ಆನಾ ಆಹ್ಮತೋವಾ ನೆನೆದು

    ಜಿ.ಪಿ.ಬಸವರಾಜು

ನಡುಗುವ ಕೈಗಳಿಂದ ನಿನ್ನ

ಎದೆಯ ಪದಗಳನು ಎತ್ತಿಕೊಂಡೆ:

ಸೆರೆಮನೆಯ ಮಹಾ ಗೋಡೆಯ ಈಚೆ ನೀನೊಂದು

ಗುಬ್ಬಚ್ಚಿ, ಒಂಟಿ ನಿಂತು ಮೊರೆಯಿಡುವ ನಿನ್ನ ನೋವು

ಭೂಮಿ-ಆಕಾಶಗಳ ಒಂದುಮಾಡಿದೆ, ನಿನ್ನ ನಿಟ್ಟುಸಿರು

 ಬಿರುಗಾಳಿಯಾಗಿ ಮೊರೆಯುತ್ತಿದೆ, ನಿನ್ನ  ಕಣ್ಣೀರು

ಮಳೆಗಾಲದಲ್ಲಿ ಭೋರ್ಗರೆಯುವ ಮಹಾನದಿ; ಸೆರೆಮನೆಯ

ಒಳ ಹೊಗಲು ನಿನ್ನ ತಡೆದಿರುವ  ಆ ಬೃಹತ್‍ ಬೀಗ ನಿನ್ನ

ಸದಾ ಕಾಲದ ಶತ್ರು, ನಿನ್ನ ರಟ್ಟೆ ಗಟ್ಟಿಯಾಗಿದ್ದರೆ ಕುಟ್ಟಿ ಕೆಡವುತ್ತಿದ್ದೆ

ನೀನು ಆ ಮಹಾ ಗೋಡೆಯನ್ನು, ಪುಡಿಪುಡಿ ಮಾಡುತ್ತಿದ್ದೆ ನೀನು

ಆ ಬೀಗವನ್ನು, ನೀನೀಗ ಬಿರುಮಳೆಗೆ ಸಿಕ್ಕು ಒದ್ದೆಮುದ್ದೆಯಾದ

ಪುಟ್ಟ ಗುಬ್ಬಚ್ಚಿ; ನಡುಗುವ ನಿನ್ನ ತುಟಿಗಳಿಂದ ಸುರಿಯುತ್ತಿದೆ ನೆತ್ತರು

ನಿನ್ನ ಎದೆಯಾಳದ ಗಾಯಗಳನ್ನವರು ಗೀರಿಗೀರಿ ನಿನ್ನ ಮಗನನ್ನು

ಎಳೆದು ತಂದರು; ನಿನ್ನ ಪತಿಯನ್ನವರು ದರದರ ಎಳೆದು ತಳ್ಳಿದರು

ಈ ಗಟ್ಟಿಗೋಡೆಯ ಸೆರೆಮನೆಗೆ; ದಾರಿಯಲ್ಲಿ ಹರಿದ ನೆತ್ತರ

ಕೆಸರಲ್ಲಿ ಇನ್ನೂ ಕಾಣುತ್ತಿವೆ ಅವರ ಬೂಟಿನ ಗುರುತು; ನಿನ್ನ ಕಣ್ಣೀರು

ಕಲಸಿಹೋಗಿದೆ ಈ ಮಳೆಯ ನೀರಿನಲ್ಲಿ, ಈ ನೆತ್ತರ ಬಣ್ಣದಲ್ಲಿ;

ಹಸಿಹಸೀ ನೆತ್ತರಿನ ವಾಸನೆ ಬೀದಿಯುದ್ದಕ್ಕೂ ಹಬ್ಬಿದೆ; ಮಾತಿಲ್ಲದ ಬೀದಿ

ಬರಿದಾಗಿದೆ; ಕಂಡವರನ್ನೆಲ್ಲ ಹಿಡಿದು ಎಳೆದೆಳೆದು ಅವರು ದೂಡಿದ್ದಾರೆ

ಸೆರೆಮನೆಗೆ; ಮನೆಯಲ್ಲ ಅದು, ಹಾಳು ಸುರಿಯುವ, ಗೋಳು ಕರೆಯುವ

ಮಸಣ; ಹೆಂಗಸರು, ಮುದುಕರು,ಮಕ್ಕಳು, ಖಾಲಿ ಕೋಣೆಗಳು, ದೇವರ

ಬೇಡಿ ಅವರು ಉರಿಸಿದ ಮೇಣದ ಬತ್ತಿಗಳು ಆರಿ ಕತ್ತಲೆಯೆ ತುಂಬಿದೆ

ಈ ಬೀದಿಯ ಸೂರ್ಯಚಂದ್ರರು ಹೋದರೆಲ್ಲಿಗೆ ಇದ್ದಕಿದ್ದ ಹಾಗೆ

ಚುಕ್ಕೆಗಳೂ ತಲೆಮರೆಸಿಕೊಂಡಿವೆ, ಅವನ್ನೂ ಅವರು ದೂಡಿದರೆ

ಸೆರೆಮನೆಗೆ? ಮಳೆ ಚಚ್ಚುತಿದೆ, ಚಳಿ ಚುಚ್ಚುತಿದೆ, ನೆತ್ತರು ಹೆಪ್ಪುಗಟ್ಟತ್ತ

ಹೆಪ್ಪುಗಟ್ಟುತ್ತ ಜೀವ ತಣ್ಣಗಾಗುತ್ತಿದೆ ಇಷ್ಟಿಷ್ಟೆ ನಿಧನಿಧಾನಕ್ಕೆ

ಎಲ್ಲಿದ್ದೀಯ ತಾಯಿ ನೀನೀಗ? ದಬ್ಬಾಳಿಕೆಗೆ ಎದೆಕೊಟ್ಟು ನಿಂತವಳು

ಕರಾಳ ಕತ್ತಲಲ್ಲೂ ಬೆಳಕಿನ ಹಣತೆ ಹಿಡಿದು ಜಗಕೆ ಮುಖದೋರಿದವಳು

ತುಳಿದವರ ಕಾಲಡಿಯಿಂದಲೇ ಮೇಲೆದ್ದು ಧೂಳಾಗಿ, ಧೂಮವಾಗಿ

ಭೂಮಿ ಆಕಾಶಗಳ ಮುಖವನ್ನೆ ಮುಚ್ಚಿದ ಮಹಾನ್‍ ಶಕ್ತಿಯಾಗಿ

ಆನಾ ಆಹ್ಮತೋವಾ ರಷ್ಯಾದ ಸರ್ವಾಧಿಕಾರದ ವಿರುದ್ಧ ಸೆಟೆದು ನಿಂತು, ಅಪಾರ ನೋವನ್ನು ಅನುಭವಿಸುತ್ತಲೇ ತನ್ನ ಎದೆಯ ದನಿಯನ್ನು ಮೊಳಗಿಸಿ ಜನತೆಯಲ್ಲಿ ಆತ್ಮವಿಶ್ವಾಸ ಬಿತ್ತಿದವಳು.

‍ಲೇಖಕರು Avadhi

October 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಮತ್ತೆ ಓದಬೇಕೆನಿಸುವ ಸಾಲುಗಳು. ಆನಾಳ ದುಃಖವನ್ನು ಕೊಂಡು ಕೊಂಡಂತಹ ಸಾಲುಗಳು. ಧನ್ಯವಾದಗಳು ಸರ್.

    ಪ್ರತಿಕ್ರಿಯೆ
  2. Vijayavaman

    ಈ ಕವಿತೆಯನ್ನು ನಮ್ಮ ಸ್ಟ್ಯಾಲಿನ್ ವಂಶಸ್ಥರು, ಭಕ್ತರು ನೋಡಬೇಕು. ಖಂಡಿತಾ ಅವರಿಗೇನೂ ನೋವಾಗುವುದಿಲ್ಲ !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: