ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಆಡು ಕಾಯುವ ಹುಡುಗನ ಕತೆ….'ಯ ಕಥೆ – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ

ಏನೋ ಕೆಲಸದ ಮೇಲೆ ಮೈಸೂರಿಗೆ ಹೋಗಿದ್ದೆ. ದಿನ ಅಲ್ಲೇ ಇರಬೇಕಾಯ್ತು. ಪ್ರಜಾವಾಣಿಯ ಉಪಸಂಪಾದಕ ಗಣೇಶ ಅಮಿನಗಡ ಮನೆಯಲ್ಲಿ ಉಳಿದಿದ್ದೆವು. ಇಡೀ ಮನೆ ತುಂಬಾ ಹರಡಿಕೊಂಡಿದ್ದ ಪುಸ್ತಕಗಳನ್ನು ಸರಿಪಡಿಸಲೆಂದು ಹೊರಟಾಗ, ಹಾಗೇ ಇರಲಿ ಬಿಡು.ಅದು ಸರಿಯಾಗೊ ಕಥೆ ಅಲ್ಲ. ನಿನಗೆ ಬೇಕಾದ ಪುಸ್ತಕ ತೆಗೆದುಕೊ ಎಂದು ಬಿಟ್ಟಿದ್ದರು. ಹಾಗೆ ಹೇಳಿದರೆ ಇದ್ದೆಲ್ಲ ಪುಸ್ತಕ ತೆಗೆದುಕೊಂಡು ಬಿಡುವ ನನ್ನ ಜಾಯಮಾನ ಗೊತ್ತಿದ್ದರಿಂದ, ಹೊತ್ತುಕೊಂಡು ಹೋಗುವ ಸಂಕಷ್ಟ ನೆನೆದು ಅಂಜಿದ ‘ಇವರು’ ಅಯ್ಯೋ ಬೇಡಾ’ ಎನ್ನುವಷ್ಟರಲ್ಲಿ ಹಲವಾರು ನನ್ನ ಸಮಕಾಲಿನ ಮಿತ್ರರ ಪುಸ್ತಕ ಎತ್ತಿಟ್ಟುಕೊಂಡಾಗಿತ್ತು. ಊರಿಗೆ ಬಂದವಳೇ ಪತ್ರಕರ್ತ ಮಿತ್ರ ಟಿ.ಎಸ್ ಗೊರವರ್ಗೆ ಫೋನಾಯಿಸಿದ್ದೆ. ‘ಇಷ್ಟು ಬೇಗ ಆತ್ಮಚರಿತ್ರೆ ಬರೆಯಬೇಕಿತ್ತಾ? ಆತ್ಮಚರಿತೆ ಬರೆದಾದ ಮೇಲೆ ಮತ್ತೇನೂ ಬರಿಯೋ ಹಂಗಿಲ್ಲ. ಇನ್ನು ಮುಂದೆ ಮತ್ತೇನೂ ಬರೀಬೇಡಿ’ ಎಂದು ತಮಾಷೆ ಮಾಡಿದ್ದೆ. ಅವರೂ ತಮ್ಮ ಎಂದಿನ ಮುಗ್ಧತೆಯಲ್ಲಿ ‘ಬೇಗ ಓದಿ. ಅಭಿಪ್ರಾಯ ತಿಳಿಸಿ’ ಎಂದಿದ್ದರು. ಮತ್ತೆ ನನ್ನ ಮಾಮೂಲಿ ಕೆಲಸದಲ್ಲಿ, ಅದಕ್ಕಿಂತ ಹೆಚ್ಚಾಗಿ ನನ್ನ ಆಲಸ್ಯದಲ್ಲಿ ‘ಓದಿದರಾಯಿತು’ ಎನ್ನುತ್ತ ಶಾಲೆ ಪ್ರಾರಂಭವಾಗಿಯೇ ಬಿಟ್ಟಿತ್ತು.
ಮೊನ್ನೆ ಪ್ರಕಾಶಕರಾದ ಗುರುರಾಜ ಫೋನಾಯಿಸಿ ‘ಒಂದು ಆತ್ಮಕಥೆ ಬರೀರಿ, ಹೇಗೂ ಅದರಲ್ಲಿ ನಂದೂ ಹೆಸರು ಬರುತ್ತೆ, ನಿಮ್ಮ ಪುಸ್ತಕ ಪ್ರಕಟಿಸ್ತಿದ್ದೇನಲ್ಲ…’ ಎಂದು ತಮಾಶೆ ಮಾಡಿದ್ದರು. ಆತ್ಮಚರಿತ್ರೆ ಎಂದ ಕೂಡಲೇ ಅಷ್ಟು ದಿನ ಮರೆತು ಹೋಗಿದ್ದ ಗೊರವರ ಪುಸ್ತಕ ಮತ್ತೆ ನೆನಪಾಯ್ತು.. ಮುಗಿಸಲೇ ಬೇಕು ಎಂದು ಕೈಗೆತ್ತಿಕೊಂಡವಳಿಗೆ ‘ಆಡು ಕಾಯೋ ಹುಡುಗನ ದಿನಚರಿ ಒಂದು ಹೊಸ ಲೋಕವನ್ನೇ ಎದುರಿಗಿಟ್ಟಿತು. ಇನ್ನೂ ನಾನು ಕಂಡಿಲ್ಲದ ಒಂದು ಹೊಸ ಪ್ರಪಂಚವನ್ನೇ ಎದುರಿಗೆ ಕಂಡ ಸಂಚಲನ ನನ್ನಲ್ಲಿ. ಉತ್ತರ ಕನರ್ಾಟಕದ ಅಪ್ಪಟ ಜವಾರಿ ಭಾಷೆಯ ನಿರೂಪಣೆ ಒಂದು ರೀತಿಯಲ್ಲಿ ಆಪ್ತವಾಗುತ್ತದೆ. ತುಂಬಾ ಮುಗ್ಧವಾಗಿ ಆದರೆ ಅಷ್ಟೇ ಸರಳವಾಗಿ ಹೇಳಬಲ್ಲ ಚಾತುರ್ಯ ಏಕಕಾಲದಲ್ಲಿ ಒಂದೇ ಕಡೆ ಕಾಣಸಿಕ್ಕ ಖುಷಿ ನನ್ನದು. ಹಿನ್ನುಡಿಯಲ್ಲಿ ನಟರಾಜ ಹುಳಿಯಾರ ಹೇಳಿದಂತೆ ‘ಸ್ವಂತದ ಹಾಗೂ ಸಾಮಾಜಿಕ ನೆನಪುಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಪರಿಚಿತವಲ್ಲದ ಅನುಭವವೊಂದು ವೈವಿದ್ಯಮಯ ವಿವರಗಳೊಂದಿಗೆ ಈ ಪುಸ್ತಕದ ಮೂಲಕ ಪ್ರವೇಶಿಸಿದೆ.’
ಹೌದು, ಅನೂಹ್ಯವಾದ ಅನುಭವಗಳು, ತೀರಾ ವೈಯಕ್ತಿಕ ಸಂವೇದನೆಗಳು, ಸಾಮಾಜಿಕ ನೆಲೆಯಲ್ಲಿ ಕೂಡ ಗುರುತಿಸಿಕೊಳ್ಳಬಲ್ಲ ಅನುಭವಗಳಾಗಿದ್ದು ಅವು ಎಲ್ಲಿಯೂ ಅತಿಯಾದ ಖಾಸಗಿ ಎನ್ನಿಸದೇ ಸರ್ವಕಾಲಿಕವಾದ ಹಾಗೂ ಸಾರ್ವತ್ರಿಕ ವಿಷಯಗಳೇನೋ ಎಂಬಂತೆ ತೋರುತ್ತದೆ. ಇವೆಲ್ಲಕ್ಕಿಂತ ನನಗೆ ಅತೀ ಮುಖ್ಯ ಎನ್ನಿಸಿದ್ದು ನಿರೂಪಕರು ತಮ್ಮ ಅನುಭವಗಳನ್ನು ಹೇಳುವಲ್ಲಿ ತೋರಿದ ಪ್ರಾಮಾಣಿಕತೆ. ಅದು ತಮ್ಮ ಮೈತುಂಬಾ ಹಾಸಿ ಹೊದೆಯುವಷ್ಟಿದ್ದ ಬಡತನವಿರಬಹುದು. ಅಥವಾ ತಮ್ಮ ಮನೆಯಲ್ಲಿ ನಿತ್ಯವೇ ಎಂಬಂತಾಗಿದ್ದ ಅಪ್ಪ ಅಮ್ಮನ ಜಗಳವಾಗಿರಬಹುದು ಅಥವಾ ತಾನು ಶಾಲೆ ತಪ್ಪಿಸಿ ಎಮ್ಮೆ ಟೀಮಿನ ಜೊತೆ ಬಯಲು ಸೇರಲು ಕಾತರಿಸಿದ ಕ್ಷಣಗಳ ವಿವರಣೆಯಾಗಿರಬಹುದು. ಪ್ರತಿಯೊಂದರಲ್ಲೂ ಒಂದು ನೇರವಾದ ನಿರೂಪಣೆಯನ್ನು ಕಾಣಬಹುದು. ಪುಸ್ತಕ ಪ್ರಾರಂಭವಾಗುವುದೇ ‘ಉಡಾಳ ಹುಡುಗನೊಬ್ಬನ ದಿನಚರಿ’ಯ ಮೂಲಕ. ಎಮ್ಮೆ ಕಾಯೋ ಟೀಮಿನ ಗೆಳೆಯರ ಪರಿಚಯದ ಮೂಲಕ. ಬಹುಶಃ ಎಮ್ಮೆ ಕಾಯೋ ಟೀಮ್ ಇಲ್ಲದಿದ್ದರೆ ಗೊರವರ್ ಬಾಲ್ಯ ಇಷ್ಟೊಂದು ಸಮೃದ್ಧವಾಗಿರೋದಕ್ಕೆ ಶಕ್ಯವೇ ಇರಲಿಲ್ಲ ಎನ್ನುವುದು ಇದರಿಂದಲೇ ಅರ್ಥವಾಗುತ್ತದೆ. ಹೀಗಾಗಿಯೇ ಗೊರವರ ತಮ್ಮ ಅರ್ಪಣೆಯಲ್ಲಿ ನನ್ನ ಕಡುಕಷ್ಟದ ಬಾಲ್ಯದ ದಿನಗಳನ್ನು ಸಂಭ್ರಮಗೊಳಿಸಿ ಕನಸುಗಳು ಗರಿಗೆದರುವಂತೆ ಮಾಡಿ, ಜೀವನಪ್ರೀತಿ ಮೂಡಿಸಿದ ಆಡೋಕಾಯೋ ಮತ್ತು ಎಮ್ಮೆ ಟೀಮಿನ ಗೆಳೆಯರಿಗೆ ಎಂದು ಹೃದಯ ತುಂಬಿ ಹೇಳಿದ್ದರಲ್ಲಿ ಯಾವ ಆಶ್ಚರ್ಯವೂ ಕಾಣುವುದಿಲ್ಲ.
ಮಾಸ್ತರ್ರ ಹೊಡೆತ, ಹಾಗೂ ಮಗ್ಗಿ ಹೇಳಬೇಕಾದ ಒತ್ತಡವನ್ನು ತಪ್ಪಿಸಿಕೊಳ್ಳಬೇಕು ಎಂಬಂತೆ ತಮ್ಮ ಮನೆಯಲ್ಲಿ ಎಮ್ಮೆ ಇಲ್ಲದಿದ್ದರೂ, ಕೂಲಿಗೆ ಹೋಗುತ್ತಿದ್ದ ಅಪ್ಪನಿಗೆ ಗೊತ್ತಾಗದಂತೆ, ಮಾಸ್ತರಿಗೆ ಖೊಕ್ ಕೊಟ್ಟು ಎಮ್ಮೆ ಕಾಯಲು ಹೋಗುತ್ತಿದ್ದ ಹುಡುಗನ ಬಾಲ್ಯದ ರಸವತ್ತಾದ ವರ್ಣನೆ ಓದುತ್ತಿದ್ದರೆ ಖಂಡಿತವಾಗಿಯೂ ಮನಸ್ಸು ಒಂದು ಕ್ಷಣ ಅಸೂಯೆಯ ಗೂಡಾಗುತ್ತದೆ. ಜೇನು ಬಿಡಿಸುವುದರಲ್ಲಿ ‘ಎಕ್ಸಪರ್ಟ’ ಎನ್ನಿಸಿಕೊಂಡ ಎಮ್ಮೆ ಟೀಮ್ ಹಾಗು ಅದೇ ವಿಶ್ವಾಸದಲ್ಲಿ ಜೆನು ಹುಳುಗಳಿಂದ ಕಚ್ಚಿಸಿಕೊಂಡಿದ್ದು, ಇಷ್ಟಾಗಿ ಕೂಡ ಜೇನು ತಿಂದು, ಹೊಳೆನೀರು ಕುಡಿದು, ಹಾಯಾಗಿ ಮಲಗುತ್ತಿದ್ದ ವೈಭವ ನೆನಸಿಕೊಂಡರೆ ನಿಜಕ್ಕೂ ಆ ಬಾಲ್ಯದ ನಿರೂಪಣೆ ಆಸಕ್ತಿ ಹುಟ್ಟಿಸುತ್ತದೆ. ಕೆಮ್ಮಡ್ಡ ಬೋರಂಗಿ(ಒಂದು ರೀತಿಯ ಕೀಟ) ಹಿಡಿದು ದಾರ ಕಟ್ಟಿ ಹಾರಿ ಬಿಡುತ್ತಿದ್ದುದು, ಮೊಹರಂ ಹಬ್ಬದ ಅಲೈಯನ್ನು ಅನುವಿಸುವುದು, ಜಾತ್ರಿ, ಜಾಗರಣಿ, ನಾಟಕ, ಅಮಾಸಿಯ ಕಾಣಿಕೆ ಇವೆಲ್ಲವೂ ಬಾಲ್ಯದ ಸವಿ ಸವಿ ನೆನಪುಗಳನ್ನು ಹೇಳಿದಂತೆ, ಬಾಲ್ಯದ ಸಹಿಸಲಾಗದ ಕಡುಬಡತನ, ಹೊಟ್ಟೆಗೂ ತತ್ವಾರದ ದಿನಗಳು, ಶಾಲೆಗೆ ಹೋಗಲೊಲ್ಲದೇ ಹೊಟ್ಟೆ ಪಾಡು ನೊಡಬೇಕಾದ ಅನಿವಾರ್ಯತೆ, ಶಾಲಿಗೆ ಹೋಗೂ ಮೊದಲು ‘ಒಡ್ಡನಿಗೆ’ ತುಂಬಾ ತುಂಬಿ ತರಲೇಬೇಕಾಗಿದ್ದ ಸಗಣಿ, ಒಡ್ಡಣಿಗೆಯನ್ನು ತುಂಬಿಸಲೇಬೇಕಾದ ಇಲ್ಲದಿದ್ದಲ್ಲಿ ಏಟು ತಿನ್ನಬೇಕಾದ ಅನಿವಾರ್ಯತೆಯಲ್ಲಿ ಶಾಲೆಯ ಕೆಲಸ ಮಾಡಲಾಗದ ಅಸಹಾಯಕತೆ, ಹೊಟ್ಟೆ ತುಂಬಾ ಸಿಗದ ಊಟಕ್ಕಾಗಿ ಸ್ಮಶಾನದಲ್ಲಿ ಶವಸಂಸ್ಕಾರದ ಜೊತೆಗಿಟ್ಟ ತಿಂಡಿ ಕಾಯಿ ಚೂರನ್ನು ತಿಂದು ಹಸಿವನ್ನು ಇಂಗಿಸಿಕೊಳ್ಳುತ್ತಿದ್ದುದು, ‘ಬಿನ್ನಾಯ’ ಇಲ್ಲದ ಮನೆಗಳಿಗೂ ಊಟಕ್ಕೆ ಹೋಗಿ ಹೊಟ್ಟೆ ತುಂಬಾ ತಿಂದು ಬರುತ್ತಿದ್ದುದು ಕರಳು ಹಿಂಡುವಂತಹ ನಿರೂಪಣೆಯಲ್ಲಿ ಎದೆ ತಟ್ಟುತ್ತದೆ. ಅದರಲ್ಲೂ ಒಂದು ಬಿನ್ನಾಯದ ಮನೆಗೆ ಹೋದಾಗ ಮೊಟ್ಟಮೊದಲ ಬಾರಿ ಹಬ್ಬದೂಟ ಹೇಗಿರುತ್ತದೆ ಎನ್ನುವ ಅನುಭವ ದಕ್ಕಿದ್ದು ಎನ್ನುವ ಗೊರವರ್ ನಿರೂಪಣೆ ಮನಸ್ಸ್ಸ್ನ್ನು ಹಸಿಯಾಗಿಸುತ್ತದೆ. ಆ ದಿನದ ಉಟದ ವಿವರಣೆ ಓದುತ್ತ ಹೋದಂತೆ ಮನಸ್ಸು ಅಳ್ಳಕಾಗುತ್ತದೆ. ಅಷ್ಟು ರುಚಿಯಾದ ಊಟ ಜೀವನದಲ್ಲಿ ಒಮ್ಮೆಯೂ ಸವಿದಿರಲಿಲ್ಲ ಎನ್ನುವ ಮಾತು ಎದೆಯ ಮೂಲೆಯಲ್ಲೆಲ್ಲೋ ಸ್ಥಿರವಾಗಿ ನಿಂತುಬಿಡುತ್ತದೆ.

ಇಷ್ಟಾದರೂ ಕೂಡ ಊರಲ್ಲಿ ಮಾಡಿದ ನಾಟಕದ ಒಂದು ಪಾತ್ರ ಹಾಗೂ ಅದಕ್ಕೂ ಮೊದಲು ಮಾಡಿದ ನಿರೂಪಣೆ ಇಡೀ ಜೀವನವನ್ನೇ ಬ ಇಡೀ ಜೀವನವನ್ನೇ ಬದಲಾಯಿದ್ದು ಮಾತ್ರ ಗೊರವರ್ ಅದೃಷ್ಟ ಎಂದೇ ಹೇಳಬೇಕು. ನಾಟಕದ ಮಾಸ್ತರ್ ಇಲ್ಲದಿದ್ದಾಗ ಮಾತನ್ನು ಎತ್ತಿಕೊಡುವ ಹುಡುಗ ಒಂದು ದಿನ ಅಜಾನಕ್ ಆಗಿ ಯಾವುದೋ ಅನಿವಾರ್ಯತೆಯಲ್ಲಿ ಪಾಟರ್ು ಮಾಡಬೇಕಾದದ್ದು ಹಾಗು ಅದಕ್ಕಿಂತ ಮೊದಲು ಮಾಡಿದ ನಿರೂಪಣೆ ಅಲ್ಲಿ ಅತಿಥಿಯಾಗಿ ಬಂದಿದ್ದ ಕೊಟಗಿ ಡಾಕ್ಟರ್ನ್ನು ಆಕಷರ್ಿಸಿ, ಹುಡುಗನನ್ನು ತಮ್ಮ ಆಸ್ಪತ್ರೆಗೆ ಬರುವಂತೆ ಕರೆದದ್ದು ಮೊದಲ ತಿರುವಾದರೆ, ಅವರದ್ದೇ ಆಸ್ಪತ್ರೆಯಲ್ಲಿ ಕುಳಿತು ಬರೆದ ಸ್ವಾತಂತ್ರ್ಯ ದಿನಾಚರಣೆಯ ಕುರಿತಾದ ಕವನ ಗದಗದ ನವೋದಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಮತ್ತು ಆ ಪತ್ರಿಕೆಯನ್ನು ತಂದು ಅದನ್ನು ಡಾಕ್ಟರ್ರಿಗೆ ತೋರಿಸಿದಾಗ ಅವರು ಖುಷಿ ಮತ್ತು ಹೆಮ್ಮೆ ಪಟ್ಟು ‘ನೀನು ಡಾಕ್ಟರಕಿ ಕಲಿಬ್ಯಾಡ. ಸರಿಯಾಗಿ ಶಾಲಿ ಓದು’ ಎಂದು ಹುರಿದುಂಬಿಸಿದ್ದು ಬದುಕಿನ ಎರಡನೇ ತಿರುವು. ಈ ಎರಡು ತಿರುವುಗಳು ಎಮ್ಮೆ, ಆಡು ಕಾಯುತ್ತ ಶಾಲೆಗೆ ಹೋಗುವುದೆಂದರೆ ರೌರವ ನರಕಕ್ಕೆ ಹೋದಂತೆ ಎಂದು ಭಾವಿಸಿದ ಹುಡುಗನೊಬ್ಬ ಪತ್ರಕರ್ತನಾಗಲು ನೆರವಾಗಿದ್ದು. ಅದರ ಜೊತೆ ಜೊತೆಗೇ ಗುರುಗಳಾದ ಎಸ. ಸಿ. ಶೀಲವಮತರ್ ಗುರುಗಳಿಗೇ ಉದ್ದೇಶಿಸಿ ಬರೆದ ಲೇಖನವೊಂದು ನಮ್ಮನ್ನೂ ಆದರ್ೃವಾಗಿಸುತ್ತದೆ. ಒಬ್ಬ ಶಿಕ್ಷಕನಾದವನಿಗೆ ಇಂತಹ ಪ್ರೀತಿಯ ಮಾತುಗಳಿಗಿಂತ ದೊಡ್ಡ ಪ್ರಶಸ್ತಿ ಬೇಕಿಲ್ಲ ಎನ್ನಿಸುವಂತೆ ಮಾಡಲು ಈ ಲೇಕನ ಯಶಸ್ವಿಯಾಗಿದೆ.
ಇಡೀ ಪುಸ್ತಕ ಕೇವಲ ಟಿ.ಎಸ್.ಗೊರವರ್ ಅವರ ಅನುಭವದ ಚಿತ್ರಣಗಳಷ್ಟೆ ಆಗಿರದೇ ಇಡೀ ಉತ್ತರಕನರ್ಾಟಕದ ಕಡುಬಡತನ, ಕೌಟುಂಬಿಕ ಹಾಗೂ ಕೂಲಿಯ ಯಥಾವತ್ತು ಚಿತ್ರಣವನ್ನು ಕಟ್ಟಿಕೊಡುತ್ತದೆ. ಗೊರವರ್ ಹೇಳುವ ಅಪ್ಪನ ಶ್ರಮದ ಚಿತ್ರಣವಾಗಲಿ,ಅಮ್ಮನ ಆಯಾಸವೇ ಅರಿಯದ ದುಡಿಮೆಯಾಗಲಿ, ಅವರಿಬ್ಬರ ಸ್ವಾಭಿಮಾನದ ಬದುಕು, ಜಗಳ ಬೀದೀ ಹೊಡೆದಾಟಗಳಾಗಲಿ ಅವು ಕೇವಲ ಒಂದೇ ಕುಟುಂಬದ ಚಿತ್ರಣವಾಗಿರದೇ ಇಡೀ ಉತ್ತರ ಕನರ್ಾಟಕದ ಬದುಕಿಗೆ ಹಿಡಿದ ಕನ್ನಡಿಯಂತೆ ಭಾಸವಾಗುತ್ತದೆ. ಅಪ್ಪನ ಹಣೆಯ ಮೇಲೆ ದಣಿವಿನ ಗೆರೆಗಳು ಮುಡಲು ಹಿಂದೇಟು ಹಾಕುತ್ತಿವೆ ಎನ್ನುತ್ತಲೇ ಅಪ್ಪ ಜಾಲಿ ಗಿಡ ಕಡಿದು ಗದ್ದೆ ಮಾಡಿಕೊಂಡ ರೋಚಕ ಕಥೆಯನ್ನು ಹೆಮ್ಮೆಯಿಂದ ಎದುರಿಗೆ ನಿಲ್ಲಿಸುತ್ತಲೇ, ಆತ ಅವ್ವನಿಗೆ ಊರ ತುಂಬಾ ಅಟ್ಟಾಡಿಸಿಕೊಂಡು ಬಡಿಯುತ್ತಿದ್ದ ಚಿತ್ರವನ್ನೂ ಎದುರಿಗಿಡುತ್ತಾರೆ. ಅವ್ವ ಕೂಲಿ ಮಾಡುವುದರಲ್ಲೇ ಸುಖ ಕಾಣುವುದನ್ನು ಹೇಳುತ್ತಲೇ ಆಕೆ ಮಾತಿಗೆ ಮಾತು ಬೆಳೆಸಿ ಅಪ್ಪನ ಕೋಪಕ್ಕೆ ತುಪ್ಪ ಸುರಿಯುತ್ತಿದ್ದುದನ್ನೂ ತಿಳಿಸುತ್ತಾರೆ. ಓದುತ್ತ ಹೊದಂತೆ ಕೆಲವೊಮ್ಮೆ ಅವರು ತಮ್ಮ ಅಪ್ಪ ಅಮ್ಮನ ಕುರಿತು ಯಾವುದೇ ಮುಜುಗರವಿಲ್ಲದೆ ಹೇಳಿಕೊಳ್ಳುವ ಮಾತುಗಳು ಲಂಕೇಶರ ‘ಅವ್ವ’ ಕವನವನ್ನು ನೆನಪಿಸುವಂತೆ ಮಾಡುತ್ತದೆ.
ದೇವರ ಮೂರ್ತಿ ಕುರಿತು ಬಹುಚರ್ಚಿತ ಸಮಯದಲ್ಲೇ ನಾನು ಇ ಪುಸ್ತಕವನ್ನು ಓದುತ್ತಿದ್ದುದರಿಂದ ಪುಸ್ತಕದಲ್ಲಿ ಬರುವ ‘ದುರುಗಮ್ಮ ದೇವಿಗೆ ಲಂಚಕೊಟ್ಟು ಮಂತ್ರಿಸಿ ಎಸೆದ ತತ್ತಿ ತಿನ್ತಾ ಇದ್ವಿ’ ಎನ್ನುವ ಪ್ರಸಂಗ ನನಗೆ ತುಂಬಾ ಮುಖ್ಯವೆನ್ನಿಸುತ್ತದೆ. ಮಂತ್ರಿಸಿ ಎಸೆದ ತತ್ತಿಗಳನ್ನು ಎತ್ತಿಕೊಂಡು ಹತ್ತಿರದ ಲಂಬಾಣಿ ಲಚಮ್ಯಾನ ಅಂಗಡಿಯಲ್ಲಿ ಆಮ್ಲೇಟ್ ಮಾಡಿಸಿಕೊಂಡು ತಿಂದು, ಅಲ್ಲಿ ಎಸೆದ ಒಂದೆರಡು ರೂಪಾಯಿ ಕಾಸನ್ನೂ ಜೋಬಿಗಿಳಿಸಿಕೊಂಡು, ಹಾಗೆ ಸಿಕ್ಕ ದುಡ್ಡಿನಲ್ಲಿಯೇ ಹತ್ತಿರದ ದುರುಗಮ್ಮ ದೇವಿಗೆ ಒಂದು ರೂಪಾಯಿ ಲಂಚ ಕೊಟ್ಟು ಏನೂ ಆಗದಂತೆ ಕಾಪಾಡು ಎಂದು ಬೇಡಿಕೊಂಡ ಪ್ರಸಂಗವನ್ನು ಹೇಳುವ ಗೊರವರ್ ಒಂದು ಕ್ಷಣದಲ್ಲಿಯೇ ಪುರಾತನ ನಂಬಿಕೆಗೆ ಸೆಡ್ಡು ಹೊಡೆದು ನಿಂತ ಧೀರನಂತೆ ಗೋಚರಿಸುತ್ತಾರೆ. ಬಹುಶಃ ಪ್ರಾಕ್ಟಿಕಲ್ ಅನುಭವ ಇದ್ದುದರಿಂದಲೇ ಅವರು ತಮ್ಮ ಎಂ.ಎ. ವ್ಯಾಸಂಗದ ಕಾಲದಲ್ಲಿಯೂ ಸ್ಮಶಾನದಲ್ಲಿ ಕುಳಿತು ಓದುವ ಸಾಹಸ ಮಾಡಿದ್ದು ಹಾಗೂ ಶವ ಸಂಸ್ಕಾರದ ಸಮಯದಲ್ಲಿ ಅಲ್ಲಿ ಇಟ್ಟ ಹಣ್ಣು ಕಾಯಿಯನ್ನು ತಿಂದು ಹಸಿವು ನೀಗಿಸಿಕೊಂಡಿದ್ದು ಎನ್ನಿಸುತ್ತದೆ. ಯಾವುದೇ ಹಿಂಜರಿಕೆ ಇಲ್ಲದೇ ಜಾತ್ರೆಯೊಳಗೆ ಪಿಸ್ತೂಲ್ ಕದ್ದಿದ್ದನ್ನೂ, ಚಿತ್ತ ಬಕ್ಕ ಆಡಿ ಅಪ್ಪನಿಂದ ಬಡಿಸಿ ಕವದಿ ಒದ್ದೆ ಮಾಡಿದ್ದನ್ನು ಹೇಳಿಕೊಳ್ಳುವ ಗೊರವರ ಕೇವಲ ತಮ್ಮನ್ನು ಹೊಗಳಿಕೊಳ್ಳುವುದಕ್ಕಾಗಿ ಮಾತ್ರ ತಮ್ಮ ಆತ್ಮಚರಿತ್ರ ಬರೆಯುವ, ಅನುಭವ ಕಥಾನಕಗಳನ್ನು ವಿವರಿಸುವ ಸೊಗಲಾಡಿಗಳ ಎದುರು ಭಿನ್ನವಾಗಿ ನಿಲ್ಲುತ್ತಾರೆ. ಹಾಗೆ ತಮ್ಮೆಲ್ಲ ತಪ್ಪು, ತಮ್ಮ ನಿಜವಾದ ಹಿನ್ನಲೆಯನ್ನು ಬಿಚ್ಚಿಡುವುದಕ್ಕೂ ಧೈರ್ಯ ಬೇಕು. ಆ ಧಯರ್ಯವನ್ನು ಗೊರವರ ಇಲ್ಲಿ ಯಥೇಶ್ಚವಾಗಿ ತೊರಿಸಿದ್ದಾರೆ. ಹಿನ್ನುಡಿಯಲ್ಲಿ ನಟರಾಜ ಹುಳಿಯಾರರು ಬರೆದಿರುವಂತೆ ಎಲ್ಲ ವೃತ್ತಿಪರ ಬರಹಗಾರರಂತೆ ಕೊಂಚ ಜಿಪುಣ ಹಾಗು ಸ್ವಾರ್ಥಿಯಾಗಿದ್ದರೆ ಈ ನೆನಪುಗಳ ಲೋಕವನ್ನು ಹಾಗು ಅದರ ವಿಚಿತ್ರ ಸತ್ಯಗಳನ್ನು ಇನ್ನಷ್ಟು ತಾಳ್ಮೆಯಿಮದ ಶೋಧಿಸಿದ್ದರೆ ಒಂದು ಅಪರೂಪದ ಕಾದಂಬರಿಯಾಗಿಸಬಹುದಿತ್ತು ಎನ್ನುವ ಮಾತಿನಲ್ಲಿ ಎಳ್ಳಷ್ಟೂ ಸುಳ್ಳಿಲ್ಲ. ಆದರೆ ಟಿ.ಎಸ್.ಗೊರವರ ಸ್ವಾರ್ಥವಿಲ್ಲದ ತನ್ನ ಯಾವತ್ತಿನ ಮುಗ್ಧತೆಯಲ್ಲಿ ಸ್ನೇಹ ಹಸ್ತಚಾಚುತ್ತಾರೆ.
 
 
 
 

‍ಲೇಖಕರು G

1 July, 2014

2 Comments

  1. lakshmishankarjoshi.

    Really nanagu tumba aaptavada pustaka.nammuru avarura pakkave!

  2. vithal

    Olleya baraha Shridevi avre. Dhanyavada ibbarigu. . . . .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading