ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಆಟ’ದಂಗಳದ ಕಥೆಗಳು

ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥನ ‘ಆಟದ ಮೇಳ’

ಕೆರೆಮನೆ ಶಿವಾನಂದ ಹೆಗಡೆ ಅವರ ನಿರೂಪಣೆಯಲ್ಲಿ ಮೂಡಿಬಂದ ಕೃತಿಯನ್ನು ‘ಯಾಜಿ ಪ್ರಕಾಶನ’ ಪ್ರಕಟಿಸಿದೆ.

ಈ ಕೃತಿಯ ಕುರಿತ ಕಿರಣ್‌ ಭಟ್‌ ಹೊನ್ನಾವರ ಅವರ ಅನಿಸಿಕೆ ಇಲ್ಲಿದೆ.

-ಕಿರಣ್‌ ಭಟ್‌ ಹೊನ್ನಾವರ

ಕಳೆದ ವರ್ಷವಷ್ಟೇ ರಂಗನಟ ಹುಲಿಮನೆ ಸೀತಾರಾಮ ಶಾಸ್ತ್ರಿಯವರ ಆತ್ಮಕಥೆ ʼಹುಲಿಮನೆ ಸೀತಾರಾಮ ಶಾಸ್ತ್ರಿ ರಂಗಕಥನʼ ಪುಸ್ತಕ ಓದಿದ್ದೆ. ಈಗ ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥೆʼ, ಆಟದ ಮೇಳʼ ಎತ್ತಿಕೊಂಡು ಓದ್ತಿದ್ದರೆ ಎರಡೂ ಹೂಬೇ ಹೂಬು. ಇಬ್ಬರ ಬದುಕನ್ನು ಎದುರಿಗಿಟ್ಟು ನೋಡಿದರೆ ಒದರದ್ದೊಂದು ಕಾರ್ಬನ್‌ ಕಾಪಿ. ಉತ್ತರ ಕನ್ನಡದ ಈ ಇಬ್ಬರೂ ಕಲಾವಿದ, ಸಂಘಟಕರ ಕಥೆ ಒಂದೇ. ಅದೇ ಉಮೇದು. ಅದೇ ಕಷ್ಟ, ಅದೇ ನಷ್ಟ ಅದೇ ಯಶಸ್ಸು. ಒಬ್ಬರು ರಂಗಭೂಮಿಯವರಾದರೆ ಇನ್ನೊಬ್ಬರು ಯಕ್ಷಗಾನದವರು ಅಷ್ಟೆ.

ಸುಮಾರು ಐವತ್ತು ವರ್ಷಗಳ ಕಾಲ, ಚಂದದಿಂದ ನಡೆಯುತ್ತಿದ್ದ ಅಂಗಡಿಯನ್ನು ಬಿಟ್ಟು ಮೇಳ ಕಟ್ಟುವ ಹುಚ್ಚಿಗೆ ಬಿದ್ದು ʼಆಟʼ ವನ್ನೇ ಬದುಕಿದ ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥೆ ʼಆಟದ ಮೇಳʼ ವನ್ನು ಹೆಸರಾಂತ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ನಿರೂಪಿಸಿದ್ದಾರೆ. ಕೆರೆಮನೆ ಮೇಳ ಮತ್ತು ನಾರಾಯಣ ಭಟ್ಟರ ಮೂರು ತಲೆಮಾರುಗಳ ಸಂಬಂಧದ ಕಾರಣಕ್ಕಾಗಿ ಈ ಕಥೆ ಆಪ್ತವೂ,ಪ್ರಾಮಾಣಿಕವೂ ಆಗಿದೆ.ಅಂತೆಯೇ ಅದು ಒಂದು ಕಾಲಘಟ್ಟದ ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿಯ ಕಥಾನಕವೂ ಆಗಿದೆ.

ಈಗ ತೊಂಬತ್ತೆರಡರಲ್ಲಿರುವ ನಾರಾಯಣ ಭಟ್ಟರು ಈಗಲೂ ಅಟದ ಸುದ್ದಿ ಕೇಳಿದರೆ ಎದ್ದು ತುಂಡುಗಪ್ಪು ಹಾಕುವವರೇ. ತಾಳಮದ್ದಳೆಯ ಅರ್ಥದಾರಿಯೂ ಆಗಿರುವ ಅವರು ಮೂರೂ ತಲೆಮಾರಿನ ʼಆಟʼ ದ ಕಲಾವಿದರನ್ನು ಕಂಡವರು. ಯಕ್ಷಗಾನದ ದಂತಕಥೆಗಳಾದ ಮೂಡ್ಕಣಿ ನಾರಾಯಣ ಹೆಗಡೆ, ಕರ್ಕಿಯ ಅಜ್ಜ ಪರಮಯ್ಯ ಹಾಸ್ಯಗಾರರು, ಮೂರೂರು ದೇವರ ಹೆಗಡೆಯವರು, ಕೆರೆಮನೆ ಶಿವರಾಮ ಹೆಗಡೆ ಯವರ ಜೊತೆಗೆ ಒಡನಾಡಿದವರು.ಇವರನ್ನು ʼಈ ಭಾಗದ ಯಕ್ಷಗಾನದ ರತ್ನದ ಮೂಗುತಿಯಂತೆ ಇದ್ದವರುʼ ಎಂದು ಭಟ್ಟರು ಬಣ್ಣಿಸುತ್ತಾರೆ. ಚೆನ್ನಾಗಿ ನಡೆಯುತ್ತಿದ್ದ ವ್ಯಾಪಾರ ಬಿಟ್ಟು ಆಟದ ಮೇಳ ಕಟ್ಟುವ ಯೋಚನೆ ಮಾಡುತ್ತಾರೆ. ಅದೂ ಆಗ ಚಾಲ್ತಿಯಲ್ಲಿದ್ದ ಮೂರೂ ಮೇಳಗಳ ಪ್ರಸಿದ್ಧರನ್ನು ಸೇರಿಸಿ ಒಂದೇ ರಂಗದ ಮೇಲೆ ತರುವ ಕ್ರಾಂತಿಕಾರಿ ಆಲೋಚನೆ. ಇದಕ್ಕೆ ಎಲ್ಲ ಮಹಾನ್‌ ಕಲಾವಿದರೂ ಸಮ್ಮತಿಸುತ್ತಾರೆ ಕೂಡ. ಇಂದಿನ ವ್ಯಾಪಾರೀ ಯಕ್ಷಗಾನದ ಯುಗದಲ್ಲಿ ನಿಂತು ಇದನ್ನೆಲ್ಲ ಓದುತ್ತಿದ್ದರೆ ಬೆರಗೂ ಹೆಮ್ಮೆಯೂ ಆಗುತ್ತದೆ. ವೈಯಕ್ತಿಕ ಪ್ರತಿಷ್ಠೆಗಳೇ ಮುಖ್ಯವಾಗಿ ಹೋಗಿರುವ ಈ ದಿನಗಳಲ್ಲಿ ಅದೆಂತೆಂಥ ಕಲಾವಿದರು ಒಟ್ಟಿಗೆ ಸೇರಿ ಆಟವಾಡುವ ವಿಶಾಲ ಮನಸ್ಸು ತೋರಿಸಿದ್ದರ ಕುರಿತು ನಿಜಕ್ಕೂ ಹೆಮ್ಮೆಯೆನಿಸುತ್ತದೆ.

ಉತ್ತರ ಕನ್ನಡದಲ್ಲೊಂದು ಪೂರ್ಣ ಪ್ರಮಾಣದ ಅಟದ ಮೇಳ ಕಟ್ಟಿದ ಅವರ ಸಿದ್ಧತೆಗಳ ವಿವರ ತುಂಬ ಚೆನ್ನಾಗಿದೆ.ತಟ್ಟಿಯ ಟಾಕೀಸಿನಿಂದಾಚೆ ಬಂದು ಬಟ್ಟೆಯ ಟೆಂಟಿಗೆ ತೆರೆದುಕೊಂಡಿದ್ದು, ಕಟ್ಟಿಗೆಯ ಆರಾಂ ಕುರ್ಚಿಗಳು ಪ್ರೆಕ್ಷಾಂಗಣವನ್ನು ಅಲಂಕರಿಸಿದ್ದು ಹೀಗೆ ಹಲವಾರು. ಮುಖ್ಯವಾಗಿ ಮೊದಲ ಬಾರಿಗೆ ಈ ಭಾಗದಲ್ಲಿ ಯಕ್ಷಗಾನ ಸ್ಟೇಜ್‌ ಗೆ ವಿದ್ಯುದ್ದೀಪಗಳನ್ನು ತಂದವರು ಅವರು. ಇಂಥದೊಂದು ತಯ್ಯಾರಿಯಲ್ಲಿ ಸಹಾಯ ಮಾಡಿದ ಪ್ರತಿಯೊಬ್ಬರನ್ನೂ ಅವರು ಸ್ಮರಿಸದೆ ಬಿಡುವದಿಲ್ಲ. ಎಲ್ಲಿಯ ವರೆಗೆ ಎಂದರೆ ಟೆಂಟ್‌ ಹೊಲಿದುಕೊಟ್ಟ ಹೊನ್ನಾವರದ ಟೈಲರ್‌ ರುಜಾರಿಯ ವರೆಗೂ.

ನಂತರದ ಪುಟಗಳಲ್ಲೆಲ್ಲ ಮೇಳದೊಂದಿಗಿನ ಅವರ ಅಗಾಧ, ಶ್ರೀಮಂತ ಅನುಭವಗಳು. ಪ್ರತಿದಿನದ ಆಟವೂ ಒಂದು ಛಾಲೇಂಜೇ ಎನಿಸುವಂಥ ಸನ್ನಿವೇಶಗಳು. ಉಸಿರುಗಟ್ಟಿಸಿಬಿಡುವಂಥ ಘಟನೆಗಳು. ಅದ್ಭುತವಾದ ಪ್ರಯೋಗಗಳು. ಇನ್ನೇನು ಕೈಚೆಲ್ಲಬೇಕು ಎಂದಾಗ ಹುಡುಕಿ ಬಂದು ಉಪಕರಿಸಿದವರನ್ನು ಅವರು ಮರೆಯುವದಿಲ್ಲ. ಕೈಕೊಟ್ಟ ಕಲಾವಿದರ ಬಗ್ಗೆ ಹೇಳುವಾಗಲೂ ಕಹಿಯುಗುಳುವುದಿಲ್ಲ. ತಮ್ಮನ್ನೆಲ್ಲೂ ಹೊಗಳಿಕೊಳ್ಳುವದೇ ಇಲ್ಲ. ಅಂಥದೇನಿದ್ದರೂ ಆಗ ಎಲ್ಲವನ್ನೂ ಪಣಕ್ಕಿಟ್ಟು ಪಾತ್ರ ಮಾಡಿದ ಕಲಾವಿದರ ಬಗ್ಗೆಯೇ. ಪುಸ್ತಕದ ಹಲವಾರು ಪುಟಗಳು ಅಂಥ ವ್ಯಕ್ತಿತ್ವಗಳಿಗೇ ಮೀಸಲಿದೆಯೆಂದರೆ ಅದರ ಅಗಾಧತೆಯನ್ನು ಅರ್ಥಮಾಡಿಕೊಳ್ಳಬಹುದು.

ಈ ಪುಸ್ತಕ ಉತ್ತರ ಕನ್ನಡದ ಒಂದು ಶತಮಾನದ ಯಕ್ಷಗಾನ ಪರಂಪರೆಯ ದಾಖಲೆಯೂ ಹೌದು. ನಾವೆಲ್ಲ ಕಂಡೂ ಕೇಳಿರದ ಅನೇಕ ವಿವರಗಳಿವೆ ಇಲ್ಲಿ.

ʼಗಲ್ಲಾಮಲ್ಲಿ ಪ್ರಕರಣʼ ಇಂಥವುಗಳಲ್ಲೊಂದು. “ಅಂದಿನ ಬಯಲಾಟಗಳಲ್ಲಿ ಗಲ್ಲಾಮಲ್ಲಿ ಅಂತ ಒಂದು ಹಾಸ್ಯ ಪ್ರಸಂಗ ನಡೀತಿತ್ತು. ನಿಜವಾದ ಕತೆ ಆರಂಭವಾಗುವ ಮೊದಲು, ಕೋಡಂಗಿ ಪ್ರವೇಶ ಮುಗಿದ ಮೇಲೆ ಒಂದು ಹೆಣ್ಣು, ಒಂದು ಗಂಡು ವೇಷ ಬಂದು ರಂಗದಲ್ಲಿ ಸ್ವಲ್ಪ ಕೀಳು ಮಟ್ಟದ ಹಾಸ್ಯ ಮಾಡುತ್ತಿದ್ದರು. ಹತ್ತು ನಿಮಿಷ ನಡೆಸಿ ಅವರು ಚೌಕಿ ಮನೆಗೆ ಹೋಗುವದು ಅಷ್ಟೆ. ಈ ಸನ್ನಿʼವೇಷʼವನ್ನು ನೋಡಲಿಕ್ಕೇ ಪ್ರತ್ಯೇಕ ಗುಂಪೊಂದು ಬರುತ್ತಿತ್ತು. ಅವರಿಗೆ ಈ ಸಂಗತಿಯನ್ನು ರಂಗಸ್ಥಳದಲ್ಲಿ ಮಾಡಬಾರದೆಂಬುದು ಗೊತ್ತಿಲ್ಲ. ಅವರ ಅಭಿರುಚಿಗೆ ಅಷ್ಟೇ ಸಾಕಾಗುತ್ತಿತ್ತು. ಕಾಲಕ್ರಮೇಣ ಯಕ್ಷಗಾನದಲ್ಲಿ ಈ ಪ್ರಕರಣ ಮಾಯವಾಯಿತು.” ಇಂಥ ಅಪರೂಪದ ವಿವರಗಳ ಜೊತೆಗೆ ಯಕ್ಷಗಾನದ ವಿವಿಧ ಶೈಲಿ, ಮಾತು, ತಂತ್ರಗಳ ಕುರಿತ ಅನೇಕ ವಿವರಗಳಿವೆ.
ಕೆರೆಮನೆಯವರ ಜೊತೆ ಬಹುಕಾಲ ಒಡನಾಡಿದ ಮತ್ತು ಉಪಕೃತರಾದ ಅವರು ಕೆರೆಮನೆ ಶಂಭು, ಗಜಾನನ, ಮಹಾಬಲ ಹೆಗಡೆಯವರನ್ನು ಅಲ್ಲಲ್ಲಿ ಸ್ಮರಿಸುತ್ತಾರೆ. ಆದರೆ ವಿಮರ್ಶಾತ್ಮಕವಾಗಿಯೂ ಹೇಳುತ್ತ ಹೋಗುತ್ತಾರೆ. ಅಲ್ಲಲ್ಲಿ ದಕ್ಷಿಣ ಕನ್ನಡದ ಕಲಾವಿದರು, ಮೇಳದ ಸಂಘಟಕರ ಕುರಿತ ವಿವರಗಳೂ ಇವೆ.

ಹಲವಾರು ದಶಕಗಳ ಅವರ ಆಟದಂಗಳದ ಕಥೆಯನ್ನು ಕೇಳುತ್ತ, ಸಂವಾದಿಸುತ್ತ, ಕೆರೆಮನೆ ಶಿವಾನಂದ ಹೆಗಡೆ ಇಂಥದೊಂದು ಆತ್ಮಕಥನವನ್ನು ಸರಳವಾಗಿ,ಸಂಯಮದಿಂದ ನಿರೂಪಿಸಿದ್ದಾರೆ.ಕಡತೋಕೆಯ ಗೋಪಾಲಕೃಷ್ಣ ಭಾಗ್ವತರು ಸೊಗಸಾದ ಮುನ್ನುಡಿ ಬರೆದಿದ್ದಾರೆ. ಹಿಂಪುಟದಲ್ಲಿ ಗುರುರಾಜ ಮಾರ್ಪಳ್ಳಿಯವರ ಮಾತುಗಳಿವೆ. ಪುಸ್ತಕದುದ್ದಕ್ಕೂ ಸತೀಶ ಯಲ್ಲಾಪುರ, ವಾಗೀಶ ಶಿವಮೊಗ್ಗಾ ರವರ ಚಿತ್ರಗಳಿವೆ. ಕೊನೆಯ ಪುಟಗಳಲ್ಲಿ ಅನೇಕ ಚಿತ್ರಗಳಿವೆ.

ಸಂತೆಗುಳಿ ನಾರಾಯಣ ಭಟ್ಟರ ಈ ಅತ್ಮಕಥನ ಬರೇ ಆತ್ಮಕಥನವಾಗದೇ, ಒಂದು ಕಾಲಘಟ್ಟದ ಕರಾವಳಿಯ ಯಕ್ಷಗಾನದ ಏಳು ಬೀಳಿನ ಕಥನವೂ ಆಗುತ್ತದೆ.
ಯಾಜಿ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.
ಪುಸ್ತಕದ ಬೆಲೆ ರೂ 220/-.
ಪುಸ್ತಕಗಳಿಗಾಗಿ: 9448722800 ಸಂಪರ್ಕಿಸಬಹುದು.

‍ಲೇಖಕರು Admin

21 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading