
ಬೈಲಹೊಂಗಲದಲ್ಲಿ ನಾನು ಮ್ಯುನಿಸಿಪಲ್ ಜಾಕ್ಸನ್ ಹೈಸ್ಕೂಲ್ ನಲ್ಲಿ ಓದುತ್ತಿದ್ದ ಸಮಯದಲ್ಲಿ ಅಂದರೆ ೧೯೭೦ರ ದಶಕದ ಆದಿಭಾಗದಲ್ಲಿ ಅಲ್ಲಿಗೆ ಕಾಲೇಜು ಬಂತು. ಈಗ ನೂರು ವರ್ಷಗಳಷ್ಟು ಪುರಾತನವಾಗಿರುವ ನಮ್ಮ ಎಂ.ಜೆ. ಹೈಸ್ಕೂಲ್ ಇದ್ದ ಆವರಣದಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಆ ಕಾಲೇಜು ರೂಪುಗೊಳ್ಳುತ್ತಿತ್ತು. ಎಸ್.ಎಸ್.ಎಲ್.ಸಿ ಮುಗಿಸಿ ಕುಂತವರು, ಟಿಸಿಎಚ್ ಮಾಡಿಕೊಂಡು ಬಂದು ಇನ್ನೂ ಮಾಸ್ತರುಗಳೆಂದು ನೇಮನೂಕಿ ಆಗದೇ ಇದ್ದವರು ಹೊಸ ಕಾಲೇಜಿನ ಸ್ಥಾಪನೆಯಿಂದ ರೋಮಾಂಚಿತರಾಗಿ ಪ್ರವೇಶ ಪಡೆದರು. ಒಳ್ಳೆಯ ಗುಣಮಟ್ಟದ ಉಪನ್ಯಾಸಕರು ಬಂದು ಸೇರಿಕೊಂಡರು. ಶಿವರಾಮ ಕಾರಂತರು ಮುಖ್ಯ ಅತಿಥಿಯಾಗಿ ಬಂದು ವಾರ್ಷಿಕ ಗ್ಯಾದರಿಂಗ್ ದೊಡ್ಡ ಪ್ರಮಾಣದಲ್ಲೇ ನಡೆದು ಯುವ ಹೃದಯಗಳಿಗೆ ಮುದನೀಡಿತು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಅಧ್ಯಾಪಕರು ಜಂಟಿಯಾಗಿ ನಟಿಸಿದ್ದ ನಾಟಕವೊಂದು ವಿಶಿಷ್ಟ ಬೆಳವಣಿಗೆಯಾಗಿತ್ತು.
ನಾನು ಎಸ್.ಎಸ್.ಎಲ್.ಸಿಯಲ್ಲಿ ಢುಮ್ಕಿ ಹೊಡೆದು ಅಂದರೆ ಫೇಲಾಗಿ ಅಕ್ಟೋಬರ್ ಪೂರಕ ಪರೀಕ್ಷೆಯಲ್ಲಿ ಬಲು ಪ್ರಯಾಸದಿಂದ ಪಾಸಾಗಿ ಪಿಯುಸಿ ಆರ್ಟ್ಸ್ ವಿದ್ಯಾರ್ಥಿಯಾಗಿ ಕಾಲೇಜಿಗೆ ಪ್ರವೇಶ ಪಡೆದೆ. ಆ ನಮ್ಮ ನವೋದಿತ ಕಾಲೇಜಿನ ಒಂದೊಂದು ಕ್ಲಾಸ್ ರೂಮ್ ಗಳು ಒಂದೊಂದು ಥರ ಇದ್ದವು. ಕಾಲೇಜಿನ ಪ್ರವೇಶದ್ವಾರದಲ್ಲೇ ಎಡಪಾರ್ಶ್ವದಲ್ಲಿ ಬಗ್ಗಿ ನೋಡಿದರೆ ಗಾಬರಿ ಆಗುವಷ್ಟು ಆಳದ ಒಂದು ಬಾವಿಯಿತ್ತು. ಅಷ್ಟು ಉದ್ದದ ಹಗ್ಗ ಎಲ್ಲಿ ಸಿಗುತ್ತದೆ? ಹಾಗಾಗಿ ಆ ಬಾವಿಯಲ್ಲಿ ಯಾರಾದರೂ ನೀರು ಸೇದಿದ್ದು ನಾನೆಂದೂ ನೋಡಲಿಲ್ಲ. ಅದರ ಪಕ್ಕ ಒಂದು ಕ್ಯಾಂಟಿನ್.
ಅದಕ್ಕೆ ಹೊಂದಿಕೊಂಡಂತೆ ಒಂದು ಕ್ಲಾಸ್ ರೂಮ್ ಇತ್ತು. ಅದಕ್ಕೆ ಫ್ಲೋರಿಂಗ್ ಎಂಬುದೇನೂ ಇರಲಿಲ್ಲ. ಹಾಗೆ ಹಾಗೇ ನೆಲ. ತಾತ್ಕಾಲಿಕ ರಚನೆಯಾಗಿದ್ದ ಮತ್ತು ತಗಡಿನ ಶೀಟ್ಸ್ ಹೊದ್ದಿದ್ದ ಆ ಕ್ಲಾಸ್ ರೂಂ ಗೆ ಏಕಮೇವ ಕಿಟಕಿ ಇತ್ತು. ಅದಕ್ಕೆ ಸರಳುಗಳು, ಕಟ್ಟಿಗೆಯ ಚೌಕಟ್ಟು ಇಂಥ ಸೌಭಾಗ್ಯಗಳೇನೂ ಇಲ್ಲದೇ ಸುಮ್ಮನೇ ಮೂರಡಿ ಉದ್ದ ನಾಲ್ಕಡಿ ಅಗಲ ಎಂಬ ಲೆಕ್ಕದಲ್ಲಿ ಆ ಕ್ಲಾಸ್ ರೂಮ್ ಎಂಬ ಶೆಡ್ ನಲ್ಲಿ ಬೆಳಕು ಬರಲಿ ಎಂಬ ಕಾರಣಕ್ಕೆ ಗೋಡೆಯೋಪಾದಿಯಲ್ಲಿ ಇದ್ದ ತಗಡನ್ನು ಕೊರೆದು ಅದನ್ನು ರೂಪಿಸಲಾಗಿತ್ತು.
ಒಮ್ಮೆ ಸಿದ್ದಣ್ಣವರ್ ಎಂಬ ಗಡಸು ಮುಖದ ಕನ್ನಡ ಪ್ರೊಫೆಸರು ಚೆನ್ನವೀರ ಕಣವಿಯವರ “ಲಾಗ ಹೊಡೆಯಲೋ ಮಂಗ, ಲಾಗ ಹೊಡೆಯಲೋ ಮಂಗ, ಬಗ್ಗಿ ಧಣಿಯರ ಮುಂದೆ ಲಾಗ ಹೊಡಿಯೋ” ಎಂಬ ಪದ್ಯವನ್ನು ವಾಚಿಸುತ್ತಿದ್ದಾಗ ಆ ಕಿಟಕಿಯ ಪಕ್ಕ ಕುಳಿತ ವಿದ್ಯಾರ್ಥಿಯೊಬ್ಬ “ವಾಹ್ ವಾಹ್, ವಾಹ್ ವಾಹ್” ಎನ್ನತೊಡಗಿದ್ದು ಅವರ ಕಿವಿಗೆ ಬಿದ್ದು “ಯಾಂವಲೇ ಅಂವಾ?, ವಾ ವಾ ಅನ್ನಾಕ್ ನಾ ಏನ್ ಶಾಯರೀ ಹೇಳಾಕತ್ತೇನೀ ಮಗನs, ಒದ್ನೆಂದರ ಆ ಕಿಡಕಿ ಆಚಿ ಕಡೆ ಬೀಳತೀ” ಎಂದು ಬೈದಾಗಿನಿಂದ ಆ ಕಿಟಕಿಯ ಪಕ್ಕದ ಡೆಸ್ಕುಗಳಿಗೆ ಒಂದು ಗಾಂಭೀರ್ಯ ಪ್ರಾಪ್ತವಾಯಿತು!
ಅಲ್ಲಿ ನಮ್ಮ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಪಾಠಗಳು ನಡೆಯುತ್ತಿದ್ದವು. ಅದರ ಪಕ್ಕಕ್ಕೆ ಒಂದು ಪಕ್ಕಾ ಕಟ್ಟಡ. ಅಲ್ಲಿ ಸಾಲು ಸಾಲು ಸಣ್ಣ ರೂಮುಗಳ ಒಂದು ವಿಂಗ್. ಅಲ್ಲಿ ಫಿಸಿಕ್ಸ್, ಮೆಥಮೆಟಿಕ್ಸ್ ಇವುಗಳನ್ನು ಮೇಜರ್ ವಿಷಯಗಳಾಗಿ ಆಯ್ದುಕೊಂಡವರ ಪದವಿ ಕ್ಲಾಸುಗಳು ನಡೆಯುತ್ತಿದ್ದವು. ಆಮೇಲೆ ಪ್ರಿನ್ಸಿಪಾಲ್ ಚೇಂಬರ್ ಮತ್ತು ಅದಕ್ಕೆ ಅಂಟಿಕೊಂಡಂತಿದ್ದ ಮತ್ತೊಂದು ವಿಂಗ್ ನಲ್ಲಿ ಆಫೀಸು, ಸ್ಟಾಫ್ ರೂಮ್ಸ್ ಇತ್ಯಾದಿ. ಕೆಮಿಸ್ಟ್ರಿ ಬೇಕಾ.. ಅದು ಅದೋ ಅಲ್ಲಿ, ಮುನಿಸಿಪಲ್ ಕಿತ್ತೂರ್ ರಾಣಿ ಚೆನ್ನಮ್ಮ ಗರ್ಲ್ಸ್ ಹೈಸ್ಕೂಲ್ ನ ಸೆರಗಿನಲ್ಲಿ “ಹಸಿರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ” ಬರುವಲ್ಲಿ, ಅಂದರೆ ಉಳುಮೆ ಮಾಡಿದ ಎರೆಮಣ್ಣಿನ ಮಗ್ಗುಲಲ್ಲೇ ತನ್ನ ಲ್ಯಾಬ್ ಗಳ ಸಮೇತ ಇತ್ತು.
ನಿರ್ಮಾಣ ಹಂತದಲ್ಲಿದ್ದ ಇನ್ನೊಂದು ಎರಡಂತಸ್ತಿನ ಕಾಂಕ್ರೀಟ್ ಕಟ್ಟಡದ ವಿಶಾಲವಾದ ಕ್ಲಾಸ್ ರೂಂ ಗಳಲ್ಲಿ ಪಿಯುಸಿ ಕಲೆ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗಾಗಿ, ಹಿಸ್ಟರಿ, ಪೊಲಿಟಿಕಲ್ ಸೈನ್ಸ್, ಇಕನಾಮಿಕ್ಸ್ ಕ್ಲಾಸುಗಳು ನಡೆದರೆ ಸೋಶಿಯಾಲಜಿ ಕ್ಲಾಸ್ ಗೆ ನಾವು ಈ ಒಟ್ಟು ಸಂಕೀರ್ಣದಿಂದ ಹೊರಗಿದ್ದ, ವಾಸ್ತವವಾಗಿ ವಿಜಯ ಸೋಶಿಯಲ್ ಕ್ಲಬ್ ನ ಬ್ಯಾಡ್ಮಿಂಟನ್ ಕೋರ್ಟಾಗಿದ್ದ, ದೊಡ್ಡದೊಂದು ಹಾಲ್ ಗೆ ಶಿಫ್ಟ್ ಆಗುತ್ತಿದ್ದೆವು. ಕಾತರಕಿ ಎಂಬ ವಿದ್ಯಾರ್ಥಿ ತಂದಿರುತ್ತಿದ್ದ ಚಿನ್ನಿ ದಾಂಡು ಆಡುತ್ತಿದ್ದ ಒಂದು ಗುಂಪು ಮತ್ತು ಹಲವಾರು ಇತರ ಆಟ-ಹುಡುಗಾಟಗಳಲ್ಲಿ ನಿರತರಾಗಿರುತ್ತಿದ್ದ ಗುಂಪುಗಳು ದೂರದಲ್ಲಿ ಲೆಕ್ಚರರ್ ಬರುತ್ತಿರುವದು ಕಣ್ಣಿಗೆ ಬೀಳುತ್ತಲೇ ಆಟ ಬರಖಾಸ್ತುಗೊಳಿಸಿ “ಮೆಟಗುಡ್ ಸರ್ ಬಂದ್ರ್ ನಡೀರೆಲೇ” ಎನ್ನುತ್ತ ಚಿನ್ನಿ ದಾಂಡು ಮತ್ತಿತರ ಕ್ರೀಡಾ ಸಾಮಗ್ರಿಗಳ ಸಮೇತ ಕ್ಲಾಸಿನೊಳಗೆ ಸೇರುತ್ತಿದ್ದವು. ಆ ದಿನಗಳಲ್ಲಿ ನನಗೆ ಏಣಗಿ ನಟರಾಜನ ಜೊತೆ ಸ್ವಲ್ಪ ಹೆಚ್ಚಿನ ಒಡನಾಟವಿತ್ತು. ಅವನು ಕಾಮರ್ಸ್ ತೆಗೆದುಕೊಂಡಿದ್ದರೂ ಕೆಲವು ಐಚ್ಛಿಕ ವಿಷಯಗಳ ಕ್ಲಾಸುಗಳಲ್ಲಿ ನನಗೆ ಸಹಪಾಠಿಯಾಗಿದ್ದ. ಅವನನ್ನು ಬಿಟ್ಟರೆ ರಂಗನಟಿ ಮತ್ತು ಕಿರುತೆರೆ ಕಲಾವಿದೆ ರೇಣುಕಾ ಮುರಗೋಡ್ ಅವರ ಮಗ ಅಶೋಕ ನನ್ನ ಇನ್ನೊಬ್ಬ ಗೆಳೆಯನಾಗಿದ್ದ.
೧೯೭೫ರಲ್ಲ್ಲಿನನ್ನ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದು ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದೆ. ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಈ ಮೂರರಲ್ಲಿ ಒಂದನ್ನು ಪ್ರಧಾನ ವಿಷಯವಾಗಿ ಆಯ್ದುಕೊಂಡು ನಾನು ನನ್ನ ಪದವಿ ವಿದ್ಯಾಭ್ಯಾಸವನ್ನು ಅಲ್ಲೇ ಮುಂದುವರೆಸಬಹುದಾಗಿತ್ತು. ಆದರೆ ನನಗೆ ಇತಿಹಾಸವನ್ನು ಪ್ರಧಾನ ವಿಷಯವನ್ನಾಗಿ ಓದಬೇಕೆಂಬ ಆಶೆ ಗಟ್ಟಿಯಾಗತೊಡಗಿತು. ಯಾವುದೋ ತಪ್ಪು ತಿಳುವಳಿಕೆಯಿಂದ ನನ್ನನ್ನು ನನ್ನ ತಂದೆಯ ಸಮ್ಮುಖದಲ್ಲಿ ಟೀಕಿಸಿದ್ದ ಪ್ರಿನ್ಸಿಪಾಲರ ವರ್ತನೆಯ ಕುರಿತೂ ನನ್ನ ಮನಸಿನಲ್ಲಿ ಒಂದು ಕಹಿ ಉಳಿದುಕೊಂಡಿತ್ತು. ಹಲವು ತೊಂದರೆ ತಾಪತ್ರಯಗಳ ನಡುವೆ ನಾನು ಧಾರವಾಡದ ಕರ್ನಾಟಕ ಕಾಲೇಜಿಗೆ ಪ್ರವೇಶ ಪಡೆದು ಬೈಲಹೊಂಗಲದಿಂದ ಹೊರಬಿದ್ದೆ. ಧಾರವಾಡ ನನಗೆ ಸಂಪೂರ್ಣ ಅಪರಿಚಿತ ಸ್ಥಳವೇನೂ ಆಗಿರಲಿಲ್ಲ. ಅಲ್ಲಿಯ ಕೃಷಿ ಕಾಲೇಜಿನಲ್ಲಿ ನನ್ನಣ್ಣ ಎಂ.ಎಸ್.ಸಿ ವರೆಗೆ ಓದುತ್ತಿದ್ದಾಗ ನಾನು ಅಲ್ಲಿಗೆ ಒಮ್ಮೆ ಹೋಗಿದ್ದೆ. ನನ್ನ ಸೋದರಮಾವ ನನ್ನ ತಾಯಿಯ ತವರೂರಾದ ಸತ್ತಿಗೇರಿಯಲ್ಲಿದ್ದ ಆಸ್ತಿ-ಪಾಸ್ತಿ ಮಾರಿಕೊಂಡು ಧಾರವಾಡಕ್ಕೆ ಸ್ಥಳಾಂತರಗೊಂಡಾಗ ಹಾವೇರಿಪ್ಯಾಟಿ ಎಂದು ಕರೆಯಲ್ಪಡುವ ಈಗ ಮುರುಘಾಮಠ ಇರುವ ಪ್ರದೇಶಕ್ಕೆ ಆಗಾಗ ಹೋಗಿ ಬಂದು ಮಾಡಿದ್ದೆ.
ಕರ್ನಾಟಕ ಕಾಲೇಜಿಗೆ ಪ್ರವೇಶ ಪಡೆದಾದ ಮೇಲೆ ಸಾಧನಕೇರಿಯ ಮೊದಲನೆಯ ಕ್ರಾಸಿನಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಇದ್ದ ನನ್ನ ಒಬ್ಬ ಅಕ್ಕನ ಮನೆಯಲ್ಲಿ ವಾಸಿಸತೊಡಗಿದೆ. ಪಿಯುಸಿ ಯ
ನಮ್ಮ ಪಠ್ಯಪುಸ್ತಕದಲ್ಲಿದ್ದ “ಕರಡಿ ಕುಣಿತ” ಎಂಬ ಸರಳ ಕವಿತೆ, ಮತ್ತು ಚಲನಚಿತ್ರಗೀತೆಗಳಾಗಿ ನನ್ನ ಕಿವಿಯ ಮೇಲೆ ಬೀಳುತಿದ್ದ “ಮೂಡಣ ಮನೆಯಾ ಮುತ್ತಿನ ನೀರಿನ ಎರಕವಾ ಹೊಯ್ದಾ” ಎಂದು ನಿಸರ್ಗದ ಚಿತ್ರ ಕಟ್ಟಿಕೊಡುವ ಅಪೂರ್ವ ಚೆಲುವಿನ ಕವಿತೆ ಮತ್ತು “ಉತ್ತರಧೃವದಿಂ ದಕ್ಷಿಣಧೃವಕೂ ಚುಂಬಕ ಗಾಳಿಯು ಬೀಸುತಿದೆ” ಎಂಬ ಸಂಕೀರ್ಣ ಕವಿತೆಗಳ ಕರ್ತೃ ದ.ರಾ.ಬೇಂದ್ರೆಯವರು ಬದುಕಿದ್ದ ಪರಿಸರವದು.
ನಾವು ಸಾಧನಕೇರಿಯ ಬಸ್ ಸ್ಟಾಪ್ ನಲ್ಲಿ ನಿಂತಾಗ ಅಥವಾ ಕಾಲೇಜಿನಿಂದ ಮರಳಿ ಬರುವಾಗ ಮಗನ ಸ್ಕೂಟರ್ ನ ಪಿಲಿಯನ್ ಮೇಲೆ ಧೋತರ ಉಟ್ಟು ಕೋಟು ತೊಟ್ಟು ಮುದುರಿ ಕುಳಿತು ಮರಾಠಿಯಲ್ಲಿ ಮಾತನಾಡುತ್ತ ಹೋಗುತ್ತಿದ್ದ ವಯೋವೃದ್ಧ ಬೇಂದ್ರೆ ನಮಗೆ ದಿನನಿತ್ಯದ ನೋಟ. ಒಮ್ಮೊಮ್ಮೆ ಸಂಜೆ ನೇರ ನಿಲುವಿನ ಗಂಭೀರವದನದ ಶಂಬಾ ಜೋಶಿಯವರು ನಿಧಾನಕ್ಕೆ ನಡೆದು ಹೋಗುತ್ತಿದ್ದುದೂ ಕಾಣುತ್ತಿತ್ತು. ಹಾಗೇ ಜರ್ಮನ್ ದವಾಖಾನೆ ಎಂದು ಪ್ರಸಿದ್ಧವಾಗಿರುವ ಹಾಸ್ಪಿಟಲ್ ದಿಕ್ಕಿನಲ್ಲಿ ಹೊರಟರೆ ಬೆಂಗಳೂರ್ ಹೊಟೇಲ್ ಎಂಬ ಬೋರ್ಡ್ ತಗುಲಿಸಿಕೊಂಡಿದ್ದ ಒಂದು ಚಹದಂಗಡಿಯಾಚೆ ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು ಕೆಲಕಾಲ ನಡೆಸಿ, ಅವರ ಲೌಕಿಕ ವೈಫಲ್ಯದ ಪಳೆಯುಳಿಕೆಯಾಗಿ ನಿಂತಿದ್ದ ಒಂದು ಮುದ್ರಣಾಲಯವಿತ್ತು, ಮತ್ತೂ ಮೇಲೇರಿ ಹೋಗಿ ಸಬರ್ಬನ್ ಪೋಲಿಸ್ ಸ್ಟೇಶನ್ ನಿಂದ ಎಡಕ್ಕೆ ತಿರುಗಿದರೆ ಹುಚ್ಚರಾಸ್ಪತ್ರೆಯ ಕಂಪೌಂಡ್ ಗೋಡೆಯ ಎದುರು ಕವಿ-ನಾಟಕಕಾರ ಚಂದ್ರಶೇಖರ ಪಾಟೀಲರು (ಚಂಪಾ)ವಾಸವಾಗಿದ್ದ ಮನೆ ಇತ್ತು.
ಕಾಲೇಜಿನಲ್ಲಿ ನಮಗೆ ಐಚ್ಛಿಕ ಅಥವಾ ಬೇಸಿಕ್ ಕನ್ನಡ ಹಾಗೂ ಇಂಗ್ಲಿಷ್ ಭಾಷೆ ಕಲಿಸುವವರಲ್ಲೂ ಬುದ್ದಣ್ಣ ಹಿಂಗಮಿರೆ, ವೀಣಾ ಶಾಂತೇಶ್ವರ್ ಹೀಗೆ ಕೆಲವರು ಕವಿ-ಸಾಹಿತಿಗಳಿದ್ದರು. ಹಾಗೇ ಹಿಂದಿ ಭಾಷೆಯ ಅಧ್ಯಾಪಕರಾದ ಸಿದ್ದಲಿಂಗ ಪಟ್ಟಣಶೆಟ್ಟಿ ಇದ್ದರು. ಪ್ರಾರಂಭಿಕವಾಗಿ ನಮ್ಮಲ್ಲಿ ಸುಪ್ತವಾಗಿದ್ದ ಸಾಹಿತ್ಯಾಸಕ್ತಿಗೆ ನೀರೆರೆದವರು ಬುದ್ದಣ್ಣ ಹಿಂಗಮಿರೆಯವರು ಮತ್ತು ಗುರುಲಿಂಗ ಕಾಪಸೆಯವರು. ವಿ.ಕೆ. ಗೋಕಾಕರು ಪ್ರಿನ್ಸಿಪಾಲರಾಗಿದ್ದಾಗ ಸಕ್ರಿಯವಾಗಿದ್ದು ಆಮೇಲೆ ಸ್ಥಗಿತಗೊಂಡಿದ್ದ ಕಮಲ ಮಂಡಲ ಎಂಬ ವೇದಿಕೆಯೊಂದನ್ನು ಹಿಂಗಮಿರೆಯವರು ಸಜೀವಗೊಳಿಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಕವನ ಸಂಕಲನವೊಂದನ್ನು ಪ್ರಕಟಿಸಿದರು. ಆಮೇಲೆ ರಮಜಾನ್ ದರ್ಗಾ, ರುದ್ರಪ್ಪ ಕಾಯಿ, ಸನತ್ ಕುಮಾರ್ ಬೆಳಗಲಿ, ಮಹಾಬಲೇಶ್ವರ ಕಾಟ್ರಹಳ್ಳಿ ಮೊದಲಾದ ಗೆಳೆಯರ ಒಡನಾಟದಲ್ಲಿ ಸಾಹಿತ್ಯಾಭಿರುಚಿ ನನ್ನಲ್ಲಿ ವೃದ್ಧಿಸುತ್ತ ಹೋಯಿತು. ಸಾಧನಕೇರಿಯ ಒಂದು ಪಾರ್ಶ್ವದಲ್ಲಿ ಒಂದನೆಯ ಕ್ರಾಸಿನಲ್ಲಿ ಇದ್ದ ನಾವು ನಮ್ಮ ಭಾವನಿಗೆ ಪೊಲಿಸ್ ಕ್ವಾರ್ಟರ್ಸ್ ನಲ್ಲಿ ಮನೆ ಸಿಕ್ಕ ಮೇಲೆ ಅದರ ಇನ್ನೊಂದು ಪಾರ್ಶ್ವದಲ್ಲಿದ್ದ ಪೋಲಿಸ್ ಹೆಡ್ ಕ್ವಾರ್ಟರ್ಸ್ ಗೆ ಶಿಫ್ಟ್ ಆದೆವು. ನಾನು ಕಾಲೇಜಿನಿಂದ ಬರುವ ಹೋಗುವ ಮಾರ್ಗ ಬದಲಾಗಿ ಮಾರ್ಗಮಧ್ಯೆ ಚಂದ್ರಶೇಖರ ಪಾಟೀಲರ ಮನೆಗೆ ಹೋಗುವದು, ಚರ್ಚಿಸುವದು, ಪುಸ್ತಕ ಇತ್ಯಾದಿ ಎರವಲು ಪಡೆಯುವದು ಇತ್ಯಾದಿ ಪ್ರಾರಂಭವಾಯಿತು. ಅವರ ಸಂಪಾದಕತ್ವದ “ಸಂಕ್ರಮಣ” ದ ಪುಟಗಳಲ್ಲಿ ನನ್ನ ಬರಹಗಳು ಪ್ರಕಟಗೊಳ್ಳತೊಡಗಿದವು.
ಅವು ಭಾರತದ ರಾಜಕಾರಣದಲ್ಲಿ ಜನಪರ ಚಳುವಳಿಗಳು ವ್ಯಾಪಕವಾಗಿ ಹಬ್ಬುತ್ತಿದ್ದ ದಿನಗಳು. ಇಂದಿರಾ ಗಾಂಧಿ ಹೇರಿದ್ದ ತುರ್ತು ಸ್ಥಿತಿಯ ವಿರುದ್ಧ ವಿವಿಧ ನೆಲೆಯಲ್ಲಿ ಹೋರಾಟಗಳು ನಡೆಯುತ್ತಿದ್ದವು. ಕರ್ನಾಟಕದಲ್ಲಿ ವಿದ್ಯಾರ್ಥಿ ಯುವಜನರ ಮಧ್ಯೆ ಮತ್ತು ಸಾಂಸ್ಕೃತಿಕ ವಲಯದಲ್ಲಿ ಕಮ್ಯುನಿಸ್ಟ್ ಮತ್ತು ಸೋಷಲಿಸ್ಟ್ ಚಳುವಳಿ ಹರಹು ಪಡೆಯುತ್ತಿದ್ದವು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಚಳುವಳಿ ಪ್ರಾರಂಭವಾಗಿ ಬೆಂಗಳೂರಿನ ವರೆಗೆ ನಡೆದ ಪಾದಯಾತ್ರೆಗೆ ಅಪೂರ್ವ ಜನಬೆಂಬಲ ವ್ಯಕ್ತವಾಗಿತ್ತು. ಕ್ಯಾಪಿಟೇಶನ್ ಕುಳಗಳ ಲಾಭದಾಶೆಯಿಂದ ಹೊಸಹೊಸದಾಗಿ ತಲೆ ಎತ್ತುತ್ತಿದ್ದ ಮೆಡಿಕಲ್ ಕಾಲೇಜುಗಳ ವಿರುದ್ಧ ವೈದ್ಯ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದರು. ಇಡೀ ವಾತಾವರಣದಲ್ಲಿ ಇದ್ದ ಆ ಹೋರಾಟದ ಕಾವಿನ ದಿನಗಳಲ್ಲಿ ಬಂಡಾಯ ಸಾಹಿತ್ಯ ಸಂಘಟಣೆ ಮತ್ತು ಸಮುದಾಯ ತಲೆ ಎತ್ತಿದವು. ಧಾರವಾಡ ಈ ಎಲ್ಲ ಬೆಳವಣಿಗೆಗಳ ಮುಖ್ಯ ಕೇಂದ್ರಗಳಲ್ಲೊಂದಾಗಿತ್ತು. ಕರ್ನಾಟಕದ ಎರಡು ದಿಕ್ಕುಗಳಿಂದ ಹೊರಟ ಸಮುದಾಯ ಸಾಂಸ್ಕೃತಿಕ ಜಾಥಾಗಳು ಧಾರವಾಡದಲ್ಲಿ ಸಂಗಮಿಸಿದವು.ಬೆಂಗಳೂರಿನ ಎಡಪಂಥೀಯ ಕವಿಕಲಾವಿದರು, ಚಿಂತಕರು ದೊಡ್ಡ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ಸಮಾನಮನಸ್ಕ ಜನರೊಂದಿಗೆ ಗುರುತಿಸಿಕೊಂಡು ಭಾವನಾತ್ಮಕ ಬೆಸುಗೆ ಉಂಟಾದ ಕಾಲ ಅದು.
ಪ್ರಗತಿಪರ ಚಿಂತನೆಗೆ ಮನಸನ್ನು ತೆರೆದುಕೊಂಡ ಕರ್ನಾಟಕದ ವಿವಿಧ ಭಾಗಗಳ ಯುವಕರು, ಹಿರಿಯರು ಧಾರವಾಡಕ್ಕೆ ಬರತೊಡಗಿದರು. ಜನಾರ್ದನ (ಜೆನ್ನಿ), ಡಿ.ಆರ್.ನಾಗರಾಜ್, ಅಪ್ಪಗೆರೆ ತಿಮ್ಮರಾಜು, ಬರಗೂರು ರಾಮಚಂದ್ರಪ್ಪ, ಕಾಳೇಗೌಡ ನಾಗವಾರ, ಎಲ್. ಹನುಮಂತಯ್ಯ, ಸಿದ್ದಲಿಂಗಯ್ಯ, ಡಾ.ಜಿ.ರಾಮಕೃಷ್ಣ, ನರಸಿಂಹನ್, ಜಿ.ಎನ್.ಮೋಹನ್, ಕುಂ.ವೀರಭದ್ರಪ್ಪ, ರಾಜಶೇಖರ್ ನೀರಮಾನ್ವಿ…ಇವರನ್ನೆಲ್ಲ ನಾನು ಮೊದಲು ನೋಡಿದ್ದು, ಮಾತಾಡಿದ್ದು ಧಾರವಾಡದಲ್ಲಿಯೇ..ಹಾಗೆಯೇ ನಾವೆಲ್ಲ ದಾವಣಗೆರೆ, ರಾಣೆಬೆನ್ನೂರು, ಬಳ್ಳಾರಿ ಮುಂತಾದೆಡೆ ಸಮಾವೇಶಗೊಳ್ಳುತ್ತಿದ್ದ ಸಮ್ಮೇಳನಗಳಲ್ಲಿ ಸೇರುವದು, ಚರ್ಚಿಸುವದು ಪ್ರಾರಂಭವಾಯಿತು. ಇದು ನನ್ನ ಹೊರಜಗತ್ತಾದರೆ ೧೯೭೮ರ ಸುಮಾರಿಗೆ ನಾನೀಗ ಹೇಳಿದ ಪ್ರಗತಿಪರ ಚಿಂತನೆ,ಹೋರಾಟಗಳ ಲೋಕಕ್ಕೆ ಎಳ್ಳಷ್ಟೂ ಸಂಬಂಧ ಪಡದಂತಿದ್ದ ರವಿ ಬೆಳಗೆರೆ ವಿಶ್ವವಿದ್ಯಾಲಯದ ಒಳಗಿನ ಜಗತ್ತಿನಲ್ಲಿ ನನ್ನ ಜೊತೆಗಾರನಾದ.
ನನ್ನ ಮನಸನ್ನು ಧಾರವಾಡದ ನೆಲ,ನೀರು,ಗಾಳಿ, ಸಂಸ್ಕೃತಿ ಇನ್ನಿಲ್ಲದಂತೆ ಆವರಿಸಿಕೊಳ್ಳತೊಡಗಿತ್ತು. ರವಿ ಬೆಳಗೆರೆ ಒಮ್ಮೆ ತನ್ನ ಪತ್ರಿಕೆಯಲ್ಲಿ ಮೂವತ್ನಾಲ್ಕು ವರ್ಷಗಳ ಹಿಂದಿನ ಧಾರವಾಡದ ತನ್ನ-ನನ್ನ ದಿನಗಳ ಕುರಿತು ಬರೆಯುತ್ತ “ಧಾರವಾಡದಲ್ಲಿ ಅವನೊಂದಿಗೆ ಕಳೆದ ದಿನಗಳನ್ನು ನಾನು ಯಾವತ್ತಿಗೂ ಮರೆಯಲಾರೆ. ಆ ಊರಿನ ಗುಡ್ಡಗಳಲ್ಲಿ, ಇಳಿಜಾರುಗಳಲ್ಲಿ, ಸಪ್ತಾಪುರದ ನೀರವ ಬೀದಿಗಳಲ್ಲಿ, ಟೈವಾಕ್ ದ ಸುತ್ತಲಿನ ಮೌನ ಕಣಿವೆಗಳಲ್ಲಿ ನಾವು ಹುಚ್ಚರಂತೆ ಗಂಟೆಗಟ್ಟಲೆ, ದಿನಗಟ್ಟಲೆ ಅಲೆಯುತ್ತಿದ್ದ ಕಾಲವಿತ್ತು. ಧಾರವಾಡವನ್ನು ನನಗಿಂತ ತೀವ್ರವಾಗಿ ಹಚ್ಚಿಕೊಂಡವನು ಅಶೋಕ. ಇವತ್ತಿಗೂ ಅದನ್ನು ಹೆಣ್ಣನ್ನು ನೋಡಿದಷ್ಟೇ ಸಂಭ್ರಮದಿಂದ ಕುತೂಹಲದಿಂದ ನೋಡುತ್ತಾನೆ” ಎಂದಿದ್ದ. ಹೆಣ್ಣನ್ನು ನೋಡಿದಷ್ಟು ಸಂಭ್ರಮ-ಕುತೂಹಲದಿಂದ ನೋಡುತ್ತೇನೆ ಎನ್ನುವದು ಎಷ್ಟು ನಿಜವೋ ಗೊತ್ತಿಲ್ಲ ಆದರೆ ಧಾರವಾಡವನ್ನು ತೀವ್ರವಾಗಿ ಹಚ್ಚಿಕೊಂಡಿದ್ದೇನೆನ್ನುವದು ಮಾತ್ರ ನಿಜ.
ಬೇರೆ ಬೇರೆ ಸಂದರ್ಭಗಳಲ್ಲಿ ನಾನೀಗಾಗಲೇ ಹೇಳಿದ ಚಂಪಾ, ಹಿಂಗಮಿರೆ, ಕಾಪಸೆ ಅಲ್ಲದೇ ಸಿದ್ದಲಿಂಗ ಪಟ್ಟಣಶೆಟ್ಟಿ, ಚೆನ್ನವೀರ ಕಣವಿ, ಜಿ.ಎಸ್.ಆಮೂರ್, ಮಾಲತಿ ಪಟ್ಟಣಶೆಟ್ಟಿ, ಸೋಮಶೇಖರ್ ಇಮ್ರಾಪೂರ್, ಗಿರಡ್ಡಿ ಗೋವಿಂದರಾಜ್, ಶಂಕರ್ ಮೊಕಾಸಿ ಪುಣೆಕರ್ ಹೀಗೆ ಸಾಹಿತ್ಯಲೋಕದ ಹಲವರ ಜೊತೆ ಮಾತನಾಡುವ, ಚರ್ಚಿಸುವ ಅವಕಾಶಗಳು ಪ್ರಾಪ್ತವಾಗುತ್ತ ಹೋದವು. ಹಾಗೆಂದು ನಾನೆಂದೂ ನನ್ನ ಕವಿತೆಗಳನ್ನು ಹಿಡಿದುಕೊಂಡು ಹೋಗಿ ಯಾವ ಹಿರಿಯರ ಮಾರ್ಗದರ್ಶನವನ್ನೋ ಅಭಿಪ್ರಾಯವನ್ನೋ ಕೇಳುತ್ತಿರಲಿಲ್ಲ. ಅದೇನಿದ್ದರೂ ಗೆಳೆಯರೊಂದಿಗೆ.
ಹುಬ್ಬಳ್ಳಿಯಲ್ಲಿದ್ದ ಕೆಲವು ಜನಪರ ಹೋರಾಟಗಳ ಗೆಳೆಯರ ಜೊತೆ, ಮುಖ್ಯವಾಗಿ ಸನತ್ ಕುಮಾರ ಬೆಳಗಲಿ ಜೊತೆ ಬೆರೆಯಲು ನಾನು ಅಲ್ಲಿಗೂ ಹೆಚ್ಚೂ ಕಡಿಮೆ ನಿಯಮಿತವಾಗಿಯೇ ಹೋಗುತ್ತಿದ್ದೆ. ಭೌಗೋಲಿಕವಾಗಿ ಧಾರವಾಡದಿಂದ ಬರೀ ಇಪ್ಪತ್ಮೂರು ಕಿಲೋಮೀಟರಿನಷ್ಟು ದೂರವಿದ್ದರೂ ಹುಬ್ಬಳ್ಳಿ ಇನ್ನುಳಿದಂತೆ ಧಾರವಾಡಕ್ಕಿಂತ ಭಿನ್ನ. ಅಲ್ಲಿಯೂ ಸಾಹಿತ್ಯ,ಸಂಗೀತ,ಚಿತ್ರಕಲೆ,ನಾಟಕ ಈ ಚಟುವಟಿಕೆಗಳಿವೆ. ಹಾಗೆಯೇ ಧಾರವಾಡದಲ್ಲಿ ಒಂದು ಮಟ್ಟದಲ್ಲಿ ವ್ಯಾಪಾರ,ಉದ್ದಿಮೆ,ವಹಿವಾಟುಗಳಿವೆ. ಆದರೆ ಒಟ್ಟಾರೆಯಾಗಿ ಪಿ. ಲಂಕೇಶ್ ಎಲ್ಲೋ ಒಮ್ಮೆ ಹೇಳಿದ್ದರೆಂದು ನಾನು ಕೇಳಿದಂತೆ “ಧಾರವಾಡ ಆರ್ಟ್ಸ್, ಹುಬ್ಬಳ್ಳಿ ಕಾಮರ್ಸ್”…ಯಾವ್ಯಾವುದೋ ರಾಜಕೀಯ ಕಾರಣಗಳಿಗಾಗಿ ಹುಬ್ಬಳ್ಳಿ ಕೋಮುಸಂಘರ್ಷದ ದಳ್ಳುರಿಯಲ್ಲಿ ಬೇಯುತ್ತ ಪ್ರತಿಬಂಧಕಾಜ್ಞೆ, ಕರ್ಫ್ಯೂ ಎಂಬುದು ಆ ಊರ ಕರ್ಮ ಎಂಬಂತೆ ಇದ್ದ ದಶಕದುದ್ದಕ್ಕೂ ಧಾರವಾಡ ಮಾತ್ರ ತನ್ನ ಪಾಡಿಗೆ ತಾನು ಎಂದಿನಂತೆ ನಿರುಮ್ಮಳವಾಗಿ ಕಾವ್ಯವಾಚನ, ಸಾಹಿತ್ಯವಿಮರ್ಶೆ, ಪುಸ್ತಕ ಬಿಡುಗಡೆ, ಶಾಸ್ತ್ರೀಯ ಗಾಯನ, ಅಧ್ಯಯನ, ಅಧ್ಯಾಪನದಲ್ಲಿ ತೊಡಗಿಕೊಂಡು ಹೋಗುತ್ತಿರುತ್ತಿತ್ತು. ಇಂದಿಗೂ ಅಷ್ಟೇ.
ನಾನು ಮೊದಲ ಸಲ ಧಾರವಾಡಕ್ಕೆ ಬಂದಾಗ ಧಾರವಾಡದಲ್ಲಿ ಜಟಕಾ ಬಂಡಿಗಳಿದ್ದವು. ಈಗ ಸಿಟಿ ಪೋಲಿಸ್ ಠಾಣೆ ಮತ್ತು ಅದಕ್ಕೆದುರಾಗಿರುವ ಮರುಧರ ಪ್ಯಾವೂ ಎಂಬ ಅರವಟ್ಟಿಗೆ ಇರುವ ಸ್ಥಳದಲ್ಲಿ ನಿಂತಿರುತ್ತಿದ್ದವು. ಆಮೇಲೆ ಅಟೋರಿಕ್ಷ ಬಂದು ಅವು ಕಣ್ಮರೆಯಾದವು. ನಾನು ಮೊದಲು ಮೊದಲು ಧಾರವಾಡಕ್ಕೆ ಬಂದಾಗ ಮಳೆಗಾಲವೆಂದರೆ ನಾಲ್ಕು ತಿಂಗಳ ಸುದೀರ್ಘ ಸೀಜನ್. ತಿಂಗಳುಗಟ್ಟಲೇ ದಿನಕರನ ದರ್ಶನವಿಲ್ಲದ್ದನ್ನು ನಾನು ನೋಡಿದ್ದೇನೆ. ಮಾರ್ಚನಲ್ಲೇ ಅಡಮಳಿ ಎಂದು ಕರೆಯುವ ಮುಂಗಾರು ಪೂರ್ವದ ಮಳೆಗಳು ಎಷ್ಟು ನಿಯಮಿತವಾಗಿರುತ್ತಿದ್ದವೆಂದರೆ ನಾವು ಪರೀಕ್ಷೆಗೆ ಹೋಗುವಾಗ ಮಡುಗಟ್ಟಿ ನಿಂತ ನೀರು ರೊಜ್ಜು ರಾಡಿ ತಪ್ಪಿಸಲು ಕಾಲುಗಳನ್ನು ಹಿಗ್ಗಲಿಸಿ ಹೆಜ್ಜೆಗಳನ್ನು ಎತ್ತಿಟ್ತು ಸಾಗುತ್ತಿದ್ದೆವು. ಎಂಥ ಬಿಸಿಲಿದೆ ಎಂದರೂ ಅಷ್ಟಿಷ್ಟು ಗಾಳಿ ಮೈಗೆ ತೀಡುತ್ತಲೇ ಇರುತ್ತಿತ್ತು. ಜನಸಂದಣಿ ಇಷ್ಟಿರಲಿಲ್ಲ. ಸವದತ್ತಿ, ಹುಬ್ಬಳ್ಳಿ ಮತ್ತು ಬೆಳಗಾವಿ ರಸ್ತೆಯ ಶೇಂಗಾ-ಹತ್ತಿ-ಜೋಳದ ಹೊಲಗಳು, ಕಲಘಟಗಿ, ಗೋವಾ, ಹಳಿಯಾಳ ರಸ್ತೆಯ ಬತ್ತದ ಗದ್ದೆಗಳು ಆ ನಗರ ಈ ನಗರ ಎಂಬ ಹೆಸರಿನ ಜನವಸತಿ ಬಡಾವಣೆಗಳಾಗಿರಲಿಲ್ಲ. ಸಣ್ಣ ಪುಟ್ಟ ಕೆರೆಗಳು ಇನ್ನೂ ಇದ್ದವು. ವಾಹನಗಳ ದಟ್ಟಣೆ ಈಗಿನಷ್ಟು ಇರಲಿಲ್ಲ. ಜನರಲ್ಲಿ ಒರಟುತನ ಕಡಿಮೆ ಇತ್ತು. ಬಿಸಿಲಿನ ತಾಪ ತೀರ ಇಷ್ಟಿರಲಿಲ್ಲ….
ಈಗ ಊರು ಬೆಳೆದಿದೆ. ಟೆಲ್ಕೊ, ಟಾಟಾ ಮೋಟರ್ರ್ಸ್, ಟಾಟಾ ಮಾರ್ಕೋಪೋಲೋ, ಪೆಪ್ಸಿಕೋಲಾ ಮೊದಲಾದ ದೊಡ್ಡ ಔದ್ಯಮಿಕ ಘಟಕಗಳು ಬಂದಿವೆ. ಕರ್ನಾಟಕ ವಿಶ್ವವಿದ್ಯಾಲಯವಲ್ಲದೇ ಕೃಷಿ ಕಾಲೇಜು ಹತ್ತಾರು ವರ್ಷಗಳ ಹಿಂದೆಯೇ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ. ಹೊಸದಾಗಿ ಕಾನೂನು ವಿಶ್ವವಿದ್ಯಾಲಯ ಬಂದಿದೆ. ಹೈಕೋರ್ಟ್ ಬೆಂಚ್ ಸ್ಥಾಪನೆಯಾಗಿದೆ. ಗುಜರಾತ್, ರಾಜಸ್ತಾನ್, ಉತ್ತರಪ್ರದೇಶ್ ಮೊದಲಾದೆಡೆಯಿಂದ ನೂರಾರು ವರ್ಷ ಹಿಂದೆಯೇ ಬಂದು ಹಾಲಿನಲ್ಲಿ ಸಕ್ಕರೆ ಬೆರೆತಂತೆ ಧಾರವಾಡದವರಾದ ಶರ್ಮಾ, ಮೆಹ್ತಾ, ಮಿಶ್ರಾ, ಠಾಕೂರ್, ಬಾಫಣಾ ಮೊದಲಾದವರಂತೂ ಸರಿಯೇ, ಹೊರಜಿಲ್ಲೆಗಳಿಂದ ಧಾರವಾಡಕ್ಕೆ ಬಂದು ಇಲ್ಲೇ ನೆಲೆಸಿದವರಿಂದಾಗಿ ಊರು ಎಲ್ಲ ದಿಕ್ಕುಗಳಲ್ಲಿ ವಿಸ್ತರಿಸುತ್ತಿದೆ. ಹೊಸ ಹೊಸ ಕಾಲೇಜುಗಳು ಗಮನಾರ್ಹ ಸಂಖ್ಯೆಯಲ್ಲಿ ತಲೆ ಎತ್ತಿವೆ.
ಆದರೆ ಧಾರವಾಡ ಈಗಲೂ ಆರ್ಟ್ಸ್! ಮೊದಲು ಧಾರವಾಡದಲ್ಲಿ ಎಲ್ಲೇ ನಿಂತು ಕಲ್ಲೆಸೆದರೂ ಅದು ಹೋಗಿ ಒಬ್ಬ ಕವಿಯ ತಲೆ ಮೇಲೆ ಬೀಳುತ್ತದೆ ಎಂಬ ಮಾತಿತ್ತು. ಈಗ ಅದು ಹೋಗಿ ಒಬ್ಬ ಸಂಗೀತಗಾರನ ಅಥವಾ ಒಬ್ಬ ಚಿತ್ರಕಲಾವಿದನ ಅಥವಾ ಒಬ್ಬ ರಂಗಕರ್ಮಿಯ ತಲೆ ಮೇಲೂ ಬಿದ್ದೀತು. ಅಷ್ಟು ಸಂಖ್ಯೆಯಲ್ಲಿ ಸಂಗೀತ ಟ್ರಸ್ಟ್ ಗಳು, ಕಲಾಶಾಲೆಗಳು, ಹವ್ಯಾಸಿ ನಾಟಕ ತಂಡಗಳು ಧಾರವಾಡದಲ್ಲಿ ಸಕ್ರಿಯವಾಗಿವೆ. ಧಾರವಾಡ ನೂರು ವರ್ಷಗಳ ಹಿಂದೆ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಭಾಷಿಕವಾಗಿ ಸಂಪೂರ್ಣ ಮರಾಠಿಮಯವಾಗಿತ್ತು ಎಂಬುದನ್ನು ಇಂದಿನ ಪೀಳಿಗೆ ನಂಬುವದು ಅಸಾಧ್ಯವೆನ್ನಿಸುವಂತೆ ಇಂದು ಅದು ಅಚ್ಚಗನ್ನಡದ, ಜವಾರಿ ಸ್ವಚ್ಛ ಕನ್ನಡದ ಊರಾಗಿದೆ. ಗಿಡಮರಗಳ ಬೀಡಾಗಿದೆ. ಗಾಳಿ-ನೀರು ಶುದ್ಧವಾಗಿಯೇ ಇವೆ. ಮನಸುಗಳು ಮಲಿನಗೊಂಡಿಲ್ಲ.
ಧಾರವಾಡದಿಂದ ಹೊರಗಿದ್ದಾಗ ನಾನು ನೀರಿನಿಂದ ಎತ್ತಿ ಹೊರಗೆಸೆಯಲ್ಪಟ್ಟ ಮೀನಿನಂತೆ ಏಕೆ ಚಡಪಡಿಸುತ್ತೇನೆ ಎಂಬುದಕ್ಕೆ ಬಲವಾದ ಕಾರಣಗಳಿವೆ, ಈಗಲೂ…!
ಅಶೋಕ ಶೆಟ್ಟರ್ ಕಾಲಂ : ನಾ ನೋಡಿ ನಲಿಯುವ ಧಾರವಾಡಾ…
ನಿಮಗೆ ಇವೂ ಇಷ್ಟವಾಗಬಹುದು…




ಬಡ್ಡಿಗಾಗಿ ದುಡ್ ಕೊಟ್ಟು ಬಡ್ಡೀ ಗಳ್ ಸಾವಾ ಮಾರ್ ವಾಡೀ..
ಪ್ರೀತಿಗಾಗಿ ಪ್ರೀತಿ ಕೊಟ್ಟು ಪ್ರೀತೀ ಗಳ್ ಸಾವಾ ಧಾರ್ ವಾಡೀ..
ಬಹುಶಹ ಇಟಗಿ ಈರಣ್ಣನವರ ಶಾಯರೀ ಅಪಭ್ರಂಶ ಇರಬಹುದು ಈ ಸಾಲುಗಳು. ಆದರೆ ಭಾವ ಮಾತ್ರ ಶುದ್ಧ ಚಿನ್ನ. ನೀವು ಬರೆದಿದ್ದು ಓದಿದ್ ಕೂಡ್ಲೆ ಇದೇ ನೆನ್ಪಾತು.
-ಸಿಂಧು
ನನಗೂ ಧಾರವಾಡ ಕಂಡಾಗಲೆಲ್ಲಾ ಇದೇ ಹಾಡು ನೆನಪಾಗುತ್ತದೆ.
ಕೆಲವೊಂದು ಊರುಗಳೆ ಹಾಗೆ, ಉರು ಹೊಡೆದಂತೆ ಗೋಡೆಗೆ ನೆಟ್ಟ ಗೂಟದಂತೆ , ಮರೆಯಲಾರೆವು, ಮರೆಯಲಾಗದವು.
-ಅನಿಲ ತಾಳಿಕೋಟಿ
Excelnt Naration !! I think still it is one of the best town in comparision with others.
Everything is ok. But why did you miss to mention the Line Bazaar Pedha?
Dear sir,
This narrative is most typical of your simple and excellent style. Highly readable and informative. What about the topo-nym – ‘Dharwad’? – Is there any story or anything that gives its name?
With Regards,
H.Krishnamoorthy