ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆನಂದ ಬೋವಿ ಬರೆದ ಸಣ್ಣಕಥೆ ’ಆಲಕ್ಕೆ ಹೂವಿಲ್ಲ’

ಆನಂದ ಬೋವಿ

ಆಲದ ಮರ ರಸ್ತೆಯ ಮಗ್ಗಲಕ್ಕೆ ರಾಕ್ಷಸಾಕಾರದಲ್ಲಿ ಚಾಚಿತ್ತು. ದಟ್ಟವಾಗಿ ಒತ್ತಿಕೊಂಡ ಟೊಂಗೆಗಳ ತುಂಬಾ ಅಂಗೈ ಅಗಲದ ಎಲೆಗಳ ಹಚ್ಚ ಹಸಿರು. ನೆಲದ ಮೇಲೆಲ್ಲ ಅದರದೆ ನೆರಳು. ಕಾಂಡದಲ್ಲಿ ಟಿಸಿಳೊಡೆದು ಜೋತು ಬಿದ್ದು ನೆಲಕ್ಕೆ ತಾಗಿ ಮರುಹುಟ್ಟು ಪಡೆಯಲು ಎಳೆ ಎಳೆಯಾಗಿ ತೇಲಾಡುತ್ತಿರುವ ಬೇರುಗಳ ಜೋಕಾಲಿ , ಮದುವಣಗಿತ್ತಿ ಜಡೆ ಹೆಣೆದಂತೆ ಒಂದರ ಮೇಲೊಂದು ತೋಡಕಾಗಿ ಹೊಂದಿಕೊಂಡು ತೂಗುತ್ತಿದ್ದವು ಜೋತುಬಿದ್ದ ಬೇರುಗಳಲ್ಲಿ ಕೆಲವು ನೆಲಕ್ಕೆ ತಾಗಿ ಸಣ್ಣ ಸಣ್ಣ ಆಲಗಳಾಗಿ ಅಲ್ಲಲ್ಲಿ ಕಣ್ಣು ಪಿಳುಕಿಸುತ್ತಿದ್ದವು. ಮರದ ತುಂಬ ಅಲ್ಲಲ್ಲಿ ಜೋತುಬಿದ್ದ ಹಕ್ಕಿಯ ಗೂಡುಗಳು ಸಂತೃಪ್ತಿಯಿಂದ ಗಟ್ಟ್ಟಿಗಿತ್ತಿಯಾದ ಆಲ , ಆಕಾಶವನ್ನು ಮರೆಮಾಚಿ ,ತನ್ನ ಬಾಹುಗಳನ್ನೆಲ್ಲ ನೆಲದ ತುಂಬ ಹರಡಿಕೊಂಡಿತ್ತು.
ಟಾರ ರಸ್ತೆ ನುನಪಾಗಿತ್ತು. ನಿಮಿಷಕೊಂದು ವಾಹನಗಳ ಸಪ್ಪಳ, ಯಾವಾಗಲು ಗಜಿ ಗಜಿ ಗದ್ದಲ . ಬಿಸಿಲಿನ ಝಳಕ್ಕೆ ಕಾಯ್ದ ಕಬ್ಬಿಣದಂತೆ ಸುಡುತ್ತಿದ್ದ ರಸ್ತೆಯ ಅಂಚು . ಆಲದ ತಿರುವಿನಲ್ಲಿ ಮಾತ್ರ ತಂಪಾದ ನೆರಳ ಹೊದಿಕೆಯಲ್ಲಿ ಮಲಗಿಕೊಂಡಿತ್ತು. ಓಡುವವರು, ನಡೆಯುವವರು, ಚೀರುವವರು, ಸುಮ್ಮನೀರುವವರು ಒಮ್ಮೊಮ್ಮೆ ಆಲದ ಬುಡದಲ್ಲಿ ನಿಂತು ತಮ್ಮ ಬೆವರ ನಾತಕ್ಕೆ ಗಾಳಿ ಹಾಕಿಕೊಂಡು, ಉಸಿರೆಳೆದು ಸಮಾದಾನಗೊಂಡು ಮುಂದೆ ಸಾಗುತ್ತಿದ್ದರು.
ಯರಿ ಮಣ್ಣಿನ ಬಯಲಧೂಳಿನ ನಟ್ಟ ನಡುವೆ ಎದೆ ಸಿಳಿ ಹೊರಟ ರಸ್ತೆಯ ಆಚೆ ಈಚೆ ಮುಕರಿ ನಿಂತಿರುವ ಪಿಕಜಾಲಿಯ ಕಂಟಿಯ ಮುಳ್ಳುಗಳನೆಲ್ಲ ಹತ್ತಿಕ್ಕಿ ಎದೆಸೆಟಿಸಿ ನಿಂತ ಆಲ ಬರೀ ನೆರಳಾಗಿರದೆ ಒಮ್ಮೊಮ್ಮೆ ಕಲ್ಪವೃಕ್ಷವಾಗುತ್ತಿತ್ತು.

ಹೂ ಮಾರುವವಳು
ಆಲದ ಕೆಳಗೆ ಆಕೆಯ ಬುಟ್ಟಿಯ ತುಂಬಾ ಕೇದಿಗೆ ಮತ್ತು ಮಲ್ಲಿಗೆಯ ವಾಸನೆ.
ಸಂತೆಯಲ್ಲ, ಜಾತ್ರೆಯಲ್ಲ ,ಮದುವೆ ದಿಬ್ಬಣದ ಮಂಟಪವಲ್ಲ, ಊರಲ್ಲ ತೇರಲ್ಲ ಗುಡಿ ಗುಂಡಾರವಲ್ಲ.
ಯರಿ ಮಣ್ಣಿನ ಮೇಲೆ ಬಿದ್ದ ಒಂಟಿ ರಸ್ತೆಯ ಬದಿ ನಿಂತ ಮರದ ನೆರಳು.
ಹೂ ಮಾರುತ್ತಾಳೆ . ಆಕೆ ಮುಂಜಾನೆ, ಸಂಜೆ, ಬಿರು ಬಿಸಿಲಿನಲ್ಲೂ ಚೀರಾಡುತ್ತ ಹೋಗುವ ಬರುವ ಗಾಡಿಗಳೆಲ್ಲಾ ಅಡ್ಡಲಾಗಿ ಕೈಯಲ್ಲಿನ ಕೇದಿಗೆ ಬಿಸುತ್ತಿರುತ್ತಾಳೆ,
ಈಕೆಯ ಹೂ ಬಣ್ಣಕ್ಕೆ ಯಾವಾಗಲದರೊಮ್ಮೆ ನಿಂತ ಗಾಡಿಯಿಂದ ಇಣುಕುವ ಗಂಡು ಹೆಣ್ಣಿನಿಂದ ಚೌಕಾಸಿ ,ಕೇದಿಗೆ ಇಲ್ಲ ಮಲ್ಲಿಗೆ ಹಾಗೋ,ಇಗೋ ಹೂ ನೀಡಿ ಅವರಿಗೆ ಟಾಟಾಮಾಡುತ್ತಾಳೆ.
ಮಧ್ಯ ವಯಸ್ಸು ಮಾಸಿದ ಹೂ ಚಿತ್ರದ ಪತ್ತಲ ಆಕೆಯ ಹೆಗಲ ಸವರಿ ನಡಕ್ಕೆ ಗಟ್ಟಿಯಾಗಿ ಬಿಗಿದುಕೊಂಡಿರುತ್ತೆ. ಬಾಯಿ ತುಂಬಾ ಎಲೆ, ಅಡಿಕೆ, ಹಣೇಯ ತುಂಬಿದ ಕುಂಕುಮ ಬಟ್ಟು. ಕಪ್ಪಗಾಗಿ ಸುಕ್ಕಾದ ಗಲ್ಲದಮೇಲೆ ಅಚ್ಚೆಯಷ್ಟು ಕಲೆ ಆಲಕ್ಕೆ ಆಕೆ ಜೋಡಿ ,ಈಕೆಗೆ ಆಲ ಜೋಡಿ. ಪ್ರತಿದಿನ ಮುಂಜಾನೆ ಹಾಜರಾಗುವ ಆಕೆ ಸಂಜೆಯಾದದೊಡನೆ ಮಟಾ ಮಾಯ.
ಉರಿಯುತ್ತಿದ್ದ ಬಿಸಿಲು ತಡವರಿಸುತ್ತ ಸೋಲುತ್ತಿತ್ತು. ತಣ್ಣಗಾಗುತ್ತಿದ್ದ ನೆತ್ತಿಯ ಮೇಲೆ ಒಂದೆರಡು ಹನಿಉದರಿ ಒಡಾಡುವ ವಾಹನಗಳ ವೇಗಕ್ಕೆ ಇನ್ನಷ್ಟು ಪುಷ್ಥಿ ನೀಡುತ್ತಿತ್ತು. ಈಕೆ ಚಾಟಿಗಾಗಿ ಆಲದ ಬಡ್ಡಿಯ ಕಡೆಗೆಹೆಜ್ಜೆಯಿಟ್ಟು ಮುಗಿಲ ಕಡೆ ನೋಡುತ್ತ , ರಸ್ತೆಯ ಕೈ ಬಿಸುವುದನ್ನು ಬಿಟ್ಟ , ಹೂ ಮೇಲೆ ಬಟ್ಟೆ ಮುಚ್ಚ ತೊಡಗಿದಳು.
ಓಡಾಡುತ್ತಿದ್ದ ಗಾಡಿಗಳ ನಡುವೆ ಸಣ್ಣದೊಂದು ಕಾರು , ಕೆಂಪು ದೀಪಗಳನ್ನ ಪಿಳಿ ಪಿಳಿ ಮಾಡುತ್ತ ಮರದ ಕೇಳಗೆ ನಿಂತಿತು.
ಠಾಕು ಠಿಕಾಗಿ ಡ್ರೆಸ್ ಮಾಡಿಕೊಂಡ ವ್ಯಕ್ತಿಯೊಬ್ಬ ಕಾರಿನಿಂದ ಇಳಿದ. ಸಣ್ಣಗೆ ಸುರಿಯಿತ್ತಿದ್ದ ಮಳೆ ಹನಿಯ ರಕ್ಷಣೆಗೆ ಕೈಯಲ್ಲಿದ್ದ ಪೇಪರೊಂದನ್ನು ನೆತ್ತಿಯ ಮೇಲೆ ಹಿಡಿದುಕೊಂಡು ಹೂ ಮಾರುವವಳ ಹತ್ತಿರ ಬಂದು ನಿಂತ .
ಹೂ ಬೇಕೇನ್ರಿ ಸಾಹೇಬ್ರ ಬುಟ್ಟಿಯ ಮೇಲಿನ ಬಟ್ಟೆಯ ತೆರೆದು ಆತನನ್ನು ದಿಟ್ಟಿಸಿದಳು.
ಆತ ಮುಖ ಸಣ್ಣದು ಮಾಡಿ ಆಕೆಯ ಕಡೆಗೊಮ್ಮೆ ವಿಕ್ಷಿಸಿ ಆಲದ ಟೊಂಗೆಗಳ ಕಡೆ
ನೋಡತೊಡಗಿದ.
ಮೌನವಾದ ಆತನ ಮುಖ ನೋಡಿ ಸುಮ್ಮನಾದ ಆಕೆ ಬುಟ್ಟಿಯ ಮೇಲೆ ಬಟ್ಟೆ ಎಸೆದು ಹಿಂದೆ ಸರಿದಳು.
ಮೋಡಗಳೆಲ್ಲಾ ಓಡತೊಡಗಿದವು ಉದುರುತ್ತಿದ್ದ ಹನಿ ಕಡಿಮೆಯಾಗಿ ಗಾಳಿಯ ವೇಗ ಹೆಚ್ಚಾಗ ತೊಡಗಿತು.ಅಲ್ಲಿಯವರೆಗೂ ಸುಮ್ಮನಿದ್ದ ಮರದ ಟೊಂಗೆ ಕೊಂಬೆಗಳೆಲ್ಲಾ ಗಾಳಿಯ ಜೊತೆ ಬಾಯಿ ಸೇರಿಸಿ ಕರ ಕರ ಶಬ್ದಮಾಡತೊಡಗಿದವು.
ಕಾರಿನಿಂದ ಇಳಿದ ವ್ಯಕ್ತಿ ಮರದ ಸುತ್ತಲು ಅಡ್ಡಾಡತೊಡಗಿದ. ಆಶ್ಚರ್ಯದಿಂದ, ಭಯದಿಂದ ಒಮ್ಮೊಮ್ಮೆ ಎನೇನೋ ಯೋಚಿಸುತ್ತ ಕಣ್ಣು ತುಂಬುವವರೆಗೆ ಆಲದ ಬೇರುಗಳನ್ನು ನೋಡಿ ,ರಾಶಿ ರಾಶಿಯಾಗಿ ಉದುರಿದ್ದ ಎಲೆಗಳನ್ನು ಕೆಂಪು ಹಣ್ಣುಗಳನ್ನು ತೆಗೆದುಕೊಂಡು ಹಣೆಗೆ ಒತ್ತಿಕೊಂಡು ನಿಟ್ಟುಸಿರು ಎಳೆದ.
ಈಕೆ ಗಾಬರಿಯಿಂದ ಆತನನ್ನು ದಿಟ್ಟಿಸಿ ನೋಡಿದಳು ಯಾರಾದ್ರೂ ಹುಚ್ಚ ಅದಾನ ಎನು?. ಇಲ್ಲ,
ಕುಡಿದು ಗಿಡಿದು ಬಂದಾನೆನು? ನೋಡಿದ್ರ ದೊಡ್ಡ ಸಾಹೇಬ ಕಂಡಂಗ ಕಾಣತಾನು. ಎದಿ ದಸಕ್ಕಂದಾಗಿ ಆಗಿ ಸಂಜೀ ಮುಂದ ಇಲ್ಲದ ಉಸಾಬರಿ ಯಾಕ ಬೇಕು. ವಿಚಾರ ಮಾಡಿ ಹಗರಕ ಹೂವಿನ ಬುಟ್ಟಿ ಕಟ್ಟಾಕ ಶುರು ಮಾಡಿದಳು.
ಆತನ ಆಟ ನೀಲ್ಲಲಿಲ್ಲ, ಜೋತು ಬಿದ್ದ ಬೇರುಗಳನ್ನು ಹಿಡಿದು ಜೋಕಾಲಿ ಆಡಲು ಪ್ರಯತ್ನಿಸಿದ . ಜೇಕಹಾಕಿ ತೇಲಾಡಲೂ ಕಸೂ ಒಟ್ಟುಗೂಡಿಸಿದ್ರು ಆತನ ವಯಸ್ಸು ಸಹಕರಿಸಲಿಲ್ಲ ಒಮ್ಮೆ ಒಲಾವುದೊರಳಗೆ ಕೆಮ್ಮು ಹತ್ತಿ ಕುಸಿದು ಕುಳಿತ.
ಯಾಕ ಬೇಕಾಗಿತ್ತೊ , ಸಣ್ಣ ಹುಡುಗರ ಆಟ, ದಾರಿ ತಪ್ಪಿ ಬಂದಾನಂತ ಕಾಣಸತೈತಿ , ಐವತ್ತ ವಯಸ್ಸಿನಾವ ಅದಾನ ಜೋಕಾಲಿ ಆಡಾಕತ್ತಾನ ತನ್ನಷ್ಟಕ್ಕೆ ತಾನೇ ಗೊಣಗಿಕೊಂಡ ಈಕೆ ನೆತ್ತಿಯ ಮೇಲೆ ಬುಟ್ಟಿ ಇಟ್ಟುಕೊಂಡಳು.
ತನ್ನ ಆಟದಲ್ಲಿ ಮೈ ಮರತಿದ್ದ ಆತ, ಈಕೆ ಹೊರಡುವ ಸೂಚನೆ ಕಂಡು ಬಾಯಿ ತೆರೆದ.
ಹೆಂಗ ಮಳಾ ಹೂವು ?
ಇಷ್ಟೊತ್ತನಾ ಎನ ಆಗಿತ್ತೊ ಮಾರಾಯಾಗ, ನಾ ಹೋಗುವದನ್ನ ಕಂಡು ನಾಟಕ ಮಾಡಾಕತ್ತಾನ ವಟಗುಟ್ಟಿದಳು.
ಹತ್ತ ರೂಪಾಯಿಗೆ ಒಂದ ಮಳಾ ಸಾಹೇಬ್ರ
ಹಂಗಾರ ಒಂದ ಹತ್ತ ಮಳಾ ಕೊಡು.
ಗಬಕ್ಕನೆ ಬುಟ್ಟಿ ಕೇಳಗೆ ಇಳಿಸಿದ ಈಕೆ ಮುಚ್ಚಿದ ಬಟ್ಟೆ ತೆಗೆದು ಹೂವಿನ ಮಾಲೆಗೆ ತನ್ನ ಕೈ ಸೇರಿಸಿ ಅಳೆಯ ತೊಡಗಿದಳು.
ಎಷ್ಟ ವರ್ಷದಿಂದ ಇಲ್ಲಿ ಹೂ ಮಾರಾಕತ್ತೀರಿ?
ಸೂಮಾರು ಹತ್ತ ವರ್ಷ ಆತರೀ
ವ್ಯಾಪಾರ ಆಗತೈತಿ
 
ಆ ದೇವ್ರು ಹಚ್ಚಿದಂಗ , ಒಮ್ಮೊಮ್ಮೆ ಭಾಳ ಪಾಯದೇ ಆಗತೈತಿ . ಒಮ್ಮೊಮ್ಮೆ ಕಟ್ಟಿದ ಮಾಲೆ ಬಾಡಿ ಹೋದ್ರು ಯಾರು ಮುಸುವುದಿಲ್ಲ
ಭಾಳ ಕಷ್ಟ ಪಡತಿರಿ ಹಂಗಾರ
ಆತನನ್ನು ನೋಡಿ ಸುಮ್ಮನೆ ನಕ್ಕಳು.
ಹುಟ್ಟಿದ ಮ್ಯಾಲೆ ಇದೆಲ್ಲಾ ಇರೋದೆ ಸಾಹೆಬ್ರ, ನಿಮ್ಮನ್ನ ನೋಡಿದ್ರ ದೊಡ್ಡ ಸಾವಕಾರ ಅನಿಸತೈತಿ , ಈ ಗಾಳಿ ಮಳಿ ನಿಮಗ ಹತ್ತೋದ ಕಡಿಮಿ ಅದಕ್ಕ ಹಿಂಗ ಮಾತನಾಡತೀರಿ.
ಆತ ಮುಗುಳ್ನಕ್ಕ ,ಅದರಲ್ಲಿ ವಿಷಾದತೆ ತುಂಬಿ ತುಳುಕುತ್ತಿತ್ತು. ಗೋಣು ಮೇಲಕ್ಕೆತ್ತಿ ಆಲವನ್ನು ನೋಡಿದ.
ಈ ಆಲದ ಗಿಡಕ್ಕೆ ಎಷ್ಟು ವಯಸ್ಸು?’.
ಗೊತ್ತಿಲ್ಲಾರಿ……… ಆದ್ರ ನಮ್ಮೂರಿನ ಪುಣ್ಯಾತಗಿತ್ತಿಯೊಬ್ಬಳು ದಿನಾಲೂ ನೀರ ಹಾಕಿ ಇದನ್ನ ಬೇಳೆಸ್ಯಾಳಂತರೀ. ಪಾಪ ಆಕೀ ಸಾಯು ಕಾಲಕ್ಕ ಯಾರು ದಿಕ್ಕ ಇಲ್ಲದಂಗಾಗಿ ಸತ್ತ ಹೋದಳಂತ.
ಆತನ ಕಣ್ಣ ಒಳಗಿನ ನೀರು ಹೋರ ಹೋಗಲು ಗುದ್ದಾಡತೊಡಗಿತು.
ಅಲ್ರೀ ಸಾಹೆಬ್ರ , ಇಷ್ಟ ಹೂವ ಎನ್ ಪೂಜಾಕ ಹೋಯಾಕತ್ತಿರೇನ್ರೀ?.
ಇಲ್ಲಮ್ಮ , ಈ ಆಲದ ಗಿಡಕ್ಕೆ ಮುಡಿಸಬೇಕಂತ.
ಆಕೆಗೆ ನಗೆ ತಡೆಯಲಾಗಲಲ್ಲ , ಮುಸಿ ಮುಸಿ ಮಾಡುತ್ತಾ ಕೊಕ್ಕಾಡಿಸಿ ನಕ್ಕಳು.
ರೊಕ್ಕಾ ಹೆಚ್ಚಾದ್ರ ಮಂದಿ ಹಿಂಗ ಮಾಡತಾರು. ಬಿದ್ದು ಬಿದ್ದು ನಕ್ಕಳು. ಆತನಮುಖ ನೊಡಿ ನೋಡಿ ನಕ್ಕಳು. ಆತನು ನಗ ತೊಡಗಿದ ಆತನ ಅರಿವಿಗೆ ಬಾರದೆ ಉದುರುತ್ತಿದ್ದ ಕಣ್ಣೀರನ್ನು ಒರೆಸುಕೊಳ್ಳುತ್ತ ನಗುತ್ತಿದ್ದ.
ನಮ್ಮವ್ವಾ ನೆನಪಾಗುತ್ತಾಳೆ . ಆಕೆ ದನ ಕಾಯುತ್ತಿದ್ದಳು. ಊರ ಜನರ ಮನೆ ಮನೆ ಬಾಗಿಲು ಬಡಿದು , ಅವರು ನೀಡುವ ತಂಗಳ ರೊಟ್ಟಿಗಾಗಿ , ರಾತ್ರಿ ಉಳಿದ ಸಾರಿಗಾಗಿ ,ಚಿಲ್ಲರೆ ರೊಕ್ಕಗಾಗಿ , ಸೇರು ಜ್ವಾಳಕ್ಕಾಗಿ
ಹಿಂಡು ದನಗಳ ಹಿಂದೆ ಕ್ಯಾಕಿ ಹಾಕುತ್ತ , ಕಚ್ಚಿಕಟ್ಟಿಕೊಂಡು ಕಲ್ಲು ವಾರಿಯ ಮ್ಯಾಲ ಆಕಿ ಹೇಳುತ್ತಿದ್ದ ಹಾಡು ನೆನಪಾಗುತ್ತದೆ.
ಆತ ಸುಮ್ಮನಾದ , ಆಕೆ ಆಸೆ ಗಣ್ಣಿನಿಂದ ನೋಡತೊಡಗಿದಳು. ಆತ ಕಾರಿನ ಕಡೆ ಹೋಗಿ ನೀರಿನ ಬಾಟಲಿಯಿಂದ ಮುಖತೊಳೆದುಕೊಂಡು ಗಟಗಟನೆ ನೀರು ಕುಡಿದು ಈಕೆಗೆ ಕುಡಿಯುವಂತೆ ಕೈ ಚಾಚಿದ.
ಬೇಡ ನೀರಡಿಕೆ ಇಲ್ಲ ನಿರಾಕರಿಸಿದಳು . ಕೈಯಲ್ಲಿದ್ದ ಮಲ್ಲಿಗೆಯ ಮಾಲೆಯನ್ನು ಹಾಳೆಯಲ್ಲಿ ಸುತ್ತಿ ಅವನ ಕೈಗೆ ನೀಡಿದ ಸುತ್ತಿದ ಹಾಳೆಯಿಂದ ಹೂವನ್ನು ಬಿಚ್ಚಿದ ಆತ ಅರ್ಧದಷ್ಟು ಹೂ ಕತ್ತರಿಸಿ ಎಳೆಬಿದ್ದ ಬೇರಿಗೆ ಸುತ್ತತೊಡಗಿದ.
ಇದೇ ಮರ ಆಳೆತ್ತರ ಇತ್ತು . ಈ ಯರಿ ಭೂಮ್ಯಾಗ ಐದಾರು ಮೈಲು ನಡೆದ ಮ್ಯಾಲೆ

ಒಂದು ಹಳ್ಳದ ಕಲಕ ನೀರಿನ ಹೊಂಡ, ಆಕೆ ನೀರು ಹೊತ್ತು ಹೊತ್ತು ಹಾಕುವಾಗ ಬ್ಯಾಸರಿಕೆಯೆ ಇರಲಿಲ್ಲ, ಈ ನೆಲವೆಲ್ಲಾ ಕಸಕಂಟಿ ಕರಕಿಯಿಂದ ತುಂಬಿತ್ತು ಎಲ್ಲಿ ನೋಡಿದರೂ ಬೀರ ಬೀರ ಬಿಸಿಲು, ಆಸರಿಕಿಗೂ ಒಂದು ಮರ ಇರಲಿಲ.್ಲ ಆದ್ರ ಅವ್ವ ಮೇಯಿಸುತ್ತಿದ್ದ ದನಗಳಿಗೆ ಇದುವೇ ಸಾಮ್ರಾಜ್ಯ. ಆಗ ನಾನು ಅಳುತ್ತಿದ್ದೆ. ಹಸಿವಿನಿಂದ, ನೋವಿನಿಂದ, ಅವಮಾನದಿಂದ ಅತ್ತು ಅತ್ತು ಸಣ್ಣಗಾಗಿ ಹೊಗಿದ್ದೆ.
ಕೆಲಹೊತ್ತು ಮೌನ ಆವರಿಸಿತು. ಆಕೆಗೆ ಕೂತುಹಲ ತಡೆಯಲಾಗಲಿಲ್ಲ .
ನಿಮ್ಮ ತಾಯಿಯ ಋಣ ದೊಡ್ಡದೈತಿ, ಆಕೀ ಬೆಳೆಸಿದ ಮರಾ ನೋಡ್ರಿ ಹೆಂಗ ದೆವ್ವಿನಂಗ ನಿಂತೈತಿ. ಆತ ನುಸುನಕ್ಕು ಮತ್ತೆ ಮುಂದುವರಿದ.
ಅವ್ವಗ ನನ್ನ ಓದಿಸುವ ಆಸೆ , ನಾನು ಸಣ್ಣ ಹುಡುಗ ಸಾಲಿಗಿಲಿಗಿಂತ ದನ ಕಾಯುವುದೆ ಚಂದ ಅಂತಿದ್ನಿ, ಹೋಡದು ಬಡಿದು ಶಾಲೆಗೆ ಕಳುಹಿಸಿದಳು. ನಾನು ಓದತೊಡಗಿದೆ, ಅದರ ಕೂಡ ಪ್ರಶ್ನಿಸತೊಡಗಿದೆ. ನಮಗೆ ಯಾಕ ಇಷ್ಟೋಂದ ಬಡತನಾ? ನಾವೇ ಯಾಕ ಊರ ಮಂದಿ ದನಾ ಕಾಯಬೇಕು? ಗೌಡ ಶ್ಯಾನ್ಯಾರೆಲ್ಲಾ ಹೊಸ ಸೀರಿ ಉಟಕೊಂಡು ತಲಿ ತುಂಬಾ ಹೂ ಮುಡಿದಾಗಲೆಲ್ಲಾ ,ನಾನು ನಮ್ಮವ್ವನ ತಲೆ ನೋಡುತ್ತಿದ್ದೆ. ಆಕಿ ಕಲ್ಲ ವಾರ್ಯಾಗಿನ ಹೊಣ್ಣಾರಿ ಹೂ ತುರಬಕ್ಕ ತುರುಕಿಕೊಂಡು ಹುಚ್ಚಿಯಂತೆ ಅಲೆಯುತ್ತಿದ್ದಳು. ನಾನು ಶಾಲೆ ಕಲಿಯಿತ್ತಾ ದೊಡ್ಡ ಊರಿಗೆ ಹೋದ್ನಿ. ಓದಬೇಕು ಓದಬೇಕು ಎನಾರ ಸಾಧನೆ ಮಾಡಬೇಕು ಅನ್ನುವ ಹುಚ್ಚನ್ಯಾಗ ಮರಳಿ ಬರಲೆ ಇಲ್ಲ ಕೊನೆಯ ಬಾರಿಗೆ ಅವ್ವನ ಮುಖಾನು ನೊಡಲಿಲ್ಲ. ಆತನ ಬಿಕ್ಕಳಿಕೆ ನಿಲ್ಲಲಿಲ್ಲ ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ.
ಆಕೆಯ ಕಣ್ಣಲ್ಲಿ ನೀರು ಬಂತು ,ಅತ್ತು ಸಮಾದಾನ ಆಗಲಿಯಂತ ಕಣ್ನೀರು ಓರೆಸಿಕೊಂಡಳು.
ಸಾಹೇಬ್ರ ಆಗಿದ್ದು ಆಗಿ ಹೋತು ಬೀಡ್ರಿ ದೇವ್ರ ನಿಮ್ಮ ಹಣೆಬರದಾಗ ಅಷ್ಟ ಬರದಿದ್ದ ಈಗಲಾದ್ರೂ ಆರಾಮ ಅದಿರಲ್ಲ ಸಾಕ ಬೀಡ್ರಿ.
ಆತನ ಅಳು ನಿಂತಿತು. ತುಟಿ ಕಚ್ಚಿ ಉಸಿರು ಎಳೆದ, ಮತ್ತೆ ಆಲವನ್ನು ದಿಟ್ಟಿಸಿ ನೋಡಿದ ಆಕೆ ಮೌನವನ್ನು ಮುರಿದಳು.
ಸಾಹೇಬ್ರ ಯಜಮಾನತಿ ಭಾಳ ಚೆಂದ ಇರಬೇಕು ನಿರಾಳತೆಗೆ ಶಬ್ದ ಕೊಟ್ಟಳು. ಆತನ ಮುಖದಲ್ಲಿ ಮುಗುಳ್ನಗೆ, ಪ್ರಶಾಂತತೆ, ಕಾತುರ , ಸಮಾದಾನದ ಭಾವ.
ಆಕೀ ಭಾಳ ಚೆಲುವಿ , ಪಟ ಪಟ ಮಾತು ಒಡಾಟ ನನ್ನ ಬಾಳಲ್ಲಿ ಬೆಳಗಿದ ದೀಪ, ನಾನು ಪ್ರೀತಿಸಿ
ಮದುವೆಯಾದೆ. ಆರಂಭದಲ್ಲಿ ತುಂಬಾ ಕಷ್ಟ , ಬಡತನದಲ್ಲಿ ಬೆಂದಿದ್ದ ನನಗೆ ಹಣದ ಹುಚ್ಚು, ದುಡಿಯಲು ಆರಂಭಿಸಿದೆ. ಹಗಲು-ರಾತ್ರಿ ಲೆಕ್ಕಿಸದೇ ದುಡಿಯುತ್ತಿದ್ದೆ. ಆಕೆ ಪ್ರತಿದಿನ ನನಗಾಗಿ ಕಾಯುತ್ತಿದ್ದಳು. ನನ್ನ ಗಂಡ ಯಾವತ್ತಾದರೂ ಒಂದು ದಿನ ಮಲ್ಲಿಗೆ ಹಿಡಿದುಕೊಂಡು ಬರುತ್ತಾನೆ , ಪ್ರೀತಿ ತುಂಬಿದ ಕಣ್ಣಿನಿಂದ ನನ್ನ ನೋಡುತ್ತಾನೆ. ನನಗಾಗ ಅರ್ಥ ಆಗಲೇ ಇಲ್ಲ ನಾನು ಬೆಳೆಯಬೇಕು
ಶ್ರೀಮಂತನಾಗಬೇಕು, ಬಂಗಲೇ ಕಾರು ಬ್ಯಾಂಕ ಬ್ಯಾಲನ್ಸು , ಗಂಭಿರತೆ ಆ ಹುಚ್ಚಾಟಗಳ ನಡುವೆ ಒಂದು ಬೆಳದಿಂಗಳ ರಾತ್ರಿಯಲ್ಲಿ ಆಕೆಯ ತೊಡೆಯ ಮೇಲೆ ಮಲಗಲಿಲ್ಲ , ಆಕಿಯ ತಲೆಗೆ ಹೂ ಮುಡಿದು ಮುದ್ದಿಸಲಿಲ್ಲ, ಪಾಪ ಆಕೆ ನಿರಂಹಕಾರಿ , ನಿರ್ಮಲ ಮನಸ್ಸು, ನನ್ನ ಸಿಡಿಮಿಡಿಗಳನೆಲ್ಲಾ ನುಂಗಿಕೊಂಡು ಒಂದು ಭಯಾನಕ ರಾತ್ರಿಯಲ್ಲಿ
ಅಂದವಾದ ಮಗಳನ್ನು ನನ್ನ ಕೈಗೆ ನೀಡಿ ಸುಮ್ಮನೆ ಹೊರಟು ಹೋದಳು.
ಆತನ ಬಾವುಕತೆ ವಿಜೃಂಬಿಸುತ್ತಿತ್ತು, ತೆರೆದ ಕಣ್ಣಿನಿಂದ ಮರವನ್ನು ದಿಟ್ಟಿಸುತ್ತಿದ್ದ ಮುಖದ ಮೇಲೆ ಪ್ರಶಾಂತತೆ ತುಂಬಿ ತುಳುಕುತ್ತಿತ್ತು. ಈಕೆ ಮಾತನಾಡಲಿಲ್ಲ ಕನಿಕರದಿಂದ ನೋಡತೊಡಗಿದಳು. ಕೈಯಲಿದ್ದ ಹೂವಿನಲ್ಲಿ ಮತ್ತೆ ಅರ್ದ ಕತ್ತರಿಸಿ ಮರದ ಟೊಂಗೆಗೆ ಎಸೆದ. ಎರಡು ಮೊಳದಷ್ಟು ಹೂವನ್ನು ಕೈಯಲ್ಲಿಡಿದು ಮೂಸುತ್ತ ಈಕೆಯ ಕಡೆ ನೋಡಿದ.
ನಾನು ಬದಲಾಗಿದ್ದೆ ಬದಲಾಯಿಸಲು ಹೋಗಿ ನಾನೇ ಬದಲಾಗಿ ಬಿಟ್ಟೆ, ಯಾವ ಭ್ರಮೆಯು ಉಳಿದಿರಲಿಲ್ಲ , ಕನಸು ,ಗುರಿ, ಆಸೆಗಳೆಲ್ಲ ಕತ್ತರಿಸಿ ಬಿದ್ದಿದವು. ಮಗಳನ್ನು ತೊಡೆಯ ಮೆಲೆ ಮಲಗಿಸಿಕೊಂಡು ಜೋ,ಜೋ,ಆಡಿಸಿದೆ. ಅವಳ ತಲೆಯ ಬಾಚಿ ಹೂ ಮುಡಿಸಿದೆ. ಅವಳ ಕೆನ್ನೆಗೊಂದು ಮುತ್ತು ಕೊಟ್ಟು ಎಲ್ಲವನ್ನು
ಮರೆತು ನಗುತ್ತಿದ್ದೆ. ನನ್ನ ಹೆಗಲ ಮೇಲೆ ಎರಿ ಕುಳಿತ ಅವಳು ಬೆಳೆದಳು. ನನ್ನನ್ನು ದಾಟಿ ಮುಗಿಲೆತ್ತರ ಬೆಳೆದಳು.
ಇಂದು ಅಮೇರಿಕಾದಲ್ಲಿ ಗಂಡ ಮತ್ತು ಮಗುವಿನೊಂದಿಗೆ ಖುಷಿಯಾಗಿದ್ದಾಳೆ. ಯಾವಾಗಲಾದರೊಮ್ಮೆ ಪೋನಿನಲ್ಲಿ ಮಾತನಾಡುತ್ತಾಳೆ. ನಾನು ಕಾಯುತ್ತಲೇ ಇದ್ದೆನೆ.ಮತ್ತು ಎಂದಾದರೂ ಅವಳ ತಲೆ ಬಾಚಿ ಹೂ ಮುಡಿಸಬಹುದೆಂದು, ಇಲ್ಲ ಅವಳು ಬರುವ ಲಕ್ಷಣವೇ ಕಾಣುತ್ತಿಲ್ಲ.
ಓಡಿ ಹೊಗಿದ್ದ ಮೋಡ ಮರಳಿ ಬಂದಿತು. ಗಾಳಿ ಧೂಳಾಡಿಸುತ್ತ ಎದ್ದಿತು. ಸಂಜೆಯ ಮಬ್ಬುಗತ್ತಲೆ ಇಬ್ಬರ ಮುಖದ ಮೇಲೆ ಆವರಿಸಿತು. ನಿಂತು ಹೊಗಿದ್ದ ಮಳೆ ದೊಡ್ಡ ಹನಿಯಾಗಿ ಉದರತೊಡಗಿತು. ಸ್ತಬ್ದವಾಗಿದ್ದ ಮರ ಮತ್ತೆ ಅಲಗಾಡಿತು.
ಆತ ಆಕೆಯ ಕೈಗೆ ನೂರರ ನೋಟು ಕೊಟ್ಟ
ಯಪ್ಪಾ ಚಾಟಿಗಾದ್ರೂ ಬರ್ರೀ ಮಳೆ ದೊಡ್ಡದೈತಿ. ಆಕೆ ಬುಟ್ಟಿ ಎತ್ತಿಕೊಂಡು ಮರದ ಬಡ್ಡಿಯ ಕಡೆ ನಡೆದಳು.
ಆತ ಕಾರಿನ ಕಡೆ ಹೆಜ್ಜೆೆ ಹಾಕಿದ ಕಾರಲ್ಲಿ ಕುಳಿತು ಮಳೆ ಹನಿಗೆ ಬೆದರಿ ಗಿಡಕ್ಕೆ ಒತ್ತಿಕೊಂಡು ನಿಂತಿದ್ದ
ಆಕೆಗೆ ಕೇಳುವಂತೆ ಜೋರಾಗಿ ಕೂಗಿ ಹೇಳಿದ.
ಇಂದು ನೀನ್ನ ಮತ್ತು ಈ ಮರದ ಋಣವು ಮುಗೀತು. ಇವತ್ತಿನ ಪೇಪರ ತುಂಬೆಲ್ಲಾ ಹೆದ್ದಾರಿ ಪ್ರಾಧಿಕಾರದ ಜಾಹೀರಾತು ಬಂದಿದೆ. ರಸ್ತೆ ಅಗಲೀಕರಣಕ್ಕಾಗಿ ನಾಳೆಯಿಂದ ಈ ಮರವನ್ನು ಕಡಿತಾರೇ.
ಕಾರನ್ನು ಛಾಲು ಮಾಡಿದ ಆತ ಮಳೆ ಹನಿಯಲ್ಲಿ ಮಾಯವಾದ ಈಕೆಯ ಕರಳು ಚುರುಕ್ಕೆಂದಿತು. ದುಃಖ ಉಮ್ಮಳಿಸಿ ಬಂದಿತು. ಕಣ್ಣಿರನ್ನು ಒರೆಸಿಕೊಳ್ಳುತ್ತ ಬುಟ್ಟಿಯಲ್ಲಿ ಉಳಿದ ಹೂವಗಳನೆಲ್ಲಾ ಮರದ ಮೇಲೆ ಎಸೆಯತೊಡಗಿದಳು.

*************************

 
 

‍ಲೇಖಕರು G

2 December, 2014

5 Comments

  1. Prabhakar M. Nimbargi

    The futility of running like a machine to increase bank balance without caring to human sentiments has been well brought out in this short story. Really touchy.

  2. Tirupati Bhangi

    ಕಥೆ ಚೆನ್ನಾಗಿ ಓದಿಸಿಕೊಂಡು ಸಾಗಿತು.

  3. shankar pujari

    ಅವ್ವ ಅಂದ್ರನಾ ಹಂಗ..

  4. Jayashree B kadri

    so nice. very moving. almost poetic with description of both inner and external nature

  5. Manju Hichkad

    ಕಥೆ ಚೆನ್ನಾಗಿ ಮೂಡಿಬಂದಿದೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading