ಚುನಾವಣೆ ಮುಗಿಯಿತು,ಕಡಿಮೆ ಕಳ್ಳ ಅಭ್ಯರ್ಥಿ ಯಾರು, ಕಡಿಮೆ ಭ್ರಷ್ಟ ಪಕ್ಷ ಯಾವುದು ಎಂದೆಲ್ಲ ಅಳೆದು ಸುರಿದು ಯೋಚಿಸಿ ಮತದಾನ ಮಾಡಿ ಬಂದೂ ಆಯಿತು. ಸಂಜೆ ಫೇಸ್ ಬುಕ್ ನ ಫೀಡ್ ಬ್ಯಾಕ್ ನ ಮೇಲೆ ಕಣ್ಣಾಡಿಸುತ್ತಿದ್ದಾಗ ಗೆಳೆಯ ಆರ್.ಎಸ್.ಹಾಲಸ್ವಾಮಿಯವರ ಸ್ಟೇಟಸ್ ಅಪ್ ಡೇಟ್ ಕಣ್ಣಿಗೆ ಬಿತ್ತು. ಶಿವಮೊಗ್ಗದ ಎಟಿಎನ್ಸಿ ಕಾಲೇಜಿನ ಆವರಣವನ್ನು ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದ್ದು, ಮತದಾನದ ಅವಧಿ ಮುಗಿದ್ದು ಕತ್ತಲಾಗುತ್ತಿದ್ದಂತೇ ಎಲ್ಲೆಡೆಯಿಂದ ಚುನಾವಣಾ ಸಿಬ್ಬಂದಿ ಮತಯಂತ್ರಗಳೊಂದಿಗೆ ಅಲ್ಲಿಗೆ ಆಗಮಿಸಿದ ಹೊತ್ತಿಗೆ ಭಾರಿ ಮಳೆ ಸುರಿದು ವಿದ್ಯುತ್ ಕೈಕೊಟ್ಟು ಅವ್ಯವಸ್ಥೆಯುಂಟಾಗಿ ಸುರಿವ ಮಳೆಯಲ್ಲೇ, ಕಗ್ಗತ್ತಲಲ್ಲೇ ಸಿಬ್ಬಂದಿ ಎರಡು ಗಂಟೆಗಳ ಕಾಲ ಯಾವುದೇ ಭದ್ರತೆ, ಬೆಳಕು ಇಲ್ಲದೆ ಕಾಲೇಜು ಮೈದಾನದಲ್ಲಿ ಕೂರುವಂತಾಗಿತ್ತು. ಈ ಸಿಬ್ಬಂದಿ ಶನಿವಾರ ಬೆಳಗ್ಗೆಯಿಂದ ಚುನಾವಣಾ ಕರ್ತವ್ಯದಲ್ಲಿ ಇದ್ದು, ಭಾನುವಾರ ಮತಯಂತ್ರಗಳನ್ನು ಒಪ್ಪಿಸಿ, ಮನೆಗೆ ತೆರಳುವ ತವಕದಲ್ಲಿದ್ದವರು. ಜಿಲ್ಲಾಡಳಿತ ಇಲ್ಲಿ ಜನರೇಟರ್ ವ್ಯವಸ್ಥೆ ಮಾಡದ ಕಾರಣ ಕತ್ತಲಲ್ಲೇ ಕಾಲ ಕಳೆಯುವುದು ಅನಿವಾರ್ಯವಾದ. ಈ ಸಂದರ್ಭದಲ್ಲಿ ಸೂಕ್ತ ರಕ್ಷಣೆ ಕೂಡ ಇಲ್ಲದ ಕುರಿತು ಅವರು ಬರೆದಿದ್ದರು.
ಹೀಗಾದರೆ ಮತಗಟ್ಟೆಗಳಲ್ಲಿ ಸುಮಾರು ನಲವತ್ತು ತಾಸು ಇದ್ದು ಆಗಲೇ ಹೈರಾಣಾಗಿ ಬಂದ ಸಿಬ್ಬಂದಿಯ ಮನಸ್ಥಿತಿ ಹೇಗಿರುತ್ತದೆ ಎಂದು ನನಗಂತೂ ಸಲೀಸಾಗಿ ಅರ್ಥವಾಗುತ್ತದೆ. ಮತದಾನ ಮಾಡಲು ಹೋದಾಗ ನನ್ನ ಕಣ್ಣು ಮೊದಲು ಕೇಂದ್ರೀಕೃತವಾಗುವದು ಮತಗಟ್ಟೆಯ ಸಿಬ್ಬಂದಿಯ ಮೇಲೆ. ಒಂದು ಬಗೆಯ ಸಹಾನುಭೂತಿಯಿಂದಲೇ ಅವರನ್ನು ನಾನು ನೋಡುತ್ತೇನೆ. ಯಾರು ಚುನಾವಣೆ ಕರ್ತವ್ಯ ನಿರ್ವಹಿಸಿರುವದಿಲ್ಲವೋ ಅವರಿಗೆ ಆ ಸಿಬ್ಬಂದಿಯ ತೊಂದರೆ, ಕಳವಳ, ತಬ್ಬಲಿತನ ಗೊತ್ತೇ ಇರುವದಿಲ್ಲ. ಚುನಾವಣೆ ಕರ್ತವ್ಯಕ್ಕಾಗಿ ಆಯ್ಕೆಯಾದ ಕುರಿತ ಪತ್ರ ರಿಟರ್ನಿಂಗ್ ಆಫಿಸರ್ ಕಚೇರಿಯಿಂದ ಬಂದು ತಲುಪಿದಾಗಿನಿಂದ ಆ ಬೇಗುದಿ ಶುರುವಾಗುತ್ತದೆ. ಆಮೇಲೆ ಎರಡು ಹಂತದ ತರಬೇತಿ ಇರುತ್ತದೆ. ಅಲ್ಲಿ ವಿಷಯಗಳು ಸ್ಪಷ್ಟವಾಗುವದಕ್ಕಿಂತ ಗೋಜಲಾಗುವದೇ ಹೆಚ್ಚು. ನಾನು “ಎಲೆಕ್ಶನ್ ಡ್ಯೂಟಿ” ಯನ್ನು ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಪ್ರಿಸೈಡಿಂಗ್ ಅಧಿಕಾರಿಯಾಗಿ ಒಟ್ಟು ನಾಲ್ಕು ಸಲ ನಿರ್ವಹಿಸಿದ್ದೇನೆ, ಒಂದು ಲೋಕಸಭಾ ಉಪಚುನಾವಣೆ, ಮತ್ತೊಂದು ಲೋಕಸಭಾ ಚುನಾವಣೆ, ಒಂದು ಸ್ಥಳೀಯ ಸಂಸ್ಥೆಗಳ (ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ) ಚುನಾವಣೆ, ಒಂದು ವಿಧಾನಸಭೆ ಮತ್ತು ಲೋಕಸಭೆ ಸಂಯುಕ್ತ ಚುನಾವಣೆ….! ಕೊನೆಯದಾಗಿ ನಾನು ನಿರ್ವಹಿಸಿದ್ದ ಚುನಾವಣೆ 2009ರ ಲೋಕಸಭಾ ಚುನಾವಣೆ. ಮಂಜುನಾಥ ಕುನ್ನೂರ್ ವಿರುದ್ಧ ಪ್ರಲ್ಹಾದ್ ಜೋಷಿ ಕಣದಲ್ಲಿದ್ದ ಕ್ಷೇತ್ರದ ಮತಗಟ್ಟೆಯೊಂದರಲ್ಲಿ, ಹುಬ್ಬಳ್ಳಿಯಲ್ಲಿ. ಅದು ಇದ್ದುದರಲ್ಲಿಯೇ ಸ್ವಲ್ಪ ಒಳ್ಳೆಯ ಅನುಭವ.
ಅಲ್ಲಿ ಒಟ್ಟು ಮೂರು ಮತಗಟ್ಟೆಗಳು, ಹೀಗಾಗಿ ಸಾಕಷ್ಟು ಭದ್ರತಾ ಸಿಬ್ಬಂದಿ ಇತ್ತು, ಆ ಮತಗಟ್ಟೆಗಳು ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಇದ್ದವಾದ್ದರಿಂದ ಶೌಚ ಇತ್ಯಾದಿ ಇದ್ದವು. ಒಟ್ಟು ಮತದಾರರ ಸಂಖ್ಯೆ ಎಂಟುನೂರರಷ್ಟಿತ್ತು. ಆ ಮುಂಚೆ ನಾನು ನಿರ್ವಹಿಸಿದ ಚುನಾವಣೆಗಳಲ್ಲೆಲ್ಲ ಸಾವಿರದಿನ್ನೂರು ಮಿಕ್ಕಿದ ಸಂಖ್ಯೆಯ ಮತದಾರರಿದ್ದ ಮತಗಟ್ಟೆಗಳೇ. ಅದು ದೊಡ್ಡ ಸಂಖ್ಯೆ, ಮತದಾರರ ಸಂಖ್ಯೆ ಹನ್ನೆರಡು ನೂರು ಮೀರಿದ್ದರೆ ನೀವು ಸಂಜೆ ಆರರ ವರೆಗೆ ಕ್ಷಣವೂ ಬಿಡುವಿಲ್ಲದೇ ಕತ್ತೆಯಂತೆ ದುಡಿಯುತ್ತಿರುತ್ತೀರಿ ಅಂತ ಅರ್ಥ.
ನಿಮಗೆ ಗೊತ್ತಿರಲಿ. ಈ ಚುನಾವಣೆ ಸಿಬ್ಬಂದಿಯಲ್ಲಿ ಹಲವು ಸಲ ಹಸಿ ಬಾಣಂತಿಯರು ತಮ್ಮ ಕೈಗೂಸುಗಳನ್ನು ಎತ್ತಿಕೊಳ್ಳಲು ತಮ್ಮ ತಾಯಿ ಅಥವಾ ಅತ್ತೆಯೊಂದಿಗೆ ಬಂದಿರುತ್ತಾರೆ. ಮೈಯ್ಯಲ್ಲಿ ಜ್ವರವಿದ್ದು ಆಂಟಿಬಯೋಟಿಕ್ ಮಾತ್ರೆ ತೆಗೆದುಕೊಂಡು ಬಂದವರಿರುತ್ತಾರೆ. ಹೃದ್ರೋಗದ ತೊಂದರೆ ಇರುವವರು ಇರುತ್ತಾರೆ. ಅಥವಾ ಹಲವು ವರ್ಷಗಳ ಹಿಂದೆ ಬೆನ್ನು ನೋವು ಚುನಾವಣೆ ಸಮಯಕ್ಕೆ ಸರಿಯಾಗಿ ನನ್ನ ಪಾಲಿನ ಶನಿಯಾಗಿ ಒಕ್ಕರಿಸಿ ನಾನು ನೈಂಟಿ ಮತ್ತು ಒನ್ ಏಯ್ಟೀ ಡಿಗ್ರೀ ಮಧ್ಯೆ ಎಲ್ಲೋ ಒಂದು ಯಾಂಗಲ್ ನಲ್ಲಿ ಬಾಗಿ ಚುನಾವಣೆ ಕರ್ತವ್ಯ ನಿರ್ವಹಿಸಬೇಕಾಗಿ ಬಂದಂಥ ಅನಿರೀಕ್ಷಿತ ಸಮಸ್ಯೆಗಳಿಗೆ ಗುರಿಯಾದವರೂ ಇರಬಹುದು. ನನ್ನ ಭಾಗ್ಯ, ಆಗ ನನ್ನ ಮತಗಟ್ಟೆಯ ಮೊದಲ ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿ “ಸಾರ್, ನೀವು ನಿಶ್ಚಿಂತೆಯಿಂದಿರಿ, ರೆಸ್ಟ್ ತಗೊಳ್ಳಿ, ನಮಗೆ ಇದು ಹೊಸದಲ್ಲ, ನೀವು ಬ್ಯಾಲಟ್ ಪೇಪರ್ಸ್ ಗೆ ಸೈನ್ ಹಾಕ್ತಾ ಇರಿ ಸಾಕು, ಬಾಕಿ ಎಲ್ಲಾ ನಾವು ನೋಡ್ಕೋತೀವಿ” ಅಂತ ಹೇಳಿ ಹಾಗೆ ನಡೆದುಕೊಂಡಿದ್ದಷ್ಟೇ ಅಲ್ಲ, ಹಿಂದಿನ ರಾತ್ರಿ (ಮರುದಿನ ಮತಗಟ್ಟೆ ಅಧಿಕಾರಿಯಾಗಿದ್ದ ನನ್ನ ಮುಂದೆ ಅಲಂಕೃತವಾಗಲಿದ್ದ ) ಟೇಬಲ್ ಮೇಲೆ ನನ್ನನ್ನು ಬೋರಲಾಗಿ ಮಲಗಲು ಹೇಳಿ ನನ್ನ ಸೊಂಟ ಬೆನ್ನು ಎಲ್ಲಕ್ಕೂ ಮೂವ್ ಹಚ್ಚಿ ನೀವಿ ಸ್ವಲ್ಪ ಉಪಶಮನಗೊಳಿಸಿದ್ದರು.
ಎಲ್ಲರೂ ಹಾಗೆ ಇರುವದಿಲ್ಲ. ಕೆಲವರು ಮೈಗೆ ಎಣ್ಣೆ ಬಳಿದುಕೊಂಡೇ ಬಂದಂತೆ ಜಾರಿಕೊಳ್ಳುವ ದರಿದ್ರಗಳಿರುತ್ತವೆ. ಅವಕ್ಕೆ ಕೆಲಸ ಮಾಡುವದು ಬೇಡ. ಒಲ್ಲದ ಮನಸಿನಿಂದ ಬಂದಿರುತ್ತವೆ, ಯಾವ ಕೆಲಸಕ್ಕೂ ಯಾವ ಕರ್ತವ್ಯ ಸಂಬಂಧಿ ವಿವರಕ್ಕೂ ಮನಸೊಡ್ಡಿಕೊಳ್ಳಲೊಲ್ಲವು. ಈ ಶಬ್ದಗಳು ಕಟು ಎನ್ನಿಸಬಹುದು. ಆದರೆ ಅನುಭವಿಸಿದವರಿಗೇ ಆ ನೋವು ಮತ್ತು ಅದರ ಕಹಿ ನೆನಪು ಗೊತ್ತಿರುತ್ತದೆ. ನನ್ನ ಸೌಭಾಗ್ಯ, ನನಗೆ ಅಂಥವು ಎರಡೇ ಎದುರಾದವು.

ಎಲೆಕ್ಶನ್ ಡ್ಯೂಟಿ ಮತದಾನದ ದಿನಾಂಕದಂದು ಮತದಾನದ ಪ್ರಕ್ರಿಯೆ ಮುಗಿದ ಮೇಲೆ ವ್ಯವಧಾನದಿಂದ ಅದಕ್ಕೆ ಸಂಬಂಧಿಸಿದ ಎಲ್ಲ ಕಾಗದಪತ್ರಗಳ ತುಂಬುವಿಕೆ, ಲಕೋಟೆಗಳಲ್ಲಿ ಹಾಕಿ ಸೀಲ್ ಮಾಡುವಿಕೆಯಂಥ ಕೆಲಸಗಳು ಮುಗಿದ ಮೇಲೆ ಅವುಗಳನ್ನೆಲ್ಲ ಮತಪೆಟ್ಟಿಗೆ/ ಮತಯಂತ್ರಗಳೊಂದಿಗೆ ಡಿಮಸ್ಟರಿಂಗ್ ಕೇಂದ್ರಗಳಲ್ಲಿ ಸರತಿ ಸಾಲಲ್ಲಿ ನಿಂತು ಮರಳಿಸಿ, ಪಾವತಿ ಪಡೆಯುವದರೊಂದಿಗೆ ಅಂದರೆ ಹೆಚ್ಚು ಕಡಿಮೆ ರಾತ್ರಿಯ ಹತ್ತು-ಹತ್ತೂವರೆ ಹೊತ್ತಿಗೆ ಮುಗಿಯುತ್ತದೆ. ಸರಕಾರ ಒದಗಿಸಿದ ಬಸ್ ಗಳಲ್ಲಿ ಒಬ್ಬ ರೂಟ್ ಅಧಿಕಾರಿ ಯಾವ ಕ್ರಮದಲ್ಲಿ ಯಾವ್ಯಾವ ಟೀಮ್ ಗಳನ್ನು ಯಾವ್ಯಾವ ಮತಗಟ್ಟೆಗಳಿಗೆ ಹಿಂದಿನ ದಿನ ಇಳಿಸಿ ಹೋಗಿರುತ್ತಾನೋ ಅದರ ಉಲ್ಟಾ ಕ್ರಮದಲ್ಲಿ ಮರುದಿನ ಹತ್ತಿಸಿಕೊಂಡು ಡಿಮಸ್ಟರಿಂಗ್ ಕೇಂದ್ರಗಳಿಗೆ ತಂದು ಬಿಡುತ್ತಾನೆ. ಅವು ಮೀನಿನ ಮಾರುಕಟ್ಟೆಗಳಂತೆ ಗಿಜಿಗಿಜಿಯಾಗಿರುತ್ತವೆ.
ಎಲೆಕ್ಷನ್ ಡ್ಯೂಟಿ ಮತದಾನದ ಹಿಂದಿನ ದಿನ ಬೆಳಗಿನಿಂದಲೇ ಅಂದರೆ ನೀವು ಮಸ್ಟರಿಂಗ ಕೇಂದ್ರಕ್ಕೆ ಹೋಗಿ ಚುನಾವಣಾ ಸಾಮಗ್ರಿಯನ್ನು ಪಡೆದುಕೊಳ್ಳುವದರೊಂದಿಗೆ ಆರಂಭವಾಗಿರುತ್ತದೆ. ಗುಂಡುಸೂಜಿ, ಗೋಂದು, ಗುರುತು ಮಾಡಿರುವ ಮತದಾರರ ಪಟ್ಟಿ, ಅಭ್ಯರ್ಥಿಗಳ ಯಾದಿ, ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್ ಯುನಿಟ್ ಎಂಬ ಎರಡು ಮತಯಂತ್ರಗಳು,ಅವುಗಳ ಕೇಬಲ್ ಮತ್ತು ಬ್ಯಾಟರಿಗಳು, ಮತಗಟ್ಟೆ ಅಧಿಕಾರಿಯ ಕೈಪಿಡಿ (ಅದು ನಿಮ್ಮ ಬೈಬಲ್ ಇದ್ದಂತೆ), ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಎಂಬ ಹಲವಾರು ತರಹದ ಘೋಷಣೆಗಳು, ತುಂಬಬೇಕಾದ ತಪಸೀಲುಗಳು ಇತ್ಯಾದಿ ಮುದ್ರಿತ ಹಾಳೆಗಳು, ಪೇಪರ್ ಸೀಲ್ ಗಳು, ಅವುಗಳನ್ನು ಹಾಕಬೇಕಾದ ವಿವಿಧ ಆಕಾರದ ಲಕೋಟೆಗಳು, ಒಂದು ನೂರು ಮೀಟರ್ ಒಳಗೆ ಪ್ರವೇಶಿಸಲು ಅವಕಾಶವಿಲ್ಲ ಎಂಬ ಪೋಸ್ಟರುಗಳು, ಬೆರಳಿಗೆ ಹಚ್ಚುವ ಶಾಯಿ, ಅದನ್ನು ಹಚ್ಚುವ ಕಡ್ಡಿ,ಶಾಯಿಯ ಬಾಟಲನ್ನು ಮರಳು ತುಂಬಿ ಅದು ಬೀಳದಂತೆ ಇಡಲು ಒಂದು ಬಟ್ಟಲು, ಪೆನ್ನು ಪೆನ್ಸಿಲ್ಗಳು, ಗುಪ್ತಮತದಾನಕ್ಕೆ ಅನುವಾಗಬೇಕಾದಂತೆ ಟೇಬಲ್ ಮೇಲೆ ಮರೆಮಾಡಿದಂತೆ ರೂಪಿಸಲು ರಟ್ಟಿನ ಷೀಟ್ ಗಳು, ಸ್ಟ್ಯಾಂಪ್ ಪ್ಯಾಡ್ ಮತ್ತು ಸೀಲು (ಸಿಕ್ಕಾ)ಗಳು, ಹೀಗೆ ನೂರಾರು ಬಗೆಯ ವಸ್ತುಗಳಿರುತ್ತವೆ. ಯಾವುದಿಲ್ಲದಿದ್ದರೂ ನಡೆಯುವದಿಲ್ಲ. ಅದನ್ನೆಲ್ಲ ನೀವು ಪರಿಸೀಲಿಸಿಕೊಳ್ಳಬೇಕು.
ಮತದಾನವೇನೋ ಮುಂಜಾನೆ ಏಳಕ್ಕೆ ಪ್ರಾರಂಭವಾಗುತ್ತದೆ ಆದರೆ ನಿಮ್ಮ ಸಿದ್ಧತೆ ಬೆಳಿಗ್ಗೆ ಆರಕ್ಕೆ ಶುರು ಆಗಬೇಕು. ಉಪಸ್ಥಿತರಿರುವ ವಿವಿಧ ಪಕ್ಷಗಳ ಏಜಂಟರ ಮುಂದೆ ಮತಪೆಟ್ಟಿಗೆ ಅಥವಾ ಮತಯಂತ್ರದಲ್ಲಿ ಮೊದಲೇ ಯಾವದೇ ಮತಪತ್ರವಾಗಲಿ ಮತದಾನವಾದ ಅಂಕಿಯಾಗಲೀ ಇಲ್ಲದೇ ಖಾಲಿ ಇದೆ ಎಂಬುದನ್ನು ತೋರಿಸಬೇಕು. ಅವರ ಸಮಕ್ಷಮ ಪೇಪರ್ ಸೀಲ್ ಹಾಕಿ ಮತಯಂತ್ರವನ್ನು ಅಥವಾ ಮತಪೆಟ್ಟಿಗೆಯನ್ನು ಭದ್ರಪಡಿಸಬೇಕು. ಆಮೇಲೆ ವಿದ್ಯುಕ್ತವಾಗಿ ಘೋಷಣೆಯೊಂದರ ಸಿದ್ಧ ಪಾಠವನ್ನು ಗಟ್ಟಿಯಾಗಿ ಅಲ್ಲಿ ನೆರೆದವರಿಗೆ ಕೇಳಿಸುವಂತೆ ಓದಿ ಮತದಾನ ಪ್ರಾರಂಭಿಸಬೇಕು. ಇಷ್ಟಾಗಬೇಕಾದರೆ ನೀವು ಬೆಳಿಗ್ಗೆ ಐದಕ್ಕೆ ಎದ್ದಿರಬೇಕು, ನೀರಿದ್ದರೆ ಸ್ವಲ್ಪ ಅಲ್ಲೇ ಒಂದು ಮರೆ ಹುಡುಕಿ ಶೌಚ ಇತ್ಯಾದಿ ಮುಗಿಸಿ ಮೈಮೇಲಿಷ್ಟು ತಣ್ಣೀರು ಸುರಿದುಕೊಂಡು ಬಟ್ಟೆ ಧರಿಸಿ ನಿಮ್ಮ ಬ್ಯಾಡ್ಜ್ ಇತ್ಯಾದಿಗಳಿಂದ ಅಲಂಕೃತರಾಗಿ ಇಡೀ ದಿನದ ಯಜ್ಞಕ್ಕೆ ಸಿದ್ಧರಾಗಬೇಕು.

ಆ ಮೇಲೆ ಒಮ್ಮೆ ಮತದಾನ ಶುರು ಆಯಿತೋ ಅದಕ್ಕೊಂದು ಗತಿ ಪ್ರಾಪ್ತವಾಗುತ್ತ ಹೋಗಿ ನಿಮ್ಮ ಕೆಲಸಗಳು ಯಾಂತ್ರಿಕವಾಗಿ ಪ್ರಕ್ರಿಯೆ ನಡೆಯುತ್ತದೆ. ಆದರೆ ಮಧ್ಯೆ ಮಧ್ಯೆ ಕಿರಿಕಿರಿಗಳಿದ್ದೇ ಇರುತ್ತವೆ. ಅವು ಇಂಥವು ಅಂಥವು ಎಂದು ಹೇಳಲಾಗದ ಸಮಸ್ಯೆಗಳು. ನೀವು ಪಿ.ಆರ್.ಓ( ಪ್ರಿಸೈಡಿಂಗ್ ಆಪೀಸರ್=ಮತಗಟ್ಟೆ ಅಧಿಕಾರಿ) ಎಂದರೆ ಎಲ್ಲಕ್ಕೂ ಅಂತಿಮವಾಗಿ ನೀವೇ ಹೊಣೆ. ಏನಾದರೂ ಸಮಸ್ಯೆ ಬಂದರೆ ನಿಮ್ಮ ಇತರ ಸಿಬ್ಬಂದಿ ಕೈ ತೋರುವದು ನಿಮ್ಮೆಡೆಗೇ, ನಿರ್ಧಾರ ಕೈಗೊಳ್ಳಬೇಕಾದವರು ನೀವೇ. ಕೆಲವರಿಗೆ ಓಟು ಹಾಕುವದು ಹೇಗೆ ಎಂದು ಗೊತ್ತಿರುವದಿಲ್ಲ, ನೀವು ಪಕ್ಕದಲ್ಲಿ ನಿಂತು ತೋರಿಸಿಕೊಡಲು ನಿಯಮದಲ್ಲಿ ಅವಕಾಶವಿಲ್ಲ. ಹುಬ್ಬಳ್ಳಿಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಒಂದು ಮುಸ್ಲಿಂ ಮುದುಕಿ “ಇಂದ್ರಾ ಗಾಂಧಿಕೋ ಓಟ್ ಡಾಲ್ನಾ ಹೈರೇ ಬಾಬಾ, ಕಂಹಾ ಡಾಲ್ನಾ? ಇಂದ್ರಾ ಗಾಂದಿಕೋ ಕೈಸೆ ಡಾಲ್ನಾರೇ ಬಾಬಾ?” ಎಂದು ಗಂಟು ಬಿತ್ತು, (ಇಂದ್ರಾ ಗಾಂಧಿ ಸತ್ತು ಆಗಲೇ ಹಲವಾರು ವರ್ಷಗಳು ಕಳೆದು ಹೋಗಿದ್ದವು..!) ವಯಸ್ಸಾದವರ , ಕುರುಡರ ಸಹಾಯಕ್ಕೆಂದು ಪದೇ ಪದೇ ಒಬ್ಬನೇ ವ್ಯಕ್ತಿ ಬರುತ್ತಿದ್ದರೆ ಅಂಥವರ ಮೇಲೆ ಕಣ್ಣಿಡಬೇಕು, ಇಲ್ಲವಾದರೆ ಇನ್ನೊಂದು ಪಕ್ಷದ ಚುನಾವಣಾ ಏಜೆಂಟಗಳು ತಕರಾರು ತೆಗೆಯುತ್ತಾರೆ.
ಒಮ್ಮೆ ಒಂದು ಜಿಲ್ಲೆಯವರು ಅದೇ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವಂತಿಲ್ಲ ಎಂದು ಎಲೆಕ್ಶನ್ ಕಮೀಶನ್ ತೀರ್ಮಾನಿಸಿದ್ದರಿಂದಾಗಿ ನಾವು ನೆರೆಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಕೆಲಸ ನಿರ್ವಹಿಸಬೇಕಾಗಿತ್ತು. ನಮ್ಮ ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕರನ್ನು ಹೊತ್ತ ಬಸ್ಸುಗಳು ಚಿಕ್ಕೋಡಿಯನ್ನು ತಲುಪಿ ನಮ್ಮನ್ನು ಒಂದು ವಸತಿ ಸ್ಥಳದಲ್ಲಿ ಇಳಿಸಿದವು. ಮರುದಿನ ಬಸವಪ್ರಭು ಕೋರೆ ಕಾಲೇಜು ಮೈದಾನದಲ್ಲಿ ನಮ್ಮ ಮಸ್ಟರಿಂಗ್ ಕೇಂದ್ರದಲ್ಲಿ ಸಾಮಾನು ಪಡೆದುಕೊಂಡು ನನ್ನ ಟೀಂ ನ ಇತರ ಸದಸ್ಯರೊಂದಿಗೆ ಬೋರಗಾಂವ್ ವಾಡಿ ಎಂಬ ನಾಮ್ ಕಾ ವಾಸ್ತೆ ಕರ್ನಾಟಕದಲ್ಲಿರುವ ಮತ್ತು ಇನ್ನುಳಿದಂತೆ ಭಾಷೆಯನ್ನು ಒಳಗೊಂಡು ಸಂಪೂರ್ಣ ಮರಾಠಿಮಯವಾಗಿದ್ದ ಹಳ್ಳಿಗೆ ಹೋದೆ. ರಾತ್ರಿಯೇ ಒಂದು ಪಕ್ಷದವರು ಬಂದು ಇನ್ನೊಂದು ಪಕ್ಷದವರ ವಿರುದ್ಧ ತಕರಾರು ಇತ್ಯಾದಿ ಹೇಳುವದಕ್ಕೆ ಶುರು ಮಾಡಿದ್ದರು. ಬಹುಪಾಲು ಎಲ್ಲರೂ ಲಿಂಗಾಯತರು. ಎಲ್ಲರೂ ಕನ್ನಡವನ್ನು ಮಾತಾಡಬಲ್ಲವರು. ಆದರೆ ಮರಾಠಿಯಲ್ಲಿ ಮಾತನಾಡುತ್ತಿದ್ದರು. ಅಲ್ಲಿಂದ ಈಚಲಕರಂಜಿ ಒಂಭತ್ತು ಮೈಲು. ಅವರೆಲ್ಲ ದುಡಿಮೆಗೆ ಹೋಗುತ್ತಿದ್ದುದು ಮಹಾರಾಷ್ಟ್ರದ ಆ ಪಟ್ಟಣಕ್ಕೇ. ಮತಗಟ್ಟೆಯಲ್ಲಿ ತುಂಬಿಕೊಳ್ಳುವದು, ಆ ಪಕ್ಷದವರು ಈ ಪಕ್ಷದವರ ಮೇಲೆ ಇವರು ಅವರ ಮೇಲೆ ಹೀಗೆ ಮಾತಿಗೆ ಮಾತು, ದೊಡ್ಡ ದನಿಯಲ್ಲಿ ಗಲಾಟೆ, ಜಗಳ..! ಬರೀ ಇದೇ.
ಹನ್ನೆರಡು ನೂರಕ್ಕೆ ಮಿಕ್ಕಿ ಓಟರ್ ಗಳಿದ್ದ, ಬೆವರೊರೆಸಿಕೊಳ್ಳಲೂ ಪುರುಸೊತ್ತಿಲ್ಲದಂತೆ ನಾವು ಪೋಲ್ಲಿಂಗ್ ನಡೆಸಬೇಕಾಗಿದ್ದ, ಮತ್ತು ಲೋಕಸಭೆ ಮತ್ತು ವಿಧಾನಸಭೆ ಎರಡಕ್ಕೂ ಏಕಕಾಲಕ್ಕೆ ಮತದಾನ ನಡೆದ ಚುನಾವಣೆ ಅದು. ನನಗೋ ತಲೆಬಿಸಿ. ಆಗ ನನ್ನ ಬಳಿ ಮೊಬೈಲ್ ಫೋನೂ ಇರಲಿಲ್ಲ. ಆದರೆ ಸಮೀಪದ ಕಿರಾಣಿ ಅಂಗಡಿಯಲ್ಲಿ ಒಂದು ಲ್ಯಾಂಡ್ಲೈನ್ ಫೋನ್ ಇದ್ದುದನ್ನು ನಾನು ನೋಡಿದ್ದೆ. ನಾನು ಮೇಲೆದ್ದೆ. ಹೊರಗಿದ್ದ ಪೋಲಿಸನನ್ನು ಕರೆದು ಪಕ್ಷಗಳ ಏಜೆಂಟ್ ಗಳ ಹೊರತು ಉಳಿದವರನ್ನು ಹೊರದಬ್ಬಲು ಹೇಳಿದೆ. ಆಯ್ತು ಇಲ್ಲಿಗೆ ಮತದಾನ ಸ್ಥಗಿತಗೊಳಿಸಿರುವದಾಗಿ ರಿಟರ್ನಿಂಗ್ ಆಫಿಸರ್ ಗೆ ಫೋನ್ ಮಾಡುತ್ತೇನೆ. ಇಂಥ ವಾತಾವರಣದಲ್ಲಿ ಚುನಾವಣ ಕೆಲಸ ನಡೆಸಲು ಅಸಾಧ್ಯ. ಇನ್ನು ಎರಡು ದಿನಗಳ ನಂತರ ಮರುಮತದಾನ ಆಗುತ್ತದೆ. ಹೆಚ್ಚುವರಿ ಪೋಲಿಸ್ ಸಿಬ್ಬಂದಿಯೊಂದಿಗೆ ಬಂದಿರುತ್ತೇವೆ. ಆವತ್ತು ಹಾರಾಡಿ. ಈಚಲಕರಂಜಿಗೆ ದುಡಿಮೆಗೆ ಹೋಗುವದನ್ನು ಬಿಟ್ಟು ಆ ದಿನದ ಗಳಿಕೆಯನ್ನು ಕಳೆದುಕೊಂಡು ಆವತ್ತು ಪುನ: ಬಂದು ವೋಟ್ ಮಾಡಿ ಎಂದು ಕೂಗಿ ಹೇಳಿ ನನ್ನ ಮತಗಟ್ಟೆ ಅಧಿಕಾರಿಗೆ ನಾನು ಫೋನ್ ಮಾಡಿ ಬರುವದಾಗಿ ಹೇಳಿ ಹೊರಬಿದ್ದು ಕ್ಷಿಪ್ರವಾಗಿ ಆ ಅಂಗಡಿ ಇದ್ದ ದಾರಿಯಲ್ಲಿ ನಡೆದೇ ಬಿಟ್ಟೆ.
ಬಂದರು ನೋಡಿ ಎಲ್ಲರೂ, “ಬೇಡ ಬೇಡ, ಹಾಗೆ ಮಾಡಬೇಡಿ.ಬಂದು ಕೆಲಸ ಮುಂದುವರಿಸಿ. ಈ ಊರಲ್ಲಿ ಹೀಗೇ. ನಾಳೆಯಿಂದ ನಾವೆಲ್ಲ ಅಣ್ಣತಮ್ಮಂದಿರ ಹಾಗಿರುತ್ತೇವೆ.ಆದರೆ ಇಲೆಕ್ಷನ್ ಇದ್ದಾಗ ಮಾತ್ರ ನಾವು ಹಿಂಗೇ..” ಎನ್ನುತ್ತ ನನ್ನ ಕೈ ಹಿಡಿದು ನಿಲ್ಲಿಸಿ ಮರಳಿ ಕರೆದುಕೊಂಡು ಬಂದರು. ಆ ಮೇಲೆ ಸುಸೂತ್ರವಾಗಿ ನಡೆಯಿತು. 95 ಪ್ರತಿಶತ ಮತದಾನ. ಮನೆಮನೆಗೆ ಹೋಗಿ ಮುದುಕರು ತದುಕರು ಕುರುಡರು ಕುಂಟರು ಎಲ್ಲರನ್ನೂ ಕರೆದುಕೊಂಡು ಇಲ್ಲವೇ ಹೊತ್ತುಕೊಂಡು ತಂದು ಮತದಾನ ಮಾಡಿಸಿದರು. ಬಹುಶ: ಮತದಾರರ ಯಾದಿ ಸಿದ್ಧವಾದ ಮೇಲೆ ಸತ್ತವರನ್ನಷ್ಟೇ ಬಿಟ್ಟರೆಂದು ತೋರುತ್ತದೆ..!
ಡಿಮಸ್ಟರಿಂಗ್ ಕೇಂದ್ರದಲ್ಲಿ ಡ್ಯೂಟಿ ಮುಗಿಸಿ ಬಂದವರ ಗೊಣಗಾಟದಲ್ಲಿ ಎಂತೆಂಥ ಸಮಸ್ಯೆಗಳನ್ನು ಅವರು ಎದುರಿಸಿದ್ದರೆಂಬುದು ತಿಳಿಯುತ್ತದೆ. ಒಬ್ಬ ಹೈಸ್ಕೂಲ್ ಅಧ್ಯಾಪಕ ಡಿಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾಧಿಕಾರಿಯೊಬ್ಬರಿಗೆ ಹೇಳುತ್ತಿದ್ದ. “ನಮ್ಮ ಮತಗಟ್ಟೆ ಎಂಥಲ್ಲ್ಲಿ ಇತ್ತು ಅಂದ್ರ ಸತ್ತ ಹಂದಿ ನಾಯಿ ತಂದ ಬಿಸ್ಸಾಡು ಜಾಗದಲ್ಲಿ. ಮೊದಲು ಮತಗಟ್ಟೆ ಎಲ್ಲಿ ಇರಬೇಕು ಅಂತ ಸರ್ವೇ ಮಾಡಾಕ್ ಹೋಗಿರ್ತಾರಲಾ, ಅವ್ರೇನು ಹೊಟ್ಟಿಗಿ ಸೆಗಣಿ ತಿಂತಾರು?” ಬಹಳಷ್ಟು ಕಡೆ ತಿಣ್ಣುಣ್ಣಲು ವ್ಯವಸ್ಥೆ ಇರುವದಿಲ್ಲ. ತಿನ್ನಲು ಏನೂ ಇಲ್ಲದೇ ನಮ್ಮ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು ಕೇವಲ ಕೆಲ ಬಿಸ್ಕೀಟ್ ತಿಂದು ನೀರು ಕುಡಿದು ಬಸವಳಿದು ಅರೆಜೀವವಾಗಿದ್ದರು ಚಿಕ್ಕೋಡಿಯ ಒಂದು ಮತಗಟ್ಟೆಯಲ್ಲಿ. ಎಷ್ಟೋ ಕಡೆ ಶೌಚಕ್ಕೆ ವ್ಯವಸ್ಥೆಯೇ ಇರುವದಿಲ್ಲ. ಸಾಮಾನ್ಯವಾಗಿ ಪ್ರತಿ ಮತಗಟ್ಟೆಯ ಸಿಬ್ಬಂದಿಯಲ್ಲಿ ಒಬ್ಬ ಮಹಿಳೆ ಇದ್ದೇ ಇರುತ್ತಾರೆ. ಅವರೇನು ಮಾಡಬೇಕು? ಸೊಳ್ಳೆಗಳ ಕಾಟ, ಧೂಳು, ಕಸ, ಬಿಸಿಲು-ಧಗೆಯ ಪ್ರತಾಪ.., ನಾವು ಹೇಗೋ ಊಟಕ್ಕೆ ಒಂದು ವ್ಯವಸ್ಥೆ ಮಾಡಿಕೊಂಡು ಸರತಿಯಂತೆ ಒಬ್ಬೊಬ್ಬರು ಉಣ್ಣುತ್ತಿದ್ದೆವು. ಯಾರು ಉಣ್ಣುತ್ತಿರುತ್ತಾರೋ ಆ ಕೆಲಸ ನಾನು ನಿರ್ವಹಿಸುತ್ತಿದ್ದೆ.
ದೊಡ್ಡ ತಲೆಬಿಸಿ ಎಂದರೆ ನಕಲಿ ಮತದಾನಗಳದ್ದು. ಈಗಿನಂತೆ ಗುರುತಿನ ಚೀಟಿ ತೋರಿಸಿ ಮತದಾನ ಮಾಡುವ ಪದ್ಧತಿ ನಾನು ಮೊದಲೆರಡು ಸಲ ಎಲೆಕ್ಷನ್ ಡ್ಯೂಟಿ ಮಾಡಿದಾಗ ಇನ್ನೂ ಇರಲಿಲ್ಲ. ಅದು ಟಿ.ಎನ್.ಶೇಷನ್ ಮುಖ್ಯ ಚುನಾವಣಾ ಕಮೀಶನರ್ ಆಗಿದ್ದಾಗ ಜಾರಿಗೆ ಬಂತು. ಅದಕ್ಕಿಂತ ಮೊದಲು ಮಧ್ಯಾಹ್ನ ಮೂರುವರೆ ನಂತರ ಯಾರು ಅಲ್ಲಿಯ ವರೆಗೆ ಮತದಾನ ಮಾಡಿರುವದಿಲ್ಲವೋ ಅದರ ವಿವರಗಳನ್ನು ತಮ್ಮ ಏಜಂಟರಿಂದ ಪಡೆಯುವ ಪಕ್ಷಗಳು ಅಂಥ ಎಲ್ಲರ ಮತಗಳನ್ನೂ ಇನ್ನ್ಯಾರಿಂದಲೋ ಹಾಕಿಸಿ ಬಿಡುತ್ತಿದ್ದರು. ಮತದಾರನ ಹೆಸರು ಕೂಗಿ ಹೇಳಿದಾಗ ಅಭ್ಯರ್ಥಿಗಳ ಏಜೆಂಟರು ಅಲ್ಲಿಯ ಸ್ಥಳೀಯರಾಗಿದ್ದರೆ ನಕಲಿ ಮತದಾರರನ್ನು ಗುರುತಿಸಬೇಕು, ಇಲ್ಲವಾದರೆ ನಾವು ಏನೂ ಮಾಡುವಂತಿಲ್ಲ. ಏಕೆಂದರೆ ಯಾರು ಎಂತ ನಮಗೂ ಗೊತ್ತಿರುವದಿಲ್ಲ.
ಒಂದು ಸಲವಂತೂ ಮಧ್ಯಾಹ್ನ ಒಂದು ಗಂಟೆಗೇ ಸಾಕಷ್ಟು ನಕಲಿ ಮತದಾನ ಆಗಿಬಿಟ್ಟಿದ್ದವು. ಅಸಲಿ ಮತದಾರರು ಬಂದಾಗ ನೀವು ಆಗಲೇ ಓಟು ಹಾಕಿದ್ದೀರಲ್ಲ ಎಂದು ನಾವೆನ್ನುವದು, ಇಲ್ರೀ ಸರ್ ಎಂದು ಅವರೆನ್ನುವದು..,ಅವರು ಮುಖ ಒಣಗಿಸಿಕೊಂಡು ಹೋಗುವದು ನೋಡಿ ನನಗೆ ಬೇಸರವಾಯಿತು. ಆ ವರ್ಷ ಹುಬ್ಬಳ್ಳಿಯಲ್ಲಿ ಮಧ್ಯಾಹ್ನ ಮಧ್ಯಾಹ್ನವೇ ಆದ ನಕಲಿ ಮತದಾನ ಬರೀ ನಮ್ಮ ಮತಗಟ್ಟೆಯಲ್ಲಿ ಅಲ್ಲ, ಎಲ್ಲ ಕಡೆಯೂ ಆಗಿತ್ತು. ಜಗದೀಶ ಶೆಟ್ಟರ್ ಮುಂತಾದ ಮುಖಂಡರು ಅದರ ಕುರಿತು ಬೇಸರ ಕೂಡ ವ್ಯಕ್ತ ಪಡಿಸಿದರು. ಈಗ ಗುರುತಿನ ಚೀಟಿಯಿಂದಾಗಿ ಅದು ಸಾಕಷ್ಟು ಕಡಿಮೆಯಾಗಿದೆ.
ಚುನಾವಣಾ ಡ್ಯೂಟಿಗೆ ಹೋದ ಬಹುಪಾಲು ಜನ ತಮ್ಮ ಅನುಭವಗಳ ಕುರಿತು ಬೇಸರವನ್ನೇ ಹೊಂದಿರುತ್ತಾರೆ. ಮೊನ್ನೆ ಹುಬ್ಬಳ್ಳಿಯ ಎಂಜಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ದಾವಣಗೆರೆಯ ಕೆ.ಗಣೇಶ್ ತಮ್ಮ ಬ್ಲಾಗ್ ನಲ್ಲಿ 2010 ರಲ್ಲಿ ತಾವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಿಸೈಡಿಂಗ್ ಆಫೀಸರ್ ಆಗಿದ್ದಾಗಿನ ಅನುಭವದ ಕುರಿತು ಹೇಳುತ್ತ “ಎಲೆಕ್ಷನ್ ಮುಗಿಸಿ ಬಂದವನು ಪ್ರಜಾಪ್ರಭುತ್ವದ ಹೆಣ ಎತ್ತಿ ಬಂದೆ ಅಂತಾ ಬರೆದಿದ್ದೆ..!”ಎನ್ನುತ್ತಾರೆ. ಅಷ್ಟು ಕಟುವಾಗಿಯೂ ಹೇಳಬೇಕಾಗಿಲ್ಲ, ಪ್ರಜಾಪ್ರಭುತ್ವದ ಹಲವು ಒಳ್ಳೆಯ ಅಂಶಗಳ ಫಲಾನುಭವಿಯಾಗಿರುವ ನಾವು ಅದರ ಕೆಲಸದ ಹೊಣೆಗಳನ್ನೂ ಹೊರುವದು ಅನಿವಾರ್ಯ ಎಂದು ಭಾವಿಸುವದು ಒಳ್ಳೆಯದೇನೋ. ಆದರೆ ಅವರು ಕೆಲ ತಕರಾರುಗಳನ್ನೆತ್ತಿ ಸಲಹೆಗಳನ್ನೂ ಕೊಡುತ್ತಾರೆ: ಅವು ಹೀಗಿವೆ:
1. ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳುವ ಎಲ್ಲ ಅಧಿಕಾರಿಗಳಿಗೆ ಮತಪೆಟ್ಟಿಗೆ, ಕಂಟ್ರೋಲ್ ಯೂನಿಟ್ ಗಳನ್ನ ಸಂಗ್ರಹಿಸುವ ಕೇಂದ್ರದಲ್ಲಿ ಊಟದ ವ್ಯವಸ್ಥೆಯನ್ನೇಕೆ ಮಾಡಬಾರದು?
2. ದೂರದ ಊರುಗಳಿಂದ ಬಂದ ಹೆಣ್ಣು ಮಕ್ಕಳಿಗೆ ಮಧ್ಯ ರಾತ್ರಿ ಊರು ಸೇರಿಸಿದರೆ ಕರೆದೊಯ್ಯಲು ಯಾರಾದರೂ ಬರಲೇ ಬೇಕು. ಚುನಾವಣೆಗೆ ಸಾವಿರಾರು ಕೋಟಿ ಖರ್ಚು ಮಾಡುವ ಚುನಾವಣಾ ಆಯುಕ್ತರ ಕಛೇರಿ, ಚುನಾವಣೆಗೆ ದುಡಿಯುವ ವ್ಯಕ್ತಿಗಳನ್ನೇಕೆ ಮನೆಗೆ ತಲುಪಿಸುವ ಒಂದು ಸಣ್ಣ ಜವಾಬ್ದಾರಿ ಹೊರುವುದಿಲ್ಲ?
3. ಚುನಾವಣೆ ನಡೆಸುವ ಬಗ್ಗೆ ಮಾಹಿತಿ ಮತ್ತು ಸಲಹೆಗಳನ್ನೊಳಗೊಂಡ ಸಿಡಿ ತಯಾರಿಸಿ ಪ್ರತಿ ಅಧಿಕಾರಿಗೂ ಕೊಡುವುದು ಉತ್ತಮ. ಜೊತೆಗೆ, ವೀಡಿಯೋವನ್ನ ಪ್ರತಿಯೊಬ್ಬರ ಮೊಬೈಲ್ಗೂ ಡೌನ್ಲೋಡ್ ಮಾಡಿಸಬಹುದು. ಇಲ್ಲದಿದ್ದರೆ ಪ್ರತಿ ಸಲವೂ ದ್ವಂದ್ವ ಮತ್ತು ಅರೆ ಜ್ಞಾನ.
ಎಲೆಕ್ಷನ್ ಕೆಲಸವನ್ನು ಜನ ಮನಸಾ ನಿರ್ವಹಿಸುವಂತೆ ಮಾಡಬೇಕೆಂದು ಚುನಾವಣಾ ಆಯೋಗ ಮನಸು ಮಾಡಿದರೆ ಅದು ಅಸಾಧ್ಯವೇನಲ್ಲ. ಆದರೆ ಈ ನಮ್ಮ ದೇಶದಲ್ಲಿ “ಇದೇನು ಸುಧಾರಣೆ ಆಗುವಂಥದಲ್ಲ ಬಿಡು” ಎಂದು ನಾವು ಭಾವಿಸುವ ಹಲವು ಇತರ ವಿಷಯಗಳಲ್ಲಿ ಇದೂ ಒಂದಾಗಿ ಹಾಗೇ ಮುಂದುವರಿಯುತ್ತಿದೆ….
ಅಶೋಕ್ ಶೆಟ್ಟರ್ ಕಾಲಂ : ಎಲೆಕ್ಶನ್ ಡ್ಯೂಟಿ ಎಂಬ ಬೇಸಗೆ ಕಾಲದ ಬೇಗುದಿ
ನಿಮಗೆ ಇವೂ ಇಷ್ಟವಾಗಬಹುದು…




ಅಶೋಕ ಶೆಟ್ಟರರವರ ಅನುಭವ ಕಥನ ಎಲ್ಲರ ಕಥನಗಳು ಹೌದು. ಪ್ರಿಸೈಡಿಂಗ್ ಆಫೀಸರ್ ಗಳದೇ ಈ ಪರಿಯಾದರೆ, ನಮ್ಮಂಥ ಏಆರ್ಓ ಅಥವಾ ಆರ್ಓ ಗಳ ಪಾಡು ಏನು ಎತ್ತ ಅಂತಾ ಅರ್ಥ ಆಗಬಹುದಲ್ಲ. ಆದರೂ ಅದೊಂದು ಥರ ದೇಶಸೇವೆಯೇ. ಈ ಚುನಾವಣಾ ಕರ್ತವ್ಯ ನಿರ್ವಹಿಸಿದ ಕಣ್ಣುಗಳಿಂದ ಭಾರತೀಯ ಸಮಾಜ, ಸಮುದಾಯಗಳಲ್ಲಿ ಆಗುತ್ತಿರುವ ಸೂಕ್ಷ್ಮ ಬದಲಾವಣೆಗಳನ್ನು ಕೂಡ ಬಹು ಸುಲಭವಾಗಿ ಗುರುತಿಸಬಹುದು,.ಉದಾ: ಚುನಾವಣೆಗಳಲ್ಲಿ ಜಾತಿಯ ವಿರಾಟರೂಪ ಹೇಗೆ ಚಾಚಿಕೊಳ್ಳುತ್ತಿದೆ ಎಂಬುದು, ಮೊದಲು ಇಷ್ಟು ಪ್ರಮಾಣದಲ್ಲಿ ಇರುತ್ತಿರಲಿಲ್ಲ ಅಂದಕೋತೀನಿ. ನೀಡಿದ ಸಲಹೆಗಳು ಉತ್ತಮವಾಗಿದೆ ಹಾಗೂ ಸೀದಾ ಸಾದಾ ಹೇಗಿದೆಯೋ ಹಾಗೆ, ಬಣ್ಣವಿಲ್ಲದೆ ಬರೆದದ್ದು ಆಪ್ತವೆನಿಸಿತು.
ಚುನಾವಣಾ ಅನುಭವ ಚೆನ್ನಾಗಿದೆ ಸಾರ್.ಚುನಾವಣಾ ತರಬೇತಿ ನೀಡುವ ಸಂದರ್ಭದಲ್ಲಿ ಎಲ್ಲ ಸಾಮಾನು-ಸರಂಜಾಮುಗಳುಗಳನ್ನು ನೀಡುವ ಆಯೋಗ,ಇದೆಲ್ಲದರ ಜೊತೆ ಒಂದು feedback form ಕೂಡ ಕೊಡುವದು ಉಚಿತವೆನಿಸುತ್ತದೆ.ಚುನಾವಣಾ ಕಾರ್ಯದಲ್ಲಿ ಭಾಗಿಯಾಗುವ ಜನರ ಸಮಸ್ಯೆಗಳ ಬಗ್ಗೆ ಒಂದು ಅಂದಾಜು ಚಿತ್ರಣ ಸಿಗಬಹುದು ಮತ್ತು ಮುಂಬರುವ ಚುನಾವಣಾ ಕಾರ್ಯದಲ್ಲಿ ಆಯೋಗ ಇಂಥ ಸಮಸ್ಯೆಗಳ ಬಗ್ಗೆ ಗಮನ ಹರಿಸಬಹುದು.
-Rj
ಅಂಕಲ್ ಒಂದು ವಿಚಿತ್ರ ಕಿರಿಕಿರಿ ಎನ್ನಿಸುವಂತ ಅನುಭವನ್ನ ಮಿಸ್ ಮಾಡ್ಕೊಂಡೆ ಅನ್ನಿಸ್ತಿದೆ. ನಾನು ಎಲೆಕ್ಷೇನ್ ಡ್ಯೂಟೀ ಗೆ ಹೋಗ್ಬೇಕಿತ್ತು… ಅಂಕಲ್ ಒಂದು ವೇಳೆ ಅಧಿಕಾರಿ ವರ್ಗದವರಲ್ಲೂ,ಅಜೆಂಟ ಹಾಗೂ ಉಪಟಳ ಕೊಡುವ ಮತದಾರರೊಂದಿಗೆ ಅಖಾಡಕ್ಕೆ ಇಳಿದು ಹೊರಡೋ ಮನೋಭಾವದವರಿದ್ದರೆ ಎಲೆಕ್ಷೇನ್ ಬೂತ್ ನ ಗತಿ ಏನು. ನಿಮ್ಮ ಲೇಖನ ಓದಿ ಹೆಚ್ಚು ಕಡಿಮೆ ಎಲೆಕ್ಷೇನ್ ಡ್ಯೂಟೀ ಮಾಡೋರ್ನ ನಿಂತು ನೋಡಿದಾಂಗಾಯ್ತು.. ಧನ್ಯವಾದಗಳು
chenda ide lekhana …paapa ansthu election duty meliroranna nenesikondu …