ಆತ್ಮಕತೆ ಇರಬಹುದು ಎಂದು ಸಂದೇಹಿಸುವುದು ತುಂಬ ಸಿಲ್ಲಿ ಅನಿಸುತ್ತದೆ..

‘ಅವಧಿ’ಯಲ್ಲಿ ಪ್ರಕಟವಾದ ಪ್ರಸನ್ನ ಸಂತೇಕಡೂರು ಅವರ ಅಂಕಣ ‘ಬೊಂಬಾಟ್ ಬುಕ್’ಗೆ ಬಂದ ಪ್ರತಿಕ್ರಿಯೆ ಇದು.

ಪ್ರಸನ್ನ ಸಂತೇಕಡೂರು ಅವರು ತಮ್ಮ ಅಂಕಣದಲ್ಲಿ ಹರೀಶ್ ಹಾಗಲವಾಡಿ ಅವರ ‘ಋಷ್ಯಶೃಂಗ’ ಕೃತಿಯನ್ನು ಪರಿಚಯಿಸಿದ್ದರು.

ಇದರಲ್ಲಿ ‘ಇಲ್ಲಿನ ಕಥಾನಾಯಕ ‘ನ್ಯಾಸ’ ಕಾದಂಬರಿಯ ಕಥಾನಾಯಕನ ರೀತಿ ಲೇಖಕರ ಊರಿನವನೇ ಆಗಿರುವುದರಿಂದ ಇದು ಆತ್ಮಕತೆಯೇ ಎಂಬ ಪ್ರಶ್ನೆ ಓದುಗರಲ್ಲಿ ಮೂಡಿದರೂ ಅಚ್ಚರಿಯಿಲ್ಲ. ಇಲ್ಲಿ ನಿರೂಪಕ ಆತ್ಮಕತೆ ಎಂದು ಹೇಳುವ ಪ್ರಸಂಗ ಬಂದು ಇದು ಆತ್ಮಕತೆಯ ಭಾಗ ಎಂಬುದಕ್ಕೆ ಪೂರಕವಾದಂತೆ ಅನಿಸುತ್ತದೆ’ ಎನ್ನುವ ಮಾತಿಗೆ ಸಾಹಿತಿ, ಓದುಗ ಪದ್ಮನಾಭ ಅವರು ಪ್ರತಿಕ್ರಿಯಿಸಿದ್ದು ಹೀಗೆ

ಪ್ರಸನ್ನ ಅವರ ಮೂಲ ಬರಹ ಓದಲು ಇಲ್ಲಿ ಕ್ಲಿಕ್ಕಿಸಿ

ನಿಮ್ಮ ಅನಿಸಿಕೆ ಏನು?

‘ಜುಗಾರಿ ಕ್ರಾಸ್’ ಮುಕ್ತ ಚರ್ಚೆಗೆ ಇರುವ ಅಂಕಣ ಹಾಗಾಗಿ ನಿಮ್ಮ ಅಭಿಪ್ರಾಯವನ್ನು [email protected] ಗೆ ಬರೆದು ಕಳಿಸಿ .

ಪದ್ಮನಾಭ

ನಮಸ್ತೆ, ನಿಮ್ಮ ಬರಹದುದ್ದಕ್ಕೂ ಕೃತಿಯ ಮೇಲಿನ ಪ್ರೀತಿ, ಅದನ್ನು ಉಳಿದವರಿಗೂ ಪರಿಚಯಿಸುವ ಹಂಬಲ ಎದ್ದು ಕಾಣುತ್ತಿದೆ. ಅದು ಖುಷಿಯ ವಿಷಯ. ಆದರೆ ’ಇಲ್ಲಿನ ಕಥಾನಾಯಕ ‘ನ್ಯಾಸ’ ಕಾದಂಬರಿಯ ಕಥಾನಾಯಕನ ರೀತಿ ಲೇಖಕರ ಊರಿನವನೇ ಆಗಿರುವುದರಿಂದ ಇದು ಆತ್ಮಕತೆಯೇ ಎಂಬ ಪ್ರಶ್ನೆ ಓದುಗರಲ್ಲಿ ಮೂಡಿದರೂ ಅಚ್ಚರಿಯಿಲ್ಲ. ಇಲ್ಲಿ ನಿರೂಪಕ ಆತ್ಮಕತೆ ಎಂದು ಹೇಳುವ ಪ್ರಸಂಗ ಬಂದು ಇದು ಆತ್ಮಕತೆಯ ಭಾಗ ಎಂಬುದಕ್ಕೆ ಪೂರಕವಾದಂತೆ ಅನಿಸುತ್ತದೆ.

ಇದು ಆತ್ಮಕತೆಯಲ್ಲದಿದ್ದರೂ ನ್ಯಾಸದ ಸತ್ಯಪ್ರಕಾಶನೇ ಇಲ್ಲಿ ಋಷ್ಯಶೃಂಗನಾಗಿರುವಂತೆ ಭಾಸವಾಗುತ್ತದೆ. ಅಥವಾ ಆ ಪಾತ್ರವೇ ತನ್ನ ಇನ್ನೊಂದು ಮುಖವನ್ನು ತೋರಿಸುವಂತೆ ಕಾಣುತ್ತದೆ. ಇದಕ್ಕೆ ಮುಖ್ಯ ಕಾರಣ ಎರಡು ಕಾದಂಬರಿಯ ಒಂದೇ ಭೌಗೋಳಿಕ ಹಿನ್ನೆಲೆ. ಇದು ತುಮಕೂರು ಜಿಲ್ಲೆಯೇ ಗುಬ್ಬಿ ಸಮೀಪದ ಹರೀಶ್ ಅವರ ಐತಿಹಾಸಿಕ ಹಾಗಲವಾಡಿಯೋ ಅಥವಾ ಚೇಳೂರೋ ಇರಬೇಕು ಎಂದು ಅನಿಸುತ್ತದೆ.’
– ಈ ಸಾಲುಗಳನ್ನು ಓದಿ ನಗು ಬಂತು.

ಸರ್, ಕಥೆಯ ನಾಯಕ ಲೇಖಕರ ಊರಿನವನೇ ಆಗಿದ್ದ ಮಾತ್ರಕ್ಕೆ, ಕಥೆಯಲ್ಲಿ ಆತ್ಮಕಥೆಯ ಉಲ್ಲೇಖ ಬಂದ ಮಾತ್ರಕ್ಕೆ ಅದು ಆತ್ಮಕತೆ ಇರಬಹುದು ಎಂದು ಸಂದೇಹಿಸುವುದು ಅಥವಾ ಅದರ ನಾಯಕನಿಗೂ ಲೇಖಕನಿಗೂ ಹೋಲಿಸುವುದು ತುಂಬ ಸಿಲ್ಲಿ ಅನಿಸುತ್ತದೆ.

ಯಶವಂತ ಚಿತ್ತಾಲರ ಹಲವು ಕಥೆಗಳ ನಾಯಕನ ಊರು ಚಿತ್ತಾಲರ ಊರೇ ಆದ ಹನೇಹಳ್ಳಿ ಅಥವಾ ಮುಂಬೈ. ಹಾಗೆಂದು ಅದೆಲ್ಲ ಅವರ ಆತ್ಮಕತೆ ಇರಬಹುದು ಎಂದು ಸಂದೇಹಿಸಿದರೆ ಹೇಗೆ ಹೇಳಿ? ಇದು ಅನವಶ್ಯಕ ಅಷ್ಟೇ ಅಲ್ಲ ಕೀಳು ಕುತೂಹಲದ ಮಾದರಿ ಅನಿಸುತ್ತದೆ. ಅದನ್ನೇ ನೀವು ನಿಮ್ಮ ಲೇಖನದ ಶೀರ್ಷಿಕೆಯನ್ನಾಗಿಯೂ ಕೊಟ್ಟಿರುವುದನ್ನು ಹೇಗೆ ಅರ್ಥಮಾಡಿಕೊಳ್ಳಬೇಕೋ ಗೊತ್ತಾಗ್ತಿಲ್ಲ.

ಇದು ಕಾದಂಬರಿಯ ಪರಿಚಯವೋ ಅಥವಾ ಕಾದಂಬರಿಯ ನಾಯಕನಿಗೂ ಲೇಖಕನಿಗೂ ಇರುವ ಹೋಲಿಕೆಯ ತೌಲನಿಕ ಅಧ್ಯಯನವೋ ಅಂತ ಸಂದೇಹ ಬಂದುಬಿಡುತ್ತದೆ.

ಮತ್ತು ಇದೇ ದಾರಿಯಲ್ಲಿ ಮುಂದುವರಿದರೆ, ಆ ಕಾದಂಬರಿಯಲ್ಲಿ ನಾಯಕನ ಜೊತೆ ಸಂಬಂಧ ಇರಿಸಿಕೊಳ್ಳುವ ಹುಡುಗಿ ಈಗ ಹೇಗಿದ್ದಾಳೆ? ಅವಳ ಅಡ್ರೆಸ್ ಕೊಡಬಹುದಾ ಎಂದು ಲೇಖಕರನ್ನು ಕೇಳುವ ಹಂತಕ್ಕೆ ತಲುಪಬಹುದು..

ಹಾಗೆಯೇ ಪುರಾಣದ ಋಷ್ಯಶೃಂಗನ ಕಥೆ ಏನು ಎಂದು ಈ ಕಾದಂಬರಿ ಓದಿದರೆ ಖಂಡಿತ ತಿಳಿಯುವುದಿಲ್ಲ. ಆ ಋಷ್ಯಶೈಂಗನ ಬಗ್ಗೆ ತಿಳಿದಿದ್ದರೆ ಈ ಕಾದಂಬರಿ ನಮ್ಮಲ್ಲಿ ಅನುರಣಿಸುವ ಧ್ವನಿಶಕ್ತಿ ಹೆಚ್ಚಬಹುದಷ್ಟೆ.

ಅದೇನೇ ಇರಲಿ, ನೀವು ಪುಸ್ತಕವನ್ನು ತುಂಬ ಪ್ರೀತಿಯಿಂದ ಓದಿರುವುದು ಬರಹದಲ್ಲಿ ತಿಳಿಯುತ್ತದೆ. ಅದಕ್ಕೆ ನಿಮಗೆ ಅಭಿನಂದನೆ..

‍ಲೇಖಕರು avadhi

September 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: