
ಜಿ ಕೃಷ್ಣಪ್ರಸಾದ್
ರಾತ್ರಿ 7.30 ರ ದೆಹಲಿ ವಾರ್ತೆಯ ಮೂಲಕ ನಾಗಭೂಷಣರು ನನಗೆ ಮೊದಲು ಪರಿಚಯವಾದದ್ದು. ನನ್ನ ಬಾಲ್ಯವನ್ನೆಲ್ಲಾ ಈ ಅಶರೀರವಾರ್ತೆ ಕೇಳುತ್ತಲೇ ಕಳೆದೆ!
ತುಮಕೂರು ಮತ್ತು ಚಾಮರಾಜನಗರದ ಸಮಾಜವಾದಿ ಗುಂಪಿನ ಚರ್ಚೆಗಳ ನಡುವೆ ನಾಗಭೂಷಣ್ ನುಸುಳಿ ಮಾಯವಾಗುತ್ತಿದ್ದರು. ಅವರ ಸಿಟ್ಟು,ನಿಷ್ಟುರತೆ, ಪ್ರಮಾಣಿಕತೆಯ ಬಗ್ಗೆ ಸಾಕಷ್ಟು ಮಾತು ಬರುತ್ತಿತ್ತು.
ನಾಗಭೂಷಣರ ನೋಡುವ ಅವಕಾಶ ಸಿಕ್ಕಿದ್ದು ನನ್ನ ಅಣ್ಣ ಶ್ರೀನಿವಾಸ ಕುಮಾರರ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ಅವರು ಚಾಮರಾಜನಗರಕ್ಕೆ ಬಂದಾಗ. ಅಣ್ಣನ ಬಗ್ಗೆ ಎಲ್ಲರೂ ಸಂತಾಪದ ಮಾತನಾಡಿದರೆ, ಆರೋಗ್ಯದ ಬಗ್ಗೆ ಕಾಳಜಿ ಮಾಡದ ಅಣ್ಣನ ಸೋಮಾರಿತನವನ್ನು ತುಂಬಿದ ಸಭೆಯಲ್ಲಿ ಖಂಡಿಸಿದ್ದರು. ಅದೇ ನಾಗಭೂಷಣರ ಹೆಚ್ಚುಗಾರಿಕೆ. ಸಂದರ್ಭ ಯಾವುದೇ ಇರಲಿ, ವ್ಯಕ್ತಿ ಯಾರೇ ಆಗಿರಲಿ ತಮಗನಿಸಿದ್ದನ್ನು ನೇರ ಹೇಳಿಬಿಡುತ್ತಿದ್ದರು. ಹಾಗಾಗೇ ಈ ದುರ್ವಾಸ ಮುನಿಯನ್ನು ಸಭೆ ಸಮಾರಂಭಗಳಿಗೆ ಕರೆಯಲು ಬಹಳಷ್ಟು ಮಂದಿ ಭಯಪಟ್ಟುಕೊಳ್ಳುತ್ತಿದ್ದರು.

ತುಮಕೂರಿನ ನನ್ನ ಅಕ್ಕ ಮಲ್ಲಿಕಾ ಬಸವರಾಜು ಕುಟುಂಬಕ್ಕೆ ಆಪ್ತರಾಗಿದ್ದ ಕಾರಣಕ್ಕೆ ಸರ್ ಮತ್ತು ಸವಿತಾ ಮೇಡಂ ಆಗಾಗ ಸಿಕ್ಕುತ್ತಿದ್ದರು. ಅಣ್ಣನ ಮಗಳ ಮದುವೆಯ ಮುಖ್ಯ ಅತಿಥಿಯೂ ಇವರೆ.’ ಹೊಸ ಮನುಷ್ಯ ಪತ್ರಿಕೆಗೆ ಲೇಖನ ಬರೀರಿ’ ಎಂದರು.’ ಬರೀತೀನಿ ಸರ್ ‘ ಎಂದೆ. ಜಾಗತೀಕರಣ ಮತ್ತು ಕೃಷಿಯ ಬಗ್ಗೆ ಬರೆಯಲು ಒಂದೆರೆಡು ಬಾರಿ ನೆನಪಿಸಿದರು. ನನ್ನ ಸೋಮಾರಿತನ, ಅವರ ಮೇಲಿನ ಭಯ ಎರಡೂ ಲೇಖನ ಬರೆಯಲು ಬಿಡಲಿಲ್ಲ. ‘ರಿಪೇರಿಯಾಗದ ಕೇಸು’ ಎಂದು ತಿಳಿದ ಅವರೂ ಮತ್ತೆ ಒತ್ತಾಯಿಸಲಿಲ್ಲ.
ತಮ್ಮ ಅನಾರೋಗ್ಯದ ನಡುವೆಯೂ ತಪ್ಪದೆ ಪತ್ರಿಕೆ ತರುತ್ತಿದ್ದ ಅವರ ಬದ್ದತೆ , ಯಾವುದೇ ಅಗ್ಗದ ಪ್ರಚಾರ,ಪ್ರಶಸ್ತಿ ಗೆ ಹಾತೊರೆಯದ ಅವರ ಬೆಂಕಿಯಂಥ ಗುಣ ಇಷ್ಟವಾಗುತ್ತಿತ್ತು. ನಾಗಭೂಷಣರ ಸಿಟ್ಟನ್ನು ನಗುವಾಗಿ ತೆಗೆದುಕೊಳ್ಳುತ್ತ, ಅವರ ಕಾಳಜಿ ಮಾಡುತ್ತಿದ್ದ ಸವಿತಾ ಮೇಡಂರ ವಾತ್ಸಲ್ಯ ದೊಡ್ಡದು.

‘ ಗಾಂಧಿ ಕಥನ’ ಪುಸ್ತಕ ಬಿಡುಗಡೆಯಾದ ಬಹಳಷ್ಟು ತಿಂಗಳುಗಳು ನಾನು ಅದನ್ನು ಓದೇ ಇರಲಿಲ್ಲ. ಗಾಂಧಿಯ ಬಗ್ಗೆ ಓದುವುದು ಇನ್ನೇನು ಎಂಬ ಮನೋಭಾವ ನನ್ನದು. ಅಕ್ಕನ ಮನೆಗೆ ಹೋದಾಗ ಪುಸ್ತಕ ಉಡುಗೊರೆಯಾಗಿ ಸಿಕ್ಕಿತು. ಮೊದಲ ಓದಿಗೇ ಗಾಂಧೀ ಕಥನ ಇಷ್ಟವಾಯಿತು. ಗಾಂಧೀಜಿಯ ಬದುಕಿನ ಪರಿಚಯ ಮಾಡಿಕೊಳ್ಳಲು ಮುಂದಾಗುವ ಎಳೆಯರಿಗೆ ಇದಕ್ಕಿಂತ ಉತ್ತಮ ಕೃತಿ ಇನ್ನೊಂದಿಲ್ಲ. ಗಾಂಧೀಜಿಯವರ ಆತ್ಮ ಚರಿತ್ರೆಗಿಂತ ಗಾಂಧೀ ಕಥನವೇ ನನಗೆ ಹೆಚ್ಚು ಇಷ್ಟವಾಯಿತು. ಗಾಂಧಿ ಕಥನ ಪುಸ್ತಕ ಮರು ಮುದ್ರಣಗಳಾಗುತ್ತಿರುವ ಸಂಭ್ರಮ ನೋಡುತ್ತಿದ್ದರೆ ಖುಷಿಯಾಗುತ್ತದೆ; ಆ ಮೂಲಕ ನಾಗಭೂಷಣರು ಜೀವಂತವಾಗಿದ್ದಾರೆ.
ಹೋಗಿ ಬನ್ನಿ ಸರ್; ನಿಮ್ಮ ನಿಷ್ಟುರತೆ,ಪ್ರಾಮಾಣಿಕತೆಯ ಒಂದಂಶವಾದರೂ ನಮ್ಮೊಳಗೆ ಬಂದರೆ ನಾವು ‘ ಹೊಸ ಮನುಷ್ಯ’ ರಾಗುತ್ತೇವೆ.






0 Comments