ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ್ ಶೆಟ್ಟರ್ ಕಾಲಂ : ಕಾಶ್ಮೀರವೆಂಬ ಸ್ವರ್ಗವೂ ಕಾನೂನು ಸುವ್ಯವಸ್ಥೆಯ ನರಕವೂ

ಮಧ್ಯಾಹ್ನ ಹನ್ನೆರಡೂವರೆ ಹೊತ್ತಿಗೆ ಜಮ್ಮುವಿನಿಂದ ಹೊರಟು ರಾಷ್ಟ್ರೀಯ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ಉದ್ದಕ್ಕೂ ಹಬ್ಬಿದ ಮಲೆಗಳನ್ನೂ ಅವುಗಳ ಹಸಿರಿನಲ್ಲಿ ಅಲ್ಲಲ್ಲಿ ಬೆಳೆದು ನಿಂತ ಅನಾರ್, ಸೇಬು, ಪೈನ್ ವೃಕ್ಷಗಳನ್ನೂ ನೋಡುತ್ತ ಉಧಮಪುರ್, ಕೂದ್ ಇತ್ಯಾದಿಗಳನ್ನು ದಾಟಿ ಶ್ರೀನಗರದತ್ತ ಹೊರಟ ನಮಗೆ ನಾವು ಹೊರಟದ್ದು ಕಾಶ್ಮೀರಕ್ಕೆ, ನಮ್ಮ ಯಾತ್ರೆಯ ಲಕ್ಷ್ಯವಾದ ಅಮರನಾಥ್ ಇರುವದು ಕಾಶ್ಮೀರದಲ್ಲಿ ಹಾಗೂ ಕಾಶ್ಮೀರ ಕಣಿವೆ ನಿಶ್ಚಿಂತೆಯಿಂದ ಪಯಣಿಸಬಹುದಾದ ಭೂಭಾಗ ಎಂದು ನಾವು ಭಾವಿಸಬೇಕಿಲ್ಲ ಎಂಬ ಸಂದೇಶವು ಮಾರ್ಗಮಧ್ಯೆ ಗೋವಿನಜೋಳದ ತೆನೆ ತಿನ್ನಲು ಒಂದೆಡೆ ನಾವು ನಿಂತಾಗ ಸೈನಿಕರನ್ನು ತುಂಬಿಕೊಂಡ ನಲವತ್ತೈವತ್ತು ಮಿಲಿಟರಿ ಟ್ರಕ್ಕುಗಳು ಮರಳಿ ಹೋಗುತ್ತಿದ್ದುದನ್ನು ನೋಡಿದಾಗಲೇ ರವಾನೆಯಾಗಿತ್ತು.
ರಿಸಾರ್ಟ್ ಗಳನ್ನು ಹೊಂದಿ ಗಿರಿಧಾಮದಂತಿರುವ ಪತ್ನಿಟಾಪ್ ಎಂಬ ಸ್ಥಳವನ್ನು ತಲುಪುವ ಹೊತ್ತಿಗೆ ಆ ಸಂದೇಶ ಇನ್ನೂ ಗಟ್ಟಿಯಾಯಿತು. ರಸ್ತೆಯ ಬಲಬದಿಗೆ ಅಮರನಾಥ್ ಯಾತ್ರಿಗಳ ಆಹಾರ ಪಾನೀಯಗಳ ಉಚಿತ ಪೂರೈಕೆಗೆ ಅವಕಾಶ ಕಲ್ಪಿಸುವ ಲಂಗರ್ ಒಂದರ ಬಳಿ ಹಲವಾರು ಟ್ಯಾಕ್ಸಿಗಳು ಬೀಡುಬಿಟ್ಟಿದ್ದವು. ಅದರಲ್ಲಿದ್ದ ಪ್ರಯಾಣಿಕರು ರಸ್ತೆ ಪಕ್ಕದ ಬೆಟ್ಟದ ಹುಲ್ಲುಹಾಸಿನಲ್ಲಿ ಕುಳಿತಿದ್ದರು. ವಾಹನಗಳ ಸಾಗಾಟಕ್ಕೆ ತಡೆ ಬಿದ್ದಿತ್ತು. ಕಾರಣ: ರಸ್ತಾ ರೋಕೋ. ಎಲ್ಲಿ? ಗೊತ್ತಿಲ್ಲ. ಸಂಚಾರ ಎಷ್ಟು ಹೊತ್ತಿಗೆ ತೆರವಾಗಬಹುದು? ಗೊತ್ತಿಲ್ಲ. ರಸ್ತೆಯ ಎಡಪಾರ್ಶ್ವದಲ್ಲೂ ಒಂದು ದೇವಾಲಯದ ಬಳಿ ಅಂಥದೇ ಇನ್ನೊಂದು ಲಂಗರ್. ಅದರ ಪಕ್ಕದಲ್ಲಿ ಮರಳು ತುಂಬಿದ ಚೀಲಗಳ ಹಿಂದೆ ಒಬ್ಬ ಯೋಧ ಎಕೆ ೪೭ ಇಟ್ಟುಕೊಂಡು ಕೂತಿದ್ದ. ಇನ್ನೊಬ್ಬ ಎದುರಿನ ಬೆಟ್ಟದ ಮೇಲೆ ಪೋಜಿಶನ್ ತೆಗೆದುಕೊಂಡು ನಿಂತಿದ್ದ.
ನಮ್ಮ ಟ್ಯಾಕ್ಸಿಯ ಚಾಲಕ ಶಬ್ಬೀರ್ ಖಾನ್ ಟ್ರಾಫಿಕ್ ತಡೆಯಾಗಿದ್ದ ಸ್ಥಳದಾಚೆ ಎಲ್ಲೋ ಇದ್ದ ತನ್ನ ಗೆಳೆಯನೊಬ್ಬನಿಗೆ ಫೋನ್ ಮಾಡಿ ತಿಳಿದುಕೊಂಡ ಪ್ರಕಾರ ಮುಂಜಾನೆ ಒಂಭತ್ತರಿಂದ ರಾಮ್ ಬನ್ ಜಿಲ್ಲೆಯ ವಿವಿಧೆಡೆ ಗಲಭೆಯಾಗಿ, ಕಲ್ಲು ತೂರಾಟ ನಡೆದು, ಸಿ ಆರ್ ಪಿ ಎಫ್ ನವರು ನಡೆಸಿದ ಗೋಲಿಬಾರ್ ನಲ್ಲಿ ನಾಲ್ವರು ಕಾಶ್ಮೀರಿ ಯುವಕರು ಹತರಾಗಿದ್ದರು. ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.
ಸ್ವಲ್ಪ ಹೊತ್ತಿನ ನಂತರ ಒಂದೊಂದಾಗಿ ಆ ಕಡೆಯಿಂದ ವಾಹನಗಳು ಬರುತ್ತಿದ್ದುದನ್ನು ನೋಡಿ ನಾನು ನಮ್ಮ ಡ್ರೈವರ್ ಗೆ ಎಲ್ಲಿಯ ವರೆಗೆ ಸಂಚಾರ ಮುಕ್ತವಾಗಿದೆಯೋ ಅಲ್ಲಿಯ ವರೆಗೆ ಹೋಗೋಣ ಎಂದೆ.”ಹೋಗಬಹುದು. ಆದರೆ ಅಲ್ಲಿ ಹೋದರೂ ನಿಲ್ಲುವದು ತಪ್ಪುವದಿಲ್ಲ. ಇಲ್ಲಿ ಪತ್ನಿಟಾಪ್ ನಲ್ಲಿ ಹಿತವಾದ ತಂಪು ಹವೆ ಇದೆ. ಇನ್ನು ಮುಂದಿನ ದಾರಿ ಇಳಿಜಾರಿನದು. ಅಲ್ಲಿ ಬಿಸಿಲು ಮತ್ತು ಉಷ್ಣತೆ ಹೆಚ್ಚು. ನಡೀರಿ ಹೋಗೋಣ” ಎಂದ.
ಶಬ್ಬೀರ್ ಖಾನ್ ಹೇಳಿದಂತೆ ಬಿಸಿಲು ತೀಕ್ಷ್ಣವಾಗಿದ್ದ ಮತ್ತು ಹವಾಗುಣ ಉಷ್ಣತೆಯಿಂದ ಕೂಡಿದ್ದ ಪೀಡಾ ಎಂಬ ಸ್ಥಳವೊಂದಕ್ಕೆ ನಾವು ತಲುಪಿ ಅಲ್ಲೇ ನಿಂತೆವು. ಸಾವಿರಾರು ವಾಹನಗಳು ಅಲ್ಲಿ ಸಾಲುಗಟ್ಟಿ ನಿಂತಿದ್ದವು. ಅಲ್ಲಿದ್ದ ಧಾಬಾವೊಂದರಲ್ಲಿ ಚಹ ಕುಡಿದು ಅಲ್ಲೇ ಹಿಂದೆ ಅದರ ಬಾಲ್ಕನಿಯಲ್ಲಿ ಕುಳಿತು ನೋಡಿದರೆ ಸಾವಿರಾರು ಅಡಿ ಕೆಳಗೆ ಹರಿಯುತ್ತಿದ್ದ ಚಿನಾಬ್ ನದಿಗೆ ಅಡ್ಡವಾಗಿ ನಿರ್ಮಿಸಿದ್ದ ಆಣೆಕಟ್ಟಿನಿಂದ ಬೆಳ್ನೊರೆಯೊಡಿಗೆ ಜಲಧಾರೆ ಧುಮುಕುತ್ತಿತ್ತು. ಅದು ಬಗ್ಲಿಹಾರ್ ಹೈಡಲ್ ಪ್ರೊಜೆಕ್ಟ್ ನ ಪ್ರದೇಶ. ನಾವು ಪ್ರಯಾಣಿಸಬೇಕಾಗಿದ್ದ ರಾಷ್ಟ್ರೀಯ ಹೆದ್ದಾರಿ ಆ ಪ್ರಪಾತದಲ್ಲಿ ಪರ್ವತದ ಮಗ್ಗುಲಿಗೆ ಎರಡು ಮೂರು ಓರೆಗಳಲ್ಲಿ ಚಿಕ್ಕದಾಗಿ ಕಾಲುದಾರಿಯಂತೆ ಬಿದ್ದುಕೊಂಡದ್ದು ಕಾಣುತ್ತಿತ್ತು. ಅದರ ಮೇಲೆ ಒಂದೇ ಒಂದು ವಾಹನ ಓಡುತ್ತಿರುವದು ಕಾಣುತ್ತಿಲ್ಲ. ನಮ್ಮ ವಾಹನದ ಹಿಂದೆ ಮತ್ತೆ ನೂರಾರು ವಾಹನಗಳು ಬಂದು ಸಾಲುಗಟ್ಟಿ ನಿಂತವು. ತಾಸೆರಡು ತಾಸು ಕಳೆದ ಮೇಲೆ ಎದುರು ದಿಕ್ಕಿನಿಂದ ವಾಹನಗಳು ಬರತೊಡಗಿದವು.”ಟ್ರಾಫಿಕ್ ಖುಲ್ ಗಯಾ” ಎಂದು ನಿಸೂರಾದರು ಜನ. ನೂರಾರು ವಾಹನಗಳನ್ನು ಆ ಬದಿಯಿಂದ ಬಿಟ್ಟ ಮೇಲೆ ನಮ್ಮ ದಿಕ್ಕಿನಿಂದ ವಾಹನಗಳು ಹೊರಟವು. ಆಮೇಲೆ ಪರ್ವತದ ಓರೆಗಳಲ್ಲಿ ಹಾಗೊಮ್ಮೆ ಹೀಗೊಮ್ಮೆಇಳಿಜಾರಿನಲ್ಲಿ ಚಲಿಸುತ್ತ ನಮ್ಮ ವಾಹನ ಅಂತಿಮವಾಗಿ ಚಿನಾಬ್ ನದಿ ಹರಿಯುತ್ತಿದ್ದ ನೆಲಮಟ್ಟಕ್ಕೇ ಬಂದು ಅದಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯ ಮೇಲೆ ಸಾಗಿ ಎಡಕ್ಕೆ ತಿರುಗಿ ಒಂದು ಪಾರ್ಶ್ವದಲ್ಲಿ ಚಿನಾಬ್ ನದಿ ಇನ್ನೊಂದು ಪಾರ್ಶ್ವದಲ್ಲಿ ಗೋಡೆ ಕಟ್ಟಿದಂತೆ ನೂರೆಂಬತ್ತು ಡಿಗ್ರಿ ಕೋನದಲ್ಲಿ ತಲೆಯೆತ್ತಿ ನಿಂತ ಕಲ್ಲುಗುಡ್ಡ ಇವುಗಳ ನಡುವೆ ಚಲಿಸುತ್ತಿರಲು ರಾಮಬನ್ ಎಂಬ ಜಿಲ್ಲಾ ಸ್ಥಳವೇ ಬಂದಿತು.ಅಂಗಡಿಗಳೆಲ್ಲವೂ ಶಟರ್ ಎಳೆದುಕೊಂಡಿದ್ದವು, ಪ್ರತಿಬಂಧಕಾಜ್ಞೆ ಇದ್ದಂತಿತ್ತು ವಾತಾವರಣ.

ರಾಮ್ ಬನ್ ಜಿಲ್ಲೆಯ ಗೂಲ್ ಎಂಬ ಸ್ಥಳದಲ್ಲೇ ಮೇಲೆ ಹೇಳಿದ ಗೋಲಿಬಾರ್ ಘಟನೆ ನಡೆದದ್ದು. ನಡುನಡುವೆ ಆ ಘಟಣೆಯ ವಿವಿಧ ರೂಪ ರೂಪಾಂತರಗಳು ನಮ್ಮ ಕಿವಿಗೆ ಬೀಳುತ್ತ ಹೋದವು.”CRPF ನ ಅಧಿಕಾರಿಯೊಬ್ಬ ಮಸೀದಿಯೊಂದರಲ್ಲಿ ಬೂಟುಗಾಲಿನಿಂದ ಪ್ರವೇಶಿಸಿದ, ಅಲ್ಲಿದ್ದ ಪವಿತ್ರ ಕುರಾನ್ ಮೇಲೆ ಕಾಲಿಟ್ಟ.ಅದರಿಂದಾಗಿ ಅಲ್ಲಿ ಜನ ಕ್ರುದ್ಧರಾದರು,ಪ್ರತಿಭಟಣೆಗಿಳಿದರು,CRPFನವರು ಫೈರ್ ಓಪನ್ ಮಾಡಿದರು, ಅದರಲ್ಲಿ ನಾಲ್ವರು ಕಶ್ಮೀರಿ ಯುವಕರು ಸತ್ತರು. ಪರಿಸ್ಥಿತಿ ಮತ್ತೂ ಉದ್ವಿಗ್ನವಾಯಿತು” -ಇದು ಒಂದು ವರ್ಶನ್.”CRPFನವರು ಕುರಾನ್ ಮೇಲೆ ಕಾಲಿಡುವಷ್ಟು ತಿಳಿಗೇಡಿಗಳಲ್ಲ. ಮಸೀದಿಯೊಂದರಲ್ಲಿ ದುಷ್ಕರ್ಮಿಗಳಿದ್ದರು.ಅವರನ್ನು ಹೊರಗೆಳೆಯಲು ಹೋದಾಗ ಅಲ್ಲಿಯ ಮೌಲ್ವಿ ಅದಕ್ಕೆ ತಡೆಯೊಡ್ಡಿದ. ಜನರೂ ಬೀದಿಗಿಳಿದರು.ಅದಕ್ಕೆ ಪ್ರತಿಯಾಗಿ ಗೋಲೀಬಾರ್ ನಡೆಸಲಾಯಿತು.ಕಾಶ್ಮೀರಿಗಳ ಈ ಇಂಥ ಆಟಗಳು ಪ್ರತಿವರ್ಷ ಅಮರನಾಥ್ ಯಾತ್ರೆಯ ಕಾಲದಲ್ಲಿ ಇದ್ದದ್ದೇ. CRPF ನವರು ಸರಿಯಾದ ಕ್ರಮವನ್ನೇ ಕೈಗೊಂಡಿದ್ದಾರೆ”.-ಇದು ಇನ್ನೊಂದು ವರ್ಶನ್.
ಏನಿದ್ದರೂ ಈ ಘಟನೆಯ ಪರಿಣಾಮಗಳು ಕಾಶ್ಮೀರದ ಹಲವೆಡೆ ವ್ಯಕ್ತವಾದವು. ಅಲ್ಲಿ ಕಲ್ಲೆಸೆತ ಆಗಿದೆಯಂತೆ, ಇಲ್ಲಿ ಕಲ್ಲೆಸೆತ ಆಗಿದೆಯಂತೆ ಎಂಬ ವಾರ್ತೆಗಳು ಬನಿಹಾಲ್ ತಲುಪುವ ವರೆಗೆ ನಮ್ಮ ಕಿವಿಗೆ ಬೀಳುತ್ತಿದ್ದವು. ಶ್ರೀನಗರ ಇನ್ನೂ ನೂರು ನೂರಿಪ್ಪತ್ತು ಕಿಲೋಮೀಟರ್ ದೂರ ಇರುವಾಗ ಯಾವುದೋ ಊರಿನಲ್ಲಿ ಮಿಲಿಟರಿ ಠಾಣೆಯೊಂದರ ಆವರಣದಲ್ಲಿ ನೂರಾರು ಪ್ರವಾಸಿ ಟ್ಯಾಕ್ಸಿಗಳು ನಿಂತದ್ದು ನಮ್ಮ ಗಮನಕ್ಕೆ ಬರುತ್ತಿದ್ದಂತೇ ಒಬ್ಬ ಅಧಿಕಾರಿ ನಮ್ಮ ವಾಹನದತ್ತ ಬರತೊಡಗಿದ. ನಮ್ಮ ವಾಹನದ ಚಾಲಕ “ಅವನು ರಾತ್ರಿ ಇಲ್ಲೇ ಕಳೆಯುವಂತೆ ಹೇಳಲು ಬರುತ್ತಿದ್ದಾನೆ. ನೀವು ನಾಳೆ ಶ್ರೀನಗರದಲ್ಲಿ ಮತ್ತು ಅದರ ಮರುದಿನ ಬಾಲ್ತಾಲ್ ನಲ್ಲಿ ನಮಗೆ ಬೋಟ್ ಹೌಸ್, ಹೆಲಿಕಾಪ್ಟರ್ ಇತ್ಯಾದಿಗಳ ಬುಕಿಂಗ್ ಆಗಿದೆ ಎಂದು ಹೇಳಿ” ಎಂದ. ನಾವು ಹಾಗೆ ಹೇಳಿದೆವು. ನಮ್ಮ ಪ್ರಯಾಣಕ್ಕೆ ಆತ ಸಮ್ಮತಿಸಿದ. ಆತಂಕದ ನೆರಳಲ್ಲೇ ನಾವು ಮುಂದುವರೆದೆವು.
ಅದೇ ಆತಂಕದ ಮಧ್ಯೆಯೇ ನಿದ್ದೆಯೂ ನಮ್ಮನ್ನಾವರಿಸಿಕೊಂಡು ಎಚ್ಚರವಾದಾಗ ರಾತ್ರಿ ಸುಮಾರು ಒಂದು ಗಂಟೆಗೆ ನಾವು ಶ್ರೀನಗರದ ದಾಲ್ ಸರೋವರದ ಘಾಟ್ ನಂ. ೭ ರ ಮೆಟ್ಟಿಲುಗಳ ಬಳಿ ನಿಂತಿದ್ದೆವು. ನಮ್ಮನ್ನು ನಮ್ಮ ಬೋಟ್ ಹೌಸ್ ಗೆ ಕರೆದೊಯ್ಯಲು ಶಿಕಾರಾ ಕಾಯುತ್ತಿತ್ತು. ಬೋಟ್ ಹೌಸ್ ನ ಮಾಲಿಕ ರಿಯಾಜ್ ಅಂಥ ಅಪರಾತ್ರಿಯಲ್ಲೂ ತಾನು ನಮ್ಮ ಆಗಮನಕ್ಕೆ ಸಂಜೆಯಿಂದಲೇ ಕಾಯುತ್ತಿರುವದಾಗಿ ಹೇಳಿ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ, ಬಿಸಿ ಬಿಸಿಯಾದ ಅನ್ನ ಬೇಳೆಸಾರು ಬಡಿಸಿ ಉಪಚಾರ ಹೇಳಿ ಮರುದಿನ ಕಾಣುವದಾಗಿ ತಿಳಿಸಿ ನಮ್ಮ ಕೈಂಕರ್ಯವನ್ನು ಅಕ್ರಮ್ ಹಾಗೂ ಪರ್ವೇಜ್ ಎಂಬ ಇಬ್ಬರು ಪರಿಚಾರಕರಿಗೆ ಒಪ್ಪಿಸಿ ಅಲ್ಲೇ ಹಿಂದೆ ತನ್ನ ಮನೆಯಾಗಿ ರೂಪಿಸಿಕೊಂಡಿದ್ದ ಬೋಟ್ ಹೌಸ್ ಗೆ ಹೋದ. ನಾನು ಮಾರ್ಗಮಧ್ಯೆ ನಾವು ಕೇಳಿದ ಘಟನೆಯ ಕುರಿತು ಒಮ್ಮೆ ಪ್ರಸ್ತಾಪಿಸಿದಾಗ “ನಾಲ್ಕು ಹುಡುಗರನ್ನು ಸಶಸ್ತ್ರ ಪಡೆಗಳು ಕೊಂದದ್ದು ಸ್ವಾಭಾವಿಕವಾಗಿಯೇ ಜನರನ್ನು ಕೆರಳಿಸಿದೆ” ಎಂದ. “ಯೂ ಆರ್ ಲಕಿ ಟು ಹ್ಯಾವ್ ಮೇಡ್ ಇಟ್ ಟು ಶ್ರೀನಗರ್ ಸರ್, ಹಂಡ್ರೆಡ್ಸ್ ಆಫ್ ಟೂರಿಸ್ಟ್ ಟ್ಯಾಕ್ಸೀಸ್ ವೇರ್ ಸೆಂಟ್ ಬ್ಯಾಕ್ ಟು ಜಮ್ಮು” ಎಂದ.
ನಮಗೆ ಹೆಲಿಕಾಪ್ಟರ್ ಬುಕಿಂಗ್ ಅನ್ನು ಆತ ಮರುದಿನವೇ ಅಂದರೆ ಜುಲೈ ೧೯ರಂದು ಮಾಡಬೇಕೆಂದಿದ್ದ. ಆದರೆ ಅಂದು ನಾವು ಅಮರನಾಥ್ ಗೆ ಹೋಗುವದು ಸಾಧ್ಯವಿರಲಿಲ್ಲ. ನಾವು ದಣಿದು ಹೆಣವಾಗಿದ್ದೆವು. ನಮ್ಮ ಅಮರನಾಥ್ ಭೇಟಿಯ ನೋಂದಾವಣೆ ಹೇಗೂ ಜುಲೈ ೨೦ಕ್ಕೆ ಇತ್ತು. ಹೀಗಾಗಿ ಮರುದಿನ ಸುಮ್ಮನೆ ಶಂಕರಾಚಾರ್ಯ ದೇಗುಲ, ಚಶ್ಮೆಶಾಹಿ ಉದ್ಯಾನ, ಬಾಟನಿಕಲ್ ಗಾರ್ಡನ್ ಇತ್ಯಾದಿ ನೋಡುತ್ತ, ದಾಲ್ ಸರೋವರದಲ್ಲಿ ಶಿಕಾರಾ ರೈಡ್ ಮಾಡುತ್ತ ಕಳೆದೆವು. ಹೀಗೆ ತಿರುಗಾಡುತ್ತಿರಬೇಕಾದರೆ ನಾನಾಗಲೇ ಪ್ರಸ್ತಾಪಿಸಿದಂತೆ ಟ್ಯಾಕ್ಸಿಗಳನ್ನು ಅಲ್ಲೊಂದೆಡೆ ಸೇನಾಪಡೆಯವರು ತಡೆದು ತಮ್ಮ ಆವರಣದಲ್ಲಿ ಆಶ್ರಯ ಕಲ್ಪಿಸಿದ್ದು, ಅಮರನಾಥ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಸುದ್ದಿಮಾಧ್ಯಮಗಳಲ್ಲಿ ಪ್ರಸಾರವಾಗಿ ಅದನ್ನು ನೋಡಿದ ನನ್ನ ಸ್ನೇಹಿತೆ ಪ್ರಜ್ಞಾ ಶಾಸ್ತ್ರಿ ಔರಂಗಾಬಾದಿನಿಂದ ಆಗ ಚಿಕ್ಕಮಗಳೂರಿನಲ್ಲೋ ಊಟಿಯಲ್ಲೋ ಮಧುಚಂದ್ರದಲ್ಲಿದ್ದ ನನ್ನ ಮಗನಿಗೆ ಫೋನ್ ಮಾಡಿ ಅಮರನಾಥ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆಯಂತೆ ಎಂದು ಹೇಳಿ ಅದನ್ನು ಮರುದಿನ ನಮ್ಮ ಮಗ ನಮಗೆ ಫೋನ್ ಮಾಡಿ ಹೇಳಿದಾಗ ನಮಗೆ ನಿರಾಶೆಯಾಯಿತು.
ಆದರೆ ರಾತ್ರಿ ರಿಯಾಜ್ “ಬಹುತ್ ಮುಷ್ಕಿಲ್ ಸೇ ಮೈನೆ ಕಲ್ ಸುಬಹ ಸಾಡೇ ಆಠ್ ಬಜೇ ಕೋ ಆಪ್ ಕಾ ಹೆಲಿಕ್ಯಾಪ್ಟರ್ ಬುಕಿಂಗ್ ಕರವಾಯಾ ಹೂಂ ಸರ್” ಎಂದಾಗ ಅಮರನಾಥ್ ಯಾತ್ರೆಯ ಮೇಲಿನ ತಡೆ ತೆರವಾಗಿದೆ ಎಂಬುದು ಗೊತ್ತಾಗಿ ಸಮಾಧಾನವಾಯಿತು. ನೀವು ಬೆಳಿಗ್ಗೆ ಐದು ಗಂಟೆಗೆಲ್ಲ ಬಾಲ್ತಾಲ್ ಗೆ ಹೊರಟುಬಿಡಿ ಎಂದ. ಬೆಳಿಗ್ಗೆ ಶ್ರೀನಗರ ಇನ್ನೂ ನಿದ್ರಿಸುತ್ತಿರುವಾಗಲೇ ನಾವು ಅದರ ಗಡಿ ದಾಟಿದೆವು. ಡೌನ್ ಟೌನ್ ಶ್ರೀನಗರ್ ದಾಟುವಾಗ ಉಸಿರು ಬಿಗಿ ಹಿಡಿದಿದ್ದೆವು. ಹಿಂಸಾಚಾರ ಕಲ್ಲೆಸೆತಗಳಿಗೆ ಅದು ಕುಖ್ಯಾತ ಪ್ರದೇಶ. “ಡೌನ್ ಟೌನ್ ಶ್ರೀನಗರ್ ವಾಲೆ ಬಹುತ್ ಖತರನಾಕ್ ಹೋತೇ ಹೈಂ ಸರ್” ಎಂದು ಸ್ವತ: ನಮ್ಮ ಬೋಟ್ ಹೌಸ್ ನ ಸೇವಕ ಪರ್ವೇಜ್ ಹೇಳುತ್ತಿದ್ದ. ಮಧ್ಯೆ ಗಂಡರ್ಬಾಲ್ ಬಂದಾಗಲೂ ಆತಂಕದಲ್ಲಿದ್ದೆವು. ಕಾಶ್ಮೀರದ ಮುಖ್ಯಮಂತ್ರಿ ಓಮರ್ ಫರೂಕ್ ನ ತವರು ಜಿಲ್ಲೆಯಾದ ಅದು ಗಲಭೆಗಳಿಗೆ ಹೆಸರಾದ ಇನ್ನೊಂದು ಪ್ರದೇಶ.
ಒಂದೆಡೆ ಕಂಗನ್ ಎಂಬ ಹಳ್ಳಿಯ ಹೊರವಲಯದಲ್ಲಿ ಇದ್ದ “ಸಿದ್ಧ ಬಾಬಾ ಬಾಲಕನಾಥ ಶುದ್ಧ ಭೋಜನಾಲ್ಯ ಅಮರನಾಥ್” ಎಂಬ ವಿಚಿತ್ರ ಹೆಸರಿನ ಮತ್ತು ಅಷ್ಟೇನೂ ಶುದ್ಧವಿಲ್ಲದ ಹಾಗೂ ಭೋಜನಾಲಯವೂ ಅಲ್ಲದ ಒಂದು ಅಸಡ್ಡಾಳ ಚಹದಂಗಡಿಯಲ್ಲಿ ಚಹ ಕುಡಿಯಲೆಂದು ನಿಂತೆವು. ನಮ್ಮ ಕಣ್ಣ ಮುಂದೆಯೇ ಒಂದು ವಾಹನ ನಮ್ಮನ್ನು ದಾಟಿ ಹೋಯಿತು. ನಾವು ಚಹ ಕುಡಿದು ಮುಂದೆ ಹೊರಟಾಗ ನಮ್ಮ ಡ್ರೈವರ್ ಶಬ್ಬೀರ್ ಖಾನ್ “ಮನೆಗಳಲ್ಲಿ ಕುಳಿತು ರಸ್ತೆಯಲ್ಲಿ ಹೋಗುವ ವಾಹನಗಳಿಗೆ ಕಲ್ಲು ಬೀಸುತ್ತಾರೆ ಸಾಬ್ ಈ ಕಾಶ್ಮೀರಿಗಳು” ಎಂದ.”ಇವರು ಕಲ್ಲು ಬೀಸುವದಿದ್ದರೆ ಬಿ.ಎಸ್.ಎಫ್ ಅಥವಾ ಸಿ.ಆರ್.ಎಸ್.ಎಫ್ ನವರ ಮೇಲೆ ಬೀಸಬೇಕು. ಟೂರಿಸ್ಟ್ ವಾಹನಗಳ ಮೇಲೆ ಕಲ್ಲು ಬೀಸುವದೆಂದರೆ ಏನು ನ್ಯಾಯ?” ಎಂದೆಲ್ಲ ಆತ ಮಾತನಾಡುತ್ತಿರಬೇಕಾದರೆ ಕಂಗನ್ ಊರಿನ ಪ್ರವೇಶದ ತಿರುವಿನಲ್ಲೇ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಡಲಾಗಿತ್ತು. ಪಕ್ಕದಲ್ಲಿ ಇದ್ದ ಸ್ವಲ್ಪ ಸ್ಥಳಾವಕಾಶದಲ್ಲೇ ವಾಹನ ದಾಟಿಸಿದ ಶಬ್ಬೀರ್ ಒಂದು ಫರ್ಲಾಂಗ್ ಮುಂದೆ ಹೋದವನೇ ಗಾಡಿ ನಿಲ್ಲಿಸಿದ. ಕೆಲವಾರು ವಾಹನಗಳು ಅಲ್ಲಿ ನಿಂತಿದ್ದವು. ಹೆಣ್ಣುಮಕ್ಕಳನ್ನೊಳಗೊಂಡು ಅವುಗಳಿಂದ ಇಳಿದ ಕೆಲವು ಪ್ರವಾಸಿಗಳು ರಸ್ತೆ ಬದಿ ನಿಂತಿದ್ದರು. ನಾವು ಚಹ ಕುಡಿಯುತ್ತಿರಬೇಕಾದರೆ ದಾಟಿ ಹೋದ ವಾಹನವೂ ಅವುಗಳಲ್ಲಿತ್ತು ಮತ್ತು ಕಲ್ಲಿನೇಟಿಗೆ ಅದರ ಗಾಜುಗಳು ಪುಡಿಯಾಗಿದ್ದವು. ಮತ್ತೆ ಮುಂದುವರಿದೆವು.
ಸೋನಾಮಾರ್ಗ್ ಎಂಬ ಕನಸಿನ ಲೋಕದಂಥ ರಮ್ಯ ತಾಣ ಬಂತು. ಅದು ತನ್ನ ಮಂಜು ಮುಸುಕಿದ ಪರ್ವತಗಳು, ಹಸಿರು ಹಾಸು ಮತ್ತು ಎತ್ತರದ ವೃಕ್ಷರಾಜಿಗಳಿಂದಲೂ ರಸ್ತೆಯ ಒಂದು ಬದಿಗೆ ಜುಳು ಜುಳು ಹರಿಯುತ್ತಿದ್ದ ನೀಲಜಲದಿಂದಲೂ ಕಂಗೊಳಿಸುತ್ತಿದ್ದರೆ ನಾವು ಸುರಕ್ಷಿತವಾಗಿ ಬಾಲ್ತಾಲ್ ತಲುಪಿದರೆ ಸಾಕು ಎಂದು ಯೋಚಿಸುತ್ತಿದ್ದೆವು. ಮಧ್ಯೆ ಮಧ್ಯೆ ಶಬ್ಬೀರ್ ಖಾನ್ ಗೊಣಗತೊಡಗಿದ.”ನನಗೆ ಕಲ್ಲೆಸೆತದಂಥ ವಿಷಯಗಳ ಕುರಿತು ಚಿಂತೆ ಇದ್ದರೆ ನಿಮಗೆ ನಿಮ್ಮ ಯಾತ್ರೆಯದೇ ಚಿಂತೆಯಾಗಿದೆ.(ತುಮ್ಹೆ ತೋ ತುಮ್ಹಾರಾ ಯಾತ್ರಾ ಕೀ ಪಡೀ ಹೈ) ಎಂದ.ನನಗದು ಇಷ್ಟವಾಗಲಿಲ್ಲ.”ನಾವು ಬಂದಿರುವದೇ ಅಮರನಾಥ್ ಯಾತ್ರೆಗೆ” ಎಂದೆ. ಅಂದು ಅಮರನಾಥ್ ನಿಂದ ನಾವು ಬಾಲ್ತಾಲ್ ಗೆ ಮರಳಿ ಬರುವದು ಸಾಧ್ಯವಾಗಲಿಲ್ಲ. ಬೆಟ್ಟಶ್ರೇಣಿಯನ್ನು ಮಂಜು ಆವರಿಸಿಕೊಂಡ ಪರಿಣಾಮವಾಗಿ ಹೆಲಿಕಾಪ್ಟರ್ ಹಾರಾಟ ಸ್ಥಗಿತಗೊಂಡಿತಾಗಿ ನಾವು ಕಶ್ಮೀರಿ ಮುದುಕನೊಬ್ಬನ ಹೊದ್ದುಕೊಳ್ಳಲು ರಜಾಯಿ ಸಮೇತ ಏಳು ಮಂಚಗಳಿದ್ದ ಟೆಂಟಿನಲ್ಲಿ ಮಲಗಿ ಶೀತಲ ರಾತ್ರಿಯನ್ನು ಕಳೆದೆವು. ಮರುದಿನ ಬೆಳಿಗ್ಗೆ ತಾಸೊಪ್ಪತ್ತು ದಟ್ಟವಾಗಿದ್ದು ಅತಂಕ ಮೂಡಿಸಿದ್ದ ಮಂಜು ನಂತರ ಕರಗಿ ನಚ್ಚನೆಯ ಬಿಸಿಲು ಹರಡಿ ಹೆಲಿಕ್ಯಾಪ್ಟರ್ ಬರತೊಡಗಿದವು. ನಾವು ಮರಳಿ ಬಾಲ್ತಾಲ್ ಬೇಸ್ ಕ್ಯಾಂಪ್ ಗೆ ಬಂದರೆ ಶ್ರೀನಗರಕ್ಕೆ ಹೋಗುವ ದಾರಿಯುದ್ದಕ್ಕೂ ಹಲವು ಊರುಗಳಲ್ಲಿ ಕಲ್ಲು ತೂರಾಟ, ಲಾಟಿಚಾರ್ಜ್ ಇತ್ಯಾದಿಗಳು ನಡೆದ ಪರಿಣಾಮವಾಗಿ ಸಂಚಾರ ಸ್ಥಗಿತಗೊಂಡಿತ್ತು. ನಾವು ತಿಂಡಿ ತಿಂದ ಹೊಟೆಲ್ ನ ಶ್ರೀನಗರವಾಸಿ ಕಾಶ್ಮೀರಿ ಮಾಲಕ ತನ್ನ ಹೊಟೆಲ್ ನಲ್ಲೇ ಒಳಾಂಕಣವೊಂದರಲ್ಲಿ ಸಾಲು ಗಾದೆಗಳನ್ನು ಹಾಸಿದ ಸ್ಥಳವೊಂದರಲ್ಲಿ ವಿಶ್ರಮಿಸಲು ನಮಗೆ ಅವಕಾಶ ಮಾಡಿಕೊಟ್ಟ. ಈಗ, ಇನ್ನು ಸ್ವಲ್ಪ ಹೊತ್ತು, ಎನ್ನುತ್ತ ಕೊನೆಗೂ ಮಧ್ಯಾಹ್ನ ಒಂದೂವರೆ ಸುಮಾರಿಗೆ ಮಿಲಿಟರಿ ಕಾನ್ವಾಯ್ ನ ಬೆಂಗಾವಲಿನಲ್ಲಿ ವಾಹನಗಳ ಸಂಚಾರ ಆರಂಭವಾಯಿತು. ದಾರಿಯುದ್ದಕ್ಕೆ ಹಲವೆಡೆ ಕಲ್ಲು ತೂರಾಟದಿಂದ ಒಡೆದ ವಾಹನಗಳ ಗಾಜಿನ ಚೂರುಗಳ ರಾಶಿಗಳು ಕಣ್ಣಿಗೆ ಬೀಳುತ್ತಿದ್ದವು. ಬಹಳ ಪ್ರಯತ್ನ ಪಟ್ಟು ಪರಿಸ್ಥಿತಿಯನ್ನು ತಹಬಂದಿಗೆ ತಂದ ಭದ್ರತಾ ಪಡೆಯವರು ಉದ್ದಕ್ಕೂ ಇದ್ದರು.
ಜಮ್ಮುನಿಂದ ಶ್ರೀನಗರಕ್ಕೆ ಬರುವಾಗ “ಪಠಾಣ್ ಕಭಿ ನಂಹೀ ಡರತೇ” “ಅಗರ್ ಡರ್ ನಾ ಹೈ ತೋ ಯಾತ್ರಾ ವಾತ್ರಾ ಛೋಡಕರ್ ಘರ್ ಮೇ ಬೈಠನಾ ಚಾಹಿಯೇ,”ಎಂದೆಲ್ಲ ಶೌರ್ಯದಿಂದ ಮಾತನಾಡುತ್ತಿದ್ದ ಶಬ್ಬೀರ್ ಖಾನ್ ಮರುದಿನ ನಮ್ಮನ್ನು ಪೆಹಲ್ಗಾಂ ಗೆ ಕರೆದುಕೊಂಡು ಹೋಗಲೂ ಹಿಂದೇಟು ಹಾಕತೊಡಗಿದ. ನಮ್ಮ ಬೋಟ್ ಹೌಸ್ ತಲುಪಿ ರಾತ್ರಿ ನಾನು ರಿಯಾಜ್ ಗೆ ನೀವು ಗೊತ್ತುಮಾಡಿದ ಡ್ರೈವರ್ ನಮ್ಮನ್ನು ವಿನಾಕಾರಣ ಹೆದರಿಸುತ್ತಿರುವಂತಿದೆ ಎಂದೆ.”ತುಮ್ಹೆ ತೋ ತುಮ್ಹಾರಾ ಯಾತ್ರಾ ಕೀ ಪಡೀ ಹೈ” ಎಂದು ಅವನು ಅಂದದ್ದನ್ನು ಹೇಳಿದೆ. ಅಮರನಾಥ್ ಯಾತ್ರೆಯ ಅನುಭವಕ್ಕೆಂದೇ ನಾವು ಸಾಕಷ್ಟು ದುಡ್ಡು ಖರ್ಚು ಮಾಡಿಕೊಂಡು ಬಂದಿದ್ದೇವೆ. ಈಗ ಒಬ್ಬ ಶ್ರದ್ಧಾವಂತ ಮಹಮ್ಮದೀಯನಾಗಿ ನೀವೇ ಹಜ್ ಯಾತ್ರೆಗೆ ಹೊರಟಿದ್ದರೆ “ಮಹೋಲ್ ಇತನಾ ಖರಾಬ್ ಹೈ, ತುಮ್ಹೇ ತೋ ತುಮ್ಹಾರಾ ಹಜ್ ಕೀ ಪಡೀ ಹೈ” ಎಂದು ಯಾರಾದರೂ ಅಂದರೆ ನಿಮಗೆ ಏನನ್ನಿಸುತ್ತದೋ ಅದೇ ನಮಗೂ ಅನ್ನಿಸುತ್ತದೆ ಎಂದೆ.”ಹುಚ್ಚ ಅವನು, ನಾಳೆಯಿಂದ ಇಡೀ ಕಾಶ್ಮೀರದಾದ್ಯಂತದಿಂದ ಕರ್ಫ್ಯೂ ಲಿಫ್ಟ್ ಮಾಡಲಾಗುತ್ತದೆ. ಪಹಲ್ಗಾಂ ಅಂತೂ ಟೂರಿಸ್ಟ್ ನೆಲೆ. ಸಾಮಾನ್ಯವಾಗಿ ಪ್ರವಾಸಿಗಳಿಗೆ ತೊಂದರೆಯುಂಟು ಮಾಡುವದನ್ನು ಕಾಶ್ಮೀರಿ ಸಮಾಜ ಸಮ್ಮತಿಸುವದಿಲ್ಲ, ನಾನವನಿಗೆ ಹೇಳುತ್ತೇನೆ”. ಎಂದ ರಿಯಾಜ್. ಮರುದಿನ ಶಬ್ಬೀರ್ ಖಾನ್ ಯಾವ ಗೊಣಗಾಟವೂ ಇಲ್ಲದೇ ಯಥಾಪ್ರಕಾರದ ಲವಲವಿಕೆಯ ಮಾತುಗಳನ್ನಾಡುತ್ತ, ನಡುನಡುವೆ ಕೇಸರ್, ಒಣ ಹಣ್ಣು ಮುಂತಾದವುಗಳ ಅಂಗಡಿಗಳ ಮುಂದೆ ವಾಹನ ನಿಲ್ಲಿಸಿ ನಮ್ಮ ಮಹಿಳೆಯರು ಖರೀದಿ ಮಾಡುವ ವರೆಗೆ ಕಾಯುತ್ತ ಮುನ್ನಡೆದ.
 
ರಿಯಾಜ್ ಹೇಳುವದು ನಿಜವಿತ್ತು. ಕಾಶ್ಮೀರದಲ್ಲಿ ಟೂರಿಜಂ ಸ್ಥಗಿತವಾದರೆ ಕಶ್ಮೀರಿ ಮುಸ್ಲೀಮರ ಹೊಟ್ಟೆಪಾಡು ನಾಯಿಪಾಡು. ಬಹುಪಾಲು ಕಶ್ಮೀರಿ ಮುಸ್ಲಿಮರು ನಿಯತ್ತಿನ ದುಡಿಮೆಯಿಂದ ಬದುಕು ಕಟ್ಟಿಕೊಳ್ಳುತ್ತಿರುವವರು. ಅಮರನಾಥ ಯಾತ್ರೆ ಒಂದು ಪ್ರಮುಖ ಟೂರಿಸ್ಟ್ ಸೀಜನ್. ಟ್ಯಾಕ್ಸಿಗಳ ಮಾಲೀಕರಿಗೆ, ಚಾಲಕರಿಗೆ, ಬೋಟ್ ಹೌಸ್, ಹೊಟೆಲ್, ರೆಸ್ಟಾರಂಟ, ಲಾಡ್ಜಿಂಗ್ ಮೊದಲಾದವುಗಳನ್ನಿಟ್ಟುಕೊಂಡವರಿಗೆ ಕೈ ತುಂಬ ಕೆಲಸ, ಶಾಲು, ಸೀರೆ, ಸ್ವೆಟರ್, ಓವರ್ ಕೋಟು, ಕೇಸರ್, ಸೇಬು, ಒಣ ಹಣ್ಣು, ಕರಕುಶಲ ವಸ್ತುಗಳೇ ಮೊದಲಾದ ತರಹೇವಾರಿ ವಸ್ತುಗಳನ್ನು ಮಾರುವವರು ಕಶ್ಮೀರಿಗಳು. ತೀರ್ಥಯಾತ್ರಿಗಳನ್ನು ಜತನದಿಂದ ಗುಹೆಗೆ ಕರೆದೊಯ್ಯುವ, ಮರಳಿ ತರುವ ಡೋಲಿ (ಪಾಲ್ಕಿ)ಯವರು, ಸಹಸ್ರಾರು ಕುದುರೆಯವರು ಕಶ್ಮೀರಿಗಳು. ರಾತ್ರಿ ಅಲ್ಲೇ ಉಳಿಯಬಯಸುವ ಯಾತ್ರಿಗಳಿಗೆ ಬಾಲ್ತಾಲ್ ಬೇಸ್ ಕ್ಯಾಂಪ್ ನಲ್ಲಿ, ಪಹಲ್ಗಾಂ ಬಳಿಯ ಚಂದನವಾಡಿಯಲ್ಲಿ, ಪಂಚತರ್ಣಿಯಲ್ಲಿ ಸಾವಿರಾರು ಟೆಂಟ್ ಗಳಲ್ಲಿ ಒಬ್ಬರಿಗೆ ಒಂದು ರಾತ್ರಿಗಿಷ್ಟು ಎಂಬ ಲೆಕ್ಕದಲ್ಲಿ ವಾಸ್ತವ್ಯ ಕಲ್ಪಿಸುವವರು ಕಶ್ಮೀರಿಗಳು, ಕೊನೆಕೊನೆಗೆ ಶ್ರೀ ಅಮರನಾಥ್ ಮಹಾತ್ಮೆ ಯಂಥ ಹಲವು ಶೀರ್ಷಿಕೆಗಳ ಪುಸ್ತಕಗಳನ್ನೂ ದೇವರಿಗೆ ಸಮರ್ಪಿಸಿ ಪ್ರಸಾದವಾಗಿ ಮರಳುವ ವಸ್ತುಗಳ ಪೊಟ್ಟಣಗಳನ್ನು ಮಾರುವ ಅಂಗಡಿಯವರೂ ಕಾಶ್ಮೀರಿ ಮುಸ್ಲಿಮರು.
 
ಈ ಮಧ್ಯೆ ಹರಾಮಿ ವಿದೇಶಿ ಹಣ ಪಡೆದು ಭಾರತವನ್ನು ಅಭದ್ರಗೊಳಿಸುವ ಯೋಜನೆಯ ಭಾಗವಾಗಿ ದುಷ್ಕರ್ಮಗಳಲ್ಲಿ ತೊಡಗುವವರ ಸಂಖ್ಯೆ ಬೆಳೆಯುತ್ತಿದೆ ಎಂಬುದೂ ನಿಜ. ಜಮ್ಮುವಿನಿಂದ ಪಹಲ್ಗಾಂ ಗೆ ಹೋಗುವ ದಾರಿಯ ಬದಿಗೆ ಭತ್ತದ ಗದ್ದೆಗಳನ್ನು, ಕೇಸರ್ ಬೆಳೆಯುವ ಹೊಲಗಳನ್ನು ನಾನು ನೋಡಿದೆ. ಹಾಗೇ ಪಾಂಪೂರ್ ಮತ್ತು ಆವಂತಿಪುರದ ದಾರಿಯಲ್ಲಿ ಕೇಸರ ಸಂಸ್ಕರಿಸಿ ಮಾರುಕಟ್ಟೆಗೆ ಸಿದ್ಧಪಡಿಸುವ ಘಟಕಗಳನ್ನೂ, ಉದ್ದಕ್ಕೂ ಹತ್ತಾರು ಊರುಗಳಲ್ಲಿ ಕ್ರೀಡಾ ಸಾಮಗ್ರಿಗಳ ತಯಾರಿಕೆ ಮತ್ತು ಹೋಲ್ ಸೇಲ್ ದರದಲ್ಲಿ ಮಾರುವ ಘಟಕಗಳೇ ಲ್ಯಾಂಡ್ ಸ್ಕೇಪನ ಮುಖ್ಯ ಲಕ್ಷಣವಾಗಿದ್ದುದನ್ನೂ ನೋಡಿದೆ. ಹಾಗೇ ಆವಂತಿಪುರದಲ್ಲಿ ಹೆದ್ದಾರಿಯ ಮಗ್ಗುಲಲ್ಲೇ ಆವಂತಿವರ್ಮನ ದೇವಾಲಯ, ಆವಂತಿಸ್ವಾಮಿ ದೇವಾಲಯದ ಅವಶೇಷಗಳು ಕ್ಯಾರೆ ಅನ್ನುವವರಿಲ್ಲದೇ ಹರಡಿಕೊಂಡಿರುವದನ್ನೂ ನೋಡಿದೆ). ಆದರೆ ಕೃಷಿಗೆ ಪೂರಕವಾದ ವಿಸ್ತಾರವಾದ ಜಮೀನಾಗಲೀ, ಉದ್ದಿಮೆ, ಕೈಗಾರಿಕೆಗಳಾಗಲಿ ಇಲ್ಲದ ಕಶ್ಮೀರಕ್ಕೆ ಆಹಾರಪದಾರ್ಥಗಳನ್ನೂ ಒಳಗೊಂಡು ಬಹುಪಾಲು ಅಗತ್ಯವಸ್ತುಗಳು ಭಾರತದ ಇತರೆ ಭಾಗಗಳಿಂದಲೇ ಬರಬೇಕು. ಭಾರತದ ವಿವಿಧೆಡೆಯಿಂದ ಆಗಮಿಸುವ ಪ್ರವಾಸಿಗಳಿಂದಲೇ ಅವರ ಹೊಟ್ಟೆ ನೆತ್ತಿ ನಡೆಯಬೇಕು.”ಹಮಾರೆ ಯಂಹಾ ಬಹೋತ್ ಗರೀಬಿ ಹೈ ಸಾಬ್” ಎನ್ನುತ್ತಿದ್ದ ನಮ್ಮ ಬೋಟ್ ಹೌಸ್ ನಲ್ಲಿ ಸೇವಕನಾಗಿದ್ದ ಅಕ್ರಂ.”ಹಮಾರೆ ನೌಜವಾನ್ ಬಹೋತ್ ಎಜ್ಯುಕೇಟೇಡ್ ಹೈ, ಲೇಕೀನ್ ಕರನೇಕೋ ಕಾಮ್ ನಂಹೀ ಹೈ” ಎಂದ.
ಶ್ರೀನಗರದ ಚಿತ್ರವಂತೂ ವಿಲಕ್ಷಣ. ಅಲ್ಲಿ ನಾಗರಿಕರಿರುವಷ್ಟೇ ಸಂಖ್ಯೆಯಲ್ಲಿ ಭದ್ರತಾ ಪಡೆಗಳ ಯೋಧರೂ ಇದ್ದಂತಿತ್ತು. ಸದಾ ರೆಡಿ ಟು ಶೂಟ್ ಭಾವದಲ್ಲಿ ಇರುವ ಮಿಲಿಟರಿ ಮತ್ತು ಪ್ಯಾರಾಮಿಲಿಟರಿ ಪಡೆಗಳ ಯೋಧರು ಹೆಜ್ಜೆಹೆಜ್ಜೆಗೆ ಅಲ್ಲಿರುತ್ತಾರೆ, ಮಿಲಿಟರಿ ವಾಹನಗಳು ಅಲ್ಲಿ ನಿತ್ಯನೋಟ. ಕಣಿವೆಯ ಉದ್ದಗಲಕ್ಕೂ ಈ ದೃಶ್ಯಗಳು ಕಾಣಸಿಗುತ್ತವೆ. ಸಣ್ಣದೊಂದು ಗಲಭೆಯಾದರೂ ಕರ್ಫ್ಯೂ. ಅದೇಕೆಂದರೆ ಕಶ್ಮೀರಿಗಳು ಜುಲೂಸ್ (ಮೆರವಣಿಗೆ) ತೆಗೆಯುವ ಸಾಧ್ಯತೆಯನ್ನು ಚಿವುಟಿಹಾಕುವದಕ್ಕಾಗಿ. ಜೂಲೂಸ್ ಎಂದರೆ ಸಾವಿರಾರು ಯುವಕರು ಭದ್ರತಾ ಪಡೆಗಳತ್ತ ಕಲ್ಲು ತೂರುವದು ಎಂದರ್ಥ. ಅವರು ಎಸೆದ ಕಲ್ಲುಗಳನ್ನು ಭದ್ರತಾ ಪಡೆಯವರು ಎತ್ತಿಕೊಂಡು ಮರಳಿ ಅವರತ್ತಲೇ ಎಸೆಯುವ ದೃಶ್ಯಗಳನ್ನು ನೀವು ಟಿವಿಯಲ್ಲಿ ನೋಡಿರಬಹುದು. ಅದೊಂಥರ ಕಳ್ಳಾ ಪೋಲೀಸರ ಚುಪಾಚುಪ್ಪಿ ಆಟದಂತಿರುತ್ತದೆ. ಜೀವನ ಹೊಲಬುಗೆಡುತ್ತದೆ. ಗೋಲಿಬಾರಿನಲ್ಲಿ ಹೆಣ ಬೀಳುತ್ತವೆ. ಅದರ ಪ್ರತಿಧ್ವನಿ ಅನಂತನಾಗ್, ಬರಾಮುಲ್ಲಾ, ಗಂಡರ್ಬಾಲ್ ಮುಂತಾದೆಡೆ ಹಬ್ಬುತ್ತದೆ. ನಾವು ಅನಂತನಾಗ್ ಪಟ್ಟಣವನ್ನು ಎರಡು ಸಲ ದಾಟಿ ಹೋದೆವು. ಯಾರೋ ಹೇಳುತ್ತಿದ್ದರು ಅನಂತನಾಗ್ ನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಇಡೀ ಕಣಿವೆಯಲ್ಲಿ ನಿಯಂತ್ರಣಕ್ಕೆ ಬರುತ್ತದೆ ಎಂದು. ಒಂದೆಡೆ ಭಾರತದ ವಿವಿಧೆಡೆಯಿಂದ ಬಂದ ಪ್ರವಾಸಿಗಳಿಗೆ ಆತಿಥ್ಯ ನೀಡುತ್ತ, ಅದೇ ಕಾಲಕ್ಕೆ ಭಾರತದ ಭದ್ರತಾ ಪಡೆಗಳೊಂದಿಗೆ ಸೆಣಸುತ್ತ, ಕರ್ಫ್ಯೂದ ನೆರಳಲ್ಲಿ ಬದುಕುತ್ತ ಇರುವ ಈ ಪ್ರದೇಶದ ಕುರಿತ ಇತ್ತೀಚಿನ ವರದಿಯೊಂದು ಈ ಬೆಳವಣಿಗೆಗಳು ಕಾಶ್ಮೀರಿ ಯುವಜನಾಂಗವನ್ನು, ಮಹಿಳೆಯರನ್ನು ಮಾನಸಿಕವಾಗಿ, ಲೈಂಗಿಕವಾಗಿ ಹೇಗೆ ವ್ಯತಿರಿಕ್ತವಾಗಿ ಪ್ರಭಾವಿಸಿವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
 
ಜಮ್ಮುವಿನಿಂದ ಹರಿದ್ವಾರಕ್ಕೆ ಹೋಗುವ ಟ್ರೇನಿನಲ್ಲಿ ನಮ್ಮ ಎದುರಿನ ಸೀಟಿನಲ್ಲಿ ಇಬ್ಬರು ಪ್ರೌಢವಯಸ್ಕ ಮಹಿಳೆಯರು ಮತ್ತು ಒಬ್ಬ ಪುರುಷ ಇದ್ದರು. ಅವರು ಕಶ್ಮೀರಿ ಪಂಡಿತರು. ಕಶ್ಮೀರದಿಂದ ನಿರ್ವಸಿತರಾಗಿ ಮನೆ ಮಾರು ಕಳೆದುಕೊಂಡು ಪರದೇಶಿಗಳಂತೆ ಹೊರಬಿದ್ದವರು. ಅವರು ಸಹರಣಪುರಕ್ಕೆ ಹೊರಟಿದ್ದರು. ನಮ್ಮ ಯಾತ್ರೆಯ ಕುರಿತು ಕೇಳಿದರು.”ಅದೇ ನೀವು ಪಹಲ್ಗಾಂ ಗೆ ಹೋಗುವಾಗ ಸಿಗುತ್ತದಲ್ಲ, ಅನಂತ್ ನಾಗ್, ಅಲ್ಲಿದ್ದೆವು ನಾವು” ಎಂದು ನಿಟ್ಟುಸಿರಾದರು.”ಹಾಗೆ ಕಣಿವೆಯಿಂದ ನಿರ್ವಸಿತರಾಗಿ ಹೊರಬಿದ್ದ ನಿಮ್ಮ ಕಾಶ್ಮೀರಿ ಪಂಡಿತರ ಸಂಖ್ಯೆ ಎಷ್ಟು?”ಎಂದೆ. “ಎರಡು ಲಕ್ಷ” ಎಂದ ಅವರೊಂದಿಗಿದ್ದ ಗೃಹಸ್ಥ. “ಇದು ಅವರ ರಾಜ್ಯವೂ ಹೌದು, ಯಾವಾಗ ಬೇಕಾದರೂ ಕಾಶ್ಮೀರಿ ಪಂಡಿತರು ಬಂದು ತಮ್ಮ ಮನೆಮಾರುಗಳಲ್ಲಿ ವಾಸಿಸಬಹುದು ಎಂದೆಲ್ಲ ಮಾತನಾಡುತ್ತಾರಲ್ಲ ಕಾಶ್ಮೀರದ ಮುಖಂಡರು?” ಎಂದೆ.”ಬರೀ ಮಾತು ಸ್ವಾಮೀ. ನಮ್ಮನ್ನು ಹೊಡೆದು ಬಡಿದು ಮಾಡಿದರು. ನಮಗೆ ಅಲ್ಲಿ ಜೀವಭಯ ಕಾಡಿ ಅಭದ್ರತೆಯ ಭಾವ ಅಸಹನೀಯ ಅನ್ನಿಸಿದ್ದಕ್ಕೇ ಅಲ್ವಾ ನಾವು ನಮ್ಮ ಮನೆ ಮಾರು ಬಿಟ್ಟು ಬಂದದ್ದು. ಸುಮ್ಮನೇ ಯಾರಾದರೂ ಆಸ್ತಿ ಪಾಸ್ತಿ ಬಿಟ್ಟು ಬರ್ತಾರಾ ಹೇಳಿ?” ಎಂದರು ಮಹಿಳೆಯರು.”ಹಮಾರೆ ಜಮೀನ್ ಜಾಯ್ದಾದ ಪರ್ ಕಬ್ಜಾ ಕರ್ಕೆ ರಖಾಹೈ ಉನ್ಹೋನೆ” ಎಂದರು ಯಾವ ಸರಕಾರಗಳಿಂದಲೂ ತಮಗೆ ಏನೂ ಆಗಲಿಲ್ಲ. ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಹೆಣಗುತ್ತಿರುವದಾಗಿ ಹೇಳಿದರು. ಕಾಶ್ಮೀರದ ಬಡತನದ ಬಗ್ಗೆ ಅಕ್ರಂ ಹೇಳಿದ್ದನ್ನು ನಾನು ಹೇಳಿದೆ.”ನಂಹೀ, ಕೋಯಿ ಗರೀಬಿ ವರೀಬಿ ನಂಹೀ ಹೈ” ಎಂದರು ಮೂವರೂ ಸಾಮೂಹಿಕವಾಗಿ.”ಅಲ್ಲಿ ಬಡತನ ಮೊದಲಿತ್ತು. ೧೯೮೯ರ ಮೊದಲು. ಆಗ ಅವರು ನಮ್ಮ ಮನೆಗಳಲ್ಲಿ ಕೆಲಸ ಕಾರ್ಯಗಳಿಗೆ ಬರುತ್ತಿದ್ದರು, ಈಗ ಚೀನಾ, ಪಾಕಿಸ್ತಾನ, ಅಫ್ಘಾನಿಸ್ತಾನ್ ಮೊದಲಾದ ದೇಶಗಳಿಂದ ಅವರಿಗೆ ದುಡ್ಡು ಹರಿದು ಬರುತ್ತದೆ, ಎಲ್ಲಿಯ ಬಡತನ?” ಎಂದರು ಮಹಿಳೆಯರು.
ಯಾವ ಸರಕಾರವಾಗಲೀ ಕಾಶ್ಮೀರದಲ್ಲಿ ಪರಿಸ್ಥಿಯನ್ನು ನಿಯಂತ್ರಿಸಲು ಏನೋ ಮಾಡುತ್ತಿದೆ ಎಂಬುದನ್ನೂ ಅವರು ಒಪ್ಪಲಿಲ್ಲ.”ಜೋ ಕುಛ್ ಕರ್ ರಹೇ ಹೈಂ ಸಿ ಆರ್ ಪಿ ಎಫ್ ವಾಲೆ ಔರ್ ಬಿ ಎಸ್ ಎಫ್ ವಾಲೇ ಕರ್ ರಹೇ ಹೈಂ” ಎಂದರು. ೧೯೮೦ರ ದಶಕದ ಕೊನೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮಹ್ಮದ್ ಸಯೀದ್ ನನ್ನು ಮನಸಾರೆ ಟೀಕಿಸಿದರು.”ಶರಣಾಗತರಾದ ಕಾಶ್ಮೀರಿ ಉಗ್ರಗಾಮಿಗಳಿಗೆ ಆತ ನೌಕರಿ ಕೊಟ್ಟ.ಎಲ್ಲಿ? ಜಮ್ಮು ಕಾಶ್ಮೀರ್ ಪೋಲೀಸ್ ಇಲಾಖೆಯಲ್ಲಿ..ಇದನ್ನು ಅವಿವೇಕ ಅಂತೀರೋ ಏನಂತೀರಿ?”ಎಂದರು.
ಕಶ್ಮೀರ ನನಗೆ ಹಲವು ಸಲ ಉತ್ತರಗಳಿಲ್ಲದ ಪ್ರಶ್ನೆಗಳ ಗೋಜಲಾಗಿ, ಜಿಯೋ-ಪಾಲಿಟಿಕಲ್ ಆಟದಲ್ಲಿ ಅನ್ಯರ ಆಟಗಳ ಆಡುಂಬೊಲವಾಗಿ, ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತಲೇ ಸದಾ ಕಳವಳದಲ್ಲೂ, ಬೇಗುದಿಯಲ್ಲೂ ಬೇಯುವ ಜನರಿಂದ ಕೂಡಿದ ಶಾಪಗ್ರಸ್ತ ಭೂಭಾಗವಾಗಿ ತೋರಿತು.

‍ಲೇಖಕರು avadhi

7 August, 2013

4 Comments

  1. sunil rao

    Terrible and superb experiences

  2. ಎನ್.ನಾರಾಯಣಸ್ವಾಮಿ.

    ಜಮ್ಮು ಕಾಶ್ಮೀರದ ಬಗ್ಗೆ ಶೆಟ್ಟರ್ ಬರೆದಿರುವುದು ಸತ್ಯ.ನಾವು ವೈಷ್ಣೋದೇವಿ ಗುಡಿಗೆ ಹೋಗಿದ್ದಾಗ ಕೂಡ ಇಂತಹದೇ ಪರಿಸ್ಥಿತಿಯನ್ನ ಎದುರಿಸಿದ್ದೆವು.ಆದರೆ ಜಮ್ಮು ಮಾಮೂಲಿನಂತೆ ಮದುವೆ ದಿಬ್ಬಣ ಮಂತಾದ ಎಲ್ಲಾ ಚಟುವಟಿಕೆಗಳು ನಡೆಯುತ್ತಿದ್ದವು.ಈ ರಾಜಕಾರಣಿಗಳಿಂದ ಇದೆಲ್ಲಾ ಹೊಲಸು ಹಿಡಿಯಲು ಪ್ರಾರಂಭಿಸುತ್ತದೆ.ಅದರಲ್ಲೂ ಮಪ್ತಿಮಹಮದ್ನಂತೂ.ಭಯೋತ್ಪಾದಕರನ್ನು ಬಿಡಿಸಲು ತನ್ನ ಸ್ವಂತ ಮಗಳನ್ನೇ ಅಪಹರಿಸಲು ಸಹಕಾರ ಕೊಟ್ಟ ಅವಿವೇಕಿ.

  3. bharathi b v

    Namagoo amarnath yathre madsidri ashok… adbhuthavaagi bardidiri

    • Ashok Shettar

      ಭಾರತಿಯವರೇ, ಇದು ಅಮರನಾಥ್ ಯಾತ್ರೆಯ ಭಾಗವಾಗಿ ಕಾಶ್ಮೀರದ ಕಥೆ. ಅಮರನಾಥ್ ಗುಹೆ, ಅಲ್ಲಿಯ ಪರಿಸರ, ಅನುಭೂತಿ, ಅದರ ಐತಿಹ್ಯಗಳೆಲ್ಲದರ ಕುರಿತ ಬರಹ ಮುಂದಿನವಾರ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading