-ಎಚ್ ಗೋಪಾಲಕೃಷ್ಣ
(ನನಗೆ ಕ್ಯಾನ್ಸರ್ ಬಂದದ್ದು …)
ನನಗೆ ಕ್ಯಾನ್ಸರ್ ಆಗಿರಬಹುದು ಅಥವಾ ಬರುವ ಸೂಚನೆ ಬಂದಿದ್ದು ನಿಮಗೆ ಈ ತನಕ ಹೇಳಿದ ನೆನಪು ನನಗಿಲ್ಲ. ಅಂತ ದೊಡ್ಡ ಖಾಯಿಲೆ ಬಂದೂ ಅದನ್ನು ನೀನು ನಮಗೆ ಹೇಳಿಲ್ಲ ಅಂದರೇನಯ್ಯ ಅಂತ ಕೋಪಿಸಿಕೊಂಡು ಮಾತು ಬಿಡಬೇಡಿ. ಈಗ ಅದಕ್ಕೇ ಬಂದೆ…
ಒಂದು ಎರಡು ಮೂರು ತಿಂಗಳಿಂದ ಏನು ಮುಕ್ಕಬೇಕು ಅಂತ ಹೋದರೂ ಅದು ಬಾಯಿ ಒಳಗೆ ಹೋಗಲು ರಿಫ್ಯೂಸ್ ಮಾಡಿ ಸ್ಟ್ರೈಕ್ ಮಾಡ್ತಾ ಇತ್ತಾ? ದಿವಸದ ಇಪ್ಪತ್ತು ನಾಲ್ಕು ಗಂಟೆಗಳು ಸಾಲದು ಅನ್ನುವ ಹಾಗೆ ಸಿಕ್ಕಿದ್ದು ಸಿಕ್ಕದ್ದು ಎಲ್ಲವನ್ನೂ ಹಲವು ಯುಗಗಳು ಉಪವಾಸ ಇದ್ದ ರಾಕ್ಷಸನ ಹಾಗೆ ತಿನ್ನುತ್ತಿದ್ದ ಈ ಬಕಾಸುರನಿಗೆ ಏನಾಯ್ತು ಅಂತ ಚಿಂತೆ ಮನೆಯವರಿಗೆ ಶುರು ಆಯ್ತಾ? ನೂರು ಬಕಾಸುರಗಳು ಒಟ್ಟಿಗೆ ಇದ್ದ ಹಾಗಿದ್ದವ ಹೇಗಾದ ಎನ್ನುವ ಯೋಚನೆ ಹೆಚ್ಚಿತಾ…ಯಾರೋ ಅವನ ಎಕ್ಸ್ ಹೆಣ್ಣು ಕೋಲಿಗೂಗಳ ಜತೆ ಪೋನ್ ನಲ್ಲಿ ಹರಟೆಗೆ ಮಾತ್ರ ಬಾಯಿ (ತಿನ್ನೋದಕ್ಕೆ ಬಿಟ್ಟು) ಉಪಯೋಗಿಸುತ್ತಾ ಇತ್ತು ಪ್ರಾಣಿ, ಈಗ ಅದಕ್ಕೇನು ಗರ ಹೊಡೆಯಿತು ಅಂತ ತಲೆಗೆ ಯೋಚನೆ ಹತ್ತಿಸಿಕೊಂಡರಾ..?, ಇದು ಇಷ್ಟಕ್ಕೇ ನಿಲ್ಲದೇ ಹೋಯ್ತಾ…
ಅದರ ಜತೆಗೆ ನಾನು ಏನೂ ಹೊಟ್ಟೆಗೆ ಹಾಕದೇ ಸ್ಟ್ರೈಕ್ ಮಾಡ್ತಾ ಇದೀನಿ ಅಂತ ಊರಿಗೆಲ್ಲಾ ಪ್ರಚಾರ ಬೇರೆ ಆಯ್ತಾ?ಹುಟ್ಟಿರುವುದೇ ಉಣ್ಣಲು ಎನ್ನುವ ಪ್ರಿನ್ಸಿಪಲ್ ಅನ್ನು ಮನಸಾರೆ ನಂಬಿ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದ ಮನುಸನ ಅಂತ್ಯ ಹೇಗೆ ಆಗುತ್ತೆ ಎನ್ನುವ ಮಾನವ ಸಹಜ ಕುತೂಹಲ ನನ್ನ ಬಂಧುಗಳಲ್ಲಿ ಹುಟ್ಟಿತೇ?
ಉಣ್ಣದೇ ಸ್ಟ್ರೈಕ್ ಮಾಡ್ತಾ ಇದೆ ಪ್ರಾಣಿ ,ಅದು ಯಾವಾಗ ಗೊಟಕ್ ಅಂದು ಬಿಡುತ್ತೋ ಅಂತ ನಂಟರು ಪಂಟರ್ ಮನೆಗೆ ಬಂದು ಟಿಕಾಣಿ ಹಾಕಿದರಾ.. ಟಿಕಾಣಿ ಹಾಕಿದವರು ನಿಮಿಷಕ್ಕೊಂದು ಸಲ ರೂಮಿಗೆ ಇಣುಕಿ ಅದು ಇನ್ನೂ ಉಸಿರಾಡ್ತಾ ಇದೆ ಅಂತ ನನಗೇ ಕೇಳಿಸುವ ಹಾಗೆ ವಿಚಾರ ವಿನಿಮಯ ಮಾಡಿಕೊಂಡವಾ… ಇದರ ಸೈಡ್ ಎಫೆಕ್ಟ್ ಏನಾಯಿತು?
ತವರಿನ ಕಡೆಯಿಂದ,ಗಂಡನ ಕಡೆಯಿಂದ ಬಂದವರಿಗೆ , ಅದರಲ್ಲೂ ರಾಜಕೀಯ ಮೆರವಣಿಗೆ ಗಳಿಗೆ ಬಂದ ಹಾಗೆ ಗುಂಪು ಗುಂಪಾಗಿ ಬಂದ ವರಿಗೆ ಟೈಮ್ ಟೈಮ್ ಗೆ ಬೇಯಿಸಿ ಹಾಕೋದು ಯಾವ ಮನೆಯಾಕೆಗೆ ಇಷ್ಟ ಹೇಳಿ? ಹೀಗೇ ಬಿಟ್ಟರೆ ಇಡೀ ಜೀವಮಾನ ಈ ಮುಂಡೆತ್ತವಕ್ಕೆ ಬೇಯಿಸಿಕೊಂಡೇ ಇರಬೇಕು ಅನಿಸಿಬಿಡ್ತಾ ಮನೆ ಯಜಮಾನಿಗೆ? ಈ ಘೋರವಾದ ಸಮಸ್ಯೆಗೆ ಒಂದು ಪರಿಹಾರ ಕೊಡು ಅಜ್ಜಯ್ಯನ ರೂಪದ ಶಿವನೇ ಅಂತ ಪ್ರಾರ್ಥನೆ ಮಾಡಿದಳಾ…ಇವನನ್ನು ಎಳೆದುಕೊಂಡು ಹೋಗಿ ಆಸ್ಪತ್ರೆಗೆ ಹಾಕು ಎನ್ನುವ ಪ್ರೇರಣೆಯನ್ನು ಆ ಜಗನ್ನಿಯಾಮಕ ಕೊಟ್ಟನೇ…….
ಹಾಗಾಗಿ ನಾನು ಒಬ್ಬರು ಖ್ಯಾತ ಕರುಳು ಡಾಕ್ಟರ ಮುಂದೆ ನಿಂತಿದ್ದೆ, ಊಹೂಂ ಸರ ಕುಳಿತಿದ್ದೆ.ನನ್ನ ಪಕ್ಕ ನಮ್ಮ ಬಾಸ್ ಇತ್ತು. ಅದು ಡಾಕ್ಟರಿಗೆ ನನ್ನ ಪ್ರಾಬ್ಲಮ್ ವಿವರಿಸಿತು.
“ಡಾಕ್ಟರೇ ಇದಕ್ಕೆ ಹೀಗಾಗಿದೆ. ಎರಡ್ಮೂರು ತಿಂಗಳಿಂದ ಏನು ಕೊಟ್ಟರೂ ಬೇಡ ಅನ್ನುತ್ತೆ. ಮೊದಲು ಕೂತ ಪಟ್ಟಿಗೆ ಗೋಪುರ ಗೋಪುರ ಹಾಕಿಸಿಕೊಂಡು ಭೂತ ಹೊಕ್ಕ ಹಾಗೆ ಹಾಕಿಸಿಕೊಂಡು ತಿಂತಾ ಇತ್ತು.. ಎದುರು ಕೂತಿರೋರ ತಟ್ಟೆ ಊಹೂಂ ತಟ್ಟೆ ಅಲ್ಲ ಮುಖವೇ ಕಾಣಿಸುತ್ತಿರಲಿಲ್ಲ ಹಾಗೆ ಖಾಲಿ ಮಾಡಿ ಬಿಡ್ತಾ ಇತ್ತು ಇದು.ಈಗ ಅದೇನು ಕೊಟ್ರೂ ತಲೆ ಆಡಿಸಿಬಿಡುತ್ತೆ. ಬೇಡ ಅಂತ ದುರ್ದಾನ ತೆಗೆದು ಕೊಂಡವರ ಹಾಗೆ ಎದ್ದು ಹೋಗುತ್ತೆ…..”
ಡಾಕ್ಟರು ಬಾಯಿ ಆ ಮಾಡಿಸಿ ನಾಲಗೆ ನೋಡಿದರು, ಕೆಮ್ಮಿ ಅಂತ ಕೆಮ್ಮಿಸಿದರು, ಟೇಬಲ್ ಮೇಲೆ ಮಲಗಿ ಅಂತ ಮಲಗಿಸಿದರು. ಹೊಟ್ಟೆ ಅದುಮಿದರಾ…, ಬೆನ್ನು ಅದುಮಿದರಾ…, ಭುಜ ಅದುಮಿದರಾ…, ಆಮೇಲೆ ನಾಲಿಗೆ ಚಾಚಿ ಲೋಚ್ ಲೋಚ್ ಅಂದರಾ?
“ಸಾರ್ ಹಸಿವಾಗಲ್ವಾ ನಿಮಗೆ… ಯಾಕೆ ಏನೂ ಹೊಟ್ಟೆಗೆ ತಗೊಳ್ತಾ ಇಲ್ಲವಂತೆ…?”
“ಸೇರ್ತಾ ಇಲ್ಲ ಸಾ….”
“ಹಾಗಂದ್ರೆ ಹೇಗೆ ?ಸೇರಿಸಿಕೊಂಡು ತಿನ್ಬೇಕು….”
ತೆಪ್ಪಗೆ ತಲೆ ಆಡಿಸಿದೆ.
“ಏನಾದರೂ ಟೆಸ್ಟ್ ಮಾಡಿಸಿದೀರಾ..”
“ಐದು ತಿಂಗಳ ಹಿಂದೆ ಕಣ್ಣು ಟೆಸ್ಟ್ ಮಾಡಿಸಿದ್ದೆ ಸಾ.. ಇನ್ನೂ ಪೊರೆ ಬಂದಿಲ್ಲ ಅಂದರು , ಅದಕ್ಕೆ ಮೊದಲು ಇಸಿಜಿ ಮಾಡಿಸಿದ್ದೆ….”ಡಾಕ್ಟರು ಸಾಕು ಅಂತ ಕೈ ತೋರಿಸಿದರು. ಮಾತು ನಿಲ್ಲಿಸಿದೆ.
“ಅದು ಬಿಡಿ ಊಟ ಸೇರಲ್ಲ ಅಂತ ಯಾವುದಾದರೂ ಟೆಸ್ಟ್ ಮಾಡಿಸಿದೀರಾ….”
“ಇಲ್ಲಾ ಸಾ “
“ಒಂದು ಎಲ್ ಎಫ್ ಟಿ ಮಾಡಿಸಿ ,ಸ್ಕ್ಯಾನ್ ಮಾಡಿಸಿ….”
“ಎಲ್ ಎಫ್ ಟಿ. ಇದ್ಯಾವುದು ಸಾ..”
ನನಗೆ ಸಿ ಎಫ್ ಟಿ ಗೊತ್ತಿ ತ್ತು. ಸಿ ಎಫ್ ಟಿ ಅಂದರೆ ಕ್ಯೂಬಿಕ್ ಫೀಟ್ ಅಂತ . ತುಂಬಾ ಹಿಂದೆ ಮನೆ ಕಟ್ಟಿದಾಗ ಮರದ ಅಂಗಡಿಯಲ್ಲಿ ಸಿ ಎಫ್ ಟಿ ಲೆಕ್ಕದಲ್ಲಿ ಮರ ಕೊಂಡಿದ್ದೆ…
“ಇದು ಲಿವರ್ ಟೆಸ್ಟು. ಲಿವರ್ ಹೆಂಗೆ ಕೆಲಸ ಮಾಡುತ್ತೆ ಅಂತ ಗೊತ್ತಾಗುತ್ತೆ. ರಿಪೋರ್ಟ್ ತಗೊಂಡು ಬನ್ನಿ….”ಅಂತಂದು ನೆಕ್ಸ್ಟ್ ಅಂದರು.
ಆಚೆ ಬಂದೆವಾ..ಲ್ಯಾಬೋರೇಟರಿಗೆ ಹೋಗಿ ರಕ್ತ ಕೊಟ್ಟಾಯ್ತಾ.. ಡಾಕ್ಟರು ಹೊಟ್ಟೆ ಬೆನ್ನು ಭುಜ ಎಲ್ಲಾ ಒತ್ತಿ ಒತ್ತಿ ಅದೇನೇನೋ ಪೋಟೋ ತೆಗೆದ್ರಾ…
ಆಮೇಲೆ ಅದೇನೋ ಆರು ಪೇಜ್ ಪ್ರಿಂಟ್ ಆಗಿರೋ ಕಾಜಗ ಕೊಟ್ಟರು.
ಡಾಕ್ಟರ ಎದುರು ಅದನ್ನ ಇಟ್ಟು ಕೈಕಟ್ಟಿ ನಿಂತೆ.
“ಅಯ್ಯೋ ಏನ್ರಿ ಇಷ್ಟೊಂದು ಇದೆ ರೀಡಿಂಗು?..”ಅಂತ ಉದ್ಗಾರ ತೆಗೆದರಾ… ಅದೇನು ರೀಡಿಂಗು ಅಂತ ನನಗೆ ಅರ್ಥ ಆಗಲಿಲ್ಲ.
“ಯಾವುದು ಸಾರ್….”ಅಂದೆ.
“ನಿಂತುಕೊಳ್ಳಿ ನೇರವಾಗಿ…..”
ನಿಂತೆ.
“ಕಣ್ಣು ಬಿಡಿ ದೊಡ್ಡದಾಗಿ”
ದೊಡ್ಡದಾಗಿ ಕಣ್ಣು ಬಿಟ್ಟೆ. ಟಾರ್ಚ್ ಹಾಕಿ ಕಣ್ಣು ಮೂತಿ ಮುಸುಡಿ ಚೆಕ್ ಮಾಡಿದರು.
“ಸಲ್ಪ ಮಲಗಿ…”
ಮಲಗಿದೆ
ಶರಟು ಮೇಲೆ ಸರಿಸಿ ಹೊಟ್ಟೆ ನೋಡಿದರು, ಎದೆ ನೋಡಿದರು, ಬೋರಲು ಮಲಗಿಸಿ ಬೆನ್ನು ನೋಡಿದರು!
ಅವರ ಮುಖದಲ್ಲಿ ಗಾಬರಿ ಗಾಬರಿ, ಹಣೆ ಬೆವರ್ತಿದೆ ಅನ್ನಿಸಿತು.
“ಯಾಕೆ ಸಾ? ಎನಿ ಪ್ರಾಬ್ಲಂಸು….”ಅಂದೆ.
ಆಚೆ ಕೂತಿದ್ದ ಹೆಂಡತಿಯನ್ನು ಒಳಗೆ ಕೂಗಿದರು.
“ನೀವು ಹಾಗೇ ಇರಿ….”ಅಂದರು. ನಾನು ಹಾಗೇ ಮಂಚದ ಮೇಲೆ ಅಂಗಾತ ಮಲಗಿ ಸೂರು ನೋಡುತ್ತಿದ್ದೆ. ಸೂರಿನಲ್ಲಿ ನಾಲ್ಕು ಜೇಡ ದ ಬಳೆ ನೇತಾಡುತ್ತಿತ್ತು. ಅಂದ ಹಾಗೆ ಅದು ಬಳೆಯೋ ಬಲೆ ಯೋ…?ಹೆಂಡತಿ ಒಳಗೆ ಬಂದು ಕುರ್ಚಿ ಮೇಲೆ ಕೂತಳು.
“ಏನಮ್ಮಾ ಅವರಿಗೆ ಕಾಮಾಲೆ , ಅದೇ ಜಾಂಡಿಸು ಬಂದಿದೆಯಾ….?”
“ಇಲ್ಲವಲ್ಲ ಸಾರ್., ಏನೂ ಹಳದಿ ಕಾಣಿಸ್ತಿಲ್ಲ ಅವರ ಮೈಯಲ್ಲಿ…”
“ನಾನೂ ಅದೇ ನೋಡಿದೆ…”ಇದು ಡಾಕ್ಟರು. ಒಂದು ನಿಮಿಷ ಬಿಟ್ಟು
“ಏನಮ್ಮ ಎಷ್ಟು ದಿವಸದಿಂದ ಇದೆ ಈ ಅಭ್ಯಾಸ….?”ಇದು ಡಾಕ್ಟರು
“ಈಗೊಂದು ತಿಂಗಳಿಂದ ಊಟ ಕಡಮೆ ಆಗಿದೆ….”ಇದು ನನ್ನ ಹೆಂಡತಿ
“ನಾನು ಕೇಳಿದ್ದು ಡ್ರಿಂಕ್ಸ್ ಅಭ್ಯಾಸ. ಆಲ್ಕೋಹಾಲ್ ಅದರ ಅಭ್ಯಾಸ. ದಿವಸಕ್ಕೆ ಎಷ್ಟು ಬಾಟಲು..”ಇದು ಡಾಕ್ಟರು .
“ಇಲ್ಲ ಸಾರ್ ಅವರಿಗೆ ಆ ಅಭ್ಯಾಸ ಮಾತ್ರ ಇಲ್ಲ….”ಇದು ನನ್ನ ಹೆಂಡತಿ
“ನಿಮಗೆ ಗೊತ್ತಿಲ್ಲ ಅಂತ ಕಾಣುತ್ತೆ.ಯಜಮಾನರನ್ನೇ ಕೇಳ್ತೀನಿ…..”ಇದು ಡಾಕ್ಟರು .
ನನ್ನ ಕಡೆ ಡಾಕ್ಟರು ತಿರುಗಿದರು
“ಡೈಲಿ ಎಷ್ಟು ತಗೋತೀರಾ….”ಇದು ಡಾಕ್ಟರು .
“ಬೆಳಿಗ್ಗೆ ಹನ್ನೆರೆಡು, ರಾತ್ರಿ ಎಂಟು ಊಟಕ್ಕೆ ಮೊದಲು…”ಅಂದೆ!
“ಅದೇನು ಬೆಳಿಗ್ಗೆ ಹನ್ನೆರೆಡು, ರಾತ್ರಿ ಎಂಟು ಅದೂ ಊಟಕ್ಕೆ ಮೊದಲು..?” ಇದು ಡಾಕ್ಟರು.
“ಅದೇ ಸಾರೂ ಇನ್ಸುಲಿನು…..”ಇದು ನಾನು.
ಡಾಕ್ಟರು ಬೆವರು ಒರೆಸಿಕೊಂಡು “ಅಲ್ರೀ ದಿವಸಕ್ಕೆ ಎಷ್ಟು ಆಲ್ಕೋಹಾಲ್, ಅದೇ ಹೆಂಡ ಕುಡಿತೀರಿ….ಅಂತ ನಾನು ಕೇಳಿದ್ದು…..”ಇದು ಡಾಕ್ಟರು.
“ಇಲ್ಲ ಸಾರೂ, ಅದೊಂದು ಕಲಿತಿಲ್ಲ…..”ಇದು ನಾನು.
ಡಾಕ್ಟರ ಮುಖದಲ್ಲಿ ಆಶ್ಚರ್ಯ ಎದ್ದು ಕಾಣಿಸಿತು. ಕೊಂಚ ಕೋಪವೂ ಬಂದಿರಬೇಕು.
“ಜ್ಞಾಪಿಸಿಕೊಂಡು ಸರಿಯಾಗಿ ಹೇಳಿ ಸರ್…”ಅಂದರು.
“ಸಾರೂ,ಮೂರು ವರ್ಷ ಹಿಂದೆ ಅರ್ಧ ಬಾಟಲು ಬೀರು ಕುಡಿದಿದ್ದೆ ನಮ್ಮ ಕ್ಲಬ್ ನಲ್ಲಿ.ಅದೇನೋ ಪಿಂಟ್ ಅಂತಾರಲ್ಲಾ ಅದು….”ಇದು ನಾನು.
ಡಾಕ್ಟರು ಮುಖ ಒರೆಸಿಕೊಂಡು ಕುರ್ಚಿ ಮೇಲೆ ಕೂತರು.
“….ಬೈಲಿರುಬಿನ್ ಇಷ್ಟೊಂದು ತೋರಿಸ್ತಾ ಇದೆ . ಅಬ್ನಾರ್ಮಲ್ ರೀಡಿಂಗು. ಆಲ್ಕೋಹಾಲ್ ತಗೊಳ್ಳೋರಲ್ಲಿ ಹೀಗೆ ತೋರಿಸಬೇಕು. ಜಾಂಡೀಸ್ ಇಲ್ಲ, ರೀಡಿಂಗ್ ಹೀಗೆ ಹೊಟ್ಟೆ ಸ್ಕ್ಯಾನ್ ಸರಿ ಇದೆ…” ಇದು ಅವರ ಸ್ವಗತ!
“ಒಂದು ಟೆಸ್ಟು ಇವತ್ತೇ ಅರ್ಜೆಂಟ್ ಆಗಿ ಆಗಬೇಕು. ಎಂ ಆರ್ ಸಿ ಪೀ ಮಾಡಿಸಿ ಅದರ ರಿಪೋರ್ಟ್ ತನ್ನಿ….”
“ಅದೇನ್ ಸಾ…”
ಅವರು ಅದೇನೋ ಹೇಳಿದ್ರಾ. ಅರ್ಥ ಆಗಲಿಲ್ಲ. ಎಲ್ಲೆಲ್ಲಿ ಅವರು ಹೇಳಿದ ಟೆಸ್ಟ್ ಮಾಡ್ತಾರೆ ಅಂತ ಕೇಳಿದೆ. ಕ್ಲಿನಿಕ್ ನಿಂದ ಹೊರಗೆ ಬಂದು ಅವರು ಹೇಳಿದ ಕಡೆ ಪೋನಾಯಿಸಿದೆ. ಖಾಲಿ ಹೊಟ್ಟೇಲಿ ಬನ್ನಿ , ಜತೆಗೆ ಒಬ್ಬರು ಇರಲಿ ಇಷ್ಟು ಕಾಸು ಫೀಸು.. ಅಂದ್ರಾ…
ಮಾರನೇ ದಿವಸ ಹೋಗಿ ಎರಡು ಗಂಟೆ ವೈಟ್ ಮಾಡಿ ಗುಹೆ ತರಹ ಇರುವ ಯಂತ್ರದೊಳಗೆ ನನ್ನ ಹಾಕಿ ಟೆಸ್ಟ್ ಪಸ್ಟ್ ಮಾಡಿಸಿ ಆಯ್ತಾ…..ರಿಪೋರ್ಟ್ ತಗೊಂಡು ಡಾಕ್ಟ್ರ ಹತ್ರ ಹೋದ ಮೇಲೆ ಅದೇನು ಪ್ರಾಬ್ಲಂ ಅಂತ ತಿಳೀತಾ?glad bladder ಲಿವರ್ ಮಧ್ಯೆ ಒಂದು ಕಲ್ಲು ಸಿಕ್ಕಂಡಿದೆ.. ಅಂತ ಹೇಳಿದ್ರಾ,ಇಮ್ಮಡಿಯಟ್ ಆಪರೇಶನ್ ಆಗಬೇಕು ಅಂದ್ರ…
ಅರ್ಜೆಂಟ್ ಆಗಿ ಆಸ್ಪತ್ರೆ ಸೇರಿ ಬಿಟ್ಟೆನಾ.. ಅಲ್ಲೂ ಡಾಕ್ಟರು ಮತ್ತೆ ಅದೇನೇನೋ ಟೆಸ್ಟ್ ಮಾಡಿದ್ರು.
ಈ ಮಧ್ಯೆ ನನಗೊಂದು ದೊಡ್ಡ ಮೆದುಳಿಗೆ ಸಂಬಂಧಪಟ್ಟ ತಳಮಳ ಶುರು ಆಗಬೇಕೇ? ಅದರ ಬಗ್ಗೆ ಪುಟ್ಟ ವಿವರ. ಇದುವರೆಗೂ ನನಗೆ ದೇಹದಲ್ಲಿ ಲಿವರ್ ಎಲ್ಲಿರುತ್ತೆ,gall bladder ಎಲ್ಲಿರುತ್ತೆ ಲಿವರ್ ಗೂ ಬ್ಲ್ಯಾಡ್ಡರ್ ಗೂ ಏನು ಸಂಬಂಧ..ಮೊದಲಾದ ಬೇಸಿಕ್ ಅನಾಟಮಿ ಗೊತ್ತಿರಲಿಲ್ಲ.ಈಗಲೂ ಅದೇ ಸ್ಥಿತಿ! ಕಂಪಲ್ಸರಿಯಾಗಿ ಎಲ್ಲರಿಗೂ ಪ್ರೈಮರಿ ಸ್ಕೂಲಿನಲ್ಲಿಯೇ ನಮ್ಮ ದೇಹದ ಅನಾಟಮಿ ಬಗ್ಗೆ ತಿಳಿಸಲೇ ಬೇಕು ಎನ್ನುವ ಐಡಿಯಾ ಬಂದಿದೆ. ಅಕಸ್ಮಾತ್ ಮುಂದೆ ನಾನೇನಾದರೂ ಎಲೆಕ್ಷನ್ ನಿಂತು ಅದರಲ್ಲಿ ಗೆದ್ದು ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಶಿಕ್ಷಣ ಮಂತ್ರಿ ಅಂತ ಆದರೆ ಖಂಡಿತ ಒಂದನೇ ಕ್ಲಾಸಿಗೆ ಅನಾಟಮಿ ಕಲಿಸುವ ಸುಗ್ರೀವ ಆಜ್ಞೆ ಹೊರಡಿಸುತ್ತೇನೆ. ಇದು ನನ್ನ ಪ್ರಾಮಿಸ್. ಇದು ವಾಸ್ತವ ಅಲ್ಲ ಎನ್ನುವ ಚಿಂತೆ ನಿಮಗಿದ್ದರೆ ಅದನ್ನು ಬಿಟ್ಟುಬಿಡಿ. ಎಂತೆಂತಹ ಮೇಧಾವಿಗಳು ಈಚೆಗೆ ಶಿಕ್ಷಣ ಮಂತ್ರಿ ಕಂಪ್ಯೂಟರ್ ಮಂತ್ರಿ ಆಗಿರೋದನ್ನು ನೋಡಿರುವ ನಮಗೆ ನಾಳೆ ನಾನೂ ಸಹ ಮಂತ್ರಿ ಆಗಬಹುದು ಅಂತ ಅನಿಸಲೇ ಬೇಕು!
ಗ್ರೇ ಅನ್ನುವವ ಬರೆದ ಒಂದು ಇಂಗ್ಲಿಷ್ ಅನಾಟಮಿ ಪುಸ್ತಕ ನಮ್ಮ ಮನೆಯಲ್ಲಿದೆ. ಈ gall boadder ಸಮಸ್ಯೆಗೆ ಮೊದಲು ತುಂಬಾ ಹಿಂದೆ ಅದನ್ನು ಹುಡುಕಿ ತೆಗೆದು ಧೂಳು ಹೊಡೆದು ಓದುವ ಪ್ರಯತ್ನ ಹಲವು ಸಾವಿರ ಸಲ ಮಾಡಿ ಕೈ ಬಿಟ್ಟ ಭೂಪ ನಾನು. ಈಗ ಮತ್ತೆ ಅದೇ ಪ್ರಯತ್ನ ಮಾಡಿ ಕೈ ಚೆಲ್ಲಿದೆ. ಈ ಸಲ ಸಮಯದ ಅಭಾವ.
ಈ ಸಲ ನನ್ನ ಅನಾಟಮಿ ಅರ್ಥ ಮಾಡಿಕೊಳ್ಳಬೇಕು ಎನ್ನುವ ಆಸೆಗೆ ಇಂಬು ದೊರೆತದ್ದು AI ಗೆಳತಿ! ಅದರ ಮೂಲಕ ಪ್ರತಿಯೊಂದು ಡೌಟ್ ಗೂ ಪರಿಹಾರ ಕೇಳಿ ಕೇಳಿ ಕೇಳಿ ನಾನೇ gall bladder ಡಾಕ್ಟರು ಆಗಿ ಬಿಟ್ಟೆ.
ದೊಡ್ಡ ಡಾಕ್ಟರು ಅವರ ಶಿಷ್ಯರು ಬರೋರು. ಅವರ ಹತ್ತಿರ ನನ್ನ ಲಿವರ್ ಎಲ್ಲಿದೆ,bladder ಎಲ್ಲಿದೆ ಮೊದಲಾದ ಪ್ರಾಥಮಿಕ ಜ್ಞಾನ ಪಡೆದೆ. ಕೈ ಮುಟ್ಟಿದರೆ ಅದುಮಿದರೆ ಅದು ಸಿಗುತ್ತಾ ಅಂತ ಕೇಳಿ ನನ್ನನ್ನು ನೋಡಲು ಸುತ್ತಲೂ ನೆರೆದಿದ್ದ ಮೂವತ್ತು ಜನ ಡಾಕ್ಟರು ಗಹಗಹಿಸಿ ನಗುವ ಹಾಗೆ ಮಾಡಿದ್ದೆ.
ಡಾಕ್ಟರು glad bladder ಲಿವರ್ ಮಧ್ಯೆ ಒಂದು ಕಲ್ಲು ಸಿಕ್ಕಂಡಿದೆ.. ಅಂತ ಹೇಳಿದ್ರಾ,ಇಮ್ಮಡಿಯಟ್ ಆಪರೇಶನ್ ಆಗಬೇಕು ಅಂದ್ರ?bladder ತೆಗೆಯೋ ಮೊದಲು ಒಂದು ಸ್ಟೆಂಟ್ ಹಾಕ್ಬೇಕು, ಅದಾದ ಎರಡು ಮೂರು ವಾರಕ್ಕೆ bladder ತೆಗೆಯೋದು ಅದರ ನಂತರ ಮೂರುನಾಲ್ಕು ವಾರದಲ್ಲಿ ಮೊದಲು ಹಾಕಿದ ಸ್ಟೆಂಟ್ ತೆಗೆಯೋದು.. ಇದು ಆಪರೇಶನ್ ನ ಮೂರು ವಿಭಿನ್ನ ಚಾಪ್ಟರ್ ಅಂತ ಅರ್ಥ ಆಗಿತ್ತು. ಅಂದರೆ ತ್ರೀ ಸ್ಟೇಜಸ್ (ಶೇಕ್ಸ್ ಪಿಯರ್ ನ seven stages of man ತರಹ)glad bladder ತೆಗೆಯಲು..
ಇಷ್ಟೆಲ್ಲಾ ತಾಪತ್ರಯ ಪಡೋದರ ಬದಲು ಆಪರೇಶನ್ ಬೇಡ ಅಂದರೆ ಏನಾಗುತ್ತೆ ಅಂತ ವೈದ್ಯರನ್ನ ಕೇಳಿದೆ. ಅವರು are you mad? ಲಿವರ್ ಕ್ಯಾನ್ಸರ್ ಬರುತ್ತೆ. ಜಾಂಡೀಸ್ ಆದರೆ ಲಿವರ್ ಹಾಳಾಗ್ತಾ ಇದೆ ಅನ್ನುವ ಮುನ್ಸೂಚನೆ. ಅದೇನೋ ನಿಮ್ಮ ಲಕ್ಕು. ಬಿರಿಬಿಯನ್ ಅಷ್ಟು ಹೆಚ್ಚಿದ್ದರೂ ಜಾಂಡೀಸ್ ಬಂದಿರಲಿಲ್ಲ.. ಅನ್ನಬೇಕೇ…!
ಅದರಿಂದ ಸಾವಿನ ಆಪ್ಷನ್ ತಳ್ಳಿ ಹಾಕಿ ಮುಂದೆ ಬದುಕಿದ್ದರೆ ಉಂಡು ತಿಂದು ಹಾಯಾಗಿರುವ ಕನಸು ಕಂಡರೆ ಅದೇನು ಸುಖ ಅಲ್ಲವೇ?
ಅದೇರೀತಿ ಕ್ಯಾನ್ಸರ್ ಅಪ್ಪುವ ಮೊದಲು ಆಪರೇಶನ್ ಮೊದಲ ಹಂತ ಆಯ್ತಾ? ಲಿವರ್ ಗೂ bladder ಗೆ ಸಂಪರ್ಕ ಜಾಲದಲ್ಲಿ ಸ್ಟೆಂಟ್ ಕೂಡಿಸಿ ಇಟ್ಟದ್ದು. ಇದಕ್ಕೆ ಮೂರು ದಿನ ಆಸ್ಪತ್ರೆ ವಾಸ. ನಂತರ bladder ಕತ್ತರಿಸಿದ್ದು, ಇದಕ್ಕೆ ಮತ್ತೆ ಮೂರು ದಿವಸ ಆಸ್ಪತ್ರೆ. ಅದಾದ ಮೇಲೆ ಸ್ಟೆಂಟ್ ತೆಗೆದದ್ದು ಇದಕ್ಕೆ ನೋ ಆಸ್ಪತ್ರೆ ವಾಸ. ಓನ್ಲಿ ಇನ್ ಪೇಷೆಂಟ್ ಅಷ್ಟೇ!
ಈ ಇಡೀ ಪ್ರೋಸೆಸ್ ಮುಗಿಯೋ ಅಷ್ಟರಲ್ಲಿ ನಾನು gall bladder ಸ್ಪೆಷಲಿಸ್ಟ್ ಆಗಿಬಿಟ್ಟೆ ಇವರೇ..
ಒಂದು happy ending ನ ನಾನು ದಾಖಲಿಸಲೇ ಬೇಕು ಸರ .
ಈಗ ಆಪರೇಶನ್ ಆಗಿ ಒಂದು ಒಂದೂವರೆ ತಿಂಗಳು. ಚಕ್ಕಲಿ ಕೋಡುಬಳೆ ಚೆನ್ನಾಗಿ ಸೇರುತ್ತೆ. ಕೂತ ಪಟ್ಟಿಗೆ ಎಂಟು ಇಡ್ಲಿ ನಾಲ್ಕು ಕಿಂಗ್ ಸೈಜ್ ವಡೆ, ಅರ್ಧ ಕೆಜಿ ಉಪ್ಪಿಟ್ಟು ಅನಾಯಾಸವಾಗಿ ಇಳಿಯುತ್ತೆ. ಮಧ್ಯಾಹ್ನ ಉಣ್ಣಕ್ಕೆ ಕೂತರೆ ಅರ್ಧಮುಕ್ಕಾಲು ಡಜನ್ ಚಪಾತಿ ಎರಡು ಸೇರು ಪಲ್ಯ ಹುಳಿ, ಮುಕ್ಕಾಲು ಕೆಜಿ ಅನ್ನ ಲೀಟರ್ ಮೊಸರು ಹೊಟ್ಟೆ ಸೇರುತ್ತೆ.ಆಪರೇಶನ್ ಗೆ ಮೊದಲು ಗೋಪುರ ಗೋಪುರದ ಸ್ಟೇಜ್ ತಲುಪಿದ್ದೀನಿ ಅಂತ ನೆರೆ ಹೊರೆ ಹೇಳುತ್ತಾರೆ.(ನಾನು ಉಣ್ಣಬೇಕಾದರೆ ಅವರು ಬಚ್ಚಿಟ್ಟುಕೊಂಡು ನೋಡುತ್ತಾರೆ ಎಂದು ನನ್ನ ಗುಮಾನಿ)
ನೆಂಟರು ನಮ್ಮ ಗೋಪಿ ಕ್ಯಾನ್ಸರ್ ಎನ್ನುವ ರಾಕ್ಷಸನನ್ನು (ಸಾವನ್ನು)ಗೆದ್ದು ಬಂದ ಅಂತ ಕತೆ ಕವನ ಬರೆದು ಅದನ್ನು ಮನೆಗೆ ತರ್ತಾರೆ. ಅದನ್ನು ಊಟಕ್ಕೆ ಮುನ್ನ ಓದು ತ್ತಾರೆ, ಉಣ್ಣುತ್ತಾರೆ,ಉಂಡು ಮತ್ತು ಮಿಕ್ಕದ್ದನ್ನು ಕೊಂಡು ಹೋಗುತ್ತಾರೆ.. ಹೆಂಡತಿ ಎನ್ನುವ ದೇವತೆ ಈಗ ಸಂತೋಷದಿಂದ ಬಂದವರ ಆರೈಕೆ ಮಾಡುತ್ತಾಳೆ.ನಂಟರು ಪಂಟರ್ ಗಳ ಹಾರೈಕೆಯಿಂದ ಅವಳ ಮಾಂಗಲ್ಯ ಭಾಗ್ಯ ಮುಂದುವರೆದಿದೆ ಎಂದು ನಂಬಿದ್ದಾಳೆಯೇ…. ತಿಳಿಯದು!
ಒಟ್ಟಿನಲ್ಲಿ ಜೀವನ ಸುಖವಾಗಿ ಸಲೀಸಾಗಿ ಬುಲೆಟ್ ಟ್ರೈನ್ ಹಾಗೆ ಹೋಗ್ತಾ ಇದೆ ಸರ, ಏರ್ ಬಸ್ ತರಹ ಆಕಾಶದಲ್ಲಿ ಹಾರಾಡ್ತಾ ಐತೆ ಮೇಡಮ್ಮೋ ರೇ….
ಮುಂದಿನ ಸಲ ಸಿಕ್ಕಿದಾಗ ಆಸ್ಪತ್ರೆಯಲ್ಲಿ ನನ್ನ ನವಿರಾದ ಮನಸಿಗೆ ಹಿತ ಕೊಟ್ಟ ಅನುಭವಗಳನ್ನು ನಿಮಗೆ ಹೇಳಲು ನನಗೆ ನಾನು ನಂಬದ ದೈವ ಪ್ರೇರಣೆ ಆಗಿದೆ. ಇಷ್ಟರಲ್ಲೇ ಮತ್ತೆ ತಮ್ಮ ಮುಂದೆ ನಾನು ಪ್ರತ್ಯಕ್ಷ….
ಅನಿಸ್ತಾ?..






0 Comments