
ಶಿವು ಮೋರಿಗೇರಿ
ಈ ಬಾರಿಯ ಹೊಸ ವರ್ಷಕ್ಕೂ ಹೊಚ್ಚ ಹೊಸ ಬಯಕೆಗಳ ಸೇರ್ಪಡೆ ಬೇಕಾ ?
ಆಗ್ಲೇ ರೂಮಿಗೊಂದು ಹೊಸ ಕ್ಯಾಲೆಂಡರ್ ಬಂದಾಯ್ತು. ಅಂದ್ರೆ ಈ ವರ್ಷ ಹಳತಾಗಿ ಹೊಸತೊಂದು ವರ್ಷ ಬ್ಯಾಡಾಂದ್ರು ಬಂದೇ ಬರುತ್ತೆ. ಅದೂ ಜಗ ನಿಯಮ. ನೆಪ್ಪಿಟ್ಕೊಳ್ಳಿ ಬದಲಾವಣೆ ಕೂಡಾ. ತಕ್ಷಣ ಹಳೇ ಕ್ಯಾಲೆಂಡರ್ ನೋಡಿದೆ. ಸಾವಿರಾರು ಭಾವಗಳ ದಿಬ್ಬಣ. ಒಂದಷ್ಟು ಖುಷ್, ಒಂದಷ್ಟು ಕಸಿವಿಸಿ, ಒಂದಷ್ಟು ಮೌನ, ಮತ್ತಷ್ಟು ತಿರುವುಗಳು. ಇನ್ನೂ ಏನೇನೋ ಸುಳಿದು ಹೋದವು ತಲೆಯಲ್ಲಿ. ಜುಜುಬಿ ಒಂದೇ ಒಂದು ವರ್ಷದಲ್ಲಿ ನಮ್ಮೆಲ್ಲರ ಜಿಂದಗಿಯೊಗಳಗೆ ಬೇಕಾದ್ದು ನಡೆದುಬಿಡುತ್ತೆ. ಅದನ್ನೆಲ್ಲಾ ತಡೆಯೋಕ್ಕೂ ಹಿಡಿಯೋಕ್ಕೂ ನಾವ್ಯಾರು, ನೀವ್ಯಾರು ? ಕೆಲವೆಲ್ಲಾ ನಮ್ಮ ಕೈ ಮೀರಿಯೇ ನಡೀತವೆ. ಆಗ ಸುಮ್ಮನೆ ಬರೀ ನೋಡ್ತಾ ನಿಲ್ಲೋದೊಂದೇ ನಮ್ಮ ಪಾತ್ರ ಅನ್ನಿಸಿಬಿಡುತ್ತೆ. ಇದೆಲ್ಲಾ ಎಷ್ಟು ಜನಕ್ಕೆ ಬೇಕೋ ಬೇಡ್ವೋ ಗೊತ್ತಿಲ್ಲ. ಅದೂ ಕ್ಯಾಲೆಂಡರಿನ ಕೊನೆಯ ಹಾಳೆಯ ಕೊನೆಯ ಕಾಲಮ್ಮಿನ ಕೊನೆಯ ನಂಬರನ್ನು ನೋಡಿದಾಗ ಮನಸ್ಸು ಚೂರು ಛ್ರುರ್ ಅಂತದೆ. ವಲ್ಲೆ ಅಂದ್ರೂ ಕಳೆದ ಹೊಸ ವರ್ಷಾಚರಣೆಯ ಸಂಭ್ರಮಾಚರಣೆಯಿಂದ ಇವತ್ತಿನವರೆಗೂ ನಾವು ಕಡಿದು ಕಟ್ಟೆ ಹಾಕಿದ್ದೆಲ್ಲಾ ಹೊಳ್ಳಿ ಕಣ್ಣೊಳಗೆ ಬಂದು ಹೊಳೆ ತುಂಬುತ್ತೆ. ತುಂಬಬೇಕು ಅದೇ ಚಂದ.

ಅದೇನೋ ಗೊತ್ತಿಲ್ಲ ಈ ಡಿಸೆಂಬರ್ 31 ಅಂದ್ರೆ ಪ್ರತಿಯೊಬ್ಬರಿಗೂ ಹರೇಕ್ಕೆ ಬಂದ ಹಾವೊಂದು ಪೊರೆ ಕಳಚುವ ಸಂಭ್ರಮದ ಘಳಿಗೆ ಅನ್ನಿಸಿ ಬಿಡ್ತದೆ ನಂಗೆ. ಈ ಭಾವ ಸುಳ್ಳಿರಬಹುದು ಕೆಲವರ ಮಟ್ಟಿಗೆ. ಈ ಕ್ಷಣದವರೆಗಿನ ಜಂಜಡವನ್ನೆಲ್ಲಾ ಜತನದಿಂದಲೇ ಬದಿಗಿಟ್ಟು ಒಮ್ಮೆ ಹಳೇ ಜನವರಿ ಕಡೆ ಹೊಳ್ಳಿ ನೋಡಿ. ಅವತ್ತು ಅದೇನು ಉತ್ಸಾಹದಿಂದ ಏನೇನೋ ಅಂದ್ಕೊಂಡು ಎಂತೆಂಥಹದ್ದೋ ಯೋಜನೆಗಳನ್ನ ಹಾಕಿಕೊಂಡು ಹೆಂಗೆಲ್ಲಾ ಇದ್ದುಬಿಡಬೇಕು ಅಂದ್ಕೊಂಡಿರ್ತೀವಿ ಅಲ್ವಾ ? ತಪ್ಪೇನೂ ಇಲ್ಲ. ಈಗ ಈ ವರ್ಷದ ಕೊನೆಯ ಹಾಳೆಯ ತುದಿಯಲ್ಲಿದ್ದಾಗಲಾದ್ರೂ ನಾವು ಮೊದಲ ಹಾಳೆಯಲ್ಲಿ ಅಂದ್ಕೊಂಡ ಯಾವುದಾದ್ರೂ ಒಂದನ್ನಾದ್ರೂ ರೀಚ್ ಆಗಿದಿವಾ ? ಅಷ್ಟಕ್ಕೂ ನಾವು ಅಂದ್ಕೊಂಡಿದ್ದೆಲ್ಲಾ ಯಾವುದೋ ಝೂಮ್ ನಲ್ಲಿ ಹರಿದು ಬಂದ ಝರಿಯಾ ? ಅಂತೆಲ್ಲಾ ಯೋಚಿಸಿದ್ರೆ ಕೆಲವರಿಗೆ ಒಳ್ಳೆಯ ರಿಸಲ್ಟ್ ಸಿಕ್ಕಿರಬಹುದು, ಕೆಲವರಿಗೆ ಅಂದ್ಕಂಡಿದ್ದೆಲ್ಲಾ ಉಲ್ಟಾ ಹೊಡೆದಿರಬಹುದು.
ಹಾಗೆ ನೋಡಿದ್ರೆ ಜನವರಿಯೇ ಎಲ್ಲರಿಗೂ ಹೊಸ ವರ್ಷವಲ್ಲ. ಹದವಾದ ಭೂಮಿಗೆ ಬಿತ್ತಿದ ಬೀಜಗಳು ಸಾಲಿಡಿದು ಮೊಳಕೆಯೊಡೆದು ನಳಿಸಿದ ದಿನವೇ ರೈತನೋರ್ವನ ಕಂಗಳಲ್ಲಿ ಹೊಸ ವರ್ಷದ ಹರ್ಷ. ಚುನಾವಣೆಯಲ್ಲಿ ಗೆದ್ದು ಬಂದಾಗಲೇ ರಾಜಕಾರಣಿಗೊಂದು ಹೊಸ ವರ್ಷಾಚರಣೆಯ ಸಂಭ್ರಮ. ಅವರವರ ಹೆಸರಲ್ಲಿ ಕರಗ, ಜಾತ್ರೆಗಳು ನಡೆವ ದಿನವೇ ಆಯಾ ದೇವರುಗಳಿಗೂ ಹೊಸ ವರ್ಷದ ಮೆರಗು. ಕೊನೆಯ ರಿಸಲ್ಟ್ ಬಂದಾಗಲೇ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಬೆಳಕು. ಮಗ್ಗುಲಲ್ಲಿ ಚೊಚ್ಚಲ ಕೂಸು ತೇವ ತುಟಿಗಳಿಗೇ ನಾಲಿಗೆ ಸವರಿಸಿ ಬಾಯಿ ತೆರೆದು ಇಷ್ಟಗಲ ಕಣ್ಣು ಮಿಟುಕಿಸಿ ಅವ್ವನತ್ತ ನೋಡಿದಾಗಲೇ ಆ ತಾಯಿಗೆ ಹೊಸದೊಂದು ತೇಜಸ್ಸಿನ ಮೆರವಣಿಗೆಯ ಘಳಿಗೆಯೇ ನೂತನ ವರ್ಷಾಚರಣೆ. ಜನ್ಮದಿನಾಚರಣೆ ಆಚರಿಸಿಕೊಳ್ಳುವ ಘಳಿಗೆ ಪ್ರತಿಯೊಬ್ಬರಿಗೂ ವೈಯುಕ್ತಿಕವಾದ ಹೊಸ ಪರ್ವ ಶುರು. ಆದ್ರೆ ಲೋಕ ರೂಢಿಗಾಗಿ ಈ ಹನ್ನೆರಡು ತಿಂಗಳ ಕ್ಯಾಲೆಂಡರ್ ಬರಿ ವರ್ಷ ಸೂಚಕದ ನೆಪವಷ್ಟೆ.
ಕಳೆದ ವರ್ಷವಲ್ಲ ಬಹುಶಃ ಯಾವ ವರ್ಷವೂ ನಾನು ಯಾವುದೇ ಕಟ್ಟುಪಾಡುಗಳನ್ನು ಹಾಕಿಕೊಳ್ಳಲ್ಲ. ಸಡನ್ನಾಗಿ ಕಾಲ ಕೊಡುವ ಶಾಕ್ ಗಳನ್ನು ಆಸ್ವಾದಿಸುತ್ತಾ ತಿಳಿ ತಿಳಿ ತಿಳಿಯಾಗಲು ಪ್ರಯತ್ನಿಸೋದೊಂಥರಾ ಹಿತ. ಕಾಲ ಅನ್ನೋ ಕಾನ್ಫಿಡೆನ್ಸಿಯಲ್ ಕಿಂಗ್ ನಮ್ಮ ಕೆರಿಯರ್ ನಲ್ಲಿ ಕಾರ್ಡ್ ಗಳನ್ನ ಶೆಫಲ್ ಮಾಡ್ತಾ ಆಟ ಆಡೋದನ್ನಂತೂ ಬಿಡಲ್ಲ. ಹಾಗೆಂದು ಉಡಾಫೆಯಾಗಿಯೂ ಕಾಲ ತಳ್ಳೋಕ್ಕಾಗಲ್ಲ. ಹಾಗಾಗಿಯೇ ಸ್ವಲ್ಪ ಸಾವರಿಸಿಕೊಂಡು ನನ್ನೊಳಗೆ ನಾನೊಂದು ಹಿನ್ನೋಟ ಬೀರಿದೆ. ಬಿಡಿ ಅದನ್ನೆಲ್ಲಾ ಹೇಳಕ್ಕಾಗಲ್ಲ. ಅಥವಾ ಕಾಲವಿನ್ನೂ ಮಾಗಿಲ್ಲ. ಕಾಲ ಕೂಡಿಬರದ ಹೊರತು ಯಾವುದೂ ಘಟಿಸಬಾರದು ಫಲ ವಗರಾಗಿತ್ತೆ.

ಕಳೆದ ವರ್ಷದ ನಮ್ಮ ಬದುಕಲ್ಲಿ ಇಲ್ಲಿವರೆಗೂ ಅದೇನೇನಾಗಿದೆಯೋ ಎಲ್ಲವನ್ನೂ ಇರ್ಲಿ ಬಿಡು ಅಂತ ಬಿಟ್ಟಾಕಿ ಬಿಡಬಹುದು. ಆದ್ರೆ ಈ ವರ್ಷದಲ್ಲಿ ಬಾಕಿ ಉಳಿದಿರುವ ಗೋಲ್ ಗಳತ್ತ ಒಮ್ಮೆ ತಿರುಗಿ ನೋಡುವ ಮರ್ಜಿ ಇರಬೇಕು. ಯಾವೆಲ್ಲಾ ಗೋಲ್ ಗಳು ಯಾಕೆ ಬಾಕಿ ಉಳಿದವೆಂದು ನಮಗೇ ಗೊತ್ತಿರುತ್ತೆ. ಪ್ರತಿ ಗುರಿಯೂ ತನ್ನದೇ ಸಮಯವನ್ನು ಪಕ್ಕಾ ಕೇಳುತ್ತೆ. ಬಾಕಿ ಉಳಿದ ಬಯಕೆಗಳ ನಡುವೆಯೇ ಈಬಾರಿಯ ಹೊಸ ವರ್ಷಕ್ಕೂ ಹೊಚ್ಚ ಹೊಸ ಬಯಕೆಗಳ ಸೇರ್ಪಡೆ ಬೇಕಾ ? ಈಗ ಉಳಿದ ಗೋಲ್ ಗಳ ಸಾಲ ಚುಕ್ತವಾಗ್ತವಾ ? ಏನಾದ್ರೂ ಆಗಲಿ ದಿಢೀರ್ ಬದಲಾಗುವ ಹುಂಬುತನಕ್ಕೆ ಹೋಲುವ ನಿರ್ಧಾರಗಳನ್ನು ಬಿಟ್ಟು ಕೈಗೆಟುಕುವ ಯಾವ ಕನಸನ್ನಾದ್ರೂ ವರ್ಷದ ಪ್ಯಾಕೆಜ್ ನಲ್ಲಿ ಕಾಣೋದು ಸೂಕ್ತ. ಆಗಲೇ ಝಿಂಗಲ್ ಬೆಲ್ ನಿನಾದ, ಹಚ್ಚಿಟ್ಟ ಹಣತೆಗಿಷ್ಟು ತಂಗಾಳಿ, ಕತ್ತಲೆಯೇ ಸುಳಿಯದ ಗೆಲುವು ದಕ್ಕೋದು. ಒಂದಂತೂ ನಿಜ, ಕಳೆದ ಕ್ಷಣಗಳಲ್ಲಿ ಕಳೆದುಕೊಂಡದ್ದನ್ನೇ ಜ್ಞಾಪಿಸಿಕೊಂಡು ಈ ಇಯರ್ ಎಂಡನ್ನು ಮೂಢಿಯಾಗಿ ಕಳೆಯೋ ಬದಲು, ಈ ವರ್ಷ ನಾವು ಪಡೆದುಕೊಂಡ ಶೈನಿಂಗ್ ಮೂಮೆಂಟ್ ಗಳನ್ನು ಮೆಲುಕುತ್ತಾ ಸಾಧ್ಯವಾದ್ರೆ ಆತ್ಮೀಯ ವಿದಾಯವನ್ನು ಈ ವರ್ಷಕ್ಕೆ ಸೂಚಿಸಿದ್ರೆ ವೈನಾಗಿರುತ್ತೆ. ಯಾಕಂದ್ರೆ ಇಲ್ಲಿ ಯಾವುದೂ ಶಾಶ್ವತವಲ್ಲ. ಕಳೆದ ಸೋಲುಗಳಿಗೆಲ್ಲಾ ಗೋಲಿ ಮಾರೋ ಭಾಯ್, ತುಂಬಾ ಯೋಚನೆ ಮಾಡ್ದೆ ಎಲ್ರಿಗೂ ಹೇಳಿಬಿಡಿ ವಿಷ್ ಯು ಹ್ಯಾಪಿ ನ್ಯೂ ಇಯರ್..



ಭ್ರಮೆಗಳಾಚೆ ಇರುವ ವಾಸ್ತವದ ಬದುಕಿನ ಅನಾವರಣವನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ.ಶುಭಾಶಯ.
ನಿಜ. ಹೊಸ ಕ್ಯಾಲೆಂಡರ್ ಬಂತೆಂದರೇ ಏನೋ ಫುಲಕ. ಅದನ್ನ ಪ್ರೇಮಿಯನ್ನು ನೇವರಿಸುವಂತೆ ಅದರ ಮೇಲೆ ಕೈಯ್ಯಾಡಿಸುತ್ತ, ಏನೆಲ್ಲಾ ಕನಸುಗಳು , ಆಶಯಗಳು ಕಣ್ತುಂಬಿಕೊಳ್ಳುತ್ತದೆ. ಹಿಂದೆಯೇ ಈ ವರುಷ ಮುಗಿದೇ ಹೋದದ್ದು ನೆನಪಾಗಿ ಮನದೊಳಗೆ ತಳಮಳ. ಏನೋ ಕಳೆದು ಹೋಗುತ್ತಿರುವಂತೆ… ಏನೋ ಅಪೂರ್ಣಗೊಂಡಂತೆ…. ಏನೋ ಮತ್ತೆ ಸಿಗಲಾರದೇನೋ ಎಂಬಂತೆ… ಯಾವತ್ತೂ ಈ ತೆರನ ಮಿಶ್ರ ಭಾವನೆಗಳಿಂದಲೇ ವರ್ಷ ಮುಗಿಯುತ್ತೆ ಮತ್ತೆ ಪ್ರಾರಂಭವಾಗುತ್ತೆ. ಮತ್ತೆ ಎಲ್ಲವೂ ಸಹಜ ಎಂಬಂತೆ ನಡೆದುಕೊಂಡು ಹೋಗುತ್ತೆ. ಶಿವು ಮೋರಿಗೆರೆಯವರ ಬರಹ ತುಂಬಾ ಚನ್ನಾಗಿದೆ.