನು ಸ್ವಾಗತಿಸುವ ಹಬ್ಬವಾಗಿದೆ. ಆದರೆ ರುದ್ರಪಟ್ಣದ ಹಸಿರು ತುಂಬಿದ ಗ್ರಾಮಕ್ಕೆ, ವಿಶೇಷತಃ ಕರ್ನಾಟಕ ಸಂಗೀತಲೋಕಕ್ಕೆ 1920ರ ಸಂಕ್ರಾಂತಿ, ಸುಗ್ಗಿಯ ಹಿಗ್ಗಿನ ಜೊತೆಗೆ ನವ ಆರಂಭವನ್ನು ದ್ಯೋತಿಸುವ ಪರ್ವವಾಯಿತು.

ಹಾಸನ ಜಿಲ್ಲೆಯಲ್ಲಿ ಪವಿತ್ರ ಕಾವೇರೀ ತೀರದಲ್ಲಿರುವ ಈ ರಮ್ಯ ಮನೋಹರ ಸಂಕೇತಿ ಗ್ರಾಮದ, ವೇದ-ಸಂಸ್ಕøತ ವಿದ್ವಾಂಸರ ಮನೆತನಕ್ಕೆ ಸೇರಿದ ಸಂಕೇತಿ ದಂಪತಿ ಸಣ್ಣಕ್ಕ ಮತ್ತು ಕೃಷ್ಣಶಾಸ್ತ್ರಿಗಳಿಗೆ ಅಂದು, ಮುಂದೆ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಲಿದ್ದ ಶ್ರೀಕಂಠನ್ ಚತುರ್ಥ ಪುತ್ರನಾಗಿ ಜನಿಸಿದರು.

ಲಲಿತಕಲೆಗಳು ಮತ್ತು ಶಾಸ್ತ್ರಗಳನ್ನು ಹೃತ್ಪೂರ್ವಕವಾಗಿ ಪ್ರೀತಿಸುತ್ತಿದ್ದ ಈ ಮನೆತನ ಸಂಗೀತ, ವೇದ ಮತ್ತು ಶಿಕ್ಷಣಗಳ ಪೋಷಣೆಯಲ್ಲಿ ಮುಳುಗಿತ್ತು. ರುದ್ರಪಟ್ಣ ಮೂಲತಃ ಕೃಷಿಯನ್ನು ಆಧರಿಸಿದ ಜನಸಮುದಾಯವನ್ನು ಹೊಂದಿದ್ದರೂ, ಜೊತೆಜೊತೆಗೇ ನಾದಸೌಖ್ಯಕ್ಕೆ ಸಂವೇದನಾಶೀಲವಾದ ಶ್ರವಣೇಂದ್ರಿಯವನ್ನು ಪಾರಂಪರ್ಯವಾಗಿ ಪಡೆದ ವೇದವಿದ್ವಾಂಸರಿಂದಲೂ ತುಂಬಿತ್ತು.

ಶ್ರೀಕಂಠನ್ ಪುಟ್ಟ ಮಗುವಾಗಿರುವಾಗಲೇ ಕೃಷ್ಣಶಾಸ್ತ್ರಿಗಳು ಅವನಿಗೆ ಶ್ರುತಿಯನ್ನು ಪರಿಚಯಿಸಿದರು. ಸಂಗೀತದೊಂದಿಗಿನ ಈ ಮಿಲನ ಅವನ ಜೀವನದುದ್ದಕ್ಕೂ ಸಮಗ್ರವಾಗಿ, ಅಕ್ಷರಶಃ ಅವಿಭಾಜ್ಯವಾಗಿ, 2011ನೇ ಇಸವಿಯಲ್ಲಿ ‘ಪದ್ಮಭೂಷಣ’ ಪ್ರಶಸ್ತಿ ಪ್ರಾಪ್ತಿಯಲ್ಲಿ ಪರಾಕಾಷ್ಠೆಯನ್ನು
ತಲುಪುವವರೆಗೆ ಮುಂದುವರಿಯಿತು. ವಿಸ್ಮಯವುಕ್ಕಿಸುವ ಶ್ರುತಿಶುದ್ಧ ನಾದ ಮತ್ತು ಆಧಿಕಾರಿಕತೆಯೊಂದಿಗೆ ಶ್ರೀಕಂಠನ್ ವಿಶ್ವದಾದ್ಯಂತ ವಿಭಿನ್ನ ವೇದಿಕೆಗಳನ್ನು ಅಲಂಕರಿಸಿದುದಕ್ಕೆ ಇತ್ತೀಚಿನ ಎಂಬತ್ತು ವರ್ಷಗಳು ಸಾಕ್ಷಿಯಾಗಿವೆ.

ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಶ್ರೀಕಂಠನ್ ಎಂದಿಗೂ ಮಾಸದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಇದು ಸಾಧ್ಯವಾದದ್ದು ಕೇವಲ ಅವರು ಅತಿದೀರ್ಘಕಾಲ ಕರ್ನಾಟಕ ಸಂಗೀತವನ್ನು ಆರಾಧಿಸಿದುದರಿಂದ ಮಾತ್ರವಲ್ಲ, ಅತ್ಯುಚ್ಚ ಸ್ಥಾನವನ್ನು ಗಳಿಸುವಲ್ಲಿ ಪರಮ ಸಹನಶೀಲರಾಗಿ ಅವರು ಪ್ರದಶಿರ್ಸಿದ ವಜ್ರೋಪಮ ಇಚ್ಛಾಶಕ್ತಿಯಿಂದಲೂ ಹೌದು. ಅವರ ಈ ಸುದೀರ್ಘ ಸಂಗೀತಮಯ ಜೀವನ, ಸದಾ ಪ್ರಸ್ತುತವಾಗಿ ಉಳಿಯುವ ಅಪರೂಪದ ಗುಣದ ದ್ಯೋತಕ.

ವಾಣಿಜ್ಯಮಯ ಎಂಬಂತೆ ತೋರಿಬರುವ ಪ್ರಪಂಚದಲ್ಲಿ ಈ ಅದ್ಭುತ ಶಕ್ತಿ, ಕಟ್ಟುನಿಟ್ಟಾದ ಆದರ್ಶಗಳೊಡನೆ ಅವಿಚ್ಛೇದ್ಯವಾಗಿ ಬೆಸೆಯಲ್ಪಟ್ಟ ಚೇತನದ ಮುಖವಾಣಿ. ಶ್ರೀಕಂಠನ್ ರವರ ಶಾಸ್ತ್ರಶುದ್ಧಿ ಮಾರುಕಟ್ಟೆಯ ಆಕರ್ಷಣೆಗಳಿಗೆ ಮಣಿಯದ ದೃಢತೆಯ ಪ್ರತೀಕ. ಶತಶತಮಾನಗಳಿಂದ ಸುಪ್ರತಿಷ್ಠಿತವಾಗಿರುವ ಸಂಗೀತ ಶೈಲಿಗೆ ಬದ್ಧರಾಗಿರುವ ಶ್ರೀಕಂಠನ್ ಅವರನ್ನು ಹಗುರವಾದ ಜನಪ್ರಿಯತೆಯತ್ತ ಒನೆಯದಂತೆ ತಡೆದದ್ದು, ಅತ್ಯುಚ್ಚ ಆದರ್ಶಗಳನ್ನು ಜೀವನದುದ್ದಕ್ಕೂ ಆಚರಣೆಗಿಳಿಸಿಕೊಳ್ಳುತ್ತ ಅವರು ಮಾಡಿದ ಗೀತಮಯ ಪಯಣ.

ಹಿಂದಿನ ವಿದ್ವಾಂಸರು ಕಲಿಸಿಕೊಟ್ಟ ಸಂಗೀತದ ಸ್ವರೂಪದಲ್ಲಿ ಅಚಲ ವಿಶ್ವಾಸವುಳ್ಳ ಶ್ರೀಕಂಠನ್ ರವರ ಕಳೆದ ಹಲವು ದಶಕಗಳಲ್ಲಿನ ಸಂಗೀತ ಕಛೇರಿಗಳು ಸಾಂಪ್ರದಾಯಿಕತೆಯ ರಸಘಟ್ಟಿಗಳು. “ಊಟ ಮಾಡುವಾಗ ನೀವು ನಿಯಮವನ್ನು ಪಾಲಿಸುವುದಿಲ್ಲವೆ? ಮೊದಲು ಮೊಸರು ಸೇವಿಸಿ ನಂತರ ಇತರ ಭೋಜ್ಯಗಳನ್ನು ತಿನ್ನಲು ಸಾಧ್ಯವೆ? ಜೀವನದಲ್ಲಿ ಎಲ್ಲಕ್ಕೂ ಒಂದು ಕ್ರಮ ಇರಬೇಡವೆ? ಹೀಗಿರುವಾಗ ಕಾಲದ ಪರೀಕ್ಷೆಯಲ್ಲಿ ಜಯಿಸಿದ ಕಛೇರಿ ಪದ್ಧತಿಯನ್ನು ನಾವೇಕೆ ಪ್ರಶ್ನಿಸಬೇಕು? ವಿದ್ವಾಂಸರು ಪ್ರಯತ್ನಿಸಿ, ಪರಿಶ್ರಮಿಸಿ ದಾರಿ ತೋರಿಸಿದ್ದಾರೆ. ಕಛೇರಿಯಲ್ಲಿ ಪ್ರಸ್ತುತಪಡಿಸುವ ಅಂಶಗಳ ಸಾಂಪ್ರದಾಯಿಕ ಅನುಕ್ರಮಣಿಕೆ ಶಾರೀರವನ್ನು ನಿರ್ದಿಷ್ಟ ರೀತಿಯಲ್ಲಿ ನಿರ್ಮಾಣ ಮಾಡಿಕೊಳ್ಳುವುದಕ್ಕಾಗಿ ಮತ್ತು ಈ ಮಾರ್ಗ ಶಿಸ್ತಿನ ಪಥವನ್ನು ಅನುಸರಿಸಲು ಬಯಸುವರಿಗಾಗಿ” ಎನ್ನುವುದು ಅವರ ವಾದ.

ಸಮಕಾಲೀನ ಪ್ರಭಾವಗಳಿಗೆ ತಟಸ್ಥರಾಗಿ, ತಮ್ಮ ಮಾರ್ಗಕ್ಕೆ ನಿಷ್ಠರಾಗಿರುವ ಅವರ ಬದ್ಧತೆಯೇ ಅವರಿಗೆ ಹಿರಿಯ ವಿದ್ವಾಂಸರಿಂದ ‘ಕರ್ನಾಟಕ ಸಂಗೀತದ ಭೀಷ್ಮಪಿತಾಮಹ” ಎಂಬ ಸಂಬೋಧನೆಯನ್ನು ಸಂಪಾದಿಸಿಕೊಟ್ಟಿದೆ. ಕರ್ನಾಟಕ ಸಂಗೀತ ಪ್ರಪಂಚ, ವಿಶೇಷವಾಗಿ ಕರ್ನಾಟಕ ರಾಜ್ಯ, ಶ್ರೀಕಂಠನ್ ರವರನ್ನು ಅಭಿಮಾನಯೋಗ್ಯವಾದ ಒಂದು ಅಪ್ಪಟ ಸಿದ್ಧಾಂತವೆಂದೂ ವಾಸ್ತವವೆಂದೂ ಪರಿಗಣಿಸುವುದು, ಪ್ರದರ್ಶನಪ್ರಿಯತೆ ಮತ್ತು ನಾಟಕೀಯತೆಗಳ ಸೋಂಕು ಕಿಂಚಿತ್ತೂ ಇಲ್ಲದ ಈ ಪ್ರಾಮಾಣಿಕ ಶ್ರದ್ಧಾಳು ನಿರಂತರವಾಗಿ ಸಂಗೀತೋಪಾಸನೆ ಮಾಡುತ್ತಲೇ ಪುರಸ್ಕಾರಗಳನ್ನು ಸಾಲುಸಾಲಾಗಿ ಗಳಿಸಬಲ್ಲರು ಎಂಬುದರಿಂದಲೇ. ಗರುಡ ಪಕ್ಷಿಯ ತೆರೆದ ರೆಕ್ಕೆಗಳ ಮತ್ತು ಸದಾ ವಿಶಾಲವಾಗುತ್ತಲೇ ಹೋಗುವ ವಟವೃಕ್ಷದ ವ್ಯಾಪ್ತಿಯ ವೈಭವವನ್ನು ಎಷ್ಟೆಂದು ಬಣ್ಣಿಸಬಹುದು? ಒಮ್ಮೆ ಶ್ರೀಕಂಠನ್ ತಮ್ಮ ಉಪನ್ಯಾಸದ ಸಂದರ್ಭದಲ್ಲಿ ಹೇಳಿದರು- “ಕೇವಲ ಭಿತ್ತಿಗಳನ್ನು ಅಲಂಕರಿಸುವುದು ಮತ್ತು ಸುಲಭದಲ್ಲಿ ಸಂತೋಷ ನೀಡುವುದು ಕಲೆಯ ಉದ್ದೇಶವಲ್ಲ. ಕಲೆ ಹೊಸ ಮೌಲ್ಯಗಳನ್ನು ನಿರ್ಮಿಸಿ, ಸೃಜಿಸಿ, ಹುಸಿಯಾದ ಮೌಲ್ಯಗಳನ್ನು ಇಲ್ಲವಾಗಿಸಬೇಕು” ಎಂದು.

ಸಂಗೀತದ ಮತ್ತು ಮಾನವತೆಯ ಮೇಲೆ ಅದರ ಪ್ರಭಾವವನ್ನು ಕುರಿತೂ ಅವರದು ಇದೇ ನಂಬಿಕೆ. “ನಮ್ಮ ಲಲಿತಕಲೆಗಳಲ್ಲಿ ಹುದುಗಿರುವ ಆಧ್ಯಾತ್ಮಿಕ ಸತ್ವವನ್ನು ನಾವು ಸಂರಕ್ಷಿಸಬೇಕು, ಮಾತ್ರವಲ್ಲ, ಸಂವರ್ಧಿಸಬೇಕು. ಸಂತ-ವಾಗ್ಗೇಯಕಾರರು ಬಿಟ್ಟುಹೋಗಿರುವ ನಮ್ಮ ಸಂಗೀತ ಪರಂಪರೆ ತನ್ನ ಸಾಹಿತ್ಯ ಮತ್ತು ಧ್ಯೇಯಗುಣದ ಮೌಲ್ಯಗಳಿಂದ ಅನನ್ಯವಾಗಿದೆ. ಅದರ ಭಾವನಾತ್ಮಕ ಸ್ಪೃಹತೆ ಪ್ರಾಪಂಚಿಕತೆಯನ್ನು ನಿಶ್ಶೇಷವಾಗಿಸಲು ಸಹಾಯ ಮಾಡುತ್ತದೆ” ಎನ್ನುವುದು ತೊಂಬತ್ತರ ಹರೆಯದ ಈ ವಿದ್ವಾಂಸರ ವಿಶ್ವಾಸ.

ನಿರಂತರ ದಾಢ್ರ್ಯಕ್ಕಾಗಿ ನಾದವನ್ನೇ ಉಸಿರಾಡುವ ಶ್ರೀಕಂಠನ್ ರವರನ್ನು ನಾನೊಮ್ಮೆ “ಬೃಹತ್ತಾದ ನಿಮ್ಮ ನಾದತೃಷ್ಣೆಯನ್ನು ತಣಿಸಿಕೊಳ್ಳಲು ನೀವು ಮತ್ತೆ ಈ ಭವದೊಳಗೆ ಪುನರ್ಭವಿಸಲು ಬಯಸುತ್ತೀರಾ?”ಎಂದು ಕೇಳಿದೆ. ಅದಕ್ಕೆ ಶ್ರೀಕಂಠನ್ ಆಗಸದತ್ತ ನೋಟ ಹರಿಸಿ, ಕೈಮುಗಿದುಕೊಂಡು, ಭಾವಾವೇಶದ ಲೇಶವೂ ಇಲ್ಲದೆ ಹೇಳಿದರು: “ನಾನು ಯಾವಾಗಲೂ ‘ಒಂದು ಜನ್ಮದಲ್ಲಿ ಸಪ್ತಸ್ವರಗಳನ್ನು ಅರಿತುಕೊಳ್ಳಲು ಸಾಧ್ಯವೆ?’ ಎಂದು ಕೇಳಿದ ತ್ಯಾಗರಾಜರ ವಿನಯ ಮತ್ತು ಸತ್ಯಶೀಲತೆಯ ಕುರಿತು ಧ್ಯಾನ ಮಾಡುತ್ತೇನೆ. ಅವರ ಈ ಕೃತಿ ಅತ್ಯಂತ ಅರ್ಥಗರ್ಭಿತವಾಗಿದೆ.

ಸಂಗೀತದಲ್ಲಿ ಭಗವಂತನನ್ನು ಅನುಭವಿಸುವವರು ಮಾತ್ರ ಈ ಮಾತನ್ನು ಹೇಳಬಲ್ಲರು. ನಾವು ಅಪೇಕ್ಷಿಸುವ ನಾದಾನುಭವಕ್ಕೆ ಎಷ್ಟು ಜನ್ಮಗಳನ್ನು ತಳೆದರೂ ಸಾಲದು. ಆದರೆ ನಾನು ಸಂಗೀತದ ಸಾಗರೋಪಮ ವಿಸ್ತಾರದಲ್ಲಿ ನಿಮಗ್ನನಾಗಿದ್ದುದರಿಂದ ನನ್ನ ಜೀವನದಲ್ಲಿ ನೀರಸವಾದ ಒಂದೇ ಒಂದು ಕ್ಷಣವೂ ಇರಲಿಲ್ಲ. ನನಗೆ ಚೆನ್ನಾಗಿ ಹಾಡಲು ಸಾಧ್ಯವಾಗದ, ಅಸೌಕರ್ಯ ಎನಿಸುವ ದಿನಗಳಲ್ಲಿ ಸತ್ಯವಾಗಿಯೂ ನನಗೆ ಊಟ ರುಚಿಸುವುದಿಲ್ಲ. ಹಾಗೆ ನೋಡಿದರೆ, ಊಟದಲ್ಲಿ ನನಗಿರುವ ಅಭಿರುಚಿ ಸಂಗೀತದಲ್ಲಿರುವ ಪ್ರೀತಿಯಷ್ಟೇ ಬಲವಾದುದು!

ಎಂದಿನಂತೆ ನಾನು ನನ್ನ ಶೇಷಾಯುಷ್ಯದುದ್ದಕ್ಕೂ ಹಾಡುವುದನ್ನು, ಕಛೇರಿ ನೀಡುವುದನ್ನು, ಪಾಠ ಮಾಡುವುದನ್ನು ಮತ್ತು ಸಂಗೀತದ ಕುರಿತು ಮಾತನಾಡುವುದನ್ನು ಮುಂದುವರಿಸುತ್ತೇನೆ. ನಾನು ಪೂರ್ಣ ತೃಪ್ತನಾಗಿರುವುದರಿಂದ ನನಗೆ ಮತ್ತೊಂದು ಜನ್ಮ ಬೇಡ”ಎಂದು. “ಆದರೆ ದೇವರು ನನಗೆ ಮತ್ತೊಂದು ಜನ್ಮವನ್ನು ಅನುಗ್ರಹಿಸಲು ಇಚ್ಛಿಸಿದರೆ, ನಾನು ಮತ್ತೊಮ್ಮೆ ನನ್ನ ರುದ್ರಪಟ್ಣದಲ್ಲಿ…….ಸಂಗೀತಗಾರನಾಗಿ, ಸಂಗೀತಮಯ ರುದ್ರಪಟ್ಣದಲ್ಲಿ ಜನಿಸುವಂತೆ ಮಾಡು ಎಂದು ಪ್ರಾರ್ಥಿಸುತ್ತೇನೆ”.

2010ರಲ್ಲಿ ನಾನು ಶ್ರೀಕಂಠನ್ ರವರ ತೊಂಭತ್ತನೆಯ ಜನ್ಮದಿನಾಚರಣೆಯ ಅಂಗವಾಗಿ ನಡೆದ ಸಂಗೀತೋತ್ಸವಕ್ಕೆ ಮೊದಲು ‘ದ ಹಿಂದೂ’ವಿಗಾಗಿ ಅವರನ್ನು ಸಂದರ್ಶಿಸಿ, ಸಂವಾದ ಮುಕ್ತಾಯದ ಹಂತಕ್ಕೆ ತಲುಪುತ್ತಿರುವಾಗ, ಕೇವಲ ಅವರನ್ನೇ ವಸ್ತುವಾಗಿರಿಸಿಕೊಂಡ ಯಾವುದೇ ಪುಸ್ತಕವನ್ನೂ ಇಲ್ಲಿಯವರೆಗೆ ಬರೆಯಲಾಗಿಲ್ಲ ಎಂದು ಕೇಳಿ ವಿಸ್ಮಿತಳಾದೆ.

ಏಕನಿಷ್ಠ ಮತ್ತು ನಿರಂತರ ಸಾಧನೆಯ ನೈಜ ನಿದರ್ಶನವಾಗಿ ಅವರ ಜೀವನವನ್ನು ಎತ್ತಿಹಿಡಿಯಲು, ತನ್ಮೂಲಕ ಕರ್ನಾಟಕದವರಾಗಿ ಸಂಗೀತ ಪ್ರಪಂಚಕ್ಕೆ ಸೇವೆ ಸಲ್ಲಿಸಲು, ಅವರ ತೊಂಭತ್ತು ವರ್ಷಗಳ ಜೀವನಪಥದಲ್ಲೊಮ್ಮೆ ಮಾನಸಿಕವಾಗಿ ಚರಿಸುವ ಭಗೀರಥ ಪ್ರಯತ್ನವನ್ನು ಈ ಕೂಡಲೇ ಕೈಗೊಳ್ಳುವ ಮಾತನ್ನು ನಾನು ಆಡಿದಾಗ, ಸಮತ್ವ ಮತ್ತು ಘನತೆಗಳೇ ಮೂರ್ತಿವೆತ್ತಂತಿದ್ದ ಅವರು ಮೃದುವಾಗಿ ಕೇಳಿದರು- “ಸಂಗೀತ ಜೀವನದತ್ತ ಗಮನ ಹರಿಸಿದರೆ ಸಾಕು.

ನೀವು ಸಂಗೀತದಲ್ಲಿ ಆಸಕ್ತಿಯುಳ್ಳ ಓರ್ವ ಪತ್ರಕರ್ತೆ. ಆದರೆ ಈ ಕಾರ್ಯಕ್ಕಾಗಿ ನಿಮಗೆ ಸಮಯ ಸಿಗುತ್ತದೆಯೇ?” ಪ್ರಸಿದ್ಧ ಗಾಯಕರೂ, ವಿದ್ವಾನ್ ಆರ್.ಕೆ.ಶ್ರೀಕಂಠನ್ ಟ್ರಸ್ಟ್‍ನ ಸಾರಥ್ಯವನ್ನು ವಹಿಸಿರುವವರೂ ಶ್ರೀಕಂಠನ್ ರವರ ಸುಪುತ್ರರೂ ಆದ ಶ್ರೀ ರಮಾಕಾಂತ್ ನಂತರ ನನ್ನನ್ನು ಕೇಳಿದರು- “ಇಲ್ಲಿಯವರೆಗೆ ಯಾರೂ ಈ ಕೆಲಸವನ್ನು ಮಾಡಿಲ್ಲ. ನೀವು ಶ್ರೀಕಂಠನ್ ಟ್ರಸ್ಟ್‍ನ ವತಿಯಿಂದ ಈ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾದರೆ ಅದು ಶ್ರೀಕಂಠನ್ ರವರಿಗೆ ತಕ್ಕ ಕಾಣಿಕೆಯಾದೀತು” ಎಂದು.

ಈ ಅವಕಾಶ ಸಮ್ಮಾನವೂ ಹೌದು, ಸೌಭಾಗ್ಯವೂ ಹೌದು ಎನ್ನುವ ದೃಷ್ಟಿಯಿಂದ ಮತ್ತು ಶ್ರೀಕಂಠನ್ ರವರಿಗೆ ಇದು ನನ್ನ ಗೌರವ ಸಮರ್ಪಣೆ ಎನ್ನುವ ಭಾವದಿಂದ ನಾನು ಈ ಪ್ರಯತ್ನಕ್ಕೆ ಕೈಹಾಕಲು ನಿರ್ಧರಿಸಿದೆ. ಶ್ರೀಕಂಠನ್ ‘ಇನ್ನೂ ಹೆಚ್ಚಿನ ಗೌರವಗಳಿಗೆ ಅರ್ಹರು’ ಎನ್ನುವುದು ನನ್ನ ಎಂದಿನ ನಂಬಿಕೆ. ಈ ವಿಶಿಷ್ಟ ವ್ಯಕ್ತಿಗೆ ಸಂಗೀತ ಪ್ರಪಂಚದಲ್ಲಿ ಈಗ ಲಭಿಸಿರುವ ಮನ್ನಣೆಗಿಂತ ಬಹಳಷ್ಟು ಹೆಚ್ಚಿನ ಪುರಸ್ಕಾರ, ಪ್ರಚಾರ ಮತ್ತು ಪ್ರಸಿದ್ಧಿಗಳಿಗೆ ಅವರು ಅರ್ಹರು.

2011ನೆಯ ಸಾಲಿನಲ್ಲಿ, ಎಂಬತ್ತನೆಯ ಪ್ರಾಯದಲ್ಲಿ ತಾವು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದೇವೆ ಎನ್ನುವ ವಿಷಯವನ್ನು ಕೇಳಿದಾಗ ಶ್ರೀಕಂಠನ್ ರವರು, ತಮಗೆ ಅಭಿನಂದನೆ ಸಲ್ಲಿಸಲು ತಮ್ಮ ಮನೆಯಲ್ಲಿ ನೆರೆದ ಜನರಿಗೆ ಹಾಸ್ಯವಾಗಿ ಹೇಳಿದರು – “ಅಂತೂ ಕೊನೇಲಿ
ಕೊಟ್ಟುಬಿಟ್ಟರು. ತಡ ಆಗಿದ್ರೂ ಪರವಾಗಿಲ್ಲ, ಇದು ನಮ್ಮ ರಾಜ್ಯಕ್ಕೆ ಬಂದ ಪ್ರಶಸ್ತಿ ಹಾಗೂ ಹೆಮ್ಮೆ” ಎಂದು. ಸದಾ ವಾಸ್ತವದ ಅರಿವುಳ್ಳ ಅವರು ತಾರಾ ಸ್ಥಾನಮಾನಕ್ಕಾಗಿ ಎಂದೂ ಹಾತೊರೆಯದಿದ್ದರೂ, ಎಲ್ಲ ಸಾಧಕರಂತೆ ತಮ್ಮ ಪ್ರಯತ್ನಗಳಿಗೆ ದೊರೆತ ಪ್ರಶಂಸೆಯಿಂದ ಸಂತೋಷಿಸುತ್ತಾರೆ.

ಸುಪ್ರಸಿದ್ಧ ಮೃದಂಗ ವಿದ್ವಾಂಸರಾದ ಶ್ರೀ ಉಮಯಾಳಪುರಂ ಶಿವರಾಮನ್, ಶ್ರೀಕಂಠನ್ ರವರ 75ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಹೇಳಿದ್ದರು- “ತಮಿಳುನಾಡಿಗೆ ಶೆಮ್ಮಂಗುಡಿಯವರು ಹೇಗೋ ಈ ಶ್ರೇಷ್ಠತಮ ವಿದ್ವಾಂಸ ಕರ್ನಾಟಕಕ್ಕೆ ಹಾಗೆ” ಎಂದು. ಭೀಮಸೇನ ಜೋಷಿಯವರು ಹಿಂದೂಸ್ಥಾನೀ ಕ್ಷೇತ್ರದಲ್ಲಿ ತಾವು ಗೈದ ಸಾಧನೆಗೆ ಪಥ ನಿರ್ಮಿಸಿದ ಅಮೂಲ್ಯ ಸಂಗೀತ ಶಿಕ್ಷಣವನ್ನು ತಮಗಿತ್ತ ಉತ್ತರ ಕರ್ನಾಟಕವನ್ನು ಪ್ರತಿನಿಧಿಸಿದರೆ, ದಕ್ಷಿಣ ಕರ್ನಾಟಕವನ್ನು ಪ್ರತಿನಿಧಿಸಲು ಕರ್ನಾಟಕ ಸಂಗೀತದ ಹೆಮ್ಮೆ ಎನಿಸಿದ ಶ್ರೀಕಂಠನ್ ಅವರಂಥ ವರಿಷ್ಠರಿರುವುದು ಅಭಿಮಾನದ ಸಂಗತಿ!

ಈ 94 ಸಂವತ್ಸರಗಳು ಶ್ರೀಕಂಠನ್ ರವರ ಶರೀರದ ಮೇಲೆ ತಮ್ಮ ಗುರುತನ್ನು ಮೂಡಿಸಿರಬಹುದು. ಆದರೆ ಅವರ ಕಂಠದ ದೃಢತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿರುವುದು ಈ ಮಹಾನ್ ಕಲಾವಿದನ ಆಶ್ಚರ್ಯಕರವಾದ ಶಿಸ್ತುಬದ್ಧ ಜೀವನಶೈಲಿಯ ಪ್ರತಿಬಿಂಬ!
ಈ ಜೀವನಚರಿತ್ರೆ, ಶ್ರೀಕಂಠನ್ ರವರನ್ನು ಅತ್ಯುತ್ತಮ ಗಾಯಕರನ್ನಾಗಿ ರೂಪಿಸಿದ ನಾದಚಾರಣವನ್ನು ಅನುಸರಿಸುವ ಪ್ರಯತ್ನ ಮಾತ್ರವಲ್ಲ, ಕರ್ನಾಟಕ ಪದ್ಧತಿಯಲ್ಲಿ ಅಂತರ್ಗತವಾಗಿರುವ ಪರಿಪೂರ್ಣತೆಯನ್ನು ಪ್ರಕಾಶಕ್ಕೆ ತಂದ ಅವರ ಆದರ್ಶಗಳು ಮತ್ತು ಕಾರ್ಯಗಳತ್ತಲೂ ಗಮನ ಹರಿಸಿದೆ. “ನಾನು ಕರ್ನಾಟಕ ಸಂಗೀತದಲ್ಲಿ ಪ್ರಜಾಪ್ರಭುತ್ವವನ್ನು ಶಿಫಾರಸ್ಸು ಮಾಡುವುದಿಲ್ಲ. ಏಕೆಂದರೆ ಅದು ಸ್ವಚ್ಛಂದದ ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಡುತ್ತದೆ.

ದಕ್ಷಿಣಾದಿ ಸಂಗೀತ ಪದ್ಧತಿಯಲ್ಲಿ ಒಂದು ಧರ್ಮವಿದೆ. ನಾವು ಅದಕ್ಕೆ ಬದ್ಧರಾಗಿರಬೇಕು. ಇಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳಿವೆ, ಅವುಗಳನ್ನು ಅನುಸರಿಸಬೇಕು. ಸಂತ-ವಾಗ್ಗೇಯಕಾರರು ಮತ್ತು ಪೂರ್ವಕಾಲದ ವರಿಷ್ಠರು ಪೋಷಿಸಿರುವ ಭಾವಸೂಕ್ಷ್ಮಗಳಿವೆ. ಅವುಗಳು ನಮ್ಮ ಮನೋವಾಕ್ಕಾಯಗಳಲ್ಲಿ ದೃಢವಾಗಿ ಬೇರು ಬಿಡಬೇಕು” ಎನ್ನುವ ಶ್ರೀಕಂಠನ್ ರವರಿಗೆ ತಮ್ಮ ಚಿಂತನೆಗಳಲ್ಲಿ ನಿಶ್ಚಲ ವಿಶ್ವಾಸ ಮತ್ತು ಅವರು ಇಂದಿಗೂ ಈ ಆಲೋಚನೆಗಳನ್ನು ನಿಷ್ಠೆಯಿಂದ ಅನುಸರಿಸುತ್ತಾರೆ.

ಬದಲಾವಣೆಗಳ ವಿದ್ರೋಹದ ಬಿರುಗಾಳಿಯ ನಡುವೆ, ವಿಶೇಷವಾಗಿ ಕಳೆದೆರಡು ದಶಕಗಳಲ್ಲಿ ಸಮಕಾಲೀನ ಪ್ರಭಾವಗಳು ಒತ್ತಾಯಪೂರ್ವಕವಾಗಿ ಸಂಪ್ರದಾಯವನ್ನು ಮಣಿಸುವ ಯತ್ನದಲ್ಲಿರುವಾಗ, ಶ್ರೀಕಂಠನ್ ದಿಟ್ಟತನದಿಂದ ಮುನ್ನಡೆಯುತ್ತ ಕರ್ನಾಟಕ ಸಂಗೀತದ ಸುಪ್ರತಿಷ್ಠಿತ ಯಾನವನ್ನು ಸಂರಕ್ಷಿಸಿದ್ದಾರೆ ಮತ್ತು ಮಾರ್ಗದರ್ಶನ ಮಾಡಿದ್ದಾರೆ.

ಕರ್ನಾಟಕ ಗಾನಕಲಾ ಪರಿಷತ್ತಿನ ಸಂಗೀತ ಸಮ್ಮೇಳನದ ಅಧ್ಯಕ್ಷರಾದ ಸಂದರ್ಭದಲ್ಲಿ ಪ್ರಸಿದ್ಧ ಮೃದಂಗವಾದಕ ಎಂ.ಎಲ್.ವೀರಭದ್ರಯ್ಯನವರು ಸಂಗೀತಕ್ಕೆ ಶ್ರೀಕಂಠನ್ ರವರ ಸಮಗ್ರ ಕೊಡುಗೆಯ ಕುರಿತು ಒಮ್ಮೆ ಹೇಳಿದ್ದಿತ್ತು- “ನಮ್ಮ ಸಂಗೀತ ಪರಂಪರೆಯ ರಕ್ಷಣೆ ಮತ್ತು ಪ್ರಸಾರಕ್ಕೆ ತಮ್ಮನ್ನು ತಾವು ಮುಡಿಪಿಟ್ಟುಕೊಂಡಿರುವ ಆರ್.ಕೆ.ಎಸ್. ನನ್ನ ಪಾಲಿಗೆ ಓರ್ವ ಆದರ್ಶ ಕಲಾವಿದ”
ಎಂದು.

ಪ್ರೀತಿಕರ ‘ನಾದಶಕ್ತಿ’ ಎನ್ನಬಹುದಾದ ಶ್ರೀಕಂಠನ್, ಸಂಪೂರ್ಣವಾಗಿ ಸರಳ ಜೀವನಕ್ರಮವನ್ನು ಅನುಸರಿಸಿಯೂ ಉನ್ನತ ಆದರ್ಶಗಳಲ್ಲಿ ನೆಲೆ ನಿಂತಿರುವುದರಿಂದ ಹೆಚ್ಚು ಆತ್ಮೀಯರೆನಿಸುವ ವ್ಯಕ್ತಿ. ಈ ಪುಸ್ತಕ ಇಂಥ ದೀಪಧಾರಿಯ ಜೀವನವನ್ನು ನುಡಿಗಳಲ್ಲಿ ಹೆಣೆದಿಡುವ ಒಂದು ವಿನಯಪೂರ್ವಕ ಪ್ರಯತ್ನ. ಕರ್ನಾಟಕದ ಸಂಕೇತಿಗಳ ಬೀಡಾಗಿರುವ ಮತ್ತು ಅನೇಕ ಶ್ರೇಷ್ಠತಮ ಸಂಗೀತಗಾರರಿಗೆ, ವಿದ್ವಾಂಸರಿಗೆ ಹಾಗೂ ಸಾಧಕರಿಗೆ ಜನ್ಮ ನೀಡಿರುವ ಗ್ರಾಮದಲ್ಲಿ ತಮ್ಮ ಬೇರುಗಳನ್ನು ಹೊಂದಿರುವ ಈ ವ್ಯಕ್ತಿಯ ಕುರಿತು ನಾನು ಓದಿದ ವಿಷಯಗಳನ್ನು ಮಾತ್ರವಲ್ಲ, ಸದಾ ಏಕಮನದಿಂದ ಆದರ್ಶಮಯರಾಗಿ ಉಳಿಯಲು ಸಾಧ್ಯವಾಗುವಂತೆ ಅವರು ತಮ್ಮ ಬೆಳವಣಿಗೆಯ ವರ್ಷಗಳಲ್ಲಿ ಸಕಾರಾತ್ಮಕ ಪ್ರಭಾವಗಳನ್ನು ಗ್ರಹಿಸಲು ಕಾರಣವಾದ ಅಂಶ ಯಾವುದು ಎನ್ನುವ ಕುರಿತು ಕೆಲವು ವಿವರಗಳನ್ನು ಈ ಪುಸ್ತಕ ಸೆರೆ ಹಿಡಿದು ಓದುಗರ ಮುಂದೆ ತೆರೆದಿಡುತ್ತದೆ.

“ನೀವು ಈ ಪುಸ್ತಕವನ್ನು ನಾದಮಯ ಜೀವನಚರಿತ್ರೆಯನ್ನಾಗಿ ರೂಪಿಸಿ. ಕುಟುಂಬದ ವಿಷಯಗಳನ್ನು ಕೆದಕುವುದೇಕೆ?”ಎಂದು ಶ್ರೀಕಂಠನ್ ನನಗೆ ಅನೇಕ ಸಾರಿ ನೆನಪಿಸಿದರು. ಸಂಗೀತದ ಸಾಕ್ಷಾತ್ಕಾರಗಳನ್ನು ತಮಗೆ ಮಾಡಿಸಿಕೊಟ್ಟ ನೈಜ ಪ್ರಭಾವಗಳನ್ನು ಅನಾವರಣಗೊಳಿಸಲು
ಕೌಟುಂಬಿಕ ಸಂಪರ್ಕಗಳ ವಿಷಯ ಅಗತ್ಯವೆನಿಸಿದರೂ, ಅವರ ಕುಟುಂಬದ ವ್ಯಕ್ತಿಗತ ಸಂಪರ್ಕಗಳ ಜಟಿಲತೆಗಳ ಕುರಿತು ಬರೆಯುವುದು ನಿಜಕ್ಕೂ ಅನಗತ್ಯ ಎಂದು ವಿವರಿಸುವಾಗ ಶ್ರೀಕಂಠನ್ ಬಹಳ ಸ್ಪಷ್ಟವಾಗಿ ಮಾತನಾಡುತ್ತಾರೆ. “ಇಲ್ಲದಿದ್ದರೆ ಇದು ನಮ್ಮ ಸಂಬಂಧಗಳ ಮತ್ತು ನಮ್ಮೊಳಗಿನ ಮಾತುಕತೆಗಳ ಕುರಿತು ಲೇಖಕರು ವೈಯಕ್ತಿಕ ಗ್ರಹಿಕೆಯಂತೆ ಬರೆಯುವ ಪುಸ್ತಕವಾಗಿಬಿಡುತ್ತದೆ” ಎಂದೆನ್ನುತ್ತಾರೆ ಅವರು.

ನಾನು ಅವರೊಂದಿಗಿನ ಸಂದರ್ಶನಗಳನ್ನು ಮತ್ತು ಅವಲೋಕನಗಳ ವಿವರಗಳನ್ನು ಬರೆದಿಡಲು ಪ್ರಾರಂಭಿಸಿದ್ದು 2012ರಿಂದ ಎನ್ನುವ ವಿಷಯ ಈ ಹಿರಿಯ ಚೇತನವನ್ನು ಕಿಂಚಿತ್ತೂ ಕಾಡಿಲ್ಲ. “ನಾನು ಯಾವುದೇ ಕೆಲಸವನ್ನು ಆತುರಾತುರವಾಗಿ ಮಾಡುವುದನ್ನು ಒಪ್ಪುವುದಿಲ್ಲ. ಬಹುಶಃ ನನಗೆ ಸಂದ ಪದ್ಮಭೂಷಣ ಪ್ರಶಸ್ತಿಯನ್ನೂ ದಾಖಲಿಸಿಕೊಳ್ಳಬೇಕು ಎಂದು ಈ ಪುಸ್ತಕ ಇಲ್ಲಿಯವರೆಗೆ ಕಾಯುತ್ತಿತ್ತು ಎಂದು ಕಾಣುತ್ತದೆ” ಎನ್ನುವ ಅವರು ವ್ಯಾವಹಾರಿಕತೆಯನ್ನು ಸೂಸುತ್ತ ಥಟ್ಟನೆ ನುಡಿಯುತ್ತಾರೆ: “ಕೊನೆಗೂ ಈ ಪುಸ್ತಕದೊಳಗೆ ಸೇರ್ಪಡೆಯಾಗುವ ವಿಷಯಗಳ ಬಗ್ಗೆ ಭಗವಂತ ನಿರ್ಧರಿಸುತ್ತಾನೆ”. ಈ ಗ್ರಂಥರಚನಾ ಕಾರ್ಯ ಶುಭಾರಂಭಗೊಳ್ಳುವಂತೆ ಮಾಡಲು ಈ ನುಡಿಗಳು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದವು.

Photos of RK Srikantan book release in 2014

Photos by : Mohan Srenivasan

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

25 February, 2022

1 Comment

  1. T S SHRAVANA KUMARI

    ಉತ್ತಮ ಬರೆಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading