ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಸಮಾನ ಭಾರತ’ದ ಬಗ್ಗೆ

ಲಡಾಯಿ ಪ್ರಕಾಶನ ಜಾತಿ ಗಣತಿಯ ಬಗ್ಗೆ ಒಳನೋಟ ನೀಡುವ ‘ಅಸಮಾನ ಭಾರತ’ ಕೃತಿ ಹೊರತಂದಿದೆ. ಅದಕ್ಕೆ ಬರೆದ ಸಂಪಾದಕರ ಮಾತು ಇಲ್ಲಿದೆ-

ಸಂಪಾದಕರ ಮಾತು

ಡಾ. ಎಚ್. ಎಸ್. ಅನುಪಮಾ

ಡಾ. ಕೃಷ್ಣ ಜಿ.

ಕೆ. ಎಲ್. ಚಂದ್ರಶೇಖರ್ ಐಜೂರ್

ಈ ಸಲದ ಗಣತಿಯಲ್ಲಿ ಜಾತಿಯನ್ನು ಸೇರಿಸಬೇಕೇ? ಬೇಡವೇ? ಎಂಬ ಬಗ್ಗೆ ಹಲವರ, ಹಲವು ದೃಷ್ಟಿಕೋನದ ವಾದಗಳನ್ನು ಓದುತ್ತ, ಕೇಳುತ್ತ ಬಂದಿದ್ದೇವೆ. ಗಣತಿ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಸಿಬ್ಬಂದಿ ಹಾಗೂ ಸರ್ಕಾರವು ಜಾತಿಗಣತಿಯ ಕಷ್ಟದ ಕುರಿತು ಹೇಳುವ ತಕರಾರು ಮಾತುಗಳನ್ನೂ ಕೇಳಿಸಿಕೊಂಡಿದ್ದೇವೆ.

ನಾವೆಲ್ಲ ಬದುಕುತ್ತಿರುವ ಈ ಸಮಾಜ ವಿರುದ್ಧ ಅಭಿಪ್ರಾಯಗಳಿಂದ ಕೂಡಿದೆ. ‘ಜಾತಿಯೆಂಬುದು ಎಲ್ಲಿದೆ ಈಗ’ ಎಂದು ಕೇಳುವವರು ಮಗು ಹುಟ್ಟಿದ ಕೂಡಲೇ ಜಾತಿಸೂಚಕ ಹೆಸರಿಡುತ್ತಾರೆ. ಜಾತಿಗಣತಿ ನಡೆದರೆ ಜಾತೀಯತೆ ಹೆಚ್ಚಿ ದೇಶ ಛಿದ್ರವಾಗುತ್ತದೆನ್ನುವವರೇ ಜಾತಿ ಸಮ್ಮೇಳನವನ್ನು ಸಂಘಟಿಸುತ್ತಾರೆ. ಜಾತಿನಾಶವಾಗಬೇಕಿದ್ದರೆ ಜಾತಿಗಣತಿ ಮಾಡಿ ಎಂದು ಪ್ರಗತಿಪರರು ಒತ್ತಾಯಿಸುತ್ತಾರೆ. ಜನಸಂಖ್ಯೆ ಲೆಕ್ಕ ದೊರೆತ ಮೇಲೆ ಯಾವ ಜಾತಿಯವರನ್ನು ಎಲ್ಲೆಲ್ಲಿ ನಿಲ್ಲಿಸಬಹುದೆಂಬ ನಿಚ್ಚಳ ಚಿತ್ರ ದೊರೆತೀತೆಂದು ರಾಜಕೀಯ ನಾಯಕರು ಲೆಕ್ಕ ಹಾಕುತ್ತಿದ್ದಾರೆ. ಹೀಗೇ ಜಾತಿಯ ಕುರಿತು, ಜಾತಿಗಣತಿಯ ಕುರಿತು ಪರಸ್ಪರ ವೈರುಧ್ಯದ ಎಷ್ಟೋ ಅಭಿಪ್ರಾಯಗಳನ್ನು ಕೇಳುತ್ತಿದ್ದೇವೆ. ರಾಜಕಾರಣಿಗಳು ಹಾಗೂ ಸಾಮಾನ್ಯ ಮನುಷ್ಯರಲ್ಲಷ್ಟೇ ಅಲ್ಲ, ಸಿದ್ಧಾಂತಗಳಲ್ಲೂ ಭಿನ್ನಾಭಿಪ್ರಾಯಗಳನ್ನು ಕಾಣಬಹುದು. ಸಮಾಜವಾದವು ಜಾತಿಗೆ ಬೆನ್ನು ಹಾಕಿ ನಿಂತರೆ, ಮಾರ್ಕ್ಸ್‌ವಾದವು ವರ್ಗವನ್ನು ಮುಂದೊಡ್ಡುತ್ತಾ ಹೋರಾಟಕ್ಕೆ ಶೋಷಣೆ ಸಮಾನ ನೆಲೆಯಾಗಬೇಕೇ ಹೊರತು ಜಾತಿಯಲ್ಲ ಎನ್ನುತ್ತದೆ. ಕೆಲ ಸಮುದಾಯಗಳು ಉಪಜಾತಿಗಳ ಗಣತಿ ಹಾಗೂ ಅಸ್ಮಿತೆಯೂ ಅವಶ್ಯವೆನ್ನುತ್ತಿವೆ.

ಪ್ರಜಾಪ್ರಭುತ್ವದ ಜೀವಂತಿಕೆಯ ನೆಲೆಗಟ್ಟಿನಲ್ಲಿ ಇಂಥ ಭಿನ್ನ ಅಭಿಪ್ರಾಯಗಳು ಇರುವ ಹೊತ್ತಲ್ಲೇ ಸರ್ಕಾರ ಜಾತಿ ಜನಗಣತಿಗೆ ಒಪ್ಪಿಗೆ ನೀಡಿದೆ.

ಜನಗಣತಿಯಲ್ಲಿ ಜಾತಿ ಎಣಿಕೆ ಮಾಡುವುದರಿಂದ ಒಟ್ಟು ಜನಗಣತಿಯ ಐಕ್ಯತೆಗೆ ಕುತ್ತು ಬರಬಹುದೆಂದು ಅನೇಕರು ಹೊಸವಾದಗಳನ್ನು ಹುಟ್ಟುಹಾಕುತ್ತಿದ್ದಾರೆ. ತಮ್ಮ ಜಾತಿಬಲವನ್ನು ಹೆಚ್ಚಿಸಿಕೊಳ್ಳಲು ಜನಗಣತಿಗೆ ಒಳಪಡುವ ಪ್ರತಿಯೊಂದು ಕುಟುಂಬವೂ ತನ್ನ ಮನೆಮಂದಿಯ ಸಂಖ್ಯೆಯನ್ನು ಹಠಾತ್ ಹಿಗ್ಗಿಸಿಕೊಳ್ಳುವ ಸಾಧ್ಯತೆಗಳಿವೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲವೆನ್ನಿಸುತ್ತದೆ. ಏಕೆಂದರೆ, ಈ ಜನಗಣತಿಯಲ್ಲಿ ಹೆಸರು, ಲಿಂಗ, ಶಿಕ್ಷಣ, ವೈವಾಹಿಕ ಸ್ಥಾನ, ಉದ್ಯೋಗ ಇವೇ ಮೊದಲಾದವುಗಳ ಮಾಹಿತಿ ಪಡೆಯುವಂತೆ ಜಾತಿಯ ವಿವರಗಳನ್ನೂ ಪಡೆದುಕೊಳ್ಳಲಾಗುತ್ತದೆ. ಜನಗಣತಿ ನಡೆಸುವಾಗ ಜೀವಂತವಿರುವ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ೧೮೭೧ರಿಂದ ೧೯೩೧ರವರೆಗೆ ನಡೆಸಲಾದ ಜನಗಣತಿಗಳಲ್ಲಿ ಜಾತಿ ಎಣಿಕೆಯನ್ನು ನಡೆಸಿ ಅದರ ವಿವರಗಳನ್ನು ಪ್ರಕಟಿಸಲಾಯಿತು. ಇದಾದನಂತರ ೧೯೫೧ರಿಂದ ೨೦೦೧ರವರೆಗೆ ನಡೆದ ಜನಗಣತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾತಿ ಎಣಿಕೆಯನ್ನು ಮಾತ್ರ ನಡೆಸಲಾಗಿದೆ. ಇದುವರೆವಿಗೂ ನಡೆಸಲಾಗಿರುವ ಎಲ್ಲ ಜನಗಣತಿಗಳಲ್ಲಿ ಯಾವುದೇ ಜಾತಿಗಳ ಜನರು ಹೆಚ್ಚಾದ ಅಥವಾ ಕಮ್ಮಿಯಾದ ವಿವರಗಳನ್ನು ಜನಗಣತಿ ಆಯೋಗವು ಎಲ್ಲೂ ವರದಿ ಮಾಡಿಲ್ಲ.

*******

ಜಾತಿಗಣತಿ ಕುರಿತು ಅಲ್ಲಿಲ್ಲಿ ಚರ್ಚೆ, ಸೆಮಿನಾರುಗಳು ನಡೆಯುತ್ತಿದ್ದಾಗಲೇ ವಿಶ್ವವಿದ್ಯಾಲಯ, ವಿಧಾನಸೌಧ ಎರಡೂ ಹತ್ತಿರವಿಲ್ಲದ ಹೊನ್ನಾವರದ ತನಕವೂ ಈ ಚರ್ಚೆಯನ್ನು ಎಳೆದು ತರುವುದು ಸಾಧ್ಯವೆ ಎಂಬ ಆಲೋಚನೆ ಬಂತು. ಬರೀ ಜಾತಿ ಜನಗಣತಿಯ ಚರ್ಚೆ ತೀರಾ ಅಕಾಡೆಮಿಕ್ ಆಗಿ ಸಾಮಾನ್ಯ ಜನರನ್ನು ತಲುಪಲಾರದೇನೋ ಎನಿಸಿದ್ದರಿಂದಲೂ; ಜಾತಿ ಗಣತಿಯ ಆತ್ಯಂತಿಕ ಉದ್ದೇಶ ಮತ್ತು ಗುರಿ ಮೀಸಲಾತಿ ನೀತಿಯನ್ನು ರೂಪಿಸಲು ಅಂಕಿಅಂಶಗಳ ಆಧಾರ ಒದಗಿಸುವುದು ಎಂಬ ತಿಳುವಳಿಕೆಯಿಂದಲೂ, ಜಾತಿಗಣತಿ ವಿಷಯದ ಜೊತೆ ಮೀಸಲಾತಿಯನ್ನೂ ಸೇರಿಸಿ ಒಂದು ಸಂವಾದ ಕಾರ್ಯಕ್ರಮ ಸಿದ್ಧವಾಯಿತು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ೨೬-೦೯-೨೦೧೦ ರಂದು ‘ಜಾತಿ ಜನಗಣತಿ ಮತ್ತು ಮೀಸಲಾತಿ’ ಸಂವಾದ ಕಾರ್ಯಕ್ರಮವು ‘ಮಂಥನ’ – ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಏರ್ಪಾಡಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರೊ. ರವೀಂದ್ರ ರೇಶ್ಮೆ ಸಾಮಾಜಿಕ ನ್ಯಾಯ ಮತ್ತು ಪ್ರಸಕ್ತ ರಾಜಕಾರಣದ ಬಗ್ಗೆ ಗಮನ ಸೆಳೆದರೆ, ಡಾ. ಸಿ. ಎಸ್. ದ್ವಾರಕಾನಾಥ್ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯ ಅನುಭವಗಳನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ವಿಶ್ಲೇಷಿಸಿದರು. ಶ್ರೀ ಶಿವಸುಂದರ್ ನಮ್ಮ ಗಮನ ಮೀಸಲಾತಿಯ ಕಡೆಗಷ್ಟೇ ಅಲ್ಲ, ವರ್ಗ ಕಂದರ ಹೆಚ್ಚಿಸುತ್ತಿರುವ ಜಾಗತೀಕರಣ ಹಾಗೂ ಜಾತಿ ಪದ್ಧತಿಯ ಬಗೆಗೂ ಹರಿಯಬೇಕಿದೆ ಎಂದು ಎಚ್ಚರಿಸಿದರು. ರಾಜಕಾರಣಿಗಳಾದ ಶ್ರೀ ಎಸ್. ವಿ. ನಾಯ್ಕ್ ಹಾಗೂ ಶ್ರೀ ಜೆ. ಡಿ. ನಾಯ್ಕ್ ಅವರು ರಾಜಕಾರಣದ ಇಂದಿನ ಸವಾಲುಗಳ ಕುರಿತು ಹೇಳಿದರು. ನಂತರ ಸಂವಾದ ನಡೆದು, ಇದನ್ನು ಪುಸ್ತಕ ರೂಪದಲ್ಲಿ ಹೊರ ತರಬೇಕೆಂಬ ಅಭಿಪ್ರಾಯವೂ ಬಂತು.

ಈ ಭಾಷಣಗಳಷ್ಟೇ ಅಲ್ಲದೇ, ಆಸಕ್ತರಿಗೆ ಈ ವಿಷಯದ ಬಗೆಗೆ ಕ್ರೋಢೀಕರಿಸಿದ ಮಾಹಿತಿ ಒದಗಿಸುವ ಆಶಯದಿಂದ ಕನ್ನಡದ ಹಾಗೂ ದೇಶದ ಕೆಲವು ಖ್ಯಾತ ಚಿಂತಕರ ಬರಹಗಳನ್ನು ಕಲೆಹಾಕಲಾಯಿತು. ಒಳಮೀಸಲಾತಿಯ ಬಗೆಗೆ, ಜಾತಿ ಎಂಬ ಪದವನ್ನೇ ಕೈಬಿಡಬಹುದೇ ಎಂಬ ಬಗೆಗೆ ದೇವನೂರ ಮಹಾದೇವ ಅವರ ಚಿಂತನೆಗಳಿದ್ದರೆ, ಡಿ. ಎಸ್. ನಾಗಭೂಷಣ ಅವರು ಮೀಸಲಾತಿಯ ಪರ ವಿರೋಧ ಆಯಾಮಗಳ ಕುರಿತು ವಿಶ್ಲೇಷಿಸಿದ ಬರಹವಿದೆ. ಅಲೆಮಾರಿ ಸಮುದಾಯವಾದ ಕರಡಿ ಖಲಂದರರ ಕುರಿತು ಪ್ರೊ. ರಹಮತ್ ಅವರ ಆಪ್ತ ಬರಹ ಹಾಗೂ ಡಾ. ಮೊಗಳ್ಳಿ ಗಣೇಶ್ ಮೀಸಲಾತಿಯ ವಿವಿಧ ಆಯಾಮಗಳ ಕುರಿತು ಚಿಂತಿಸಿದ ಬರಹವೂ ಇಲ್ಲಿದೆ. ಕನ್ನಡದ ಪತ್ರಿಕೆಗಳಲ್ಲಿ ಈ ವಿಷಯದ ಕುರಿತು ಪ್ರಕಟವಾಗಿದ್ದ ಡಾ. ಟಿ. ಆರ್. ಚಂದ್ರಶೇಖರ್, ಡಾ. ಮುಜಫ್ಫರ್ ಅಸ್ಸಾದಿ, ದಿನೇಶ್ ಅಮಿನ್‌ಮಟ್ಟು ಅವರ ಲೇಖನಗಳನ್ನೂ ಸೇರಿಸಿಕೊಳ್ಳಲಾಯಿತು.

ಪಿ. ಲಂಕೇಶರ ‘ಟೀಕೆ-ಟಿಪ್ಪಣಿ’ಯ ಮೊದಲ ಸಂಪುಟದಲ್ಲಿದ್ದ ’ಒಂದು ನೀತಿ ಸಂಹಿತೆ’ ಲೇಖನವು ಜಾತಿ ಕುರಿತ ನಮ್ಮೆಲ್ಲ ಪ್ರಶ್ನೆ ಮತ್ತು ಗೊಂದಲಗಳಿಗೆ ಖಚಿತ ಉತ್ತರ ನೀಡಿ ಮತ್ತೆಮತ್ತೆ ಓದಿಸಿಕೊಳ್ಳುತ್ತಿತ್ತು. ಅಲ್ಲದೇ ರೈತ ನಾಯಕರಾಗಿದ್ದ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರ ’ಜಾತಿ ವಿನಾಶ ಮತ್ತು ಹಾವನೂರು ವರದಿ’ ಲೇಖನವು ಇವತ್ತಿನ ಜಾತಿ ಉಪಜಾತಿಗಳ ನಡುವಿನ ಒಡಕಿನ ಸಂದರ್ಭದಲ್ಲಿ ಹಿಂದುಳಿದ ವರ್ಗಗಳು ಸಾಮಾಜಿಕ ಹೋರಾಟಕ್ಕೆ ತೆತ್ತುಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಹೆಚ್ಚಿನ ಅರಿವು ನೀಡುತ್ತಿತ್ತು. ಈ ಎರಡು ಲೇಖನಗಳ ಮಹತ್ವವನ್ನು ನಮ್ಮ ಗಮನಕ್ಕೆ ತಂದ ಡಾ. ನಟರಾಜ್ ಹುಳಿಯಾರ್ ಅವರ ಸಲಹೆಯಂತೆ ಅವನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ.

ಈ ಹಿಂದೆ ಬೆಂಗಳೂರಿನ ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ’ಯ ‘ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ’ವು ಜಾತಿ ಜನಗಣತಿಯ ಅಗತ್ಯದ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣವೊಂದನ್ನು ಏರ್ಪಡಿಸಿತ್ತು. ಈ ವಿಚಾರ ಸಂಕಿರಣದ ನಡಾವಳಿಗಳ ಪರಿಣಾಮವಾಗಿ ಜಾತಿ ಜನಗಣತಿಯನ್ನು ಭಾರತೀಯ ಯುನಿಕ್ ಗುರುತು ಚೀಟಿ ಪ್ರಾಧಿಕಾರದ ಬಯೋಮೆಟ್ರಿಕ್ (ದೈಹಿಕ ಮತ್ತು ಜೈವಿಕ ಸಂಕೇತಗಳನ್ನೊಳಗೊಂಡ ವಿವರಗಳು) ಮಾಹಿತಿ ಸಂಗ್ರಹಣೆಯ ಜೊತೆಗೆ ಸೇರಿಸಬಾರದು ಮತ್ತು ಜಾತಿ ಕುರಿತಾದ ಮಾಹಿತಿ ಸಂಗ್ರಹ, ವಿಶ್ಲೇಷಣೆ ಮತ್ತು ಕ್ರೋಢೀಕರಣದ ಬಗೆಗೆ ರೆಜಿಸ್ಟ್ರಾರ್ ಜನರಲ್ ಅವರಿಗೆ ಸಹಾಯ ಮಾಡಲು ರಾಷ್ಟ್ರೀಯ ಕಾರ್ಯಪಡೆ (ನ್ಯಾಷನಲ್ ಟಾಸ್ಕ್ ಫೋರ್ಸ್) ಅಥವಾ ಉನ್ನತ ಸಲಹಾ ಸಮಿತಿಯೊಂದನ್ನು ಕೂಡಲೇ ರಚಿಸಬೇಕು ಎಂಬ ಒತ್ತಡವನ್ನು ಜಾತಿ ಜನಗಣತಿ ಕುರಿತ ಮಂತ್ರಿ ಮಂಡಲ ಸಮಿತಿ ಎದುರು ‘ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ’ವು ಇಟ್ಟಿತು. ಈ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಎಲ್ಲ ಪ್ರಬಂಧಗಳನ್ನು ಒಟ್ಟುಗೂಡಿಸಿ ಡಾ. ಎಸ್. ಜಾಫೆಟ್ ಮತ್ತು ಡಾ. ಚಂದನ್ ಗೌಡರವರ ಸಂಪಾದಕತ್ವದಲ್ಲಿ ‘ಕ್ಯಾಸ್ಟ್ ಸೆನ್ಸಸ್ – ಟುವಾರ್ಡ್ಸ್ ಎನ್ ಇನ್‌ಕ್ಲೂಸಿವ್ ಇಂಡಿಯಾ’ ಎಂಬ ಪುಸ್ತಕವು ಪ್ರಕಟಗೊಂಡಿತು. ಈ ಪುಸ್ತಕದ ನಾಲ್ಕು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ ಇಲ್ಲಿ ಬಳಸಿಕೊಳ್ಳಲಾಗಿದೆ. ಜೊತೆಗೆ ಇದೇ ಸಂದರ್ಭದಲ್ಲಿ ವಿವಿಧ ಇಂಗ್ಲಿಷ್ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡ ಚಿಂತಕರಾದ ಆನಂದ್ ತೇಲ್ತುಂಬ್ಡೆ, ಕಾಂಚಾ ಐಲಯ್ಯಾ ಹಾಗೂ ಗೇಲ್ ಓಂವೆಡ್ತ್ ಅವರ ಲೇಖನಗಳನ್ನೂ ಅನುವಾದಿಸಿ ಬಳಸಿಕೊಳ್ಳಲಾಗಿದೆ.

ಜಾತಿ-ಮೀಸಲಾತಿ ಕುರಿತು ಇಂದಿನ ತಲೆಮಾರಿನವರು ಪರಿಭಾವಿಸುವ ಕ್ರಮವನ್ನು ತಿಳಿಸುವ ಅರವಿಂದ ಚೊಕ್ಕಾಡಿ ಹಾಗೂ ಎಸ್. ಸಿ. ದಿನೇಶ್ ಕುಮಾರ್ ಅವರ ಬರಹಗಳೂ ಇಲ್ಲಿವೆ. ಜಾತಿ, ಜನಗಣತಿ ಮತ್ತು ಮೀಸಲಾತಿಯ ವಿಶ್ಲೇಷಣೆ ಕುರಿತು ಇನ್ನೂ ಹಲವರ ಉತ್ತಮ ಚಿಂತನೆ, ಬರಹಗಳಿದ್ದಿರಬಹುದು. ನಮ್ಮ ಗಮನಕ್ಕೆ ಬಂದ ಕೆಲವನ್ನಷ್ಟೇ ಇಲ್ಲಿ ಸಂಪಾದಿಸಿ ಪುಸ್ತಕ ರೂಪದಲ್ಲಿ ಓದುಗರ ಕೈಗಿಟ್ಟಿದ್ದೇವೆ.

******

ತಮ್ಮ ಲೇಖನಗಳನ್ನು ಪ್ರಕಟಿಸಲು ಅನುಮತಿ ನೀಡಿದ ಎಲ್ಲ ಬರಹಗಾರರಿಗೆ; ಪುಸ್ತಕ ರೂಪಿಸುವ ಸಂದರ್ಭದಲ್ಲಿ ಸಲಹೆ ಸೂಚನೆಗಳನ್ನು ನೀಡಿದ ಪ್ರೊ. ಬಿ. ಗಂಗಾಧರ ಮೂರ್ತಿ, ಡಾ. ನಟರಾಜ್ ಹುಳಿಯಾರ್, ಶ್ರೀ ಶಿವಮೊಗ್ಗ ಮುನೀರ್; ಲಂಕೇಶರ ಲೇಖನಕ್ಕಾಗಿ ಗೌರಿ ಲಂಕೇಶ್; ಪ್ರೊ.ಎಂ.ಡಿ.ಎನ್. ಅವರ ಲೇಖನಕ್ಕಾಗಿ ಪಚ್ಚೆ ನಂಜುಂಡಸ್ವಾಮಿ ಮತ್ತು ರವಿಕುಮಾರ್ ಬಾಗಿ; ಬರಹಗಳನ್ನು ಅನುವಾದಿಸಲು ಅನುಮತಿ ನೀಡಿದ ಡಾ. ಎಸ್. ಜಾಫೆಟ್; ಉತ್ಸಾಹದಿಂದ ಇದನ್ನು ಪ್ರಕಟಿಸಲು ಮುಂದೆ ಬಂದ ಹಾಗೂ ಪುಸ್ತಕದ ಆಶಯಕ್ಕೆ ತಕ್ಕಂಥ ಹೆಸರು ಸೂಚಿಸಿದ ಲಡಾಯಿ ಪ್ರಕಾಶನದ ಶ್ರೀ ಬಸವರಾಜ ಸೂಳಿಭಾವಿ; ಅಂದದ ಮುಖಪುಟ ರಚಿಸಿಕೊಟ್ಟ ಲೇಖಕ ಮಂಜುನಾಥ್ ಲತಾ; ಮುದ್ರಣ ಸಹಾಯಕರು ಹಾಗೂ ಈ ಪುಸ್ತಕ ಪ್ರಕಟಗೊಳ್ಳಲು ಕಾರಣರಾದ ಎಲ್ಲರಿಗೂ ನಮ್ಮ ಕೃತಜ್ಞತೆಗಳು.

‍ಲೇಖಕರು G

31 March, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading