ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಆಮೇಲೆ….’ – ಶಾಂತಿ ಅಪ್ಪಣ್ಣ

ಆಮೇಲೆ….

ನನ್ನ ಗೆಳೆಯನೊಬ್ಬನ ಜೀವನದಲ್ಲಿ ನಡೆದ ಘಟನೆ ..ಅದು ನಮಗೆ ಕೊಟ್ಟ ನೋವು ,ಅದರ ಸುತ್ತ ಹುಟ್ಟಿಕೊಂಡ ಯೋಜನೆಗಳು..ಹೀಗೆ ನನ್ನ ಮನಸನ್ನು ಕಲಕಿದ ಆ ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳು ತ್ತಿರುವೆ..

-ಶಾಂತಿ  ಕೆ.ಎ

ಅವನು ನನ್ನ ಅತ್ಯಂತ ಪ್ರೀತಿಯ ಗೆಳೆಯ. ಅವರ ಮನೆಯಲ್ಲಿ ಇವನನ್ನೂ ಸೇರಿಸಿ ಎಲ್ಲರೂ ಡಾಕ್ಟರ್ ಗಳು.ಅಮ್ಮ ಸೈಕಾಲಜಿ ಓದಿಕೊಂಡು ಅವರದೇ ಕ್ಲಿನಿಕ್ಕಿನಲ್ಲಿ ಸೈಕಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.ತುಂಬಾ ಸಂಪ್ರದಾಯಸ್ತ ಗೌರವಾನ್ವಿತ ಕುಟುಂಬ ಅವರದ್ದು.ಆಕೆ ಮಹಾ ದೈವ ಭಕ್ತೆ.ಹುಟ್ಟು ಶ್ರೀಮಂತೆಯಾದರೂ ಒಂದಿಷ್ಟೂ ಅಹಂಕಾರವಿಲ್ಲದ ಮೃದು ಮಧುರ ನಡೆನುಡಿ ಆಕೆಯದ್ದು.

ಅವನೂ ಅಷ್ಟೇ..ಥೇಟ್ ಅಮ್ಮನ ಪಡಿಯಚ್ಚು.

ಅವನ ಕಷ್ಟಸುಖಗಳನೆಲ್ಲ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ ಅವನಿಗೆ ಹೇಳಿಕೊಳ್ಳುವಂತ ಹೆಚ್ಚಿನ ಗೆಳೆಯರು ಇರಲಿಲ್ಲ.ಅವನ ಸಂಕೋಚ ಸ್ವಭಾವವನ್ನು ಬಹುತೇಕೆ ಜನರು ಅಹಂಕಾರವೆಂದು ತಪ್ಪು ತಿಳಿದುಕೊಂಡದ್ದೂ ಇದಕ್ಕೊಂದು ಕಾರಣವಿರಬೇಕು.ಅದಿರಲಿ.

ಇತ್ತೀಚೆಗೆ ಅವನ ಸುಂದರ ಬದುಕಿನಲ್ಲೊಂದು ದೊಡ್ಡ ದುರಂತ ನಡೆಯಿತು.ಆರು ತಿಂಗಳ ಹಿಂದೆ detect ಮಾಡಲಾದ acute ಲಿವರ್ ಫೈಲ್ಯೂರ್ ನಿಂದಾಗಿ ಈಗ ತಿಂಗಳ ಹಿಂದೆ ಅವನ ಅಮ್ಮ ತೀರಿಕೊಂಡು ಬಿಟ್ಟರು.

ಚಿಕ್ಕದೊಂದು ವಾಂತಿಯಿಂದ ಆರಂಭ ಗೊಂಡ ಸಮಸ್ಯೆ ಯಾವುದಕ್ಕೂ ಬಗ್ಗದೆ ಸತಾಯಿಸುತ್ತ ಸುಮ್ಮನೊಮ್ಮೆ ರೊಟೀನ್ ಬ್ಲಡ್ ಟೆಸ್ಟ್ ಮಾಡಿಸಿದಾಗ ದೊಡ್ಡ ಅಪಾಯವನ್ನು ಕಣ್ಣೆದುರು ನಿಲ್ಲಿಸಿತ್ತು.ಒಡನೆ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆಂದು ನಗರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು ಸದ್ಯ ಇದಕ್ಕೆ ಲಿವರ್ ಟ್ರಾನ್ಸ್ ಪ್ಲಾಂಟ್ ಅಲ್ಲದೆ ಬೇರೆ ದಾರಿಯಿಲ್ಲ ಅಂದು ಬಿಟ್ಟಿದ್ದರು.ಅವನ ತಂದೆಯ ಬ್ಲಡ್ ಗ್ರೂಪ್ ಬೇರೆಯದಾಗಿತ್ತು.ತಮ್ಮ ಇನ್ನೂ ಪೀಚು ಪೀಚಗೆ ಇದ್ದ.ವೈದ್ಯರ ಪ್ರಕಾರ ಇದ್ದದ್ದರಲ್ಲಿ ಇವನೇ ಸೂಕ್ತ ಡೋನರ್ ಆಗಿದ್ದ .

ವಿಷ್ಯ ಹೀಗೆ ಅಂದಾಕ್ಷಣ ನನಗೆ ಫೋನ್ ಮಾಡಿದವನು ಎಲ್ಲವನ್ನೂ ವಿವರಿಸಿ ಹೇಳಿದ್ದ.ಅವನ ದನಿಯಲ್ಲೊಂದು ತಳಮಳವಿತ್ತು.’ಯಾಕೆ ಲಿವರ್ donate ಮಾಡಲು ನಿನಗೇನಾದರೂ ಭಯವೇ?’ ಅಂತ ಕೇಳಿದೆ.’ಛೆ ಛೆ ನನಗೇನಿಲ್ಲಪ್ಪಾ ..,ಅಮ್ಮನೇ ಒಪ್ಪುತ್ತಿಲ್ಲ ,ನಾಳೆ ನಿಂಗೆ ಮದುವೆ ವಿಷಯ ಬಂದಾಗ ಇದೆಲ್ಲ ಪ್ರಾಬ್ಲಂ ಆಗಬಹುದು ಅಂತಿದ್ದಾರೆ ‘ಅಂದ.ನಾನು ‘ಅದಕ್ಕೆಲ್ಲ ತಲೆ ಕೆಡಿಸಿಕೊಬೇಡ ಕಣೋ.ಈ ಅಮ್ಮ ಅನ್ನೋ ಕ್ಯಾರೆಕ್ಟರ್ ಇರೋದೇ ಹೀಗೆ… ತಾನು ಸಾಯುವ ಸ್ಥಿತಿಯಲ್ಲಿರುವಾಗಲೂ ಆಕೆ ತನ್ನ ಮಕ್ಕಳ ಒಳಿತಿನ ಬಗೆಯೇ ಯೋಚಿಸುತ್ತಿರುತ್ತಾಳೆ. ಹಾಗೇನೇ ನಿಮ್ಮಮ್ಮನೂ ನೀನು ಲಿವರ್ ಕೊಡುವುದು ಬೇಡ ಅನ್ನುತ್ತಿದ್ದಾರೆ ,ನೀನು ಒಳ್ಳೆ ಮನಸಿನಿಂದ donate ಮಾಡು ನಿಂಗೆ ಏನೂ ಆಗಲ್ಲ ‘ಅಂದೆ .ಅದಕ್ಕವನು ‘ಏ ಐ ಯಾಂ ರೆಡೀ ಈ ಅಮ್ಮನೇ…ಅಂತ ತೊದಲಿದ್ದ.

ಸ್ವಲ್ಪ ಕಾಲ ಹೀಗೆ ಮುಂದೆ ಹೋಯ್ತು.ಹೇಗಿದ್ದಾರೆ ಅಮ್ಮ ಅಂತ ನಾ ಕೇಳುವಾಗಲೆಲ್ಲ ‘ ಹ್ಮ್ ಹಾಗೇ ಇದ್ದಾರೆ,ನಾವು cadaver ಗೋಸ್ಕರ ಕಾಯುತ್ತಿದ್ದೇವೆ.ಒಂದೆರಡು ತಿಂಗಳು ವೇಟ್ ಮಾಡಿ ಹಾಗೂ ಸಿಗದಿದ್ದರೆ ನಂತರ ಕೊಟ್ಟರೆ ಆಯ್ತು ಅಂತ ಡಿಸೈಡ್ ಮಾಡಿದ್ದೀವಿ ಅನ್ನುತ್ತಿದ್ದ.

ಅದಾಗಿ ಮತ್ತೂ ಎರಡು ತಿಂಗಳು ಮುಗಿದವು .cadaver ಅಂತೂ ಸಿಗಲಿಲ್ಲ. ಅಮ್ಮನನ್ನು ಅವರದೇ ಆಸ್ಪತ್ರೆಯ ಸ್ಪೆಷಲ್ ರೂಮಿನಲ್ಲಿಟ್ಟು ನೋಡಿಕೊಳ್ಳಲಾಗುತ್ತಿತ್ತು. ಅವನು ಚಿಂತೆಯಿಂದ ತುಂಬಾ ಇಳಿದುಹೋಗಿದ್ದ.ಆಗಾಗ ಮಾತಿನ ನಡುವೆ ‘ಅಪ್ಪ ಅಷ್ಟಾಗಿ ಗಮನ ಕೊಡುತ್ತಿಲ್ಲ ಕಣೆ,ತಮ್ಮನೂ ಕಾಲೇಜ್ ಅಂತಹೊರಟು ಬಿಡುತ್ತಾನೆ ಎಲ್ಲದಕ್ಕೂ ನಾನೊಬ್ಬನೇ ..ನಂಗೂ ಏಗಿ ಏಗಿ ಸಾಕಾಗಿ ಹೋಗಿದೆ..ನಾನು ತುಂಬಾ ನೊಂದು ಹೋಗಿದ್ದೀನಿ ‘ಎಂದು ಅಸಹಾಯಕತೆ ತೋಡಿಕೊಳ್ಳುತ್ತಿದ್ದ.ಆಗೆಲ್ಲ ನಾನು ‘ಸುಮ್ಮನಿರೋ ಹಾಗೆಲ್ಲ ನೊಂದುಕೊ ಬೇಡ.ಅಮ್ಮನನ್ನು ಮಗುವಿನಂತೆ ನೋಡಿಕೊಳ್ಳುವುದೂ ಒಂದು ಭಾಗ್ಯವೇ..ನಿನಗಾಗಿ ಏನೆಲ್ಲಾ ಮಾಡಿದ ಅಮ್ಮನಿಗೆ ನೀನೇನು ಮಾಡಿದರೂ ಕಡಿಮೆಯೇ’ಎಂದು ಸಮಾಧಾನಿಸಲು ನೋಡುತ್ತಿದ್ದೆ.ಆದರೆ’ ಯಾರೂ cadaver ಸಿಗುತ್ತಿಲ್ಲ ಕಣೆ,ದೇವರು ಯಾವಾಗ ಕಣ್ಣು ತೆರೆದು ನಮ್ಮನ್ನು ಕಾಪಾಡುತ್ತಾನೋ ‘ಎಂದವನು ಹಲುಬುವಾಗ ಮಾತ್ರ ಅವನನ್ನು ಹೇಗೆ ಸಮಾಧಾನಿಸುವುದೆಂದು ತಿಳಿಯದೆ ಗೊಂದಲಕ್ಕೆ ಬೀಳುತ್ತಿದ್ದೆ.

ನಿತ್ಯದ ಪ್ರಾರ್ಥನೆಯಲ್ಲಿ ಅವನ ಅಮ್ಮ ಬೇಗ ಗುಣವಾಗಲೆಂದು ಪ್ರಾರ್ಥಿಸುತ್ತಿದ್ದೇನೆ ಹೊರತು ಅದರಾಚೆಗೇನು ಕೇಳಬೇಕೆಂದು ನನಗೆ ನಿಜಕ್ಕೂ ತಿಳಿಯುತ್ತಿರಲಿಲ್ಲ.

ಹೀಗೇ ಮತ್ತೂ ಒಂದು ತಿಂಗಳು ಕಳೆಯಿತು.cadaver ಯಾರೂ ಸಿಗಲಿಲ್ಲವಾಗಿ ಕಡೆಗೆ ಅವನೇ ಲಿವರ್ ಕೊಡುವುದೆಂದು ತೀರ್ಮಾನವಾಯ್ತು.ನಿತ್ಯ ಫೋನ್ ಮಾಡಿ ‘ನಾ ಲಿವರ್ ಕೊಡುತ್ತಿದ್ದೇನೆ ಕಣೆ..ಮುಂದೆ ನನ್ನ ಭವಿಷ್ಯ ಏನಾಗುತ್ತೋ ಗೊತ್ತಿಲ್ಲ,ನಾನು ಮತ್ತೆ ಮೊದಲಿನಂತೆ ಆಗುತ್ತೀನೋ ಇಲ್ಲವೋ..ಎಂದು ಹಲುಬತೊಡಗಿದ.ನಾನು ಆದಷ್ಟು ಆತನಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದೆ…ಒಮ್ಮೆಯಂತೂ ನಾನು ‘ನೀನೆ ಒಬ್ಬ ಡಾಕ್ಟರ್ ಆಗಿ ಹೀಗೆಲ್ಲ ಭಯ ಪಟ್ಟರೆ ಏನರ್ಥ ?’ಎಂದು ಕೋಪದಿಂದಲೇ ಕೇಳಿದಾಗ ..’ನಾನೊಬ್ಬ ಡಾಕ್ಟರ್ ಆಗಿರೋದರಿಂದಲೇ ಕಣೆ ಸಮಸ್ಯೆಯಾಗಿರೋದು.ಆಗಾಗ ನೋಡ್ತೀವಲ್ಲ ಕೇಸಸ್..ಇದರಲೆಲ್ಲ ರಿಕವರಿ ಸ್ವಲ್ಪ ಕಷ್ಟವೇ..ಅದಕ್ಕೆ ಒಂಥರಾ ಭಯವಾಗಿದೆ.ಅಂದಿದ್ದ. ಆದ್ರೆ ನಾನೂ ಪಟ್ಟು ಬಿಡದೆ ..’ನಾನೂ ನೋಡಿಲ್ಲವೇ,ಸಾಮಾನ್ಯವಾಗಿ ಯಾರು ಅರೆಮನಸಿನಿಂದ donate ಮಾಡಿರುತ್ತಾರೋ ಬಹುತೇಕ ಅವರೇ ಪೋಸ್ಟ್ ಆಪ್ ಪೀರಿಯಡ್ಡಿ ನಲ್ಲಿ ಸಿಕ್ ಆಗೋದು.ಅವರು ಸೈಕಾಲಾಜಿಕಲೀ ಆಫೆಕ್ಟ್ ಆಗಿರೋದೆ ಇದಕ್ಕೆ ಮುಖ್ಯ ಕಾರಣ ‘ಎಂದು ವಾದಿಸಿದ್ದೆ.ಅಷ್ಟಾದರೂ ‘ನೀನು ಹೇಳೋದೂ ಸರೀನೆ ಆದರೂ ಚಾನ್ಸಸ್ 50% ತಾನೇ’ ಎಂದು ತಡವರಿಸಿದವನನ್ನು ‘ನೆಗೆಟಿವ್ ಸೈಡ್ ನಿಂದ ಯೋಚಿಸೋದು ಬಿಟ್ಟು ಪಾಸಿಟಿವ್ ಆಗಿ ಯೋಚಿಸೋ ‘ಎಂದು ಹುರಿದುಂಬಿಸಿ ಕಳಿಸಿದ್ದೆ.ಅಂತೂ ಇಂತೂ ಇನ್ನು ಮೂರು ದಿನಗಳಲ್ಲಿ ಟ್ರಾನ್ಸ್ ಪ್ಲಾಂಟ್ ಗೆ ಅಗತ್ಯವಾದ proceedings ಮಾಡೋದು ಅಂತಾಯ್ತು ಆದರೆ ವಿಧಿಯಾಟ …! ಆ ಮೂರು ದಿನಗಳಲ್ಲಿ ಆಕೆಯ ಆರೋಗ್ಯ ಮತ್ತೂ ಬಿಗಡಾಯಿಸಿ ಬಿಟ್ಟಿತು..ಲಿವರಿನ ಜೊತೆ ಕಿಡ್ನಿ ಯೂ ವಿಫಲವಾಗಿತ್ತು.ಈಗಂತೂ ಅವನು ಧರೆಗಿಳಿದುಹೊಗಿದ್ದ.

ತಡಮಾಡದೆ ಆಕೆಯನ್ನು ಪ್ರತಿಷ್ಟಿತ ಆಸ್ಪತ್ರೆಗೆ ದಾಖಲಿಸಲಾಯ್ತು. ಎಮರ್ಜೆನ್ಸಿಯಾಗಿ ಡಯಾಲಿಸಿಸ್ ಮಾಡಲಾಯ್ತು.ಅಲ್ಲಿನ ವೈದ್ಯರು ಇಂಥ ಸಮಯದಲ್ಲಿ transplantation ಸಾಧ್ಯವಿಲ್ಲ ಎಂದು ಹೇಳಿಬಿಟ್ಟರು.ಸರಿ ಆಕೆ ರೆಕವರ್ ಆಗಲಿ ಅಂತ ಕಾಯುವುದರ ಹೊರತು ಬೇರೆ ದಾರಿಯಿರಲಿಲ್ಲ.ಆದರೆ ಆಕೆ ಚೇತರಿಸಿಕೊಳ್ಳುವ ಯಾವ ಲಕ್ಷಣವನ್ನೂ ತೋರಿಸದೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಗತೊಡಗಿದರು.ಅವೆಲ್ಲದರ ಜೊತೆಗೆ ಇವನ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲಿ ನನಗೆ ಸಾಕು ಸಾಕಾಗುತ್ತಿತ್ತು.’ಅಲ್ಲ ಕಣೆ ದೇವರು ಅಂತ ನಿಜಕ್ಕೂ ಯಾರಾದರೂ ಇದ್ದಾರಾ ಹಾಗೊಮ್ಮೆ ಇದ್ದಾರೆ ಅಂತಾದರೆ ಈಗ ಅವರೆಲ್ಲ ಏನು ಮಾಡುತ್ತಿದ್ದಾರೆ?ನಮ್ಮ ಅಮ್ಮ ಮಾಡುತ್ತಿದ್ದ ಪೂಜೆಗಳಿಗೆ ಉಪವಾಸಗಳಿಗೆ ಆ ಭಕ್ತಿಗೆ,ಆ ಒಳ್ಳೆಯ ಮನಸಿಗೆ ದೇವರು ಕೊಡುತ್ತಿರುವ ಪ್ರತಿಫಲ ಇದೇನಾ…ನನಗೆ ತುಂಬಾ ಬೇಸರವಾಗಿಬಿಟ್ಟಿದೆ ಕಣೆ..ಜೀವನವೇ ಬೇಡ ಅನಿಸುತ್ತಿದೆ.ನನ್ನ ಮದುವೆ ನೋಡಬೇಕು ಅಂತ ಎಷ್ಟೊಂದು ಆಸೆ ಇಟ್ಟುಕೊಂಡಿದ್ದರು..ಈಗ ನೋಡಿದರೆ ಅದನ್ನ ನೋಡದೇ ಹೋಗಿಬಿಡುತ್ತಾರಾ ಅನಿಸುತ್ತಿದೆ ‘ಎಂದು ಆತ ಕಣ್ಣೀರಾಗುತ್ತಿದ್ದರೆ ನಾನು ಅಸಹಾಯಕಳಂತೆ ನಿಂತಿರುತ್ತಿದ್ದೆ.ಆ ಸಮಯದಲ್ಲಿ ನಾನು ಆಡುವ ಯಾವ ಮಾತುಗಳಿಗೂ ಅರ್ಥವಿಲ್ಲವೇನೋ ಅನಿಸುತ್ತಿದ್ದರೂ ನಾನು ‘ಇಲ್ಲ ನಂಬಿಕೆ ಇಡು ,ಅಮ್ಮ ಇದನ್ನ ಎದುರಿಸಿ ಹೊರಬಂದು ಬಿಡುತ್ತಾರೆ ..ಧೈರ್ಯವಾಗಿರು,ದೇವರಲ್ಲಿ ನಂಬಿಕೆ ಕಳೆದುಕೊಬೇಡ..ಈ ಸಮಯದಲ್ಲಿ ಅವನ ಹೊರತು ಸಹಾಯ ಮಾಡಬಲ್ಲವರು ಅಂದರೆ ಬೇರೆ ಯಾರೂ ಇಲ್ಲ’ ಎಂದು ಏನೇನೋ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದೆ..ಹಾಗಿರಲು ಅದೊಂದು ಬೆಳಗೆ ಇವನು ತುಂಬಾ ಉದ್ವೇಗದಲ್ಲಿ ಫೋನಾಯಿಸಿ ‘ಏಯ್ ,ಅಮ್ಮ ಇವತ್ತು ಮಾತಾಡಿದರು ಕಣೆ..ನನ್ನ ಹೆಸರು ಹಿಡಿದು ಕೂಗಿದರು,ಹಸಿವಾಗಿದೆ ಜೂಸ್ ಕೊಡು ಅಂತ ಕೇಳಿದರು ಅಂತ ಖುಷಿಯಿಂದ ಮಾತಾಡಿದ.ಅವನ ದನಿಯಲ್ಲಿ ಅಂತ ಸಂತೋಷ ಕೇಳಿ ಬಹಳ ದಿನಗಳೇ ಆಗಿಹೋಗಿದ್ದವು.

ಅಷ್ಟೇ….

ಆ ಚಿಕ್ಕ ಸಂತೋಷ ಮಳೆಯ ನಡುವೆ ಇಣುಕಿದ ಕಳ್ಳ ಬಿಸಿಲಿನಷ್ಟೇ ಹುಸಿಯಾಗಿತ್ತು..ಆ ನಂತರ ಅವರು ಮತ್ತೆ ಮಾತಾಡಲೇ ಇಲ್ಲ.ಹಾಗೆ ಅವನಿಂದ ಜ್ಯೂಸ್ ಕೇಳಿ ಕುಡಿದು ಮಲಗಿದವರು ಅದೇ ರಾತ್ರಿ ಹನ್ನೆರಡೂವರೆಗೆಲ್ಲ ಎಲ್ಲರನ್ನೂ ಬಿಟ್ಟು ಹೊರಟು ಹೋಗಿದ್ದರು.

ನಮ್ಮೆಲ್ಲರ ಪ್ರಾರ್ಥನೆ,ಉತ್ತಮ ಚಿಕಿತ್ಸೆ ,ಒಳ್ಳೆಯ ಆಸ್ಪತ್ರೆ ಇವೆಲ್ಲವನ್ನೂ ದಾಟಿ ಬಂದ ಸಾವು ತನ್ನ ಸ್ವರೂಪ ದರ್ಶನ ಮಾಡಿಸಿ ಮೌನವಾಗಿ ಎದ್ದು ಹೋಗಿತ್ತು.

ಅಮ್ಮನ ಸಾವಿನ ನಂತರ ಇವನು ಮತ್ತೂ ಮಂಕಾಗಿ ಬಿಟ್ಟ .ಎಲ್ಲದರಲ್ಲೂ ಆಸಕ್ತಿ ಕಳಕೊಂಡಿದ್ದ.ಸಾಲದಕ್ಕೆ ಹಾಗೆ ಅವನ ಅಮ್ಮ ತೀರಿಕೊಂಡ ಎರಡೇ ದಿನಗಳಲ್ಲಿ 68 ವಯಸಿನ ವಯೋವೃದ್ದರೊಬ್ಬರಿಗೆ cadaver ಸಿಕ್ಕಿ ಸಕ್ಸಸ್ ಫುಲ್ ಲಿವರ್ transplant ಸರ್ಜರಿ ನಡೆದ ವಿಷಯವನ್ನು ತಿಳಿದು ಬಂದಾಗಲಂತೂ ಇವನು ಕುದ್ದು ಹೋಗಿದ್ದ.ಒಡನೇ ನನಗೆ ಫೋನಾಯಿಸಿ ‘ನೋಡಿದೆಯಾ ನನ್ನ ದುರಾದೃಷ್ಟ ..68 ವರ್ಷದ ಯಂಗ್ ಫೆಲೋ ಗೆ cadaver ಸಿಕ್ಕಿ ಸರ್ಜರಿ ನಡೆದಿದೆ..ಆದರೆ ದೇವರು ನಮಗೆ ಮೋಸ ಮಾಡಿದ..ನಿಜಕ್ಕೂ ದೇವರಿದ್ದಾನ…..’ಹೀಗೆ ಏನೋನೋ ಮಾತಾಡತೊಡಗಿದ.

ನನಗೆ ನಿಜಕ್ಕೂ ಕೋಪ ಬಂದಿತ್ತು.ಅಮ್ಮನನ್ನು ಕಳೆದುಕೊಂಡ ಹತಾಶೆಯಲ್ಲಿ ಹಾಗೆ ಮಾತಾಡುತ್ತಿದಾನೆ ನಿಜವೇ..ಆದರೂ ಅವನು ಮಾತಾಡುತ್ತಿರುವುದು ತಪ್ಪು ಅನಿಸಿತು.

ನಾನು ‘ಹಾಗೆಲ್ಲ ಅನ್ನಬೇಡ ಕಣೋ,ದೇವರು ಯಾವತ್ತೋ ನಿನಗೊಂದು ಚಾನ್ಸ್ ಕೊಟ್ಟಿದ್ದರು.. ಆದರೆ ನೀನೆ ಒಂದು ಸರಿಯಾದ ನಿರ್ಧಾರ ತಗೊಳ್ಳಲಿಲ್ಲ ..ಕೊನೆಗೆ ನೀನು ನಿರ್ಧಾರ ತಗೊವಷ್ಟರಲ್ಲಿ ಸಮಯ ಮೀರಿ ಹೋಗಿತ್ತು..ಅದರ ಬಗೆ ಯೋಚಿಸು .., ಹೋಗಲಿ cadaver ಅಂದರೆ ಯಾರು..ಅವನೂ ಯಾರಿಗೋ ಮಗನೋ ಗಂಡನೂ ಅಪ್ಪನೋ ಅಲ್ಲವಾ..?ಹೋಗಲಿ,ದೇವರಲ್ಲಿಯೇ ಆದರೂ ಅಪ್ಪಾ ,ದೇವರೇ, ಆದಷ್ಟು ಬೇಗ ನಮಗೊಂದು cadaver ಸಿಗೋ ಹಾಗೆ ಮಾಡು ಅಂತ ಕೇಳಬಹುದಾ ..ಹೇಳು? ನೀ ಹೀಗೆಲ್ಲ ಮಾತಾಡಬೇಡ ಕಣೋ..ಸಾಧ್ಯವಾದರೆ ನೀನೂ ಆರ್ಗನ್ donation ಫಾರ್ಮ್ ಫೈಲ್ ಮಾಡು ,ನಾನೂ ಮಾಡುವಾಂತ ಇದ್ದೀನಿ at least ನಮ್ಮ ಸಾವಿನಲ್ಲಿಯಾದರೂ ಯಾರಿಗಾದರೂ ಒದಗುವ..ಏನಂತೀಯ..ಯೋಚನೆ ಮಾಡು ‘ಅಂತ ಒಂದೇ ಉಸಿರಿಗೆ ಹೇಳಿಬಿಟ್ಟಿದ್ದೆ .ಸ್ವಲ್ಪ ನಿಷ್ಟುರವೆನಿಸಿತೋ ಏನೋ ಆಮೇಲಿಂದ ಸ್ವಲ್ಪ ದಿನ ಅವನು ನಂಜೊತೆ ಮಾತೇ ಆಡಲಿಲ್ಲ .ನಾನು ಯಥಾ ಪ್ರಕಾರ ಯೋಗಕ್ಷೇಮ ವಿಚಾರಿಸುವ ಮೆಸೇಜುಗಳನ್ನ ಕಳಿಸುತ್ತಲೇ ಇದ್ದೆ ಆದರೆ ಅತ್ತಲಿಂದ ಯಾವುದೇ ಉತ್ತರ ಬರುತ್ತಿರಲಿಲ್ಲ.ಫೋನೂ ಮಾಡಿದರೆ ಅವನು ಫೋನನ್ನೂ ಎತ್ತುತ್ತಿರಲಿಲ್ಲ.ಸರೀ ಸಾಮಾನ್ಯ ದುಃಖವೇ ಹೋಗಲಿ ಎನ್ನಲು?ಅವನಿಗೊಂದಿಷ್ಟು space ಬೇಕಿದೆ..ನಡೆದದ್ದನ್ನು ಒಪ್ಪಿಕೊಳ್ಳಲು ಸಮಯ ಬೇಕಿದೆಯೆನಿಸಿ ನಾನು ಹೆಚ್ಚು ಡಿಸ್ಟರ್ಬ್ ಮಾಡಲಿಲ್ಲ.ಆದರೆ ಸದಾ ಅವನ ಕುರಿತು ಚಿಂತೆ ಕಾಡುತ್ತಿತ್ತು.

ಈಗ ಮೊನ್ನೆ ಅವ ತಾನೇ ಮನೆಗೆ ಬಂದಿದ್ದ.ಮತ್ತೆ ಡ್ಯೂಟಿಗೆ ಜಾಯಿನ್ ಆಗಿದ್ದೀನಿ ಮನೆಯಲ್ಲೇ ಕುಳಿತರೆ ಅಮ್ಮ ಮತ್ತೂ ನೆನಪಾಗುತ್ತಾರೆ ಅಂದ.ಒಳ್ಳೇದು ಕಣೋ…ಅಂದೇ.ಅಮ್ಮನ ನೆನಪಿನಲ್ಲಿ ಕಣ್ಣೀರಾದ .ಅವನು ಹಾಗೆ ಬಿಕ್ಕಳಿಸಿ ಅಳುತ್ತಿದ್ದರೆ ನಾನು ಸುಮ್ಮನೆ ಅವನನ್ನು ಅಳಲು ಬಿಟ್ಟು ಕೈ ಹಿಡಿದು ನೇವರಿಸುತ್ತಾ ಕುಳಿತೆ.ಅಮ್ಮನ ಕೈಯನ್ನೇ ಹಿಡಕೊಂಡಿದ್ದೀನೋ ಅಂತ ಅನಿಸುತ್ತಿದೆ ಕಣೆ..ಅನ್ನುತ್ತ ಹಾಗೆ ಬಹಳ ಹೊತ್ತು ಕುಳಿತಿದ್ದ. ಬಳಿಕ ಸ್ವಲ್ಪ ಹಗುರಾದವನು ತಾನು organ donation form fill ಮಾಡುತ್ತಿರುವುದಾಗಿ ತಿಳಿಸಿದ.ಎಲ್ಲ ವಿಚಾರಿಸಿಕೊಂಡು ಬಂದೆ ಇವತ್ತು ಆಗಲಿಲ್ಲ ನಾಳೆ ಮೊದಲು ಹೋಗಿ ಆ ಕೆಲಸ ಮಾಡಿಬಿಡುತ್ತೇನೆ ಅಂದ.ಅವನ ಮೇಲೆ ಅಭಿಮಾನ ಉಕ್ಕಿ ಬಂತು.

ಅಮ್ಮ ತೀರಿಕೊಂಡು ಇನ್ನೇನು ಒಂದು ವಾರ ಕಳೆದರೆ ಎರಡು ತಿಂಗಳಾಯ್ತು ಅಂತ ನಿಟ್ಟುಸಿರಿಟ್ಟ..ಅವತ್ತು ಯಾವುದಾರೂ ಅನಾಥಾಶ್ರಮಕ್ಕೆ ಹೋಗಿ ಅನಾಥ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳಿ,ಅಮ್ಮನ ಹೆಸರಲ್ಲಿ ಊಟ ಕೊಡಿಸು..ನಿನಗೂ ಸ್ವಲ್ಪ ರಿಲಾಕ್ಸ್ ಆಗಬಹುದು ಅಂದೆ.’ಹ್ಮ್ ..ನಾನೂ ಹಾಗೆ ಯೋಚಿಸುತ್ತಿದ್ದೆ.ಅಷ್ಟೇ ಅಲ್ಲ ಅಮ್ಮನ ಹೆಸರಲ್ಲಿ ಆಸ್ಪತ್ರೆ ತೆರೆದು ಬಡವರಿಗೆ ಉಚಿತ ಚಿಕಿತ್ಸೆ ಕೊಡುವ ಕುರಿತೂ ಯೋಚಿಸುತ್ತಿದ್ದೇನೆ ಅಂದ.’ತುಂಬಾ ಒಳ್ಳೇದು ಕಣೋ’…ಅಂದೆ.

ಗೆಳೆಯನ ಕಣ್ಣುಗಳಲ್ಲಿ ಕನಸುಗಳು ಮತ್ತೆ ಜೀವ ತಳೆದಿದ್ದವು…

ಅಮ್ಮನ ಕುರಿತೇ…ಅಮ್ಮನ ಸುತ್ತಲೇ..

ನೋವಿನೊಳಗೆ ಹುಟ್ಟಿದ ಆ ಕನಸುಗಳು ತುಂಬಾ ಸೊಗಸಾಗಿ ಕಂಡವು.ನಾನು ಕಣ್ಣೀರು ಒರೆಸಿಕೊಳ್ಳುತ್ತಾ ‘ನೀನೇನೆ ಮಾಡು ಗೆಳೆಯಾ,ನಾ ನಿನ್ನ ಜೊತೆಗಿದ್ದೇನೆ ‘ಎಂದು ಬೀಳ್ಕೊಟ್ಟೆ.

‍ಲೇಖಕರು G

19 November, 2012

1 Comment

  1. D.Ravivarma

    ಅಮ್ಮ ತೀರಿಕೊಂಡು ಇನ್ನೇನು ಒಂದು ವಾರ ಕಳೆದರೆ ಎರಡು ತಿಂಗಳಾಯ್ತು ಅಂತ ನಿಟ್ಟುಸಿರಿಟ್ಟ..ಅವತ್ತು ಯಾವುದಾರೂ ಅನಾಥಾಶ್ರಮಕ್ಕೆ ಹೋಗಿ ಅನಾಥ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳಿ,ಅಮ್ಮನ ಹೆಸರಲ್ಲಿ ಊಟ ಕೊಡಿಸು..ನಿನಗೂ ಸ್ವಲ್ಪ ರಿಲಾಕ್ಸ್ ಆಗಬಹುದು ಅಂದೆ.’ಹ್ಮ್ ..ನಾನೂ ಹಾಗೆ ಯೋಚಿಸುತ್ತಿದ್ದೆ.ಅಷ್ಟೇ ಅಲ್ಲ ಅಮ್ಮನ ಹೆಸರಲ್ಲಿ ಆಸ್ಪತ್ರೆ ತೆರೆದು ಬಡವರಿಗೆ ಉಚಿತ ಚಿಕಿತ್ಸೆ ಕೊಡುವ ಕುರಿತೂ ಯೋಚಿಸುತ್ತಿದ್ದೇನೆ ಅಂದ.’ತುಂಬಾ ಒಳ್ಳೇದು ಕಣೋ’…ಅಂದೆ.
    ಗೆಳೆಯನ ಕಣ್ಣುಗಳಲ್ಲಿ ಕನಸುಗಳು ಮತ್ತೆ ಜೀವ ತಳೆದಿದ್ದವು…
    ಅಮ್ಮನ ಕುರಿತೇ…ಅಮ್ಮನ ಸುತ್ತಲೇ..
    ನೋವಿನೊಳಗೆ ಹುಟ್ಟಿದ ಆ ಕನಸುಗಳು ತುಂಬಾ ಸೊಗಸಾಗಿ ಕಂಡವು.ನಾನು ಕಣ್ಣೀರು ಒರೆಸಿಕೊಳ್ಳುತ್ತಾ ‘ನೀನೇನೆ ಮಾಡು ಗೆಳೆಯಾ,ನಾ ನಿನ್ನ ಜೊತೆಗಿದ್ದೇನೆ ‘ಎಂದು ಬೀಳ್ಕೊಟ್ಟೆ.

    ನಿಮ್ಮ ಬರಹದಲ್ಲಿ ಅಲ್ಲ ಆ ಸ್ಪಂದನದಲ್ಲಿ ಮಾನವೀಯತೆ ಎದ್ದು ಕಾಣುತ್ತಿದೆ…. ಈ ಬದುಕೇ ಹೀಗೆ.. ನೋಡ ನೋಡುತ್ತಿದ್ದಂತೆ ಏನೆಲ್ಲಾ ಆಗಿ ಹೋಗಿ ಬಿಡುತ್ತದೆ…. ನೀವು ಹೇಳುವ ಆ ಕ್ಷಣದ ನಿರ್ಧಾರ ಹಲವೊಮ್ಮೆ ಬದುಕಿನಲ್ಲಿ ಬಹು ಮುಕ್ಯವಾಗುತ್ತದೆ,,, ಅದು ಅಸ್ತೆ ಮುಂದಿನ ಬೆಳವಣಿಗೆಗೆ ಕಾರಣವು ಆಗುತ್ತದೆ…ನಿಮ್ಮೊಳಗಿನ ತುಡಿತ, ನನಗೆ ಇಸ್ತವಾಯ್ತು….ಕಾಲ ಎಲ್ಲವನ್ನು ಮರೆಸುತ್ತೆ… ಆದರೆ ಮನದೊಳಗಿನ ನೋವು, ಅದು ಆಗಾಗ್ಗೆ ಕಾಡುತ್ತಲೇ ಇರುತ್ತದೆ….ನಿಮ್ಮ ಚಿಂತನೆ,ವ್ಯಾಕುಲತೆ , ಈ ಬರಹಕ್ಕೆ ನನ್ನ ಸ್ಪಂದನವಿದೆ.

    ರವಿವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading