ಕನ್ನಡ-ಅಸ್ಸಾಂ: ಹೊಸ ಶಕಾರಂಭ
ಡಾ. ಬಿ.ಆರ್. ಸತ್ಯನಾರಾಯಣ
’ಜ್ಞಾನಪೀಠ ಪೃಶಸ್ತಿ ಮಹತ್ ಕೃತಿಗಳನ್ನು ಸೃಷ್ಟಿಸುವುದಿಲ್ಲವಾದರೂ ಸೃಷ್ಟಿಯಾದ ಮಹತ್ ಕೃತಿಗಳನ್ನು ಮರೆಯಿಂದ ಹೊರಗೆ ಬೆಳಕಿಗೆ ತಂದು, ಬಹುಜನರ ಕಣ್ಣಿಗೆ ಅದು ಬೀಳುವಂತೆ ಮಾಡಿ, ಬೇರೆ ಬೇರೆ ಭಾಷೆಯ ಸಹೃದಯರ ಗಮನವನ್ನು ಅದರತ್ತ ಸೆಳೆಯುವ ಮಹೋಪಕಾರ ಮಾಡುವುದರಲ್ಲಿ ಸಂದೇಹವಿಲ್ಲ.’
-ಇವು, ಡಿಸೆಂಬರ್ ೨೦, ೧೯೬೮ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಿ ಮಾಡಿದ ಭಾಷಣ ’ಬಹುಜಿಹ್ವಾ ಭಾರತಿಗೆ ಐಕ್ಯತೆಯ ಆರತಿ’ಯಲ್ಲಿ ಕುವೆಂಪು ಹೇಳಿರುವ ಮಾತುಗಳು.
ಇದು ಎಲ್ಲ ಪ್ರಶಸ್ತಿಗಳಿಗೂ ಅನ್ವಯಿಸುವ ಮಾತೇ ಆಗಿದೆ.
ಇಂದಿನ ಜಾತಿ, ಮತ, ಪಕ್ಷ, ರಾಜಕೀಯಗಳಿಂದ ಹೊರತುಪಡಿಸಿ, ಪ್ರಶಸ್ತಿ ಪುರಸ್ಕಾರಗಳಿಂದ ಒದಗಬಹುದಾದ ಧನಾತ್ಮಕ ಲಾಭವನ್ನು ಮಾತ್ರ ಪರಿಗಣಿಸಬೇಕಾಗಿದೆ. ಜ್ಞಾನಪೀಠ ಮಾಡುತ್ತಿರುವ ಸಕಾರ್ಯವನ್ನು ಹಲವಾರು ಪ್ರಶಸ್ತಿಗಳು ಮಾಡುತ್ತಿವೆ. ಕಾಲ, ದೇಶ, ಭಾಷೆಗಳನ್ನು ಮೀರಿದ ಬಾಂಧವ್ಯವನ್ನು ಬೆಸೆಯುವಲ್ಲಿ ಪ್ರಶಸ್ತಿಗಳ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ ಅಖಿಲ ಭಾರತ ಮಟ್ಟದಲ್ಲಿ ವ್ಯಾಪಿಸುತ್ತಿರುವ ’ಕುವೆಂಪು ರಾಷ್ಟ್ರೀಯ ಪುರಸ್ಕಾರ’ವೂ ಒಂದಾಗಿದೆ.
ಕರ್ನಾಟಕ ಕಂಡ ಅಪರೂಪದ ಸಜ್ಜನ ರಾಜಕಾರಣಿಗಳಲ್ಲಿ ದಿವಂಗತ ಎಂ. ಚಂದ್ರಶೇಖರ್ ಕೂಡಾ ಒಬ್ಬರು. ಕುವೆಂಪು ಚಿಂತನೆಗಳನ್ನು ಪ್ರಸಾರ ಮಾಡುವ ನಿಟ್ಟಿನಲ್ಲಿ ಹಲವಾರು ಕಾರ್ಯಗಳನ್ನು ಕೈಗೊಂಡಿದ್ದರು. ಈಗ, ಇವರ ಕುಟುಂಬವರೂ ಅದೇ ಕೆಲಸದ ಮುಂದುವರಿಕೆ ಎಂಬಂತೆ, ’ಕುವೆಂಪು ರಾಷ್ಟ್ರೀಯ ಪುರಸ್ಕಾರ’ ನೀಡಲು ಕುಪ್ಪಳಿ ’ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ದೊಂದಿಗೆ ಕೈಜೋಡಿಸಿದ್ದಾರೆ.
೨೦೧೩ರಿಂದ ಅಖಿಲ ಭಾರತ ಮಟ್ಟದಲ್ಲಿ ಯಾವುದಾದರೂ ಭಾಷೆಯ ಮಹತ್ವದ ಸಾಹಿತಿಯನ್ನು ಗುರುತಿಸಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತಿದೆ. ಪುರಸ್ಕಾರವು ಬೆಳ್ಳಿಯ ಪದಕ ಮತ್ತು ಐದು ಲಕ್ಷ ರೂಪಾಯಿಗಳನ್ನು ಒಳಗೊಂಡಿರುತ್ತದೆ. ೨೦೧೩ರಲ್ಲಿ ಮಲೆಯಾಳಂ ಭಾಷೆಯ ಡಾ. ಕೆ. ಸಚ್ಚಿದಾನಂದ್, ೨೦೧೪ರಲ್ಲಿ ಹಿಂದಿಯ ಪ್ರೊ. ನಾಮವರ್ ಸಿಂಗ್, ೨೦೧೫ರಲ್ಲಿ ಮರಾಠಿಯ ಪ್ರೊ. ಶ್ಯಾಮ್ ಮನೋಹರ್, ೨೦೧೬ರಲ್ಲಿ ಕನ್ನಡದ ಶ್ರೀ ದೇವನೂರ ಮಹಾದೇವ ಅವರಿಗೆ ಈ ಪುರಸ್ಕಾರ ದೊರೆತಿರುತ್ತದೆ. ೨೦೧೭ನೆಯ ಸಾಲಿನ ಪುರಸ್ಕಾರವು ಅಸ್ಸಾಂ ಸಾಹಿತಿಗಳಾದ ಪ್ರೊ. ನೀಲಮಣಿ ಫೂಕನ್ ಮತ್ತು ಹಿಮೆನ್ ಬೊರ್ಗಹೈನ್ ಅವರಿಗೆ ಸಂದಿರುತ್ತದೆ.
ಭಾರತದ ಏಳು ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಮಹತ್ವದ ರಾಜ್ಯ ಅಸ್ಸಾಂ. ಅಸ್ಸಾಂ ಕಣಿವೆಗೂ ನಮ್ಮ ಮಲೆನಾಡಿಗೂ ಭೌಗೋಳಿಕವಾಗಿ ಸಾಕಷ್ಟು ಸಾಮ್ಯತೆಯಿದೆ. ಬೆಟ್ಟ, ಕಾಡು, ಕಣಿವೆ, ಮಳೆ, ಹಸಿರು, ಕಷ್ಟಸಹಿಷ್ಣು ಜನತೆ, ಪ್ರಕೃತಿಯೊಡನೆ ಬೆರೆತುಹೋಗಿರುವ ಜನಜೀವನ ಎಲ್ಲವೂ ನಮ್ಮ ಮಲೆನಾಡನ್ನೇ ನೆನಪಿಸಿದರೆ ಆಶ್ಚರ್ಯಪಡಬೇಕಿಲ್ಲ. ಕರ್ನಾಟಕದಂತೆ ಅಸ್ಸಾಂ ಕೂಡಾ ಮಿನಿಭಾರತದಂತೆಯೆ ಇದೆ.
ಇಲ್ಲಿ ಶರಾವತಿ, ತುಂಗ, ಭದ್ರೆಯರಿದ್ದರೆ, ಅಲ್ಲಿ ಬ್ರಹ್ಮಪುತ್ರ ನದಿಯಿದೆ. ಇಲ್ಲಿ ಅಡಕೆಯಂತೆ ಅಲ್ಲಿ ಟೀ ಜನರ ಅವಿಭಾಜ್ಯ ಅಂಗವಾಗಿದೆ. ನೆಲಮೂಲ ಸಂಸ್ಕೃತಿಯ ಬೆರಗು ಬಿನ್ನಾಣಗಳು ಇಲ್ಲಿಯಂತೆ ಅಲ್ಲಿಯೂ ಮೈದಳೆದಿವೆ. ಇಂತಹ, ದೂರದ ಅಸ್ಸಾಮಿನ ಸಾಹಿತಿಗಳಿಬ್ಬರಿಗೆ ಕನ್ನಡದ ಮಹಾಕವಿಯೊಬ್ಬರ ಹೆಸರಿನ ರಾಷ್ಟ್ರೀಯ ಪುರಸ್ಕಾರ ದೊರೆತಿರುವುದು ಈ ಎರಡೂ ಪ್ರದೇಶಗಳನ್ನು ಸಂಸ್ಕೃತಿಗಳನ್ನು ಮಾನಸಿಕವಾಗಿ ಮತ್ತಷ್ಟು ಹತ್ತಿರಕ್ಕೆ ತಂದಂತಾಗಿದೆ.
ಅಸ್ಸಾಂ ಸಾಹಿತ್ಯಲೋಕದ ಮಹತ್ವದ ಹಾಗೂ ತಲೆಮಾರುಗಳನ್ನು ಪ್ರಭಾವಿಸಿದ ಪ್ರಾಧ್ಯಾಪಕ, ಶಿಕ್ಷಣ ತಜ್ಞ ಹಾಗೂ ಕವಿ ಶ್ರೀ ನೀಲಮಣಿ ಫೂಕನ್ (Nilmani Phookan) ಹುಟ್ಟಿದ್ದು ೧೯೩೩ರಲ್ಲಿ. ಗೋಲಘಾಟ್ ಜಿಲ್ಲೆಯ ದೆರ್‍ಗಾವನ್ ಎಂಬ ಗ್ರಾಮದಲ್ಲಿ ಜಿನಿಸಿದ ನೀಲಮಣಿಯವರು, ಗುವಾಹಟಿಗೆ ಬಂದು ಗುವಾಹಟಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು, ಗುವಾಹಟಿಯ ಆರ್ಯ ವಿದ್ಯಾಪೀಠ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿ ನಿವೃತ್ತಿ ಹೊಂದುವವರೆಗೂ ಅಲ್ಲಿಯೇ ಕೆಲಸ ಮಾಡಿದವರು.
ಇದು ಒಂದು ರೀತಿಯಲ್ಲಿ ತಪಸ್ಸು. ಕುವೆಂಪು ಮೈಸೂರಿಗೆ ಅಂಟಿಕೊಂಡಂತೆ, ನೀಲಮಣಿಯವರು ಗುವಾಹಟಿಗೇ ಅಂಟಿಕೊಂಡವರು. ಹಿರಿಯ ಕವಿ, ಸ್ವಾತಂತ್ರ್ಯ ಹೋರಾಟಗಾರ ದಿವಂಗತ ನೀಲಮಣಿ ಫೂಕನ್ (ಸೀನಿಯರ್) ಅವರದು ಅಸ್ಸಾಮಿನಲ್ಲಿ ಚಿರಪರಿಚಿತ ಹೆಸರಾಗಿದ್ದುದರಿಂದ, ಶ್ರೀಯುತರು ’ನೀಲಮಣಿ ಫೂಕನ್ ಜ್ಯೂನಿಯರ್’ ಎಂದೇ ಪ್ರಸಿದ್ಧರಾಗಿದ್ದಾರೆ.
೧೯೫೦ರಿಂದಲೂ ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನೀಲಮಣಿಯವರು ವಿಶ್ವಪ್ರಜ್ಞೆಯ ಕವಿಋಷಿ. ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಸಂದೇಶದಲ್ಲಿ ಪ್ರತಿಪಾದಿತವಾಗುವ ಮನುಜಮತ, ವಿಶ್ವಪಥ, ಸರ್ವೋದಯ ಸಮನ್ವಯ, ಪೂರ್ಣದೃಷ್ಟಿ ಈ ತತ್ವಗಳು ಶ್ರೀಯುತರ ಕೃತಿಗಳಲ್ಲೂ ಬಿಂಬಿತವಾಗಿರುವುದು, ಆಶ್ಚರ್ಯದ ಜೊತೆಗೆ ಇವುಗಳ ಮಹತ್ವವನ್ನೂ ಮನಗಾಣಿಸುತ್ತವೆ.
ನೀಲಮಣಿಯವರು Surya Henu Nami Ahe Ei Nodiyedi (The sun is said to come descending by this river), Gulapi Jamur Lagna ಮತ್ತು Kobita ಮೊದಲಾದ ಕೃತಿಗಳಿಂದ ಹಾಗೂ ಜಪಾನೀ ಮತ್ತು ಯುರೋಪಿಯನ್ ಕವಿತೆಗಳ ಅನುವಾದಗಳಿಂದ ಅಸ್ಸಾಂ ಕಣಿವೆಯಲ್ಲಿ ಮನೆಮಾತಾಗಿದ್ದಾರೆ. ೧೯೮೧ರಲ್ಲಿ, ಶ್ರೀಯುತರ ಕವಿತ Kobita ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, ೧೯೯೦ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಗೌರವ ದೊರೆತಿರುತ್ತವೆ.
ಅಸ್ಸಾಂ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಹೆಸರು ಹೊಮೆನ್ ಬೊರ್ಗೊಹೈನ್ (Homen Borgohain). ಶಿಕ್ಷಕರಾಗಿ, ಪತ್ರಕರ್ತರಾಗಿ, ಸಾಹಿತಿಯಾಗಿ ಕಳೆದ ಅರವತ್ತು ವರ್ಷಗಳಿಂದ, ಸಮಾಜದ ಎಲ್ಲಾ ವರ್ಗದ ಒದುಗರನ್ನೂ ಹಿಡಿದಿಟ್ಟುಕೊಂಡಿರುವ ಅನನ್ಯ ಬರಹಗಾರ. ಲಖಿಂಪುರದ ಬಳಿಯ ಧಖುಖನವೆಂಬ ಕುಗ್ರಾಮ ಇವರ ಹುಟ್ಟೂರು. ಕುಪ್ಪಳಿಯಿಂದ ಕುವೆಂಪು ಮೈಸೂರಿಗೆ ಬಂದಂತೆ ಹೊಮೆನ್ ಅವರೂ ಗುವಾಹಟಿಗೆ ಬಂದು, ಕಾಟನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಸಾಧನೆಗಿಳಿದವರು.
ಮಾನವೀಯ ಮೌಲ್ಯಗಳು, ನೈತಿಕತೆ ಹಾಗೂ ವೈಚಾರಿಕತೆಯನ್ನು ತಮ್ಮೆಲ್ಲಾ ಸೃಜನಶೀಲ ಹಾಗೂ ಸೃಜನೇತರ ಕೃತಿಗಳಲ್ಲೂ ಪ್ರತಿಪಾದಿಸುತ್ತಾ ಬಂದಿದ್ದಾರೆ.
ಕುವೆಂಪು ಅವರಂತೆಯೇ, ಸ್ವಂತ ಬದುಕಿನ ಅನುಭವದ ಹಿನ್ನೆಲೆಯೇ ಪ್ರಧಾನವಾದ ಅವರ ಸಾಹಿತ್ಯಧಾರೆ ಅರವತ್ತು ವರ್ಷಗಳ ಅಸ್ಸಾಮಿನ ಸಾಕ್ಷೀಪ್ರಜ್ಞೆಯೂ ಹೌದು. ಅಸಂಖ್ಯ ಅಂಕಣ ಬರಹಗಳು, ಕಥೆ, ಕಾದಂಬರಿ, ಕವಿತೆ, ಪ್ರಬಂಧ, ಆತ್ಮಚರಿತ್ರೆ, ಮಕ್ಕಳ ಸಾಹಿತ್ಯ, ಸಂಪಾದನೆ, ಅನುವಾದ… ಹೀಗೆ ಎಲ್ಲಾ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಶ್ರೀಯುತರ ‘ಪಿತ-ಪುತ್ರ’ (Pita-Putra) ಕಾದಂಬರಿಗೆ ೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ದೊರೆತಿರುತ್ತದೆ.
ಅಷ್ಟರಾಗ್, ತಿಮಿರ್ ತೀರ್ಥ್, ಮತ್ಸ್ಯಗಂಧ ಇವರ ಇನ್ನಿತರ ಕಾದಂಬರಿಗಳು. ಪತ್ರಕರ್ತರಾಗಿ, ಸಂಪಾದಕರಾಗಿ ಜನಪ್ರಿಯರಾಗಿರುವ ಹೊಮೆನ್ ಅವರಿಗೆ ಆ ಕ್ಷೇತ್ರದ ಹಲವಾರು ಪ್ರಶಸ್ತಿ ಗೌರವಗಳು ಸಂದಿರುತ್ತವೆ. ನಗರ ಜೀವನದ ಎಲ್ಲ ಸಂಕೀರ್ಣತೆಗಳನ್ನು ಇವರ ಬರಹಗಳು ಹಿಡಿದಿಟ್ಟುಕೊಂಡಿವೆ. ನೀಲಾಚಲ್, ನಾಗರಿಕ್ ಮತ್ತು ಆಜ್‌ಕಲ್ (ಬೆಂಗಾಳಿ) ಪತ್ರಿಕೆಗಳ ಸಂಪಾದಕರಾಗಿ ಮನೆಮಾತಾಗಿದ್ದ, ಹೊಮೆನ್ ಅವರು ಪ್ರಸ್ತುತ ನಿಯೊಮಿಯ ಬಾರ್ತ (Niyomiya Barta) ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.
ನಿರುಪಮಾ ಬೊರ್ಗಹೈನ್ ಎಂದೇ ಖ್ಯಾತರಾಗಿರುವ ನಿರುಪಮಾ ತಮುಲಿ ಇವರ ಪತ್ನಿ. ಇವರೂ ಅಸ್ಸಾಮಿನ ಬಹುಮುಖ್ಯ ಬರಹಗಾರ್ತಿ ಹಾಗೂ ಮಹಿಳಾ ಹೋರಾಟಗಾರ್ತಿ. ಇವರಿಬ್ಬರೂ ಸೇರಿ ಬರೆದ Puwar Purobi Sandhyar Bibhash ಎಂಬ ಕಾದಂಬರಿ, ದಂಪತಿಗಳಿಬ್ಬರೂ ಸೇರಿ ಬರೆದ ಮೊದಲ ಮತ್ತು ಏಕಮಾತ್ರ ಅಸ್ಸಾಮಿ ಕಾದಂಬರಿಯೂ ಆಗಿದೆ.
ಈ ಇಬ್ಬರು ಲೇಖಕರು ಬರೆದಿರುವುದು ಅಸ್ಸಾಮಿ ಭಾಷೆಯಲ್ಲಾದರೂ, ಅಸ್ಸಾಮಿ ಜನಜೀವನದ ಸಂಸ್ಕೃತಿಯ ಪ್ರತಿಬಿಂಬವಾದರೂ ಪ್ರತಿಪಾದಿಸಿರುವುದು ಮಾನವೀಯ ಮೌಲ್ಯಗಳನ್ನು ಹಾಗೂ ವಿಶ್ವಮಾನವತ್ವವನ್ನು. ’ನಿಮ್ಮ ಆಪ್ತ ಗುರು ನಿಮ್ಮ ಸ್ವಂತ ಆಲೋಚನೆ; ನಿಮ್ಮ ದಾರಿಯನ್ನು ನೀವೇ ಹುಡುಕಿಕೊಳ್ಳಬೇಕು.’ ಎಂಬ ಕವಿನುಡಿಯಂತೆ, ಏಕಲವ್ಯ ಸಾಧನೆ ಮಾಡಿದ ಸಾಧಕರಿವರು.
ಈ ಇಬ್ಬರೂ ಹಿರಿಯ ಅಸ್ಸಾಮಿ ಕವಿಗಳು ಅಸ್ಸಾಮಿ ಸಂಸ್ಕೃತಿಯ ಸಾಕಾರರೂಪದಂತೆ ನಮ್ಮ ನಡುವೆ ಇದ್ದಾರೆ. ಅಂತರ್ಯಾಮಿ ಚೇತನವೊಂದು ಜಗತ್ತನ್ನು ಯಾವಾಗಲೂ ಆವರಿಸಿರುತ್ತದೆ. ಭಾಷೆ, ದೇಶ, ಕಾಲಾತೀತವಾಗಿ ಮಾನವನೆದೆಯಿಂದಲೆದೆಗೆ ಅಮೃತವಾಹಿನಿಯೊಂದು ಹರಿಯುತ್ತಲೇ ಇರುತ್ತದೆ. ಅಂತೆಯೇ ಇಂದು ಕನ್ನಡ ನೆಲದಿಂದ ಅಸ್ಸಾಂ ನೆಲಕ್ಕೂ ಭಾವಬಂಧನವೇರ್ಪಟ್ಟಿದೆ.
ಭಾರತದ ಪ್ರಸಕ್ತ ವರ್ತಮಾನದಲ್ಲಿ ಏಕಸಂಸ್ಕೃತಿಯ ಏಕಭಾಷೆಯ ಮಾತುಗಳು ಅನುರಣಿಸುತ್ತಿವೆ. ಭಾರತದ ವೈವಿಧ್ಯೆತಯನ್ನು ನಾಶ ಮಾಡುವ ಇಂತಹ ಏಕತ್ವವಾದವನ್ನು ಮುಖಾಮುಖಿಯಾಗಲು ಭಾರತದ ಪ್ರಾದೇಶಿಕ ಸಂಸ್ಕೃತಿಗಳು, ಭಾಷೆಗಳು ಅವುಗಳ ಅನನ್ಯತೆಯನ್ನು ಕಾಪಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ’ಸರ್ವೋದಯ ದೃಷ್ಟಿ ಮತ್ತು ಸಮನ್ವಯ ದೃಷ್ಟಿ ಎಲ್ಲೆಲ್ಲೂ ತಾಂಡವವಾಡಬೇಕು. ಮತ ಮತಗಳಲ್ಲಿ, ಸಾಹಿತ್ಯ ಸಾಹಿತ್ಯಗಳಲ್ಲಿ, ಸಮಾಜ ಸಮಾಜಗಳಲ್ಲಿ – ಅಷ್ಟೇ ಏಕೆ? ರಾಜಕೀಯ ಕ್ಷೇತ್ರದಲ್ಲಿ, ಆರ್ಥಿಕ ಕ್ಷೇತ್ರದಲ್ಲಿ, ಸರ್ವತ್ರ ಅದು ವ್ಯಾಪಿಸಬೇಕು. ಅತ್ಯಂತ ಕೀಳಾದವನಿಗೂ ಮೇಲಾಗುವ ಅವಕಾಶವಿರಬೇಕು. ಇವರೆಡನ್ನೂ ಒಳಕೊಂಡ ಆಧ್ಯಾತ್ಮಿಕ ದೃಷ್ಟಿಯೇ ಪೂರ್ಣದೃಷ್ಟಿ.’ ಎಂಬುದು ಕುವೆಂಪು ಅವರ ಅಭಿಮತ.
ನಾಡು, ರಾಷ್ಟ್ರ ಹಾಗೂ ಇಡೀ ವಿಶ್ವವನ್ನೇ ಒಳಗೊಳ್ಳುವ ವಿವೇಕವನ್ನು ದಯಪಾಲಿಸುವ, ಪೂರ್ಣದೃಷ್ಟಿಯೇ ಭಾರತದ ಬಹುತ್ವವನ್ನು ಗೌರವಿಸುವ ಹಾಗೂ ಸಮನ್ವಯ ಸಾಧಿಸುವ ಸಾಧನವೂ ಅಗಿದೆ. ಇಂತಹ ಹೊತ್ತಿನಲ್ಲಿ, ಕರ್ನಾಟಕದ ನೆಲದಿಂದ ವಿಶ್ವಮಾನವ ಸಂದೇಶವನ್ನು ಸಾರಿದ ಮಹಾಕವಿ ಕುವೆಂಪು ಅವರ ಹೆಸರಿನ ಪುರಸ್ಕಾರ, ದೂರದ ಅಸ್ಸಾಮಿನ ಈ ಸಾಧಕರಿಗೆ ಸಂದಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.
ಇದೇ ೨೧ರಂದು ಗುವಾಹಟಿಯಲ್ಲಿ ಈರ್ವರಿಗೂ ಕುವೆಂಪು ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ. ಈ ಮೂಲಕ ಕನ್ನಡ ಅಸ್ಸಾಂ ನಡುವೆ ಹೊಸ ಶಕೆಯೊಂದು ಆರಂಭವಾಗಲಿದೆ. ಈಗಾಗಲೇ ಕುವೆಂಪು ಅವರ ಪರಿಚಯ ಕೃತಿ ಅಸ್ಸಾಂ ಭಾಷೆಗೆ ಅನುವಾದವಾಗಿದೆ. ’ಬಹುಜಿಹ್ವಾ ಭಾರತಿಗೆ ಐಕ್ಯತೆಯ ಆರತಿ’ ಎತ್ತಿದ ಕವಿಯ ನುಡಿಗಳು ಸಾಕಾರಗೊಳ್ಳುತ್ತಿವೆ.




ಈ ಸಂದರ್ಭದಲ್ಲಿ ಇಂತಹ ಲೇಖನ ಅಗತ್ಯವಾಗಿತ್ತು. ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪಡೆದ ಸಾಹಿತಿಗಳ ಬಗ್ಗೆ ಕುತೂಹಲ ಇದ್ದವರಿಗೆ ಮೊದಲ ಪ್ರವೇಶಿಕೆ ಇದು. ಲೇಖಕರಿಗೆ ವಂದನೆಗಳು.