
ನಾನು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಇದ್ದ ವರ್ಷಗಳಲ್ಲಿ ಆಂಧ್ರದಿಂದ ಒಬ್ಬ ವಿದ್ಯಾರ್ಥಿ ಬಂದ. ಹಿಂದಿಯ ಹಾರ್ಟ್ ಲ್ಯಾಂಡ್ ಎಂದು ಕರೆಯುವ ಪ್ರದೇಶಕ್ಕೆ ಬಂದು ಹಿಂದಿ ಭಾಷೆಯ ಕುರಿತೇ ಆತ ಮುಖ ಸಿಂಡರಿಸುತ್ತಿದ್ದ. ಏನೆಂದರೆ ಅವನಿಗೆ ಮುಸ್ಲಿಮರೆಂದರೆ ಅಷ್ಟಕ್ಕಷ್ಟೇ ಎಂಬಂಥ ಅಸಹನೆ ಇತ್ತು, ಉರ್ದು ಎಂಬುದು ಮುಸಲರ ಭಾಷೆ ಎಂದು ಅವನು ನಂಬಿದ್ದ ಮತ್ತು ಹಿಂದಿ ಎಂಬುದು, ತನ್ನೊಳಗೆ ಉರ್ದು ಭಾಷೆಯ ವೊಕ್ಯಾಬ್ಯುಲರಿ ತುಂಬಿಕೊಂಡಿದ್ದರೂ, ಉರ್ದು ಭಾಷೆಗಿಂತ ಭಿನ್ನವಾದ ಭಾಷೆ ಎಂಬುದು ಅವನಿಗೆ ಗೊತ್ತಿರಲಿಲ್ಲ. ಹೀಗಾಗಿ ಹಾಸ್ಟೆಲ್ ನಲ್ಲಿ, ಮೆಸ್ ನಲ್ಲಿ, ಅಂಚೆ ಕಚೇರಿಯಲ್ಲಿ, ಬ್ಯಾಂಕ್ ನಲ್ಲಿ ತನ್ನ ಕಿವಿ ಮೇಲೆ ಬೀಳುತ್ತಿದ್ದ ಹಿಂದಿ ಭಾಷೆಯನ್ನು ಉರ್ದು ಎಂದೂ ಅದನ್ನು ಮಾತನಾಡುತ್ತಿದ್ದವರೆಲ್ಲ ಮುಸಲರೆಂದೂ ಅವನು ಭಾವಿಸಿಕೊಂಡಿದ್ದ. ಒಂದು ಧರ್ಮವನ್ನು ಹೀಗೆ ನೇರವಾಗಿ ಒಂದು ಭಾಷೆಗೆ ಸಮೀಕರಿಸಬಾರದು, ಧರ್ಮಕ್ಕೂ ಭಾಷೆಗೂ ಸಂಬಂಧವಿಲ್ಲ, ಪಶ್ಚಿಮ ಬಂಗಾಲದಲ್ಲಿ ಹಾಗೂ ಬಂಗ್ಲಾ ದೇಶದಲ್ಲಿ ಮುಸ್ಲಿಮರು ಬಂಗಾಲಿ ಭಾಷೆ ಮಾತನಾಡುತ್ತಾರೆ, ಕರ್ನಾಟಕ ದಕ್ಷಿಣ ಕರಾವಳಿಯ ಮುಸ್ಲಿಮರು ಅಲ್ಲಿಯ ಭಾಷೆ ತುಳು ಮಾತನಾಡುತ್ತಾರೆ, ಕೇರಳದಲ್ಲಿ ಮಹಮ್ಮದೀಯರು ಮಲಯಾಳ ಭಾಷೆ ಮಾತನಾಡುತ್ತಾರೆ ಮತ್ತು ಅಫಘಾನಿಸ್ತಾನದಲ್ಲಿ, ಮಧ್ಯ ಏಷ್ಯದ ಇಸ್ಲಾಮಿಕ್ ರಿಪಬ್ಲಿಕ್ ಗಳಲ್ಲಿ ಅಲ್ಲಲ್ಲಿಯ ದೇಶ ಭಾಷೆಗಳನ್ನು, ಬುಡಕಟ್ಟು ಭಾಷೆಗಳನ್ನು ಮಾತನಾಡುತ್ತಾರೆ ಎಂದು, ಪಿ.ಎಚ್.ಡಿ ಮಾಡಲು ಬಂದಿದ್ದ ಅವನಿಗೆ ತಿಳಿಸಿ ಹೇಳಬೇಕಾಗುತ್ತಿತ್ತು.
ವಾಸ್ತವವಾಗಿ ಮುನ್ಷಿ ಪ್ರೇಮಚಂದ್ ಅವರನ್ನೊಳಗೊಂಡು ನಂತರ ಹಿಂದೀ ಭಾಷೆಯ ಪ್ರಖ್ಯಾತ ಸಾಹಿತಿಗಳಾದ ಹಲವಾರು ಬರಹಗಾರರು ತಮ್ಮ ಮೊದಮೊದಲ ಕೃತಿಗಳನ್ನು ಉರ್ದು ಭಾಷೆಯಲ್ಲೇ ಬರೆದಿದ್ದರು. ಏಕೆಂದರೆ ಆಗ ಇದ್ದ ಪ್ರಿಂಟಿಂಗ್ ಪ್ರೆಸ್ ಗಳೆಲ್ಲ ಉರ್ದು ಭಾಷೆಯವೇ. ಅವರಿಗೆ ಉರ್ದು ಕರತಲಾಮಲಕ ಏಕೆಂದರೆ ಆರಂಭಿಕ ಕಲಿಕೆ, ಅಕ್ಷರಾಭ್ಯಾಸ ಉರ್ದು ಲಿಪಿಯ ಓದು ಬರಹವನ್ನು ಒಳಗೊಂಡಿರುತ್ತಿತ್ತು. ಸಾಮಾನ್ಯ ಶಿಕ್ಷಣ ಪಡೆದ ಬಹುಪಾಲು ಎಲ್ಲ ಹಿಂದುಗಳು ಉರ್ದು ಅಕ್ಷರಾಭ್ಯಾಸ ಮಾಡಿದವರೇ ಆಗಿರುತ್ತಿದ್ದರು. ಮುಘಲರ ಕಾಲದಲ್ಲಿ ಆಸ್ಥಾನ ಭಾಷೆಯಾಗಿದ್ದ ಪರ್ಸಿಯನ್ ಭಾಷೆಯ ಉಪೋತ್ಪತ್ತಿಯಾಗಿದ್ದ ಉರ್ದು ಭಾಷೆಯನ್ನು ಬ್ರಿಟಿಷ್ ಭಾರತದಲ್ಲಿ ಯಾರೂ ಧರ್ಮದ ನೆಲೆಗಟ್ಟಿನಲ್ಲಿ ನೋಡುತ್ತಿರಲಿಲ್ಲ.
ಹಾಗೇ ನಾವು ಸುಶಿಕ್ಷಿತರು ಕೂಡ ಯಾವುದೋ ಒಂದನ್ನು ಇನ್ನ್ಯಾವುದೋ ಒಂದರ ಜೊತೆ ತಳಕು ಹಾಕಿ ಕನ್ ಫ್ಯೂಜ್ ಮಾಡಿಕೊಳ್ಳುವದರಲ್ಲಿ ನಿಸ್ಸೀಮರು. ಮತತತ್ವವನ್ನು ಧರ್ಮದೊಂದಿಗೆ, ಧರ್ಮವನ್ನು ಆಧ್ಯಾತ್ಮದೊಂದಿಗೆ, ಆಧ್ಯಾತ್ಮವನ್ನು ದರ್ಶನ ಅಥವಾ ಫಿಲಾಸಫಿಯೊಂದಿಗೆ, ನ್ಯಾಯವನ್ನು ನೀತಿಯೊಂದಿಗೆ ಮಿಳಿತಗೊಳಿಸಿಕೊಂಡು ಬಂದಿರುವ ನಮಗೆ ಧಾರ್ಮಿಕತೆ (ರಿಲಿಜಿಯಾಸಿಟಿ) ಮತ್ತು ಅಧ್ಯಾತ್ಮಿಕತೆ ( ಸ್ಪಿರಿಚುಅಲಿಜಂ) ಎರಡು ವಿಭಿನ್ನ ಸಂಗತಿಗಳೆಂದು ತೋಚುವದಿಲ್ಲ. ಧಾರ್ಮಿಕಶ್ರದ್ಧೆ ಇಲ್ಲದಿರುವವನಲ್ಲೂ ಆಧ್ಯಾತ್ಮಿಕ ಸೆಳೆತಗಳಿದ್ದು ಆತ ಸ್ಪಿರಿಚುಅಲ್ ಆಗಿರಬಹುದು ಎಂಬುದು ಗ್ರಹಿಕೆಗೇ ಬರುವದಿಲ್ಲ. ಹಾಗೆಯೇ ಎಥಿಕ್ಸ್ ಮತ್ತು ಮೊರಾಲಿಟಿಯ ಸಮೀಕರಣಗಳು. ಒಬ್ಬ ಮನುಷ್ಯ ಇಮ್ಮಾರಲ್ (ಅನೀತಿವಂತ, ಅನೈತಿಕ) ಆಗಿರಬಹುದು, ಉದಾ: ವಿವಾಹಬಾಹಿರ ಲೈಂಗಿಕ ಸಂಬಂಧಗಳನ್ನು ಹೊಂದಿದವನಾಗಿರಬಹುದು, ಅಕ್ರಮವಾಗಿ ದುಡ್ಡು ಗಳಿಸುತ್ತಿರಬಹುದು ಆದರೆ ಅವನು ಕರುಣೆ, ದಯಾಪರತೆ, ನ್ಯಾಯಪಕ್ಷಪಾತ, ಕಾಯಕನಿಷ್ಠೆ ಮೊದಲಾದವುಗಳಲ್ಲಿ ಎಥಿಕಲ್ ಆಗಿರಬಲ್ಲನು ಎಂಬುದು ನಮ್ಮ ಯೋಚನೆಗೆ ನಿಲುಕುವದಿಲ್ಲ. ವ್ಯತಿರಿಕ್ತವಾಗಿ ಒಬ್ಬನು ಶ್ರೀರಾಮಚಂದ್ರನಂತೆ ಏಕಪತ್ನೀವ್ರತಸ್ಥನಾಗಿದ್ದು, ಪರನಾರೀಸಹೋದರನಾಗಿರಬಹುದು, ಅಂದರೆ ಅತ್ಯಂತ ಮಾರಲ್ ಮನುಷ್ಯ, ನೀತಿವಂತ ಆಗಿರಬಹುದು. ಆದರೆ ಇನ್ನುಳಿದಂತೆ ನ್ಯಾಯಮಾರ್ಗಿಯಾಗಿರಲಿಕ್ಕಿಲ್ಲ, ಅಧರ್ಮ ಅನ್ಯಾಯಗಳನ್ನು ತುಂಬಿಕೊಂಡ ಅನ್ಎಥಿಕಲ್ ಮನುಷ್ಯನಾಗಿರಬಹುದು.
ಇಂದು ಸುಖ, ಸೌಕರ್ಯ, ಶಾಂತಿ, ಸಂತೋಷ, ನೆಮ್ಮದಿಗಳ ಕುರಿತು ಇಂಥವೇ ಮೂಢಕಲ್ಪನೆಗಳಿವೆ. ಶ್ರೀಮಂತರ ಕುರಿತು ಸಾಮಾನ್ಯವಾಗಿ ಇರುವ “ರೊಕ್ಕ, ರುಪಾಯಿ, ಆಸ್ತಿ-ಪಾಸ್ತಿ, ಆಳು,ಕಾಳು.., ಅವ್ರಿಗೇನ್ ಕಡಿಮಿ ಐತ್ರಿ?” ಎಂಬ ಗ್ರಹಿಕೆಯಲ್ಲಿರುವದು “ಇವೆಲ್ಲ ಇವೆ, ಆದ್ದರಿಂದ ಅವರಲ್ಲಿ ನೆಮ್ಮದಿಯೂ ಇದೆ” ಎಂಬ ಭಾವನೆ. ಇರಬಹುದು. ಆದರೆ ಇರಲೇಬೇಕೆಂದಿಲ್ಲ. ಮಾಡೆಲಿಂಗ್ ಪ್ರಪಂಚದ, ಚಿತ್ರರಂಗ ಎಂಬ ಬಣ್ಣದ ಲೋಕದ ಜನರ ನಿಗೂಢ ಸಾವುಗಳ, ಆತ್ಮಹತ್ಯೆಗಳ ಕುರಿತು ಕ್ಷಣ ಯೋಚಿಸಿ. ಕಲ್ಪನಾ, ಮಂಜುಳಾ, ನಿವೇದಿತಾಜೈನ್, ಸಿಲ್ಕ್ ಸ್ಮಿತಾ, ಜಿಯಾ ಖಾನ್, ಪರ್ವೀನ್ ಬಾಬಿ, ದಿವ್ಯಾ ಭಾರತಿ, ಹಿಂದೊಮ್ಮೆ ಮಿಸ್ ಇಂಡಿಯಾ ಆಗಿದ್ದು ಮಾಡೆಲಿಂಗ್ ಪ್ರಪಂಚಕ್ಕೆ ಬಂದಿದ್ದ ನಫೀಸಾ ಜೊಸೆಫ್, ಕುಲದೀಪ್ ರಂಧಾವಾ, ಇತ್ತೀಚೆ ಒಬ್ಬಿಬ್ಬರು ಕಿರುತೆರೆ ನಟಿಯರು…ಇವರೆಲ್ಲ ಆ ದೃಷ್ಟಿಯಿಂದ ಭೌತಿಕವಾಗಿ ಭದ್ರತೆ ಇದ್ದ ವರ್ಗದವರೇ. ಅದರೆ ಒಬ್ಬೊಬ್ಬರದೂ ಒಂದೊಂದು ಕತೆ, ಕೊನೆಗೂ ಏನೆಂದರೆ ಎಲ್ಲರೂ ನೆಮ್ಮದಿ ಕಳೆದುಕೊಂಡವರು, ಬದುಕಿ ಪ್ರಯೋಜನ ಇಲ್ಲವೆಂದುಕೊಂಡವರು. ಏಕಾಗಿ?

ಮನುಷ್ಯನ ತಹತಹಗಳೇ ವಿಚಿತ್ರವಾಗಿರುತ್ತವೆ. ತಾವು ಯಾವುದರಲ್ಲಿ ನೆಮ್ಮದಿ ಕಂಡುಕೊಳ್ಳುತ್ತೇವೆಂಬುದರ ಕುರಿತು ಸ್ಪಷ್ಟತೆ ಇರುವವರು ತಮ್ಮನ್ನು ಮತ್ಯಾರ ಜೊತೆಗೋ ತಮ್ಮ ಚಟುವಟಿಕೆಗಳನ್ನು ಇನ್ನೊಬ್ಬರ ಇನ್ನಾವುದೋ ಚಟುವಟಿಕೆಗಳ ಜೊತೆಗೋ ಹೋಲಿಸಿಕೊಂಡು ಕೊರಗುವದಿಲ್ಲ. ಕೆಲವರಿಗೆ ಯಶಸ್ಸೇ ನೆಮ್ಮದಿ. ಕೆಲವರು ಅಲ್ಪತೃಪ್ತರು. ಅವರಿಗೆ ಅದರಲ್ಲೇ ನೆಮ್ಮದಿ. ಯಶಸ್ಸಿನ ಬೆನ್ನು ಹತ್ತಿದವರಿಗೆ, ಸಂಪತ್ತಿನ ಶೇಖರಣೆಯ ಬೆನ್ನು ಹತ್ತಿದವರಿಗೆ, ಅದರಲ್ಲಿ ವ್ಯವಧಾನವಿಲ್ಲದಂತೆ ಮುಳುಗಿ ಮನಸು, ಶರೀರ, ಆರೋಗ್ಯ ಕೆಡಿಸಿಕೊಂಡವರಿಗೆ ಕ್ರಮೇಣ ಸಂಪತ್ತು ಸೌಕರ್ಯಗಳು ನೆಮ್ಮದಿಯ ಮೂಲಗಳಲ್ಲ ಎಂಬುದು ಅರಿವಿಗೆ ಬರತೊಡಗಿದೆ. ಒಂದೋ ಧ್ಯಾನಕೇಂದ್ರ, ಯೋಗಾಶ್ರಮಗಳತ್ತ ಜನ ಧಾವಿಸುತ್ತಿದ್ದಾರೆ ಇಲ್ಲವೆ ಅಲ್ಕೋಹಾಲ್, ಗಾಂಜಾ, ಅಫೀಮು ಮತ್ತಿತರ ಮತ್ತೇರಿಸುವ ಪದಾರ್ಥಗಳತ್ತ ವಾಲುತ್ತಿದ್ದಾರೆ. ವ್ಯಸನಮುಕ್ತಿಕೇಂದ್ರಗಳು ಹೆಚ್ಚಾಗುತ್ತಿವೆ. ಮಾನಸಿಕ ಚಿಕಿತ್ಸಾ ಕೇಂದ್ರಗಳು ಖಿನ್ನತೆ ಉದ್ವಿಗ್ನತೆಯಿಂದ ನರಳುವ ಜನರ ಸಂಖ್ಯೆಯಲ್ಲಿ ವೃದ್ಧಿಯನ್ನು ದಾಖಲಿಸುತ್ತಿವೆ. ಧ್ಯಾನಕೇಂದ್ರಗಳಲ್ಲಿ ನೆಮ್ಮದಿ ಸಿಗುತ್ತದೆಂದು ಅಲ್ಲಿಗೆ ಹೋಗಿ ಭ್ರಮನಿರಸನಗೊಂಡವರ ಸಂಖ್ಯೆಯೂ ಕಡಿಮೆ ಇಲ್ಲ. ಅಮಾಯಕರಿಗೆ ಮಂಕು ಬೂದಿ ಎರಚುವ, ಕಾರ್ಪೋರೇಟ್ ವಲಯದ ಡಾರ್ಲಿಂಗ್ ಗಳಾದ, ಅಕ್ರಮವಾಗಿ ಭೂಮಿ ಕಬಳಿಸಿಕೊಂಡು ಕುಳಿತ, ಈ ಧ್ಯಾನಕೇಂದ್ರಗಳ ಸ್ವಾಮೀಜಿಗಳ, ಬಾಬಾಗಳ, ಗುರೂಜಿಗಳ ನೆಮ್ಮದಿಯನ್ನು ನ್ಯಾಯಾಲಯಗಳು ಇಲೆಕ್ಟ್ರಾನಿಕ್ ಮಾಧ್ಯಮಗಳು ಕೆಡಿಸುತ್ತವೆ ಅದು ಬೇರೆ ಮಾತು.
ಇಡೀ ಸಮಾಜ ಹಣದ ಬೆನ್ನು ಹತ್ತಿ ಹೊರಟಂತಿದೆ. ಏಕೆಂದರೆ ಹಣ ಭದ್ರತೆಯ ಭಾವವನ್ನು ಒದಗಿಸುತ್ತದೆ. ಸುಖೋಪಭೋಗಿ ವಸ್ತುಗಳನ್ನು ಒದಗಿಸುತ್ತದೆ. ಸೌಕರ್ಯಗಳನ್ನು ಒದಗಿಸುತ್ತದೆ. ಅತ್ಯುತ್ತಮವಾದ ಮೆತ್ತನೆಯ ಬೆಡ್ ಗಳು, ಮೃದುವಾದ ಬೆಡ್ ಸ್ಪ್ರೆಡ್ ಗಳು, ಆದರೇನು ಮಾಡುವದು? ನಿದ್ರೆ ಬರುವದಿಲ್ಲ. ಫ್ಯಾನ್, ಏರ್ ಕಂಡೀಶನರ್, ಹೋಂ ಥೇಟರ್ ಎಲ್ಲ ಇವೆ. ಮೆಟಿರಿಯಲ್ ಕಂಫರ್ಟ್ಸ್ ಬೇರೆ, ಸಂತೋಷ-ನೆಮ್ಮದಿಯೆಂಬುದೇ ಬೇರೆ ಎಂಬುದು ಇನ್ನೂ ಬಹುಪಾಲು ಜನಕ್ಕೆ ತಿಳಿಯುತ್ತಲೇ ಇಲ್ಲ. ಒಂದು ಹುಚ್ಚು ಓಟದಲ್ಲಿ ಎಲ್ಲರೂ ಭಾಗಿಯಾದಂತಿದೆ. ಗಮ್ಯ ಯಾವುದು? ಗೊತ್ತಿಲ್ಲ. ಜಾಗತೀಕರಣದಿಂದ ಭಾರತ ನಳನಳಿಸುತ್ತದೆ, ಎಲ್ಲರೂ ಆ ಸಮೃದ್ಧಿಯ ಫಲಾನುಭವಿಗಳಾಗುತ್ತಾರೆಂಬ ಭರವಸೆ ಬೊಗಳೆಯಾಗುತ್ತಿದೆ. ಇಡೀ ನಮ್ಮ ರಾಜಕೀಯ ವ್ಯವಸ್ಥೆ ಆಮೂಲಾಗ್ರವಾಗಿ ಗಬ್ಬೆದ್ದು ಹೋಗಿದೆ. ಬಹುಪಾಲು ಎಲ್ಲ ರಾಜಕೀಯ ಪಕ್ಷಗಳು, ಸರಕಾರಗಳು ಕಾರ್ಪೋರೇಟ್ ಉದ್ಯಮಪತಿಗಳ ಅಡಿಯಾಳಾಗಿವೆ. ಕಾರ್ಯಸಿದ್ಧಿಗಾಗಿ ಏನಕ್ಕೂ ಸಿದ್ಧ ಎಂಬಲ್ಲಿಗೆ ಬಂದಿದೆ ನಮ್ಮ ಅಧಿಕಾರ ರಾಜಕಾರಣ. ಅದು ಹಾಳಾಗಲಿ, ನಮ್ಮ ಸಾಮಾಜಿಕ ರಚನೆಯಲ್ಲಿ, ಕುಟುಂಬ ವ್ಯವಸ್ಥೆಯಲ್ಲಿ, ಗ್ರಾಮೀಣ ಬದುಕಿನಲ್ಲಿ ಇದ್ದ ಮಾನವ ಸಂಬಂಧಗಳೂ ಮುಕ್ಕಾಗುತ್ತಿವೆ,
ಬಡವರ ಮನೆಗಳಲ್ಲಿ ದಾರಿದ್ರ್ಯವಿದೆ, ತಾಪತ್ರಯಗಳಿವೆ. ಮುಂಜಾನೆ ಒಲೆ ಹೊತ್ತಿದರೆ ರಾತ್ರಿ ಒಲೆ ಹೊತ್ತುವ ಭರವಸೆ ಕೂಡ ಇಲ್ಲದ ಕೋಟ್ಯಾವಧಿ ಜನರಿಗೆ ಅತ್ಮಹತ್ಯೆ ಮಾಡಿಕೊಳ್ಳುವ ದಾರಿಗಳು ಗೊತ್ತಿರಲಿಲ್ಲವೆಂದಲ್ಲ. ಆದರೆ ಬಡತನದ ಕಾರಣಕ್ಕೆ, ದಾರಿದ್ರ್ಯದ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಅವರೆದೆಗಳಲ್ಲಿ ಇನ್ನೂ ಹಾಡುಗಳಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಸರಕಾರದ ನೀತಿಗಳು, ಜಾಗತೀಕರಣದ ವಿಷವರ್ತುಲದಲ್ಲಿ ಸಿಗೆಬಿದ್ದ ಸಮಾಜದ ಹೃದಯಹೀನತೆ, ಮೋಸ, ವಂಚನೆಗಳು, ಅವರನ್ನೂ ಆತ್ಮಹತ್ಯೆಗೆ ದೂಡುತ್ತಿವೆ. ಏನೂ ಇಲ್ಲದವರಲ್ಲಿ ಸುಖ,ಶಾಂತಿ,ನೆಮ್ಮದಿ ಇಲ್ಲದಿರುವದನ್ನು ಅರ್ಥ ಮಾಡಿಕೊಳ್ಳಬಹುದು. ಎಲ್ಲ ಇದ್ದೂ ನೆಮ್ಮದಿ ಇಲ್ಲದಿರುವಿಕೆ ಮಾತ್ರ ಹೆಚ್ಚು ಸಂಕೀರ್ಣವಾದುದು. ಉನ್ನತ ಹುದ್ದೆಯಲ್ಲಿರುವ ಟೆಕಿಗಳು, ಐ ಎ ಎಸ್ ಅಧಿಕಾರಿಗಳು, ಐ ಪಿ ಎಸ್ ಅಧಿಕಾರಿಗಳು, ಮಂತ್ರಿಗಳು ಆತ್ಮಹತ್ಯೆ ಮಾಡಿಕೊಳ್ಳುವದು ಅಥವಾ ಮಾಡಿಕೊಳ್ಳಲೆತ್ನಿಸುವದನ್ನು ಹೇಗೆ ವಿವರಿಸುವದು? ಬದುಕಿನ ಬಂಡಿ ಎಲ್ಲಿ ಹಳಿ ತಪ್ಪಿದೆ?
ಈಗಿನ ಹಪಾಹಪಿಗಳು ನಮ್ಮ ಕವಿವರೇಣ್ಯರು ಹೇಳಿದ “ಕಾಣದ ಕಡಲಿಗೆ ಹಂಬಲಿಸಿದೆ ಮನ” ಅಥವ “ಇರುವದೆಲ್ಲವ ಬಿಟ್ಟು ಇರದುದರೆಡೆಡೆಗೆ ತುಡಿವುದೇ ಜೀವನ” ಎಂಬಂಥ ತಹತಹಿಕೆಗಳಲ್ಲ. ಅವು ನೆಮ್ಮದಿಯೊಂದನ್ನು ಬಿಟ್ಟು ಉಳಿದೆಲ್ಲಕ್ಕೂ ಹಂಬಲಿಸುತ್ತಿರುವಂಥ ಅಶಾಂತ ಮನಸ್ಥಿತಿಯ ಸೂಚಕಗಳು. ಅಂತೆಯೇ ನೆಮ್ಮದಿ ಮರೀಚಿಕೆಯಾಗುತ್ತಿದೆ. ಎಲ್ಲರೂ ಅದನ್ನೇ ಹುಡುಕುತ್ತಿದ್ದೇವೆ.
ನಮ್ಮೊಳಗೇ ಇರುವದೊಂದನ್ನು ನಮ್ಮಿಂದ ಹೊರಗೆ ಹುಡುಕ ಹೊರಟಿದ್ದೇವೆಯೇ? ಗೊತ್ತಿಲ್ಲ..
ಅಶೋಕ ಶೆಟ್ಟರ್ ಕಾಲಂ : ’ಎಲ್ಲೋ ಹುಡುಕಿದೆ, ಇಲ್ಲದ…’
ನಿಮಗೆ ಇವೂ ಇಷ್ಟವಾಗಬಹುದು…




ಅಶೋಕ್ ಶೆಟ್ಟರ್ ಅವರಿಗೆ– ಒಬ್ಬ ಇಮ್ಮಾರಲ್(ಅನೀತಿವಂತ,ಅನೈತಿಕ,ವಿವಾಹ ಬಾಹಿರ ಲೈಂಗಿಕ,ಸಂಬಂಧ ಹೊಂದಿರುವವನು,ಅಕ್ರಮ ಹಣ ಗಳಿಸಿರುವವನು) ಆಗಿದ್ದರೂ ಸಹ ಕರುಣೆ, ದಯಾಪರತೆ,ನ್ಯಾಯ ಪಕ್ಷಪಾತ ಕಾಯಕ ನಿಷ್ಠೆ ಮೊದಲಾದವುಗಳಲ್ಲಿ ಎಥಿಕಲ್ ಆಗಿರಬಲ್ಲನು ಎಂದಿದ್ದೀರಿ. ಇದರಿಂದ immoral ಅನ್ನು ಎತ್ತರಕ್ಕೆ ಏರಿಸಿದ್ದೀರಿ. ನಿಮ್ಮ ದೃಷ್ಟಿಯಿಂದ ನೋಡಿದರೆ ಪತ್ರಿಕೋದ್ಯಮಿ ತರುಣ್ ತೇಜ್ ಪಾಲ್ ಅವರದ್ದು ತಪ್ಪೇ ಅಲ್ಲ ಎಂದೂ ವಾದಿಸಬಹುದು. ಅದೇ ರೀತಿ ಅಕ್ರಮ ಹಣ ಗಳಿಸಿದವರೂ ಸಹ ಜನೋಪಯೋಗಿ ಕೆಲಸ ಮಾಡಿರುವ ಉದಾಹರಣೆಗಳು ನಮ್ಮಲ್ಲಿದೆ. ಅದನ್ನು ತಾವೂ ಬಲ್ಲಿರಿ. Moral ಮತ್ತು immoral ಬಗೆಗಿನ ತಮ್ಮ definition ದಾರಿ ತಪ್ಪಿಸುವಂತಹುದಾಗಿದೆ.
ಮಾನ್ಯ ಶ್ರೀರಂಗರೇ, ದಾರಿ ತಪ್ಪಬೇಡಿ. ಮಾರಲ್ ಮತ್ತು ಇಮ್ಮಾರಲ್ ಗಳ ವ್ಯಾಖ್ಯಾನ ಇಲ್ಲಿ ನನ್ನ ಉದ್ದೇಶವಲ್ಲ. ಎಥಿಕ್ಸ್ ಅನ್ನು ಮೊರಾಲಿಟಿ ಎಂದು ಕನ್ ಫ್ಯೂಜ್ ಮಾಡಿಕೊಳ್ಳುವ ಕುರಿತು ನಾನು ಅನುಷಂಗಿಕವಾಗಿ ಕೊಟ್ಟ ಉದಾಹರಣೆಗಳವು. ನನ್ನ ಮುಖ್ಯ ಉದ್ದೇಶ-ಒತ್ತು ಸುಖ ಸೌಕರ್ಯಗಳನ್ನು ಸಂತೋಷ ನೆಮ್ಮದಿ ಎಂದು ಭ್ರಮಿಸುವ ಗ್ರಹಿಕೆಗಳ ಕುರಿತಾಗಿತ್ತು.ನಿಮ್ಮ ಓದಿನಲ್ಲಿ ಅದು ಪ್ರತಿಕ್ರಿಯೆ ನೀಡಬಹುದಾದ ಆದ್ಯತೆಯದಾಗಿ ನಿಮಗೆ ಕಂಡಿಲ್ಲ.
ಇನ್ನು “ನಿಮ್ಮ ದೃಷ್ಟಿಯಿಂದ ನೋಡಿದರೆ ಪತ್ರಿಕೋದ್ಯಮಿ ತರುಣ್ ತೇಜ್ ಪಾಲ್ ಅವರದ್ದು ತಪ್ಪೇ ಅಲ್ಲ ಎಂದೂ ವಾದಿಸಬಹುದು” ಎಂಬ ನಿಮ್ಮ ಮಾತು. ತರುಣ್ ತೇಜಪಾಲ್ ಕುರಿತು “ನನ್ನ ದೃಷ್ಟಿಯಿಂದ” ಬರೆದ ಬರಹವೊಂದು “ಅವಧಿ”ಯ ನನ್ನ ಅಂಕಣ ಬರಹಗಳ ಸರಣಿಯಲ್ಲಿ ಹಿಂದೊಮ್ಮೆ ಪ್ರಕಟವಾಗಿತ್ತು. ಓದಿ..
ಹಣ, ಐಶ್ವರ್ಯ, ಅಧಿಕಾರ, ಪ್ರಸಿದ್ಧಿ ಗಳಿಸುತ್ತಿದ್ದಂತೆ ಮಾನವ ಸಂಬಂಧಗಳು ಶಿಥಿಲವಾಗುತ್ತವೆ. ತಾನು ಇತರರಿಗಿಂಥ ಮೇಲು ಎಂದು ತೋರಿಸುವ ಚಪಲ ಸಾಮಾನ್ಯ ಮನುಷ್ಯನಲ್ಲಿ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಅವಶ್ಯಕವಿಲ್ಲದಿದ್ದರೋ ತನ್ನ ನೆರೆಯವನು ಒಂದು ಕೋಟಿ ರೂಪಾಯಿಯ ಮನೆ ಕಟ್ಟಿಸಿದರೆ ತಾನು ಆತನಿಗಿಂಥ ಮೇಲು ಎಂದು ತೋರಿಸಿಕೊಳ್ಳಲು ಎರಡು ಕೋಟಿಯ ಮನೆ ಕಟ್ಟಿಕೊಳ್ಳುವ ಹುಂಬತನ ಇಂದು ಮಾನವನನ್ನು ಆವರಿಸುತ್ತಿದೆ. ತನ್ನ ನೆರೆಯವನು ಹತ್ತು ಲಕ್ಷದ ಕಾರು ಕೊಂಡರೆ ತಾನು ಇಪ್ಪತ್ತು ಲಕ್ಷದ ಕಾರು ಕೊಂಡು ತಾನು ಆತನಿಗಿಂಥ ಮೇಲು ಎನಿಸಿಕೊಳ್ಳ ಬೇಕೆಂಬ ಚಪಲ ಇಂದು ಮಾನವನನ್ನು ಆವರಿಸುತ್ತಿದೆ. ಹಿಂದೆಲ್ಲ ಗುಣವಂತನಿಗೆ ಸಮಾಜದಲ್ಲಿ ಆತ ಬಡವನಾದರೂ ಗೌರವದ ಸ್ಥಾನವಿತ್ತು. ಇಂದು ಗುಣವಂತನಿಗೆ ಸಮಾಜದಲ್ಲಿ ಗೌರವದ ಸ್ಥಾನವಿಲ್ಲ ಕೇವಲ ಹಣವಂತನಿಗೆ ಮಾತ್ರ ಬೆಲೆ ಎಂಬ ಸ್ಥಿತಿಗೆ ಬಂದು ಮುಟ್ಟಿದ್ದೇವೆ. ಹಣ ಗಳಿಸಲು ಇಂದು ಹಲವು ಅಡ್ಡದಾರಿಗಳೂ ಇರುವುದರಿಂದ ಮೌಲ್ಯಾಧಾರಿತ ಜೀವನಕ್ಕೆ ಬೆಲೆ ಇಲ್ಲದ ಪರಿಸ್ಥಿತಿ ತಲೆದೋರಿದೆ. ಗಳಿಸಿದ ಹಣ ಅಡ್ಡ ದಾರಿಯದೋ, ಭ್ರಷ್ಟಾಚಾರದ ಹಣವೋ ಎಂದು ನೋಡದೆ ಹಣವಂತನಿಗೆ ಮಣೆ ಹಾಕುವ ಪ್ರವೃತ್ತಿ ಸಮಾಜದಲ್ಲಿ ಬೆಳೆದಿರುವ ಕಾರಣ ಮಾನವ ಸಂಬಂಧಗಳು ತೋರಿಕೆಯ ಸಂಬಂಧಗಳಾಗುತ್ತಿವೆ. ಮಾನವ ಸಂಬಂಧಗಳಲ್ಲಿ ಆಳ, ಗಾಢತೆ ಇಲ್ಲ. ಇಂಥ ಪ್ರವೃತ್ತಿಯಿಂದ ನೆಮ್ಮದಿ ಮರೀಚಿಕೆಯಾಗುತ್ತಿದೆ. ಮಾನವ ಸಂಬಂಧಗಳು ಸಡಿಲವಾದರೆ ನೆಮ್ಮದಿ ಹಣದಿಂದ ಸಿಗಲು ಸಾಧ್ಯವೇ ಇಲ್ಲ. ಅದಕ್ಕೇ ಕವಿ ಬೇಂದ್ರೆಯವರು ಹಾಡಿದ್ದು ‘ನಾನು ಬಡವಿ ಆತ ಬಡವ , ಒಲವೇ ನಮ್ಮ ಬದುಕು’ ಎಂದು. ಇಂದು ಮದುವೆ ಇತ್ಯಾದಿ ಸಮಾರಂಭಗಳಿಗೆ ದೊಡ್ಡ ಹಡಗಿನಂಥ ಕಾರಿನಲ್ಲಿ ಬಂದು ಇಳಿಯುವವನಿಗೆ ಹೆಚ್ಚಿನ ಮರ್ಯಾದೆ ಸಲ್ಲುತ್ತಿದೆ ಆದರೆ ಕಾಲ್ನಡಿಗೆಯಲ್ಲಿ ಯಾವನಾದರೂ ಬಂದರೆ ಆತನನ್ನು ಮೂಸುವವರಿಗೂ ಗತಿ ಇಲ್ಲ. ಇಂಥ ಮಾನವ ಸಮಾಜವನ್ನು ಕಟ್ಟಿ ನಾವು ನೆಮ್ಮದಿ ಬೇಕೆಂದು ಅರಸಿದರೆ ಅದು ಮರೀಚಿಕೆಯೇ. ಮೌಲ್ಯಗಳಿಗೆ ಬೆಲೆ ಕೊಡುವುದನ್ನು ಸಮಾಜವು ಎಲ್ಲಿಯವರೆಗೆ ಕಲಿಯುವುದಿಲ್ಲವೊ ಅಲ್ಲಿಯವರೆಗೆ ನಮ್ಮ ಸಮಾಜ ಆಂತರಿಕ ಮನೋನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
ಇತಿಹಾಸ ಶಾಸ್ತ್ರಜ್ನರಿಂದ, ಸಮಾಜ ಶಾಸ್ತ್ರದ ಇತ್ತೀಚಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬಂದ ತುಂಬಾ ಚೆಂದಗಿನ, ಬಹಳೇ ಪ್ರಸ್ತುತವಾದ ಹಾಗೂ ಅರ್ಥಪೂರ್‍ಣ ಲೇಖನ.
ಅಶೋಕ್ ಶೆಟ್ಟರ್ ಅವರಿಗೆ–ನಿಮ್ಮ ಲೇಖನದ ಮುಖ್ಯ ಉದ್ದೇಶ ಸುಖ ಸೌಕರ್ಯಗಳನ್ನು, ಸಂತೋಷ ನೆಮ್ಮದಿ ಎಂದು ಭ್ರಮಿಸುವ ಗ್ರಹಿಕೆಗಳನ್ನು ಕುರಿತಾಗಿತ್ತು ಎಂದಾದರೆ ನನ್ನನ್ನು “ದಾರಿ ತಪ್ಪಿಸಿದ” ತಮ್ಮ ಲೇಖನದ ಆ ಪ್ಯಾರ ಬೇಕಾಗಿರಲಿಲ್ಲ ಅಲ್ಲವೇ?
ಆನಂದ ಪ್ರಸಾದ್ ಅವರಿಗೆ– ಬಡತನದ ಬಗ್ಗೆ ತಮ್ಮದು ತೆಳು “ರೋಮಾಂಟಿಕ್” ಕಲ್ಪನೆ. ಹೊಸ ಕನ್ನಡ ಸಾಹಿತ್ಯದ ಪ್ರಗತಿಶೀಲರ ಕಾಲದ್ದು.
ನೆಮ್ಮದಿ ಎಂಬುದು ಹಣ, ಅಂತಸ್ತು, ಭೌತಿಕ ಭೋಗ ಸಾಮಗ್ರಿಗಳಲ್ಲಿ ಇಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಮನುಷ್ಯನಿಗೆ ನೆಮ್ಮದಿಯ ಜೀವನಕ್ಕೆ ಎಷ್ಟು ಭೋಗ ಸಾಮಗ್ರಿ ಬೇಕು ಎಂಬುದಕ್ಕೆ ಇಂದು ಮಿತಿಯೇ ಇಲ್ಲವಾಗಿದೆ. ಜೀವನವಿಡೀ ಭೋಗ ಸಾಮಗ್ರಿಗಳನ್ನು ಕೂಡಿ ಹಾಕುವುದರಲ್ಲಿಯೇ ಕಳೆಯುವ ಜನರು ನೆಮ್ಮದಿಯ ಜೀವನದಿಂದ ದೂರವಾಗುತ್ತಾರೆ. ಒಂದು ಒಳ್ಳೆಯ ಸಂಗೀತ ಕೇಳುವುದರಿಂದಾಗಲೀ, ಒಂದು ಒಳ್ಳೆಯ ಸಾಹಿತ್ಯ ಓದುವುದರಿಂದಾಗಲೀ ಪಡೆಯಬಹುದಾದ ಸಂತೋಷವನ್ನು ಭೋಗ ಸಾಮಗ್ರಿಗಳ ಹಿಂದೆ ಓಡುವ ಮನುಷ್ಯರು ಪಡೆಯಲಾರರು. ಕೋಟಿಗಟ್ಟಲೆ ಗಳಿಸುವ ಶ್ರೀಮಂತನೂ ಜೀವನಕ್ಕೆ ತಕ್ಕಮಟ್ಟಿಗೆ ಸಂಪಾದಿಸುವ ಸಾಮಾನ್ಯ ಮನುಷ್ಯರೂ ಉಸಿರಾಡುವುದು ಇದೇ ಗಾಳಿಯನ್ನು, ತಿನ್ನುವುದು ಇದೇ ಅನ್ನವನ್ನು. ಹೀಗಿದ್ದರೂ ಮೇಲು ಕೀಳು ಎಂದು ತೋರ್ಪಡಿಸುವ ಮನುಷ್ಯರು ಮನೋವಿಕಾಸದಲ್ಲಿ, ನಾಗರಿಕತೆಯೆ ವಿಕಾಸದಲ್ಲಿ ಹಿಂದೆ ಇದ್ದಾರೆ ಎಂದೇ ಹೇಳಬೇಕಾಗುತ್ತದೆ.
ಲೇಖನದ ಪ್ರಾರಂಭದಲ್ಲಿ ಹೇಳಿರುವ ಒಂದು ವಿಷಯ “ಒಂದು ಧರ್ಮವನ್ನು ಹೀಗೆ ನೇರವಾಗಿ ಒಂದು ಭಾಷೆಗೆ ಸಮೀಕರಿಸಬಾರದು, ಧರ್ಮಕ್ಕೂ ಭಾಷೆಗೂ ಸಂಬಂಧವಿಲ್ಲ” ಇದು ಪೂರ್ಣ ವಾಗಿ ಒಪ್ಪ ತಕ್ಕಂತ ಮಾತೆ. ಆದರೆ ಅದನ್ನು ಹೇಳುತ್ತಾ.. ತಾವು “ಹಿಂದಿ ತನ್ನೊಳಗೆ ಉರ್ದು ಭಾಷೆಯ ವೊಕ್ಯಾಬ್ಯುಲರಿ ತುಂಬಿಕೊಂಡಿದ್ದರೂ, ಉರ್ದು ಭಾಷೆಗಿಂತ ಭಿನ್ನವಾದ ಭಾಷೆ” ಇದು ಮಾತ್ರ ಸರಿ ಅಲ್ಲ ಎನಿಸುತ್ತದೆ.
ಹಾಗೆ ನೋಡಿದರೆ ೧೩ ನೆ ಶತಮಾನದ ಸುಲ್ತಾನರು, ಮೊಗಲರ ಕಾಲದಿಂದ,ನಂತರದ ಬ್ರಿಟಿಷರ ಕಾಲದ ವರೆಗೆ ಎರಡು ಒಂದೆ ಭಾಷೆ ಎಂದು ಕರೆಯಲ್ಪಡುತ್ತಿದ್ದವು. ಬಹುಶಃ ಇದನ್ನು ಹಿಂದೂಸ್ತಾನಿ ಭಾಷೆ ಎಂದು ಕರೆಯುತ್ತಿದ್ದರು ಎನಿಸುತ್ತದೆ ಮತ್ತು ಇದಕ್ಕಾಗಿ ಉರ್ದು ಲಿಪಿಯನ್ನು ಬಳಸುತ್ತಿದ್ದರು. ಬ್ರಿಟಿಷರ ಕಾಲದಲ್ಲಿಯೂ ಉರ್ದು ಲಿಪಿಯಲ್ಲಿ ಬರೆಯಲ್ಪಡುವ ಹಿಂದುಸ್ತಾನಿ ಭಾಷೆ ಉತ್ತರ ಭಾರತದ ಜನರ ಅಧಿಕೃತ ಭಾಷೆ ಎಂದು ತಿಲಿಯಲ್ಪಟ್ಟಿತ್ತು. ಮುಂದೆ ಸ್ವಾತಂತ್ರ್ಯ ನಂತರ ದೇಶ ಇಬ್ಬಾಗವಾದ ನಂತರ ಭಾರತದಲ್ಲಿರುವವರು ಹಿಂದುಸ್ತಾನಿಯನ್ನು ಸಂಸ್ಕೃತ ಲಿಪಿಯಲ್ಲಿ (ಬೇರೆ ದಾರಿ ಇಲ್ಲದೆ)ಬರಯಲು ಪ್ರಾರಂಭಿಸಿದ ಮೇಲೆ ಹಿಂದಿ ಎನ್ನುವ ಹೊಸ ಶಬ್ದ ಪ್ರಯೋಗ ಪ್ರಾರಂಭ ವಾಯಿತು.
ಆದ್ದರಿಂದ ಹಿಂದಿ ಮತ್ತು ಉರ್ದು ಗಳನ್ನೂ ಒಂದೆ ಭಾಷೆಯ ಎರಡು ಶೈಲಿಗಳು ಎಂದು ಹೇಳಬಹುದು.ಇವೆರೆದಕ್ಕು ಮೂಲ ದಿಲ್ಲಿ ಆಸುಪಾಸು ಮಾತನಾಡಲ್ಪಡುವ
ಕಾರಿ ಬೊಲಿ ಎಂಬ ಶೈಲಿ…ಇದರಿಂದಲೇ ಮಾತನಾಡುವಾಗ ಎರಡು ಒಂದೆ ಎನಿಸುತ್ತವೆ. ಆದರೆ ಹಿಂದಿ ಗ್ರಾಂಥಿಕ ವಾಗಿ ಬಹಳಷ್ಟು ಸಂಸ್ಕೃತ ಶಬ್ದ ಗಳನ್ನೂ ಬಳಸಿಕೊಳ್ಳುತ್ತದೆ.ಇದಿಷ್ಟೇ ಎರಡರ ನಡುವಿನ ವ್ಯತ್ಯಾಸ ಎನ್ನುವದು ನನ್ನ ಅಭಿಪ್ರಾಯ.
Hindi is also a very modern language which borrowed from dialects like Khari Boli, Avadh, Bhojpuri etc. So did Urdu/ Hindustani. The contribution of Dakkani to Urdu/ Hindustani is also immense. In fact the ‘baba Adam’ of Urdu poetry is Wali Dakkani. The difference between Hindi and Urdu/ Hindustani is not just the script but more. Hindi, which uses Devnagri script not Sanskrit (Sanskrit doesnt have a script of its own), is quite Sanskritized and Urdu/ Hindustani, which uses Arabic script not Urdu (Urdu doesnt have a script of its own), has quite a heavy Persian influence. True that till the third fourth decade of the 20th century the division between Urdu/ Hindustani and Hindi wasnt much. The Hindi nationalism had clearly started pre-Independence and Gandhi had batted for Hindustani as the national language with two scripts. But it did not happen. Hate politics that killed Gandhi started, in post independence India, to brand Urdu as a Muslim language. Simultaneously Hindi was being “purified” off Persian influences, in India and in Pakistan it being the state language was being “purified” into more and more close to Persian. As a result, in both India and Pakistan, Urdu/ Hindustani, a syncretic language and a representative of syncretic culture started eroding.
Sikkapatte ishtavaythu
ಸಂಪೂರ್ಣ ಆಂಧ್ರದಲ್ಲಿ ಉರ್ದೂ ಭಾಷಾ ಬಳಕೆ ಇಲ್ಲದಿರುವುದು ಮತ್ತು ನಿಜಾಂರ ಸಮ್ಮಿಲನದ ಕುರುಹಾಗಿ ದ್ವಿತಿಯ ಭಾಷೆಯಾಗಿ ಉರ್ದೂವನ್ನು ಅವರು ಒಪ್ಪಿಕೊಂಡಿರುವುದು ಬಹುಶಃ ಆತನ ಅಸಹನೆಗೆ ಕಾರಣವಿರಬಹುದು.