ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಆಯನ’ ನಾಟಕ ಮನೆಯ ಲೀಡರ್

‘ಭಕ್ತ’ ಮನೋಸ್ಥಿತಿಯ ನಾಟಕೀಯ ಅಭಿವ್ಯಕ್ತಿ

ಜಿ ಎನ್ ಅಶೋಕವರ್ಧನ 

‘ಆಯನ’ ನಾಟಕ ಮನೆಯ ಪುನರುಜ್ಜೀವನದ ಎರಡನೇ ನಾಟಕ – ದಿ ಲೀಡರ್, ನಿನ್ನೆ ಮತ್ತೆ ಪಾದುವಾ ಕಾಲೇಜಿನ ಆಶ್ರಯದಲ್ಲಿ, ಅಕ್ಷರಶಃ ‘ತುಂಬಿದ ಗೃಹ’ದ ಪ್ರದರ್ಶನವನ್ನೇ ಕೊಟ್ಟಿತು. ಇದು ಫ್ರೆಂಚ್ ಮೂಲದಿಂದ (ಯುಜಿನೊ ಐನೆಸ್ಕೊ ಮತ್ತಿತರರು) ಬಂದರೂ ಇದಕ್ಕೆ ವಿಶೇಷ ಭಾಷಾ ಬಂಧನವಿಲ್ಲ. ಸಹಜವಾಗಿ ಅನುವಾದದ ಔಪಚಾರಿಕತೆಯೂ ಕಾಡುವುದಿಲ್ಲ. ಇದರ ನಿರ್ದೇಶನವನ್ನೂ ‘ದ್ವೀಪ’ದ ಕೆ.ಪಿ. ಲಕ್ಷ್ಮಣ್, ಅಷ್ಟೇ ಅಚ್ಚುಕಟ್ಟಾಗಿ, ವಿನೂತನವಾಗಿ ಮಾಡಿದ್ದರು.

ಮೊನ್ನಿನ ‘ದ್ವೀಪ’ ಮತ್ತು ನಿನ್ನಿನ ‘ಲೀಡರ್’ಗಳ ಲೇಖಕರು ಭೌಗೋಳಿಕವಾಗಿ ಸಂಪೂರ್ಣ ಭಿನ್ನ ಮೂಲದವರು. ಆದರೆ ಎರಡೂ ನಾಟಕಗಳು ವೈಚಾರಿಕ ಸಾಮ್ಯತೆಯಲ್ಲಿ, ಬಹುದೊಡ್ಡ ಸಾರ್ವಕಾಲಿಕ ಸಾಮಾಜಿಕ ಸಮಸ್ಯೆ – ಸರ್ವಾಧಿಕಾರವನ್ನೇ ಆಶ್ಚರ್ಯಕರವಾಗಿ ಚರ್ಚಿಸುತ್ತವೆ.

‘ದ್ವೀಪ’ವನ್ನು ಒಂದು ವೇದನಾಮಯ ಭಾವಚಿತ್ರವೆಂದು ಭಾವಿಸಿದರೆ, ‘ಲೀಡರ್’ ಅದಕ್ಕೆ ಕಾರಣವಾದ ಒಂದು ತುಣುಕನ್ನು, ಆಧುನಿಕ ಪರಿಭಾಷೆಯಲ್ಲಿ ಹೇಳುವುದಿದ್ದರೆ, ಅಂಕಿಕ (ಡಿಜಿಟಲ್) ವಿವರಗಳಲ್ಲಿ ವಿಶ್ಲೇಷಿಸಿದೆ. ಹುಟ್ಟು, ವೃತ್ತಿ, ಆರ್ಥಿಕತೆ ಇತ್ಯಾದಿ ಮುಖವಾಡಗಳೇನಿದ್ದರೂ ಬಹುಸಂಖ್ಯಾ ಸಾಮಾನ್ಯರ ಭಾವಾತಿರೇಕ ಅಂಧಶ್ರದ್ದೆಯದು ಮತ್ತು ಸಾರ್ವಕಾಲಿಕ. ಇದಕ್ಕೆ ಸಣ್ಣದಾಗಿ ಭಾಷೆಯ ಸ್ಪರ್ಷವನ್ನಷ್ಟೇ ನೀಡಿ, ಪ್ರೇಕ್ಷಕರ ವೈಚಾರಿಕತೆಗೆ ರೇಜಿಗೆ ಹುಟ್ಟುವಷ್ಟು ಮರುಕಳಿಕೆಗಳಲ್ಲಿ ಅಭಿವ್ಯಕ್ತಿಸಿದ ಪ್ರಯೋಗ – ದಿ ಲೀಡರ್. ಇದು ಬೀರಿದ ಪರಿಣಾಮ ಅದ್ಭುತ.

ನಾಟಕ ನಡೆದಿದ್ದಂತೆ ವರ್ತಮಾನದ ಎಲ್ಲ (ರಾಜಕೀಯ, ಧಾರ್ಮಿಕ, ಔದ್ಯಮಿಕ…) ರಂಗಗಳಲ್ಲೂ ವಿಜೃಂಭಿಸುತ್ತಿರುವ ‘ನಾಯಕ’ರುಗಳ ಚಿತ್ರ ನನ್ನ ಮನೋಭೂಮಿಕೆಯಲ್ಲಿ ಸಮಾನಾಂತರದಲ್ಲಿ ವಿಕಸಿಸುತ್ತಲೇ ಇತ್ತು. ಪ್ರದರ್ಶನ ಮುಗಿದ ಮೇಲೆ ಅಭಿಪ್ರಾಯ ಹಂಚಿಕೊಂಡ ಓರ್ವ ಯುವಕ ಹೇಳಿದಂತೆ, ನನಗೂ ಇದು ಭಯವನ್ನೇ ಹುಟ್ಟಿಸಿತು.

ನಾಟಕ ನಡೆಯುತ್ತಿದ್ದಂತೆ, ಅಘೋಷಿತವಾಗಿ ಒಳಗಿಂದೊಳಗೆ ಯಾರೋ ಉಚಿತವಾಗಿ ಸಣ್ಣ ಕಡಲೆ ಪೊಟ್ಟಣಗಳನ್ನು ಪ್ರೇಕ್ಷಕರೆಲ್ಲರಿಗೂ ಹಂಚಿದರು. ಆದರೆ ನಾಟಕದ ಪ್ರಭಾವದಲ್ಲಿ ನಾನದನ್ನು ಅಲ್ಲಿ ತಿನ್ನುವ ಧೈರ್ಯ ಮಾಡಲಿಲ್ಲ! ಮನೆಗೆ ಬಂದ ಮೇಲೆ ಕಡಲೆ ಏನೋ ಖಾಲಿ ಮಾಡಿದೆ.

ಆದರೆ ಆ ಪೊಟ್ಟಣದ ಕಾಗದ – ಭಾರತವೆಂಬ ಪರ್ಯಾಯ ‘ದ್ವೀಪ’ದ ಶೋಷಣೆಗೆ ಕಾರಣವಾದ ಬ್ರಿಟಿಷ್ ‘ಲೀಡರ್’ ವಿರುದ್ಧ ಮಹಾತ್ಮ ಗಾಂಧಿ ಹೊರಡಿಸಿದ ಐತಿಹಾಸಿಕ ಯಾತ್ರೆಯ ನೂರೈವತ್ತನೇ ವರ್ಷವನ್ನು ಸ್ಮರಿಸಿತ್ತು. ಅದರಲ್ಲಿದ್ದ ಗಾಂಧಿಯ ಮಾತನ್ನೇ ಉದ್ಧರಿಸುವುದಾದರೆ, “ಅಸತ್ಯ, ಅನ್ಯಾಯ, ಹಿಂಸೆ ಮತ್ತು ದಬ್ಬಾಳಿಕೆಗೆ ತಲೆಬಾಗುವುದು ಹೇಡಿತನ.”

ವಿಶಿಷ್ಟ ಅನುಭವವನ್ನು ಕೊಟ್ಟ ‘ಅಂದರಿಕಿ ವಂದನಮುಲು’, ಅಭಿನಂದನೆಗಳು. ‘ಆಯನ – ನಾಟಕದ ಮನೆ’ ಮುಂದೆ ನಿಯತವಾಗಿ ರಂಗಚಟುವಟಿಕೆಯನ್ನು ಮುಂದುವರಿಸುವ ಆಶ್ವಾಸನೆ ಕೊಟ್ಟಿದೆ. ಯಶಸ್ವಿಯಾಗಿ ನಿಭಾಯಿಸಲು ಶುಭ ಹಾರೈಕೆಗಳು.

I k Bolwar 

೭೦ ರ ದಶಕದಲ್ಲಿ ರಾಜಕೀಯ ನಾಟಕಗಳ ಕಾರಣವಾಗಿಯೇ ತೆರೆಮರೆಗೆ ಸಂದ, ಸೊರಗಿದ ಪ್ರೇಕ್ಷಕರಿಂದ ದೂರವಾದ, ಅಸಂಗತ ನಾಟಕ ಪರಂಪರೆ ಇವತ್ತು ಅದೇ ರಾಜಕೀಯ ಕಾರಣಕ್ಕಾಗಿ ಪ್ರೇಕ್ಷಕರನ್ನು ಸೆಳೆಯಬಲ್ಲ ,ಚಿಂತನೆಗೆ ಒಡ್ಡಬಲ್ಲ, ಒಳ್ಳೆಯ ರಂಗ ಪ್ರಯೋಗವಾಗಿ ಪ್ರಸ್ತುತಿಯಾಗಿದೆ. ನಾಟಕದಲ್ಲಿ ಕೆಲವೇ ಶಬ್ದಗಳು ಮತ್ತು ಶಿಲ್ಪಗಳು ಪದೇ ಪದೇ ಬಳಕೆಯಾಗಿದೆ. ಈ ಪುನರುಕ್ತಿ ನಾಟಕದ ಶಕ್ತಿಯೇ. ಹಾಗಾಗಿ ಬಳಕೆಯಾದ ಜನಪ್ರಿಯ ಸಿನಿಮಾ ಹಾಡು ‘ಇದು ಎಷ್ಟು ಬಾರಿ ಕೇಳಿದರೂ ಚೆನ್ನ” ಎಂಬಂತೆ ನಿರೂಪಣೆಯಾಗಿದೆ. ಆಯನ ಆಯೆನೆಸ್ಕೋನ ನಾಟಕ ಆಯ್ಕೆ ಮಾಡಿಕೊಂಡದ್ದು ಪ್ರಾಸ ಹೊಂದಾಣಿಕೆಯ ಅಸಂಗತತೆ ಆಗಿರಲಾರದು. ನಾಟಕದ ಮರು ಪ್ರಯೋಗಗಳು ಮತ್ತೆ ಮತ್ತೆ ನಡೆಯಲಿ 

Gulabi Bilimale 

ಅಸಂಗತ ನಾಟಕ ಅರ್ಥ ಆಗಲಾರದು ಎಂಬ ಪೂರ್ವ ತೀರ್ಮಾನದೊಂದಿಗೆ ಬಂದಿದ್ದೆ.ನಾಟಕ ನೋಡ್ತಾ ನೋಡ್ತಾ ಪ್ರಸಕ್ತ ರಾಜಕೀಯ ಚಿತ್ರಣ ಮೂಡಿಬರತೊಡಗಿದಂತೇ ಉಸಿರು ಬಿಗಿಹಿಡಿದು ನೋಡಿದೆ..ಅದ್ಭುತವಾಗಿ ಮೂಡಿ ಬಂದಿದೆ.

‍ಲೇಖಕರು avadhi

3 September, 2019

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading