ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ : ಅರ್ಧಕ್ಕೇ ಆಟ ನಿಲ್ಲಿಸಿ ಹೋದ ನಟರಾಜ

ಕಿರುತೆರೆ, ನಾಟಕ ಮತ್ತು ಚಲನಚಿತ್ರ ನಟ, ಗೆಳೆಯ ಏಣಗಿ ನಟರಾಜನನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಏಣಗಿಯಲ್ಲಿ ಮಣ್ಣು ಮಾಡಿ ಬಂದು ಒಂದು ವರ್ಷವಾಯಿತು.ಅವೂ ಬೇಸಗೆ ಸರಿದು ಮುಂಗಾರು ಪ್ರವೇಶಿಸುತ್ತಿದ್ದ ದಿನಗಳು. ಕಳೆದ ವರ್ಷ ಅಂದರೆ ೨೦೧೨ರ ಜೂನ್ ಎಂಟರ ಮುಂಜಾನೆ ಸುದ್ದಿವಾಹಿನಿಯೊಂದರಲ್ಲಿ ಆತನ ನಿಧನದ ಸುದ್ದಿ ಸ್ಕ್ರೋಲ್ ಆಗುತ್ತಿದ್ದದ್ದು ನೋಡಿ ಮನ ಮುದುಡಿತ್ತು. ಅವನ ಆರೋಗ್ಯ ಹದಗೆಡುತ್ತಿದ್ದುದು ನನಗೆ ಗೊತ್ತಿತ್ತು. ಆದರೆ ಸಾವು ಇಷ್ಟು ಆತನ ಬಳಿ ಸಾರಿ ಕರೆಯತೊಡಗಿತ್ತೆಂದು ಗೊತ್ತಿರಲಿಲ್ಲ. ಅವನು ದೇಹವನ್ನು ಬಹಳ ದಂಡಿಸುತ್ತಿದ್ದಾನೆ ಎಂದು ಅನ್ನಿಸತೊಡಗಿತ್ತು. ೨೦೧೧ರ ಅಗಸ್ಟ್-ಸಪ್ಟಂಬರ್ ಸುಮಾರಿಗೆ ತಾನು ಧಾರವಾಡ ರಂಗಾಯಣದ ನಿರ್ದೆಶಕನಾಗಿ ನಿಯುಕ್ತನಾದ ಸುದ್ದಿ ಗೊತ್ತಾದ ಮೇಲೆ ಫೋನ್ ಮಾಡಿ “ನೀವೆಲ್ಲ ನನ್ನ ಜೋಡಿ ಕೈ ಜೋಡಿಸಿದರನs ನಾ ಕೆಲ್ಸ ಮಾಡಾಕ ಸಾಧ್ಯಲೇ ಶೆಟ್ಟಿ” ಅಂತ ನಟರಾಜ ಹೇಳಿದಾಗ “ಯಾಕಾಗವಲ್ದು ತಗೋ” ಎಂದಿದ್ದೆನಾದರೂ ಆಮೇಲೆ ನನ್ನದೆ ಏನೋ ಗೋಳುಗಳಲ್ಲಿ ನಾನಿದ್ದೆ.
ಅವನು ರಂಗಾಯಣಕ್ಕೆ ನಿಯುಕ್ತನಾದ ಹೊಸದರಲ್ಲೇ ದಿ. ಸುಲೋಚನಾ ಕೋಟೂರ ಅವರ ಸ್ಮರಣೆಗಾಗಿ ಮಹಿಷಿ ಚಾರಿಟೇಬಲ್ ಟ್ರಸ್ಟ್ ನಲ್ಲಿ ಡಾ.ವಿಜಯಾ ಅವರು ಶ್ರೀರಂಗರ ಸ್ಮರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಲು ಧಾರವಾಡಕ್ಕೆ ಬಂದಿದ್ದರು. ಇವನೂ ವೇದಿಕೆಯ ಮೇಲಿದ್ದ. ಶ್ರೀರಂಗರು ತಮ್ಮ ಕುರಿತು ಹೊಂದಿದ್ದ ವಾತ್ಸಲ್ಯವನ್ನು ವಿಜಯಾ ಅವರು ಹೃದಯಸ್ಪರ್ಶಿಯಾಗಿ ವಿವರಿಸುತ್ತಿದ್ದರು. ಇವನು ಕಾರ್ಯಕ್ರಮದ ಮಧ್ಯೆಯೇ ಎದ್ದ. ಅವನು ರಾತ್ರಿ ಬೆಂಗಳೂರಿಗೆ ಹೋಗಬೇಕಿತ್ತು. ಅಲ್ಲಿ ಯಥಾಪ್ರಕಾರ “ನಾ ತುಕಾರಾಂ ಅಲ್ಲಾ” ನಾಟಕದಲ್ಲಿ ಅಭಿನಯಿಸಬೇಕಿತ್ತು. ಮರುದಿನ ಸಂಜೆ ಅದರಲ್ಲಿ ಅಭಿನಯಿಸಿ ರಾತ್ರಿಯೇ ಅಲ್ಲಿಂದ ಹೊರಟು ಅದರ ಮರುದಿನ ಧಾರವಾಡದಲ್ಲಿ ಇರಬೇಕಿತ್ತು. ಏಕೆಂದರೆ ಇಲ್ಲಿ ನವರಾತ್ರಿ ರಂಗೋತ್ಸವದ ಉದ್ಘಾಟಣೆಯ ಕಾರ್ಯಕ್ರಮವಿತ್ತು. “ಹಿಂಗ ರೆಸ್ಟ್ ಇಲ್ದಂಗ ನಾಟಕಾ, ಕಾರ್ಯಕ್ರಮ ಅಂತ ಹೊಂಟ್ರ ಹೆಂಗಲೇ?” ಎಂದೆ.
ಬೆಂಗಳೂರಲ್ಲಿ ನಾಟಕ ಮುಗಿಸಿಕೊಂಡು ಬಂದು ಅಂದೇ ಸಂಜೆ ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಸ್ಮರಣಾರ್ಥ ರಂಗಾಯಣ ಆಯೋಜಿಸಿದ್ದ ರಂಗೋತ್ಸವದ ಉದ್ಘಾಟನಾ ಕಾರ್ಯಕ್ರಮ ಮುಗಿದ ಮೇಲೆ ಸ್ವಲ್ಪ ಹೊತ್ತು ಅದರ ಉದ್ಘಾಟಣೆಗೆ ಬಂದ ಜಯಂತ ಕಾಯ್ಕಿಣಿ ಮತ್ತು ನಟರಾಜನ ಜೊತೆ ಮಾತಾಡಿ ಮರಳಿದೆ. ಆಮೇಲೆ ಬಹಳ ದಿನ ಭೇಟಿ ಆಗಲಿಲ್ಲ. ಆದರೆ ರಂಗಾಯಣದ ಕಾರ್ಯಕ್ರಮಗಳ ಫೋಟೋಗಳು ಪತ್ರಿಕೆಗಳಲ್ಲಿ ಬಂದಾಗ ಅವನು ತುಂಬ ಸೊರಗಿ ಹೋಗುತ್ತಿದ್ದುದು ಗಮನಕ್ಕೆ ಬರುತ್ತಿತ್ತು. ಕಳೆಯೇ ಬದಲಾದಂತಿತ್ತು. ಆಮೇಲೆ ಎರಡು ಮೂರು ತಿಂಗಳ ನಂತರ ರಾತ್ರಿ ಫೇಸ್ ಬುಕ್ ಫೀಡ್ ಬ್ಯಾಕ್ ನಲ್ಲಿ “ನಾ ತುಕಾರಾಂ ಅಲ್ಲಾ” ನಾಟಕದಲ್ಲಿ ಅವನ ಸಹನಟರಾಗಿರುತ್ತಿದ್ದ ಬಿ.ಸುರೇಶ್ ಆ ರಾತ್ರಿ ಇದ್ದಕ್ಕಿದ್ದಂತೆ ನಟರಾಜನ ಅರೋಗ್ಯ ಸ್ಥಿತಿ ಹದಗೆಟ್ಟ ಕಾರಣ ನಾಟಕವನ್ನು ರದ್ದು ಪಡಿಸಬೇಕಾಗಿ ಬಂದ ಕುರಿತು ಹಾಗೂ ನಟರಾಜ ರಾತ್ರಿಯೇ ಬೆಂಗಳೂರು ಬಿಟ್ಟು ಧಾರವಾಡಕ್ಕೆ ಹೋದ ಕುರಿತು ಬರೆದಿದ್ದರು.
ಮರುದಿನ ಬೆಳಿಗ್ಗೆಯೇ ಫೋನ್ ಮಾಡಿ ಹಿಂದಿನ ರಾತ್ರಿಯ ಸುರೇಶ್ ಅವರ ಸ್ಟೇಟಸ್ ಅಪ್ ಡೇಟ್ ಬಗ್ಗೆ ಹೇಳಿ, “ಈಗ ಹೆಂಗ ಅದಿ? ಎಲ್ಲಿ ಅದಿ?” ಎಂದೆ.”ಈಗ ಜಸ್ಟ್ ಮಾಸೂರ ಕಿರಾಣಿ ಅಂಗಡಿ ಕಾರ್ನರ್ ಗೆ ಕಾರ್ ಟರ್ನ್ ಆಗಾಕತ್ತೇತಿ ನೋಡ, ವಾಂತಿ ಭೇದಿ ಎಲ್ಲಾ ಆಗಿ ಮೈಯಾಗಿನ ಕಸೂ ಪೂರಾ ಹಾಳಾಗಿ ಹೋಗಿತ್ತು. ಖರೆ ಹೇಳಬೇಕಂದ್ರ ನಿನ್ನಿ ನಾ ಇದ್ದ ಸ್ಥಿತಿ ನೋಡಿದರ ಧಾರವಾಡಕ್ಕ ನಾ ಜೀವಂತ ಬರತೇನಿ ಅಂತ ಅನಿಸಿರಲಿಲ್ಲೊ” ಅಂದ.”ಬೆಂಗಳೂರಾಗ ನನಗ ಊಟದ್ದs ಸಮಸ್ಯೆ. ನನಗ ಆ ಊರಾಗ ಊಟs ಸೇರೂದುಲ್ಲ ಅವನವ್ವನ” ಅಂದ.

ಆಮೇಲೊಮ್ಮೆ ನನ್ನದೊಂದು ಆರೋಗ್ಯ ಸಮಸ್ಯೆಯನ್ನು ಪ್ರಸ್ತಾಪಿಸಿ “ದಾಸನಕೊಪ್ಪ ಸರ್ಕಲ್ ಕಡೆ ಪವಾಡಶೆಟ್ಟಿ ಅಂತ ಒಬ್ಬ ಅಯುರ್ವೇದಿಕ್ ಡಾಕ್ಟರ್ ಕಡೆ ನಾ ಟ್ರೀಟ್ ಮೆಂಟ್ ತಗೊಳ್ಳಾಕತ್ತೇನಿ.ಆ ಡಾಕ್ಟರ್ ಶಾಣ್ಯಾ ಅದಾನ. ನೀನೂ ಬಾ ಇಬ್ರೂ ಕೂಡೇ ಹೋಗೂಣು” ಎಂದ. ನಾನೂ ಒಪ್ಪಿದೆ. ಯಾವಾಗ ಹೋಗುವದು ಎಂದೆಲ್ಲಾ ತೀರ್ಮಾನವಾಯಿತು. ಕಾರಣಾಂತರದಿಂದ ನನಗೆ ಹೋಗಲಾಗಲಿಲ್ಲ.ಒಮ್ಮೆ ಯಾವಾಗಲೋ ಸಿಕ್ಕ. ಮತ್ತೆ ಅದೇ ನಿರಂತರ ಚಟುವಟಿಕೆ, ಓಡಾಟಗಳ ಕುರಿತು, ಅದು ಅವನ ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಎಚ್ಚರಿಸಿದೆ “ನೀ ಗೆಳ್ಯಾಪಾ, ನಿನಗ ಅರ್ಥ ಆಗ್ತsತಿ, ಬ್ಯಾರೆದವ್ರು ತಿಳಕೋಬೇಕಲ್ಲ” ಎಂದು ಒಂದು ಊರ ಹೆಸರು ಹೇಳಿ ಅಲ್ಲಿ “ಕಾರ್ಯಕ್ರಮಕ್ಕ ಬಾ ಅಂತಂದ್ರು, ಮೈಯ್ಯಾಗ ಅರಾಮಿಲ್ಲ ಅಂತ ಹೇಳಿದ್ರೂ ತಿಳಕೋವಲ್ರು, ಹೇ, ನೀವ್ ಬರಬೇಕಾಗತೈತ್ರೀ, ನೀಂವ ರಂಗಾಯಣದ ನಿರ್ದೇಶಕರು, ಬರಾಂಗಿಲ್ಲ ಅಂದ್ರ ಹ್ಯಂಗ?” ಎಂದು ಅವರು ಒರಟಾಗಿ ಒತ್ತಾಯಿಸಿದ್ದನ್ನು ಹೇಳಿದ.”ಊಟಾ ಸರಿಯಾಗಿ ಮಾಡ್ತಿ?”ಎಂದು ಕೇಳಿದೆ. “ಹಾಂ, ನನ್ನಆಕ್ಟಿವಿಟಿ,ಓಡ್ಯಾಟಾ ಇವಕ್ಕ ಎಷ್ಟ್ ಎನರ್ಜಿ ಬೇಕ ಅಷ್ಟ್ ಸಿಗೂವಂಗ ಉಂತೇನಿ” ಅಂದ. “ದಿನಾ ಕುಡೀತಿ?” ಎಂದೆ. “ಎಷ್ಟ್,ಒಂದ್ ನೈಂಟಿ?” ಎಂದೆ. “ನೈಂಟೀ.., ಮ್ಯಾಲ್ ಒಂದ್ ಸಿಕ್ಸ್ಟೀ” ಅಂದ.
ತಿಂಗಳೊಪ್ಪತ್ತಿನಲ್ಲಿ ಬಹುಪಾಲು ಅವನ ದೇಹಸ್ಥಿತಿ ಕುಸಿದೇ ಹೋಯಿತು. ಲಿವರ್, ಕಿಡ್ನಿ ತೊಂದರೆಗಳೆಲ್ಲ ಕಾಣಿಸಿಕೊಂಡು ನಟರಾಜನ ಜೀವನ ನಾಟಕಕ್ಕೆ ಅಂತಿಮ ತೆರೆ ಬಿದ್ದೇ ಬಿಟ್ಟಿತು. ಅವನು ಧಾರವಾಡದಲ್ಲಿ ವಾಸಿಸುತ್ತಿದ್ದ ಮನೆ ಎಲ್ಲಿ ಇದೆ ಎಂದೂ ನನಗೆ ಗೊತ್ತಿರಲಿಲ್ಲ. ಮೊದಲು ಎನ್.ಟಿ.ಟಿ.ಎಫ್ ಹತ್ತಿರ ಒಂದು ಮನೆಯಲ್ಲಿ ಅವರು ವಾಸವಾಗಿದ್ದಾಗ ಹೋಗಿ ಬಂದು ಮಾಡಿದ್ದೆ. ಮಾಸೂರ್ ಕಿರಾಣಿ ಅಂಗಡಿ ಎಂದು ಹೇಳಿದ್ದರಿಂದಾಗಿ ಅಲ್ಲೇ ಎಲ್ಲೋ ಇರಬೇಕೆಂದು ಹುಡುಕಿದಾಗ ಮನೆ ಏನೋ ಸಿಕ್ಕಿತು. ಆದರೆ ಅಲ್ಲಿ ಯಾರ ಸುಳಿವೂ ಇರಲಿಲ್ಲ. ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ನೇರವಾಗಿ ಅವರ ಊರಿಗೇ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡುತ್ತಾರೆಂದು ಅಲ್ಲೇ ಯಾರೋ ಒಬ್ಬರು ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ್ ಹಲಗತ್ತಿಗೆ ಫೋನ್ ಮಾಡಿದೆ.”ಈಗ ರಂಗಾಯಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಸ್ವಲ್ಪ ಹೊತ್ತು ನಿಂತಿದ್ದೇವೆ. ಈಗ ಹೊರಡಲಿದ್ದೇವೆ. ಹತ್ತು ನಿಮಿಷದಲ್ಲಿ ಬರಲು ಸಾಧ್ಯವೇ?” ಎಂದ ಶಂಕರಣ್ಣ. ಖಂಡಿತ ಬರುತ್ತೇನೆ. ಎಂದು ನನ್ನ ಮಗನಿಗೆ ಕಾರನ್ನು ಸ್ವಲ್ಪ ವೇಗವಾಗಿ ಚಲಾಯಿಸಲು ಹೇಳಿ ಅಲ್ಲಿ ತಲುಪಿದಾಗ ಕೊನೆಯದಾಗಿ ನನ್ನೊಬ್ಬನ ಬರುವಿಗೇ ಕಾಯ್ದಂತಿತ್ತು ಅಲ್ಲಿ ಎಲ್ಲರೂ. ವಾಹನವೇರಿ ಅಲ್ಲಿ ಪವಡಿಸಿದ್ದ ನಟರಾಜನ ಪಾರ್ಥಿವ ಶರೀರದ ಮೇಲೆ ಹೂಹಾರವನ್ನು ಇಟ್ಟು ನಮಿಸಿ ಕೆಳಗಿಳಿದದ್ದೇ ವಾಹನ ಹೊರಟಿತು. ಸ್ವಲ್ಪ ಹೊತ್ತು ಬಿಟ್ಟು ಇನ್ನೊಂದು ಕಾರಿನಲ್ಲಿ ನಾನು, ಶಂಕರ ಕುಂಬಿ, ಶಂಕರ ಹಲಗತ್ತಿ ಮತ್ತು ಮಧು ದೇಸಾಯಿ ಏಣಗಿಯತ್ತ ಹೊರಟೆವು.

ವಯಸಿನಲ್ಲಿ ನನಗಿಂತ ಒಂದೆರಡು ವರ್ಷ ಚಿಕ್ಕವನಾದರೂ ನಟರಾಜ ಪಿಯುಸಿಯಲ್ಲಿ ನನ್ನ ಕ್ಲಾಸ್ ಮೇಟ್. ೧೯೭೩ರ ಬೇಸಿಗೆಯಲ್ಲಿ ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯಸಂಘ ಬೈಲಹೊಂಗಲದಲ್ಲಿ ಬೀಡು ಬಿಟ್ಟಿತ್ತು. ಅದು ಸುದೀರ್ಘ ಅವಧಿಯ ಕ್ಯಾಂಪ್. ಬಾಳಪ್ಪನವರು ಬಸವಣ್ಣನಾಗಿ ನಟಿಸುತ್ತಿದ್ದ “ಜಗಜ್ಯೋತಿ ಬಸವೇಶ್ವರ” ನಾಟಕವೊಂದೇ ಹಲವು ತಿಂಗಳುಗಳ ವರೆಗೆ ಪ್ರದರ್ಶಿತವಾಯಿತು. ನಟರಾಜ ಅಲ್ಲೇ ಕೆ.ಆರ್.ಸಿ.ಇ.ಎಸ್ ಕಾಲೇಜಿನಲ್ಲಿ ಪಿಯುಸಿ ಗೆ ಪ್ರವೇಶ ಪಡೆದ. ನನ್ನದು ಆರ್ಟ್ಸ್, ಅವನದು ಕಾಮರ್ಸ್. ಅಕೌಂಟನ್ಸಿ,ಕಾಮರ್ಸ್, ಇಕನಾಮಿಕ್ಸ್ ಹೊರತು ಪಡಿಸಿ ಇನ್ನೊಂದು ಐಚ್ಛಿಕ ಮತ್ತು ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳ ಕ್ಲಾಸುಗಳು ಎಲ್ಲರಿಗೂ ಕಾಮನ್. ಅದೇ ಆಗ ಕಿಶೋರಾವಸ್ಥೆಯನ್ನು ದಾಟಿ ಯೌವನಕ್ಕೆ ಕಾಲಿಡುತ್ತಿದ್ದ ನಮಗೆ ಆಗ ಜಗತ್ತು ತುಂಬ ಸುಂದರವಾಗಿ ಕಾಣುತ್ತಿತ್ತು.ಎಲ್ಲ ಹುಡುಗಿಯರೂ ಸುಂದರಿಯರಾಗಿ ತೋರುತ್ತಿದ್ದರು. ಅವರ ಮುಖದ ಮೊಡವೆಗಳೂ ಮೋಹಕವೆನ್ನಿಸುತ್ತಿದ್ದವು. ಹನುಮಂತ ದೇವರ ಗುಡಿಗೆ ಶನಿವಾರ ನಾವೂ ಹೋಗತೊಡಗಿದೆವು ಏಕೆಂದರೆ ನಮ್ಮದೇ ಕ್ಲಾಸಿನ ಆ ಅವಳು ಈ ಇವಳು ಕೂಡ ಅಲ್ಲಿ ಕಾಣ ಸಿಗುತ್ತಿದ್ದರು. ಒಟ್ಟಿನಲ್ಲಿ ಮಜವಾಗಿದ್ದೆವು. ಕಾಲೇಜಿನ ಎನ್ಯುಅಲ್ ಡೇ ಅಂಗವಾಗಿ ಏಕಾಂಕ ನಾಟಕವೊಂದರಲ್ಲಿ ಇಬ್ಬರೂ ನಟಿಸಿದೆವು. ಪಿಯುಸಿ ಮುಗಿದ ಮೇಲೆ ನಾನು ಕರ್ನಾಟಕ ಕಾಲೇಜಿಗೆ ಧಾರವಾಡಕ್ಕೆ ಬಂದೆ.
ಅವನು ಬೆಳಗಾವಿಯ ಗೋಗಟೆ ಕಾಮರ್ಸ್ ಕಾಲೇಜಿಗೆ ಹೋದ. ಮಧ್ಯೆ ಯಾವಾಗಲೋ ಒಮ್ಮೆ ಅಕಸ್ಮಿಕವಾಗಿ ಇಬ್ಬರೂ ಬೈಲಹೊಂಗಲದಲ್ಲಿ ಭೇಟಿಯಾಗಿ ಪೇಟೆ ಬೀದಿಯಲ್ಲಿ ಸಂಜೆ ಏಳೂ ವರೆ ಸುಮಾರಿಗೆ ಒಂದು ಹೊಟೆಲ್ ನಲ್ಲಿ ಚಹ ಕುಡಿದು ಮಾತಾಡುತ್ತ ಕುಳಿತಿರಬೇಕಾದರೆ ಢಂ ಎಂದು ಸದ್ದು. ಹೊರಗೆ ಬಂದು ನೋಡಿದರೆ ನಾವು ಕುಳಿತ ಹೊಟೆಲ್ಲಿನ ಎದುರು ರಸ್ತೆಯಾಚೆ ಇದ್ದ ಬೋಂಗಾಳೆ ಬೇಕರಿಯಲ್ಲಿ ಬ್ರೆಡ್ ಕೊಳ್ಳುತ್ತಿದ್ದ ದಿವಾಳಿ ಈರಪ್ಪ ಎಂಬ ಒಬ್ಬ ಪುಢಾರಿಗೆ ಯಾರೋ ಗುಂಡು ಹಾರಿಸಿದ್ದರು. ನಾವು ನೋಡುತ್ತಿದ್ದಂತೇ ಈರಪ್ಪನ ಪ್ರಾಣಪಕ್ಷಿ ಹಾರಿ ಹೋಗಿ ಆತ ಗೋಣು ಚೆಲ್ಲಿದ. ಇಡೀ ವಾತಾವರಣವೇ ಬದಲಾಯಿತು. ಅಂಗಡಿಗಳ ಶಟರ್ಸ್ ಅವಸರವಸರವಾಗಿ ಕೆಳಗಿಳಿದವು, ಜನ ಜಾಗ ಖಾಲಿ ಮಾಡತೊಡಗಿದರು. ನಾವೂ ಬೀಳ್ಕೊಂಡೆವು.
ತನ್ನ ತಂದೆಯ ನಾಟಕ ಕಂಪನಿಯನ್ನು ತಾನೇ ನಡೆಸುತ್ತಿದ್ದಾನೆ ಎಂದು ಯಾರೋ ಹೇಳಿದರು. ಅದೇನೂ ಬರಕತ್ತಾದಂತೆ ತೋರಲಿಲ್ಲ. ಆಮೇಲೆ ನಾನು ದೆಹಲಿಗೆ ಹೋದೆ ಸಂಪರ್ಕ ಪೂರ್ತಿ ತಪ್ಪಿಹೋಯಿತು. ಮುಂದೆ ಅವನು ನೀನಾಸಂ ನಲ್ಲಿ ರಂಗ ತರಬೇತಿಗೆ ಸೇರಿಕೊಂಡಿದ್ದಾನೆಂದು ತಿಳಿಯಿತು. ಬಹುಶ: ಅವನದು ನೀನಾಸಂ ನಿಂದ ತರಬೇತಿ ಪಡೆದು ಹೊರಬಿದ್ದ ಮೊದಲ ಬ್ಯಾಚ್. ಸುದೀರ್ಘ ಅಂತರದ ನಂತರ ನಾವು ಮತ್ತೆ ಭೇಟಿಯಾದದ್ದು ೧೯೮೫ ಅಥವಾ ೮೬ರಲ್ಲಿ. ಆಗ ನೀನಾಸಂ ನ ತಿರುಗಾಟ ದ ಮೂರು ನಾಟಕಗಳ ಪ್ರದರ್ಶನ ಧಾರವಾಡದಲ್ಲಿತ್ತು. ನಾನು ಆಗ ಧಾರವಾಡದಲ್ಲೇ ಇದ್ದುದು ಅವನಿಗೆ ಗೊತ್ತಾಗಿ ಅವನು ಮತ್ತು ಆ ತಿರುಗಾಟದ ಟೀಂ ನಲ್ಲಿದ್ದ ರಮಾನಂದ ಹೆಗಡೆ ಐನಕೈ ನನ್ನನ್ನು ಸಂಪರ್ಕಿಸಿ ನಾಟಕಕ್ಕೆ ಆಹ್ವಾನಿಸಿದರು. ಬಹುಶ: ತಿರುಗಾಟದ ಅತ್ಯಂತ ಶ್ರೇಷ್ಠ ಮೂರು ಪ್ರೊಡಕ್ಶನ್ ಆ ವರ್ಷದವು. ವಿಗಡವಿಕ್ರಮರಾಯ, ಮೂರು ಕಾಸಿನ ಸಂಗೀತ ನಾಟಕ ಮತ್ತು ಬೂರ್ಜ್ವಾ ಜಂಟಲ್ ಮನ್ ಇವು ಆ ನಾಟಕಗಳಾಗಿದ್ದಂತೆ ನೆನಪು. ನಟರಾಜನ ಅಭಿನಯವನ್ನು ನೋಡಿದ ಜನ ಮೂಕವಿಸ್ಮಿತರಾದರು. ಅವನು ತನ್ನ ಹೆಸರಿಗೆ ತಕ್ಕಂಥ ಪ್ರತಿಭೆಯವನು. ಆ ಸಂದರ್ಭದ ಕೆಲ ಚಿತ್ರಗಳನ್ನು ಮಂಡ್ಯ ರಮೇಶ್ ನಟರಾಜನ ಫೇಸ್ ಬುಕ್ ಟೈಮ್ ಲೈನ್ ನಲ್ಲಿ ಹಾಕಿದ್ದಾರೆ.

ಅವನಿಗೆ ಹಲವು ಖಾಸಗಿ ಸಂಕಟಗಳಿದ್ದವು.ನೀನಾಸಂ ನಲ್ಲಿದ್ದಾಗ ಅಗ್ನಿ ಅವಘಡಕ್ಕೆ ಸಿಕ್ಕು ಅಲ್ಲೇ ಅವನ ಜೊತೆಗಾತಿಯಾಗಿದ್ದ ಅವನ ಹೆಂಡತಿ ಮರಣಿಸಿದ್ದಳು. ನಾನು ಆರು ತಿಂಗಳ ಮಟ್ಟಿಗೆ ಧಾರವಾಡ ರೈಲ್ವೇ ನಿಲ್ದಾಣಕ್ಕೆ ಸಮೀಪದಲ್ಲಿದ್ದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದಾಗ ಒಮ್ಮೆ ಬಂದ ಅವನು ವಿರಾಮವಾಗಿ ಕುಳಿತು ಆ ಘಟಣೆಗಳನ್ನೆಲ್ಲ ಹೇಳಿದ್ದ. ಆ ಸಂದರ್ಭದಲ್ಲಿ ಅವನ ಒಂದು ಕೈಗೂ ಬೆಂಕಿ ವ್ಯಾಪಿಸಿ ಅದರ ಕಲೆ ಮುಂಗೈಯಿಂದ ಮೊಳಕೈ ವರೆಗೂ ಇತ್ತು. ಅವನು ಬಾಳಪ್ಪನವರಿಗೆ ನಾಟಕವೃತ್ತಿಯ ಪಯಣದಲ್ಲಿ ಜೊತೆಗಾತಿಯಾದ ಲಕ್ಷ್ಮೀದೇವಿಯವರ, ಅಂದರೆ ಬಾಳಪ್ಪನವರ ಎರಡನೆಯ ಹೆಂಡತಿಯ ಮಗ. ಬಾಳಪ್ಪನವರ ಎರಡು ಕುಟುಂಬಗಳು ಪ್ರತ್ಯೇಕವಾಗಿಯೇ ಉಳಿದು ಒಂದು ತರಹದ ಪರಕೀಯತೆಯನ್ನು ಅವನು ಅನುಭವಿಸುತ್ತಿದ್ದ. ಧಾರವಾಡಕ್ಕೆ ಬಂದು ನೆಲೆ ನಿಂತ ಮೇಲೆ ನಟರಾಜ ಮತ್ತೊಂದು ಮದುವೆಯಾದ. ಅಂದು ಮತ್ತೆ ನಮ್ಮ ಕುಟುಂಬದಲ್ಲೇ ಒಂದು ಮದುವೆ ಇದ್ದುದರಿಂದ ನನಗೆ ಹೋಗಲಾಗಲಿಲ್ಲ. ನಿಶ್ಚಿತ ಆದಾಯದ ಒಂದು ವ್ಯವಸ್ಥೆಯನ್ನು ಅವನು ಮಾಡಿಕೊಳ್ಳಲೇಬೇಕಿತ್ತು.
ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನಾಟಕಕ್ಕೆ ಸಂಬಂಧಿಸಿದ ಒಂದು ಕಾರ್ಯಯೋಜನೆಯ ಪ್ರೊಪೋಸಲ್ ಸಲ್ಲಿಸಿದನಾದರೂ ಅದು ಕೈಗೂಡಲಿಲ್ಲ. ಆಮೇಲೆ ವಿಶ್ವವಿದ್ಯಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ವಿಶ್ವಚೇತನ ಎಂಬ ವೇದಿಕೆಯೊಂದು ಅಸ್ತಿತ್ವಕ್ಕೆ ಬಂತು. ಅದರದೊಂದು ಕಮೀಟಿಯಲ್ಲಿ ನಾನೂ ಇದ್ದೆ. ಅದರಲ್ಲಿ ಕೆಲಕಾಲ ತೊಡಗಿಕೊಂಡು “ಕಾತ್ರಾಳ ರತ್ನಿಯ ಚಾದಂಗಡಿ” ಎಂಬ ಒಳ್ಳೇ ನಾಟಕವೊಂದನ್ನು ಸಿದ್ಧ ಪಡಿಸಿದ. ಆಮೇಲೆ “ಮ್ಯಾಳ” ಎಂಬ ಒಂದು ನಾಟಕ ಸಮೂಹ ಸಂಘಟಿತವಾಗಿ ಅದರಲ್ಲಿ ಸಕ್ರಿಯನಾಗಿದ್ದ. ಅದೂ ದೀರ್ಘ ಕಾಲ ನಡೆಯಲಿಲ್ಲ. ಉಪಜೀವನಕ್ಕಾಗಿ ಹುಬ್ಬಳ್ಳಿಯಲ್ಲಿ ಬೆಲ್ಲದ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿದರೂ ಅದು ಇವನ ಆಸಕ್ತಿ ಅಭಿರುಚಿಗೆ ಎಳ್ಳಷ್ಟೂ ಕಾಲಾವಕಾಶ ನೀಡದ ಪೂರ್ಣಪ್ರಮಾಣದ ಕೆಲಸವಾಯಿತು.”ಈಗ ನಂದೇನಿಲ್ಲ ನೋಡಪಾ, ಎಲ್ಲಾ ಮಧ್ಯಮವರ್ಗದ ಮಂದೀ ಹಂಗ ನೌಕರಿ, ಮನಿ, ಮಕ್ಕಳು, ಅವರ ಸಾಲಿ ಇಷ್ಟ್ ಬದುಕಿಕೊಂತ ಹೊಂಟೇನಿ” ಅಂದಿದ್ದ ಒಮ್ಮೆ.
ಆದರೆ ನಟನೆ ಅವನ ಉಸಿರು. ಎಷ್ಟು ದಿನ ಹಾಗೇ ಇದ್ದಾನು? ನೌಕರಿ ಬಿಟ್ಟ. ಕೆಲ ಕಾಲ ಮೈಸೂರು ರಂಗಾಯಣದಲ್ಲಿ, ಆಮೇಲೆ ಕೇರಳದ ಕಾಲಿಕತ್ ವಿಶ್ವವಿದ್ಯಾಲಯದಲ್ಲಿ ನಟನಕಲೆಯ ತರಬೇತುದಾರನಾಗಿದ್ದ. ಆ ಮೇಲೆ ಟಿ.ಎಸ್. ನಾಗಾಭರಣರ ಜೊತೆ ಸಹಾಯಕನಾಗಿದ್ದ. ಮುಂದೆ ಪೂರ್ಣಾವಧಿ ನಟನೆಯಲ್ಲಿ ತೊಡಗಿಕೊಂಡ. ಸಾಲುಸಾಲಾಗಿ ನಾಟಕಗಳಲ್ಲಿ ನಟಿಸಿದ. ಟಿವಿ ಧಾರಾವಾಹಿಗಳಲ್ಲಿ ನಟಿಸಿದ. ಕೆಲವು ಸಿನಿಮಾಗಳಲ್ಲೂ ಅವಕಾಶಗಳು ಅರಸಿಕೊಂಡು ಬಂದವು. ಕರ್ನಾಟಕ ನಾಟಕ ಅಕಾಡೆಮಿ ಅವಾರ್ಡ ಒಳಗೊಂಡಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿದವು. ಏಣಗಿ ನಟರಾಜ್ ಎಂಬ ಹೆಸರು ಇಡೀ ಕರ್ನಾಟಕಕ್ಕೆ ಪರಿಚಿತವಾಯಿತು. ಇವೆಲ್ಲವುಗಳಿಗೆ ಕಳಶಪ್ರಾಯವಾಗಿ ಧಾರವಾಡ ರಂಗಾಯಣ ಒಂದು ಪ್ರತ್ಯೇಕ ಘಟಕವಾದ ನಂತರ ಅದರ ಮೊದಲ ನಿರ್ದೆಶಕ ಹುದ್ದೆ ಸಿಕ್ಕಿತು. ತನ್ನ ಹಲವು ಯೋಜನೆಗಳಿಗೆ ಅವನು ಮೂರ್ತರೂಪವನ್ನು ಇನ್ನಷ್ಟೇ ಕೊಡಬೇಕಿತ್ತು. ದಶಕಗಟ್ಟಲೇ ತಾನು ಪಟ್ಟ ಶ್ರಮದ ಪ್ರತಿಫಲವನ್ನು ಸವಿಯಬೇಕಿತ್ತು.
ಅವನ ಜೀವನಯಾನ ಅಕಾಲಿಕವಾಗಿ ಮುಗಿಯಿತು. ಸ್ವಲ್ಪ ಸಂಯಮ, ಸ್ವಲ್ಪ ನಿಗ್ರಹ ಸಾಧಿಸಿದ್ದರೆ ಇಂದು ಆತ ನಮ್ಮ ಮಧ್ಯೆ ಇರುತ್ತಿದ್ದ. ನನಗಿರುವ ಇಬ್ಬರೋ ಮೂವರೋ ಏಕವಚನದ ಗೆಳೆಯರಲ್ಲಿ ಅವನು ಒಬ್ಬನಾಗಿದ್ದ. (ಎಕ್ಚುಅಲಿ ನಾವಿಬ್ಬರೂ ಪರಸ್ಪರ ಬಹಳ ಅಗ್ಗದ ಬೈಗುಳಗಳನ್ನು ಬೈದುಕೊಳ್ಳುತ್ತಿದ್ದೆವು. ಬೈಲಹೊಂಗಲದಲ್ಲಿ ಪಿಯುಸಿಯಲ್ಲಿದ್ದಾಗ ನಾವು ಹೇಗೆ ಬೈದಾಡಿಕೊಂಡು ಮಾತಾಡುತ್ತಿದ್ದೆವೋ ಅದನ್ನು ಕೊನೆಯವರೆಗೆ ಶ್ರದ್ಧೆಯಿಂದ ಎಂಬಂತೆ ಜಾರಿಯಲ್ಲಿಟ್ಟಿದ್ದೆವು. ಅದೇಕೋ ಗೊತ್ತಿಲ್ಲ, ಹಾಗೆ ಮಾತನಾಡದಿದ್ದರೆ ನಮಗೆ ಅದು ಅಪ್ಪಟವಾದ ನಮ್ಮ ಸಂಬಂಧ ಅಂತ ಅನ್ನಿಸುತ್ತಲೇ ಇರಲಿಲ್ಲ. ಹೀಗಾಗಿ ಬೇರೆ ಡೀಸೆಂಟ್ ಜನರ ನಡುವೆ ಇದ್ದಾಗ ಅವರಿಗೆ ಅಶ್ಲೀಲವೆನಿಸಬಾರದೆಂದು ನಾವು ಅಂಥ ಬೈಗುಳಗಳ ಅಲಂಕಾರವಿಲ್ಲದೆ ಮಾತಾಡುತ್ತಿದ್ದೆವಾದರೂ ನಮಗೇ ಅದು ಕೃತ್ರಿಮವೆನ್ನಿಸುತ್ತಿತ್ತು).
ನಾವು ಏಣಗಿ ತಲುಪಿದಾಗ ಊರ ಪಂಚಾಯ್ತಿ ಭವನದಲ್ಲಿ ಅವನ ಶರೀರ ಸಾಲಂಕೃತವಾಗಿ ಕುಳಿತಿತ್ತು.ಭಜನೆ ಮೇಳದವರು ತತ್ವ ಪದಗಳನ್ನು ಹಾಡುತ್ತಿದ್ದರು. ತೊಂಬತ್ತು ದಾಟಿದ ವಯಸಿನ ತಮ್ಮ ಬದುಕಿನ ಹಂತದಲ್ಲಿ ತಮ್ಮ ಕಲೆಯ ವಾರಸುದಾರನಾಗಿದ್ದ ಮಗನ ಸಾವನ್ನು ನೋಡಬೇಕಾಗಿ ಬಂದ ಬಾಳಪ್ಪನವರು ಕುಳಿತಿರುವೆಡೆ ಹೋಗಿ ಅವರ ಭುಜದ ಮೇಲೆ ಕೈ ಇಟ್ಟು ಅದುಮಿ ಸಾಂತ್ವನ ಹೇಳಿ ಕುಳಿತೆವು. ಒಂದು ಸೆಳಕು ಮಳೆ ಬಂದು ತನ್ನ ಗೌರವ ಸಲ್ಲಿಸಿ ಹೋದ ಮೇಲೆ ನಟರಾಜನ ಪಾರ್ಥಿವ ಶರೀರವನ್ನು ಊರಾಚೆ ಹೊಲವೊಂದರಲ್ಲಿ ತೋಡಿದ ಕುಣಿಯಲ್ಲಿಟ್ಟು ಅಲ್ಲಿ ಯಥಾಪ್ರಕಾರದ ಲಿಂಗಾಯತ ಸಂಸ್ಕಾರಗಳು ಜರುಗುತ್ತಿದ್ದವು. ಒಂದಿಬ್ಬರು ಮಾತಾಡಿಯಾದ ಮೇಲೆ ಯಾರೋ ಮೈಕ್ ನ ನನ್ನ ಕೈಗಿಟ್ಟರು. ಬಹಳ ಮಾತಾಡದೇ ಬಾಳಪ್ಪನವರಿಗೆ ಈ ವಯಸಿನಲ್ಲಿ ಇಂಥ ದು:ಖವನ್ನು ಸೈರಿಸಬೇಕಾಗಿ ಬಂದ ಕುರಿತು ಮರುಗಿ ಅದನ್ನು ತಡೆದುಕೊಳ್ಳುವ ಶಕ್ತಿ ಅವರಿಗೆ ಸಾಧ್ಯವಾಗಲಿ ಎಂದೆ ಅಷ್ಟೇ.
ನಾನು ಮಾತಾಡಿ ಮುಗಿಸಿದ ನಂತರ ನನ್ನತ್ತ ಬಂದ ಧಾರವಾಡ ಬಳಿಯ ದೇವರಹುಬ್ಬಳ್ಳಿಯ ಕಲಾವಿದ ಮಲ್ಲಪ್ಪ ಹೊಂಗಲ್ “ಸರ, ನೀವ ನಂಬಿದರ ನಂಬರಿ ಬಿಟ್ಟರ ಬಿಡರಿ. ನಟರಾಜ ಅವ್ರು “ನಟಸಾಮ್ರಾಟ್” ನಾಟಕದಾಗ ಪಾತ್ರ ಮಾಡಿದ್ರಲ್ರೀ, ಏ..,ನಾ ಹಂಗ್ ಯಾರ ಕಾಲೂ ಮುಗ್ಯೂ ಮಗಾ ಅಲ್ರಿ. ಆವತ್ತ್ ನಾಟಕ ಮುಗದ ಮ್ಯಾಲ ಹೋಗಿ ಸೀದಾ ನಟರಾಜನ ಕಾಲ ಹಿಡಕೊಂಡ್ನಿ ನೋಡ್ರಿ” ಎಂದರು. ಅದರಲ್ಲಿ ನಂಬದಂಥದು ಏನೂ ಇರಲಿಲ್ಲ. ನಾನು ಆ ನಾಟಕ ನೋಡಲಿಲ್ಲ ಎನ್ನುವ ಕೊರತೆ ಉಳಿದು ಹೋಯಿತು. ಆದರೆ ಅದರಲ್ಲಿಯ ಅವನ ಅಭಿನಯದ ಕುರಿತ ಮೆಚ್ಚುಗೆಯನ್ನು ನಾನು ಇಂದಿಗೂ ಅವರಿವರಿಂದ ಕೇಳುತ್ತಿರುತ್ತೇನೆ.

‍ಲೇಖಕರು avadhi

12 June, 2013

5 Comments

  1. Gopaal Wajapeyi

    ಹೌದು ಅಶೋಕ್… ಅವನು ನಿಜಕ್ಕೂ ‘ನಟಸಮ್ರಾಟ’ನೆ. ಅಂಥ ನಟ ಮತ್ತೊಮ್ಮೆ ನಮಗೆ ನೋಡಲು ಸಿಗುವುದಿಲ್ಲ. ಆತನೊಂದಿಗೆ ನನಗೂ ‘ಹೋಗಲೇ ಬಾರಲೇ’ ಸ್ನೇಹವಿತ್ತು.
    ಆ ಸಾವು ಆತ ತಾನಾಗಿಯೇ ತಂದುಕೊಂಡದ್ದು.

  2. prasad raxidi

    ಆ ವರ್ಷ ನೀನಾಸಂ ತಿರುಗಾಟದಲ್ಲಿದ್ದುದು (1986) ವಿಗಡವಿಕ್ರಮರಾಯ, ಮಣ್ಣಿನಬಂಡಿ, ಮೂರುಕಾಸಿನ ಸಂಗೀತ ನಾಟಕ, ಮತ್ತು ಆಲೀಬಾಬಾ, ನಟರಾಜನ ವಿಕ್ರಮರಾಯ, ಶಕಾರ, ಪೀಚಮ್, ಮತ್ತು ಹಕೀಮ ಪಾತ್ರಗಳು ಮರೆಯಲು (ಹಾಗೇ ಇನ್ನೂ ಅನೇಕ) ಸಾಧ್ಯವೇ ಇಲ್ಲ… ನೀನಾಸಂ ತಿರುಗಾಟದಲ್ಲಿದ್ದ ಇಬ್ಬರು ಅಸಾಮಾನ್ಯ ನಟರು, ನಟರಾಜ ಮತ್ತು ದ್ರುವರಾಜ ಇಬ್ಬರೂ ರಂಗದಲ್ಲಿ ಕಲಿತಷ್ಟು ಚೆನ್ನಾಗಿ ಬದುಕಲು ಕಲಿಯಲಿಲ್ಲವೆಂದು ವ್ಯಥೆಯಾಗುತ್ತದೆ.

  3. mandya ramesh

    olle lekhana sir..nenapu kooda nijada shraddhanjali..

  4. Nagasimha.G.Rao

    ಮೈಸೂರ್ ನಲ್ಲಿ 1987 ರಲ್ಲಿ ತಿರುಗಾಟ ದಲ್ಲಿ ಪ್ರದರ್ಶನವಾದ ತದ್ರೂಪಿ ನಾಟಕದಲ್ಲಿ ನಟರಾಜರ ಪಾತ್ರವನ್ನು ಮರೆಯಲು ಸಾದ್ಯವೇ ಇಲ್ಲ .. thank you Ashok sir

  5. Sripathi manjanabailu

    ನಟ ನಟರಾಜ ಇನ್ನು ನೆನಪು ಮಾತ್ರ. ನಟನೆಯಲ್ಲಿ ಸರಧಿ ಬಿಟ್ಟು ಕೊಡದ ಆತ, ಸಾವಿನಲ್ಲಿ ಮುರಿದು ಹಾಕಿದ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading