
ಪಠ್ಯಪುಸ್ತಕಗಳಲ್ಲಿ ರಮ್ಯ ಸಂಪ್ರದಾಯದ ಕವಿತೆ ಪ್ರಬಂಧ ಓದಿಕೊಂಡಿದ್ದ ನಾನು ೧೯೭೦ರ ದಶಕದ ಮಧ್ಯಭಾಗದಲ್ಲಿ ಧಾರವಾಡಕ್ಕೆ ಬಂದ ಒಂದೆರಡು ವರ್ಷಗಳಲ್ಲಿ ಬೇರೆಯದೇ ಬಗೆಯ ಸಾಹಿತ್ಯ ಕೃತಿಗಳಿಗೆ ತೆರೆದುಕೊಂಡೆ. ಲಂಕೇಶ್, ಅನಂತಮೂರ್ತಿ, ರಾಘವೇಂದ್ರ ಖಾಸನೀಸ್, ಕೃಷ್ಣ ಆಲನಹಳ್ಳಿ ಮತ್ತು ದೇವನೂರು ಮಹಾದೇವರಂಥವರ ಕತೆ-ಕಾದಂಬರಿಗಳಲ್ಲಿ ಅನಾವರಣಗೊಳ್ಳುತ್ತಿದ್ದ ಲೋಕ ನಮ್ಮ ಸಂವೇದನೆಗಳನ್ನು ಬೇರೆಯದೇ ಆದ ರೀತಿಯಲ್ಲಿ ತಟ್ಟತೊಡಗಿತ್ತು. ಆ ದಿನಗಳಲ್ಲಿ ಪಿ. ಲಂಕೇಶ್ “ಪಾಂಚಾಲಿ” ಎಂಬ ವಿಶೇಷ ಸಾಹಿತ್ಯ ಸಂಚಿಕೆಯೊಂದನ್ನು ಪ್ರಕಟಿಸಿದರು. ಅದರಲ್ಲಿ ನಾನು ದೇವನೂರರ ಕತೆಯೊಂದನ್ನು ಓದಿದೆ. ಅವರನ್ನು ಓದಬೇಕೆಂಬ ಓದುಗರ ಹಸಿವಿಗೆ ತಕ್ಕಷ್ಟು ಅವರು ಬರೆಯಲಿಲ್ಲ. ಶುದ್ಧವಾಗಿ ’ಸಾಹಿತ್ಯಸೇವೆ’ ಮಾಡಿಕೊಂಡಿದ್ದರೆ ಬಹುಶ: ಪುಂಖಾನುಪುಂಖವಾಗಿ ಅನ್ನುತ್ತಾರಲ್ಲ, ಹಾಗೆ ಬರೆಯುತ್ತಿದ್ದರೇನೋ. ಆದರೆ ಅವರ ಅಂತ:ಕರಣ ಅವರನ್ನು ಹಲವು ಇತರ ಚಟುವಟಿಕೆ ಚಿಂತನೆಗಳತ್ತ ಕೊಂಡೊಯ್ದಿತು. ಎಷ್ಟು ಬರೆದರೋ ಅಷ್ಟು ಓದುಗರ ಮನದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂಥದನ್ನು ಬರೆದರು. ಅವರ ದ್ಯಾವನೂರು, ಒಡಲಾಳ, ಕುಸುಮಬಾಲೆ ಕೃತಿಗಳು ಕನ್ನಡದಲ್ಲಿ ನವ್ಯ-ನವ್ಯೋತ್ತರದ ಸ್ಥಿತ್ಯಂತರದ ಸಂದರ್ಭದ ವಿಶಿಷ್ಟ ಕೃತಿಗಳಾಗಿ ಉಳಿದುಕೊಂಡವು.
ಓದುಗನಾಗಿಯೋ ಬರಹಗಾರನಾಗಿಯೋ ಸಾಹಿತ್ಯಲೋಕದ ಸಂಪರ್ಕಕ್ಕೆ ಬಂದು ಮೂವತ್ತೈದು ವರ್ಷಗಳಾಗಿದ್ದರೂ ನಾನು ಪ್ರತ್ಯಕ್ಷವಾಗಿ ಭೇಟಿಯಾಗಿರದಿದ್ದ, ಕೊನೇಪಕ್ಷ ದೂರದಿಂದ ಅವರು ವೇದಿಕೆಯ ಮೇಲೆ ಕುಳಿತ ರೂಪದಲ್ಲಾದರೂ ಸರಿ, ನಾನು ನೋಡಿರದೇ ಇದ್ದ ಕೆಲವೇ ಸಾಹಿತಿಗಳಲ್ಲಿ ದೇವನೂರು ಮಹಾದೇವ ಒಬ್ಬರಾಗಿದ್ದರು. ದೇವನೂರರ ಅಮಾಸ, ಮೂಡಲಸೀಮೆಲಿ ಕೊಲೆ ಗಿಲೆ ಮುಂತಾಗಿ, ಡಾಂಬರು ಬಂದದು, ಮಾರಿಕೊಂಡವರು ಮುಂತಾದ ಕತೆಗಳನ್ನು ಓದಿಕೊಂಡಿದ್ದ ನನಗೆ ಅವರ “ಒಡಲಾಳ” ಒಂದು ಬಗೆಯ ಅನುಭೂತಿಯನ್ನುಂಟು ಮಾಡಿದ್ದರೆ “ಕುಸುಮಬಾಲೆ” ಒಂದು ಪುಟ್ಟ ಮಹಾಕಾವ್ಯದಂತೆ ಭಾಸವಾಗಿತ್ತು. ಕುಸುಮಬಾಲೆಯ ಕುರಿತು ಒಮ್ಮೆ ಚಂದ್ರಶೇಖರ ಪಾಟೀಲರ ಜೊತೆ ತೀವ್ರವಾಗಿ ವಾಗ್ವಾದ ಮಾಡಿದ್ದು ನೆನಪಾಗುತ್ತಿದೆ.
ಅದರಲ್ಲಿ ಬರುವ ಪಾತ್ರಗಳು ಮಾತನಾಡುವ ಭಾಷೆಯಷ್ಟೇ ಅಲ್ಲದೇ ಅದರ ನಿರೂಪಣೆ ಕೂಡ ಮೈಸೂರಿನ ನಂಜನಗೂಡು ಸೀಮೆಯ ದಲಿತ ಸಮುದಾಯದ ಆಡುಮಾತಿನ ಒಂದು ಪ್ರಾದೇಶಿಕ ನುಡಿಗಟ್ಟಿನಲ್ಲಿದೆಯಷ್ಟೇ. ಆ ಕಾರಣಕ್ಕೆ ಅದನ್ನು ಓದುವದು ಮೌಂಟ್ ಎವರೆಸ್ಟ್ ಏರಿದಷ್ಟು ಕಠಿಣವೆಂಬಂಥ ಧರ್ತಿಯಲ್ಲಿ ಚಂಪಾ ಮಾತನಾಡಿದ್ದು ಮತ್ತು ಬರೆದದ್ದು ನನಗೆ ಸರಿ ಕಂಡಿರಲಿಲ್ಲ. ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲೀಷ್ ವಿಭಾಗದಲ್ಲಿ ಧ್ವನಿಶಾಸ್ತ್ರ ಮತ್ತು ಸಾಹಿತ್ಯ ಬೋಧಿಸುತ್ತಿದ್ದ ಮತ್ತು ಸ್ವತ: ಕವಿ-ನಾಟಕಾರರಾಗಿದ್ದ ಹಾಗೂ ತಮ್ಮ ಬರವಣಿಗೆಯಲ್ಲಿ ಉತ್ತರ ಕರ್ನಾಟಕದ ಪ್ರಾದೇಶಿಕ ನುಡಿಗಟ್ಟನ್ನು ಬಳಸುತ್ತಿದ್ದ ಚಂಪಾ ದೇವನೂರರ ಕುಸುಮಬಾಲೆಯಲ್ಲಿಯ ಪ್ರಾದೇಶಿಕ ಭಾಷಾ ಬಳಕೆಯ ಕುರಿತು ತಳೆದ ಪರಿಹಾಸ್ಯದ ಮತ್ತು ನಕಾರಾತ್ಮಕ ನಿಲುವಿನ ಕುರಿತು ಅವರ ಜೊತೆ ಒಂದು ಸಲ ಇಂಗ್ಲಿಷ್ ಡಿಪಾರ್ಟಮೆಂಟಿನ ಅವರ ಕೋಣೆಗೆ ಹೋಗಿ ಜಗಳ ತೆಗೆದಿದ್ದೆ.
ಅಲ್ಲಿ ಅವರ ಸಹೋದ್ಯೋಗಿ ಗಿರಡ್ಡಿ ಗೋವಿಂದರಾಜರೂ ಚರ್ಚೆಯಲ್ಲಿ ಜೊತೆಗೂಡಿದರು. ಉತ್ತರ ಕರ್ನಾಟಕದ ಪ್ರಾದೇಶಿಕವಾದ ಭಾಷೆಯನ್ನು ಕತೆಕಾದಂಬರಿಗಳಲ್ಲಿ ಬಳಸುವ ನಮಗೆ ಕುಸುಮಬಾಲೆಯಲ್ಲಿಯ ಒಂದು ಪ್ರಾದೇಶಿಕ ಭಾಷಾ ನುಡಿಗಟ್ಟಿನ ಬಳಕೆಯ ಕುರಿತು ಆಕ್ಷೇಪಿಸುವ ಹಕ್ಕೇ ಇಲ್ಲ ಎಂದು ಗಿರಡ್ಡಿ ಕೂಡ ಹೇಳಿದರೂ ಚಂಪಾ ಒಪ್ಪಲಿಲ್ಲ. ಮೊದ ಮೊದಲು ಸರಾಗವಾಗಿ ಓದುವಲ್ಲಿ ಸ್ವಲ್ಪ ತಡೆಯಾಗುವ ಆ ಭಾಷೆಗೆ- ಅದರ ನಿರೂಪಣಾಕ್ರಮದ ಧ್ವನಿ ಮತ್ತು ಇಡಿಯಂ ಗೆ- ನಾಲ್ಕಾರು ಪುಟಗಳನ್ನು ಓದುವಷ್ಟರಲ್ಲಿ ಹೊಂದಿಕೊಂಡ ನನ್ನನ್ನು ಆ ಮೇಲೆ ಆ ಪುಸ್ತಕ ತಾನೇ ಸರಾಗವಾಗಿ ಓದಿಸಿಕೊಂಡು ಹೋಗಿತ್ತಷ್ಟೇ ಅಲ್ಲ, ಆ ಭಾಷೆಯನ್ನು ಅದರಿಂದ ತೆಗೆದು ಹಾಕಿ ಗ್ರಾಂಥಿಕ ನಿರೂಪಣೆಯಲ್ಲಿ ಅದನ್ನು ಕಥನಿಸಿದ್ದರೆ ಆ ಕೃತಿಯ ಸೌಂದರ್ಯ ಅರ್ಧಕ್ಕರ್ಧ ಮುಕ್ಕಾಗುತ್ತಿತ್ತು ಎಂದೂ ಅನ್ನಿಸಿತ್ತು. ಹೀಗಾಗಿ ಅದರ ಓದಿನ ಕಷ್ಟವನ್ನು ಚಂಪಾ ಉತ್ಪ್ರೇಕ್ಷಿಸುತ್ತಿದ್ದಾರೆಂಬುದು ನನ್ನ ಭಾವನೆಯಾಗಿತ್ತು.
“ಅಶೋಕ್, ಆ ಪುಸ್ತಕಾ ಓದೂ ಪ್ರಯತ್ನ ಮಾಡಿ ಓದಾಕಾಗದೇ ಬಿಟ್ಟೇನಿ ಅಂತ ಸಾಕಷ್ಟು ವಿನಯದಿಂದ ನಿಮಗ ಹೇಳ್ತೇನಿ” ಎಂದರು ಚಂಪಾ ಕೊನೆಗೆ..! ವಿಚಿತ್ರವೆಂದರೆ ದೇವನೂರರ ಕತೆಕಾದಂಬರಿಗಳನ್ನು ಒಟ್ಟಾಗಿಸಿ ಪುಸ್ತಕ ಪ್ರಕಟಿಸಿದ ಲಂಕೇಶ್ ಅವರೂ ಕುಸುಮಬಾಲೆಯ ಸಂವಹನಸಾಧ್ಯತೆಯ ಕುರಿತು ನಿರುತ್ಸಾಹದ ಪ್ರತಿಕ್ರಿಯೆಯನ್ನೇ ಹೊಂದಿದ್ದರು.
ಒಬ್ಬ ವ್ಯಕ್ತಿಯಾಗಿ ದೇವನೂರರನ್ನು ನೋಡುವ ಅವಕಾಶವೇ ಬಂದಿರಲಿಲ್ಲ. ಬಹಳಷ್ಟು ವರ್ಷಗಳ ಹಿಂದೆ, ಬಹುಶ: ೧೯೮೫-೮೬ರ ಸುಮಾರಿಗೆ ಒಮ್ಮೆ ನಾನು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಿಸ್ಟರಿ ಪ್ರೊಫೆಸರಾಗಿದ್ದ ಡಾ. ಎಸ್.ಚಂದ್ರಶೇಖರ್ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಹೋಗುತ್ತಿರಬೇಕಾದರೆ ಸ್ಕೂಟರಿನಲ್ಲಿ ಬರುತ್ತಿದ್ದ ಒಬ್ಬರು ಸ್ಕೂಟರ್ ನಿಲ್ಲಿಸಿ, ಅವಸರವಸರವಾಗಿ ಸ್ಟ್ಯಾಂಡ್ ಹಾಕಿ ಚಂದ್ರಶೇಖರ್ ಜೊತೆ ಮಾತಾಡುತ್ತಿರಬೇಕಾದರೆ, ಇವರನ್ನೆಲ್ಲೋ ನೋಡಿದಂತಿದೆಯಲ್ಲಾ ಎಂದು ನಾನು ಅಂದುಕೊಳ್ಳುವಷ್ಟರಲ್ಲಿ ಅವಸರವಸರವಾಗಿ ಮಾತು ಮುಗಿಸಿ ಸ್ಕೂಟರ್ ಏರಿ ಹೋದರು ಆ ವ್ಯಕ್ತಿ. ಅವರು ಹೋದ ಮೇಲೆ “ಯಾರು ಅಂತ ಗೊತ್ತಾಗ್ಲಿಲ್ವೇನೋ” ಎಂದು ಚಂದ್ರಶೇಖರ್ ಕೇಳಿದಾಗ ಇಲ್ಲ ಅಂದೆ. “ಏ ದೇವನೂರು ಮಹಾದೇವ ಕಣೋ” ಅಂದಾಗ ಹೌದಾ ಗೊತ್ತಾಗ್ಲಿಲ್ಲ ಅಂದಿದ್ದೆ.
ಕಳೆದ ವರ್ಷ ಅಂದರೆ ೨೦೧೩ ರ ಪ್ರಾರಂಭದಲ್ಲಿ ಒಮ್ಮೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ವಿಶೇಷ ಧನಸಹಾಯ ಯೋಜನೆಗೆ ಒಳಪಟ್ಟ ನಮ್ಮ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಆ ಯೋಜನೆಯ ಭಾಗವಾಗಿ ರಾಷ್ಟ್ರೀಯ ವಿಚಾರಸಂಕಿರಣವೊಂದನ್ನು ಏರ್ಪಡಿಸಬೇಕಾದ ಸಂದರ್ಭದಲ್ಲಿ ನಾನು ಅದರ ಸಂಯೋಜಕನಾಗಿದ್ದೆ. ನಮ್ಮ ಅಧ್ಯಯನ ಯೋಜನೆಯ ವಿಷಯಗಳಲ್ಲೊಂದಕ್ಕೆ ಪ್ರಸ್ತುತವೆನ್ನಿಸುವ ಕರ್ನಾಟಕದ ದಲಿತ ಮತ್ತು ಹಿಂದುಳಿದ ವರ್ಗಗಳ ಆಂದೋಲನದ ಕುರಿತು ವಿಚಾರ ಸಂಕಿರಣ ನಡೆಸಬಹುದೆಂದಾಗ ನಮ್ಮ ವಿಭಾಗದ ಡಾ, ರವಿ ಕೋರಿಶೆಟ್ಟರ್ ನಾವು ಬಯಸಿದರೆ ತಮಗೂ ದೇವನೂರ್ ಅವರಿಗೂ ಸ್ನೇಹಿತರಾಗಿರುವ ಒಬ್ಬರ ಮೂಲಕ ದೇವನೂರು ಇದರಲ್ಲಿ ಭಾಗವಹಿಸುವಂತೆ ತಾವು ಮಾಡುವದಾಗಿ ಹೇಳಿ ಒಂದು ಪತ್ರ ಸಿದ್ಧ ಪಡಿಸುವಂತೆ ಹೇಳಿದಾಗ ನಾನು ಮತ್ತು ಇನ್ನೊಬ್ಬ ಸಂಯೋಜಕ ಎಸ್.ಕೆ,ಕಲ್ಲೋಳಿಕರ್ ಸೇರಿ ಒಂದು ಒಕ್ಕಣೆಯನ್ನು ಸಿದ್ಧ ಪಡಿಸಿ ಕೊಟ್ಟೆವು.
ಬರಲು ದೇವನೂರು ಒಪ್ಪಲಿಕ್ಕಿಲ್ಲವೆಂದೇ ನನ್ನ ಭಾವನೆಯಾಗಿತ್ತು ಆದರೆ ಅವರು ಬಂದರು. ವಿಶ್ವವಿದ್ಯಾಲಯದ ಗೋಲ್ಡನ್ ಜುಬಿಲಿ ಹಾಲ್ ನಲ್ಲಿ ನಾನು ಬೆಳಿಗ್ಗೆ ಉದ್ಘಾಟಣಾ ಕಾರ್ಯಕ್ರಮದ ಸಿದ್ಧತೆಯಲ್ಲಿ ಇದ್ದಾಗ ರವಿಯವರು ಫೋನ್ ಮಾಡಿ ದೇವನೂರು ಮಹಾದೇವ ಅವರು ನಮ್ಮ ಮನೆಯಲ್ಲಿದ್ದಾರೆ, ಆಮೇಲೆ ನಾವು ಕುಲಪತಿಗಳ ಬಳಿ ಹೋಗಿ ನಂತರ ನೇರವಾಗಿ ಸಭಾಂಗಣಕ್ಕೆ ಬರುತ್ತೇವೆ, ನಾಳೆ ಮಹಾದೇವ ಅವರು ಬಾದಾಮಿ ಐಹೊಳೆಗೆ ಹೋಗಬಯಸಿರುವದರಿಂದ ನೀವು ಸ್ವಲ್ಪ ಹೊತ್ತು ಅವರ ಜೊತೆ ಮಾತಾಡಬೇಕೆಂದರೆ ಈಗಲೇ ಮನೆಗೆ ಬನ್ನಿ ಎಂದರು. ಹೋದೆ. ಇವರು ಅಶೋಕ್ ಶೆಟ್ಟರ್ ಅಂತ, ನಮ್ಮ ಕಲೀಗ್, ಇವರೂ ಬರಹಗಾರರು, ನಿಮಗೆ ಗೊತ್ತಿರಬೇಕಲ್ಲ ಎಂದು ರವಿಯವರು ಕೇಳಿದಾಗ ಇಲ್ಲ ಎಂದರು ಮಹಾದೇವ. ತಿಂಡಿ ಕಾಫಿ ಎಲ್ಲ ಆದ ಮೇಲೆ ಹಾಗೇ ಮಾತಾಡುತ್ತಿರಬೇಕಾದರೆ ನೀವು ಈ ಮುಂಚೆ ಯಾವಾಗಲೂ ಧಾರವಾಡಕ್ಕೆ ಬಂದಂತಿಲ್ಲ, ನಾನಿಲ್ಲಿರುವ ಮೂರು ದಶಕಕ್ಕೂ ಮಿಕ್ಕಿದ ಅವಧಿಯಲ್ಲಿ ನೀವಿಲ್ಲಿಗೆ ಬಂದದ್ದು ನನಗೆ ಗೊತ್ತಿಲ್ಲ ಎಂದು ನಾನು ಕೇಳಿದಾಗ ’ಇಲ್ಲ, ತುಂಬಾ ಹಿಂದೆ ಜೇಪಿ ಚಳುವಳಿ ನಡೆಯುತ್ತಿದ್ದಾಗ ಕರ್ನಾಟಕ ನವನಿರ್ಮಾಣ ಕ್ರಾಂತಿಯ ಚಟುವಟಿಕೆಗಳ ಸಂದರ್ಭದಲ್ಲಿ ಬಂದಿದ್ದೆ” ಎಂದರು.
ಅವರನ್ನು ಸ್ವಾಗತಿಸುವ ಪರಿಚಯಿಸುವ ಕೆಲಸ ನನ್ನದೇ ಆದುದರಿಂದ ನಾನು ಕೆಲವು ಮಾತುಗಳನ್ನು ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಒಟ್ಟಾರೆ ಭಾರತದ ಸಂದರ್ಭದಲ್ಲಿ ವೈವಿಧ್ಯಮಯವಾದ ಚೆಹರೆಗಳನ್ನು ಅಳಿಸಿ ಹಾಕಿ ಏಕರೂಪಿಯಾಗಿಸುವ ಆಕ್ರಮಣಕಾರಿ ಪ್ರವೃತ್ತಿಗಳು ಚಾರಿತ್ರಿಕವಾಗಿ ನಮ್ಮ ಸಮಾಜದ ಎದ್ದು ಕಾಣುವ ಲಕ್ಷಣವಾದ ಬಹುಮುಖಿ ಸ್ವರೂಪಕ್ಕೆ ಅಪಾಯಕಾರಿಯಾಗಿರುವ, ಅದೇ ಕಾಲಕ್ಕೆ ನಮ್ಮ ಚರಿತ್ರೆಯ ಹಾಸುಹೊಕ್ಕುಗಳಲ್ಲಿ ಏಕತೆಯ ಎಳೆಗಳೂ ಇದ್ದು ಬಹುಮುಖತೆಯನ್ನು ಬಿಂಬಿಸುವ ಭರದಲ್ಲಿ ಏಕತೆಯ ಆ ಎಳೆಗಳನ್ನು ತುಂಡರಿಸುವ ಪ್ರವೃತ್ತಿಗಳೂ ಕಂಡು ಬರುತ್ತಿರುವ ನಿಟ್ಟಿನಲ್ಲಿ ನಮ್ಮ ವಿಚಾರಸಂಕಿರಣದ ಪ್ರಸ್ತುತತೆಯ ಕುರಿತು ಮಾತನಾಡಿದ ನಾನು ದೇವನೂರರ ಕುರಿತು ಸಾಂಪ್ರದಾಯಿಕವಾಗಿ ಅವರೊಬ್ಬ ಸಂತ ಎಂಬಂಥ ಮಾತನ್ನು ಒಪ್ಪಲು ನಿರಾಕರಿಸಿದೆ.
ಕರ್ನಾಟಕದ ಪ್ರಗತಿಪರ ಸಾಮಾಜಿಕ ಸಾಂಸ್ಕೃತಿಕ ಆಂದೋಲನಗಳು ತಮ್ಮ ಬೆಳವಣಿಗೆಯ ಅಗತ್ಯದ ಒಂದು ಭಾಗವಾಗಿ ಒಂದು ಆರಂಭಿಕ ಹಂತದಲ್ಲಿ ಅವರನ್ನು ದಲಿತ ಲೇಖಕ ಎಂಬುದಾಗಿ ಗುರುತಿಸಿದ್ದರೂ ಕೂಡ ಅವರನ್ನು ಈಗಲೂ ಹಾಗೆ ನೋಡುವದು ನಾವು ಕನ್ನಡ ಸಾಹಿತ್ಯ ಪರಂಪರೆಗೂ ದೇವನೂರು ಮಹಾದೇವ ಅವರಿಗೂ ಸಮಾನವಾಗಿಯೇ ಮಾಡುವ ಅಪಚಾರ, ಅವರು ಕನ್ನಡದ ಕರ್ನಾಟಕದ ಕಾದಂಬರಿಕಾರ, ಚಿಂತಕ ಎಂದೆ. ಬರಿದೇ ಬರಹಗಾರರು, ಚಿಂತಕರು ಆಗಿರುವವರು ನಮ್ಮಲ್ಲಿ ಹಲವರಿದ್ದಾರೆ. ಅದರೆ ದೇವನೂರ್ ಅವರು ಒಬ್ಬ ದಾರ್ಶನಿಕನ ಗುಣಗಳನ್ನು ಕೂಡ ಉಳ್ಳವರು. ಇತ್ತೀಚೆಗೆ ಪ್ರಕಟವಾದ ಅವರ ಬರಹ ಭಾಷಣಗಳ ಸಂಕಲಿತ ರೂಪವಾದ “ಎದೆಗೆ ಬಿದ್ದ ಅಕ್ಷರ” ದ ಪುಟಪುಟಗಳಲ್ಲಿ ಅವರ ಆ ದಾರ್ಶನಿಕನ ಗುಣಗಳನ್ನು ನೋಡ್ತೇವೆ. ಹೀಗಾಗಿ ಜನಾಂದೋಲನಗಳ ಜೊತೆಗಿದ್ದೂ ಅವುಗಳ ಜೊತೆ ಒಂದು ವಿಮರ್ಶಾತ್ಮಕ ಅಂತರವನ್ನೂ ಅವರು ಉಳಿಸಿಕೊಂಡು ಅವುಗಳ ಮುನ್ನಡೆಗೆ ಒಂದು ನೆಲೆಯಲ್ಲಿ ಪ್ರೇರಣೆಯಾಗುತ್ತ ಇನ್ನೊಂದೆಡೆ ಎಚ್ಚರದಿಂದ ಅವುಗಳನ್ನು ಕಾಯುತ್ತ ಇರುವಂಥ ಅವರ ಮನೋಭಾವದ ಕುರಿತು ಮಾತಾಡಿದೆ.
ದೇವನೂರು ಮಹಾದೇವ ಅವರು “ಏನೇನೋ ಮಾತಾಡಬೇಕೆಂದು ಬಂದಿದ್ದೆ, ನೀವು ತೊಡಿಸಿದ ಈ ಶಾಲು, ಹಾಕಿದ ಹಾರ ತುರಾಯಿಗಳಲ್ಲಿ ಎಲ್ಲ ಎಲ್ಲೋ ಎಗರಿಹೋಯಿತು” ಎಂದು ಹತ್ತು ನಿಮಿಷ ಮಾತಾಡಿದರು. ಆಮೇಲೆ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತ ಗೆಳೆಯ ದಿನೇಶ್ ಅಮೀನ್ ಮಟ್ಟು ಮಾತನಾಡುವಾಗ ಮಹದೇವ ಅವರಿಗೆ ಒಂದೆರಡು ಕಿವಿಮಾತು ಹೇಳಿದರು. ಒಂದು: ದೇವನೂರು ಮಹದೇವ ಇಂಥ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚುಹೆಚ್ಚಾಗಿ ಪಾಲ್ಗೊಳ್ಳಬೇಕು, ಎರಡು: ಸ್ವಲ್ಪ ಸುದೀರ್ಘ ಅವಧಿಯ ವರೆಗೆ ಮಾತನಾಡಬೇಕು…!
ಅದಾದ ಒಂದೆರಡು ತಿಂಗಳಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ದೇವನೂರು ಮಹಾದೇವ ಅವರ ವ್ಯಕ್ತಿತ್ವ ಸಾಹಿತ್ಯ ತತ್ವಗಳ ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿದಾಗ ಬಿ.ಎಂ.ಪುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯೊಂದರಲ್ಲಿ “ನಾನು ಎದೆಗೆ ಬಿದ್ದ” ಅಕ್ಷರ ಕೃತಿಯನ್ನು ದೃಷ್ಟಿಯಲ್ಲ್ಲಿಟ್ಟುಕೊಂಡು ದೇವನೂರರ ತಾತ್ವಿಕತೆಯ ಬಗ್ಗೆ ಕೆಲವು ಮಾತುಗಳನ್ನಾಡಿದ್ದೆ. ದೇವನೂರರು ಉದ್ಘಾಟಣೆ ಕಾರ್ಯಕ್ರಮದ ನಂತರ ನಿರ್ಗಮಿಸಿದ್ದು ನೋಡಿದ್ದೆ. ಅವರು ಮತ್ತೆ ಬಂದು ಕುಳಿತದ್ದು ನೋಡಿರಲಿಲ್ಲ. ಬಂದು ಯಾವಾಗಲೋ ಹಿಂದಿನ ಸಾಲಿನಲ್ಲಿ ಪ್ರೇಕ್ಷಕರ ಮಧ್ಯೆ ಕುಳಿತಿದ್ದರಂತೆ. ನಿಮ್ಮ ಮಾತುಗಳನ್ನು ಕೇಳಿದೆ, ಚೆನ್ನಾಗಿ ಮಾತನಾಡಿದಿರಿ ಎಂದರು. ಒಂದೆರಡು ತಿಂಗಳ ಹಿಂದಷ್ಟೇ ಧಾರವಾಡಕ್ಕೆ ಬಂದಿದ್ದಿರಿ, ಈಗ ಮತ್ತೆ ಬಂದಿದ್ದೀರಿ, ಹಿಂದೆ ಅನಾವೃಷ್ಟಿ, ಈಗ ಅತಿವೃಷ್ಟಿ. ನೀವು ಹ್ಞೂಂ ಎಂದರೆ ಅತಿವೃಷ್ಟಿಗೆ ನಾವು ರೆಡಿ ಎಂದೆ. ನಕ್ಕರು.
ಇಷ್ಟು ಪೀಠಿಕೆ, ಮುಂದಿನ ವಾರ ದೇವನೂರರ “ಎದೆಗೆ ಬಿದ್ದ ಅಕ್ಷರ” ಪುಸ್ತಕದ ಕುರಿತು ನಾನು ಬರೆಯಲಿರುವ “ಅವಧಿ”ಯ ನನ್ನ ಅಂಕಣ ಬರಹಕ್ಕೆ…!






Something great to look forward. Advance thanks to Shettar and Avadhi for the coming article about “ಎದೆಗೆ ಬಿದ್ದ ಅಕ್ಷರ”
ಕುಸುಮಬಾಲೆ ಓದಿನ ಬಗ್ಗೆ ಅದರ ಭಾಷಾತೊಡಕಿನ ಬಗ್ಗೆ ಎಲ್ಲರು ಹೇಳುವುದನ್ನೆ ನಾನೂ ನಂಬಿಕೊಂಡಿದ್ದೆ, ಓದಿದ ಮೇಲೆ
ಗೊತ್ತಾಯಿತು, ಅದೇನೂ ಕಬ್ಬಿಣದ ಕಡಲೆಯಲ್ಲ, ನಮ್ಮ ತುಮಕೂರು ಕಡೆಯ ಶೂದ್ರ ಭಾಷೆಗು ಕುಸುಮಬಾಲೇ ಭಾಷೆಗೂ ಅಂಥಾ ಕಂದಕ ಏನೂ ಇಲ್ಲ. ನನಗೆ ಕುಸುಮಬಾಲೆ ಅತ್ಯಂತ ಇಷ್ಟವಾದ ಪುಸ್ತಕ. ಲೆಕ್ಕವಿಲ್ಲದಷ್ಟು ಸರ್ತಿ ಓದಿ
ನಕ್ಕಿದ್ದೇನೆ,ವಿಷಾದಿಸಿದ್ದೇನೆ,ಸ್ವಲ್ಪ ಯೋಚಿಸಿಯೂ ಇದ್ದೇನೆ.
ಆಂಡಯ್ಯನ ಕನ್ನಡ, ಗೋವಿಂದ ಪೈ ಕನ್ನಡ, ಕಯ್ಯಾರರ ಕನ್ನಡ, ಬೇಂದ್ರೆ ಕನ್ನಡ, ಅಣ್ಣಾರಾಯರ ಕನ್ನಡ, ವೈದೇಹಿಯವರ ಕನ್ನಡ, ಕುಂವೀ ಕನ್ನಡ, ಗೀತಾ ನಾಗಭೂಷಣರ ಕನ್ನಡ, ನಾಗವೇಣಿಯವರ ಕನ್ನಡ ,ಜಾಹ್ನವಿಯವರ ಕನ್ನಡ,ರಾಘವೇಂದ್ರ ಪಾಟೀಲರ ಕನ್ನಡ ,ಚಂಪಾ ಕನ್ನಡ ,ಎಸ್.ಜಿ.ಸಿದ್ಧರಾಮಯ್ಯನವರ ಕನ್ನಡ,ಮೊಗಳ್ಳಿಯವರ ಕನ್ನಡ,ಭಾರತೀಸುತರ ಕನ್ನಡ, ರವಿ ಬೆಳಗೆರೆ ಕನ್ನಡ, ಹೀಗೆ ದಶದಿಕ್ಕಿನ ಕನ್ನಡಗಳಿವೆ,ಇನ್ನು ಕೆಲವು ಬಾಯಿಗೆ ಬರುತ್ತಿಲ್ಲ ,ಇವೆಲ್ಲವೂ ಓದಿಸಿಕೊಂಡಿವೆಯೆಂದ ಮೇಲೆ ಕುಸುಮಬಾಲೆ ಕನ್ನಡಕ್ಕೇನು ಕಷ್ಟ ಹೇಳಿ? ಅದರ ಹೊಸ ಫಾರ್ಮ್ ನಲ್ಲಂತೂ ಇನ್ನೂ ಸಲೀಸಾಗಿ ಓದಬಹುದು.
ನೀವು ಹೇಳುವದು ಸರಿ. ಒಮ್ಮೊಮ್ಮೆ ಒಂದು ಸಾಹಿತ್ಯಕೃತಿಗೆ ಹೊರತಾದ ಕಾರಣಗಳು ಅಂಥ ನಿಲುವಿಗೆ ಕಾರಣವಾಗಿರುತ್ತವೆ ಅನ್ನಿಸುತ್ತದೆ. ಚಂದ್ರಶೇಖರ ಪಾಟೀಲರು ಆ ಸಂದರ್ಭದಲ್ಲಿ ಚೆನ್ನಣ್ಣ ವಾಲೀಕರರ “ಬೆಳ್ಯ” ಎಂಬ ಕೃತಿಯೊಂದರ ಸಂವಹನಸಾಧ್ಯತೆಯ ಕುರಿತ ಕನ್ನಡ ವಿಮರ್ಶಾಲೋಕ ತಳೆದ ನಿಲುವಿಗೆ ಕುಸುಮಬಾಲೆಯನ್ನು ಪ್ರತಿಸ್ಪರ್ಧಿಯಾಗಿಸಿ ವಿಮರ್ಶೆಯ ಇಬ್ಬಂದಿತನ ಪ್ರಶ್ನಿಸಲು ಅದರ (ಕುಸುಮಬಾಲೆಯ) ಭಾಷಾಬಳಕೆಯ ಕ್ಲಿಷ್ಟತೆಯನ್ನು ವಾದವಾಗಿ ಬಳಸಿಕೊಂಡರೆನ್ನಿಸುತ್ತದೆ. ಇದನ್ನವರು ಮೊನ್ನೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮಾವೇಶವೊಂದರಲ್ಲಿಯೂ ಪ್ರಸ್ತಾಪಿಸಿದ ಕುರಿತು ನಾನು ವರದಿಗಳಲ್ಲಿ ಓದಿದೆ.ಅವರು “ಬೆಳ್ಯ”ವನ್ನು ಓದಿದ್ದಾರೆಂದರೆ ಕುಸುಮಬಾಲೆಯನ್ನು ಓದುವದು ಕಷ್ಟಸಾಧ್ಯವೆನ್ನಿಸುತ್ತಿರಲಿಲ್ಲ ಎಂದು ನನಗನಿಸಿದ್ದಕ್ಕೇ ನಾನು ಚಂಪಾ ಕುಸುಮಬಾಲೆಯ ಓದಿನ ಕಷ್ಟವನ್ನು ಉತ್ಪ್ರೇಕ್ಷಿಸುತ್ತಿದ್ದಾರೆ ಎಂದು ಭಾವಿಸಿ ಅವರೊಂದಿಗೆ ವಾದ ಮಾಡಿದ್ದು. ಏಕೆಂದರೆ ನಾನು ಬೆಳ್ಯ ಓದುವದರಲ್ಲಿ ವಿಫಲನಾಗಿದ್ದೆ. ಅದಕ್ಕೆ ಕಾರಣ ಭಾಷೆಯ ತೊಡಕೋ, ಕೃತಿಯ ಸಾಹಿತ್ಯಿಕ ಗುಣಮಟ್ಟವೋ ನನಗೀಗ ಹೇಳುವದು ಕಷ್ಟ.
ಮುಂದಿನ ವಾರವೇ, ಬೇಗ ಬಾ! 🙂
ತಮ್ಮ ಲೇಖನ ದೇವನೂರ ಅವರು ಕೇವಲ ದಲಿತ ಲೇಖಕರು ಎಂಬ ನಮಂತವರ ಭಾವನೆ ಬದಲಾಯಿಸುವಂತೆ ಇದೆ.
ನನಗೆ ಕುಸುಮ ಬಾಲೆ ೋದುವುದಕ್ಕೆ ಏನೂ ಕಷ್ಟದ್ದಲ್ಲ,ಸಂವಹನ ಸಮಸ್ಯೆ ಎಂಬುದು ಕೇವಲ ನಮ್ಮ ಪೂರ್ವಾಗ್ರಹಗಳ ಸಮಸ್ಯೆ ಎಂದು ತೋರಿಸಿದವರು, ಅದನ್ನ ಓದುತ್ತಾ ಅನುಭವಿಸುವುದು ಹೇಗೆ ರಂಗ ನಿರ್ದೇಶಕ ಬಸವಲಿಂಗಯ್ಯ.
ೊಮ್ಮ ನನಗೂ ಬಸವಲಿಂಗಯ್ಯ ಮತ್ತು ಸಮುದಾಯದ ಿತರ ಗೆಳೆಯರಿಗೂ ನಡಯವೆ ಒಂದು ವಾಗ್ವಾದವೇ ನಡೆಯಿತು. ಕುಸುಮ ಬಾಲೆ ಚಿತ್ರಿಸಿದ ಬದುಕು,ಸಮಾಜದ ರಚನೆ ಬಗ್ಗೆ ಅಪಾರ ಮೆಚ್ಚಿಗೆಯಿಂದ ಮಾತನಾಡಿದ್ದ ನಾನು ಅದರ ಭಾಷೆ ಈ ಅರಿವನ್ನು ಹಬ್ಬಿಸುವುದಕ್ಕೆ ತೊಡಕಾಗಿದೆ ಎಂದು ಹೇಳಿದ್ದೆ. ಅದರ ವಿರುದ್ಧ ಬಸವಲಿಂಗಯ್ಯ ಆದಿಯಾಗಿ ಸಮುದಾಯದ ಗೆಳೆಯರೆಲ್ಲಾ ವಾದಿಸಿದ್ದರು.ಆಗಲೇ ಎರಡು ಬಾರಿ ಕುಸುಮ ಬಾಲೆ ಓದಿದ್ದರೂ ನಾನು ಒಪ್ಪಲಿಲ್ಲ. ದನ್ನೇ ಒಂದು ಸವಾಲಾಗಿ ಸ್ವೀಕರಿಸಿದ ಬಸವಲಿಂಗಯ್ಯ ದರಲ್ಲಿ ಯಾವ ಮಾರ್ಪಾಟನ್ನೂ ಮಾಡದೆ, ಒಂದು ಪದವನ್ನೂ ಬಿಡದೆ ರಂಗ ರೂಪಕ್ಕೆ ತಂದರು. ಅದೇ ಸಂವನಕ್ಕೆ ತೊಡಕು ಎಂದು ಭಾವಿಸಿದ್ದ ಭಾಷೆಯ ಹಂದರದಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿದ ಕಥನವನ್ನು ಅನುಭವಿಸಿ ಬೆರಗಾದೆ. ಮತ್ತೆ ಓದಿದೆ. ಬೇರೆಯವರ ಭಿಪ್ರಾಯಗಳನ್ನು ೋದಿ ಪೂರ್ವಾಗ್ರಹಕ್ಕೊಳಗಾಗಿದ್ದು ನನಗೇ ಸ್ಪಷ್ಟವಾಯಿತು.
ಈ ವಿವಾದದಿಂದ ಒಂದು ಹೊಸ ರಂಗ ಪ್ರಯೋಗಕ್ಕೆ ನಾಂದಿಯಾಯಿತು. ಕನ್ನಡ ಸಾಹಿತ್ಯ ಹಾಗೂ ರಂಗಭೂಮಿ ಎರಡೂ ಶ್ರೀಮಂತವಾಯಿತು.
ದೇವನೂರು ಮಹಾದೇವರ ವಿದ್ಯಾವರ್ಧಕ ಸಂಘದ ಕಾರ್ಯಕ್ರಮದಲ್ಲಿ ನಾನೂ ಇದ್ದೆ. . ವಿದ್ಯಾರ್ಥಿಗಳೇ ತುಂಬಿದ್ದ ಅಂದು ಅವರು, ನಾವು ಬಂಡೆಗಳ ಮೇಲೆ ಚಿಗುರೊಡೆಯಬೇಕಾಗಿದೆ ಎಂದಿದ್ದರು. . ಯುವಕರು ಬದಲಾವಣೆಯತ್ತ ನಡೆಯಿರಿ ನಾನು ನಿಮ್ಮ ಹಿಂದೆ ಇರುತ್ತೇನೆ ಎಂದು ಹೇಳಿದ್ದರು. . ಕಾರ್ಯಕ್ರಮದ ನಂತರ ಊಟದ ಸಮಯದಲ್ಲಿ ಕಾರ್ಯಕ್ರಮದ ಸಂಘಟಕರು, ಮತ್ತು ದೇವನೂರರ ಬರಹದ ಬಗ್ಗೆ ಮಾತನಾಡಿದವರೆಲ್ಲ ವಿಶೇಷ ಸ್ಥಳದಲ್ಲಿ ಕುರ್ಚಿಯ ಮೇಲೇ ಕೂತು ಊಟ ಮಾಡುತ್ತಿದ್ದರೆ ದೇವನೂರು ಮಾತ್ರ ನಮ್ಮೆಲ್ಲರ ಜೊತೆ ಕಿಕ್ಕಿರಿದ ಜಾಗದಲ್ಲಿ ಸರತಿಯಲ್ಲಿ ನಿಂತು ಊಟ ಹಾಕಿಸಿಕೊಂಡು ಹಸಿರು ಟವೆಲ್ನಲ್ಲಿ ಮುಖದ ಬೆವರು ಒರೆಸಿಕೊಳ್ಳುತ್ತಾ ನಿಂತೇ ಊಟ ಮಾಡಿದ್ದರು. . !!
ದೇವನೂರು ಮಹಾದೇವರ ಸಹಿಯನ್ನು ಯಾರಾದರೂ ನೋಡಿದ್ದರೆ ಮತ್ತು ಅವರನ್ನು ಹತ್ತು ನಿಮಿಷದ ಮಟ್ಟಗಾದರೂ ಹತ್ತಿರದಿಂದ ನೋಡಿದ್ದವರಿಗೆ ಗೊತ್ತಾಗುತ್ತದೆ. ಅವರ ಸಹಿ ಎಷ್ಟು ಸರಳವೋ ಅವರೂ ಹಾಗೇ. . .!!! ನನಗೆ ಅವರು ಕೇವಲ ಬರಹಗಾರರಾಗಿಯಷ್ಟೇ ಅಲ್ಲ ವ್ಯಕ್ತಿಯಾಗಿ ಕೂಡ ಒಂದು ಅಚ್ಚರಿ ಮತ್ತು ಬಹುಶಃ ನಾನಾಗಲಾರದ ಆದರ್ಶ. .
its true
Sir, waiting for next week! 🙂
kusumabale nammalli MA taragtige patyavagithu.adannu odi,odisi patha madi ishtapattavalu naanu.nanna vidyarthiyobba kusumabale pusthakadinda eshtu prabhavitanagiddanendare devanooru avarannu nodi mataduvudakkende Kasaragodininda Mysoorige prayana belesidda.avarannu bhetimadi matadida hemme mathu santhoshadinda maralidda.
Looking forward for your article on ‘ಎದೆಗೆ ಬಿದ್ದ ಅಕ್ಷರ’
ಕುತೂಹಲದಿಂದ ಕಾಯುತ್ತಿದ್ದೇವೆ ಮುಂದಿನ ನಿಮ್ಮ ಬರವಣಿಗೆಗಾಗಿ