
ನನ್ನ ಪರಿಸರದಲ್ಲಿ ನಮ್ಮ ಮನೆಗೆಲಸಕ್ಕೆ ಬರುವವರೋ, ಕೂಲಿ ನಾಲಿ ಮಾಡುವವರೋ ತಮ್ಮ ಮಕ್ಕಳೊಂದಿಗೆ ಬಂದಾಗ ನಾನು ಸಾಮಾನ್ಯವಾಗಿ ಆ ಮಕ್ಕಳನ್ನು ಸ್ಕೂಲಿಗೆ ಹೋಗ್ತೀಯಾ ಎಂದು ಕೇಳುತ್ತೇನೆ. ಹೌದಾದರೆ ಯಾವ ಸ್ಕೂಲು ಯಾವ ಕ್ಲಾಸು ಎಂದೆಲ್ಲ ಕೇಳುತ್ತೇನೆ. ಇಲ್ಲ ಎಂದಾದರೆ ಆ ಮಗುವನ್ನು ವಿಳಂಬ ಮಾಡದೇ ಯಾವುದಾದರೂ ಸ್ಕೂಲಿಗೆ ಸೇರಿಸು ಎಂದು ತಂದೆ/ತಾಯಿಗೆ ಹೇಳುತ್ತೇನೆ.”ಸ್ಕೂಲಿಗೆ ಹೋಗ್ತಿದ್ದನ್ರೀ, ಈಗ ಬಿಟ್ಟಾನ್ರಿ” ಎಂದು ಹೇಳಿದಾಗಲೂ ಈ ಕೆಲಸಕ್ಕೆ ಮಕ್ಕಳನ್ನು ಕರೆದೊಯ್ಯುವದನ್ನು ನಿಲ್ಲಿಸು, ಮತ್ತೆ ಶಾಲೆಗೆ ಕಳಿಸು ಎನ್ನುತ್ತೇನೆ. ಹನ್ನೊಂದು ವರ್ಷಗಳ ಹಿಂದೆ ನಾನು ಮನೆ ಕಟ್ಟಿಸುತ್ತಿದ್ದಾಗ ನಮ್ಮ ಮನೆ ಕಟ್ಟಡ ಕೆಲಸದ ಮೇಸ್ತ್ರಿಯ ಮಗ ಏಳನೆಯ ಕ್ಲಾಸಿನಲ್ಲಿ ಮನೆಯಲ್ಲೇ ಎಲ್ಲ ಬಡತನ, ಅನಾನುಕೂಲಗಳ ನಡುವೆ ಓದಿ ನೂರಕ್ಕೆ ತೊಂಬತ್ತಕ್ಕೂ ಮೀರಿ ಅಂಕ ಪಡೆದದ್ದು ಕೇಳಿ ಅವನನ್ನು ಈ ಕೂಡಲೇ ಹೈಸ್ಕೂಲ್ ಗೆ ಸೇರಿಸು ಎಂದು ಹೇಳಿದ್ದೆ. ಅವನ ಜಾತಿಯದೋ ಇನ್ನೊಂದೋ ದಾಖಲೆ ಇರಲಿಲ್ಲ. ಪ್ರವೇಶಕ್ಕೆ ಅಂದೇ ಕೊನೆ ದಿನವಾದರೂ ಈಗಾಗಲೇ ಪ್ರವೇಶಕ್ಕಾಗಿ ಅರ್ಜಿ ಕೊಟ್ಟಿರದಿದ್ದರೂ ಅವನ ಇತರ ದಾಖಲೆಪತ್ರಗಳ ಸಮೇತ ಈಗಿಂದೀಗಲೇ ಹೋಗಿ ಯೂನಿವರ್ಸಿಟಿ ಪಬ್ಲಿಕ್ ಸ್ಕೂಲ್ ನಲ್ಲಿ ಅಧ್ಯಾಪಕರೆಂದು ಕೆಲಸ ಮಾಡುತ್ತಿದ್ದ ನನ್ನ ಸಂಬಂಧಿಯೊಬ್ಬರನ್ನು ಕಾಣು ಎಂದು ಹೇಳಿ ಕಳಿಸಿ ಅವರಿಗೆ ಫೋನ್ ಮಾಡಿ ತಿಳಿಸಿದ್ದೆ. ಅಂದು ನನ್ನ ಮನೆಗೆ ಸ್ಲ್ಯಾಬ್ ಆಗಬೇಕಿದ್ದ ದಿನ. ಆ ಗಡಿಬಿಡಿಯಲ್ಲೇ ಹೋಗಿ ಕೊನೆಗೂ ತನ್ನ ಮಗ ಹೈಸ್ಕೂಲ್ ಕಟ್ಟೆ ಹತ್ತಿದ ಎಂಬ ಸಮಾಧಾನದಿಂದ ಆತ ಅವಸರವಸವಾಗಿ ಮರಳಿ ಬಂದು ಸ್ಲ್ಯಾಬ್ ಕೆಲಸಕ್ಕೆ ಇನ್ನಿಲ್ಲದ ಹುರುಪಿನಿಂದ ತೊಡಗಿದ್ದು ನೋಡಿದ್ದೆ.
ಒಮ್ಮೆ ಶಾಲೆಗೆ ಹೋಗತೊಡಗಿದ ನಂತರ ಅದು ಒಬ್ಬ ವ್ಯಕ್ತಿಯನ್ನು ಬದುಕಿನ ಯಾನದ ಯಾವ ಹಂತದಲ್ಲಿ ಯಾವದಿಕ್ಕಿಗೆ ಕೊಂಡೊಯ್ಯುತ್ತದೆ ಎಂಬುದು ನಮ್ಮ ಊಹೆಗೆ ನಿಲುಕಿರುವದಿಲ್ಲ. ಅಂದು ನನ್ನ ತಂದೆ/ತಾಯಿ ನನ್ನನ್ನು ಶಾಲೆಯೊಂದಕ್ಕೆ ಕೊಂಡೊಯ್ದು ನನ್ನ ಹೆಸರನ್ನು ಅಲ್ಲಿ ವಿದ್ಯಾರ್ಥಿ ಅಂತ ನೋಂದಾಯಿಸಿರಲಿಲ್ಲ ಎಂದರೆ ಇಂದು ನಾನು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ, ಇಂದು ನನ್ನ ಬದುಕು ಹೀಗಿರುತ್ತಿರಲಿಲ್ಲ ಎಂದು ಅಸಂಖ್ಯಾತ ಜನ ಇಂದು ಅಂದುಕೊಳ್ಳುತ್ತಿರುತ್ತಾರೆ. ವಯೋಮಾನದ ಒಂದು ಪ್ರಾರಂಭಿಕ ಹಂತದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಕೊಡಮಾಡುವದು ತೀರ ಸಹಜ ಎನ್ನುವಂತಿದ್ದ ಬ್ರಾಹ್ಮಣರೇ ಮೊದಲಾದ ಮೇಲ್ಜಾತಿಗಳ ಕುರಿತು ನಾನು ಹೇಳುತ್ತಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಬ್ರಾಹ್ಮಣೇತರ ಮೇಲ್ವರ್ಗ, ಮೇಲ್ಜಾತಿಗಳ ಜನ ಕೂಡ ಶಿಕ್ಷಣದ ಮಹತ್ವವನ್ನು ಅರಿತದ್ದು ತಡವಾಗಿಯೇ. ಇನ್ನು ದಲಿತ, ಹಿಂದುಳಿದ ಮಕ್ಕಳಿಗಂತೂ ಶಿಕ್ಷಣಕ್ಕೂ ಅವರಿಗೂ ಏನು ಸಂಬಂಧ ಎಂಬಂತೆ ಇತ್ತು ಪರಿಸ್ಥಿತಿ.
ಕುಂ.ವೀರಭದ್ರಪ್ಪನವರು “ಗಾಂಧಿ ಕ್ಲಾಸು” ಎಂಬ ತಮ್ಮ ಆತ್ಮಕತೆಯಲ್ಲಿ ದಾಖಲಿಸಿದಂತೆ ತಾವು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಕರ್ನಾಟಕ ಆಂಧ್ರ ಗಡಿಯ ಕುಗ್ರಾಮಗಳಲ್ಲಿ ಬಡ, ಹಿಂದುಳಿದ ಅಸ್ಪೃಶ್ಯ ಕುಟುಂಬಗಳ ದಟ್ಟದರಿದ್ರ ಹಿನ್ನೆಲೆಯ ಬಾಲಕ ಬಾಲಕಿಯರನ್ನು ಅವರ ತಂದೆ ತಾಯಿಯರಿಗೆ ಇನ್ನಿಲ್ಲದಂತೆ ತಿಳಿಹೇಳಿ ಶಾಲೆಗೆ ಪ್ರವೇಶ ಕೊಟ್ಟ ಕಾರಣಕ್ಕೆ ಸ್ಥಳೀಯ ಫ್ಯೂಡಲ್ ವರ್ಗದ ಜನಗಳ ಕೆಂಗಣ್ಣಿಗೆ ಗುರಿಯಾಗಿ ತಾವು ಅನುಭವಿಸಿದ ತೊಂದರೆ ತಾಪತ್ರಯಗಳ ಚಿತ್ರಣವನ್ನು ಈ ಪರಿಸ್ಥಿತಿಯ ಉದಾಹರಣೆಯಾಗಿ ನೋಡಬಹುದು. ಹಾಗೆ ಅವರಿಂದ ಪ್ರೇರಿತರಾಗಿ ಶಿಕ್ಷಣ ಪಡೆದು ಉನ್ನತ ಹಂತದ ಶಿಕ್ಷಣವನ್ನೂ ಮುಗಿಸಿ ಗೌರವಾನ್ವಿತ ಬದುಕು ರೂಪಿಸಿಕೊಂಡವರು ಅವರಿಗೆ ಪತ್ರ ಬರೆದು ಕೃತಜ್ಞತೆ ಸೂಚಿಸಿದ ಉಲ್ಲೇಖಗಳೂ ಅದರಲ್ಲಿ ಬರುತ್ತವೆ. ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ತಾಂತ್ರಿಕ, ವೈದ್ಯಕೀಯ ಶಿಕ್ಷಣವನ್ನೂ ಒಳಗೊಂಡು ಉನ್ನತ ಶಿಕ್ಷಣವನ್ನು ನಿಮ್ನ ವರ್ಗದವರು ಪಡೆಯುತ್ತಿದ್ದಾರೆ.
ಶಿಕ್ಷಣ ಎಲ್ಲರ ಬದುಕಿನಲ್ಲೂ ಏಕಪ್ರಕಾರದ ಬದಲಾವಣೆ ತರುತ್ತದೆಂದಲ್ಲ. ವಿದ್ಯೆ ಎಲ್ಲರ ತಲೆಗೆ ಹತ್ತುತ್ತದೆಂದೂ ಅಲ್ಲ. ಆದರೆ ವಿದ್ಯೆಯ ಕುರಿತು ಯಾವುದೋ ಒಂದು ಹಂತದಲ್ಲಿ ವ್ಯಾಮೋಹ ಆಸಕ್ತಿ ಬೆಳೆಯುವದಿಲ್ಲ ಎಂದೂ ಹೇಳಲಾಗುವದಿಲ್ಲ. ಇಂದು ನನ್ನ ತಂದೆ ನನ್ನನ್ನು ಒಂದ್ಯಾವುದೋ ಗಳಿಗೆಯಲ್ಲಿ ಬೈಲಹೊಂಗಲದ ಸರಕಾರಿ ಶಾಲೆಯೊಂದಕ್ಕೆ ಕರೆದುಕೊಂಡು ಹೋಗಿ ಹೆಸರು ನೋಂದಾಯಿಸಿರಲಿಲ್ಲವೆಂದರೆ ನನ್ನ ಬದುಕಿನ ಸ್ವರೂಪ ಬೇರೆಯೇ ಅಗಿರಬಹುದಿತ್ತು. ನಿಜ ಹೇಳಬೇಕೆಂದರೆ ನನಗೆ ಶಾಲೆಗೆ ಹೋಗುವದೆಂದರೇ ಆಗಿ ಬರುತ್ತಿರಲಿಲ್ಲ. ಮೊದಲ ಒಂದೆರಡು ವರ್ಷ ಹದಿನಾರು ಗಡಗಡೆ ಬಾವಿ ಎಂದು ಕರೆಯುವ ಬಲು ದೊಡ್ಡ ಬಾವಿಯೊಂದರ ಸಮೀಪ ಇದ್ದ ಕಟ್ಟಡವೊಂದರಲ್ಲಿ ಒಂದೆರಡು ವರ್ಷ ನಮ್ಮ ಶಾಲೆ ಇತ್ತು. ೧೯೬೪ ರಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ನಿಧನರಾದ ಪ್ರಯುಕ್ತ ಶಾಲೆಗೆ ರಜೆ ಘೋಷಿತವಾಗಿ ಅವಧಿಗೆ ಮೊದಲೇ ನಾನು ಮನೆ ಸೇರಿದ್ದು ಆ ಶಾಲೆಯಲ್ಲಿದ್ದಾಗಲೇ. ಆಮೇಲೆ ಎರಡು ವರ್ಷ ಕಿತ್ತೂರು ಚೆನ್ನಮ್ಮನ ಸಮಾಧಿಯ ಹಿಂಭಾಗದಲ್ಲಿ ಕಲ್ಮಠ ಶಾಲೆ ಎಂದು ಕರೆಯುವ ಕೆಂಪು ಹೆಂಚಿನ ಕಟ್ಟಡವೊಂದಕ್ಕೆ ನಾವು ವರ್ಗಾವಣೆಯಾದೆವು. ಅಕ್ಷರಗಳು, ಸ್ವರ, ವ್ಯಂಜನ, ಶುದ್ಧ ಬರಹ, ಅಂಕಿ ಇಂಥವುಗಳನ್ನು ಅಲ್ಲಿ ಅಷ್ಟಿಷ್ಟು ಮಾಡುತ್ತಿದ್ದೆನೆಂದು ತೋರುತ್ತದೆ. ಆದರೆ ಮಗ್ಗಿ ಎಂದರೆ ನನ್ನ ಕುತ್ತಿಗೆಯ ಸುತ್ತ ಬರುತ್ತಿತ್ತು. “ನಾಕೊಂದ್ ನಾಕೋ ನಾಕೆಲ್ಡೆಂಟೋ ನಾಕ್ ಮೂರ್ ಹನ್ನೆಲ್ಡ್ ನಾಕ್ನಾಕ್ ಹದ್ನಾರ್” ಎಂದು ಒಂದು ನಿಶ್ಚಿತ ಧಾಟಿಯಲ್ಲಿ ಹಾಡು ಹಾಡುವವರಂತೆ ಮತ್ತು ಹೊಟ್ಟೆಕಿಚ್ಚಿಗೆ ಒದರುತ್ತಿದ್ದೆವೋ ಎಂಬಂತೆ ಇಡೀ ಕ್ಲಾಸು ಒಕ್ಕೊರಲಿನಲ್ಲಿ ಒದರುತ್ತ ಮಗ್ಗಿ ಕಲಿಯುತ್ತಿದ್ದೆವಾದರೂ ಒಬ್ಬೊಬ್ಬರನ್ನು ಎಬ್ಬಿಸಿ ಮಾಸ್ತರು “ಒಂಬತ್ತೇಳಲೇ ಎಷ್ಟ್ ಹೇಳು” ಇತ್ಯಾದಿ ಕೇಳಿದರೆ ತಪ್ಪು ತಪ್ಪಾಗಿ ಹೇಳಿ ಹೊಡೆಸಿಕೊಳ್ಳುವದು ಖಾತ್ರಿ ಇರುತ್ತಿತ್ತು. ಸರಿಯಾಗಿ ಉತ್ತರಿಸಿದವನನ್ನು ಕರೆದು ಮಾಸ್ತರನು ತಪ್ಪಾಗಿ ಹೇಳಿದವನತ್ತ ಕೈತೋರಿ “ ಅವನ ಮೂಗ ಹಿಡದ ಕಪಾಳಕ ಹೊಡಿ” ಎಂದು ಅಜ್ಞಾಪಿಸುತ್ತಿದ್ದರು. ಆ ಜಾಣ ನನ್ಮಗನ್ಯಾವನೋ ಒಬ್ಬನು ಬಂದು ನಮ್ಮಂಥ ದಡ್ಡರ ಕೆನ್ನೆ ಬಿಸಿಯಾಗುವಂತೆ ಹೊಡೆದು ಬೀಗುತ್ತ ತನ್ನ ಸ್ಥಾನಕ್ಕೆ ಮರಳಿ ಹೋಗುತ್ತಿದ್ದ. ಹೊರಗೆ ಅವನು ಸಿಕ್ಕಾಗ ಕೆದರಿ ಜಗಳ ತೆಗೆದು ಅವನನ್ನು ತದುಕಿ ನಾವು ಹಗೆ ತೀರಿಸಿಕೊಳ್ಳುತ್ತಿದ್ದೆವು ಆ ಮಾತು ಬೇರೆ. ಆದರೆ ಮಗ್ಗಿಯ ದೆಸೆಯಿಂದಾಗಿ ನಾನು ಹಲವು ಸಲ ಏಟು ತಿನ್ನಬೇಕಾಗಿತ್ತು. ನನಗೆ ಆಗ ಹತ್ತರವರೆಗೆ ಮಗ್ಗಿ ಹೇಳುವದು ಮಾತ್ರ ಸುಲಭವಿತ್ತು. ಅದನ್ನು ಮೀರಿದವುಗಳಲ್ಲಿ ಹನ್ನೊಂದರ ಮಗ್ಗಿ ಮತ್ತು ಇಪ್ಪತ್ತರ ಮಗ್ಗಿ ಹೇಳುವದು ನನಗೆ ಇಷ್ಟವಾಗುತ್ತಿತ್ತು. ಏಕೆಂದರೆ ಅವುಗಳನ್ನು ಹೇಳುವದು ಕಷ್ಟವಿರಲಿಲ್ಲ. ಆದರೆ ಮಾಸ್ತರು ಹದಿಮೂರರ ಮಗ್ಗಿ ಹೇಳು, ಹದಿನಾರರ ಮಗ್ಗಿ ಹೇಳು ಎನ್ನುತ್ತಿದ್ದರು. ಇವೊತ್ತಿಗೂ ನನ್ನ ಮಗ್ಗಿ “ಹದಿಮೂರ್ ನಾಕಲೇ ಐವತ್ತೆರ್ಡ್” ಆದ ನಂತರದಿಂದ ಮುಂದೆ ಮುಗ್ಗರಿಸುತ್ತದೆ.

ಅಮೇಲೆ ಐದನೇ ಕ್ಲಾಸಿಗೆ ಬಂದಾಗ ಊರ ಹೊರಗೆ, ಹೊಲಗೇರಿಯಿಂದಲೂ ಹೊರಗೆ, ಆನಿಗೋಳ ಅಗಸಿ ಎಂಬಲ್ಲಿ ಕಟ್ಟಿಗೆ ಕೊರೆಯುವ ಅಡ್ಡೆಗಳು (ಸಾ ಮಿಲ್ಸ್) ಇರುವ ಪರಿಸರದಲ್ಲಿ ಇದ್ದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.೧ ಎಂಬಲ್ಲಿಗೆ ನಾವು ಹೋಗಬೇಕಾಯಿತು. ಅದು ನಾವಿದ್ದ ಮನೆಯಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರದಲ್ಲಿತ್ತು. ಈಗಿನಂತೆ ಬಸ್ಸು,ರಿಕ್ಷಾಗಳಲ್ಲಿ ಹೋಗುವ ವಾತಾವರಣವೇ ಆಗ ಇರಲಿಲ್ಲ. ಬರಿಗಾಲ ನಡಿಗೆ, ಅಷ್ಟೇ. ಅದೊಂದು ದೊಡ್ಡ ಬೋರಿಂಗ್ ಅವಧಿಯಾಗಿತ್ತು. ಶಾಲೆಯಲ್ಲಿ ನನಗೆ ಆಸಕ್ತಿಯೇ ಇರಲಿಲ್ಲ. ಶಾಲೆಗೆಂದು ಹೊರಡುತ್ತಿದ್ದೆ, ಮಾರ್ಗ ಮಧ್ಯೆ ಹಾವಾಡಿಗರ ಆಟ ನೋಡುತ್ತ ಅಥವಾ ದೊಂಬರಾಟದವರು ಬಂದಿದ್ದರೆ ಅದನ್ನು ನೋಡುತ್ತ ಕುಳಿತು ಬಿಡುತ್ತಿದ್ದೆ. ಒಬ್ಬ ಡೋಲು ಬಾರಿಸುತ್ತ, ಇನ್ನೊಬ್ಬ ಪುಂಗಿ ಊದುತ್ತ, ಒಂದು ಹಸಿರು ಅಥವಾ ನೀಲಿ ಬಣ್ಣದ ಕಬ್ಬಿಣದ ಟ್ರಂಕಿಗಾನಿಸಿಟ್ಟ ಧರ್ಮಸ್ಥಳದ ಮಂಜುನಾಥನ ಫೋಟೋ, ಒಂದು ಮಲ್ಲ್ಯಾಡ್ ಚೌಡಿ ಎಂದು ಅವನು ತೋರಿಸುತ್ತಿದ್ದ ಹೆಣ್ಣು ಬೊಂಬೆ ಮತ್ತು ಹತ್ತಾರು ದುಂಡನೆಯ ಬಿದಿರಿನ ಬುಟ್ಟಿಗಳಿದ್ದ ತಮ್ಮ ಸರಂಜಾಮಿನ ಸುತ್ತ ಜನರೆಲ್ಲ ವರ್ತುಲಾಕಾರವಾಗಿ ನೆರೆಯುವಂತೆ ಮಾಡುತ್ತಿದ್ದರು. ಅನುಕ್ರಮವಾಗಿ ದೊಡ್ಡ ದೊಡ್ಡದಾಗಿರುತ್ತಿದ್ದ ತಮ್ಮ ಎಲ್ಲ ಬುಟ್ಟಿಗಳಲ್ಲಿದ್ದ ಹಾವುಗಳನ್ನು ಹಾವಾಡಿಗನು ತೋರಿಸಿ, ಅವಕ್ಕೆ ತಿವಿದು ಅವುಗಳನ್ನು ಹಿಸ್ಸೆನ್ನಿಸಿ, ಥರಾವರಿ ಮಾತನಾಡುತ್ತಿರಬೇಕಾದರೆ ತೀರ ಸಣ್ಣ ಪುಟ್ಟಿಯಲ್ಲಿದ್ದ, ಅವನು ಬಹುವಾಗಿ ವರ್ಣಿಸಿದ್ದ ಮಿಡಿ ನಾಗರ ಹಾವನ್ನು ಈಗ ತೋರಿಸುತ್ತಾನೆ ಇನ್ನು ಸ್ವಲ್ಪ ಹೊತ್ತಿಗೆ ತೋರಿಸುತ್ತಾನೆ ಎಂದು ಕಾಯುತ್ತ ನಾನು ಕುಳಿತೇ ಇರುತ್ತಿದ್ದೆ. ಅವನು ಹಾವಿನ ಕಡಿತಕ್ಕೆ ಎಂದು ಬೇರು, ದುಸ್ವಪ್ನ, ರೋಗರುಜಿನಗಳಿಗೆ ಪರಿಹಾರವೊದಗಿಸುತ್ತದೆ ಎಂದು ಬೂಸಿ ಬಿಟ್ಟು ತಾಯಿತ ಎಲ್ಲ ಮಾರಿ, ಅವನ್ನು ಕೊಂಡು ಜನರೆಲ್ಲ ಚೆದುರಿ ತಾನು ಹಣ ಎಣಿಸಿಕೊಂಡು ಲುಂಗಿಯ ಗಂಟಿನಲ್ಲಿ ಸಿಕ್ಕಿಸಿಕೊಂಡ ಮೇಲೂ ಕುಳಿತಿದ್ದ ನನ್ನನ್ನು “ತಮ್ಮಾ ಆಟ ಮುಗಿಯಿತು ನೀನೂ ಮನೆಗೆ ಹೋಗು” ಎನ್ನುವ ವರೆಗೆ ಕುಳಿತೇ ಇರುತ್ತಿದ್ದೆ.
ನಾನೇ ಪಾಸಾಗುತ್ತ ಬಂದೆನೋ ಮಾಸ್ತರೇ ಪಾಸು ಮಾಡುತ್ತ ಹೋದರೋ ಒಟ್ಟಿನಲ್ಲಿ ನನ್ನ ಕಲಿಕೆಯ ಗಾಡಿ ಎಸ್.ಎಸ್.ಎಲ್.ಸಿ ವರೆಗೆ ಯಾವ ಅಡೆತಡೆ ಇಲ್ಲದೇ ಮುಂದುವರಿದುಕೊಂಡು ಬಂದಿತು. ಹೈಸ್ಕೂಲಿಗೆ ಸೇರಿದ ಮೇಲೆ ಈಜು ನನ್ನ ಮುಖ್ಯ ಗೀಳಾಯಿತು. ನಾನು ಹಾಗೂ ಕರೆಮ್ಮಿ ಮತ್ತು ಆರೇಬೆಂಚಿ ಎಂಬ ನನ್ನಿಬ್ಬರು ಗೆಳೆಯರು ಬೈಲಹೊಂಗಲದಲ್ಲಿ ಬೆಲ್ಲದ್ ಮತ್ತು ಮೆಟಗುಡ್ ಎಂಬುವರ ತೋಟಗಳ ನಡುವೆ ಇದ್ದ ಎರಡು ವಿಶಾಲವಾಗಿದ್ದ ಜನ ಈಜುತ್ತಿದ್ದ ಬಾವಿಗಳನ್ನು ಈಜಲು ಗುತ್ತಿಗೆ ಹಿಡಿದಿದ್ದೇವೇನೋ ಎಂಬಂತೆ ಅಲ್ಲಿ ಮೂರು ವರ್ಷ ಈಜಿದೆವು. ಈಜುವದೆಂದರೇನು ಅದು ದಿನಪೂರ್ತಿಯ ಪರೇಡ್. ಸೂರ್ಯೋದಯದೊಂದಿಗೆ ಪ್ರಾರಂಭವಾಗುತ್ತಿದ್ದ ಅದು ಮನೆಗೆ ಬಂದು ತಿಂಡಿ ತಿಂದುಕೊಂಡು ಹೋಗಿ ಮತ್ತೆ ಮುಂದುವರಿಯುತ್ತಿತ್ತು. ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಮತ್ತೆ ಈಜಲು ಬಾವಿಗೆ ಹೋದರೆ ಸಂಜೆ ಸೂರ್ಯಾಸ್ತದ ವರೆಗೆ ಅದೇ ಕೆಲಸ. ಮೂರು ಜನ್ಮಕ್ಕಾಗುವಷ್ಟು ಈಜಿದೆವು. ಶಾಲೆಯಲ್ಲಿದ್ದುದಕ್ಕಿಂತ ಹೆಚ್ಚಾಗಿ ನಾವು ಜಲಚರಗಳಂತೆ ಬಾವಿಗಳಲ್ಲಿ ಇದ್ದುದೇ ಹೆಚ್ಚು.
ಆ ಈಜಿನ ಕೃಪೆಯಿಂದ ಅಲ್ಲಿಯ ವರೆಗೆ ಸರಾಗವಾಗಿ ಸಾಗಿ ಬಂದಿದ್ದ ನನ್ನ ಕಲಿಕೆಯ ಗಾಡಿ ಮುಗ್ಗುರಿಸಿತು. ನಾನು ಎಸ್. ಎಸ್. ಎಲ್. ಸಿ ಯಲ್ಲಿ ಫೇಲಾದೆ. ನನ್ನ ಆ ಇಬ್ಬರೂ ಗೆಳೆಯರೂ ಫೇಲಾಗಿದ್ದರು. ಏನಾಶ್ಚರ್ಯ, ಶನಿಸಮಾನವಾದ ಗಣಿತದಲ್ಲಿ ಫೇಲಾಗುವೆನೆಂದುಕೊಂಡಿದ್ದೆ ಆದರೆ ವಿಜ್ಞಾನದಲ್ಲಿ ಫೇಲಾಗಿದ್ದೆ. ಮನಸಿಗೆ ತುಂಬ ಸಮಾಧಾನವಾಯಿತು. ಅದನ್ನು ಹೇಗೋ ದಾಟಿಸಬಹುದೆಂಬ ಭರವಸೆಯಿತ್ತು. ಆದರೆ ಅಕ್ಟೋಬರ್ ಪೂರಕ ಪರೀಕ್ಷೆಯ ವರೆಗೆ ಕಾಯುವದನ್ನು ಬಿಟ್ಟು ಬೇರೆ ಮಾರ್ಗವಿರಲಿಲ್ಲ. ಒಂದು ವರ್ಷ ವ್ಯರ್ಥ ಹೋಗುತ್ತಿದೆ ಎಂದು ಬೇಸರವಾಗುತ್ತಿತ್ತು. ಟೈಪಿಂಗ್ ಕಲಿತರೆ ಎಲ್ಲಿಯಾದರೂ ಕ್ಲರ್ಕ್ ಆಗಬಹುದು ಎಂದು ಹೋದರೆ ಅದರಲ್ಲೂ ಫೇಲಾದೆ. ನಸೀಬು ಚೆನ್ನಗಿಲ್ಲ ಎಂದುಕೊಳ್ಳುವಷ್ಟರಲ್ಲಿ ಬಲು ಪ್ರಯಾಸದಿಂದ ಎಂಬಂತೆ ಎಸ್.ಎಸ್.ಎಲ್.ಸಿ ಪಾಸಾಗಿ ಪಿಯುಸಿಗೆ ಪ್ರವೇಶ ಪಡೆದೆ. ಟೈಪಿಂಗ್ ಕಲಿತಿದ್ದರಿಂದ ಇಂಗ್ಲಿಷ್ ಶಬ್ದಸಂಗ್ರಹ, ಕಾಗುಣಿತ, ವಾಕ್ಯರಚನೆಯ ಅಲ್ಪ ಸ್ವಲ್ಪ ತಿಳುವಳಿಕೆ ಬಂದಿತ್ತು. ಒಂದು ವರ್ಷ ವ್ಯರ್ಥವೆನ್ನಿಸದಂತೆ ನಿಯಮಿತವಾಗಿ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಪತ್ರಿಕೆ, ಪುಸ್ತಕ, ನೂರಾರು ಸಂಖ್ಯೆಯಲ್ಲಿ ಕತೆ-ಕಾದಂಬರಿ ಓದಿದ್ದರಿಂದಾಗಿ ಕನ್ನಡ ಓದು, ಬರಹದ ಒಂದು ಸಾಮರ್ಥ್ಯ ಪ್ರಾಪ್ತವಾಗಿತ್ತು. ನನಗೇ ಆಶ್ಚರ್ಯವೆನ್ನಿಸುವಂತೆ ಕ್ಲಾಸಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಲೆಕ್ಚರರುಗಳು ಹೇಳಿದ ಪಾಠಗಳು ಮನಸಿಗೆ ನಾಟತೊಡಗಿದವು. ಪುಸ್ತಕಗಳ ಅಧ್ಯಾಯಗಳೇನು ಮನಸು ಮಾಡಿದರೆ ಇಂಗ್ಲಿಷಿನಲ್ಲಿದ್ದ ಪುಸ್ತಕಗಳ ಇಡೀ ಪಾಠಗಳನ್ನೇ ಬಾಯಿಪಾಠ ಒಪ್ಪಿಸಿಯೇನು ಎಂಬಂತೆ ಸ್ಮರಣಶಕ್ತಿ ವೃದ್ಧಿಸತೊಡಗಿತ್ತು. ಪ್ರಥಮ ಪಿಯುಸಿಯಲ್ಲಿ ನಾನು ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾದೆ ಎನ್ನುವದು ಮತ್ತಷ್ಟು ಆತ್ಮವಿಶ್ವಾಸವನ್ನು ನನ್ನೊಳಗೆ ತುಂಬಿತು. ಪಿಯುಸಿ ದ್ವಿತೀಯ ವರ್ಷ ಮೊದಲ್ಗೊಂಡು ನಂತರದ ಐದು ವರ್ಷ ಎಂ.ಎ ವರೆಗೆ ಫಸ್ಟ್ ಕ್ಲಾಸ್ ಫಲಿತಾಂಶವನ್ನೇ ಕಂಡ ನಾನು ಎಂ.ಎ ನಲ್ಲಿ ಸ್ವರ್ಣಪದಕ ಸಮೇತ ತೇರ್ಗಡೆಯಾದೆ.
ಶಿಕ್ಷಣದಿಂದಾಗಿ ಬೇರೆಯದೊಂದು ಬದುಕನ್ನು ರೂಪಿಸಿಕೊಳ್ಳುವದು ಸಾಧ್ಯವಾಯಿತು. ಬೇರೊಂದು ವ್ಯಕ್ತಿತ್ವ ರೂಪಿಸಿಕೊಳ್ಳುವದು ನನಗೆ ಸಾಧ್ಯವಾಯಿತು. ಇಂದು ಶಿಕ್ಷಣವೆಂಬುದು ಅತಿಯಾದ ಖಾಸಗೀಕರಣದಿಂದಾಗಿ ಬಡಬಗ್ಗರಿಗೆ ಗಗನಕುಸುಮವಾಗುತ್ತಿದೆ. ಬಡವರ ಮಾತು ದೂರ, ಮಧ್ಯಮವರ್ಗದವರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಬೇಕೆಂದರೆ ಪ್ರವೇಶದ ಹಂತದಲ್ಲೇ ಅಪಾರ ಹಣ ಪೀಕಬೇಕಾಗಿರುವದು ಹೊರೆ ಎನ್ನಿಸುತ್ತಿದೆ. ಸ್ಥಿತಿವಂತರಿಗೊಂದು ಬಗೆಯ ಶಿಕ್ಷಣ ಬಡವರಿಗೆ ಇನ್ನೊಂದು ಶಿಕ್ಷಣ ಎಂಬುದು ಸಹಜ ಸ್ಥಿತಿ ಎಂಬಂತಾಗಿದೆ. ಶಿಕ್ಷಣದ ಹಕ್ಕು ವಿಧೇಯಕ ಪಾಸಾಗಿ ಕಾನೂನು ಆದಮೇಲೂ ಅದರ ಅನುಷ್ಠಾನ ಸರಿಯಾಗಿ ಆಗದಂತೆ ವ್ಯಾಪಾರಿ ಉದ್ದೇಶವನ್ನು ಪ್ರಧಾನವಾಗಿಟ್ಟುಕೊಂಡ ಆಡಳಿತ ಮಂಡಳಿಗಳು ಅದನ್ನು ವಿಫಲಗೊಳಿಸಲು ತಂತ್ರ ಹೆಣೆಯುತ್ತಿವೆ. ಇದರ ಮಧ್ಯೆ ಲಂಗುಲಗಾಮಿಲ್ಲದ ಪ್ರಯೋಗಗಳಿಗೆ ಮಕ್ಕಳು ಬಲಿಪಶು ಆಗುತ್ತಿವೆ. ಕಲಿಕೆ ಎನ್ನುವದು ಒಂದು ಆನಂದದ, ಸೃಜನಶೀಲತೆಯ ಅಂಶಗಳನ್ನೊಳಗೊಂಡ ಚಟುವಟಿಕೆಯಾಗಿ ಮಕ್ಕಳ ಅನುಭವಕ್ಕೆ ಬರುತ್ತಿದೆ ಎನ್ನಿಸುತ್ತಿಲ್ಲ. ಸಮಾನ ಶಿಕ್ಷಣವೆಂಬುದು ಒಂದು ಗುರಿಯಾಗಿ ಸರಕಾರಗಳ ನೀತಿಯ ಭಾಗವಾಗುತ್ತಿಲ್ಲ. ಅದು ಆಗಲೇ ಬೇಕು. ಶಿಕ್ಷಣ, ಉದ್ಯೋಗ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಎಲ್ಲರಿಗೂ ಮುಕ್ತವೂ ಸಮಾನವೂ ಆದ ಅವಕಾಶ ಒದಗಿಸಿಕೊಟ್ಟು ಎಲ್ಲರನ್ನು ಒಳಗೊಂಡು ಸಾಧಿತವಾಗುವ ಅಭಿವೃದ್ಧಿ ಮಾತ್ರ ನಮ್ಮ ಪ್ರಜಾಪ್ರಭುತ್ವವನ್ನು ಅರ್ಥಪೂರ್ಣವಾಗಿಸಬಲ್ಲದು.
ಹಿಂದುಳಿದ ಕುರುಬ ಜಾತಿಯವರು ಬಯಸಿದರೆ ಅವರಿಗೆ ವೈಷ್ಣವ ದೀಕ್ಷೆ ಕೊಡಲು ತಾವು ಸಿದ್ಧ ಎಂಬುದಾಗಿ ಬಾಗಲಕೋಟೆಯಲ್ಲಿ ಪೇಜಾವರ ಶ್ರೀಗಳು ಹೇಳಿದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಬೇಸರ ವ್ಯಕ್ತವಾಗುತ್ತಿದೆ. ಅದು ಸಕಾರಣವೂ ಆಗಿದೆ. ಹಿಂದುಳಿದ ಸಮುದಾಯಗಳಿಗೆ ಯಾವುದೋ ಪೌರಾಣಿಕ ಮತಕ್ಕೆ ದೀಕ್ಷೆ ಕೊಡುವ ಮಾತುಗಳಿಗಿಂತ ಬಡ ಮಕ್ಕಳಿಗೆ ಅನ್ನ ಆಶ್ರಯ ಒದಗಿಸಿಕೊಟ್ಟು ಅವರು ಶಿಕ್ಷಣ ಪಡೆಯುವಲ್ಲಿ ಹಲವಾರು ದಶಕಗಳಿಂದ ಗುರುತರವಾದ ರೀತಿಯಲ್ಲಿ ನೆರವಾದ ಲಿಂಗಾಯತ ಮಠಗಳು ಆದರ್ಶವಾಗಬೇಕೆನ್ನಿಸುತ್ತದೆ.
ಅಶೋಕ ಶೆಟ್ಟರ್ ಕಾಲಂ : ಎದೆಗೆ ಬೀಳಲಿ ಅಕ್ಷರ
ನಿಮಗೆ ಇವೂ ಇಷ್ಟವಾಗಬಹುದು…




Tumba olle baraha Ashok … nimma badukina katheyanthoo unbelievable !
ನಿಜ ಸರ್, ಜೀವನಾವಶ್ಯಕವಾಗಿರುವ ಅನ್ನ, ನೀರು, ಶಿಕ್ಷಣ, ಉದ್ಯೋಗಗಳನ್ನು ಒದಗಿಸುವ/ಸೃಷ್ಟಿಸುವ ದಿಶೆಯಲ್ಲಿ ಯೋಚಿಸುವ/ಮಾರ್ಗದರ್ಶನಗೈಯುವುದನ್ನು ಬಿಟ್ಟು ನಿಷ್ಪ್ರಯೋಜಕ ದೀಕ್ಷೆ ಯಾರಿಗೆ ಬೇಕಿದೆ ? ಕಾಲ್ಪನಿಕ ಪೌರಾಣಿಕ ದೀಕ್ಷೆಯಿಂದ ಈ ನಾಡು ಸಮೃದ್ಧಿಯಾಗುವುದಿದ್ದರೇ ಇಷ್ಟು ದಿನ ಮಹಿಮಾನ್ವಿತರು ಯಾಕೆ ಸುಮ್ಮನಿದ್ದರೆಂಬುದು ಎಲ್ಲರೂ ಯೋಚಿಸಬೇಕಾದ ಸಂದರ್ಭವಿದು !
ವೈಚಾರಿಕ ಲೇಖನವನ್ನು ನೀಡಿದ ಪ್ರೋ.ಶೆಟ್ಟರ್ ಸರ್-ಗೆ ಧನ್ಯವಾದಗಳು….
ಸಮಾನತೆ ಸಾಧಿಸಲು ಶಿಕ್ಷಣ ಮೂಲ ಪರಿಕರ. ಬೇರೆಲ್ಲದರಂತೆ ಇದೂ ಕೂಡ ಸ್ವಯಂವೇದ್ಯವಾದಾಗಲೆ ಯಶಸ್ವಿಯಾಗಬಹುದು -‘ಶಿಕ್ಷಣವನ್ನು ಕೊಡಮಾಡುವದು ತೀರ ಸಹಜ ಎನ್ನುವಂತಿದ್ದ ಬ್ರಾಹ್ಮಣರೇ ಮೊದಲಾದ ಮೇಲ್ಜಾತಿಗಳ’ –ನನಗೇನೋ ಇದರಿಂದ ‘ಎಲ್ಲರು’ ಕಲಿಯಬೇಕೆ ಹೊರತು ಹೀಗೆಳೆಯಬಾರದು ಎನಿಸುತ್ತದೆ. ಒಳ್ಳೆಯ ಶಿಕ್ಷಣಕ್ಕೆ ಹೋರಾಡುವದು ಮಸೀದೆ/ಮಂದಿರಕ್ಕೆ ಗುದ್ದಾಡುವದ್ದಕ್ಕಿಂತ ಎಷ್ಟೋ ಪಾಲು ಮಿಗಿಲು.
-ಅನಿಲ ತಾಳಿಕೋಟಿ
Totally agree with you view point Sir