
ಈ ತಿಂಗಳ (ಫೆಬ್ರುವರಿ ೨೦೧೪) ಹನ್ನೊಂದನೇ ತಾರೀಖು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭೇರಾಜ್ ಬಲ್ಡೋಟಾ ಜೈನ ಸಂಸ್ಕೃತಿ ಅಧ್ಯಯನ ಪೀಠವು ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಜೈನಧರ್ಮದಲ್ಲಿ ಯಕ್ಷ-ಯಕ್ಷಿಯರು: ಪ್ರೇರಣೆ ಪರಿಕಲ್ಪನೆ” ಎಂಬ ರಾಷ್ಟ್ರೀಯ ವಿಚಾರ-ಸಂಕಿರಣದಲ್ಲಿ ಗೋಷ್ಠಿಯೊಂದರ ಅಧ್ಯಕ್ಷತೆ ವಹಿಸಲೆಂದು ಹೊರಟು ಬೆಳಿಗ್ಗೆ ಬೆಳಗಾವಿಯಲ್ಲಿ ಇಳಿದ ನನಗೆ ಅಂದು ಸಂಜೆ ನಾನೊಂದು ಅದ್ಭುತ ದೃಶ್ಯವೈಭವವನ್ನೂ ನೋಡಲಿದ್ದೇನೆ ಎಂಬ ಕಲ್ಪನೆ ಇರಲಿಲ್ಲ. ಯಥಾಪ್ರಕಾರ ವಿಚಾರ ಸಂಕಿರಣದ ಆಯೋಜಕರು ಕೊಟ್ಟ ಪೆನ್, ಪ್ಯಾಡ್, ಕಾರ್ಯಕ್ರಮಪಟ್ಟಿ ಇತ್ಯಾದಿಗಳ ಫೋಲ್ಡರ್ ತೆರೆದಾಗ ಒಂದು ಬ್ರೋಷರ ಅದರಲ್ಲಿದ್ದುದು ಕಣ್ಣಿಗೆ ಬಿತ್ತು. ಕರ್ನಾಟಕ ಸರಕಾರದ ವಾರ್ತಾ ಇಲಾಖೆ ಅರ್ಪಿಸುವ “ಮನುಷ್ಯಜಾತಿ ತಾನೊಂದೇ ವಲಂ” ಎಂಬ ಧ್ವನಿ-ಬೆಳಕು ದೃಶ್ಯವೈಭವಗಳ ರೂಪಕದ ಕುರಿತಾದ ಬ್ರೋಷರ್ ಅದು, . ತಾರೀಖು ನೋಡಿದರೆ ಅಂದೇ ಸಂಜೆ, ೬-೩೦ಕ್ಕೆ, ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ. ಅಲ್ಲಿಗೆ ನನ್ನ ಆ ಸಂಜೆಯ ಕಾರ್ಯಕ್ರಮ ನಿಗದಿಯಾದಂತಾಯಿತು.
ಏಕೆಂದರೆ ಆ ದೃಶ್ಯರೂಪಕದ ಸಂಚಾರ ಪಟ್ಟಿಯಲ್ಲಿ ಧಾರವಾಡ-ಹುಬ್ಬಳ್ಳಿ ಒಳಪಟ್ಟಿರಲಿಲ್ಲ. ಆ ಕುರಿತು ನಾನು ಫೇಸ್ ಬುಕ್ ನಲ್ಲಿರುವ “ಮನುಷ್ಯಜಾತಿ ತಾನೊಂದೇ ವಲಂ” ನ ಪೇಜ್ ನಲ್ಲಿ ಸ್ಪಷ್ಟೀಕರಣ ಕೇಳಿದಾಗ ಕಳೆದ ಸಾರಿಯ ಯಾತ್ರೆಯಲ್ಲಿ ಅದು ಧಾರವಾಡದಲ್ಲಿ ಜರುಗಿತ್ತಾದ್ದರಿಂದ ಈ ಸಲ ಅದನ್ನು ಕೈಬಿಡಲಾಗಿದೆ ಎಂಬ ಉತ್ತರ ಬಂದಿತ್ತು. ಈ ರೂಪಕದ ದೃಶ್ಯಸಂಯೋಜನೆ ಮಾಡಿ ಅದನ್ನು ನಿರ್ದೇಶಿಸಿದ್ದ ಗೆಳೆಯ ಸಿ. ಬಸವಲಿಂಗಯ್ಯ ಮೂರು ದಶಕಗಳ ಹಿಂದೆ ತಾವು ಹೈದರಾಬಾದ್ ದೂರದರ್ಶನ ಕೇಂದ್ರಕ್ಕಾಗಿ ನಿರ್ದೇಶಿಸಿದ್ದ ನಾಟಕವೊಂದರ ರೆಕಾರ್ಡಿಂಗ ನೋಡಲು ನಾನು ಬರಬೇಕೆಂದು ಪತ್ರ ಬರೆದಾಗ ಧಾರವಾಡದಿಂದ ಹೈದರಾಬಾದಿಗೇ ಹೋದವನು ನಾನು. (“ಅವಧಿ”ಯ ನನ್ನ ಅಂಕಣ ಬರಹಗಳ ಇದೇ ಸರಣಿಯಲ್ಲಿ ನಾನು ಆಗಲೇ ಬಸವಲಿಂಗಯ್ಯನವರ ಮತ್ತು ನನ್ನ ಸ್ನೇಹದ ಕುರಿತು ಹಿಂದೊಮ್ಮೆ ಬರೆದಿರುವುದರಿಂದ ಆ ವಿವರಗಳಿಗೆ ಇಲ್ಲಿ ಹೋಗುವದಿಲ್ಲ). ಈ ಪ್ರಯೋಗ ನೋಡಲು ಬೆಳಗಾವಿಗೆ ಹೋಗಬಹುದೆ? ಎಂದು ಅಂದುಕೊಂಡಿದ್ದೆನಾದರೂ ಮರೆತೇ ಹೋಗಿದ್ದೆ.
ಸಂಜೆ ಆರೂವರೆ ಸುಮಾರಿಗೆ ಸರ್ದಾರ್ ಹೈಸ್ಕೂಲ್ ಮೈದಾನ ಹೊಕ್ಕಾಗ ಪಾತ್ರಧಾರಿಗಳ ಒಂದು ತಂಡ ಮೈಕೈ ಚಾಚಿ ವಾರ್ಮಪ್ ಮಾಡಿಕೊಳ್ಳುತ್ತಿತ್ತು. ಬಸವಲಿಂಗಯ್ಯ ಬಂದಿದ್ದಾರ? ಎಂದೆ. “ಹಾಂ ಸರ್, ಅಲ್ಲಿದ್ದಾರೆ ನೋಡಿ” ಎಂದರು ಅವರಲ್ಲಿ ಕೆಲವರು. ಕ್ಷಣಗಳಲ್ಲಿ ಗುಂಪೊಂದರ ನಡುವೆ ಇದ್ದ ಖಾದಿಜುಬ್ಬದ ಬಸವಲಿಂಗಯ್ಯನ ಮುಂದಿದ್ದೆ. ಕನ್ನಡ ಅಧ್ಯಾಪಕರಾದ ವೈ.ಬಿ.ಹಿಮ್ಮಡಿ, ನಾಟಕಕಾರ ಡಿ.ಎಸ್.ಚೌಗುಲೆ ಮುಂತಾದವರ ಜೊತೆ ಇದ್ದ ಬಸವಲಿಂಗಯ್ಯನವರಿಗೆ ಅಲ್ಲಿ ನನ್ನ ಬರುವು ಅನಿರೀಕ್ಷಿತವಾಗಿತ್ತು. “ಅರ್ರೆ, ಅಶೋಕ್” ಎಂದ ಅವರ ಕಣ್ಣುಗಳರಳಿದವು. ಸ್ವಲ್ಪ ಸುದೀರ್ಘವೆನ್ನಬಹುದಾದ ಗ್ಯಾಪ್ ನಂತರ ನನ್ನ-ಅವರ ಭೇಟಿಯಾಗಿತ್ತು. ಪರಸ್ಪರ ಆಲಂಗಿಸಿಕೊಂಡು, ಅವರು ಕೊಡಮಾಡಿದ ಒಗ್ಗರಣೆ ಅವಲಕ್ಕಿ ತಿಂದು ಚಹ ಕುಡಿದು ನಾಗನೂರು ಶಿವಬಸವ ಸ್ವಾಮಿಗಳು ಹಾಗೂ ಕಾರಂಜಿಮಠದ ಸ್ವಾಮಿಗಳು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ ನಾಟಕವನ್ನು ಬಸವಲಿಂಗಯ್ಯನವರ ಜೊತೆಗೇ ಕುಳಿತು ಎವೆಯಿಕ್ಕದೇ ನೋಡಿದೆ. ಎರಡು ಸಹಸ್ರ ವರ್ಷಗಳ ಭಾರತದ ಸಾಮಾಜಿಕ ಸಾಂಸ್ಕೃತಿಕ ಬದುಕಿನ ದೊಡ್ಡ ಬೀಸು ಅದರಲ್ಲಿತ್ತು. ನಾಟ್ಯ ಗಾಯನ ಬಣ್ಣ ಬೆಳಕು ಅಭಿನಯಗಳ ಅದ್ಭುತ ಲೋಕವನ್ನೇ ಅದು ನಿರ್ಮಿಸಿತ್ತು. ಅದ್ಭುತವಾದ ರಂಗಸಜ್ಜಿಕೆ, ಕೆ.ಶಿವರುದ್ರಯ್ಯ ಅವರ ಸಂಕೀರ್ಣ ತಾಂತ್ರಿಕ ಸಂಯೋಜನೆ, ನೂರಾರು ನಟ-ನಟಿಯರ ಬೃಹತ್ ಸಮೂಹ ಮತ್ತು ವೈವಿಧ್ಯಮಯ ಮುಖವಾಡಗಳನ್ನೊಳಗೊಂಡ ರಂಗಪರಿಕರಗಳು ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಕಿಕ್ಕಿರಿದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು.
ಇಂಥದೊಂದು ರೂಪಕ ರೂಪಿಸುವದು ಸುಲಭವಲ್ಲ. ಇಷ್ಟು ಸುದೀರ್ಘ ಕಾಲಾವಧಿಯ ಭಾರತದ ಬಹುಮುಖಿ ಜೀವನ ವಿಧಾನಗಳ ಸಾಂಸ್ಕೃತಿಕ ಮುಖಗಳು, ಭಾರತದ “ದಿ ಗ್ರೇಟ್ ಟ್ರೆಡಿಶನ್” ಎಂದು ಕರೆಯಲ್ಪಡುವ ಯಜಮಾನ ಸಂಸ್ಕೃತಿಯ ಮುಖಗಳು ಮತ್ತು ಮುಖವಾಡಗಳು, ಭಾರತದ ಭವ್ಯ ಪರಂಪರೆ ಹಾಗೂ ಇತಿಹಾಸದ ನೇಯ್ಗೆಯೊಳಗೆ ಹಾಸು ಹೊಕ್ಕಾಗಿರುವ ಅನ್ಯಾಯ, ಕ್ರೌರ್ಯ, ತಾರತಮ್ಯ, “ಧರ್ಮ”ದ ಅಧರ್ಮಗಳು ಇವೆಲ್ಲ ಅನಾವರಣಗೊಳ್ಳಲು ಅಗತ್ಯವಾದ ಪ್ರಸಂಗ, ಕಥಾನಕಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಒಂದು ಸಮತೋಲನ ಇರುವಂತೆ ಎಚ್ಚರ ವಹಿಸಬೇಕಾಗುತ್ತದೆ. ಯಾವುದೂ ಬಿಟ್ಟು ಹೋಗದಂತೆ ಆದರೆ ಯಾವುದೂ ಅತಿಲಂಬಿತವಾಗದಂತೆ ದೃಶ್ಯಲೋಕವೊಂದನ್ನು ನೋಡುಗರಿಗೆ ಬೇಸರವಾಗದಂತೆ, ಏಕತಾನತೆ ತಲೆದೋರದಂತೆ ನಿರ್ವಹಿಸುವ ಸವಾಲು ಅದು. ವಾರ್ತಾ ಇಲಾಖೆ ನಿರ್ದೇಶಕರಾದ ಎನ್. ಆರ್.ವಿಶುಕುಮಾರ್ ಅವರ ಪರಿಕಲ್ಪನೆಯನ್ನಾಧರಿಸಿ ಗೀತರಚನೆ ಮತ್ತು ಸಾಹಿತ್ಯದ ಸೂಕ್ತ ಉಡುಗೆಯನ್ನು ಅದಕ್ಕೆ ತೊಡಿಸಿದ ಕೋಟಗಾನಹಳ್ಳಿ ರಾಮಯ್ಯ ಮತ್ತು ಲಕ್ಷ್ಮೀಪತಿ ಕೋಲಾರ ಅವರ ಪ್ರಯತ್ನ ಈ ಪ್ರಯೋಗದಲ್ಲಿ ಬಹುಪಾಲು ಯಶಸ್ವಿಯಾಗಿದೆ. ಅಂತೆಯೇ ಈ ತಿಂಗಳ ೧ ರಂದು ರಾಜ್ಯದ ರಾಜಧಾನಿಯ ಕಲಾಗ್ರಾಮದಲ್ಲಿ ಉದ್ಘಾಟನೆಗೊಂಡ ಯಾತ್ರೆಯಲ್ಲಿ ಈ ಆಟದ ಮೊದಲ ಪ್ರದರ್ಶನ ನೀಡಿ, ಮತ್ತೆರಡು ಪ್ರದರ್ಶನಗಳನ್ನು ಲಾಲ್ ಬಾಗ್ ಬಳಿ ಏರ್ಪಡಿಸಿ ಮೊನ್ನೆ ೧೬ ನೇ ತಾರೀಖು ಚಿತ್ರದುರ್ಗದ ಸಾಣೆಹಳ್ಳಿಯಲಿ ಇದರ ಅಂತಿಮ ಪ್ರದರ್ಶನ ನೀಡುವವರೆಗಿನ ಕರ್ನಾಟಕದ ಹದಿನೈದು ಜಿಲ್ಲೆಗಳ ಪ್ರಮುಖ ನಗರ-ಪಟ್ಟಣಗಳಲ್ಲಿ ಸುತ್ತಿದ ಈ ಬೃಹತ್ ತಂಡದ ಯಾತ್ರೆ, ಅದರ ಶ್ರಮ ಮತ್ತು ಅದರ ಫಲವಾಗಿ ನೋಡುಗರಿಗೆ ದೊರೆತ ಅಭೂತಪೂರ್ವ ಅನುಭವ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ.
ಜಾತಿ ತಾರತಮ್ಯದ ಅಮಾನವೀಯ ಮುಖಗಳನ್ನು ವಿವಿಧ ಪ್ರಸಂಗಗಳ ಮೂಲಕ ಬಿಂಬಿಸುವದನ್ನು ಮುಖ್ಯ ಲಕ್ಷ್ಯವಾಗಿಸಿಕೊಂಡ ಈ ರೂಪಕ ಭೂಮಿಕಾಣಿಗಳಂಥ ಉತ್ಪಾದನಾ ಸಾಧನಗಳ ಮೇಲೆ ಖಾಸಗಿ ಸ್ವಾಮ್ಯ, ಸಾಮಾಜಿಕ ಶ್ರೇಣೀಕರಣ , ಹೆಣ್ಣಿನ ಮೇಲೆ ಗಂಡಿನ ಯಾಜಮಾನ್ಯವನ್ನು ಪ್ರಧಿನಿಧಿಸುವ ಪ್ಯಟ್ರಿಯಾರ್ಕಲ್ ಕುಟುಂಬರಚನೆಗಳ್ಯಾವವೂ ಇಲ್ಲದ, ಮಾನವನ ಬದುಕು ಬುಡಕಟ್ಟು ಸಮುದಾಯಗಳ ರೂಪದಲ್ಲಿದ್ದಾಗಿನ ಸನ್ನಿವೇಶಗಳೊಂದಿಗೆ ಆರಂಭವಾಗುತ್ತದೆ. “ಗಿಡದಾಗೆ ಒಂದ್ ಗಿಡಾ, ಬೀಜದಾಗೆ ಒಂದ್ ಬೀಜ ಬಿಟ್ಟೈತೆ ನೋಡ್ ಬನ್ರೋ” ಎಂದು ರಾಗವಾಗಿ ಕೂಗಿ ಕೂಗಿ ತಮ್ಮ ಗಂಡಸರನ್ನು ಕರೆಯುವ ಹೆಂಗಳೆಯರ ಆ ಮೋಹಕ ಲೋಕ – ಕಾಡಿನಲ್ಲಿ ಬೇಟೆಯಾಡುತ್ತ ಪ್ರಕೃತಿಯ ಮಕ್ಕಳಾಗಿ ಸಮಸಮಾಜವೊಂದರ ಬದುಕಿನ ನಳನಳಿಸುವ ಜೀವಂತಿಕೆಯ ಆ ಧ್ವನಿ ದೃಶ್ಯಗಳು- ಖಾಸಗಿ ಸ್ವಾಮ್ಯ, ಕುಟುಂಬ ಮತ್ತು ಸಾಮಾಜಿಕ ಶ್ರೇಣೀಕರಣಗಳ ಉಗಮದೊಂದಿಗೆ ಪ್ರಭುತ್ವವೂ ಉಗಮಿಸಿದ ಮೇಲೆ ಶಾಶ್ವತವಾಗಿ ಕಣ್ಮರೆಯಾಗಿ ಹೋಗುತ್ತವೆ. ಲಾಠಿ ಹಿಡಿದು ಬಂದ ಹೈದರ ದಬ್ಬಾಳಿಕೆಯ ನಡುವೆ ಕಾಡಿನಮಕ್ಕಳ ಲೋಕ ಚೆಲ್ಲಾಪಿಲ್ಲಿಯಾಗುತ್ತದೆ.
ಅಲ್ಲಿಂದ ಮುಂದಿನ ಕಥೆ ಜಾತಿ ಬೀಜಗಳು ಬಿತ್ತನೆಯಾಗಿ ವಿಷವೃಕ್ಷಗಳಾಗಿ ಬೆಳೆಯುತ್ತ ಹೋದ ಕಥೆ. ಅಸ್ಪೃಶ್ಯರದೊಂದು ಅಧೋಲೋಕ ನಿರ್ಮಾಣವಾಗಿ ಅದರಲ್ಲಿ ಚರ್ಮಗಾರಿಕೆ ವೃತ್ತಿ ಮಾಡಿಕೊಂಡಿದ್ದ ಗುಣಾಢ್ಯ ಸಾಹಿತ್ಯ ರಚಿಸಿ ರಾಜಮನ್ನಣೆ ಸಿಕ್ಕೀತೆಂಬ ಕನಸು ಹೊತ್ತು ಆಸ್ಥಾನಕ್ಕೆ ಬಂದರೆ ಅಲ್ಲಿನ ಆಸ್ಥಾನ ಪಂಡಿತರು ಸರಸ್ವತಿಯನ್ನು ಮಲಿನಗೊಳಿಸಿದ ತಪ್ಪಿಗೆ ಗುಣಾಢ್ಯನ ಕೈಕತ್ತರಿಸುವಂತೆ ರಾಜನನ್ನು ಆಗ್ರಹಿಸುತ್ತಾರೆ. ಬೃಹತ್ ಕಥೆಯ ಆ ಸೃಷ್ಟಿಕರ್ತನನ್ನು ಕೈಕಟ್ಟಿ ಹಿಂಸ್ರ ಮೃಗಗಳಿರುವ ಕಾಡಿಗಟ್ಟಿದರೆ ಅಲ್ಲಿ ಆತನ ಕಾವ್ಯ ಖಗಮೃಗಹಕ್ಕಿಪಕ್ಷಿಗಳಿಗೂ ಇಷ್ಟವಾಗುತ್ತ ಹೋಗಿ ಗುಣಾಢ್ಯ ’ಅಯ್ಯೋ ಹುಚ್ಚಪ್ಪಗಳಿರಾ, ಮನುಷ್ಯನನ್ನು ಕೊಲ್ಲುವಷ್ಟು ಸುಲಭವಲ್ಲ ಕತೆಯನ್ನು ಕೊಲ್ಲುವುದು’. ಎನ್ನುತ್ತಾನೆ.
ಇಲ್ಲಿಂದ ಭಾರತದ ಚರಿತ್ರೆಯ ಒಂದೊಂದೇ ಹಂತಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ಬುದ್ಧ ಬರುತ್ತಾನೆ, ಬಸವಣ್ಣ ಬರುತ್ತಾನೆ, ಕನಕ, ಪುರಂದರ, ಸರ್ವಜ್ಞ, ಶಿಶುನಾಳ ಶರೀಫ, ಕೈವಾರ ತಾತಯ್ಯ, ಗಾಂಧಿ-ಅಂಬೇಡ್ಕರ್ ಎಲ್ಲರೂ ಬರುತ್ತಾರೆ, ಶೂದ್ರ ಶಂಭೂಕನನ್ನು ವಧಿಸಿದ ಅನ್ಯಾಯದ ಕ್ಷಾತ್ರ, ಏಕಲವ್ಯನ ಬೆರಳನ್ನು ಗುರುದಕ್ಷಿಣೆಯಾಗಿ ಕೇಳಿದ ವರ್ಣವ್ಯವಸ್ಥೆಯ ಕ್ರೌರ್ಯದ ಮುಂದುವರಿಕೆಯಾಗಿ, ಒಂದು ವಿಶಾಲ ಜನವರ್ಗವನ್ನು ಎಲ್ಲ ಘನತೆ ಗೌರವಕ್ಕೆರವಾಗಿಸಿ, ಎಲ್ಲ ಉನ್ನತಿಕೆ, ಎಲ್ಲ ಜೀವನಾವಕಾಶಗಳಿಂದ ವಂಚಿಸಿದ ಅಮಾನವೀಯ ಜಾತಿವ್ಯವಸ್ಥೆ ಮಾತ್ರ ಅಬಾಧಿತವಾಗಿ ಮುಂದುವರಿಯುತ್ತದೆ.
ಉತ್ತಮದರ್ಜೆಯ ಬೋಗಿಯಲ್ಲಿ ಪ್ರಯಾಣಿಸುವ ಟಿಕೆಟ್ ಇದ್ದೂ ಶ್ವೇತವರ್ಣೀಯರಿಂದ ಸಾಮಾನು ಸರಂಜಾಮು ಸಹಿತ ರೈಲುನಿಲ್ದಾಣದಲ್ಲಿ ಎಳೆದೆಸೆಯಲ್ಪಟ್ಟ ಗಾಂಧಿ ಆಫ್ರಿಕದಲ್ಲಿ ಭಾರತೀಯರನ್ನೂ ಒಳಗೊಂಡು ಕರಿಯರ ಹಕ್ಕುಗಳಿಗೆ ಹೋರಾಡಿ ಅಪಾರ್ಥೀಡ್ ವಿರುದ್ಧ ಬಂಡೆದ್ದರೆ ಇಲ್ಲಿ ಅಂಬೇಡ್ಕರ್ ಚೌಡರ್ ಕೆರೆಯ ನೀರು ಅಸ್ಪೃಷ್ಯರಿಗೂ ಮುಕ್ತವಾಗಿ ಲಭ್ಯವಾಗಬೇಕೆಂದು ಬಂಡೇಳುತ್ತಾರೆ. ಗಾಂಧಿ ಭಾರತಕ್ಕೆ ಮರಳಿ ಸ್ವಾತಂತ್ರ್ಯ ಹೋರಾಟ ಎಲೀಟ್ ವರ್ಗದಿಂದ ಆಚೆ ಬಂದು ಜನಸಮರವಾಗಿ ಮಾರ್ಪಟ್ಟುದನ್ನು ಗಾಂಧಿ ನೇತೃತ್ವದ ಒಂದು ಯಾತ್ರೆಯ ದೃಶ್ಯ ಸಂಕೇತಿಸುತ್ತದೆ. ಗಾಂಧಿ ಧಾರೆ ಬಾಹ್ಯ ಆಳ್ವಿಕೆ, ದಬ್ಬಾಳಿಕೆಯಿಂದ ಭಾರತ ಮುಕ್ತವಾಗುವತ್ತ ಗಮನ ಕೇಂದ್ರೀಕರಿಸಿದರೆ ಅಂಬೇಡ್ಕರ್ ಪ್ರತಿನಿಧಿಸುವ ಹೋರಾಟ ಭಾರತದೊಳಗೇ ಜಾತಿ ತಾರತಮ್ಯದಡಿ ನಲುಗಿದ ಅಸ್ಪೃಷ್ಯರ ವಿಮೋಚನೆಯತ್ತ ಗಮನ ಕೇಂದ್ರೀಕರಿಸುತ್ತದೆ. ಇಲ್ಲಿ ಗಾಂಧಿ ಅಂಬೇಡ್ಕರ್ ರನ್ನು ಪರಸ್ಪರ ವಿರುದ್ಧ ಆಸಕ್ತಿಗಳನ್ನು ಪ್ರತಿನಿಧಿಸುವ ವ್ಯಕ್ತಿಗಳಾಗಿ ಗ್ರಹಿಸದೇ ಒಂದು ಚಾರಿತ್ರಿಕ ಸನ್ನಿವೇಶದಲ್ಲಿ ಅವರು ಹೊಂದಿದ್ದ ಆದ್ಯತೆಯ ನೆಲೆಯಿಂದ ನಿರ್ವಚಿಸಿ ನಿರ್ವಹಿಸಿದ್ದು ಈ ರೂಪಕದ ಪ್ರೌಢಿಮೆ. ಅಂತೆಯೇ ಭಾರತದ ಏಕತೆಯನ್ನು ಪ್ರತಿನಿಧಿಸುವ ಬಣ್ಣಗಳಲ್ಲೆರಡನ್ನು ವಿಭಾಜಕ ಸಿದ್ಧಾಂತಗಳಿಂದ ದಾರಿತಪ್ಪಿದ ಬಣಗಳು ಕಿತ್ತುಕೊಂಡು ಹೋಗುವ ವಿದ್ಯಮಾನವನ್ನು ಗಾಂಧಿ ಅಂಬೇಡ್ಕರ್ ಇಬ್ಬರೂ ವಿಷಣ್ಣವಾಗಿ ನೋಡುತ್ತ ನಿಲ್ಲುವ ಚಿತ್ರ ಈ ರೂಪಕದಲ್ಲಿ ಬರುತ್ತದೆ, ಅವರಿಬ್ಬರ ಆಶಯಗಳ, ಹಂಬಲದ ಫಲವೋ ಎಂಬಂತೆ ಕೇಸರಿ ಹಸಿರು ಮತ್ತೆ ಮರಳಿ ಬಿಳಿ ಬಣ್ಣದೊಂದಿಗೆ ಕೂಡಿಕೊಂಡು ಪೂರ್ಣಗೊಳ್ಳುವ ಚಿತ್ರ ಭಾರತದ ಸಮಗ್ರತೆಯ ಆಶೆಯನ್ನು ಜೀವಂತವಾಗಿರಿಸುತ್ತದೆ.
ಇಲ್ಲಿಯ ದೃಶ್ಯಸಂಯೋಜನೆ ಜನರನ್ನು ಭಾವಪರವಶಗೊಳಿಸುವಂತಿದೆ. ಕೃಷ್ಣನ ದರ್ಶನಕ್ಕೆ ಉಡುಪಿಗೆ ಬಂದ ಕನಕದಾಸರನ್ನು ಗುಡಿಯ ಹೊರಗೆ ನಿಲ್ಲಿಸಿದ ದೃಶ್ಯದಲ್ಲಿ ಭಕ್ತವತ್ಸಲ ಕೃಷ್ಣ ಗುಡಿಯಿಂದ ಹೊರಬಿದ್ದ ದೃಶ್ಯವಾಗಬಹುದು, ಬಸವಣ್ಣ ಮತ್ತು ಮಂಟೇಸ್ವಾಮಿಯರನ್ನು ಮುಖಾಮುಖಿಯಾಗಿಸಿ ಬಸವಣ್ಣನಿಗೆ ಮಂಟೇಸ್ವಾಮಿ ವಾಸ್ತವದ ಕಟುತ್ವವನ್ನು ಮನಗಾಣಿಸುವ ದೃಶ್ಯವಾಗಬಹುದು, ಹರಿಶ್ಚಂದ್ರ ಮತ್ತು ಹೊಲತಿಯರ ಪ್ರಸಂಗದಲ್ಲಿ ಹಾಡಿ ಅವನನ್ನು ರಂಜಿಸಿದ ಹೊಲತಿಯರು ತಾವು ಕೇಳಿದ ವರಕ್ಕೆ (ಅವನನ್ನು ವರಿಸುವ ತಮ್ಮಿಚ್ಛೆಗೆ) ಹಿಂದೇಟು ಹಾಕುವ ಅವನ ಜಾತಿಪ್ರಜ್ಞೆಯಿಂದ ಪ್ರೇರಿತವಾದ ಹೇಡಿತನವನ್ನು ವಿಡಂಬಿಸುವ ದೃಶ್ಯವಾಗಬಹುದು..ಎಲ್ಲವೂ ಮನಸು ಹಾಗೂ ಹೃದಯಕ್ಕಿಳಿಯುತ್ತವೆ. ಹಾಗೇ ತಾನು ಬಯಸಿದ ತನ್ನಿನಿಯನ ನಿರಾಕರಣೆಯಿಂದ ಕಂಗಾಲಾದ ಕುಸುಮಬಾಲೆ ತಲೆಗೂದಲು ಬಿಚ್ಚಿಕೊಂಡು ಗೋಳಾಡುವದನ್ನು ಭೂತಬಾಧೆಯಾಗಿ ಗ್ರಹಿಸಿ ಭೂತ ಬಿಡಿಸಲು ಬಂದ ಕೊಳ್ಳೆಗಾಲದ ಮಾಂತ್ರಿಕರು ಅವಳ “ಐ ವಾಂಟ್ ಟೂ ಬಿ ಇನ್ ಮೈ ಹೋಂ” ಎಂಬ ಇಂಗ್ಲೀಷ್ ಚೀರಾಟದಿಂದ ಬೆದರಿ ಓಡುವ ದೃಶ್ಯ…!
ಭಾರತದ ಸಂಸ್ಕೃತಿ- ನಾಗರಿಕತೆಗಳ ಭವ್ಯ ಪರಂಪರೆಯಲ್ಲಿ ಒಂದು ಪಿಡುಗಿನಂತೆ ಬೆಳೆದುಕೊಂಡು ಬಂದ ಜಾತಿಪದ್ಧತಿ ಮನುಷ್ಯ ಸಂಬಂಧಗಳ ನಡುವೆ ಎಬ್ಬಿಸಿದ ಗೋಡೆಗಳನ್ನು ಮುರಿದು ಹೃದಯ-ಹೃದಯಗಳ ಮಧ್ಯೆ ಸಂಬಂಧ ಕಲ್ಪಿಸುವ ವಾತಾವರಣ ನಿರ್ಮಿತಿಯ ಉದ್ದೇಶ ಉಳ್ಳ ಈ ರೂಪಕದ ತಾತ್ವಿಕತೆ ಒಂದು ಸಂದರ್ಭದಲ್ಲಿ ಮೀಸಲಾತಿಯ ಸಮರ್ಥನೆಗಿಳಿದು ಸರ್ಕಾರಿ ನೀತಿಯ ಅಭಿವ್ಯಕ್ತಿಯಂತೆ ತೋರುತ್ತದೆ. ಅಲ್ಲಲ್ಲಿ ಪಟ್ಟಭದ್ರ ಹಿತಗಳ ಅಸಹನೆಯ ಅಭಿವ್ಯಕ್ತಿ ಸ್ವಲ್ಪ ವಾಚ್ಯವೆಂದೂ ಅನ್ನಿಸುವಂತಿದೆ. ಅಂಬೇಡ್ಕರ್ ಕನಸಿದ ಮೀಸಲಾತಿಯ ಆದರ್ಶವು ಶಕ್ತಿ ರಾಜಕಾರಣದ, ಮತಬ್ಯಾಂಕ್ ಮಸಲತ್ತುಗಳ ವಿಷವರ್ತುಲದಲ್ಲಿ ಸಿಕ್ಕು ಒಂದೆಡೆ ಟೀಕೆಗಳನ್ನೆದುರಿಸುತ್ತಿದ್ದರೆ ಇನ್ನೊಂದೆಡೆ ಮೀಸಲಾತಿ ಪಡೆದ ಒಂದು ಅಸ್ಪೃಶ್ಯ ವರ್ಗ ತಮ್ಮ ಬೇರು ಕಳಚಿಕೊಂಡು ಎಲೀಟ್ ಆಗಿ ಪರಿವರ್ತಿತವಾದ ಮತ್ತೊಂದು ವಾಸ್ತವವೂ ಇದೆ. ಈ ಮಧ್ಯೆ ಬಹುಸಂಖ್ಯಾತ ಅಸ್ಪೃಶ್ಯರ ಸ್ಥಿತಿ ಎಲ್ಲಿದೆಯೋ ಅಲ್ಲೇ ಇರುವಂತಿದೆ. ಇದನ್ನು ಈ ರೂಪಕದ ಮುಂದಿನ ಪ್ರಯೋಗಗಳಲ್ಲಿ ಸೂಕ್ಷ್ಮಗೊಳಿಸಿಕೊಳ್ಳಲು ಅವಕಾಶವಿದೆ.
ಒಟ್ಟಾರೆಯಾಗಿ ಸಾವಿರಾರು ವರ್ಷಗಳ ಜಾತಿಪದ್ಧತಿಯ ವಿರುದ್ಧ ಧ್ವನಿ ಎತ್ತಿದ ಭಕ್ತಿ, ಅನುಭಾವಿ, ಆಂದೋಲನಗಳ ಸ್ಪಷ್ಟ ಪುರಾವೆಗಳ ಪರಂಪರೆಯೇ ಇರುವ ಕರ್ನಾಟಕದಲ್ಲಿ ಆ ಆಶಯವನ್ನು ಕನ್ನಡ ಸಂವೇದನೆಯ ಒಂದು ಮಹತ್ವಪೂರ್ಣ ಲಕ್ಷಣವೆಂದು ಗುರುತಿಸುವ ಪ್ರಯತ್ನ ಈ ಪ್ರಾಜೆಕ್ಟ್ ನ ಅತ್ಯಂತ ಧನಾತ್ಮಕ ಅಂಶ. ಇದು ಇಲ್ಲಿಗೇ ಕೊನೆಗೊಳ್ಳದೇ ಕರ್ನಾಟಕದ ಎಲ್ಲೆಡೆ ಹರಡಿ ಎಲ್ಲರ ಮನೆ ಮನಗಳನ್ನು ಮುಟ್ಟಬೇಕು. ಅಂಥ ವೈಚಾರಿಕ ಸತ್ವ ಮತ್ತು ಕಲಾತ್ಮಕ ಅರ್ಹತೆ “ಮನುಷ್ಯ ಜಾತಿ ತಾನೊಂದೇ ವಲಂ” ಎಂಬ ಈ ಧ್ವನಿ-ಬೆಳಕು-ಸಂಗೀತಗಳ ದೃಶ್ಯವೈಭವಕ್ಕಿದೆ. ಗೆಳೆಯ ಬಸವಲಿಂಗಯ್ಯ ಮತ್ತು ಅವರ ಸಮಸ್ತ ಬಳಗಕ್ಕೆ ಅಭಿನಂದನೆಗಳು.







Gadagadalli idannu nodi varshagale kalediveyaadaru nenapu innu achha hasuraahiye uLidide
naanu nodade iruvudu besara mudisitu