ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ : ಕನ್ನಡ ಸಾಹಿತ್ಯ ಸಮ್ಮೇಳನಗಳು, ಒಂದು ಉತ್ಖನನ


 
ಇಂದು ಕೊಡಗಿನ ಮಡಿಕೇರಿಯಲಿ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾರಂಭವಾಗಿದೆ. ಕೇವಲ ಎರಡು ತಿಂಗಳ ಹಿಂದಷ್ಟೇ ಕೊಡಗು ಸುತ್ತಿ ಬಂದಿರುವ ನನಗೆ ಅಲ್ಲಿ ಈ ಸಮ್ಮೇಳನದ ಪ್ರತಿನಿಧಿಗಳು ಅನುಭವಿಸುವ ಸುಖ ಸಂತೋಷದ ಕಲ್ಪನೆ ಇದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಬೆಟ್ಟ ಗುಡ್ಡಗಳ ಓರೆಗಳಲ್ಲಿ ಎಸ್ಟೇಟ್ ಗಳೆಂಬ ಸುವಿಸ್ತಾರ ಕಾಫಿ ಪ್ಲಾಂಟೇಶನ್ ಗಳ ನಡುವೆ ಹಾವಿನಂಥ ಅಂಕು ಡೊಂಕು ರಸ್ತೆಗಳು, ಎತ್ತರೆತ್ತರದ ಮರಗಳು, ಅವುಗಳಿಗೆ ಹಬ್ಬಿದ ಮೆಣಸಿನ ಬಳ್ಳಿಗಳು, ಮಂಜು, ಕುಳಿರ್ಗಾಳಿ, ನಚ್ಚನೆಯ ಬಿಸಿಲು, ದುಬಾರೆ ಕಾಡು, ಕಾವೇರಿಯ ತೊಟ್ಟಿಲಾದ ಬ್ರಹ್ಮಗಿರಿ, ಹಸಿರು ಮಕಮಲ್ ಬಟ್ಟೆ ತೊಟ್ಟಂತಿರುವ ಪುಷ್ಪಗಿರಿ ಶ್ರೇಣಿಯ ಬೆಟ್ಟಗಳ ಮಡಿಲಲ್ಲಿರುವ ಮಾಂದಲಪಟ್ಟಿ , ಕುಶಾಲನಗರದ ಬಳಿ ಬೈಲುಕುಪ್ಪೆಯಲ್ಲಿರುವ ಟಿಬೇಟಿಯನ್ ಕ್ಯಾಂಪ್, ಮಲ್ಲಹಳ್ಳಿ ಮತ್ತು ಅಬ್ಬಿ ಜಲಪಾತ, ಮಡಿಕೇರಿಯ ರಾಜಾಸೀಟ್, ಭಾಗಮಂಡಲದ ಭಗಂಡೇಶ್ವರ ದೇವಾಲಯ ಮತ್ತು ತ್ರಿವೇಣಿ ಸಂಗಮ ಲಾಜಿಂಗುಗಳಂತಲ್ಲದೇ ಸುಮ್ಮನೆಯಾದರೂ ಅಲ್ಲಿರುವ ವರೆಗೆ ನಮ್ಮನೆ ಎನ್ನಿಸುವ ಹೋಂ ಸ್ಟೇಗಳು ಮತ್ತು ಅದೇಕೋ ಇಷ್ಟವಾಗುವ ಕೊಡಗರು…,ಸಮ್ಮೇಳನ ಯಶಸ್ವಿಯಾಗಲಿ. ಸಾವಿರಾರು ಕನ್ನಡಿಗರು ಸೇರಿ ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ಹಿಂದಿನ ಸಾಹಿತ್ಯ ಸಮ್ಮೇಳನಗಳ ಕೆಲ ನೆನಪುಗಳು ಪುಟಿದೇಳುತ್ತಿವೆ.
೧೯೯೦ರ ವರೆಗೆ ಸಾಹಿತ್ಯ ಪರಿಷತ್ತು, ಅದರ ಚಟುವಟಿಕೆ, ಅದರ ನೇತೃತ್ವದಲ್ಲಿ ವಾರ್ಷಿಕವಾಗಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಇವೆಲ್ಲವುಗಳ ಜೊತೆ ನನಗೆ ಸಂಬಂಧವೇ ಇರಲಿಲ್ಲ. ನಾನು ಸಾಹಿತಿಯೋ ಕವಿಯೋ ಎಂದು ಅಷ್ಟಿಷ್ಟು ಪರಿಗಣಿತನಾಗುವ ಮೊದಲೇ ಬಂಡಾಯ ಸಾಹಿತ್ಯ ಸಂಘಟಣೆಯ ಜೊತೆ ಗುರುತಿಸಿಕೊಂಡಾಗಿತ್ತು ಮತ್ತು ಆ ಬಂಡಾಯ ಸಾಹಿತ್ಯ ಸಂಘಟಣೆಯು ಸಾಹಿತ್ಯ ಪರಿಷತ್ತಿಗೆ ಪ್ರತಿಭಟಣೆಯಾಗಿ,ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ನಡೆದ ಸಮ್ಮೇಳನದಲ್ಲಿ ಉದಯವಾದುದಾಗಿತ್ತು. ಹಾಗಂತ ಅದೇನೂ ತನ್ನ ಸದಸ್ಯರನ್ನು ಕಟ್ಟಿಹಾಕಿದ್ದ ಸಂಘಟಣೆಯಾಗಿರಲಿಲ್ಲ. ಸದಸ್ಯತ್ವ ಇತ್ಯಾದಿ ಔಪಚಾರಿಕತೆಯ ಬಿಗಿ ಅಲ್ಲಿರಲಿಲ್ಲ. ನಾನು ಅದರ ಪದಾಧಿಕಾರಿಯೂ ಆಗಿರಲಿಲ್ಲ. ಆದರೆ ತಾತ್ವಿಕವಾಗಿ ಅದರತ್ತ ಒಲವಿಟ್ಟುಕೊಂಡಿದ್ದೆ. ೧೯೭೯ ರ ಮಾರ್ಚ್ ತಿಂಗಳಲ್ಲಿ ಅದರ ಮೊದಲ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಾಗ ನನ್ನ ಎಂ.ಎ. ಪರೀಕ್ಷೆಗಳೂ ಇದ್ದ ಕಾರಣ ಹೋಗಲಾಗಲಿಲ್ಲ. ಆದರೆ ನನ್ನ ಲೇಖನವೊಂದು ಬೆಂಗಳೂರಿಗೆ ಹೋಯಿತು. ಆಗ ಧಾರವಾಡದಲ್ಲಿದ್ದ ಸಮಾಜವಾದಿ ಒಲವಿನ ವೀರಣ್ಣ ದೇಸಾಯಿ ಎಂಬ ಯುವಕ “ಜಯಪ್ರಕಾಶ” ಎಂಬ ವಾರಪತ್ರಿಕೆಯನ್ನು ತರುತ್ತಿದ್ದ. ರಾತ್ರೋರಾತ್ರಿ ನನ್ನಿಂದ ಮತ್ತು ಚಂಪಾ ಅವರಿಂದ ಲೇಖನಗಳನ್ನು ಬರೆಸಿಕೊಂಡು, ತನ್ನದೊಂದು ಸಂಪಾದಕೀಯ ಲೇಖನವನ್ನೂ ರಮಜಾನ್ ದರ್ಗಾನ ಒಂದು ಕವಿತೆಯನ್ನು ಸೇರಿಸಿ ನಾಲ್ಕು ಪುಟದ ಒಂದು ಪುರವಣಿಯನ್ನು ಅವಸರವಸರವಾಗಿ ಹೊಸೆದು ಅದಕ್ಕೆ ಇಪ್ಪತ್ತು ಪೈಸೆ ಬೆಲೆ ಇಟ್ಟು ಅದನ್ನು ಮಾರಾಟ ಮಾಡಲು ಸಾವಿರಾರು ಪ್ರತಿ ಪ್ರಿಂಟ್ ಹೊಡೆಸಿಕೊಂಡು ಬೆಂಗಳೂರಿಗೆ ಹೋದ ದೇಸಾಯಿ ಅಲ್ಲಿಂದ ಮರಳಿದ ಮೇಲೆ ಮುಖಪುಟದಲ್ಲಿ “ಬಂಡಾಯ ಸಾಹಿತ್ಯ ಸಮ್ಮೇಳನ ಹಾಗೂ ಜೈನ ಕಂ ಬ್ರಾಹ್ಮಣ ಸಾಹಿತ್ಯ ಸಮ್ಮಿಲನ” ಎಂಬ ಶೀರ್ಷಿಕೆ ಉಳ್ಳ ನನ್ನ ಮಹಾ ಕಮ್ಯುನಿಸ್ಟ್ ಲೇಖನವಿದ್ದ ಪತ್ರಿಕೆಯ ಪ್ರತಿಗಳು ಹಾಟ್ ಕೇಕ್ ನಂತೆ ಮಾರಾಟವಾದವು ಎಂದ. ಅದರ ಮರುವರ್ಷ ನಾವು ಇಲ್ಲಿ ಧಾರವಾಡದಲ್ಲಿ ಜಿಲ್ಲಾ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನವೊಂದನ್ನು ಸಂಘಟಿಸಿದೆವು. ಡಿ.ಆರ್.ನಾಗರಾಜ್ ಮೊದಲ್ಗೊಂಡು ಬೆಂಗಳೂರು ಮೈಸೂರಿನ ಹಲವು ಪ್ರಮುಖ ಸಾಹಿತಿ ವಿಮರ್ಶಕರು ಬಂದು ಭಾಗವಹಿಸಿದ್ದ ಆ ಸಮ್ಮೇಳನ ಬಹಳ ಯಶಸ್ವಿಯಾಗಿತ್ತು. ಆಮೇಲೆ ದೆಹಲಿಯಲ್ಲಿ ನಾನು ಇದ್ದ ಐದು ವರ್ಷ ಕನ್ನಡ ಸಾಹಿತ್ಯಲೋಕದೊಂದಿಗೆ ನನ್ನ ಸಂಪರ್ಕ ತಪ್ಪಿ ಹೋಯಿತು.
೧೯೮೬ರಲ್ಲಿ ನಾನು ಧಾರವಾಡಕ್ಕೆ ಮರಳಿದ ಮೇಲೆ ಮತ್ತೆ ಬಂಡಾಯ ಸಾಹಿತ್ಯ ಸಂಘಟಣೆಯೊಂದಿಗೆ ಉಳಿದೆ. ಬಳ್ಳಾರಿ, ದಾವಣಗೆರೆ ಮೊದಲಾದೆಡೆ ನಡೆದ ಸಮ್ಮೇಳನಗಳಲ್ಲೂ ಪಾಲ್ಗೊಂಡೆ. ಬರುಬರುತ್ತ ಕೆಲವರು ಅಕ್ಕಿಯ ಮೇಲೆ ಆಶೆ ನೆಂಟರ ಮೇಲೆ ಇಷ್ಟ ಎಂಬಂತೆ ಇತ್ತ ಬಂಡಾಯದಲ್ಲೂ ಇದ್ದು ಅತ್ತ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಲ್ಲಿ ಭಾಗವಹಿಸುವದರತ್ತಲೂ ಒಲವು ತೋರಿಸತೊಡಗಿದರು. ದಾವಣಗೆರೆ ಬಂಡಾಯ ಸಮ್ಮೇಳನದಲ್ಲಿ ಇದರ ಕುರಿತು ಚರ್ಚೆಯಾಗಿ ಕೊನೆಗೆ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಬಂಡಾಯದವರು ಭಾಗವಹಿಸಬಹುದೆಂದಾಯಿತು. ಆಮೇಲೆ ಬಿಡಿ. ಬಂಡಾಯದ ಮುಂಚೂಣಿ ನಾಯಕರಲ್ಲೊಬ್ಬರಾದ ಚಂದ್ರಶೇಖರ ಪಾಟೀಲರು ಸಾಹಿತ್ಯ ಪರಿಷತ್ ನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಅದರ ಅಧ್ಯಕ್ಷರೂ ಆದರು. ಮತ್ತೊಮ್ಮೆ ಆಗಬಯಸಿದರು, ಸೋತರು.
ನಾನು ಭಾಗವಹಿಸಿದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ೧೯೯೦ರ ಫೆಬ್ರುವರಿ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೫೯ ನೇ ಸಮ್ಮೇಳನ. “ಕನ್ನಡ ಸಾಹಿತ್ಯ ಮತ್ತು ಪ್ರಗತಿಶೀಲ ಧೋರಣೆಗಳು” ಎಂಬ ಗೋಷ್ಠಿಯಲ್ಲಿ ನಾನು ಬಸವರಾಜ ಕಟ್ಟೀಮನಿಯವರ ಸಾಹಿತ್ಯದ ಕುರಿತು ಪ್ರಬಂಧ ಮಡಿಸಲು ಆಹ್ವಾನಿತನಾಗಿದ್ದೆ. ಎಲ್ ಎಸ್ ಶೇಷಗಿರಿರಾಯರು ಉದ್ಘಾಟಿಸಿದ ಆ ಗೋಷ್ಠಿಯ ಅಧ್ಯಕ್ಷತೆಯನ್ನು ಕೋ. ಚೆನ್ನಬಸಪ್ಪ ವಹಿಸಿದ್ದರು. ನನ್ನ ಹೆಸರು ಕರೆದಾಗ ನಾನೆತ್ತಿಕೊಂಡಿದ್ದ ನನ್ನ ಮಗನನ್ನು ನನ್ನ ಹೆಂಡತಿಯ ಕೈಗಿತ್ತು ನಾನು ವೇದಿಕೆ ಏರಿ ನೋಡುತ್ತೇನೆ, ಜನಸಾಗರ…!!! ನೂರೋ ಇನ್ನೂರೋ ಅಬ್ಬಬ್ಬಾ ಎಂದರೆ ಸಾವಿರ ಜನರೋ ಇದ್ದ ಸಭೆಗಳಲ್ಲಿ ಮಾತನಾಡಿದ್ದ ನಾನು ಇಡೀ ನೆಹರೂ ಮೈದಾನದ ತುಂಬೆಲ್ಲ ಸುಮಾರು ಹತ್ತು ಸಹಸ್ರಕ್ಕೂ ಮಿಕ್ಕಿ ಇದ್ದ ಆ ವಿಶಾಲ ಜನಸಮೂಹವನ್ನು ಆ ವಿದ್ಯುದ್ದೀಪಗಳ ಬೆಳಕಿನಲ್ಲಿ ಆ ಸಭೆಯಲ್ಲಿ ನೋಡಿ ಅಪ್ರತಿಭನಾದೆ. ಗೋಷ್ಠಿಯಲ್ಲಿ ಭಾಗವಹಿಸಬೇಕಾಗಿದ್ದ ರಹಮತ್ ತರಿಕೆರೆ ಮತ್ತು ಕೆ.ಎಸ್. ಭಗವಾನ್ ಗೈರು ಹಾಜರಾದ್ದರಿಂದ ಅವರ ಟಾಪಿಕ್ಕುಗಳ ಕೆಲವು ಅಂಶಗಳನ್ನೂ ನಾನು ಮತ್ತು ಪಿ.ವಿ.ವಜ್ರಮಟ್ಟಿಯವರು ಹಂಚಿಕೊಂಡು ಮಾತನಾಡಬೇಕಿತ್ತು ಬೇರೆ. ಹುಬ್ಬಳ್ಳಿಯ ಸಮ್ಮೇಳನ ತುಂಬ ಯಶಸ್ವಿಯಾಯಿತು. ಇದಕ್ಕೆ ಕಾರಣವೆಂದರೆ ಇದೊಂದು ರೀತಿಯಲ್ಲಿ ಉತ್ತರ ಕರ್ನಾಟಕದ ಘನತೆ ಪ್ರತಿಷ್ಠೆಯ ಪ್ರಶ್ನೆ ಎಂಬ ವಾತಾವರಣ ನಿರ್ಮಾಣವಾದ ವಾದ ವಿವಾದವೊಂದು ಈ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನಡೆದಿತ್ತು. ೧೯೯೦ರಲ್ಲಿ ಈ ಸಮ್ಮೇಳನ ನಡೆಯಲಿದ್ದ ಅವಧಿಯಲ್ಲೇ ಸರಿಯಾಗಿ ಅದೇ ದಿನಗಳಲ್ಲಿ ನಾನು ಕೆಲ ವಾರ ಪ್ರತಿ ಭಾನುವಾರ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಅಂಕಣವೊಂದನ್ನು ಬರೆಯುತ್ತಿದ್ದೆ. ಒಂದು ಅಂಕಣ ಬರಹದಲ್ಲಿ ನಾನು ಇದರ ಕುರಿತೇ ಬರೆದೆ.

ಏನಾಗಿತ್ತೆಂದರೆ ಹುಬ್ಬಳ್ಳಿಯಲ್ಲಿ ಜರುಗಲಿದ್ದ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಕೆಲವರು ಬೆಂಗಳೂರಿನಲ್ಲಿ ಮುಕ್ತ ಸಾಹಿತ್ಯ ಸಮಾವೇಶವೊಂದನ್ನು ನಡೆಸುವದಾಗಿ ಘೋಷಿಸಿ ಈ ಅನಗತ್ಯ ವಿವಾದವನ್ನು ಸೃಷ್ಟಿಸಿದ್ದರು. ಅದಕ್ಕೆ ಹತ್ತು ವರ್ಷ ಮೊದಲು ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ನಡೆದ ಬಂಡಾಯ ಸಾಹಿತ್ಯ ಸಮಾವೇಶದಂಥ ಉದ್ದೇಶಗಳೂ ಇವರ ಈ ಪ್ರಯತ್ನದಲ್ಲಿ ನಮಗೆ ಕಾಣಲಿಲ್ಲ. ೧೯೭೯ರ ಪರ್ಯಾಯ ಸಮ್ಮೇಳನಕ್ಕೊಂದು ಸೈದ್ಧಾಂತಿಕ ನೆಲೆಗಟ್ಟಿತ್ತು. ಹುಬ್ಬಳ್ಳಿ ಸಮ್ಮೇಳನಕ್ಕೆ ಪರ್ಯಾಯವಾಗಿ ಏರ್ಪಟ್ಟ ಬೆಂಗಳೂರಿನ ಸಮಾವೇಶದ ವಕ್ತಾರರಾಗಿ ಹೇಳಿಕೆಗಳನ್ನು ಕೊಡುತ್ತಿದ್ದ ಡಾ.ಡಿ.ಆರ್. ನಾಗರಾಜ್ ಅವರು ವಾಸ್ತವವಾಗಿ ಆ ಬಂಡಾಯ ಸಾಹಿತ್ಯದ ಭಾಗವಾಗಿದ್ದವರೇ. ಆದರೆ ಈ ಸಂದರ್ಭದಲ್ಲಿ ಮಾತ್ರ ನಾಗರಾಜ್ ರ ವರ್ತನೆ ನಮಗೆ ಇಷ್ಟವಾಗಲಿಲ್ಲ. ಒಂದು ಪರ್ಯಾಯ ಮುಕ್ತ ಸಮಾವೇಶ ನಡೆಸುವ ತಮ್ಮ ನಿರ್ಧಾರಕ್ಕೆ ಹಲವು ಸಂಗತಿಗಳನ್ನವರು ತಳಕು ಹಾಕಿದ್ದರು: ಪರಿಷತ್ತು, ಅಕಾಡೆಮಿಗಳು ತಮ್ಮ ಘನತೆ ಗೌರವ ಕಳೆದುಕೊಂಡು ಅಲ್ಲಿ ಸಾಹಿತ್ಯಿಕ ಪುಢಾರಿತನ ನಡೆಯುತ್ತಿರುವದರಿಂದ ಸಾಹಿತ್ಯ ಸಂಸ್ಕೃತಿ ಈಗ ದೊಡ್ಡ ಬಿಕ್ಕಟ್ಟನ್ನೆದುರಿಸುತ್ತಿದೆ, ಪರಿಷತ್ತು ಸಮ್ಮೇಳನಕ್ಕೆ ಅರ್ಹರನ್ನು ಆಯ್ಕೆ ಮಾಡುತ್ತಿಲ್ಲ, ಹಾಗೆಯೇ ಅಕಾಡೆಮಿಗಳು ಮೌಲಿಕ ಕೃತಿಗಳನ್ನು ಕಡೆಗಣಿಸಿದ ಪರಿಣಾಮವಾಗಿ ಸಾಹಿತ್ಯಿಕ ಮಾನದಂಡಗಳು ಕಂಗೆಟ್ಟಿವೆ ಇತ್ಯಾದಿ. ಆದರೆ ಇವರ ಮುಖ್ಯ ವಿರೋಧ ಸಮ್ಮೇಳನಾಧ್ಯಕ್ಶರಾಗಿ ಡಾ. ಆರ್.ಸಿ.ಹಿರೇಮಠ ರನ್ನು ಆಯ್ಕೆ ಮಾಡಿದ ಕುರಿತಾಗಿತ್ತು ಎಂಬುದು ರಹಸ್ಯವೇನಾಗಿರಲಿಲ್ಲ. ಅರವತ್ತು ಮಂದಿ ಪ್ರಮುಖ ಸಾಹಿತಿಗಳು ಕವಿ ಕೆ.ಎಸ್.ನರಸಿಂಹಸ್ವಾಮಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಪತ್ರಬರೆದಿದ್ದನ್ನು ಇವರು ಬಹಿರಂಗ ಪಡಿಸಿದರು. ಪರಿಷತ್ತಿನ ನೀತಿ ನಿಯಮಗಳಿಗಾತೀತವಾಗಿ ಅಧ್ಯಕ್ಷರ ಆಯ್ಕೆ ನಡೆದಿದೆ ಎಂದು ಆರೋಪಿಸಿದ ಇವರಿಗೆ ಸಹಿ ಸಂಗ್ರಹ ಮಾಡಿ ತಾವು ಸೂಚಿಸಿದವರನ್ನೇ ಅಧ್ಯಕ್ಷ ಮಾಡಬೇಕೆಂಬ ನಿರೀಕ್ಷೆಯೂ ಪರಿಷತ್ತಿನ ನೀತಿಗೆ ವಿರುದ್ಧವೇ ಎಂಬುದು ಅರಿವಿನಲ್ಲಿರಲಿಲ್ಲ. ನರಸಿಂಹಸ್ವಾಮಿಯವರ ಅಧ್ಯಕ್ಷತೆಗೆ ಆಗ್ರಹಿಸಿ ಪತ್ರ ಬರೆದಾಗ್ಯೂ “ಪ್ರತಿಭೆ ಅರ್ಹತೆ ಇಲ್ಲದ” ಹಿರೇಮಠರನ್ನು ಆಯ್ಕೆ ಮಾಡಿದ್ದಾರೆ ಎನ್ನುವಲ್ಲಿ ನಾಗರಾಜ್ ತಮ್ಮ ವಿರೋಧದ ಪ್ರಮುಖ ಕಾರಣವನ್ನು ವ್ಯಕ್ತಗೊಳಿಸಿದ್ದರು. ಅಷ್ಟೇ ಅಂದು ಸುಮ್ಮನಾಗಿರಲಿಲ್ಲ. ಆಯ್ಕೆ ಈ ರೀತಿ ಮುಂದುವರಿಯುವದಾದರೆ ಅಬಕಾರಿ ಮತ್ತು ಪಿ.ಡಬ್ಲು.ಡಿ ಗುತ್ತಿಗೆದಾರರೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾರು ಎಂಬ ಒರಟು ಮಾತಾಡಿದರು. ಅದು ಇಲ್ಲಿ ವ್ಯಾಪಕವಾಗಿ ವಿರೋಧ ವ್ಯಕ್ತವಾಗಲು ಕಾರಣವಾಯಿತು.
ಪ್ರಾರಂಭಿಕವಾಗಿ ನನ್ನದೂ ಸೇರಿದಂತೆ ಶ್ರೀ. ಚೆನ್ನವೀರ ಕಣವಿ, ವರದರಾಜ ಹುಯಿಲಗೋಳ, ಶ್ರೀಮತಿ ಶಾಂತಾದೇವಿ ಮಾಳವಾಡ, ಡಾ. ವಾಮನ ಬೇಂದ್ರೆ, ಡಾ. ಎಂ.ಎಂ.ಕಲಬುರ್ಗಿ, ಪ್ರೊ.ಸಿದ್ಧಲಿಂಗ ಪಟ್ಟಣಶೆಟ್ಟಿ, ವೀಣಾ ಶಾಂತೇಶ್ವರ ಮುಂತಾದ ಹದಿನೈದು ಜನರ ಸಹಿ ಇದ್ದ ಜಂಟಿ ಹೇಳಿಕೆಯೊಂದು ಮಾಧ್ಯಮಗಳಲ್ಲಿ ಪ್ರಕಟವಾಯಿತು. ಅಖಂಡ ಕರ್ನಾಟಕದ ಮನಸ್ಸನ್ನು ಹೋಳು ಮಾಡುವ ಬೆಂಗಳೂರಿನ ಕೆಲವು ಸಾಹಿತಿಗಳ ನಿಲುವನ್ನು ಸಾರ್ವಜನಿಕರು ತಿರಸ್ಕರಿಸಬೇಕೆಂದು ನಾವು ಕೇಳಿಕೊಂಡಿದ್ದೆವು. ಅನೇಕ ವರ್ಷಗಳಿಂದ ದಕ್ಷಿಣ ಕರ್ನಾಟಕ ಸಾಹಿತಿಗಳು ಉತ್ತರ ಕರ್ನಾಟಕದ ಸಾಹಿತಿಗಳಿಗೆ ಅವಕಾಶಗಳನ್ನು ತಪ್ಪಿಸುತ್ತ ರಾಜಧಾನಿಯ ಸುತ್ತಲಿನ ಸಾಹಿತ್ಯಕ ಗೌರವ ಪ್ರಶಸ್ತಿ ಸ್ಥಾನಮಾನ ಪಡೆಯುತ್ತ ಬಂದಿದ್ದಾರೆ, ಈ ವರ್ಷ ಸಾಹಿತ್ಯ ಸಮ್ಮೇಳನಕ್ಕೆ ಉತ್ತರ ಕರ್ನಾಟಕ ವಿದ್ವಾಂಸರೊಬ್ಬರು ಅಧ್ಯಕ್ಷರಾದುದು ಅವರಿಗೆ ಸಹಿಸದ ಸಂಗತಿ ಆಗಿದೆ ಎಂದು ಹೇಳುವದು ಅನಿವಾರ್ಯವಾಗಿದೆ ಎಂದುದಲ್ಲದೇ ಬೆಂಗಳೂರಿನಲ್ಲಿ ಪರ್ಯಾಯ ಸಮ್ಮೇಳನವನ್ನು ನಡೆಸಿದ್ದೇ ಆದರೆ ಅನೇಕ ವರ್ಷಗಳಿಂದ ಅನ್ಯಾಯಕ್ಕೊಳಗಾದ ಈ ಭಾಗದ ಸಾಹಿತಿಗಳು ಉತ್ತರ ಕರ್ನಾಟಕದ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿಕೊಳ್ಳಬೇಕಾಗುತ್ತದೆ ಎಂದು ಅದರಲ್ಲಿ ಎಚ್ಚರಿಸಲಾಗಿತ್ತು. ಇನ್ನೊಂದೆಡೆ ರಾ.ಯ.ಧಾರವಾಡಕರ, ದೇವೇಂದ್ರಕುಮಾರ ಹಕಾರಿ, ಬುದ್ದಣ್ಣ ಹಿಂಗಮಿರೆ ಬೆಂಗಳೂರಿನ ಸಮಾನಾಂತರ ಸಮ್ಮೇಳನವನ್ನು ವಿರೋಧಿಸಿದರು, ಮೈಸೂರಿನಲ್ಲಿ ಡಾ. ಪ್ರಧಾನ ಗುರುದತ್ತ, ಮಳಲಿ ವಸಂತಕುಮಾರ, ವಿಜಯಾ ದಬ್ಬೆ, ಎಚ್, ತಿಪ್ಪೇರುದ್ರಸ್ವಾಮಿಯವರು ಇಂಥ ವಾದಗಳಿಂದ ಸಾಹಿತ್ಯಕ ವಾತಾವರಣವನ್ನು ಕಲುಷಿತಗೊಳಿಸುವದು ಸರಿಯಲ್ಲ ಎಂದರು. ವಿಚಾರವಾದಿ ಬಿ.ವಿ. ವೀರಭದ್ರಪ್ಪ ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗವಹಿಸಲು ಮುಂಚೆ ಒಪ್ಪಿಗೆ ನೀಡಿ “ಇಂಥವರು ಅಧ್ಯಕ್ಷರಾದರು” ಎಂಬ ಕಾರಣಕ್ಕೆ ವಿರೋಧಿಸುವದು ಅಸಭ್ಯ ವರ್ತನೆ ಎಂದರು. ಇನ್ನೊಂದೆಡೆ ಎಸ್.ಎಸ್.ರೇಣುಕಾರಾಧ್ಯ, ಚಕ್ಕೆರೆ ಶಿವಶಂಕರ, ನಲ್ಲೂರು ಪ್ರಸಾದ, ಪಂಜು ಗಂಗೊಳ್ಳಿ, ಚಂದ್ರಶೇಖರ ಗುಬ್ಬಿ, ತೇಜಸ್ವಿನಿ ಮತ್ತು ಪ್ರಹ್ಲಾದ ಬೆಟಗೇರಿ ಒಂದು ಹೇಳಿಕೆ ನೀಡಿ ಸಾಹಿತ್ಯ ಪರಿಷತ್ತು, ಅಕಾಡೆಮಿಗಳು ತಮ್ಮ ಘನತೆ ಗೌರವ ಕಳೆದುಕೊಂಡಿವೆ ಎನ್ನುವ ಪರ್ಯಾಯವಾದಿಗಳು ತಾತ್ಕಾಲಿಕ ಎಂದು ಹೇಳಲಾದ ಇಂಥ ಪರ್ಯಾಯ ಸಮ್ಮೇಳನ ಕೈ ಬಿಟ್ಟು ನಿಜವಾದ ಸಾಹಿತ್ಯಕ ಹಾಗೂ ಸಾಸ್ಕೃತಿಕ ಕಳಕಳಿ ತಮಗಿದ್ದರೆ ಅಕಾಡೆಮಿ ಪರಿಷತ್ತುಗಳು ಸದಾಕಾಲಕ್ಕೂ ನಿಲ್ಲುವಂಥ ರಚಾನಾತ್ಮಕ ಕಾರ್ಯಗಳಲ್ಲಿ ತೊಡಗಲಿ ಎಂದರು.

ಇದೆಲ್ಲದರಿಂದ ಪರ್ಯಾಯವಾದಿಗಳು ಅಧೀರರಾಗತೊಡಗಿದರು.ಕೊಂಚ ತಡವಾಗಿ ರಂಗ ಪ್ರವೇಶಿಸಿದ ಅನಂತಮೂರ್ತಿಯವರು ತಮ್ಮ ಸಮಾವೇಶ ಹುಬ್ಬಳ್ಳಿಯ ಸಮ್ಮೇಳನಕ್ಕೆ ಪರ್ಯಾಯವಲ್ಲ. ಕನ್ನಡ ನಾಡು, ನುಡಿ, ಸಂಸ್ಕೃತಿಯ ಅರ್ಥಪೂರ್ಣ ಪ್ರಗತಿಯತ್ತ ನಡೆಸಿದ ಪ್ರಯತ್ನವೆಂದರಾದರೂ ಆ ಸಮರ್ಥನೆಯನ್ನು ಕೊಂಡುಕೊಳ್ಳಲು ಇಲ್ಲಿ ಯಾರೂ ಸಿದ್ಧರಿರಲಿಲ್ಲ. ಅದೇ ಧಾಟಿಯಲ್ಲಿ ಡಾ. ಡಿ ಆರ್. ನಾಗರಾಜ್ ಮೊದಲಾದವರು ಧಾರವಾಡದ ಸಾಹಿತಿಗಳಲ್ಲಿ ವಿನಂತಿಸಿಕೊಳ್ಳುತ್ತ ತಮ್ಮ ಸಾಹಿತ್ಯ ಸಮಾವೇಶ ಸಂಕುಚಿತ ಅಸಹನೆಗಳಿಂದ ಹುಟಿದ್ದಲ್ಲ, ಸಂಸ್ಕೃತಿಯ ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠವಾದದ್ದು ಮಾತ್ರ ಆದರ್ಶವಾಗಬೇಕು ಎಂಬ ವಾತಾವರಣ ನಿರ್ಮಾಣದ ಪ್ರಯತ್ನ ಎನ್ನತೊಡಗಿದರು. ಈ ವಾದದಲ್ಲಿರುವ ಮಿತಿಗಳನ್ನು ತುಂಬ ಚೆನ್ನಾಗಿ ಎತ್ತಿತೋರಿ ಕೆ.ವಿ.ಸುಬ್ಬಣ್ಣನವರು “ಶ್ರೇಷ್ಠತೆಯ ವ್ಯಸನ” ಎಂಬ ಒಂದು ಒಳ್ಳೆಯ ಲೇಖನವನ್ನೇ ಬರೆದು ಪರ್ಯಾಯ ಸಮ್ಮೇಳನದವರ ತಾತ್ವಿಕತೆಯ ಕುರಿತು ತಮ್ಮ ಅಸಮ್ಮತಿ ತೋರಿದರು. ಬರಗೂರು “ಕೆಲವು ಕೃತಿಗಳು ಹುಟ್ಟುವಾಗಲೇ ಕುಲಾವಿ ಹೊಲೆಸಿಕೊಂಡಿರುತ್ತವೆ, ಇನ್ನೂ ಕೆಲವು ಕೃತಿಗಳು ಹುಟ್ಟಿ ವರ್ಷಗಳೇ ಕಳೆದರೂ ಬಟ್ಟೆ ಬರೆಯಿಲ್ಲದೆ ಬೆತ್ತಲಾಗಿರುತ್ತವೆ. ಇಂಥ ಸಂದರ್ಭದಲ್ಲಿ ಇವರು ಎತ್ತುವ ಸಾಹಿತಿ ಶ್ರೇಷ್ಠತೆಯ ಪ್ರಶ್ನೆಯೂ ಚರ್ಚಾರ್ಹ” ಎಂದರು.
ಹುಬ್ಬಳ್ಳಿ ಸಾಹಿತ್ಯ ಸಮ್ಮೇಳನ ಸಮೀಪವಾದಂತೆಲ್ಲ ತಮ್ಮ ಪ್ರಯತ್ನಕ್ಕೆ ವ್ಯಕ್ತವಾಗತೊಡಗಿದ್ದ ವಿರೋಧಗಳ ಕುರಿತು ಚಿಂತಿತರಾದ ಪಿ. ಲಂಕೇಶ್ ಕೊನೆಗೆ ಯಾರಿಗೆ ಎಲ್ಲಿ ಹೋಗಲಿಷ್ಟವೋ ಅಲ್ಲಿ ಹೋಗಿ, ಆದರೆ ಮನಸುಗಳು ಮುದುಡುವದು ಬೇಡ ಎಂದು ತಮ್ಮ ಪತ್ರಿಕೆಯಲ್ಲಿ ಬರೆದರು. ಪರ್ಯಾಯ ಸಾಹಿತ್ಯ ಸಮಾವೇಶವಂತೂ ನಡೆಯಿತು. ಲಂಕೇಶ್, ಡಿ.ಆರ್.ನಾಗರಾಜ್, ಮರುಳಸಿದ್ದಪ್ಪ, ಗೋಪಾಲಕೃಷ್ಣ ಅಡಿಗ, ಪುರುಷೋತ್ತಮ ಬಿಳಿಮಲೆ, ಬೋಳುವಾರು ಮಹಮ್ಮದ್, ರಾಮಚಂದ್ರ ಶರ್ಮ ಮೊದಲಾದವರು ಭಾಗವಹಿಸಿದ್ದ ಆ ಸಮಾವೇಶದ ವರದಿಗಳನ್ನು ಓದಿ ನಾವು ಸುಮ್ಮನಾದೆವು.
ಆಮೇಲೆ ನನಗೆ ಎರಡು ಸಂದರ್ಭಗಳಲ್ಲಿ, ಬಹುಶ: ಬಾಗಲಕೋಟೆ, ಮುಧೋಳ್ ಮತ್ತು ಕೊಪ್ಪಳಗಳಲ್ಲಿ ನಡೆದ ಸಮ್ಮೇಳನಗಳ ಪೈಕಿ ಎರಡರಲ್ಲಿ ಭಾಗವಹಿಸುವದಿತ್ತು. ಆಹ್ವಾನ ಪತ್ರಿಕೆಯಲ್ಲಿ ಹೆಸರೂ ಅಚ್ಚಾಗಿತ್ತು. ಒಂದು ಕವಿಗೋಷ್ಠಿಯಲ್ಲಿ, ಇನ್ನೊಂದು ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ. ಏನು ಕಾರಣವೋ ಗೊತ್ತಿಲ್ಲ ನಾನು ಹೋಗಲಿಲ್ಲ. ಕೊನೆಯದಾಗಿ ನಾನು ಭಾಗವಹಿಸಿದ್ದು ಪಾಟೀಲ್ ಪುಟ್ಟಪ್ಪನವರು ಅಧ್ಯಕ್ಷರಾಗಿದ್ದ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ, ನನ್ನ ಜೊತೆ ಕೀರ್ತಿ ಲಾಜ್ ನಲ್ಲಿ ಇದ್ದ ಹಾವೇರಿಯ ಕವಿ ಬಸವರಾಜ ಕುಂಬಾರನ ಜೊತೆ ಮಾತನಾಡುತ್ತ ನಾನು ಈ ಹಿಂದೆ ಎರಡು ಸಮ್ಮೇಳನಗಳಲ್ಲಿ ಭಾಗವಹಿಸುವದಿದ್ದರೂ ಹೋಗಲಿಲ್ಲ ಎಂದಾಗ ಆತ ಅಪನಂಬಿಕೆಯಿಂದ ನೋಡಿದ. ಜನ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವ ಅವಕಾಶಕ್ಕಾಗಿ ತಮ್ಮ ಜಿಲ್ಲಾ ಅಧ್ಯಕ್ಷರನ್ನು ಹೇಗೆಲ್ಲ ಓಲೈಸುತ್ತಾರೆ ಇತ್ಯಾದಿ ಕಥೆ ಮಾಡಿ ಹೇಳಿದ. ಕವಿಗೋಷ್ಠಿಯಲ್ಲಿ. ವಿ. ಚಿಕ್ಕವೀರಯ್ಯ ಎಂಬುವರ ಅಧ್ಯಕ್ಷತೆಯಲ್ಲಿ ನಡೆದ ಆ ಗೋಷ್ಠಿಯಲ್ಲಿ ಚೆನ್ನವೀರ ಕಣವಿ, ಬಿ.ಸಿ.ರಾಮಚಂದ್ರಶರ್ಮ, ಬಿ.ಆರ್.ಲಕ್ಷಣರಾವ್, ಚಂದ್ರಶೇಖರ್ ಪಾಟೀಲ್, ಜಿಎಸ್.ಸಿದ್ದಲಿಂಗಯ್ಯ ಮುಂತಾದ ಹಿರಿಯ ಮತ್ತು ಸರಜೂ ಕಾಟಕರ್ ರಂಥ ವಾರಿಗೆಯ ಕವಿಗಳ ಜೊತೆ ಪಾಲ್ಗೊಂಡು ನಾನು ಸಂತೋಷ ಪಟ್ಟೆನಾದರೂ ಬಹುಪಾಲು ಹಿರಿಯ ಕವಿಗಳು ತಮ್ಮ ಹಳೆಯ ಕವಿತೆಗಳನ್ನೇ ಓದಿದ್ದು ಕೇಳುಗರ ಅಸಂತೋಷಕ್ಕೆ ಕಾರಣವಾಗಿತ್ತು. ಬೆಳಗಾವಿಯ ಸಮ್ಮೇಳನ ನೋಡಿದ ಮೇಲೆ ನನಗೆ ಈ ಮಧ್ಯೆ ಸಾಹಿತ್ಯ ಸಮ್ಮೇಳನಗಳು ಧಾರಣ ಮಾಡಿದ್ದ ಹೊಸ ರೂಪಗಳು ಕಲ್ಪನೆಗೆ ಬಂತು. ಆ ಬಿಸಿಲು, ಆ ಧೂಳು, ಎಲ್ಲಾದರೂ ಊಟ ಸಿಕ್ಕರೆ ಸಾಕಪ್ಪ ಎಂಬಂತಿದ್ದ ಆ ಸ್ಥಿತಿಯಲ್ಲಿ ಚಂಪಾ ಅವರು ಊಟಕ್ಕೆ ನಾಗನೂರು ಶ್ರೀಗಳ ಮಠದ ಆವರಣದಲ್ಲಿ ಪ್ರತಿನಿಧಿಗಳ ಊಟದ ವ್ಯವಸ್ಥೆ ಮಾಡಿದಲ್ಲಿ ಹೋಗೋಣ ಎಂದರು. ಹೋದರೆ ಅಲ್ಲಿ ಮೈಲುದ್ದ ಸರತಿ ಸಾಲುಗಳು. “ನಮ್ಮ ಪಾಳಿ ಬರುವ ಹೊತ್ತಿಗೆ ಅದು ನಮ್ಮ ಲಂಚ್ ಆಗಿರುವದಿಲ್ಲ ಡಿನ್ನರ್ ಆಗಿರುತ್ತದೆ, ಬರ್ರಿ, ಕೀರ್ತಿ ಲಾಜ್ ನ್ಯಾಗ ಒಂದು ಬಾರ್ ಸೆಕ್ಶನ್ ಐತಿ. ಅಲ್ಲಿ ಒಂದೊಂದ್ ಬಿಯರ್ ಕುಡ್ದು ಅಲ್ಲೇ ಸ್ವಲ್ಪ ಊಟಾ ಮಾಡೂಣು” ಎಂದೆ. “ಹಾಂ, ಅದs ಬೆಟರ್, ನಡೀರಿ” ಅಂದರು. ಅಟೋ ಹತ್ತಿ ಅಲ್ಲಿ ಬಂದು ಬಾರ್ ಸೆಕ್ಶನ್ ನಲ್ಲಿ ಪ್ರವೇಶಿಸಿದರೆ ಒಂದೆಡೆ ಕವಿ ಬಿ.ಆರ್. ಲಕ್ಷ್ಮಣರಾವ್ ಮತ್ತು ಬಿ.ಸಿ.ರಾಮಚಂದ್ರಶರ್ಮ ಬಿಯರ್ ಹೀರುತ್ತಿದ್ದರು. ಇನ್ನೊಂದೆಡೆ ನಾವು ಹೋಗಿ ಆಸೀನರಾದೆವು. ಬಿ.ಆರ್.ಹಾಯ್ ಎನ್ನುವಂತೆ ಕೈ ಎತ್ತಿದರು. ನಾನೂ ಕೈ ಎತ್ತಿದೆ. ಬಿ.ಸಿ.ರಾಮಚಂದ್ರ ಶರ್ಮ ನೋಡಿಯೂ ನೋಡದಂತಿದ್ದರು, ಚಂಪಾ ಕೂಡ ನೋಡಿಯೂ ನೋಡದಂತಿದ್ದರು..!
ಇನ್ನುಳಿದಂತೆ ನಾನು ಕೆಲ ವರ್ಷಗಳ ಹಿಂದೆ ಗದಗ್ ನಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ನನ್ನ ಪಾರ್ಟಿಸಿಪೇಶನ್ ಏನೂ ಇರಲಿಲ್ಲ. ಆದರೆ ಧಾರವಾಡದಿಂದ ಬರೀ ಎರಡು ಗಂಟೆಗಳ ಪಯಣ. ನಟರಾಜ್ ಹುಳಿಯಾರ್ ಮತ್ತಿತರರು ಏನು ಮಾತನಾಡುತ್ತಾರೆ, ಕೇಳೋಣ ಅಂತ ಹೋಗಿದ್ದೆ. ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಬಟ್ಟೆ ಬರೆಗಳ ಅಂಗಡಿಗಳು. ಆಟಿಕೆ ವಸ್ತು ಗಳು, ಗೊಂಬೆ, ಗಿಲಗಂಚಿ, ಬಣ್ಣದ ಕನ್ನಡಕ, ಬಲೂನುಗಳ ಅಂಗಡಿಗಳು, ಗೃಹಬಳಕೆಯ ಸಮಸ್ತ ವಸ್ತುಗಳ ಅಂಗಡಿಗಳ ಮುಂದೆ ಚಿರ್ರೋ ಮರ್ರೋ ಅಂತ ಹೆಂಗಳೆಯರ ದಂಡು, ಕೃಷಿ ಬಳಕೆಯ ಕುಡುಗೋಲು, ಕುರುಪಿ, ನೇಗಿಲ ಕುಳ, ಎತ್ತುಗಳನ್ನು ಸಿಂಗರಿಸುವ ಗಲ್ಲೀಪುಗಳು, ಬಾರುಕೋಲುಗಳ ಅಂಗಡಿಗಳು, ಧೋತ್ರ, ಸೀರೆ, ರೇಡಿಮೇಡ್ ಬಟ್ಟೆಗಳ ಅಂಗಡಿಗಳು, ಎಗ್ ಫ್ರೈಡ್ ರೈಸ್, ಗಿರ್ಮಿಟ್, ಮಿರ್ಚಿಭಜಿ,ಹೆರೆದು ಕಡ್ದಿಗೆ ಚುಚ್ಚಿ ಬಣ್ಣದ ಸ್ಯಾಕರಿನ್ ದ್ರವ ಹೊಯ್ದು ಕೊಡುವ ಐಸ್ಕ್ರೀಮ್ ಇತ್ಯಾದಿಗಳನ್ನು ಮಾರುವ ತಳ್ಳು ಗಾಡಿಗಳು. ಅಲಲಲಾ ಗದುಗಿನ ಜನರ ಸೌಭಾಗ್ಯವೇ ಎಂಬಂತಿತ್ತು ಸೀನ್.
ಇನ್ನೊಂದು ಸಮ್ಮೇಳನ ಬೆಂಗಳೂರಿನಲ್ಲಿ ಇತ್ತೀಚೆ ನಡೆದದ್ದು. ಹೇಗೂ ಬೆಂಗಳೂರಿನಲ್ಲಿದ್ದೆ. ಹೋದೆ. ಗದಗಿನಂಥ ದೊಡ್ಡ ಪ್ರಮಾಣದಲ್ಲಿ ಮಾರಾಟದ ಸೀನ್ ಇರಲಿಲ್ಲವಾದರೂ ಥರಾವರಿ ವಸ್ತುಗಳ ಮಾರಾಟ ಸಾಹಿತ್ಯ ಸಮ್ಮೇಳನಗಳ salient ಲಕ್ಷಣಗಳಲ್ಲಿ ಒಂದಾಗಿದೆ ಎಂದು ಅನ್ನಿಸುವಂತಿತ್ತು. ಪುಸ್ತಕ ಮಳಿಗೆಗಳಲ್ಲಿ ಹೋದರೆ ಉಸಿರುಗಟ್ಟುತ್ತಿತ್ತು ಮತ್ತು ಬೆವರಿನ ಘಮದ ವೈಪರೀತ್ಯದಿಂದ ಒಂಥರಾ ಆಗತೊಡಗಿತ್ತು. ಅಲ್ಲೇ ಎಲ್ಲೋ ಒಂದೆಡೆ ಸಿಕ್ಕ ಚಂಪಾ, ನಾನು ದೆಹಲಿಯಲ್ಲಿದ್ದಾಗ ಎನ್.ಎಸ್.ಡಿ ಯಲ್ಲಿದ್ದ ರಘುನಂದನ್ ಮುಂತಾದವರೊಂದಿಗೆ ಸ್ವಲ್ಪ ಮಾತಾಡಿ ಅಲ್ಲಿಂದ ಹೊರಬಿದ್ದರೆ ಸಾಕಪ್ಪ ಎನ್ನಿಸಿ ಹೊರಬಂದು ರೋಟಿಘರ್ ನಲ್ಲಿ ಊಟ ಮಾಡಿ ಮನೆ ತಲುಪಿ ಮಲಗಿ ಸಾಹಿತ್ಯಕ್ಕಿಂತ ಸುಖಕರವಾದ ನಿದ್ದೆ ತೆಗೆದೆ.
ನೆಕ್ಸ್ಟ್ ಸಾಹಿತ್ಯ ಸಮ್ಮೇಳನಕ್ಕೆ ಹೋಗ ಬೇಕೆನ್ನಿಸಿದೆ….ಆಹ್ವಾನ ಇದ್ದರೂ, ಇಲ್ಲದಿದ್ದರೂ…

‍ಲೇಖಕರು G

8 January, 2014

2 Comments

  1. Anil Talikoti

    ಸಾಹಿತ್ಯ ಸಮ್ಮೆಳನದ ಸಾಗುವಳಿ ಮಾಡಿದಂಗ ಅದ ನೋಡ್ರಿ ನೀವು. very informative
    -Anil

  2. Ajit

    ಈ ಉತ್ಖನನ ಕೂಡ “ಶ್ರೇಷ್ಠತೆಯ ವ್ಯಸನ”ದ ಭಾಗ ಎಂಬಂತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading