ದೂರದ ಊರಿಂದ ಬಂದು ಆಗುಂಬೆಯಲ್ಲಿ ನಿಲ್ಲುವವರಿಗೆ ಹೊಟ್ಟೆ ತುಂಬುವಷ್ಟು ಊಟ, ಮಲಗಲು ಬೆಚ್ಚನೆಯ ಜಾಗ, ಮನೆಯ ಬಂಧುಗಳಿಗಿಂತ ಹೆಚ್ಚಿನ ಆತ್ಮೀಯತೆ ತೋರಿಸುವ ಕಸ್ತೂರಕ್ಕನ ಮನೆ ಇರುವುದು ಆಗುಂಬೆಯಲ್ಲಿ.
ನಾವು ಅಲ್ಲಿಗೆ ಹೋದಾಗ, ಒಬ್ಬರಿಗೊಬ್ಬರು ಮಾತಾಡುವುದು ಕೇಳದಷ್ಟು ರಪರಪ ಸುರಿಯುವ ಮಳೆಗೆ ನೂರಾ ಇಪ್ಪತೈದು ವರುಷ ಹಳೆಮನೆಯ ಅಡುಗೆ ಮನೆಯಲ್ಲಿ ಬಾಳೆಕಾಯಿ ಪಲ್ಯಕ್ಕೆ ಚುಂಯನೆ ವಗ್ಗರಣೆ ಬೀಳುತ್ತಿತ್ತು. ಉದ್ದನೆಯ ಅಡುಗೆ ಮನೆಯ ಮೇಲೆ ಕಟ್ಟಿರುವ ಮಂಗಳೂರು ಸೌತೇಕಾಯಿ, ನೀಟಾದ ಸ್ಟೀಲ್ ಪಾತ್ರೆಗಳು, ಹಳೆಯ ರುಬ್ಬುಕಲ್ಲು, ಸೌದೆ ಒಲೆಯ ಮಧ್ಯ ತನ್ನ ಮಂಡಿ ನೋವನ್ನು ಹಿಡಿದುಕೊಂಡು ಕಸ್ತೂರಕ್ಕ ಸಾಕ್ಷಾತ್ ತಾಯಿಯ ಹಾಗೆ ಕೈಯ್ಯಲ್ಲಿ ಸೌಟು ಹಿಡಿದು, ಬಾಯಿ ತುಂಬಾ ಅಕ್ಕರೆಯ ಮಾತಾಡುತ್ತಿದ್ದರು.
ಒಂದು ಕಾಲದಲ್ಲಿ ಆಗುಂಬೆಯ ಘಾಟಿಯಲ್ಲಿ ರಾತ್ರಿ ಬಸ್ಸುಗಳು ಇಳಿಯುತ್ತಿರಲಿಲ್ಲ. ಪ್ರಯಾಣಿಕರು ಆಗುಂಬೆಯ ತನಕ ಬಂದು ಅಲ್ಲಿಯೇ ಉಳಿಯಲು ಸರಿಯಾದ ವ್ಯವಸ್ಥೆಯೂ ಇರಲಿಲ್ಲ. ಪುಟ್ಟ ಊರಾದ ಆಗುಂಬೆಯಲ್ಲಿ ಕಸ್ತೂರಕ್ಕನ ದೊಡ್ಡ ಮನೆಯೆಂಬ ಹಳೆಯ ಮನೆಯೊಂದು ಹೀಗೆ ಬಂದವರಿಗೆ ಒಂದು ರಾತ್ರಿ ಕಳೆಯಲು ಅನುಕೂಲ ಮಾಡಿಕೊಡುತ್ತಿತ್ತು. ಶಾಲೆಯಿಂದ ಪ್ರವಾಸ ಬರುವ ಮಕ್ಕಳಿಗೆ, ಒಮ್ಮೊಮ್ಮೆ ದೂರದ ಊರಿಗೆ ಹೊರಟಿರುವ ಹೆಣ್ಣು ಮಕ್ಕಳಿಗೆ, ದಾರಿ ಮಧ್ಯ ವಾಹನ ಕೆಟ್ಟು ಕಂಗಾಲಾಗಿ ಕುಳಿತವರೆಲ್ಲರಿಗೆಲ್ಲಾ ಊರವರು ಕಸ್ತೂರಕ್ಕನ ದೊಡ್ಡ ಮನೆಯ ದಾರಿ ತೋರಿಸುತ್ತಿದ್ದರು. ಈಗ ನೋಡಿದರೆ, ಕಾಡು ನೋಡಲು ಬರುವವರು, ಮಳೆ, ಹಕ್ಕಿ, ಚಳಿ, ಎಂದು ಮಲೆನಾಡಿನ ಚಂದ ನೋಡಲು ಬರುವವರು, ಉಡುಪಿಗೋ, ಶೃಂಗೇರಿಗೋ ಹೋಗುವ ಯಾತ್ರಿಕರು, ಎಲ್ಲರೂ ಬರುತ್ತಿದ್ದಾರೆ. ಬರುವವರು ಮತ್ತೆ ಮತ್ತೆ ಬರುತ್ತಿದ್ದಾರೆ.
ಅವರ ಹಳೆಯ ಮನೆ ಈಗ ಇನ್ನೂ ಹಳೆಯದಾಗಿತ್ತು. ಚೌಕಾಕಾರದ ದೊಡ್ಡ ಚೌಕಿಯ ನಡುವೆ ತುಳಸೀಕಟ್ಟೆ, ದೊಡ್ಡ ಮರದ ಕಂಬಗಳು, ಹಂಡೆಯಲ್ಲಿ ಉರಿಯುವ ಬಿಸಿನೀರು, ಮನೆಯ ಮುಂದೆ ಹರಟೆ ಕಟ್ಟೆಯಂತಹ ಎರಡು ದಳಿಗಳು, ಕಲ್ಲಿನ ಮೆಟ್ಟಿಲ ಉಪ್ಪರಿಗೆ, ಎಲ್ಲವೂ ಪುರಾತನ ಪರಿಮಳದ ಮೌನದಿಂದ ತುಂಬಿಕೊಂಡಿತ್ತು.
“ಮೊದಲು ಕೈಕಾಲು ತೊಳೆದು ಬನ್ನಿ, ಊಟ ಮಾಡುವಾ, ಬೇರೆ ಮಾತೆಲ್ಲಾ ಕಡೆಗೆ, ಬನ್ನಿ ಬನ್ನಿ”, ಎಂದು ಕಸ್ತೂರಕ್ಕ ಹಳೆಮನೆಯ ಹಿತ್ತಲ ಬಳಿಯಿದ್ದ ಬಚ್ಚಲು ಮನೆ ತೋರಿಸಿದರು. ಬುಕ್ ಮಾಡಲು ಫೋನು ಮಾಡಿದಾಗಲೇ “ಇಲ್ಲಿ ಅಟ್ಯಾಚ್ಡ್ ಬಾತ್ ರೂಂ ಇಲ್ಲಾ ಮಗಾ, ಇದು ಹಳೆಮನೆ, ನಿಮಗೆ ಇದೆಲ್ಲಾ ಆದ್ರೆ ಮಾತ್ರ ಬನ್ನಿ” ಎಂದು ಮೊದಲೇ ಹೇಳಿದ್ದರು.
ಮಲೆನಾಡಿನ ಕೆಂಪುಅನ್ನ, ಬಾಳೆಕಾಯಿ, ಬದನೆ, ನುಗ್ಗೆ ಪಲ್ಯ, ಕಾಟು ಮಾವಿನ ಹಳ್ಳಿನ ಹುಳಿಗೊಜ್ಜು, ಹೀರೇ ಸಿಪ್ಪೆ, ತಂಬುಳಿ, ಸೊಪ್ಪಿನ ಹುಳಿ, ಪತ್ರೊಡೆ ಮಲೆನಾಡಿನ ರುಚಿಕರ ಅಡುಗೆಗಳು ಎಂದು ಬಾಳೆಯ ಎಲೆಯ ಮೇಲೆ ಇದೆಲ್ಲಾ ನೊಡುವಾಗಲೇ ಸಕ್ಕತ್ ಖುಷಿಯಾಗುತ್ತಿತ್ತು.
ಎಷ್ಟೋ ವರ್ಷಗಳಿಂದ ಈ ಮನೆಯಲ್ಲಿ ಹೀಗೇ ಹಸಿದವರು ಬರುತ್ತಿದ್ದಾರೆ. ಹಳೆಯ ಸಂಪ್ರದಾಯಸ್ಥ ಮನೆಯಲ್ಲಿ ಕಸ್ತೂರಕ್ಕ ಸಣ್ಣ ಕ್ರಾಂತಿಯನ್ನೇ ಮಾಡಿದ ಹಾಗಿತ್ತು. ತನ್ನ ಮೈಮನಸ್ಸಲ್ಲಿ ಹುಟ್ಟಿನಿಂದಲೇ ಅಂಟಿಕೊಂಡಿದ್ದ, ಮಡಿಮೈಲಿಗೆ, ಪೂಜೆ ಪುನಸ್ಕಾರಗಳನ್ನು ಅರಗಿಸಿಕೊಂಡು, ಜಾತಿಗೀತಿ ಎಂಬ ತಲೆಯ ಹುಳವನ್ನು ಕಿತ್ತುಹಾಕಿ ಬಂದವರಿಗೆಲ್ಲಾ ಅನ್ನದಾತೆಯಾಗಿದ್ದಾರೆ. ಸದಾ ಕಾಲ ನಂದಾದೀಪ ಉರಿಯುವ ಮನೆಯಲ್ಲಿ ವಿಪರೀತ ಪೂಜೆ ಮಾಡಿಸಿಕೊಂಡಿದ್ದ ದೇವರೂ ಕೂಡಾ ಮೌನವಾಗಿ ಕಸ್ತೂರಕ್ಕನ ಸಂತೋಷವನ್ನು ನೋಡುತ್ತಿದ್ದ.
ಕಸ್ತೂರಕ್ಕ ಹೊಟ್ಟೆ ತುಂಬಾ ಬಡಿಸುತ್ತಾರೆ, ಬಡಿಸುವ ಮೊದಲು ಎಲೆಯಲ್ಲಿ ಏನೂ ಬಿಡಬಾರದು, ಇದು ನನ್ನ ಕಟ್ಟಾಜ್ಞೆ ಎಂದು ಜಾಣೆಯಂತೆ ಎಲೆಯಲ್ಲಿ ಒಂದೂ ತುತ್ತು ಬಿಡದಂತೆ ತಿನ್ನಿಸಿ ತೃಪ್ತಿ ಪಡುತ್ತಾರೆ. ಕಾಫಿ ಕೇಳಿದವರಿಗೆ ಕಷಾಯ ಕೊಟ್ಟು ಆರೋಗ್ಯಕ್ಕೆ ಒಳ್ಳೆದು ಮಗಾ ಕುಡೀರಿ ಎನ್ನುತ್ತಾರೆ.
“ಖಾರ ಜಾಸ್ತಿ ಹಾಕೋದು, ಎಣ್ಣೆ ತುಂಬಾ ಸುರಿಯೋದು, ಇದೆಲ್ಲಾ ಆರೋಗ್ಯಕ್ಕೂ ಒಳ್ಳೇದಲ್ಲ. ತಿನ್ನೋದನ್ನ ಹಿತವಾಗಿ ತಿಂದ್ರೆ ತಿಂದವರಿಗೂ ಬಡಿಸಿದವರಿಗೂ ಸಮಾಧಾನವಿರುತ್ತೆ, ಮನುಷ್ಯನಿಗೆ ತೃಪ್ತಿ ಇರೋದು ಹೊಟ್ಟೆ ತುಂಬಿದಾಗ ಮಾತ್ರ. ದುಡ್ಡಾದರೆ ಲಕ್ಷ ಕೋಟಿ ಆಗ್ತದೆ, ತಿನ್ನೊದಾದ್ರೆ ಒಂದ್ಯಾರಡ ಮೂರ ದೋಸೆ, ಎಷ್ಟೂಂತ ತಿನ್ನಬಹುದು? ಮನುಷ್ಯನಿಗೆ ತೃಪ್ತಿ ಇದರಿಂದ್ಲೇ ಅಲ್ವಾ? ಇದನ್ನ ವಂಚನೆ ಮಾಡಿದ್ರೆ ನಮಗೇ ಹಾಳಲ್ವಾ? ನಾನು ನಿನ್ನೆದೂ ತಿಂತೀನಿ ಹಳಸದೆ ಇದ್ರೆ ಆಯ್ತು. ಎಲ್ರಿಗೂ ಅದನ್ನೇ ಹೇಳುವೆ”.
”ನಮ್ಮ ಮುತ್ತಾತನ ಕಾಲದಲ್ಲೂ ಸಹ, ಯಾರೋ ಬರೋದು, ತಿಂಡಿ, ತಿನ್ನೋದು, ಊಟ ಮಾಡೋದು, ಎಲ್ಲಾ ನಡೀತಿತ್ತು, ನಾನು ವಂಚನೆ ಮಾಡಿದ್ರೆ ನೆಮ್ಮದಿ ಇರ್ತಿರ್ಲಿಲ್ಲ. ಈಗ ಒಂದು ಊಟಕ್ಕೆ ಇಷ್ಟು ಕೊಡಪ್ಪಾ ಅಂದ್ರೆ ಜಾಸ್ತಿ ಆಗಿರ್ಬೋದು, ಅದ್ರ ಬದಲು ಇದಕ್ಕೆಲ್ಲಾ ನಾನು ಬೆಲೆ ಕಟ್ಟೋದೇ ಇಲ್ಲಾ, ನಿಜವಾಗಿ ಇದು ಸ್ಟಾರ್ಟ್ ಮಾಡಿರೋದು ಹೆಣ್ಣು ಮಕ್ಳಳಿಗೆ, ಗಂಡಸರಾದ್ರೆ ಎಲ್ಲಾದ್ರೂ ಹೋಗ್ತಾರೆ, ಹೆಣ್ಣು ಮಕ್ಕಳು ಎಲ್ಲಿಹೋಗ್ಬೇಕು?, ಅವ್ರಿಗೊಂದು ಉಳಿಲಿಕ್ಕೆ ವ್ಯವಸ್ಥೆ ಒಂದು ಬಾತ್ ರೂಂ ಇಷ್ಟಾದ್ರೂ ಬೇಕಲ್ಲ, ತುಂಬಾ ಜನಾ ಯಾವ ಧೈರ್ಯದ ಮೇಲೆ ಸೇರಸ್ಕೋತ್ತಿರಾ ಅಂತ ನನ್ನ ಕೇಳಿದ್ದಾರೆ, ನಕ್ಸಲೈಟ್ರು, ಕಳ್ರು, ಕಾಕ್ರು ಎಲ್ಲಾ ಇರ್ತಾರೆ, ಹಾಗೆ ದರೊಡೆ ಖೂನಿ ಮಾಡೋದಿದ್ರೆ ಹೇಗೋ ಬಾಗಿಲು ಒಡೆದಾದ್ರೂ ಬರ್ತಾರೆ, ಯಾರಿಂದ ತಪ್ಸಕ್ಕಾಗಲ್ಲ, ಎನ್ನುತ್ತಾರೆ.
ಎಲ್ಲರೂ ಉಂಡ ಮೇಲೆ ತಾನೂ ಉಂಡು, ಮಧ್ಯಾಹ್ನ ಸ್ವಲ್ಪ ಮಲಗಲೂ ಪುರುಸೊತ್ತಿಲ್ಲದೆ, ಕವಲೇ ದುರ್ಗಕ್ಕೋ, ಜೋಗಿ ಗುಂಡಿಗೋ, ಕುಂದಾದ್ರಿಗೋ ಹೋಗುವವರಿಗೆ ಬಿಸಿಹೋಳಿಗೆ, ದೋಸೆ ಕೊಟ್ಟು ಕಳುಹಿಸುತ್ತಾರೆ. ತಿನ್ನುವಾಗ ಜಾಸ್ತಿ ಮಾತಾಡ ಕೂಡದು, ನಿಮ್ಮ ಡಿಸ್ಕಶನ್ ಎಲ್ಲಾ ಆ ಮೇಲೆ, ಈಗ ತಿಂದು ಬೇಗ ಹೋಗಿ ಬನ್ನಿ, ಕತ್ತ್ಲಾದ್ರೆ ಕಾಡಿನ ಸಾವಾಸ ಕಷ್ಟ ಎಂದು ತಲೆಗೆ ಮೊಟಕುತ್ತಾರೆ.
ಹೀಗೆಲ್ಲಾ ನೆಮ್ಮದಿ ಕಾಣುವ ಕಸ್ತೂರಕ್ಕನ ಗಂಡ 28 ವರ್ಷದ ಹಿಂದೆ ತೀರಿಕೊಂಡಿದ್ದಾರೆ. ಅವರಿಗೆ ಮೂತ್ರಕೋಶದ ಸಮಸ್ಯೆ ಇತ್ತು. ಯಾವುದೋ ಊರಿಗೆ ಹೋದಾಗೊಂದು ರಾತ್ರಿ ಉಳಿಯಲು, ನೀಟಾದ ಬಾತ್ ರೂಂ ಇರುವ ಒಂದು ಕೋಣೆಯೂ ಇವರಿಗೆ ಸಿಕ್ಕಿರಲಿಲ್ಲ. ಹೀಗಿದ್ದಾಗ, ತನ್ನಂತೇ ಬೇರೆಯವರು ಪರವೂರಲ್ಲಿ ತಬ್ಬಲಿಗಳಾಗಬಾರದೆಂದು ಮಡಿಮೈಲಿಗೆಯೆಲ್ಲಾ ಬದಿಗಿಟ್ಟರು. ಈಗ ಕೈಯ್ಯಾರೆ ಬಡಿಸಿ ನಾಲ್ಕು ಜನ ಉಣ್ಣುವುದನ್ನು ನೋಡಿ ಎಲ್ಲಾ ಮರೆತಿದ್ದಾರೆ.
ಬಂದು ಉಂಡವರು ದುಡ್ಡು ಕೊಡದೇ ಹೋದವರೂ ಇದ್ದಾರಂತೆ. ಆಗ ನಿಮಗೇನು ಅನ್ನಿಸುತ್ತದೆ ಎಂದು ಕೇಳಿದರೆ, ಹೋದ ಜನ್ಮದಲ್ಲಿ ನನ್ನದು ಯಾವುದೋ ಋಣವಿತ್ತು, ತೀರಿಕೊಂಡಿಸಿದ್ದೇನೆ ಅಷ್ಟೇ. ಒಂದು ಸಲ ನಡೂ ರಾತ್ರಿ ವ್ಯಾನು ಕೆಟ್ಟು 12 ಜನ ತಮಿಳುನಾಡಿನ ಹೆಂಗಸರು ಬಂದಿದ್ದರಂತೆ. ಕಸ್ತೂರಕ್ಕನಿಗೆ, ಇದೇ ನಮ್ಮ ತಾಯಿಮನೆ, ನೀವೇ ನಮ್ಮ ತಾಯಿ ಎಂದು ಮನಸ್ಸು ಒದ್ದೆಮಾಡಿಕೊಂಡು ಹೋಗಿದ್ದರಂತೆ.
ಮೊಮ್ಮಗನ ಹಾಗಿನ ಹುಡುಗನೊಬ್ಬ ಮದುವೆಯಾದ ಮೇಲೆ ಹೆಂಡತಿಯನ್ನು ಕರೆತಂದು, ಕಸ್ತೂರಕ್ಕನಲ್ಲಿ ಕಷಾಯಪುಡಿ, ಚಟ್ನಿಪುಡಿ ಕಲಿ ಒಟ್ಟಾರೆ ಇಲ್ಲೇ ಇದ್ದು ಬದುಕು ಕಲಿ, ಎಂದು ಎರಡು ದಿನ ಬಿಟ್ಟು ಹೋಗಿದ್ದನಂತೆ. ಅವರು ಯಾರಿಗೂ ಚಟ್ನಿಪುಡಿ, ಕಷಾಯ ಪುಡಿಗಳನ್ನು ಮಾಡಿಕೊಡುವುದಿಲ್ಲ ಬದಲಾಗಿ ಅದರ ವಿಧಾನ ಹೇಳಿಕೊಡುತ್ತಾರೆ. ಒಂದು ಸಲ ಮಾಡಿಕೊಟ್ಟರೆ ಅವರು ಕಲಿಯುವುದೇ ಇಲ್ಲ, ಅದಕ್ಕೆ ಹೇಳಿಕೊಟ್ಟರೆ ಬೇಕೆಂದಾಗ ಮಾಡಿಕೊಂಡು ತಿನ್ನಬಹುದೆಂಬುದು ಸುಳ್ಳಲ್ಲ.
ಕೆಲವು ವರ್ಷಗಳ ಹಿಂದೆ ಕಸ್ತೂರಕ್ಕ, ಊರಿನ ಹೆಣ್ಣು ಮಕ್ಕಳನ್ನು ಸೇರಿಸಿಕೊಂಡು, ತಾನೇ ಸ್ವತಃ ಬಂಡವಾಳ ಹೂಡಿ ಹಪ್ಪಳ, ಸಂಡಿಗೆ, ಜೇನುತುಪ್ಪ, ಮಾಡುವ ಹೋಂ ಇಂಡಸ್ಟ್ರಿ ನಡೆಸುತ್ತಿದ್ದರು. ಈಗ ಆ ಹೆಣ್ಣು ಮಕ್ಕಳೆಲ್ಲಾ ಮದುವೆಯಾಗಿದ್ದಾರೆ. ಹಾಗೆ ನೋಡಿದರೆ ಊರಲ್ಲಿ ಈಗ ನರೆತು ಮುದುಕ ಮುದುಕಿಯರು ಮಾತ್ರ ಇರುವುದು. ಊರಿಗೇ ಊರೇ ಖಾಲಿಯಾಗುವ ಹಾಗೆ ಇದೆ ಎನ್ನುವ ದೊಡ್ಡಮನೆಯ ಕಸ್ತೂರಕ್ಕ ಊರಿನ ದೊಡ್ಡಮ್ಮನಂತಿದ್ದಾರೆ.
ವಯಸ್ಸಾದ ತಾಯಿ, ಒಬ್ಬಳೇ ಮಗಳು, ಅಳಿಯ ಮತ್ತು ಮೈದುನ ಕಸ್ತೂರಕ್ಕನಿಗೆ ಸಾತ್ ನೀಡುತ್ತಿದ್ದಾರೆ. ಆಗುಂಬೆ ಬಸ್ ಸ್ಟಾಡಿಂದ 500 ಮೀಟರ್ ದೂರದಲ್ಲಿ ಅವರ ಮನೆ ಇದೆ. ಅವರು ಹೇಳುವ ಕೆಲವು ಒಳ್ಳೆಯ ಕಂಡೀಶನ್ ಗಳಿಗೆ ಒಪ್ಪಿಕೊಳ್ಳುವುದಾದರೆ ದೊಡ್ಡಮನೆಗೆ ಯಾರೂ ಬೇಕಾದರೂ ಹೋಗಬಹುದು, ಹೊಟ್ಟೆ ತುಂಬಾ ತಿಂದು ಬೆಚ್ಚನೆ ಮಲಗಬಹುದು. ಬರುವಾಗ ತುಪ್ಪ ಸವರಿದ ಕಾಯಿ ಹೋಳಿಗೆ ತಿಂದು ಅಜ್ಜಿಮನೆಯ ನೆನಪು ಮಾಡಿಕೊಳ್ಳಬಹುದು.



Super write up….
Good as always