ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ : ಹೊಸ ವರ್ಷಾಚರಣೆ ಎಂಬ ಹಬ್ಬವಲ್ಲದ ಹಬ್ಬ


ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರಕ್ಕೆ ಇಂದು ಅಂದರೆ ಮಂಗಳವಾರ ರಾತ್ರಿ ಎಂಟರಿಂದ ನಾಳೆ ರಾತ್ರಿ ಎಂಟು ಗಂಟೆಯ ವರೆಗೆ ಹದಿನಾರು ಸಾವಿರ ಪೋಲಿಸರ ಕಾವಲು. ಭದ್ರತೆಗೆ ೨೦ ಕೆ.ಎಸ್.ಆರ್ ಪಿ ತುಕಡಿ ಮತ್ತು ೧೫ ಸಿ ಎ ಆರ್ ತುಕಡಿಗಳ ನಿಯೋಜನೆ, ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚುವರಿ ಪೋಲಿಸರ ನಿಗಾ. ಇನ್ನು ಬ್ರಿಗೇಡ್ ರೋಡ್, ಎಂ.ಜಿ ರೋಡ್ ಗಳಲ್ಲಿ ೭೦೦ ಪೇದೆಗಳ ನಿಯೋಜನೆ, ೭ ಡಿಸಿಪಿಗಳು ೫ ಎಸಿಪಿಗಳು ಹಲವಾರು ಇನಸ್ಪೆಕ್ಟರ್ ಸಬ್ ಇನಸ್ಪೆಕ್ಟರ್ ಗಳಿಂದ ಭದ್ರತೆಯ ಉಸ್ತುವಾರಿ, ಕಿಡಿಗೇಡಿಗಳ ಮೇಲೆ ನಿಗಾ ಇಡಲು ೩೦ ವಾಚ್ ಟವರುಗಳ ನಿರ್ಮಾಣ, ಅವುಗಳ ಮೇಲೆ ಹತ್ತಿ ನಿಂತು ಪ್ರತಿಯೊಬ್ಬರ ಚಲನವಲನಗಳ ವಿಡಿಯೋ ರೆಕಾರ್ಡಿಂಗ್ ಮಾಡಲಿರುವ ಸಿಬ್ಬಂದಿ, ಸುಮಾರು ಐವತ್ತು ಸಿ ಸಿ ಕ್ಯಾಮೆರಾ ಅಳವಡಿಕೆ, ಸಿಬ್ಬಂದಿ ಕೈಯ್ಯಲ್ಲೂ ಹ್ಯಾಂಡಿಕ್ಯಾಮ್ ಗಳು… …ಎಲ್ಲ ಏತಕ್ಕಾಗಿ? ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವದಕ್ಕಾಗಿ…! ರಾಜ್ಯದ ಇತರೆ ಮಹಾನಗರಗಳಾದ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು ಮತ್ತಿತರೆಡೆ ಕೂಡ ವರ್ಷಾಂತ್ಯದ ಸಂಭ್ರಮಕ್ಕೆ ಆಡಳಿತ ತಾನು ಮಾಡಿಕೊಂಡ ಸಿದ್ಧತೆಯ ವಿವರಗಳನ್ನು ಇದೇ ರೀತಿ ಸಾರ್ವಜನಿಕವಾಗಿಸುವದನ್ನು ನಾವು ಓದುತ್ತಿರುತ್ತೇವೆ.
ಇದನ್ನು ನಾನು ಬರೆಯುತ್ತಿರುವ ಈಗ ನ್ಯೂಝಿಲಂಡ್ ಹಾಗೂ ಆಸ್ಟ್ರೇಲಿಯದಲ್ಲಾಗಲೇ ೨೦೧೩ ಗೋಣುಚೆಲ್ಲಿಯಾಗಿದೆ, ನಾಳೆ ನೀವು ಇದನ್ನು ಓದುತ್ತಿರುವ ಹೊತ್ತಿಗೆ ಭಾರತದಲ್ಲೂ ೨೦೧೪ ಕಾಲಿಟ್ಟಾಗಿರುತ್ತದೆ. ಏನು ಬದಲಾಗಿರುತ್ತದೆ? ಏನೆಂದರೆ ಏನೂ ಇಲ್ಲ. ಋತುಮಾನ, ಹವಾಮಾನ, ಜನ, ಅವರ ರೀತಿ-ನೀತಿ, ಮಾತು ವರ್ತನೆ, ವ್ಯವಸ್ಥೆ, ರಾಜಕಾರಣ ಯಾವುದೂ ಬದಲಾಗಿರುವದಿಲ್ಲ. ಕ್ಯಾಲೆಂಡರಿನ ಒಂದು ಹಾಳೆ ಮಗುಚಿಕೊಳ್ಳುತ್ತದೆ. ಹೊಸದೊಂದು ಕ್ಯಾಲೆಂಡರ್ ಗೋಡೆಗೇರುತ್ತದೆ. ದಿನಾಂಕ ಬರೆಯುವ ಅಂಕಿಸಂಖ್ಯೆಯಲ್ಲಿ ವ್ಯತ್ಯಾಸವಾಗಿರುತ್ತದೆ. ನಮ್ಮ ಆರ್ಥಿಕ ವರ್ಷಕ್ಕೂ, ಶೈಕ್ಷಣಿಕ ವರ್ಷಕ್ಕೂ, ಈ ಕ್ಯಾಲೆಂಡರ್ ವರ್ಷಕ್ಕೂ ತಾಳೆಯೇ ಇಲ್ಲ.
ರೋಮನ್ ಸಾಮ್ರಾಜ್ಯದಲ್ಲಿ ಬಹುಶ: ಕ್ರಿ.ಶ.ಪೂ ೧೫೩ ರಲ್ಲಿ ಜನವರಿ ೧ ನೇ ತಾರೀಖು ವರ್ಷಾರಂಭದ ದಿನವಾಗಿ ಪರಿಗಣಿಸಲ್ಪಟ್ಟು ಕ್ರಿ.ಶ.ಪೂ ೪೫ ರಲ್ಲಿ ಪ್ರಾರಂಭವಾದ ಜ್ಯೂಲಿಯನ್ ಕ್ಯಾಲೆಂಡರ್ ಕೂಡ ಅದೇ ದಿನಾಂಕವನ್ನು ಹೊಸ ವರ್ಷದ ಮೊದಲ ದಿನವನ್ನಾಗಿ ಬಳಸುವದನ್ನು ಮುಂದುವರಿಸಿದಾಗಿನಿಂದ ಹಾಗೇ ನಡೆದುಕೊಂಡು ಬಂದು ಈಸ್ಟರ್ ಆಚರಣೆಯ ಸಮಯದಲ್ಲುಂಟಾಗುತ್ತಿದ್ದ ಕಾಲದ ವ್ಯತ್ಯಾಸವನ್ನು ಸರಿದೂಗಿಸಲು ೧೫೮೨ರಲ್ಲಿ ೧೩ನೇ ಪೋಪ್ ಗ್ರಿಗೊರಿಯ ಕಾಲದಲ್ಲಿ ಜ್ಯೂಲಿಯನ್ ಕ್ಯಾಲೆಂಡರಿಗೆ ಸಣ್ಣ ಪುಟ್ಟ ಮಾರ್ಪಾಡು ಮಾಡಿದಾಗಿನಿಂದ ಅದನ್ನು ಗ್ರೆಗೊರಿಯನ್ ಕ್ಯಾಲೆಂಡರ್ ಎಂದು ಕರೆಯಲಾಗುತ್ತಿದೆ. ಜಗತ್ತಿನಾದ್ಯಂತ ಅದು ಈಗ ಕಾಲನಿಷ್ಕರ್ಷೆಯ ಸ್ಟ್ಯಾಂಡರ್ಡ್ ಮಾನದಂಡವಾಗಿದೆ.ಸೌದಿ ಅರೇಬಿಯಾ, ಇಥಿಯೋಪಿಯಾ, ನೇಪಾಳ, ಇರಾನ್ ಮತ್ತು ಅಫಘಾನಿಸ್ತಾನ್ ಹೊರತು ಪಡಿಸಿ ಬಹುಪಾಲು ಇತರೆಲ್ಲ ದೇಶಗಳಲ್ಲಿ ಇದೇ ಗ್ರೆಗೋರಿಯನ್ ಕ್ಯಾಲೆಂಡರ್ ಜಾರಿಯಲ್ಲಿದೆ. ಭಾರತ, ಬಂಗ್ಲಾದೇಶ, ಇಸ್ರೇಲ್ ಮತ್ತು ಬರ್ಮಾ ದೇಶಗಳು ಗ್ರೆಗೊರಿಯನ್ ಕ್ಯಾಲೆಂಡರ್ ಜೊತೆಜೊತೆಗೆ ತಮ್ಮದೇ ಪಾರಂಪರಿಕ ಶಕೆಗಳನ್ನು ಬಳಸುತ್ತಿರುವದೂ ಉಂಟು. ಉದಾ: ಭಾರತದಲ್ಲಿ ಶಾಲಿವಾಹನ ಶಕೆ.
ವಾಸ್ತವವಾಗಿ ನಮ್ಮ ಹೊಸ ವರ್ಷಾರಂಭವಾಗುವದು ಮಾರ್ಚ್ ನಲ್ಲಿ, ಚೈತ್ರ ಮಾಸದ ಆರಂಭದೊಂದಿಗೆ. ಕರ್ನಾಟಕದಲ್ಲಿ ಯುಗಾದಿ ಅದನ್ನು ಪ್ರತಿನಿಧಿಸಿದರೆ ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಅದನ್ನು ಕರೆಯಲಾಗುತ್ತದೆ. ಚೈತ್ರ ವೈಶಾಖಗಳೆರಡು ಅಡಕಗೊಂಡಿರುವ ವಸಂತ ಋತುವಿನೊಂದಿಗೆ ಬಿರು ಬಿಸಿಲಿನ ಬೇಗೆಯ ನಡುವೆಯೇ ಗಿಡಮರಗಳಲ್ಲಿ ಹೊಸ ಚಿಗುರೊಡೆಯುತ್ತದೆ. ಕೋಗಿಲೆಗಳ ಕೊರಳಿಂದ ಧ್ವನಿ ಹೊಮ್ಮುತ್ತದೆ. ಕಲ್ಯಾಣಮಂಟಪಗಳು ಜೀವ ತಳೆಯುತ್ತವೆ, ಹೊಸ ಒಸಗೆ ಬೆಸೆಯುತ್ತವೆ. ಪಾಟಿ ಪುಸ್ತಕ ಬಿಸಾಡಿ ಮಕ್ಕಳೂ ಸ್ವಲ್ಪ ನಲಿಯುತ್ತವೆ. ಹೋಳಿ, ನಾಗಪಂಚಮಿ, ಗಣೇಶ ಚತುರ್ಥಿ, ದಸರೆ,ದೀಪಾವಳಿ ಯ ಸರಣಿಗೆ ಯುಗಾದಿ ಮುನ್ನುಡಿ ಬರೆಯುತ್ತದೆ.
ಯುಗಾದಿ ಹಬ್ಬ ನಮಗೆ ಪರಿಚಿತವಿತ್ತು. ಈಗ ಆಚರಿಸಲ್ಪಡುವ ಹೊಸ ವರ್ಷಾರಂಭದ ಆಚರಣೆಯನ್ನು ನಾವು ೧೯೭೦ರ ದಶಕದ ಕೊನೆಯ ವರೆಗಂತೂ ಕಂಡಿರಲಿಲ್ಲ. ೧೯೮೦ ರ ದಶಕದ ಆರಂಭಿಕ ವರ್ಷಗಳಲ್ಲಿ ದೆಹಲಿಯಲ್ಲಿ ನಮ್ಮ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಹತ್ತಾರು ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದು ಸಣ್ಣ ಮಟ್ಟದಲ್ಲಿ ಅದನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದರು. ಮೈ ಕೊರೆವ ಡಿಸೆಂಬರ್ ಅಂತ್ಯದ ಚಳಿಯಲ್ಲಿ ಕ್ಯಾಂಪ್ ಫೈರ್ ಮಾಡಿ, ಹಾಡಿ, ಕುಡಿದು, ಕುಣಿದು ಪರಸ್ಪರರಿಗೆ ಹೊಸವರ್ಷದ ಶುಭ ಹಾರೈಸಿ ನಾವು ಮಲಗುತ್ತಿದ್ದೆವು.
೧೯೮೯ರ ಗ್ಲೋಬಲೈಝೇಶನ್ ಯುಗಾರಂಭದ ನಂತರ ಭಾರತ ಒಂದು ಹಂಡಬಂಡ ರೀತಿಯಲ್ಲಿ ಇದ್ದಕ್ಕಿದ್ದಂತೆ ಯುರೋಪ್ ಅಮೇರಿಕಾ ಆಗತೊಡಗಿತಲ್ಲ ಇಂಥ ಆಚರಣೆಗಳಿಗೆ ಬೇರೆಯದೇ ಖದರ್ ಪ್ರಾಪ್ತವಾಯಿತು. ವ್ಯಾಲೆಂಟೈನ್ ಡೇ, ಫ್ರೆಂಡ್ ಶಿಪ್ ಡೇ ಅಂತ ಏನೇನೋ ಬರತೊಡಗಿದವು. ಪಿಜ್ಜಾ ಬಂತು, ನೂಡಲ್ಸ್ ಬಂತು, ಕೆಂಟಕಿ ಫ್ರೈಡ್ ಚಿಕನ್ ಬಂತು, ಉಡುಗೆ ಮೊಳಕಾಲ ಮೇಲೇರಿ ತೊಡೆಯಿಂದಲೂ ಮೇಲೇರತೊಡಗಿತು. ನಮ್ಮ ನಗರ ಪಟ್ಟಣಗಳು ತಮ್ಮ ತಲೆತಲಾಂತರದ ಇಂಡಿವಿಜುಅಲ್ ಸ್ವರೂಪ ವೈಶಿಷ್ಟ್ಯಗಳನ್ನು ಬಿಟ್ಟುಕೊಟ್ಟು ಏಕರೂಪಿಯಾಗುತ್ತ ಹೋದವು. ಕುರುಡು ಕಾಂಚಾಣವೇ ಜನರ ಕಣ್ಣಾಗತೊಡಗಿತು, ಮನಸಾಗತೊಡಗಿತು. ಹಬ್ಬ ಹರಿದಿನಗಳು ವಾಣಿಜ್ಯೀಕೃತವಾಗಿ, ಧ್ಯಾನ, ಆಧ್ಯಾತ್ಮ, ಯೋಗಗಳು ಮಾರಾಟದ ಸರಕಾಗಿ, ಗುಡಿ ಗುಂಡಾರಗಳು ಲಾಭದಾಯಕ ಉದ್ಯಮಗಳಾಗಿ, ಮಾನವ ಸಂಬಂಧಗಳು ಹೃದಯಹೀನವಾಗುತ್ತ ಎಲ್ಲವೂ, ಹೆಚ್ಚು ಕಡಿಮೆ ಎಲ್ಲವೂ, ಮಾರ್ಕೆಟಿಂಗ್ ತಂತ್ರಗಾರಿಕೆಯೊಳಗೆ ಬಂದಿಯಾಗುತ್ತ ಹೋಗಿ ಈಗ ಹೊಸ ವರ್ಷದ ಆಚರಣೆ ಎಂಬುದು ಒಂದು ಕೃತಕ ಉನ್ಮತ್ತತೆಯ, ಉನ್ಮಾದದ ಪರಿಪಾಠವಾಗಿದೆ. ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ.
ಹೊಸ ವರ್ಷಾರಂಭದ ಸಿದ್ಧತೆ ಒಂದೆರಡು ದಿನ ಮೊದಲೇ ಶುರುವಾಗುತ್ತದೆ. ಟಿವಿ ಚಾನೆಲ್ ಗಳು ಥರಾವರಿ ವಿಶೇಷ ಮನರಂಜನೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ರಿಸಾರ್ಟ್ ಗಳು, ಹೊಟೆಲ್ ಗಳು, ಬಾರ್ ರೆಸ್ಟೋರಂಟ್ ಗಳು ಬಗೆಬಗೆಯಾಗಿ ತಯಾರಿ ಮಾಡಿಕೊಂಡು ಗ್ರಾಹಕರನ್ನಾಕರ್ಷಿಸುತ್ತವೆ. ಅಲ್ಲಿ ಸಲ್ಲದವರು ತಮ್ಮದೇ ಸೀಮಿತ ಸಂಪನ್ಮೂಲಗಳೊಳಗೆ ಹಳೆಯ ವರ್ಷವನ್ನು ಬೀಳ್ಕೊಡುವ ಹೊಸ ವರ್ಷವನ್ನು ಸ್ವಾಗತಿಸುವ ಸಿದ್ಧತೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಮುಖ್ಯವಾಗಿ ಕುರುಕಲು ತಿಂಡಿಗಳು, ಬಗೆಬಗೆಯ ತಿನಿಸುಗಳು, ಸಿಗರೇಟ್, ಬ್ರೆಡ್, ಕಬಾಬ್, ಚಿಪ್ಸ್, ಥಮ್ಸ್ ಅಪ್, ಬರ್ಗರ್, ಸೋಡಾ, ಮ್ಯೂಜಿಕ್ ಸಿಸ್ಟಮ್, ಸ್ಪೀಕರ್ಸ್ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮದ್ಯ..! ಮದ್ಯಕ್ಕಾಗಿ ಜನರ, ವಿಶೇಷವಾಗಿ ಯುವಜನರ ಸಂಭ್ರಮ, ಹುಡುಕಾಟ, ಓಡಾಟ ಹೇಗಿರುತ್ತದೆಂದರೆ ಇವರು ತಾವು ಮದ್ಯ ಸೇವಿಸದಿದ್ದರೆ ಹೊಸ ವರ್ಷ ಆಗಮಿಸುವದೇ ಇಲ್ಲ ಎಂದು ಭಾವಿಸಿಕೊಂಡಿದ್ದಾರೇನೋ ಎನ್ನಿಸುವಂತೆ.

ನಾನಿದನ್ನು ವಿರೋಧಿಸುತ್ತೇನೆಯೇ? ಇಲ್ಲ. ಆದರೆ ಇದನ್ನು ಕುಟುಂಬಗಳು, ಉದ್ಯೋಗ ಸಂಸ್ಥೆಗಳು, ಸಮುದಾಯಗಳು, ನೆರೆಹೊರೆಯವರು, ಸ್ನೇಹಿತರು, ಒಂದು ವರ್ಷದ ಆಗು ಹೋಗುಗಳ ಪುನರಾವಲೋಕನಕ್ಕೆ, ಆತ್ಮಾವಲೋಕನಕ್ಕೆ ಒಂದು ಸಂದರ್ಭವೆಂದು ಭಾವಿಸಿಕೊಂಡು ಅರ್ಥಪೂರ್ಣವಾಗಿ ಆಚರಿಸಬಹುದೇ? ಎಂದು ಯೋಚಿಸುತ್ತೇನೆ. ನಮ್ಮ ದೇಶದೊಂದಿಗೆ, ಅದರ ವರ್ತಮಾನದ ಸ್ಥಿತಿಗತಿಗಳೊಂದಿಗೆ ನಮ್ಮನ್ನು ರಿಲೇಟ್ ಮಾಡಿಕೊಳ್ಳುವ ಮನಸ್ಥಿತಿ ಕ್ರಮೇಣ ಕ್ಷೀಣಿಸುತ್ತಿರುವ ಇಂದು ಹಣಬಲ, ತೋಳ್ಬಲ ಇಲ್ಲದೇ, ಪ್ರಾಮಾಣಿಕತೆಯನ್ನೇ ಮೂಲಪ್ರಣಾಳಿಕೆಯನ್ನಾಗಿಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಜನರ ಪಡೆಯೊಂದು ಗಣನೀಯ ಸಂಖ್ಯೆಯಲ್ಲಿ ಆಯ್ಕೆಯಾಗಿ ದೇಶದ ರಾಜಧಾನಿ ದಿಲ್ಲಿ ರಾಜ್ಯದ ವಿಧಾನಸಭೆಯಲ್ಲಿ ಆಳುವ ಪಕ್ಷವಾಗಿ ಹೊಮ್ಮಿದ ಪವಾಡಸದೃಶ ವಿದ್ಯಮಾನ ಘಟಿಸಿದ ವರ್ಷವಾಗಿ ೨೦೧೩ ದಾಖಲೆಯಾಗಲಿದೆ. ಈ ದೇಶದ ಭವಿಷ್ಯದ ಕುರಿತು ನಿರಾಶೆ ಕವಿದುಹೋಗಿದ್ದ ಮಬ್ಬಿನಲ್ಲಿ ಒಂದು ನಿರೀಕ್ಷೆಯ ದೀಪ ಬೆಳಗಿದೆ. ಮೊನ್ನೆ ಮುಜ಼ಫರಾಬಾದ್ ಎಂಬ ಊರಿನಲ್ಲಿ ಭಾರತದ ದರಿದ್ರ ರಾಜಕೀಯ ಪಕ್ಷಗಳು ವೋಟುಗಳೆಂಬ ಎಲುಬಿನ ತುಂಡುಗಳಿಗೆ ಜೊಲ್ಲು ಸುರಿಸುವ ನಾಯಿಗಳೋಪಾದಿಯಲ್ಲಿ ಹಚ್ಚಿದ ಕೋಮು ದ್ವೇಷದ ದಳ್ಳುರಿಯಲ್ಲಿ ಬೆಂದು ಬಸವಳಿದು ನಿರಾಶ್ರಿತ ಶಿಬಿರಗಳಲ್ಲಿರುವ ಮುಸ್ಲಿಂ ಕುಟುಂಬಗಳ ೩೪ ಮಕ್ಕಳು ಮೂರು ತಿಂಗಳ ಅವಧಿಯಲ್ಲಿ ಸಾವನ್ನಪ್ಪಿದ್ದು ಉತ್ತರ ಪ್ರದೇಶ್ ಸರಕಾರಕ್ಕೆ ಅಸಹಜ ಅನಿಸಿಲ್ಲ. ಆ ಸರಕಾರದ ಮುಖ್ಯ ಕಾರ್ಯದರ್ಶಿ ಎಂಬ ಉನ್ನತ ಹುದ್ದೆಯ ಮಹಾಶಯನೊಬ್ಬ “ಚಳಿಗೆ ಯಾರೂ ಸಾಯುವದಿಲ್ಲ. ಹಾಗಿದ್ದರೆ ಸೈಬಿರಿಯದಲ್ಲಿ ಯಾರೂ ಬದುಕುತ್ತಿರಲಿಲ್ಲ” ಎಂದನಂತೆ. ಅದನ್ನು ಮಾಧ್ಯಮಗಳಲ್ಲಿ ಕೇಳಿದಾಗ ನನಗೆ ನಾನು ಎರಡು ವರ್ಷಗಳ ಹಿಂದೆ ಹೀಗೇ ಹೊಸ ವರ್ಷ ಆಗಮಿಸಲಿದ್ದ ಮುನ್ನಾದಿನ, ಇಂಡಿಯಾ ಪ್ರಕಾಶಿಸಿ ಭಾರತ ಮಂಕುಕವಿದಂತೆ ಕಂಡ ಗಳಿಗೆಯಲ್ಲಿ ಬರೆದ “ಕ್ಷಮಿಸಿ” ಎಂಬ ಶೀರ್ಷಿಕೆಯ ಕವಿತೆ ನೆನಪಾಯಿತು ಅದು ಇಲ್ಲಿದೆ.
ಹಾಡು ನರ್ತನ ಕುಣಿತ ಕುಡಿತ
ಕಿವಿಗಡಚಿಕ್ಕುವ ಸದ್ದು ಸಂಗೀತ, ನಡುವೆ
ಸುದ್ದಿಮಾಧ್ಯಮ.. ಅಲ್ಲಿ,
ಎಂತೆಂಥವೋ ಸಾವು
ಉತ್ತರ ಹಿಂದುಸ್ತಾನದಲ್ಲಿ ಮೈ ಕೊರೆವ ಚಳಿಗೆ
ನಿನ್ನೆ ವರೆಗೆ
ಸತ್ತವರು ನೂರಿಪ್ಪತ್ತು ,ಅತ್ತವರ
ಲೆಕ್ಕ ಇಲ್ಲ ಯಾವ ಸರಕಾರಿ ಆಡಿಟ್ ನಲ್ಲೂ
 
ಮನುಷ್ಯದೇಹಗಳು ಅಂಕಿಗಳಾಗುತ್ತ ಸಂಖ್ಯೆಗಳಾಗುತ್ತ
ಇಂದು ಸಂಖ್ಯೆ ನೂರೈವತ್ತು.,ದಯವಿಟ್ಟು
ಅವು ಚಳಿಗಾಳಿಯ ಸಾವುಗಳೆನ್ನದಿರಿ
ಸತ್ಯವಾಗಿ
ಬಡತನದ ಸಾವುಗಳೆನ್ನಿ
ಸುಂದರ ಸುಸಂಸ್ಕೃತ ಭಾರತಕ್ಕೆ ಬೇಡದ ಕಿರಿಕಿರಿಗಳ ಸಾವುಗಳೆನ್ನಿ
 
ಕರುಳ ತುಂಬ ವಿದೇಶಿ ಮದ್ಯ ಹನಿಸಿಕೊಂಡು
ಹತ್ತಿಪ್ಪತ್ತು ಚಪಾತಿ ತಿಂದು
ಹಾಸಿಗೆ ತುಂಬ
ಹೊರಳಿ ಕಾಮದಾಟ ಆಡಿ ತಣಿದು ಮೈ ತುಂಬ
ರಜಾಯಿ ಹೊದ್ದು ಮಲಗುವವರು ಚಳಿಗೆ ಸಾಯರು
 
ದಿಟವಾಗಿ ಅವುಗಳ ಗಟ್ಟಿ ಹೊದ್ದಿಕೆ ಇಲ್ಲದೆ ಸೆಟೆದ ದೇಹಗಳ ಸಾವೆನ್ನಿ
ಸ್ವತಂತ್ರ ಭಾರತದ ನಿರೀಕ್ಷೆಗಳ ಸಾವೆನ್ನಿ
ಮನುಷ್ಯರ ನಮ್ರ ಕನಸುಗಳ ಸಾವು, ಸಣ್ಣ-ಪುಟ್ಟ ಆಶೆಗಳ ಸಾವು
ಕೊನೆಗೆ ಯಾರಿಗೂ ಏನನ್ನೂ ಹೇಳಿಕೊಳ್ಳಲಸಾಧ್ಯವಾದ ಸ್ಥಿತಿಯ
ಮುಖ ಮುಚ್ಚಿ ಅತ್ತ ಭಾಷೆಯ ಸಾವೆನ್ನಿ, ದಯವಿಟ್ಟು…
ಹಸಿವಿನ ಸಾವೆನ್ನಿ
 
ಕೇಳಿಸಿಕೊಳ್ಳಿ ಕ್ಷೀಣವಾಗಿ ಬಹಳ ಧ್ವನಿಗಳಿವೆ
ಕೊನೆಯುಸಿರೆಳೆಯುತ್ತ ಅವು ಹಾರೈಸುತ್ತಿರಬಹುದು.., ಕೇಳಿಸಿಕೊಳ್ಳೋಣ,
“…ಹೊಸ ವರ್ಷ ನಿಮಗೆ ಹರುಷ ತರಲಿ.. .. ..”
 
“ಅವಧಿ”ಯ ಓದುಗರಿಗೆಲ್ಲ ಹೊಸ ವರ್ಷದ ನನ್ನ ಹಾರ್ದಿಕ ಶುಭ ಹಾರೈಕೆಗಳು.
 
 

‍ಲೇಖಕರು G

1 January, 2014

7 Comments

  1. Naren

    Dear Sir
    Anyway this celebration is better than a election rally of modi/rahul, wherein same security arrangements are made.
    Let people enjoy the celebration. why so much fuss.
    Even international conferences and sahithya sammelanas also you have gundu paty!

  2. ಪ್ರತಾಪ ರಾಠೋಡ

    ನಿಮ್ಮ ಕವನ ಇಂದಿನ ನೈಜ ಸ್ಥಿತಿಯಾಗಿರುವುದು ವಿಪಯಾ೵ಸ

  3. shivu

    SIR THE INTENTION BEHIND THE WRITING OF ABOVE IS NOT SO CLEAR.

  4. Rashmi

    ಅರ್ಥ ಪೂರ್ಣವಾದ ಬರಹ ಸರ್..(Y)

  5. ರವೀಂದ್ರ ಮಾವಖಂಡ

    “ಅತ್ತವರ ಲೆಕ್ಕ ಇಲ್ಲ ಯಾವ ಸರಕಾರಿ ಆಡಿಟ್ ನಲ್ಲೂ”
    What a line sir! Thanks For a good article to Prof. Ashok Shettar Sir and AVADHI

  6. Pramod

    ಪ್ರಖ್ಯಾತ ದೇವಸ್ಥಾನಗಳಲ್ಲಿ, ಜನಜ೦ಗುಳಿಯೊಳಗೆ ಹಣ್ಣುಕಾಯಿ ಕೌ೦ಟರ್ ಹತ್ತಿರ ದುಡ್ಡು ಕೈತುದಿಯಲ್ಲಿ ಮಡಿಚಿಟ್ಟುಕೊ೦ಡು ಒಬ್ಬರ ಮೇಲೊಬ್ಬರು ಮುಗಿಬಿದ್ದ ಸೀನು ನಿನ್ನೆ ರಸ್ತೆ ಬದಿಯ ಬಾರ್ ಗಳಲ್ಲಿ ಕ೦ಡು ಬರುತ್ತಿತ್ತು.
    “ಏನೂ ನೀನು ಕುಡಿಯುವುದಿಲ್ವಾ.. ಛೇ.. ಕುಡಿ..ವೇಸ್ಟ್ ” ಪುಡ್ ವರ್ಲ್ಡ್ ಎ೦ಬಾ ಸ್ವಾಭಿಮಾನಿಗಳ ಬಾರ್ ನ ಬಿಲ್ಲ್ ಕೌ೦ಟರ್ ನಲ್ಲಿ ತರಕಾರಿ ತಗೊಳ್ಳುತ್ತಿದ್ದಾಗ 25ರ ಆಸುಪಾಸಿನ ಹುಡುಗಿಯರು ತಮ್ಮ ತಮ್ಮಲೇ ಮಾತನಾಡುತಿರುವದನ್ನು ಕೇಳಿ ಕುಡಿಯದ ಮೈನಾರಿಟಿ ಮನಸ್ಸು ಘಾಸಿಗೊ೦ಡಿದೆ.
    ಜನ ಮರಳು ಜಾತ್ರೆ ಮರಳು

  7. Rukmini Nagannavar

    Houdu sir,
    Nijakkoo idu habbavallada habba…
    Yugada aadiye yugaadiyinda shuru agutte…
    houdu, ondu varshada aagu-hogugagala punaraavalokanakke, aatmaavalokanakke ondu sanarbha anta naavidanna tegedukollabeku..
    Thank you very much
    Rukmini Nagannavar

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading