ನಿರಂಜನ ಎಂಬ ಕುಳಕುಂದ ಶಿವರಾಯರೂ ಮತ್ತು
ಸಾಹಿತ್ಯ ಚಳುವಳಿಗಳ ನೆನಪುಗಳೂ
ಕೆಲದಿನಗಳಿಂದ ಯು ಆರ್ ಅನಂತಮೂರ್ತಿಯವರ ಆತ್ಮಕಥನ “ಸುರಗಿ” ಓದುತ್ತಿದ್ದೇನೆ. ಅದರಲ್ಲಿ ಒಂದೆಡೆ ೧೯೫೪ರ ಸುಮಾರಿನ ತಮ್ಮ ತೊಳಲಾಟಗಳು, ಸಂಪರ್ಕಗಳು, ಸಾಹಿತ್ಯಮಾರ್ಗಗಳ ಕುರಿತ ಗ್ರಹಿಕೆಗಳು, ಗೊಂದಲಗಳು ಇತ್ಯಾದಿಗಳ ಕುರಿತು ಅನಂತಮೂರ್ತಿಯವರು ಮಾತಾಡುತ್ತಾರೆ. ಇಂಗ್ಲೀಷ್ ಸಾಹಿತ್ಯದ ಬಿ ಎ ಆನರ್ಸ್ ಎರಡನೇ ವರ್ಷದ ವಿದ್ಯಾರ್ಥಿಯಾಗಿ ಮೈಸೂರಿನ ಮಹಾರಾಜಾ ಕಾಲೇಜ್ ನಲ್ಲಿ ಇದ್ದಾಗ ರಾಜಕೀಯ, ತತ್ವ, ದೇವರ ಅಸ್ತಿತ್ವ ಇತ್ಯಾದಿ ವಾಗ್ವಾದಗಳಲ್ಲಿ ಮೈಮರೆತು ಇವರು ತರಗತಿಗೇ ಹೋಗುತ್ತಿರಲಿಲ್ಲವಂತೆ. ಅಟೆಂಡೆನ್ಸ್ ಶಾರ್ಟೇಜ್ ಆಗಿ ಪರೀಕ್ಷೆಗೆ ಕೂಡ್ರಲು ಅನುಮತಿ ಸಿಗದಿದ್ದಾಗ ಕೋರ್ಟಿಗೆ ಹೋಗುತ್ತೇನೆ ಸ್ಟೇ ತರುತ್ತೇನೆ ಥರ ಇವರು ಮಾತಾಡಿದ್ದು ಕೇಳಿದ ಇವರ ಪ್ರಿನ್ಸಿಪಾಲ್ ಸಾಧು ಪ್ರಾಣಿ ಎಸ್.ವಿ.ರಂಗಣ್ಣ ಲಿಖಿತವಾಗಿ ಹಾಗಂತ ಬರೆಸಿಕೊಂಡು ಪರೀಕ್ಷೆಗೆ ಕೂಡ್ರಲು ಅನುಮತಿ ಇತ್ತರೂ ಯೂನಿವರ್ಸಿಟಿ ಸಿಂಡಿಕೇಟ್ ಇವರ ಫಲಿತಾಂಶವನ್ನು void ab initio ಅಂದರೆ ಪಾಸಾದರೂ ಪಾಸಾದಂತಲ್ಲ (!) ಎಂದು ಘೋಷಿಸಿತ್ತಂತೆ.
ತಮ್ಮ ಇಂಥ ನಡತೆಯಿಂದ ತಮ್ಮ ತಂದೆಗಾಗಬಹುದಾದ ನೋವು ಇತ್ಯಾದಿ ನೆನೆದು ಆತ್ಮಹತ್ಯೆ ಮಾಡಿಕೊಳ್ಳಲು ಇರುವ ವಿಧಾನಗಳ ಕುರಿತು (ಶ್ರೀರಂಗಪಟ್ಟಣಕ್ಕೆ ಹೋಗಿ ಮೆಟ್ಟಲಿಳಿದು ಒಂದಿಷ್ಟು ದೂರ ಸಾಗಿ ಸಂಗಮದಲ್ಲಿ ನೀರಿಗೆ ಹಾರುವದು, ಅಥವಾ ಇಲಿಪಾಷಾಣ ತಂದು ಕುಡಿಯುವದು.., ಹೀಗೆ!) ಇವರು ಯೋಚಿಸುತ್ತಿದ್ದ ಸಂದರ್ಭ ಅದು. ಅವರದೇ ಮಾತುಗಳಲ್ಲಿ: “ಆ ದಿನಗಳಲ್ಲಿ ನಾನು ಒಂದೋ ಅತಿ ಹಿಗ್ಗಿನಲ್ಲಿ ಖುಷಿಯಾಗಿರುತ್ತಿದ್ದೆ ಅಥವ ಅತಿ ಕುಗ್ಗಿನಲ್ಲಿ ಮಂಕಾಗಿರುತ್ತಿದ್ದೆ. ಎದ್ದರೆ ಕೂರಬೇಕೆನ್ನಿಸದ, ಕೂತರೆ ಏಳಬೇಕೆನ್ನಿಸದ ಮಂಕು ಆವರಿಸಿತು.ರೂಮಿನಲ್ಲಿದ್ದ ಒಂದು ಪುಸ್ತಕವನ್ನು ಎತ್ತಿ ಯಾವ ಕಡೆಗೂ ಇಡಲಾರದ, ಊಟ ಮಾಡಬೇಕೆನ್ನಿಸದ ವಿಚಿತ್ರ ಮನಸ್ಥಿತಿ..”
ಅದೇ ಅವಧಿಯಲ್ಲಿ ಆಗಾಗ ನಿರಂಜನರು ಬಂದವರು ಇವರ ಕೋಣೆಯಲ್ಲೇ ಮಲಗುತ್ತಿದ್ದುದಿತ್ತಂತೆ. ನಿರಂಜನರ ಕಾಗದಗಳನ್ನು ಅವರ ಪ್ರೇಯಸಿಯಾದ, ಮೆಡಿಕಲ್ ಕಾಲೇಜಿನಲ್ಲಿ ಓದುತಿದ್ದ ಅನುಪಮಾಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ ಹಾಗೆಯೇ ಅನುಪಮಾರ ಕಾಗದಗಳನ್ನು ನಿರಂಜನರಿಗೆ ತಲುಪಿಸುವ ಪೋಸ್ಟಮನ್ ಆಗಿದ್ದೆ ಎನ್ನುತ್ತಾರೆ ಅವರು. ಅದಕ್ಕಿಂತ ಮಜಾ ಎಂದರೆ ತಾವು ಮೊದಮೊದಲು ಆಧುನಿಕ ಕಾವ್ಯವನ್ನು ವಿರೋಧಿಸಿದ್ದಾಗಿ, ಟಿ.ಎಸ್.ಎಲಿಯೆಟ್ ಅಪಾಯಕಾರಿ ವ್ಯಕ್ತಿ ಎಂದು ಕಮ್ಯುನಿಸ್ಟ್ ಲೇಖಕರು ಹೇಳುವದನ್ನು ಒಪ್ಪಿಕೊಂಡದ್ದಾಗಿ, ತಾವೂ ನವ್ಯವಿರೋಧಿ ಪ್ರಗತಿಶೀಲ ಪಂಥದವರಾಗಿದ್ದು ನವ್ಯದ ವಿರೋಧದಲ್ಲೇ ಕತೆಗಳನ್ನು ಬರೆದದ್ದಾಗಿ ಮತ್ತು ಅದರಿಂದ ನಿರಂಜನರಿಗೆ ಬಹಳ ಸಂತೋಷವಾಗಿದ್ದುದಾಗಿ ಅವರು ಹೇಳುತ್ತಾರೆ. ಕೇಂಬ್ರಿಡ್ಜ್ ನಲ್ಲಿ ಎಫ್. ಆರ್.ಲೀವಿಸ್ ರ ವಿದ್ಯಾರ್ಥಿಯಾಗಿದ್ದ ಸಿ.ಡಿ.ನರಸಿಂಹಯ್ಯನವರ ಶಿಷ್ಯನಾಗಿದ್ದುಕೊಂಡೂ ಲೀವಿಸ್ ರ ಆಧುನಿಕತಾವಾದ, ಎಲಿಯೆಟ್ ನ ಸಾಂಪ್ರದಾಯಿಕ ರಾಯಲಿಸ್ಟ್ ಮತ್ತು ಮಾರ್ಗ ಕಾವ್ಯದೃಷ್ಟಿಕೋನಗಳ ಕುರಿತು ಅನುಮಾನಗಳನ್ನಿಟ್ಟುಕೊಂಡ ಅನಂತಮೂರ್ತಿಯವರಿಗೆ ನಿರಂಜನರು ಆಧುನಿಕ ಕಾವ್ಯದ ಕುರಿತ ತಮ್ಮ ವಿರೋಧ ಮತ್ತು ಶೆಲ್ಲಿಯನ್ನು ಕುರಿತ ಮೆಚ್ಚುಗೆಯ ಬಗ್ಗೆ ಕೆಲವು ಲೇಖನಗಳನ್ನು ಬರೆಯುವಂತೆಯೂ ಕೇಳಿದ್ದರಂತೆ.
ಇದನ್ನು ಓದುತ್ತಿದ್ದಾಗ ನನಗನಿಸಿದ್ದೆಂದರೆ ಇದಾದ ಇಪ್ಪತ್ತೈದು ವರ್ಷಗಳ ನಂತರವೂ ಆಧುನಿಕ ಅಥವಾ ನವ್ಯ ಕಾವ್ಯ-ಸಾಹಿತ್ಯಗಳ ಕುರಿತ ನಿರಂಜನರ ಗ್ರಹಿಕೆ ಕಿಂಚಿತ್ತೂ ಬದಲಾಗಿರಲಿಲ್ಲವಲ್ಲ ಎಂದು. ನಾನು ೧೯೭೬ರ ಹೊತ್ತಿಗೆ ನಿರಂಜನರ ಸಂಪರ್ಕದಲ್ಲಿ ಬಂದೆ. ನಾನಾಗಲೇ ಅವರ “ವಿಮೋಚನೆ” ಮತ್ತು “ಚಿರಸ್ಮರಣೆ” ಕಾದಂಬರಿಗಳನ್ನು ಓದಿ ಮೆಚ್ಚಿಕೊಂಡಿದ್ದೆ. ಪ್ರಾಚೀನ ಶಂಗಂ ತಮಿಳು ಸಾಹಿತ್ಯದಲ್ಲಿ ವ್ಯಕ್ತವಾದ ಸಾಮಾಜಿಕ ರಾಜಕೀಯ ಸ್ಥಿತಿಗತಿಗಳ ಕುರಿತು ಎನ್.ಸುಬ್ರಹ್ಮಣಿಯನ್ ಬರೆದ ಇಂಗ್ಲೀಷ್ ಕೃತಿಯ ನಿರಂಜನರ ಅನುವಾದವನ್ನೂ ಓದಿದ್ದೆ. ೧೯೪೦ ರ ದಶಕದ ಮಧ್ಯಭಾಗದಲ್ಲಿ ಕರ್ನಾಟಕ ಪ್ರಗತಿಶೀಲ ಲೇಖಕರ ಸಂಘ ತಲೆಯೆತ್ತಿ ಯಾವ್ಯಾವುದೋ ಕಾರಣಕ್ಕೆ ಒಡೆದುಹೋಗಿತ್ತಲ್ಲ, (ಸಿವಿಜಿ ಪಬ್ಲಿಕೇಶನ್ಸ್ ೨೦೦೪ರಲ್ಲಿ ಪ್ರಕಟಿಸಿದ ನನ್ನ ಲೇಖನಗಳ ಸಂಕಲನ ಚರಿತ್ರೆ- ಸಮಾಜ-ಸಾಹಿತ್ಯ ದಲ್ಲಿ “ಕನ್ನಡ ಸಾಹಿತ್ಯದ ಪ್ರಗತಿಶೀಲ ಪರ್ವ: ಒಂದು ಚಾರಿತ್ರಿಕ ಹಿನ್ನೋಟ” ಎಂಬ ಲೇಖನದಲ್ಲಿ ಅದರ ಕುರಿತು ನಾನು ವಿವರವಾಗಿ ನಿರೂಪಿಸಿದ್ದೇನೆ.) ಎರಡನೆ ಬಾರಿ ಅದನ್ನು ಪುನರುಜ್ಜೀವಿತಗೊಳಿಸುವ ಪ್ರಯತ್ನದ ಫಲವಾಗಿ ಸಂಘಟಣೆಯೊಂದು ಅಸ್ತಿತ್ವಕ್ಕೆ ಬಂದು ನಾನು ಕರ್ನಾಟಕ ಕಾಲೇಜಿನಲ್ಲಿ ಬಿಎ ಓದಲು ಪ್ರವೇಶ ಪಡೆದ ವರ್ಷ ಅಂದರೆ ೧೯೭೫ರಲ್ಲಿ “ಪ್ರಗತಿಪಂಥ”ದ ಮೊದಲ ರಾಜ್ಯಮಟ್ಟದ ಸಮ್ಮೇಳನ ದಾವಣಗೆರೆಯಲ್ಲಿ ಜರುಗಿತ್ತು. ನಿರಂಜನರು ಆ ಸಮ್ಮೇಳನದಲ್ಲಿ ಮಾಡಿದ ಭಾಷಣವು ನವ್ಯಕಾವ್ಯಮಾರ್ಗದ ಮತ್ತು ಸಾಹಿತ್ಯದಲ್ಲಿ ಎಲಿಟೀಕರಣದ ಅಪಾಯಗಳ ಕುರಿತಾಗಿಯೇ ಇತ್ತು. ಕನ್ನಡಸಾಹಿತ್ಯದಲ್ಲಿ ನವ್ಯತೆಯನ್ನು ಪ್ರತಿನಿಧಿಸುವವವರನ್ನು ಮತ್ತು ೧೯೭೦ರ ದಶಕದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ ರಚಿಸಿಕೊಂಡಿದ್ದವರನ್ನು, ಸೋಷಲಿಸ್ಟರನ್ನು ಗುರಿಯಾಗಿಟ್ಟುಕೊಂಡಿತ್ತು ಎಂದರೂ ಆದೀತು.

ನಂತರ ನಾನು ಧಾರವಾಡ-ಹುಬ್ಬಳ್ಳಿಯ ಮಾರ್ಕ್ಸವಾದಿಗಳ ಸಂಪರ್ಕದಲ್ಲಿ ಬಂದೆ. ಹುಬ್ಬಳ್ಳಿಯಲ್ಲಿಯೂ ಪ್ರಗತಿಪಂಥದ ಘಟಕವೊಂದು ಅಸ್ತಿತ್ವಕ್ಕೆ ಬಂದು ನಾನು ಅದರ ಕಾರ್ಯದರ್ಶಿಯಾದೆ. ಸಣ್ಣ ಪುಟ್ಟ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತೊಡಗಿದೆವು. ಮುಖ್ಯವಾಗಿ ೧೯೭೬ರಲ್ಲಿ ಮರಣ ಹೊಂದಿದ ಚೀನದ ಅಧ್ಯಕ್ಷ ಚೇರಮನ್ ಮಾವೋ ತ್ಸೆ ತುಂಗ್ ಅವರಿಗೆ ಮತ್ತು ಕ್ರಾಂತಿಕಾರಿ ಕವಿ ನಜರುಲ್ ಇಸ್ಲಾಂ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ರಾಷ್ಟ್ರೀಯ ಗಿರಣಿ ಮಜದೂರ ಸಂಘದಲ್ಲ್ಲಿ ಏರ್ಪಡಿಸಿದೆವು. ಪ್ರಗತಿಪಂಥದ ಇನ್ನೊಬ್ಬ ಅಧ್ವರ್ಯು, ಧಾರವಾಡದಲ್ಲೇ ನೆಲೆಸಿದ್ದ ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರೊಂದಿಗೆ ನನ್ನ ಭೇಟಿ, ಮಾತುಕತೆ, ಚರ್ಚೆ ಪ್ರಾರಂಭವಾದವು. ನನ್ನ ಮತ್ತು ನಿರಂಜನರ ನಡುವೆ ಸ್ವಲ್ಪ ಪತ್ರವ್ಯವಹಾರವಾಯಿತು.ಅವರ ಕೆಲ ಪತ್ರಗಳನ್ನು ನಾನು ಬಹುಕಾಲ ಇಟ್ಟುಕೊಂಡಿದ್ದೆ. ಪೋಸ್ಟ್ ಕಾರ್ಡ್ ಗಿಂತ ಸ್ವಲ್ಪ ದೊಡ್ಡದಾದ ಬಿಳಿಯ ದಪ್ಪನೆಯ ಪ್ಲೇನ್ ಕಾರ್ಡಿನಲ್ಲಿ ಸ್ವಲ್ಪ ವಾಲಿದಂತಿರುತ್ತಿದ್ದ ಸುಂದರ ಕೈಬರಹದ ಅಕ್ಷರಗಳ ಅವರ ಪತ್ರಗಳು ತುಂಬ ಆತ್ಮೀಯವಾಗಿರುತ್ತಿದ್ದವು. ಒಂದು ಪತ್ರದಲ್ಲಿ ಅವರು ತಮ್ಮ ಮಗಳು ತೇಜಸ್ವಿನಿ ಅನುವಾದಿಸಿದ ಪಾಬ್ಲೋ ನೆರೂದನ ಕವಿತೆಗಳ “ಮರಳಿ ಬರುವೆ” ಶೀರ್ಷಿಕೆಯ ಸಂಕಲನವನ್ನು ನನಗೆ ಕಳುಹಿಸುವದಾಗಿ ಹೇಳಿದ್ದರು.ಮರುವಾರ ಅದು ಬಂದು ತಲುಪಿತು. ಪುತ್ತೂರಿನಲ್ಲಿ ಪ್ರಗತಿಪಂಥದ ಎರಡನೆಯ ರಾಜ್ಯಮಟ್ಟದ ಸಮ್ಮೇಳನದಲ್ಲಿ (೧೯೭೬)ನಮ್ಮನ್ನೆಲ್ಲ ನೋಡಲು ತಾವು ಉತ್ಸುಕತೆಯಿಂದ ಎದುರು ನೋಡುತ್ತಿರುವದಾಗಿ ಅವರು ಇನ್ನೊಂದು ಪತ್ರದಲ್ಲಿ ಬರೆದಿದ್ದರು. ನಾನು ಅದರ ಕವಿಗೋಷ್ಠಿಯಲ್ಲಿ ಇದ್ದೆ. ಆಗಷ್ಟೇ ಬೈಲೋರಷ್ಯದಿಂದ ಮರಳಿದ್ದ ಚಿತ್ರನಟಿ ಮಿನುಗುತಾರೆ ಕಲ್ಪನಾ ಪುತ್ತೂರಿನ ಸಮ್ಮೇಳನದಲ್ಲಿ ಮಿನುಗಿದರು. ಅದೊಂದು ತುಂಬ ಅಚ್ಚುಕಟ್ಟಾದ ಸಮ್ಮೇಳನ.
ಆಗ ಪ್ರಗತಿಪಂಥದ ರಾಜ್ಯ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಬೇಕೆಂದು ತೀರ್ಮಾನವಾಯಿತು. ನಿರಂಜನರಿಗೆ ನಾಟಕಕಾರ ಶ್ರೀರಂಗರನ್ನು ಅದರ ಅಧ್ಯಕ್ಷರನಾಗಿಸಬೇಕೆಂಬ ಇಚ್ಛೆ ಇತ್ತು. ನಮ್ಮ ಕೆಲವು ಕಾಮ್ರೇಡರಿಗೆ ಅದು ಪಥ್ಯವಾಗದಂತಾಗಿತ್ತು. ಪಿ.ಎಸ್.ಪಾಟೀಲ್ ಎಂಬ ಒಬ್ಬ ವಿಜಾಪುರ ಕಡೆಯ ವಕೀಲರು ಪುತ್ತೂರಿನ ಆ ಸಭೆಯಲ್ಲಿದ್ದರು.( ಅವರು ಯಾರದೋ ಮುಂದೆ ತಾವು ಇಷ್ಟಲಿಂಗಪೂಜೆ ಮಾಡಿಕೊಳ್ಳುವಾಗ ತಮಗೆ ಅದರಲ್ಲಿ ಮಾಸ್ಕೋ ಕಾಣಿಸುತ್ತದೆ ಎಂದು ಹೇಳಿಕೊಂಡಿದ್ದರಂತೆ.ಅದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ನಾವು ಆಗಾಗ ಆ ಕುರಿತು ನಗಾಡಿಕೊಳ್ಳುತ್ತಿದ್ದೆವು.) ಸದರಿ ಪಾಟೀಲರು ಶ್ರೀರಂಗರನ್ನು ಅಧ್ಯಕ್ಷರನ್ನಾಗಿಸಲು ನಿರಂಜನರು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಇರುವ ವಾಸ್ತವ ಕಾರಣ ಬ್ರಾಹ್ಮಣ್ಯ ಎಂಬ ಥರದ ಏನೋ ಒಂದು ಮಾತು ಅಂದರು, ನಗುನಗುತ್ತಲೇ ಅಂದರು. ಆದರೆ ಆಗಬೇಕಾದ ಘಾತ ಆಗಿಬಿಟ್ಟಿತು. ಮೊದಲೇ ಪಾರ್ಶ್ವವಾಯುಪೀಡಿತರಾಗಿದ್ದ ನಿರಂಜನರ ಮನಸನ್ನು ಆ ಮಾತು ಘಾಸಿಗೊಳಿಸಿ ದು ಮನಸಿನ ಮಟ್ಟದಲ್ಲೇ ನಿಲ್ಲದೇ ದೈಹಿಕವಾಗಿಯೂ ಅದರ ಪರಿಣಾಮ ಅಲ್ಲೇ ಕಂಡುಬಂದಿತು. ಅವರು ವಿವರ್ಣರಾದರು, ಮೈ ಬೆವೆಯತೊಡಗಿತು, ತುಟಿಗಳು ಅದುರತೊಡಗಿದವು. ಸ್ವತ: ವೈದ್ಯೆಯೂ ನಿರಂಜನರ ಪತ್ನಿಯೂ ಆದ ಡಾ.ಅನುಪಮಾ ನಿರಂಜನ್ ಸ್ವಾಭಾವಿಕವಾಗಿಯೇ ಪಾಟೀಲರ ಮಾತಿನಲ್ಲಿರುವ ಕುಹಕದಿಂದ ವ್ಯಗ್ರರಾಗಿ ಅವರ ಮಾತಿನ ಬಗ್ಗೆ ತಮ್ಮ ಸಿಡಿಮಿಡಿ ತೋರಿದರು.
ಶ್ರೀರಂಗರನ್ನು ಅಧ್ಯಕ್ಷರನ್ನಾಗಿಸುವ ನಿರಂಜನರ ಸಲಹೆಯಲ್ಲಿ ನನಗೆ ಆಕ್ಷೇಪಾರ್ಹವಾದದ್ದು ಏನೂ ತೋರಲಿಲ್ಲ. ಮೊದಲನೆಯದಾಗಿ ಮುಂಬೈನಲ್ಲಿ ೧೯೪೩ರಲ್ಲಿ ಜರುಗಿದ ನಾಲ್ಕನೆಯ ಅಖಿಲ ಭಾರತ ಪ್ರಗತಿಶೀಲ ಬರಹಗಾರರ ಸಮ್ಮೇಳನದಲ್ಲಿ ಶ್ರೀರಂಗರು (ಆಗಿನ ನಾಮಧೇಯ ಪ್ರೊ.ಆರ್.ವಿ.ಜಾಗಿರದಾರ್) ಸ್ವತ: ಭಾಗವಹಿಸಿದ್ದವರು. ಅದರ ಅಖಿಲ ಭಾರತ ಕಾರ್ಯಕರ್ತರ ಸಮಿತಿಗೆ ಕರ್ನಾಟಕದಿಂದ ಆಯ್ಕೆಯಾಗಿದ್ದವರು. ಕರ್ನಾಟಕದಲ್ಲಿ ಅದರ ಘಟಕಗಳು ತಲೆ ಎತ್ತಲು ಪ್ರೇರಣೆ ನೀಡಿದ್ದವರು. ಹಾಗೆ ಮಂಗಳೂರಿನಲ್ಲೂ ಜನ್ಮ ತಾಳಿದ ಪ್ರಗತಿಶೀಲ ಲೇಖಕ ಸಂಘದ ಘಟಕಕ್ಕೆ ಕಾರ್ಯದರ್ಶಿಯಾಗಿ ಆಯ್ಕೆಯಾದವರೇ ಆಗ ಸೋವಿಯೆತ್ ಮೈತ್ರಿಸಂಘದ ಮಂಗಳೂರು ಘಟಕದ ಕಾರ್ಯದರ್ಶಿಯೂ ಕಮ್ಯುನಿಸ್ಟ್ ಪಕ್ಷದ ಸದಸ್ಯರೂ ಆಗಿದ್ದ ನಿರಂಜನರು (ಆಗಿನ ನಾಮಧೇಯ ಕುಳಕುಂದ ಶಿವರಾಯ). ಆ ಹಳೆಯ ವೈಚಾರಿಕ ಬಾಂಧವ್ಯ ಮಾತ್ರಕ್ಕಾಗಿ ಅಲ್ಲ, ಹರಿಜನ್ವಾರದಂಥ ಕೃತಿಗಳನ್ನು ಬರೆದ ಕಾರಣಕ್ಕಾಗಿಯೂ ಶ್ರೀರಂಗರು ನಿಜವಾಗಿ ಪ್ರಗತಿಪರ ಎಂಬ ಅಭಿಪ್ರಾಯ ನಿರಂಜನರದಾಗಿತ್ತು., ಕಟ್ಟೀಮನಿಯವರಿಗೂ ಅದೇ ಅಭಿಪ್ರಾಯವಿತ್ತು. ಮುಂದೆ ಬೇರೆ ಏನೇನೋ ಭಿನ್ನಾಭಿಪ್ರಾಯಗಳು ಬಂದು ನನಗೆ ಮತ್ತು ಸನತ್ ಕುಮಾರ್ ಬೆಳಗಲಿಯವರಿಗೆ ನಿರಂಜನ ಹಾಗೂ ಕಟ್ಟೀಮನಿ ಎಂಬ ಹಿರಿಯರು ಪರಸ್ಪರರ ಕುರಿತು ಹೊಂದಿದ್ದ ಅಪನಂಬಿಕೆಗಳನ್ನು ನಿಭಾಯಿಸಿ ನಿವಾರಿಸಬೇಕಾಗಿ ಬಂತು. ಒಂದು ದಿನ ನಾನು ಕಟ್ಟೀಮನಿಯವರ ಮನೆಗೆ ಹೋದಾಗ “ನಿರಂಜನ ಪಾಲಿಟಿಕ್ಸ್ ಮಾಡುತ್ತಿದ್ದಾರೆ ” ಎಂದು ಗಂಭೀರ ಧ್ವನಿಯಲ್ಲಿ ಹೇಳಿ ಕಟ್ಟೀಮನಿಯವರು ನನ್ನ ಮುಖ ನೋಡುತ್ತ ಬಿಮ್ಮಗೇ ಕುಳಿತರು. ಕೊನೆಗೂ ಶ್ರೀರಂಗರು ಅಧ್ಯಕ್ಷರಾಗಿದ್ದ ಮತ್ತು ಕ.ವೆಂ.ರಾಜಗೋಪಾಲ್ ಕಾರ್ಯದರ್ಶಿಯಾಗಿದ್ದ ರಾಜ್ಯ ಕಾರ್ಯಕಾರಿ ಸಮಿತಿ ರಚಿತವಾಗಿ ಒಬ್ಬ ಸದಸ್ಯನಾಗಿ ನಾನೂ ಅದರಲ್ಲಿ ಇದ್ದೆ. ಹಾಗಾಗುವಲ್ಲಿ ನಿರಂಜನರೇ ಆಸಕ್ತಿ ವಹಿಸಿದ್ದರು. ಬೆಂಗಳೂರಿನ ಮಲ್ಲೇಶ್ವರದಲ್ಲಿದ್ದ ಶ್ರೀರಂಗರ ಮನೆಯಲ್ಲಿ ಆ ಸಮಿತಿಯ ಒಂದು ಸಭೆಯೂ ನಡೆದು ಅದರಲ್ಲಿ ಭಾಗವಹಿಸಿದ್ದ ನಾನು ಶ್ರೀರಂಗರನ್ನು ಅಲ್ಲಿ ಮೊದಲ ಸಲ ನೋಡಿದ್ದೆ. ಕೊನೆಯದಾಗಿ ಮರುವರ್ಷ ವಿಜಾಪುರ ಜಿಲ್ಲೆಯ ಮಹಾಲಿಂಗಪುರದಲ್ಲಿ ೧೯೭೭ರ ಆರಂಭದಲ್ಲಿ ನಡೆದ ಪ್ರಗತಿಪಂಥದ ಮೂರನೆಯ ರಾಜ್ಯಸಮ್ಮೇಳನದಲ್ಲಿ ನೋಡಿದ್ದೆ. ಅವರೇ ಸಮ್ಮೇಳನವನ್ನು ಉದ್ಘಾಟಿಸಿದ್ದರು. ಹಾ.ಮಾ.ನಾಯಕರು ಸಮ್ಮೇಳನಾಧ್ಯಕ್ಷರಾಗಿದ್ದರು. ಮುಂದೆ ೧೯೭೯ರಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಅಸ್ತಿತ್ವಕ್ಕೆ ಬಂದು ಒಕ್ಕೂಟ, ಪ್ರಗತಿಪಂಥ ಎಲ್ಲ ಅಪ್ರಸ್ತುತವಾಗಿ ಮಾರ್ಕ್ಸ್,ಲೋಹಿಯ,ಗಾಂಧಿ,ಅಂಬೇಡ್ಕರ್ ಮೊದಲಾದ ಚಿಂತಕರ ಪ್ರಭಾವದಲ್ಲಿದ್ದ ಎಲ್ಲ ಪ್ರಗತಿಪರ ಮತ್ತು ಪ್ರಜಾಪ್ರಭುತ್ವವಾದಿ ಜನ ಒಂದೇ ವಿಶಾಲ ವೇದಿಕೆಯಡಿ ಸಂಘಟಿತವಾಗುವಂತಾಯಿತು.
೧೯೫೪ರಲ್ಲಿ ಇದ್ದ ನವ್ಯದ ಕುರಿತ ನಿರಂಜನರ ವಿರೋಧದ ಅಥವಾ ಪೂರ್ವಗ್ರಹದ ಭಾವನೆ ಕಾಲು ಶತಮಾನ ಕಳೆದಮೇಲೂ ಇತ್ತು ಎಂದೆ. ನಾವು, ಹೊಸ ಪ್ರಗತಿಪರ ನಿಲುವಿನ ಬರಹಗಾರರು, “ನವ್ಯರಂತಾಗಬಾರದು” ಎಂಬುದು ನಿರಂಜನರ ಕಾಳಜಿಯಾಗಿತ್ತು. ಕಟ್ಟೀಮನಿಯವರಂತೂ ನವ್ಯಕಾವ್ಯದ ಕುರಿತ ತಮ್ಮ ಸಂದೇಹ, ವಿರೋಧಗಳೆಲ್ಲವನ್ನೂ ತೋಡಿಕೊಂಡು ಕವಿ ಗೋಪಾಲಕೃಷ್ಣ ಅಡಿಗರಿಗೆ ಸಾಲು ಸಾಲಾಗಿ ಪತ್ರಗಳನ್ನೇ ಬರೆದಿದ್ದವರು. ಧಾರವಾಡ ಹುಬ್ಬಳ್ಳಿಯ ನಮ್ಮ ಕೆಲ ಕಾಮ್ರೇಡ್ಗಳೂ ನಾವು ಲಂಕೇಶ್, ಕಂಬಾರ್, ದೇಸಾಯಿ,ಅನಂತಮೂರ್ತಿ, ಮೊದಲಾದವರನ್ನೆಲ್ಲ ಓದಿದರೆ ಎಲ್ಲಿ ಅಸಂಗತ, ಅಸ್ತಿತ್ವವಾದಿ ಹುದುಲು-ರಾಡಿಯಲ್ಲಿ ಬಿದ್ದು ಹೊರಳ್ಯಾಡಿ ಹಾಳಾಗಿ ಹೋಗುತ್ತೇವೋ ಎಂಬಂತೆ ಮಾತಾಡುತ್ತಿದ್ದರು. ಕಾಮೂ, ಕಾಫ್ಕಾ ಅಂತೂ ಓದದೇ ಶತೃಗಳೆಂದು ಬಗೆಯಲ್ಪಟ್ಟವರು. ಕಾಮ್ರೇಡ್ ಗಳ ಪ್ರಕಾರ ಹೋಗಿದ್ದರೆ ನಾನು ಈ ಯಾರನ್ನೂ ಓದುತ್ತಿರಲಿಲ್ಲ. ಆದರೆ ಕಾಮೂನ “ಔಟ್ಸೈಡರ್” ಪುಸ್ತಕವನ್ನು ಡಿ.ಎ.ಶಂಕರ್ ಅವರ ಅನುವಾದದಲ್ಲಿ (“ಅನ್ಯ”) ನಾನು ಅಗಲೇ ಓದಿದೆ. ನಂತರ “ಮಿಥ್ ಆಫ್ ಸಿಸಿಫಸ್” ಓದಿದೆ. ಮುಂದೆ ದೆಹಲಿಯಲ್ಲಿದ್ದ ವರ್ಷಗಳಲ್ಲಿ ಕಾಫ್ಕಾನ ಕುರಿತ ಆಸಕ್ತಿಯಂತೂ ಅವನು ಬರೆದ ಕೃತಿಗಳನ್ನು ಮೀರಿ ಅವನು ತಾನು ಮದುವೆಯಾಗಲು ನಿಗದಿಯಾಗಿ ಎರಡು ಸಲ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾಗದೇ ಹೋದ ಹುಡುಗಿಗೆ ಮತ್ತು ನಂತರ ಪ್ರೀತಿಸಿದ ಝೆಕ್ ಪತ್ರಕರ್ತೆಯಾಗಿದ್ದ ಇನ್ನೊಬ್ಬಳಿಗೆ ಬರೆದ ಓಲೆಗಳ ಸಂಗ್ರಹಗಳು (ಲೆಟರ್ಸ್ ಟು ಫೆಲಿಸ್ ಮತ್ತು ಲೆಟರ್ಸ್ ಟು ಮಿಲೆನಾ), ೧೯೧೧ರ ಸುಮಾರಿಗೆ ಅವನು ಬರೆದ ಡೈರಿಗಳು, ಆತನ ಗೆಳೆಯ ಮ್ಯಾಕ್ಸ್ ಬ್ರಾಡ್ ಆತನ ಕುರಿತು ಬರೆದ ಬಯಾಗ್ರಫಿ ಇವುಗಳಿಗೆಲ್ಲ ನನ್ನ ಓದು ವಿಸ್ತರಿಸಿಕೊಳ್ಳುವಷ್ಟು ತೀವ್ರವಾಗಿತ್ತು.
ನಿರಂಜನರಿಗೆ ಮರಳುವದಾದರೆ, ಒಮ್ಮೆ ನಾನು ಮತ್ತು ಸನತ್ ಕುಮಾರ ಬೆಳಗಲಿ ಬೆಂಗಳೂರಿಗೆ ಯಾವುದೋ ಸಮಾವೇಶಕ್ಕೆ ಹೋದ ಸಂದರ್ಭದಲ್ಲಿ ನಿರಂಜನರ ಮನೆಗೆ ಹೋದೆವು. ಅದು ಜಯನಗರದಲ್ಲಿತ್ತೆಂದು ನೆನಪು. ಗೊತ್ತಿಲ್ಲ. ಏನಿದ್ದರೂ ಅವರ ಮನೆ ಇದ್ದ ಆ ಪ್ರದೇಶವೆಲ್ಲ ಎಷ್ಟು ಖಾಲಿ ಖಾಲಿಯಾಗಿತ್ತೆಂದರೆ ಅವರ ಮನೆಯನ್ನು ಪತ್ತೆ ಹಚ್ಚಲು ತಾಸೆರಡು ತಾಸು ಹಿಡಿದಿತ್ತು. ಅವರ ಮನೆಯ ಒಪ್ಪ ಓರಣ, ಅವರ ಪುಸ್ತಕಗಳ ಸಂಗ್ರಹ ನನ್ನ ಮನಸಿನಲ್ಲಿ ಬಹುಕಾಲ ಸ್ಥಾಯಿಯಾಗಿತ್ತು. ಆವತ್ತು ಅವರು ತಮ್ಮ “ಮೃತ್ಯುಂಜಯ” ಕಾದಂಬರಿಗೆ ತಾವು ಮಾಡಿದ ಅಭ್ಯಾಸದ ಕುರಿತು ತುಂಬ ಮಾತಾಡಿದ್ದರು. ಎರಡು ವರ್ಷಗಳ ಹಿಂದೆ ತೇಜಸ್ವಿನಿ ಧಾರವಾಡಕ್ಕೆ ಬಂದ ಸಂದರ್ಭದಲ್ಲಿ ನಮ್ಮ ಮನೆಗೆ ಬಂದಾಗ ನಾನು ಅವರ ತಂದೆಯ ಕುರಿತು ಸುಮಾರು ಹೊತ್ತು ಮಾತಾಡಿದೆ. ಬಣ್ಣ, ಚೆಲುವು, ಘನತೆ, ಮಗುವಿನಂಥ ಮನಸು, ಆತ್ಮೀಯ ನಡವಳಿಕೆ, ಅಧ್ಯಯನಶೀಲತೆ,ಮಾತಿನಲ್ಲಿರುವ ಮೃದುತ್ವ..ಹೀಗೆ ಹಲವು ಕಾರಣಗಳಿಗಾಗಿ ನಿರಂಜನರು ನನಗೆ ತುಂಬ ಇಷ್ಟವಾಗಿದ್ದರು. ತಾನು ತುಂಬ ಚಿಕ್ಕವಳಿದ್ದಾಗ ತಮ್ಮ ಕುಟುಂಬ ಕೆಲಕಾಲ ಧಾರವಾಡದಲ್ಲಿ ಇದ್ದುದಾಗಿಯೂ ತಮ್ಮ ತಾಯಿ ಇಲ್ಲೇ ವೈದ್ಯಕೀಯ ಪ್ರಾಕ್ಟಿಸ್ ಕೂಡ ಮಾಡಿದ್ದುದಾಗಿಯೂ ಅಂದು ಮುಂಜಾನೆ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಲಕ್ಷ್ಮಿ ಟಾಕೀಜ್ ಹಿಂಭಾಗದ ಒಂದು ಭಾಗದತ್ತ ಕೈಮಾಡಿ ನೀವು ಆಗ ಇಲ್ಲೇ ವಾಸ ಮಾಡಿದ್ದು ಎಂದು ತೋರಿಸಿದರೆಂದೂ, ತನಗಿರುವ ಅದರ ನೆನಪು ತೀರ ಮಸಕು ಮಸಕು ಎಂದೂ ತೇಜಸ್ವಿನಿ ನಿರಂಜನ್ ನನಗೆ ಹೇಳಿದರು. ಅವರು ಕೆಲಕಾಲ ಧಾರವಾಡದಲ್ಲಿ ಇದ್ದರೆಂಬುದು ನನಗೆ ಹೊಸ ವಿಷಯವಾಗಿತ್ತು.
“ನೀವು ಬರೆಯಬೇಕು, “ಎಷ್ಟ್ಯಾಬ್ಲಿಶ್” ಆಗಬೇಕು.” ಇದು ನಿರಂಜನರು ನಮಗೆ ಪದೇ ಪದೇ ಹೇಳುತ್ತಿದ್ದ ಮಾತು. ನನ್ನ ಮೊದಲ ಕವನ ಸಂಗ್ರಹ ಪ್ರಕಟವಾಗುವ ಹೊತ್ತಿಗೆ (೧೯೯೨) ಅವರಾಗಲೇ ನಿಧನರಾಗಿದ್ದರು. ಆದರೆ ನನ್ನ ಸಂಕಲನ ಅವರಿಗೇ ಅರ್ಪಿತವಾಯಿತು. ಆ ನನ್ನ ಸಂಕಲನದ ಕುರಿತು ಹಾಮಾನಾ, ಹಂಪನಾ, ತಾಳ್ತಜೆ ವಸಂತಕುಮಾರ, ಕಾಳೇಗೌಡ ನಾಗವಾರ, ಜಿ.ರಾಜಶೇಖರ್, ಎಸ್.ವಿದ್ಯಾಶಂಕರ್ ಹೀಗೆ ಹಲವರು ಮೆಚ್ಚಿ ನನಗೆ ಓಲೆಗಳನ್ನು ಬರೆದಿದ್ದರು. ಒಬ್ಬ ರಹಮತ್ ತರೀಕೆರೆ ಮಾತ್ರ “ಕೃತಿಯನ್ನು ನಿರಂಜನರಿಗೆ ಅರ್ಪಿಸಿರುವದು ನನ್ನ ಮನಸ್ಸು ಆರ್ದ್ರ ಮಾಡಿತು. (“ಪ್ರಭಾವಶಾಲೀ” ಲೇಖಕರಿಗೆ ತಾನೇ ಬಹಳ ಜನ “ಅರ್ಪಿಸುವದು?”)” ಎಂದು ಬರೆದರು….!
ಫೋಟೋ : ಕೆ ಎಲ್ ಕಾಮತ್
ಕೃಪೆ : ವಿಕಾಸ್ ಕಾಮತ್









“ಜನರ ಇತಿಹಾಸ” ರೀತಿಯ ಬರವಣಿಗೆ. ಚನ್ನಾಗಿದೆ, ಮುಂದುವರೆಸಿ ಅಶೋಕ್ ಶೆಟ್ಟರ್ ಅವರೆ.
ಚೆನ್ನಾಗಿದೆ. ತಮ್ಮ ‘ನೆನಪು : ಸಿಹಿ ಕಹಿ’ ಯಲ್ಲಿ ಅನುಪಮಾ ನಿರಂಜನರು ಧಾರವಾಡದ
ವಾಸದ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ
ನಾನೊಬ್ಬ ನಿರಂಜನರ ಅಭಿಮಾನಿ ಹಾಗೂ ಓದುಗ. ನಿರಂಜರ ಬಗ್ಗೆ ನನಗೆ ಹೆಮ್ಮೆ. ಪ್ರಗತಿಪಂಥದ ದಾಖಲೆಗಳನ್ನು ಓದಿಯೇ ನಾವೂ ಒಂಚೂರು ಮನುಷ್ಯರೆನಿಸಿಕೊಂಡಿದ್ದು. ಅವರ ಬಗ್ಗೆ ಇನ್ನಷ್ಟ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್
Thanks Swarna,I haven’t read “Nenapu: Sihi Kahi”. I’m curious to read it now
Not that verybody should read everything under the sun. But considering ‘Nenapu: Sihi Kahi’ is so popular, it is surprising that you have not read it !!
ಮಾನ್ಯ ಅಶೋಕ ಶೆಟ್ಟರ್ ಅವರ ಲೇಖನ ನಿರಂಜನರ ಕುರಿತಾದ ಸ್ಮೃತಿ ಪುಟಗಳು ಕನ್ನಡ ಸಾಹಿತ್ಯ ನಡೆದು ಬಂದ ದಾರಿಯನ್ನು ಸೂಚ್ಯವಾಗಿ ತೋರಿಸಿಕೊಟ್ಟವು. ತೇಜಸ್ವಿನಿ ನಿರಂಜನರವರು ಬರೆದಿರುವ ನೆರೋದನ ಅನುವಾದಿತ ಕೃತಿಯು ಎಲ್ಲಿ ಸಿಗುವುದು ತಿಳಿಸಿರಿ. ನನಗೆ ನೇರುದನಲ್ಲಿ ಆಸಕ್ತಿ. ಅಶೋಕ ಶೆಟ್ಟರ್ ಆವೃಗೆ ಧನ್ಯವಾದಗಳು ಉದಯಕುಮಾರ ಹಬ್ಬು, ಕಿನ್ನಿಗೋಳಿ