ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ್ ಶೆಟ್ಟರ್ ಕಾಲಂ : ಕಿ.ರಂ…ಒಂದೆರಡು ನೆನಪುಗಳು


ಕಿ.ರಂ ನನಗೆ ಬಹು ಕಾಲ ಗೊತ್ತಿರಲಿಲ್ಲ. ಆ ವ್ಯಕ್ತಿತ್ವಕ್ಕಿದ್ದ ಮೋಹಕತೆ ಎಂಥದೆಂದೂ ತಿಳಿದಿರಲಿಲ್ಲ. ಬಹಳ ವರ್ಷಗಳ ಹಿಂದೆ ಧಾರವಾಡದಲ್ಲಿ ಶಿ.ಶಿ. ಬಸವನಾಳರ ಕುರಿತು ಅವರ ವಿಚಾರಗಳ ಮಂಡನೆಯನ್ನು ಕೇಳಿದ ಸಂದರ್ಭದಲ್ಲಿ ನಾನು ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿರಲಿಲ್ಲ. ನನ್ನ ಮೊದಲ ಕವನ ಸಂಕಲನದ ಕುರಿತು ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ೧೯೯೨ರ “ಕನ್ನಡ ವಾರ್ಷಿಕ”ದಲ್ಲಿ ಒಳ್ಳೆಯ ಕೆಲವು ಮಾತುಗಳನ್ನು ಬರೆದಿದ್ದರು. ಆಗಲೂ ನನಗೆ ಅವರು ವೈಯಕ್ತಿಕವಾಗಿ ಪರಿಚಿತರಿರಲಿಲ್ಲ. ಆ ಮೇಲೆ ಕೆಲವು ಸಂದರ್ಭಗಳಲ್ಲಿ ನಾವು ಭೇಟಿಯಾದೆವಾದರೂ ೧೯೯೮ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ. ಎಂ. ಜಮುನ ಅವರು Nationalism and Literature ಎಂಬ ವಿಚಾರ ಸಂಕಿರಣವೊಂದನ್ನು ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ಆಶ್ರಯದಲ್ಲಿ ಏರ್ಪಡಿಸಿದ್ದ ಸಂದರ್ಭದಲ್ಲಿ ನನಗವರು ಹೆಚ್ಚು ನಿಕಟವಾಗಿ ಅರ್ಥವಾದರು, ಕನ್ನಡದ ಬಹುಪಾಲು ಸಾಹಿತ್ಯಾಸಕ್ತರಿಗೆ ಅವರು ಸರಿಯಾದ ರೀತಿಯಲ್ಲಿಯೇ ಅರ್ಥವಾಗಿದ್ದಾರೆ.
ಅವರ ಕುರಿತ ಬರಹಗಳಲ್ಲಿ ಅವರ ಕುಡಿತದ ಪ್ರಸ್ತಾಪಗಳಿದ್ದದ್ದನ್ನೇ ಕೆಲವರು ತಮ್ಮ ಪ್ರತಿಕ್ರಿಯೆಗಳ ಅತಿ ಪ್ರಶಸ್ತ ಅಂಶವಾಗಿಟ್ಟುಕೊಂಡಿದ್ದಾರೆ. ಕಿ.ರಂ ಅವರನ್ನು ಬಲ್ಲವರಿಗೆ ಅದು ವೈಯಕ್ತಿಕವಾದ ಅವರ ಒಂದು ಬಲಹೀನತೆ ಎಂಬುದಕ್ಕೆ ಹೊರತಾಗಿ ಬಹಳ ಮಹತ್ವವಿಲ್ಲ. ಕುಡಿದಾಗಲೂ ಕುಡಿಯದಿದ್ದಾಗಲೂ ಮುಖ್ಯವಾಗುತ್ತಿದ್ದುದು ಅವರ ಸರಳ ವರ್ತನೆ, ಮಾನವೀಯ ಸಂವೇದನೆಗಳು,ಜೀವನೋತ್ಸಾಹ, ಕಾವ್ಯಪ್ರೀತಿ ಇವೇ.
ಸ್ವಲ್ಪ ಖ್ಯಾತಿ ಹೆಗಲೇರುತ್ತಿದ್ದಂತೆ ಸೆಲೆಬ್ರಿಟಿ ಚಹರೆ, ಸೆಲೆಬ್ರಿಟಿ ದಿರಿಸು, ಸೆಲೆಬ್ರಿಟಿ ಮ್ಯಾನರಿಸಂಗಳನ್ನು ಧರಿಸಿ ಜನವಿದೂರವಾಗುವವರ ನಡುವೆ ಕಿ.ರಂ ಒಬ್ಬ ಅಪ್ಪಟ ಮನುಷ್ಯರಾಗಿದ್ದರು. ದೊಡ್ಡಬಳ್ಳಾಪುರದ ಸೆಮಿನಾರ್ ಕುರಿತು ಪ್ರಸ್ತಾಪಿಸಿದೆನಷ್ಟೆ. ನಿಜ ಹೇಳಬೇಕೆಂದರೆ ಕಿ.ರಂ ಅವರ ವ್ಯಕ್ತಿತ್ವ-ವಿಚಾರಗಳೆರಡರ ಪರಿಚಯ ಮೊಟ್ಟಮೊದಲು ನನಗಾದದ್ದು ಕೂಡ ಎರಡನೆಯ ದಿನದ ಎಲ್ಲ ಗೋಷ್ಠಿಗಳು ಮುಗಿದಾದ ಮೇಲೆ ಡಾ.ಜಮುನ ಹಾಗೂ ಕೊಂಗಾಡಿಯಪ್ಪ ಕಾಲೇಜಿನಲ್ಲೇ ಅಧ್ಯಾಪಕರಾಗಿರುವ ಅವರ ಪತಿ ಪ್ರೊ.ಮುನಿರಾಜು ಅವರ ನಿವಾಸದ ತಾರಸಿಯ ಮೇಲೆ ನಡೆದ ಪಾನಗೋಷ್ಠಿಯಲ್ಲೇ.
ಒಂದು ತಮಾಷೆಯೂ ನಡೆಯಿತು. ಆ ರಾತ್ರಿ ಕಿ.ರಂ ಭೌತವಿಜ್ಞಾನದ ಯಾವ್ಯಾವುದೋ ಸಿದ್ಧಾಂತಗಳ ಕುರಿತು ಮಾತಾಡುತ್ತಿದ್ದಾರೆ. ಅಲ್ಲಿ ಗುಂಪು ಸೇರಿದವರಲ್ಲಿ ನಾಲ್ಕೆಂಟು ಜನ ವಿಜ್ಞಾನದ ಅಧ್ಯಾಪಕರೂ ಇದ್ದಾರೆ. ಕಿ.ರಂ ಮಾತುಗಳನ್ನು ಕೇಳುತ್ತ ಬೆಕ್ಕಸ ಬೆರಗಾಗಿದ್ದಾರೆ.”…ಇದು ಸರಿ ತಾನೆ? ನೀವು ವಿಜ್ಞಾನದ ಅಧ್ಯಾಪಕರು, ನೀವು ಸರಿ ಎಂದರೇನೇ ನಾನು ಮುಂದುವರಿಯುವದು..” ಎಂದು ಅವರು ವಿಜ್ಞಾನದ ಅಧ್ಯಾಪಕರನ್ನು ಕೇಳುವದು, ಅವರು ತಲೆದೂಗುವದು.. ಇವರು ಮತ್ತೆ ಆಕಾಶದತ್ತ ಮೊಗ ಮಾಡಿ ಮಾತನಾಡುವದು, ಮಧ್ಯೆ ಮಧ್ಯೆ ಮದ್ಯ,ಅಡಿಗ, ಬೇಂದ್ರೆ, ಲಂಕೇಶ್… … ರಾತ್ರಿ ಹತ್ತಾಯಿತು, ಹನ್ನೊಂದಾಯಿತು.. ಪ್ರೊ. ಎಸ್. ಚಂದ್ರಶೇಖರ್ ಅವರು ಕಿ.ರಂ. ನಾಗರಾಜರನ್ನು “ಆಧುನಿಕ ಕರ್ನಾಟಕದ ಅಲ್ಲಮ” ಎಂದು ಹೆಸರಿಸಿ ಎಲ್ಲರೂ ಅದನ್ನು ಸರ್ವಾನುಮತದಿಂದ ಅನುಮತಿಸಿದ್ದೂ ಆಯಿತು.
ನನಗೆ ಒಂದು ಟೆನ್ಶನ್ ಶುರುವಾಗಿ ಹೋಗಿತ್ತು. ಇನ್ನು ಊಟ ಮುಗಿಸಿಕೊಂಡು ಈ ಕಿ.ರಂ ಮತ್ತು ಪ್ರೊ.ಚಂದ್ರಶೇಖರ್ ಜೊತೆ ಬೆಂಗಳೂರು ತಲುಪಿ ಅಲ್ಲಿ ಇವರಿಂದ ಬೇರ್ಪಟ್ಟು ನಾನು ಕೋಣನಕುಂಟೆಗೆ ಹೋಗುವದೆಂತು? ಕನಕಪುರ ಮುಖ್ಯರಸ್ತೆಯಿಂದ ಚುಂಚಗಟ್ಟಾ ರಸ್ತೆಯಲ್ಲಿ ಸಾಗಿ ಉದ್ದೋಉದ್ದ ನಡೆದು ನನ್ನ ಸಂಬಂಧಿಯ ಮನೆ ಸೇರುವುದ್ಯಾವಾಗ ಮತ್ತು ಹೇಗೆ? ಬೀದಿ ನಾಯಿಗಳು?… ಕಳ್ಳರು?… ಮಧ್ಯೆ ಒಮ್ಮೆ ನನ್ನ ಪೇಚಾಟ ಅವರ ಗಮನಕ್ಕೆ ಬಂದು ಅವರ ಯಾವುದೋ ಆಲೋಚನಾ ಲಹರಿ ತುಂಡಾದಂತಾಗಿ “ಶೆಟ್ಟರ್ ಸಮಸ್ಯೆ ಏನಂತೆ?” ಎಂದು ಅವರು ಕೇಳಿದ್ದರು. ಅದನ್ನ್ಯಾರೂ ಅವರಿಗೆ ವಿವರಿಸದೇ ಅವರು ಮುಂದುವರಿದಿರಬೇಕಾದರೆ ನನ್ನ ಸಮಸ್ಯೆಯೂ ಮುಂದುವರಿದೇ ಇತ್ತಲ್ಲ? ಕೊನೆಗೆ ನನ್ನನ್ನೇ ಕೇಳಿದರು, ನಾನು ನಿವೇದಿಸಿಕೊಂಡೆ. ಅವರು ನನ್ನನ್ನೇ ನೋಡುತ್ತ ಹೇಳಿದ್ದು ಈಗಲೂ ನೆನಪಿದೆ: “ಕವಿ ಕಣಯ್ಯಾ ನೀನು, ಬೇಂದ್ರೆಯ ಧಾರವಾಡದಿಂದ ಬೇರೆ ಬಂದಿದೀಯ. ಕವಿಯಾದವನು ಅನುಭವಗಳಿಗೆ ಅಂಜಬಾರದು. ನಡೀ ಬೆಂಗಳೂರಿಗೆ ಹೋಗೋಣ. ನಾನೂ ನಿನ್ನೊಂದಿಗೆ ಇರುತ್ತೇನೆ. ಬಸ್ ಸ್ಟ್ಯಾಂಡಿನಲ್ಲಿ ಮಲಗಿ ರಾತ್ರಿ ಕಳೆಯೋಣ. ಬೆಳಗಾದ ಮೇಲೆ ನೀನು ಕೋಣನಕುಂಟೆಗೆ ಹೋಗು, ನಾನು ನನ್ನ ಮನೆಗೆ ಹೋಗ್ತೇನೆ ಆಯ್ತಾ…” ಕೊನೆಗೆ ಜಮುನ ನನಗೆ “ಅಯ್ಯೋ ಬಿಟ್ ಹಾಕಿ ಸರ್, ಮೇಲೆ ಗೆಸ್ಟ್ ರೂಮ್ ಇದೆ. ಆರಾಮಾಗಿ ಮಲಗಿ, ಬೆಳಿಗ್ಗೆ ತಿಂಡಿ ಮಾಡಿಕೊಂಡು ಹೋಗಿ” ಎಂದು ನನ್ನ ಸಮಸ್ಯೆಯನ್ನು ಪರಿಹರಿಸಿದರು. ಅದಾದ ಬಹುದಿನಗಳ ವರೆಗೆ ” ಕವಿಯಾದವನು ಅನುಭವಗಳಿಗೆ ಅಂಜಬಾರದು” ಎಂದ ಕಿ.ರಂ ಮಾತು ಮನಸ್ಸಿನಲ್ಲಿ ನೆಲೆ ಊರಿದ್ದು ಮಾತ್ರ ನಿಜ.

ಅಂತಿಮವಾಗಿ ೨೦೧೦ ರ ಜುಲೈ ೧೬ನೇ ತಾರೀಖು, ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೆನೆಟ್ ಹಾಲ್ ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕ, ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ-ವೈಸ್ ಚಾನ್ಸಲರ್ ಆಗಿ ಈಗ ನಿವೃತ್ತರಾಗಿರುವ, ಡಾ. ಎಸ್. ಚಂದ್ರಶೇಖರ್ ಅವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ನಾನವರನ್ನು ಕಂಡೆ..ಮಧ್ಯಾಹ್ನ ಊಟದ ವೇಳೆಯಲ್ಲಿ ಕಿ.ರಂ. ಸರತಿ ಸಾಲಿನಲ್ಲಿ ನಿಂತಿದ್ದರು. ಸಾರ್, ಅದೆಲ್ಲ ತುಂಬ ವಿಳಂಬವಾಗುತ್ತದೆ. ಬನ್ನಿ ಎಂದು ಪಕ್ಕಕ್ಕೆ ಕರೆದು ಒಬ್ಬ ವಿದ್ಯಾರ್ಥಿಗೆ ಹೇಳಿ ಅವರಿಗೆ ಊಟದ ವ್ಯವಸ್ಥೆ ಮಾಡಿಸಿದೆ. ಕಿ. ರಂ. ಯಥಾಪ್ರಕಾರದ ಹುರುಪಿನ ಕಿ.ರಂ ಆಗಿ ಕಾಣಲಿಲ್ಲ. ಬಳಲಿದಂತಿದ್ದರು. ಊಟದ ನಂತರ ಅವರದೇ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ನಾನು, ನಟರಾಜ್ ಹುಳಿಯಾರ್, ಅಶ್ವಥ್ ನಾರಾಯಣ ನಮ್ಮ ವಿಚಾರಗಳನ್ನು ಮಂಡಿಸಿಯಾದ ಮೇಲೆ ಅವರು ಅಧ್ಯಕ್ಷ ಭಾಷಣ ಮಾಡಿದ್ದೂ ಸೋತ ದನಿಯಲ್ಲೇ.
ಹಿಂದೂ ಧರ್ಮ, ಭಾರತೀಯ ಸಂಸ್ಕೃತಿಗಳ ಕುರಿತ ಕುವೆಂಪು ಅವರ ತಾತ್ವಿಕತೆಯ ಬಗ್ಗೆ ನಮ್ಮ ಪೀಳಿಗೆಯ ಪ್ರಗತಿಪರರಲ್ಲಿ ಇರುವ ಗೊಂದಲಗಳ ಕುರಿತು ನಾನು ಮಾಡಿದ ವಿಶ್ಲೇಷಣೆಯನ್ನು ಮೆಚ್ಚಿ ಒಂದೆರಡು ಮಾತಾಡಿದರು. ರಾತ್ರಿ ಸೆಂಚುರಿ ಕ್ಲಬ್ ನಲ್ಲಿ ಬಹಳ ವರ್ಷಗಳ ನಂತರ ದೆಹಲಿಯ ಜೆ ಎನ್ ಯುನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ಅಧ್ಯಾಪಕರಾಗಿದ್ದ ಸವ್ಯಸಾಚಿ ಭಟ್ಟಾಚಾರ್ಯ, ಪಣಿಕ್ಕರ್ ಸಿಕ್ಕು ಅವರ ಜೊತೆ ನಾನು ಮಾತಾಡುತ್ತಿದ್ದರೂ ಕಣ್ಣುಗಳು ಕಿ.ರಂ ಅವರನ್ನು ಹುಡುಕುತ್ತಿದ್ದವು. ಅವರು ಬಂದಿಲ್ಲವೆಂದು ಯಾರೋ ಹೇಳಿದರು. ಆಗಷ್ಟ್ ೮ ರಂದು ಧಾರವಾಡದಲ್ಲಿ ಕುರ್ತಕೋಟಿ ಟ್ರಸ್ಟ್ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿಯಾಗಿ ಬರುತ್ತಾರೆ ಎಂದು ಪತ್ರಿಕೆಗಳಲ್ಲಿ ಓದಿದಾಗ ಅವರ ಜೊತೆ ಮಾತನಾಡುವ ಒಂದು ಅವಕಾಶಕ್ಕಾಗಿ ಕಾಯ್ದಿದ್ದೆ. ಅದರ ಹಿಂದಿನ ದಿನವೇ ಸಂಜೆ ಅವರ ನಿಧನದ ವಾರ್ತೆ ಬಂತು.

 

‍ಲೇಖಕರು G

13 November, 2013

8 Comments

  1. Hipparagi Siddaram

    ಸರ್, ಕನ್ನಡ ಸಾಹಿತ್ಯಲೋಕದ ಎಲ್ಲರಿಗೂ ಇಂದಿಗೂ/ಮುಂದೆಯೂ ಕಾಡುವ ಕೀರಂ ಸರ್…ಅವರ ಕುರಿತು ಎಷ್ಟು ಜ್ಞಾಪಿಸಿಕೊಂಡರೂ ಕಡಿಮೆಯೆ….

  2. Anonymous

    sir, ki.r0m. namagella ondu spoorti. adara jotege neevu. neevyaro, navyaro? adre sahitya nammanna ondu madtide. nimma bareha odide.nanu sannava. nenapu maguchikonditu.

  3. Anil Talikoti

    ಕಿ.ರಂ. ಕಾವ್ಯ ಪ್ರೀತಿ ಬಗ್ಗೆ ಅನೇಕ ಸಾರಿ ಕೇಳಿದ್ದೆ – ನಿಮ್ಮ ಲೇಖನದಿಂದ ಅವರ ಮೋಡಿ ಮಾಡುವ ಮಾತುಗಾರಿಕೆಯ ಒಂದು ಝಲಕು ನೋಡಿದಂತಾಯಿತು.
    -ಅನಿಲ ತಾಳಿಕೋಟಿ

  4. GORURSHIVESH

    ” ಕವಿಯಾದವನು ಅನುಭವಗಳಿಗೆ ಅಂಜಬಾರದು” beautiful line.

  5. bharathi b v

    Adeshtu olle baraha idu …ki ram avarannu bhetiyagle illa naanu …

  6. ಹನಿಯೂರು ಚಂದ್ರೇಗೌಡ

    ಕಿ.ರಂ. ಮೇಷ್ಟ್ರು ನಿಜವಾಗಿಯೂ ಒಬ್ಬ ಅಪ್ಪಟ ಮಾನವೀಯ ಗುಣಗಳ ಖಜಾನೆಯಂತಿದ್ದ ವಿದ್ವಾಂಸರು. ಅವರನ್ನು ಕೆಲವು ಜನ ಅವರ ಹಿತೈಷಿಗಳೆಂಬ ಸೋಗು ಹಾಕಿಕೊಂಡವರು ಬೇಗ ನಮ್ಮನ್ನಗಲುವಂತೆ ಮಾಡಿಬಿಟ್ಟರು- ಅವರಿಗೆ ದುಶ್ಚಟಗಳನ್ನು ಕಲಿಸಿ……ಅವರಿನ್ನೂ ಬದುಕಬೇಕಿತ್ತು…..ಬದುಕಿರುತ್ತಿದ್ದರು…..ಕೆಟ್ಟವರ ಸಹವಾಸ ವಿಲ್ಲದಿದ್ದಲ್ಲಿ.: ಆದರೆ, ಅದೇ ಜನ ಿಂದು ಅವರನ್ನು “ಮೌಖಿಕ ಪರಂಪರೆಯ ವಿದ್ವಾಂಸ” ಅದು-ಇದು ಎಂದು ಸುಮ್ಮನೆ ಸುಳ್ಳು ಹೇಳಿಕೊಂಡು ಓಡಾಡುತ್ತಾ, ಅವರನ್ನು;ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಾ, ತಾವು ಎಲ್ಲಾ ರೀತಿಯ ಸನ್ಮಾನ-ಅಧಿಕಾರ ಅನುಭವಿಸುತ್ತಿದ್ದಾರೆ. ಒಟ್ಟಿನಲ್ಲಿ ಕಿ.ರಂ. ಮೇಷ್ಟ್ರೀಗ ಇಂಥವರ “ಗಳಿಕೆ ಮಾರ್ಗದ ಹಣತೆಯಾಗಿದ್ದಾರೆ” ..ಇವರನ್ನು ಕಿ.ರಂ. ಮೇಷ್ಟ್ರ ಆತ್ಮ ಎಂದೂ ಕ್ಷಮಿಸದು…..(ಇದನ್ನು ಕಿ.ರಂ. ಮೇಷ್ಟ್ರ ನೈಜ ಶಿಷ್ಯಂದಿರು ಓದಿ, ಅನ್ಯತಾ ಭಾವಿಸಬಾರದು!)

  7. ಹನಿಯೂರು ಚಂದ್ರೇಗೌಡ

    ನಿಜವಾಗಿಯೂ ಕಿ.ರಂ. ಮಾತಿಗೆ ನಿಲುಕದ ನಕ್ಷತ್ರದಂತೆಯೇ. ಅವರನ್ನು, ಅವರ ಮಾತನ್ನು ಕೇಳಿಯೇ ಆನಂದಿಸಿ-ಅನುಭವಿಸಬೇಕಿತ್ತು. ಅಂತಹ ಒಬ್ಬ ಧೀಮಂತರು ಅವರು…. ಅವರಲ್ಲಿದ್ದ ಹಂಚುಣ್ಣುವ-ಹಮ್ಮು-ಬಿಮ್ಮಿಲ್ಲದ ವ್ಯಕ್ತಿತ್ವಕಕ್ಕೆ ಅವರ ವ್ಯಕ್ತಿತ್ವವೇ ಸಾಟಿ………………… ಅವರ ಸಾವಿನ ಸುದ್ದಿಯನ್ನು ನಾನೇ ಬರೆಯಬೇಕಾದುದು ನನ್ನ ಜೀವನದ ದುರಂತ ಚಣವೆಂದೇ ಹೇಳಬೇಕು…….ಅದರ ನಂತರ ಆರ್.ಜಿ.ಹಳ್ಳಿ ನಾಗರಾಜ
    ರನ್ನು ಫೋನ್-ಇನ್ ಮೂಲಕ ಮೇಷ್ಟ್ರ ಬಗೆಗೆ ಮಾತಾಡಿಸಿದ್ದೆ… ಅಂದಹಾಗೆ, ಆಗ ನಾನು ಸಮಯ ಟಿವಿಯಲ್ಲಿ ವರದಿಗಾರನಾಗಿದ್ದೆ!. 😉

  8. ಫ್ರತಾಪ ರಾಠೋಡ

    ಲೇಖನ ಚನ್ನಾಗಿದೆ ಗುರುಗಳೇ. ಕವಿಯಾದವನು ಅನುಭವಗಳಿಗೆ ಅಂಜಬಾರದು ಎಂಬದುರೊಂದಿಗೆ ಮನುಷ್ಯರಾರು ಅನುಭಗಳಿಗೆ ಅಂಜಬಾರದು ಎಂದಾಯಿತು. ಧನ್ಯವಾದಗಳೊಂದಿಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading