ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ : ಬಿಟ್ಟು ಬಂದ ಊರಿನ ಬಿಡದ ನೆನಪುಗಳು..

ಬೈಲಹೊಂಗಲದಿಂದ ಬಿ.ಎ ಓದಲು ಬಂದ ಹೊಸದರಲ್ಲಿ ಗುರುತು- ಪರಿಚಯವಿಲ್ಲದ ಈ ದೊಡ್ಡ ಊರಲ್ಲಿ ಹೇಗಪ್ಪಾ ಇರುವದು? ಎಂದು ಮಂಕು ಕವಿದವರಂತೆ ಇರುತ್ತಿದ್ದ ನನ್ನ ವಿಷಣ್ಣತೆಗೆ ಅರ್ಥವೇ ಇಲ್ಲ ಎನ್ನುವಂತೆ ನಾನು ಧಾರವಾಡದೊಂದಿಗೆ ಹೊಂದಿಕೊಳ್ಳತೊಡಗಿದೆ ಎಂದು ಬರೆದಿದ್ದೆ ಕಳೆದ ವಾರದ ನನ್ನ ಬರಹದಲ್ಲಿ, ಅಲ್ಲವೇ?
ವಾಸ್ತವವಾಗಿ ಅದು ಅಷ್ಟು ಸುಲಭವಾಗಿರಲಿಲ್ಲ. ಬೈಲಹೊಂಗಲವೆಂಬ ಭಾಗಶ: ಕೃಷಿ, ಭಾಗಶ: ವ್ಯಾಪಾರೋದ್ಯಮಗಳಿಂದ ಕೂಡಿದ ಆ ಪಟ್ಟಣ ಬುದ್ಧಿ ತಿಳಿದಾಗಿನಿಂದ ಪದವಿಪೂರ್ವ ಹಂತ ಮುಗಿಸುವ ವರೆಗೆ ನಾನು ಬಲ್ಲ ಏಕೈಕ ಜಗತ್ತು ಆಗಿತ್ತು. ನಾನು ಹೈಸ್ಕೂಲ್ ನಲ್ಲಿ ಓದುತ್ತಿದ್ದ ವರ್ಷಗಳಲ್ಲಿ (೧೯೭೦-೭೩) ಆ ಊರ ಜನಸಂಖ್ಯೆ ಸುಮಾರು ೨೦,೦೦೦ (ಕರಾರುವಾಕ್ಕಾಗಿ ಹೇಳಬೇಕೆಂದರೆ ೧೯೯೬೬.ಹಾಗೆಂದು ಲೋಕೋಪಯೋಗಿ ಇಲಾಖೆ ನೆಟ್ಟ ಒಂದು ಕಲ್ಲಿನಲ್ಲಿ ಬರೆಯಲಾಗಿತ್ತು)
ಉಡುಪಿ ಕಡೆಯ ಬಂಟರ ಆರೇಳು ಕುಟುಂಬಗಳು ನಡೆಸುತ್ತಿದ್ದ ಹೊಟೆಲ್ ವ್ಯಾಪಾರ ಹೊರತು ಪಡಿಸಿ ಇಡೀ ಪಟ್ಟಣದ ಇನ್ನುಳಿದ ವ್ಯಾಪಾರ ವಹಿವಾಟು-ಪೆಟ್ರೋಲ್ ಬಂಕುಗಳು, ಸಿನಿಮಾ ಥೇಟರು,ಕಮೀಶನ್ ಏಜನ್ಸಿಗಳು, ಜವಳಿ ಅಂಗಡಿಗಳು, ಸಗಟು ಮಳಿಗೆಗಳು, ಚಿಲ್ರೆ ಕಿರಾಣಿ ಅಂಗಡಿಗಳು,ಹತ್ತಿ ಮತ್ತು ಎಣ್ಣೆ ಮಿಲ್ ಗಳು- ಇವೆಲ್ಲ ಲಿಂಗಾಯತ ಬಣಜಿಗ ಸಮುದಾಯದ ಕೆಲವೇ ಕೆಲವು ಶ್ರೀಮಂತ ಕುಳಗಳ ಕೈಯ್ಯಲ್ಲಿ ಕೇಂದ್ರೀಕೃತವಾಗಿದ್ದವು.
ಅದೇ ಪ್ರಭಾವಿ ಬಣಜಿಗ ಸಮುದಾಯದ, ಒಂದು ಕಾಲದಲ್ಲಿ ಉಂಡುಟ್ಟು ಸುಖವಾಗಿರುವ ಸಿರಿವಂತಿಕೆ ಹೊಂದಿದ್ದ ಹಾಗೂ ಆಮೇಲೆ ಅದನ್ನು ಕಳೆದುಕೊಂಡಿದ್ದ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನ್ನನ್ನು ಈಗ ತಂದೆ ತಾಯಿಯರು ಮಕ್ಕಳನ್ನು ಕರೆದೊಯ್ಯುತ್ತಾರಲ್ಲ, ಪ್ರವಾಸ, ಪಿಕ್ ನಿಕ್ ಎಂದು, ಹಾಗೆ ಕರೆದುಕೊಂಡು ಹೋಗುವ ಪರಿಪಾಠವೂ ಇರಲಿಲ್ಲ, ಅದಕ್ಕೆ ಬೇಕಾದ ಸ್ಥಿತಿವಂತಿಕೆಯೂ ಇರಲಿಲ್ಲ. ಹೀಗಾಗಿ ನನ್ನ ತಂದೆಯ ಕೋಟಿನ ಜೇಬಿನಿಂದ (ನನ್ನ ದೊಡ್ಡಕ್ಕನ ಕಣ್ಣಿಗೆ ಬೀಳದಂತೆ) ಆಗಾಗ ಎತ್ತುತ್ತಿದ್ದ ಪಾವಲಿ, ಎಂಟಾಣೆಗಳು ಒಂದು ತೃಪ್ತಿದಾಯಕ ಮೊತ್ತ ತಲುಪಿದಾಗ ನಾನು ಮನೆಯಲ್ಲಿ ಹೇಳದೇ ಬೈಲಹೊಂಗಲದಿಂದ ಒಂದೂ ಮುಕ್ಕಾಲು ತಾಸಿನ ಪ್ರಯಾಣದ ಅಂತರದಲ್ಲಿದ್ದ ನಮ್ಮ ಜಿಲ್ಲಾಸ್ಥಳ ಬೆಳಗಾವಿಗೆ ಸರಕಾರಿ ಬಸ್ಸಿನಲ್ಲಿ ಪಯಣಿಸಿ ಚಿತ್ರಾ ಇಲ್ಲವೇ ಹಂಸಾ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ನೋಡಿ ಬರುತ್ತಿದ್ದೆ.
ನಾನು ಮರಳಿ ಬರುವ ವರೆಗೆ ನನ್ನ ಸುದೀರ್ಘ ಅವಧಿಯ ಗೈರುಹಾಜರಿಯಿಂದ ಚಿಂತಿತಳಾಗಿರುತ್ತಿದ್ದ ನನ್ನವ್ವ ಸುತ್ತ ಮುತ್ತಲಿನ ಓಣಿ-ಬೀದಿಗಳಲ್ಲೆಲ್ಲ ಅಡ್ಡಾಡಿ “ನಮ್ ಅಶೋಕನ್ನ್ ಎಲ್ಲೇರs ನೋಡೀರೇನ್ರೇ” ಎಂದು ಅವರಿವರನ್ನು ಕೇಳಿ ಬಸವಳಿದಿರುತ್ತಿದ್ದಳು. ಅವಳ ಈ “ನೀವು ಕಂಡಿರೇ?, ನೀವು ಕಂಡಿರೇ?” ಥರದ ಹುಡುಕಾಟದಿಂದಾಗಿ ನಾನು ಒಂದು ಲೆವೆಲ್ಲಿನಲ್ಲಿ ಫೇಮಸ್ಸೂ ಆದೆನೆನ್ನಿ ಆ ಊರಲ್ಲಿ. ಬೈಲಹೊಂಗಲದಲ್ಲಿ ಆಗ ಇದ್ದ “ಭಾರತ್” ಎಂಬ ಏಕೈಕ ಸಿನಿಮಾ ಟಾಕೀಜ್ ನಲ್ಲಿ (ಅದು ನನ್ನ ಮನೆಗೆ ಎಷ್ಟು ಸಮೀಪ ಇತ್ತೆಂದರೆ ನಾನು ನನ್ನ ಮನೆಯ ಮುಂದೆ ಎಡವಿದರೆ, ಗೇಟ್ ಕೀಪರ್ ಜೊತೆಗೇ ನನಗೆ ದೋಸ್ತಿ ಆಗಿತ್ತಾದ್ದರಿಂದ, ಆ ಟಾಕೀಜ್ ನೊಳಗೇ ಬೀಳುತ್ತಿದ್ದೆ) ಒಂದು ಸಾಧಾರಣ ಸಿನಿಮಾ ಅದರಲ್ಲೂ ಹಿಂದಿ ಸಿನಿಮಾ ಬಂದರೆ ಉದಾ: ಡೋಲಿ, ಹಮ್ ರಾಝ್ ಮೊದಲಾದ ಹಿಂದಿ ಸಿನಿಮಾಗಳು, ಅವುಗಳ ಆ ನುಣ್ಣಗೆ ಮೀಸೆ ಬೋಳಿಸಿದ ಹೀರೋಗಳ ಮುಖಗಳು ಕನ್ನಡದ ರಾಜಕುಮಾರ್, ಉದಯಕುಮಾರ್, ಕಲ್ಯಾಣ್ ಕುಮಾರ್ ಮುಂತಾದವರ ಮುಖಗಳಂತೆ ಸೊಗಸೆನಿಸದೇ ಅವು ಒಂದು ವಾರ ಅಥವಾ ಹತ್ತು ದಿನ ಓಡಿ ಅವುಗಳ ಬದಲಾಗಿ ಮತ್ತೊಂದು ಹೊಸ ಸಿನಿಮಾ ಬರುತ್ತಿತ್ತು. ಸಾಧಾರಣ ಸಿನಿಮಾಗಳು ಸಾಮಾನ್ಯವಾಗಿ ಎರಡು ವಾರ ಓಡುತ್ತಿದ್ದವು. ಆದರೆ ಯಾವುದಾದರೂ “ಸೂಪ್ಪರ್ ಡ್ಯೂಪ್ಪರ್ ಹಿಟ್” ಕನ್ನಡ ಸಿನಿಮಾ ಬಂದರೆ ತಿಂಗಳುಗಟ್ಟಲೇ ಅಲ್ಲೇ ಕುಂಡಿಯೂರಿ ಕುಂತು ಬಿಡುತ್ತಿತ್ತು. ಪದೇ ಪದೇ ನೋಡಿ ಎಲ್ಲಾ ಸಂಭಾಷಣೆ ಬಾಯಿಪಾಠ ಆಗಿರೋವು, ಈಗ ರಾಜ್ಕುಮಾರ್ ಹೀಗೆ ಕೈ ಮೇಲೆತ್ತಿ ಹೀಗೆನ್ನುತ್ತಾನೆ, ಈಗ ನೆಕ್ಸ್ಟ್ ಭಾರತಿ ಹೀಗೆ ಕತ್ತು ಕೊಂಕಿಸಿ ಹೀಗೆ ನಗುತ್ತಾಳೆ ಎಂದು ನಿರೀಕ್ಷಿಸುತ್ತ ಕೂಡ್ರುವಷ್ಟು ಎಲ್ಲವೂ ಪರಿಚಿತ ಪರಿಚಿತ.., ಭಲೇ ಜೋಡಿ, ಮೇಯರ್ ಮುತ್ತಣ್ಣ ಎಂಬ ಗ್ರೇಟ್ ಸಿನಿಮಗಳನ್ನು ನಾನು ಹೆಚ್ಚು ಕಡಿಮೆ ಪ್ರತಿದಿನ ನೋಡಿದ್ದೆ. ನೋಡಿದ ಸಿನಿಮಾನೇ ಎಷ್ಟು ಸಾರಿ ಅಂತ ನೋಡುವದು? ಹೀಗಾಗಿಯೇ ನಾನು ಎರಡೋ ಮೂರೋ ತಿಂಗಳಿಗೊಮ್ಮೆ ಒಂಬತ್ತು ಸಿನಿಮಾ ಟಾಕೀಜ್ ಗಳು ಇದ್ದ ಬೆಳಗಾವಿಗೆ ಹೋಗಿ ಸಿನಿಮಾ ನೋಡಿ ಬರುತ್ತಿದ್ದುದು.
ಸಿನಿಮಾ ಬಿಟ್ಟರೆ ಬೇರೆ ಮನರಂಜನೆ ಎಂಬುದಿರಲಿಲ್ಲ, ಮಲೆನಾಡಿನ ಹಸಿರು ಹಾಸಿದಂಥ ಬತ್ತದ ಗದ್ದೆಗಳು, ಜಿಟಿಜಿಟಿ ಮಳೆ, ಗುಡ್ಡ ಬೆಟ್ಟ ಗಿರಿಶಿಖರಗಳ ಸಾಲು, ಹಕ್ಕಿ ಪಕ್ಷಿಗಳ ಚಿಲಿಪಿಲಿ, ಕಲರವ..ಈ ಯಾವ ನೈಸರ್ಗಿಕ ವರಗಳೂ ಇಲ್ಲದ ಬಯಲು ಸೀಮೆಯ ಊರು ಬೈಲಹೊಂಗಲ. ಅಲ್ಲಿ ಕಮತಗಿಯ ಹುಚ್ಚೇಶ್ವರ ನಾಟ್ಯ ಸಂಘ, ಅಥವಾ ಸುಳ್ಳದ ಶ್ರೀಮಂತ ದೇಸಾಯರ ಮಾಲೀಕತ್ವದ ನಾಟಕ ಕಂಪನಿ ಇಂಥವೇನಾದರೂ ಬಂದು ಕ್ಯಾಂಪ್ ಹಾಕಿದರೆ ನಮಗೆ ಭಾಗ್ಯ, ಮನರಂಜನೆಯ ಮತ್ತೊಂದು ಪರ್ಯಾಯ ವ್ಯವಸ್ಥೆ. ನಾನು ಶಾಲೆ ತಪ್ಪಿಸಿ ಹಾವಾಡಿಗರ ಆಟ ನೋಡುತ್ತ, ಅಥವಾ ಬೈಲಹೊಂಗಲದ ಬೆಲ್ಲದ್ ಮತ್ತು ಮೆಟಗುಡ್ ಎಂಬವರ ಕಬ್ಬಿನ ತೋಟಗಳ ನಡುವೆ ಇದ್ದ ಎರಡು ಪ್ರಮುಖ ಈಜುವ ಬಾವಿಗಳಲ್ಲೊಂದರಲ್ಲಿ ಇಡೀ ಹಗಲು ಜಲಚರದಂತೆ ಈಜು ಬೀಳುತ್ತ, ನನ್ನಿಬ್ಬರು ಗೆಳೆಯರೊಂದಿಗೆ ಬೀಡಿ-ಸಿಗರೇಟು ಸೇದುತ್ತ, ಅಲೆಯುತ್ತ ಗೊತ್ತು ಗುರಿಯಿಲ್ಲದೇ ಬೆಳೆಯುತ್ತ,ಇದೆಲ್ಲದರ ಒಟ್ಟು ಪರಿಣಾಮವಾಗಿ ಎಸೆಸೆಲ್ಸಿಯಲ್ಲಿ ಸ್ವಲ್ಪ ಗೌರವಯುತ ರೀತಿಯಲ್ಲಿ, ಅಂದರೆ ಸೈನ್ಸ್ ಎಂಬ ಏಕಮಾತ್ರ ವಿಷಯದಲ್ಲಿ, ಫೇಲಾದೆ. ಒಂದು ವರ್ಷ ಖಾಲಿ ಕೂಡ್ರುವದೇನು ಅಂತ ಟೈಪಿಂಗ್ ಕಲಿಯಲು ಹೋದೆ. ಅಲ್ಲೂ ಯಶಸ್ವಿಯಾಗಿ ಫೇಲಾದೆ…!
ಒಂದಿಡೀ ವರ್ಷ ನಾನು ಮಾಡಿದ ಅತ್ಯುತ್ತಮ ಕೆಲಸವೆಂದರೆ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗತೊಡಗಿದ್ದು. ಕತೆ-ಕಾದಂಬರಿಗಳೆಂಬ ಮಾಯಾವಿಗಳೂ ದಿನ-ವಾರಪತ್ರಿಕೆಗಳೆಂಬ ಅರಿವಿನ ಆಗರಗಳೂ ನನ್ನನ್ನು ಆವರಿಸಿಕೊಂಡದ್ದು ಹಾಗೆ. ಅಕ್ಷರ ಲೋಕ ನನಗೆ ಅಪ್ಯಾಯಮಾನವೆನಿಸತೊಡಗಿತು, ಈ ಮಧ್ಯೆ ಅಕ್ಟೋಬರ್ ಪೂರಕ ಪರೀಕ್ಷೆಯಲ್ಲಿ ಸೈನ್ಸ್ ಎಂಬ ಬೇತಾಳ ಕೇಳಿದ ಪ್ರಶ್ನೆಗಳೆಲ್ಲದಕ್ಕೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಉತ್ತರಿಸಿದ ಮೇಲೂ ನನ್ನ ತಲೆ ಸಿಡಿದು ಹೋಳಾಗಲಿಲ್ಲವಾಗಿ ಆ ಬೇತಾಳವನ್ನು ಹೆಗಲಿನಿಂದಿಳಿಸಿ ಬಿಸಾಡಿ ಬೈಲಹೊಂಗಲದಲ್ಲಿಯೇ ಅದಾಗ ತಲೆಯೆತ್ತಿದ್ದ ಕಾಲೇಜಿಗೆ ಪಿಯೂಸಿ ಆರ್ಟ್ಸ್ ಗೆ ಪ್ರವೇಶ ಪಡೆದೆ, ಟೈಪಿಂಗ್ ಕಲಿತದ್ದರಿಂದಾಗಿ ನನ್ನ ಶಬ್ದಸಂಗ್ರಹ ಮತ್ತು ಕಾಗುಣಿತ ಸುಧಾರಿಸಿತ್ತು, ಒಂದು ವರ್ಷ ಹಾಳಾಯ್ತೆಂಬ ನೋವು ಸ್ವಲ್ಪ ಗಾಂಭೀರ್ಯ ತಂದಿತ್ತು. ಇಂಗ್ಲೀಷ್ ಭಾಷೆ ಸುಲಭವಾಗಿ ಗ್ರಹಿಕೆಗೆ ನಿಲುಕುತ್ತ ಹೋಯಿತು. ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ ಇವೆಲ್ಲ ಮನಸಿನೊಳಗಿಳಿಯ ತೊಡಗಿದವು.
ಈ ಮಧ್ಯೆ ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘ ಬೈಲಹೊಂಗಲದಲ್ಲಿ ವರ್ಷಗಟ್ಟಲೆ ಕ್ಯಾಂಪ್ ಹಾಕಿತು.ಆ ಕಂಪನಿಯ “ಜಗಜ್ಯೋತಿ ಬಸವೇಶ್ವರ” ನಾಟಕ ಮನೆಮಾತಾಯಿತು. ಅವರ ಮಗ ನಟರಾಜನೂ ನಮ್ಮದೇ ಕಾಲೇಜಿನಲ್ಲಿ ಪಿಯುಸಿ ಕಾಮರ್ಸ್ ಗೆ ಸೇರಿಕೊಂಡ. ನಾವು ಆಗ ವಾರ್ಷಿಕೋತ್ಸವದಲ್ಲಿ ಒಂದು ನಾಟಕ ಮಾಡಿದೆವು. ಅದರ ಹೆಸರು ಖಚಿತವಾಗಿ ನೆನಪಿಲ್ಲ. ನಾವಿಬ್ಬರೂ ಅದರಲ್ಲಿ ಪಾತ್ರಧಾರಿಗಳು. ಕನ್ನಡ ಪ್ರಾಧ್ಯಾಪಕ ಪ್ರೊ.ಸಿ.ಜಿ.ಹತ್ತಿ ಅದರ ನಿರ್ದೇಶಕರು. ನಾಟಕದ ಅರ್ಧದ ವರೆಗೆ ನನ್ನದು ಪುರುಷ ಪಾತ್ರ, ಆದರೆ ಕೊನೆಯರ್ಧ ಏನೋ ಉದ್ದೇಶ ಸಾಧಿಸುವದಕ್ಕಾಗಿ ಸ್ತ್ರೀಯಂತೆ ವೇಷ ಬದಲಿಸುವ ಸಂಚಿನ ಪಾತ್ರ ಅದು. ಗ್ರೀನ್ ರೂಮಾಗಿ ಕನ್ ವರ್ಟ್ ಆಗಿದ್ದ ಸ್ಟಾಫ್ ರೂಮಿನಲ್ಲಿ ನಮಗೆ ಇಂಗ್ಲೀಷ ಪಾಠ ಮಾಡುತ್ತಿದ್ದ ವಾಲಿ ಮೇಡಂ ಬಂದು ನನಗೆ ಸೀರೆ ಉಡಿಸಿ (ಅಥವಾ ಹೇಗೆ ಉಡಬೇಕೆಂಬ ಸ್ಥೂಲ ನಿರ್ದೇಶನ ಕೊಟ್ಟು) ಹೋದರು. ನನ್ನ ಸಹ ನಟ, ಈಗ ದಿವಂಗತನಾಗಿರುವ ಏಣಗಿ ನಟರಾಜನು ಅಲ್ಲೇ ಇದ್ದ “ಸಂಯುಕ್ತ ಕರ್ನಾಟಕ”ವೆಂಬ ಸಮಸ್ತ ಉತ್ತರ ಕರ್ನಾಟಕದ ಏಕಮೇವಾದ್ವಿತೀಯ ವರ್ತಮಾನ ಪತ್ರಿಕೆಯ ಕೆಲವು ರದ್ದೀ ಹಾಳೆಗಳನ್ನು ಮುದ್ದೆ ಮಾಡಿ ತನ್ನೆರಡೂ ಅಂಗೈಗಳಲ್ಲಿ ಹಿಸುಕಿ ಹಿಸುಕಿ ಹಿಸುಕಿ ಎರಡು ಗಮನಾರ್ಹ ಸೈಜಿನ ಉಂಡೆಗಳಾಗಿ ಪರಿವರ್ತಿಸಿ ನಾನು ಧರಿಸಿದ್ದ ಕುಪ್ಪಸದೊಳಕ್ಕೆ ಎಡಕ್ಕೊಂದು ಬಲಕ್ಕೊಂದು ಇಳಿಬಿಟ್ಟು ಮೇಲೆ ಲಕ್ಷಣವಾಗಿ ಸೆರಗೆಳೆದು ನನ್ನನ್ನು ರಂಗಕ್ಕೆ ನೂಕಿದನು. ಅದು ನಾನು ಅಭಿನಯಿಸಿದ ಮೊದಲ ನಾಟಕ. ನಾನು ಅಭಿನಯಿಸಿದ ಮೂರನೇ ಮತ್ತು ಕೊನೆಯ ನಾಟಕದ ಕುರಿತು ಮತ್ಯಾವಾಗಲಾದರೂ ಹೇಳಿಯೇನು. ಹಾಗೆಯೇ ಈ ಏಣಗಿ ನಟರಾಜನೆಂಬ ನನ್ನ ಸಹಪಾಠಿಯ ಕುರಿತೂ ಇನ್ನೊಂದು ಸಂದರ್ಭದಲ್ಲಿ ಹೇಳಿಯೇನು.

ಈಗ ವಿಷಯಕ್ಕೆ ಬರುವದಾದರೆ, ನಾನು ಧಾರವಾಡಕ್ಕೆ ಬಂದ ಮೇಲೂ ನನಗೆ ನನ್ನ ಗೆಳೆಯರೊಂದಿಗೆ ಪ್ರತಿನಿತ್ಯ ಸಾಯಂಕಾಲ ಮುರಗೋಡ ರಸ್ತೆಯಲ್ಲಿ ಉದ್ದಕ್ಕೂ ವಾಕ್ ಮಾಡುತ್ತ ಇಡೀ ದಿನ ನಾವು ಕೇಳಿದ ಟೆಸ್ಟ್ ಕ್ರಿಕೆಟ್ ನ ರನ್ನಿಂಗ್ ಕಾಮೆಂಟ್ರಿಯ ವಿವರಗಳನ್ನು ಅಥವಾ ದಿನಪತ್ರಿಕೆಗಳಲ್ಲಿ ಓದಿದ ವಿಶ್ಲೇಷಣೆಗಳನ್ನು – ಗವಾಸ್ಕರ್, ಜಿ.ಆರ್. ವಿಶ್ವನಾಥ್. ಹೇಗೆ ಚೆಂಡನ್ನು ಸ್ಕೇರ್ ಕಟ್ ಅಥವಾ ಲೇಟ್ ಕಟ್ ಮಾಡಿದರು, ಬಿ.ಎಸ್.ಚಂದ್ರಶೇಖರ್, ಎರ್ರಪಳ್ಳಿ ಪ್ರಸನ್ನ, ಬಿಶನ್ ಸಿಂಗ್ ಬೇಡಿ ಹೇಗೆ ತಮ್ಮ ಸ್ಪಿನ್ ಬೌಲಿಂಗ್ ನಿಂದ ಅಲನ್ ನಾಟ್, ಟೋನಿ ಗ್ರೆಗ್ ರನ್ನು ಮಂಗ್ಯಾ ಮಾಡಿದರು, ನಿಜಲಿಂಗಪ್ಪ ಹೇಗೆ ಇಂದಿರಾ ಗಾಂಧಿ ವಿರುದ್ಧ ಸಿಡಿದೆದ್ದರು, ವೀರೇಂದ್ರ ಪಾಟೀಲ್ ಹೇಗೆ ಸಿಂಡಿಕೇಟ್ ಕಾಂಗ್ರೆಸಿನ ಬುನಾದಿಯನ್ನು ಗಟ್ಟಿಗೊಳಿಸುತ್ತಿದ್ದಾರೆ ಇತ್ಯಾದಿಗಳ ಬಗ್ಗೆ-ಸುರೇಶ್ ಸುರೈಯಾ ಅಥವಾ ಇನ್ನ್ಯಾರೋ ಕಾಮೆಂಟೇಟರ್ ಅಥವಾ ಯಾವುದೋ ಪತ್ರಿಕೆಯ ಸಂಪಾದಕೀಯದಲ್ಲಿ ಯಾರೋ ಹೇಳಿದ್ದನ್ನು ನಮ್ಮದೇ ಮಾತುಗಳೆಂಬಂತೆ ಪರಸ್ಪರ ಹಂಚಿಕೊಳ್ಳುತ್ತ, ನಮ್ಮ ಕನಸಿನ ಕನ್ಯೆಯರಾದ ನಮ್ಮ ಕ್ಲಾಸ್ ಮೇಟ್ಸ್ ಗಳ ಬಣ್ಣ, ಉಡುಗೆ, ಮೊಡವೆ, ನೋಟ-ನಗೆಗಳ ಬಗ್ಗೆ ಗುಸುಗುಸು ಮಾಡುತ್ತ, ರಸ್ತೆಯ ಇಕ್ಕೆಲದಲ್ಲಿ ಕಣ್ಣಿಗೇ ಅದರ ಫಲವತ್ತತೆ .ಗೋಚರಿಸುವಂತಿದ್ದ ಫಲವತ್ತಾದ ಎರೆ ಮಣ್ಣಿನ ಭೂಮಿಯ ಮೇಲೆ ಒಂದೆಡೆ ಮಬ್ಬುಗತ್ತಲೆ ಹರಡುವ ವರೆಗೆ ಕುಳಿತಿರುತ್ತಿದ್ದ ಸಂಜೆಗಳ ನೆನಪುಗಳು ಒದ್ದುಕೊಂಡು ಬಂದು ನನ್ನನ್ನು ದು:ಖಿತನನ್ನಾಗಿಸುತ್ತಿದ್ದವು.
ಬೈಲಹೊಂಗಲ ಆ ದಿನಗಳಲ್ಲೇ ವಿಶಿಷ್ಟವಾದ ಊರಾಗಿತ್ತು. ಅದಕ್ಕೆ ನಗರೀಕೃತ ರೂಪ ಇದ್ದಂತೆಯೇ ಒಂದು ರೈತಾಪಿ ರೂಪವೂ ಇತ್ತು, ಮರಡಿ ಬಸವೇಶ್ವರ ಜಾತ್ರೆ, ಹನುಮಂತದೇವರ ಜಾತ್ರೆ ಇವು ನಮಗೆ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಸಂಭ್ರಮವನ್ನು ಪರಿಚಯಿಸಿದರೆ, ಇನ್ನೊಂದೆಡೆ ವಿಜಯ ಸೋಶಿಯಲ್ ಕ್ಲಬ್ ನ ಲಾನ್ ನಲ್ಲಿ ಮುಂಜಾನೆಯ ಎಳೆಬಿಸಿಲಲ್ಲಿ ಪ್ರತಿಷ್ಠಿತರು ಬೆವೆಯುತ್ತ ಲಾನ್ ಟೆನಿಸ್ ಆಡುವ, ಹೈಸ್ಕೂಲು ಕಾಲೇಜಿನಾಚೆಯ ಹೊಲದಲ್ಲೇ ಒಂದು ಆಂಗಣ ಮಾಡಿ ಯಾವುದೋ ರವಿವಾರಗಳಂದು ಅಪೋಲೋ ಇತ್ಯಾದಿ ಹೆಸರಿಟ್ಟುಕೊಂಡ ತರುಣರ ಟೀಮ್ ಗಳು ಪ್ಯಾಡ್ಸ್ ಗ್ಲೋವ್ಸ್ ವ್ಹೈಟ್ಸ್ ಗಾರ್ಡ್ ಎಲ್ಲ ಧರಿಸಿ ಹಸಿರು ಮ್ಯಾಟ್ ಹಾಸಿ ಲೆದರ್ ಬಾಲ್ ಬಳಸಿ ಎರಡು ಇನ್ನಿಂಗ್ಸ್ ಗಳ ಕ್ರಿಕೆಟ್ ಆಡುವ ಪರಿಪಾಠಗಳು ಅದರ ನಗರ ಸ್ವರೂಪದ ಸೂಚಕಗಳಂತಿದ್ದವು. ಇಂಥದನ್ನೆಲ್ಲ ಆನಂದಿಸುತ್ತ ಬೆಳೆದೆ ನಾನು. ಮನೆಯಲ್ಲಿ ತಾಪತ್ರಯಗಳೇನೋ ಇದ್ದವು. ಆದರೆ ನನ್ನ ಬಡತನ ನನಗೆ ಅವಮಾನದ ವಿಷಯವೆಂದು ಎಂದೂ ಅನ್ನಿಸಲಿಲ್ಲ, ವಾಸ್ತವವಾಗಿ ಅದು ನನ್ನಲ್ಲಿ ಘನತೆಯ ಪ್ರಜ್ಞೆಯನ್ನು ಜಾಗೃತಗೊಳಿಸಿತು.ಕಪ್ಪು ನಾಡಹೆಂಚಿನ ನಮ್ಮ ಮನೆ ಮಳೆಗಾಲದಲ್ಲಿ ಎಷ್ಟು ಸೋರುತ್ತಿತ್ತೆಂದರೆ ಮನೆಯಲ್ಲಿರುವ ಹೆಚ್ಚೂ ಕಡಿಮೆ ಎಲ್ಲ ಪಾತ್ರೆಗಳನ್ನೂ ನಾವು ನೀರು ಸೋರುವಲ್ಲಿ ಇಡುತ್ತಿದ್ದೆವು. ಆ ಹೆಂಚುಗಳಡಿ ಇರುವ ಬಿದಿರು ತಡಿಕೆಗುಂಟ ನೂರಾರು ಇಲಿಗಳು ಆರಾಮವಾಗಿ ಓಡಾಡುತ್ತಿದ್ದವು. ಆ ಗಳುಗಳು ಮತ್ತು ಬೊಂಬುಗಳ ಶೈಥಿಲ್ಯವನ್ನು ಅವುಗಳಿಂದುದುರುವ ನಸುಹಳದಿ ಹುಡಿ ದಿನನಿತ್ಯ ನಮಗೆ ಸಾರುತ್ತಿತ್ತು.
ಬೈಲಹೊಂಗಲದ ಇನ್ನೊಂದು ಲಕ್ಷಣವೆಂದರೆ ಅಲ್ಲಿ ಗಣೇಶ ಚತುರ್ಥಿಗೆ ಬಹುದೊಡ್ಡ ಸಾರ್ವಜನಿಕ ಆಯಾಮವಿತ್ತು. ಜವಳಿ ಕೂಟಿನಲ್ಲಿ, ಗೊಂಬಿಗುಡಿಯ ಬಳಿಯ ಚೌಕದಲ್ಲಿ ಸಾರ್ವಜನಿಕ ಸಂಗೀತ ಕಾರ್ಯಕ್ರಮಗಳು, ಆರ್ಕೆಸ್ಟ್ರಾಗಳು ನಡೆಯುತ್ತಿದ್ದವು. ನನಗೆ ಸಿದ್ಧಾಂತ, ಹೋರಾಟ, ನಾವು ಅದು ವರೆಗೆ ಮಾತನಾಡುತ್ತಿದ್ದುದಕ್ಕಿಂತ ಭಿನ್ನವಾದ ರಾಜಕೀಯದ ಮಾತು ಮೊದಲಾಗಿ ಕೇಳಲು ಸಿಕ್ಕದ್ದು ಬೈಲಹೊಂಗಲದಲ್ಲೇ, ಒಂದು ಸಾರ್ವಜನಿಕ ಸಭೆಯಲ್ಲಿ. ಅವು ಉತ್ತರ ಭಾರತದಲ್ಲಿ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಸಮಗ್ರಕ್ರಾಂತಿಗಾಗಿ ಹೋರಾಟ ನಡೆಯುತ್ತ ಇವೊತ್ತಿನ ಶರದ್ ಯಾದವ್, ಮುಲಾಯಮ್ ಸಿಂಗ್ ಯಾದವ್, ಲಲ್ಲೂಪ್ರಸಾದ್ ಯಾದವ್ ಮೊದಲಾದವರು ಯುವಜನರ ನಾಯಕಮಣಿಗಳಾಗಿ ಉದಿಸುತ್ತಿದ್ದ ಕಾಲ. ನಾನಾಗ ದ್ವಿತೀಯ ಪಿ ಯು ಸಿ ವಿದ್ಯಾರ್ಥಿ. ಒನ್ ಫೈನ್ ಈವ್ನಿಂಗ್ ಎಂಬಂತೆ ಮೂವರು ಕರ್ನಾಟಕ ನವನಿರ್ಮಾಣ ಕ್ರಾಂತಿಯ ನಾಯಕರು ಜವಳಿ ಕೂಟಿನಲ್ಲಿ ಜನರನ್ನುದ್ದೇಶಿಸಿ ಮಾತನಾಡಲು ಬಂದಿದ್ದರು. ಗಡತರನವರ್ ಪಾರ್ಟಿ, ಮೆಟಗುಡ್ ದವರ ಪಾರ್ಟಿ ಎಂಬ ಸರಳ ದ್ವಿಭಜನೆಯ ರಾಜಕಾರಣದ ಬೈಲಹೊಂಗಲದಲ್ಲಿ ಅವರನ್ನು ಯಾರು ಕರೆಸಿದ್ದರೋ ನನಗೆ ಈವೊತ್ತಿಗೂ ಬಗೆ ಹರಿದಿಲ್ಲ, ಒಬ್ಬರು ತೆಳ್ಳನೆಯ ಬಿಳೀ ಜುಬ್ಬ ಪೈಜಾಮಾ ಧರಿಸಿದ, ಚೂಪುಮೂಗಿನ ಮೇಲೆ ಸ್ವಚ್ಛ ಕನ್ನಡಕ ಧರಿಸಿದ ನೀಳದೇಹಿ. ಅವರು ಪ್ರೊ. ಎಂ.ಡಿ.ನಂಜುಂಡಸ್ವಾಮಿ. ಇನ್ನೊಬ್ಬರು ಕೂದಲೆಲ್ಲ ಅಕಾಲಿಕವಾಗಿ ನರೆತು ತಲೆಯು ಹಂಜೀಬುಟ್ಟಿಯಂತೆ ಬೆಳ್ಳಗಿದ್ದು, ಕೋಟು ಪ್ಯಾಂಟು ತೊಟ್ಟ ಸಾದಗಪ್ಪು ಬಣ್ಣದ ಮೂರ್ತಿ, ಜೀವನಪೂರ್ತಿ “ಸೈದ್ಧಾಂತಿಕ ಹೋರಾಟ” ಮಾಡಿ ಈಗ ಅದರ ಫಲಶೃತಿಯಾಗಿ ಬಿಎಸ್ ಯಡಿಯೂರಪ್ಪನವರ ಕೇಜೇಪೀ ಸೇರಲು ತುದಿಗಾಲ ಮೇಲೆ ನಿಂತಿರುವ ಶ್ರೀಮಾನ್ ಪ್ರೊ. ಚಂದ್ರಶೇಖರ್ ಪಾಟೀಲ್ ರು, ಮೂರನೆಯವರು, ಕಣ್ಣುಗಳನ್ನು ಕಿರಿದಾಗಿಸಿಕೊಂಡು, ಸದಾ ನಗುತ್ತಿರುವಂತೆ ಮುಖದ ಮಡತೆಗಳನ್ನು ಹಿಗ್ಗಿಸಿಕೊಂಡು ನಿಧಾನವಾಗಿ ಅಲ್ಲಲ್ಲಿ ಸ್ವಲ್ಪ ತೊದಲುರೀತಿಯಲ್ಲಿ ಮೆಲುದನಿಯಲ್ಲಿ ಮಾತನಾಡುತ್ತಿದ್ದ, ಹಾಫ್ ತೋಳಿನ ಬುಶ್ ಶರ್ಟು ಹಾಗೂ ಪ್ಯಾಂಟು ತೊಟ್ಟ, ಅಂದು ಹೇಗಿದ್ದರೋ ಬಹುಪಾಲು ಇಂದೂ ಹಾಗೇ ಇರುವ, ಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟಿಯವರು.
ಶ್ರೀಯುತ ನಂಜುಂಡಸ್ವಾಮಿಯವರು “ಈ ವೀರೇಂದ್ರ ಪಾಟೀಲರು”, “ಈ ನಾಚಿಕೆ ಇಲ್ಲದ ವೀರೇಂದ್ರ ಪಾಟೀಲರು” “ಈ ಲಜ್ಜೆಗೇಡಿ ಕಾಂಗ್ರೆಸ್ ಸರಕಾರ” ಇತ್ಯಾದಿ ಮಾತನಾಡುತ್ತಿರಬೇಕಾದರೆ ಕರೆಂಟ್ ಕೈಕೊಟ್ಟಿತು. ಭಾಷಣ ಮುಂದುವರಿದಿತ್ತು. ಸ್ವಲ್ಪ ಹೊತ್ತಾದ ಮೇಲೆ ಕರೆಂಟ್ ಮತ್ತೆ ಬಂದಾಗ ಸ್ವಲ್ಪ ಸಂಚಲನ ಉಂಟಾಗಿ ಪಾಪ ಬೈಲಹೊಂಗಲದ ಪಡ್ಡೆ ಹುಡುಗರು ನಾಗರಿಕರು ಸ್ವಲ್ಪ ಸಾಮೂಹಿಕವಾಗಿ ಓಹ್ ಎಂದರು, ಸ್ವಲ್ಪ ಚಪ್ಪಾಳೆ ತಟ್ಟಿದರು, ಒಬ್ಬಿಬ್ಬರು ಶಿಳ್ಳೆಯನ್ನೂ ಹೊಡೆದರು. ನಂಜುಂಡಸ್ವಾಮಿಗಳು ಕ್ರುದ್ಧರಾಗಿ ಹುಬ್ಬು ಗಂಟಿಕ್ಕಿಕೊಂಡು ಸಭಿಕರನ್ನು ನೋಡಿ, “ಏನಾಯ್ತು,?ನಿಮಗೇನಾದ್ರೂ ಬುದ್ಧಿ ಇದೆಯಾ? ಕರೆಂಟು ಬಂದ್ರೆ ಚಪ್ಪಾಳೆ ಹೊಡೆಯುವಂಥದೇನಿದೆ?” ಎಂದು ರೇಗಿದರು. ಅಂಥ ಮನುಷ್ಯನೊಬ್ಬನನ್ನು ಬೈಲಹೊಂಗಲದ ಜನ ನೋಡಿದ್ದು ಅದೇ ಮೊದಲು..!

ಮೊದಲ ಪಿಯುಸಿಯನ್ನು ಸೆಕಂಡ್ ಕ್ಲಾಸನಲ್ಲೂ, ದ್ವಿತೀಯ ಪಿಯುಸಿಯನ್ನು ಫಸ್ಟ್ ಕ್ಲಾಸ್ ನಲ್ಲೂ ತೇರ್ಗಡೆಯಾದ ನನಗೆ ಒಂದೋ ಬೈಲಹೊಂಗಲದಲ್ಲೇ ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಅಥವಾ ಕನ್ನಡ ಇವುಗಳಲ್ಲೊಂದನ್ನು ಪ್ರಧಾನ ವಿಷಯವಾಗಿ ಆಯ್ದುಕೊಂಡು ಅಲ್ಲೇ ಪದವಿ ವಿದ್ಯಾಭ್ಯಾಸ ಮಾಡುವ ಅಥವ ಅಲ್ಲಿ ಪ್ರಧಾನ ವಿಷಯವಾಗಿ ಇಲ್ಲದ ಮತ್ತು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿರುವ ಒಂದು ವಿಷಯದ ನೆಪ ಮಾಡಿಕೊಂಡು ಬೈಲಹೊಂಗಲ ಬಿಟ್ಟು ಧಾರವಾಡಕ್ಕೆ ಹೋಗುವ ಹೀಗೆ ಎರಡು ಆಯ್ಕೆಗಳಿದ್ದವು. ಬೈಲಹೊಂಗಲ ಚಿಕ್ಕದಾಗಿ ತೋರತೊಡಗಿತು. ಧಾರವಾಡಕ್ಕೆ ಹೋಗಿ ಪದವಿ ವಿದ್ಯಾಭ್ಯಾಸ ಮಾಡಬೇಕೆಂಬ ವಾಂಛೆ ನನ್ನಲ್ಲಿ ಅನಿಯಂತ್ರಿತವಾಗಿ ಮೊಳೆತು ಬೆಳೆಯಿತು.

‍ಲೇಖಕರು avadhi

3 April, 2013

6 Comments

  1. ಹರಿ

    ನೆನಪುಗಳ ಮಾತು ಮಧುರ…
    ಸೊಗಸಾಗಿ ಸಾಗಿದೆ ನಿಮ್ಮ ನೆನಪುಗಳ ಮೆರವಣಿಗೆ

  2. laxminarasimha

    ಅಶೋಕ್ ಶೆಟ್ಟರೆ, ’ದೇಶ’ದ ಫರಕು ಬಿಟ್ಟರೆ (’ಕಾಲ’ ಹೆಚ್ಚು ಕಡಿಮೆ ಅದೇ), ನಮ್ಮಗಳದೂ ಇದೇ ಬಗೆಯ ಬದುಕಾಗಿತ್ತಾದರಿಂದ, ಹಳೆಯ ನೆನಪುಗಳು ಒತ್ತರಿಸಿ ಬಂದವು. ಹೀಗೇ ಮುಂದುವರಿಯಲಿ. ಧನ್ಯವಾದ

  3. ಸುಧಾ ಚಿದಾನಂದಗೌಡ

    ಜವಳಿಕೂಟಿಯ ಫಂಕ್ಷನ್ ವಿವರಣೆ ಸೊಗಸಾಗಿದೆ.
    ನಾನೆಂದೂ ನೋಡಿಲ್ಲದ ಬೆಳಗಾಂ ಪರಿಸರವನ್ನು ಪರಿಚಯಿಸುತ್ತಿದ್ದೀರಿ.
    ಧನ್ಯವಾದ ಸರ್.

  4. ಶ್ರೀನಿವಾಸ ಡಿ.ಶೆಟ್ಟಿ

    ನೆನಪೇ ನೀನೆಷ್ಟು ಸುಂದರ.

  5. Ambresh nayak

    Dharwad dallina nimma payanada nenapugalige kayuthirutheve. Dhanyavadaglu guruve

  6. bharathi bv

    Tuuuuumba chennagide ashok sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading