ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮಾಯಾ ಹಲವು ವಿಲಕ್ಷಣ ಕನಸು ಕಂಡಿದ್ದಳು, ಅವುಗಳ ಅರ್ಥವಿವರಣೆ ಮಾಡಿದ ಆಸ್ಥಾನ ಜ್ಯೋತಿಷಿ ಜನಿಸಲಿರುವ ಮಗು ಒಂದೋ ಚಕ್ರವರ್ತಿಯಾಗುತ್ತಾನೆ ಇಲ್ಲವೇ ಸನ್ಯಾಸಿಯಾಗುತ್ತಾನೆ ಎಂದಿದ್ದ. ಶಾಕ್ಯಕುಲದ ಮುಖ್ಯಸ್ಥನೂ ಅವರದ್ದೇ ಒಂದು ಗಣರಾಜ್ಯದ ಅಧಿಪತಿಯೂ ಆಗಿದ್ದ ಸುದ್ಧೋದನನಿಗೆ ಮಗ ಸನ್ಯಾಸಿಯಾಗುವದು ಬೇಕಿರಲಿಲ್ಲ. ಯಾವ ಕಷ್ಟ ಕೋಟಲೆಗಳೂ ಬಾಧಿಸದಂತೆ ಆತನನ್ನು ಐಷಾರಾಮಿಯಾಗಿ ಬೆಳೆಸಿದ. ಒಮ್ಮೆ ಸಿದ್ಧಾರ್ಥನಿಗೆ ಒಂದು ಶವ, ಇನೊಮ್ಮೆ ಒಂದು ವೃದ್ಧಜೀವ, ಒಬ್ಬ ರೋಗಿ, ಒಬ್ಬ ಯೋಗಿ ಹೀಗೆ ವಿವಿಧ ದೃಶ್ಯಗಳು ಎದುರಾಗಿ ಅವನಿಗೆ ಜೀವನದ ವಿವಿಧ ಹಂತಗಳು ಮತ್ತು ಮುಖಗಳ ಬಗ್ಗೆ ಜಿಜ್ಞಾಸೆ ಶುರುವಾಯಿತು.
ಅದರ ಅರ್ಥ ತಿಳಿಯಲು ಆತ ನವವಿವಾಹಿತ ಪತ್ನಿಯನ್ನು, ನವಜಾತ ಶಿಶುವನ್ನು, ಅರಮನೆಯನ್ನು ತೊರೆದು ಕೆಲವು ಶ್ರಮಣರನ್ನು ಹಿಂಬಾಲಿಸಿದ, ಅವರಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಬೋಧಿವೃಕ್ಷವೊಂದರ ಅಡಿಯಲ್ಲಿ ಧ್ಯಾನಕ್ಕೆ ಕುಳಿತ, ಕೊನೆಗೊಮ್ಮೆ ಅವನಿಗೆ ಜ್ಞಾನೋದಯವಾಯಿತು, ಅವನು ಬುದ್ಧನಾದ.
ಇದು ನಮ್ಮ ನಿಮ್ಮ ಥಿಯರಿ, ಅಲ್ಲವೇ? ತಾಳಿರಿ, ಇಲ್ಲಿ ನೋಡಿರಿ:
“ಬುದ್ಧನು ಸಿದ್ದಾರ್ಥನು. ಅವನಿಗೆ ಸಂಸಾರವು ಬೇಜಾರವಾಗಿ ಅಡ್ಡಾಡುತ್ತಾ ತಿರುಗಾಡುತ್ತಾ ಅಡ್ಡಾಡುತ್ತಾ ತಿರುಗಾಡುತ್ತಾ ಮಾದರ ಚೆನ್ನಯ್ಯನ ಮನೆಗೆ ಬಂದನು. ಬಂದು ನನಗೆ ನೀರಡಿಕೆಯಾಗಿದೆ, ಕುಡಿಯಲು ನೀರು ಕೊಡು ಎಂದನು. ಅದಕ್ಕೆ ಚೆನ್ನಯ್ಯನು “ಇಲ್ಲಾ,ನೀವು ಉಚ್ಛಕುಲದಲ್ಲಿ ಹುಟ್ಟಿದವರು. ನಾವು ನೀಚರು. ನಿಮಗೆ ನೀರು ಕೊಟ್ಟರೆ ನಮಗೆ ಪಾಪ ಬರುವದು” ಎಂದನು. ಅದಕ್ಕೆ ಸಿದ್ದಾರ್ಥನು “ಇಲ್ಲಾ ಇಲ್ಲಾ, ನಾನೂ ಮನುಜನು ನೀನೂ ಮನುಜನು. ನೀರು ಕೊಡು” ಎಂದನು. ಅದಕ್ಕೆ ಚೆನ್ನಯ್ಯನು ನೀರು ಕೊಟ್ಟನು. ಸಿದ್ದಾರ್ಥನು ನೀರು ಕುಡಿದನು. ಅದರಿಂದ ಅವನಿಗೆ ಜ್ಞಾನೋದಯವಾಯಿತು”…….!!!
ಇದು ೧೯೮೦ರಲ್ಲಿ ಎಂ.ಎ ಮುಗಿಯುತ್ತಲೇ ನಾನು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ನಿಯುಕ್ತನಾಗಿ ಒಂದು ವರ್ಷ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ವಾರ್ಷಿಕ ಪರೀಕ್ಷೆಯಲ್ಲಿ ಬರೆದಿದ್ದ ಉತ್ತರ. ಇದನ್ನು “ಮೌಲ್ಯಮಾಪನೆ” ಮಾಡಿಯಾದ ಮೇಲೆ ಅವಳಿಗೆ ಬಂದು ನನ್ನನ್ನು ಕಾಣುವಂತೆ ಹೇಳಿದೆ.
ಮಧ್ಯಾಹ್ನ ಸ್ಟಾಫ್ ರೂಮಿಗೆ ಬಂದಳು. ಹೊಟೆಲ್ ಇಟ್ಟುಕೊಂಡಿದ್ದ ಒಬ್ಬ ಉಡುಪಿಯ ಶೆಟ್ಟರ ಮಗಳಾಕೆ. ದುಂಡಗೆ ಬೆಳ್ಳಗೆ ಇದ್ದಳು. ಇದನ್ನು ಓದು ಎಂದು ಅವಳು ಬರೆದಿದ್ದನ್ನು ತೋರಿಸಿ ಕೈಗಿತ್ತೆ. ಆ ಭಾಗವನ್ನು ನೋಡುತ್ತಲೇ ಅವಳಿಗೆ ಗೊತ್ತಾಯಿತು ಅದು ತಾನು ಬರೆದ ಬಂಡಲ್-ಬಕ್ವಾಸ್ ಉತ್ತರ ಎಂದು. ನಾಚಿದಳು. ಓದು ಎಂದೆ. ಒಂದು ಸಾಲು ಓದುವದು, ಬಾಯ ಮೇಲೆ ಕೈವಸ್ತ್ರ ಇಟ್ಟುಕೊಂಡು ನಗುವದು, ಕಳ್ಳನೋಟ ಬೀರುವದು,ಮತ್ತೆ ಒಂದು ಸಾಲು ಓದುವದು, ನಾಚುವದು, ನಗುವದು..ಹೀಗೆ ಸ್ವಲ್ಪ ಹೊತ್ತು ನಡೆಯಿತು. ತಾ ಇಲ್ಲಿ ಎಂದು ಪೇಪರ್ ಇಸಿದುಕೊಂಡು. “ನೋಡು ನೀನು ಖಾಲಿ ಉತ್ತರ ಪತ್ರಿಕೆ ಕೊಟ್ಟರೂ ಚಿಂತೆ ಇಲ್ಲ. ಆದರೆ ಕ್ರಿಸ್ತಪೂರ್ವದ ಆರನೇ ಶತಮಾನದ ಬುದ್ಧ ಮತ್ತು ಕ್ರಿಸ್ತಶಕ ಹನ್ನೆರಡನೆ ಶತಮಾನದ ಮಾದರ ಚೆನ್ನಯ್ಯ ಹೀಗೆ ತಮ್ಮ ಮಧ್ಯೆ ಸುಮಾರು ಸಾವಿರದೆಂಟುನೂರು ವರ್ಷಗಳ ಅಂತರ ಇರುವ ಇಬ್ಬರನ್ನು ಒಂದೇ ಸಾಲಿನಲ್ಲಿ ಕುಳ್ಳಿರಿಸಬೇಡ, ಹೋಗು” ಎಂದೆ.

ಇನ್ನೊಬ್ಬನಿದ್ದ, ಸ್ವಲ್ಪ ತಿಕ್ಕಲ. ಒಮ್ಮೆ ಕ್ಲಾಸ್ ರೂಂನಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕುಳಿತಿದ್ದ. “ಅದು ಬಿಸಿಲಿನ ತಾಪಕ್ಕೆ ಸೂರ್ಯನ ಕಿರಣಗಳಿಂದ ಕಣ್ಣನ್ನು ರಕ್ಷಿಸಿಕೊಳ್ಳಲು ಇರುತ್ತದೆ, ಹೊರಗೆ ಹೋದ ಮೇಲೆ ಹಾಕಿಕೋ, ಈಗ ಅದನ್ನು ತಗಿ” ಎಂದೆ. ಕೇಳಿಯೂ ಕೇಳದಂತೆ ಸುಮ್ಮನೇ ಕುಳಿತ. “ಉದ್ಧಟತನ ಮಾಡಬೇಡ, ತೆಗೆಯದಿದ್ದರೆ ಇಗೋ ಈ ಡಸ್ಟರ್ ನಿನ್ನತ್ತ ಎಸೆಯುತ್ತೇನೆ, ಸುಮ್ಮನೇ ಗಾಗಲ್ಸ್ ತೆಗೆದು ಜೇಬಿನಲ್ಲಿಟ್ಟುಕೋ” ಎಂದು ತಮಾಷೆಯ ಧ್ವನಿಯಲ್ಲಿ ಹೆದರಿಸಿದೆ. ತೆಗೆದ.ವಾರ್ಷಿಕ ಪರೀಕ್ಷೆಯಲ್ಲಿ ತನ್ನ ಪೇಪರ್ ಬರೆದಾಗ ಅದರಲ್ಲಿ “ಜಗತ್ತಿನ ಚರಿತ್ರೆ ಎಂಬುದು ಯಾವುದೇ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ-ನಾಗರಿಕತೆಯ ಚರಿತ್ರೆ ಅಲ್ಲ. ಅದು ಇಡೀ ಮಾನವ ಜನಾಂಗದ ಬೆಳವಣಿಗೆಯ ಕತೆ” ಎಂಬ ಮೂಲಪಾಠದಲ್ಲಿದ್ದ “ಜನಾಂಗ” ಎಂಬ ಶಬ್ದಕ್ಕೆ ಇನ್ನೊಂದು ಎಕ್ಸಟ್ರಾ ಅಕ್ಷರವನ್ನು ಸೇರಿಸಿ ಜಗತ್ತಿನ ಚರಿತ್ರೆಯನ್ನು “ಇಡೀ ಮಾನವ ಜನನಾಂಗದ ಬೆಳವಣಿಗೆಯ ಕತೆ” ಯಾಗಿ ಮಾರ್ಪಡಿಸಿ ಹೊರಟು ಹೋದ ಭೂಪ ಅವನು!
ಅಷ್ಟರಲ್ಲಿ ಉತ್ತರ ಪತ್ರಿಕೆಯ ಮೌಲ್ಯಮಾಪನದ ಕುರಿತು “ಅಲಿಲಿಲಿ ಇದರಲ್ಲೂ ಮಜಾ ಇದೆ” ಎಂದು ನನಗೆ ಮನದಟ್ಟಾಗಿತ್ತು. ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿಯ ಉತ್ತರಪತ್ರಿಕೆಗಳ ಮೌಲ್ಯಮಾಪನದ ಸಂದರ್ಭದಲ್ಲಿ ನನ್ನೊಡನೆ ಮೌಲ್ಯಮಾಪನಕ್ಕೆ ಕುಳಿತ ನನ್ನ ಸಹೋದ್ಯೋಗಿಗಳು ಅಗುಳಿನ ಮೇಲೆ ಅನ್ನದ ಪರೀಕ್ಷೆ ಮಾಡುತ್ತ ಕ್ಷಿಪ್ರಗತಿಯಿಂದ ಸಾಗುತ್ತಿದ್ದರೆ ನಾನು ಹಾಗೇ ಮಗುಚುತ್ತ ಕುಳಿತಿರುತ್ತೇನೆ. ಅವರು ಎರಡು ಪ್ಯಾಕೆಟ್ ಮುಗಿಸಿದಾಗ ನನ್ನದು ಒಂದು ಪ್ಯಾಕೆಟ್ ಮುಗಿದಿರುತ್ತದೆ.”ಸಾರ್ ಬನ್ನಿ ಒಂದು ಕಪ್ ಟೀ ಕುಡಿದು ಬರೋಣ” ಎಂದು ಅವರು ಕರೆದರೆ “ಇಲ್ಲ ನೀವು ಹೋಗಿ ಬನ್ನಿ ಪೇಪರ್ಸ್ ಇನ್ನೂ ತುಂಬ ಇವೆ” ಎಂದು ನಾನೆಂದರೆ ಅವರು “ಅಯ್ಯೋ, ಏನ್ಸಾರ್ ನೀವು, ಪೇಪರ್ಸ್ ನ ಓದ್ತಾ ಕೂತು ಬಿಡ್ತೀರಲ್ಲಾ” ಎನ್ನುತ್ತಾರೆ. ಅಂಥ ಮಜವಾದ ಬರವಣಿಗೆಗಳಿರುತ್ತವೆ, ಓದದಿರುವದುಂಟೆ?
ನಿಯಮಿತವಾಗಿ ಪಾಠಪ್ರವಚನ ಇರುವ ಸ್ನಾತಕೋತ್ತರ ವಿಭಾಗಗಳಲ್ಲಿ ಪ್ರವೇಶ ಪಡೆದು ಓದುವ ವಿದ್ಯಾರ್ಥಿಗಳ ಉತ್ತರಗಳು ಬಹುಮಟ್ಟಿಗೆ ಚೆನ್ನಾಗಿರುತ್ತವೆ. ಕೆಲವು ಪರವಾ ಇಲ್ಲ ಎನ್ನುವಂತಿರುತ್ತವೆ. (ಈ ಮಧ್ಯೆ ಹಲವು ಬೇರೆಬೇರೆ ಪುಸ್ತಕಗಳನ್ನು ಅವರು ಓದುತ್ತಿದ್ದಾರೆ ಎಂಬುದಕ್ಕೆ ಸೂಚನೆಗಳು ಅವರ ಬರವಣಿಗೆಯಲ್ಲೂ ದೊರೆಯುವದಿಲ್ಲ. ಯಾವುದೋ ಒಂದು ಅಂಶವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿರಿ, ಅಥವಾ ಈ ವಾದ/ಹೇಳಿಕೆಯನ್ನು ಒಪ್ಪುವಿರ? ಸಮರ್ಥಿಸಿರಿ ಇತ್ಯಾದಿ ತರಹದ ಪ್ರಶ್ನೆಗಳಿಗೂ ಯಾವ ವಿಮರ್ಶೆಯೂ ಇಲ್ಲದೇ ಯಾವ ಚರ್ಚೆಯ ಪೂರ್ವಾಪರಗಳನ್ನೂ ಸಮೀಕ್ಷಿಸದೇ ಸುಮ್ಮನೇ ತಾವು ಏನು ಬರೆಯಬೇಕೋ ಅದನ್ನೇ ವಿವರಣಾತ್ಮಕವಾಗಿ ಬರೆದಿರುತ್ತಾರೆ ಅಷ್ಟೇ) ಆದರೆ ಬಾಹ್ಯ ಪರೀಕ್ಷೆಗಳು ಅಂತ ಇರುತ್ತವಲ್ಲ ಅಲ್ಲಿ ಮಾತ್ರ ತುಂಬ ಮಜವಾಗಿರುತ್ತವೆ ಉತ್ತರಗಳು. ಕಲ್ಪನೆಯ ಕುದುರೆಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರುತ್ತವೆ ಅಲ್ಲಿ.
ಅಂಬೇಡ್ಕರ್ ಅವರ ಬದುಕಿನಲ್ಲಿ ಮಹಾಡ್ ಸತ್ಯಾಗ್ರಹ ಒಂದು ಮಹತ್ವಪೂರ್ಣ ಘಟನೆ. ಮಹಾರಾಷ್ಟ್ರದ ಕೊಂಕಣ್ ಪ್ರದೇಶದ ರಾಯಗಡ ಜಿಲ್ಲೆಯಲ್ಲಿ ದಲಿತರಿಗೆ ನಿಷಿದ್ಧವಾಗಿದ್ದ ಚೌಡರ್ ಕೆರೆಯ ನೀರನ್ನು ದಲಿತರು ಕುಡಿಯುವದಕ್ಕೆ ಅವಕಾಶ ಕಲ್ಪಿಸುವ ಹೋರಾಟದಲ್ಲಿ ಅಂಬೇಡ್ಕರ್ ಮಧ್ಯೆ ಪ್ರವೇಶಿಸಿ ೧೯೨೭ ರ ಮಾರ್ಚ ೨೦ರಂದು ದಲಿತರು ಅಲ್ಲಿಯ ನೀರು ಕುಡಿಯುವಲ್ಲಿ ಯಶಸ್ವಿಯಾದ ಹೋರಾಟ. ದಲಿತರ ಸ್ವಾಭಿಮಾನ ಘನತೆಯ ಜಾಗೃತಿಯಲ್ಲಿ ಒಂದು ಮೈಲುಗಲ್ಲು. ಪ್ರಶ್ನೆ ಪತ್ರಿಕೆ ಇಂಗ್ಲಿಷ್ ನಲ್ಲಿ ಇತ್ತು. ಅದರಲ್ಲಿ Mahad ಎಂದು ಇದ್ದದ್ದನ್ನು ಒಬ್ಬ ಅಭ್ಯರ್ಥಿ ತನ್ನದೇ ಆದ ರೀತಿಯಲ್ಲಿ ಗ್ರಹಿಸಿಕೊಂಡಿದ್ದ. ಓದಿದ್ದರಲ್ಲವೇ ಅದನ್ನವನು ಮಹಾಡ್ ಎಂದು ಸರಿಯಾಗಿ ಅರ್ಥಮಾಡಿಕೊಳ್ಳುವದು?
ಅವನು ಅದನ್ನು ಮಹಮದ್(Mahamad)ಎಂಬುದು ಪ್ರಿಂಟ್ ಮಿಸ್ಟೇಕ್ ಆಗಿ ಮಹದ್ (Mahad) ಆಗಿದೆ ಎಂದು ಊಹಿಸಿದ್ದ. ಇನ್ನೇನಿದೆ…, ಅವನು ಬರೆದದ್ದೇ ಉತ್ತರ!! “ಅಂಬೇಡ್ಕರರೂ ಮಹಮದರೂ ತುಂಬ ಒಳ್ಳೆಯ ಗೆಳೆಯರಾಗಿದ್ದರು. ಅಂಬೇಡ್ಕರರು ಹಮ್ಮಿಕೊಳ್ಳುವ ಎಲ್ಲ ಚಳುವಳಿಗಳಲ್ಲೂ ಮಹಮದರು ಅವರ ಜೊತೆ ಇದ್ದೇ ಇರುತ್ತಿದ್ದರು. ಹಾಗಾಗಿ ಮಹಾರಾಷ್ತ್ರದಲ್ಲಿ ನಡೆದ ಆ ಚಳುವಳಿಗೆ ಅಂಬೇಡ್ಕರರು ತಮ್ಮ ಗೆಳೆಯನ ಹೆಸರನ್ನೇ ಇಟ್ಟರು. ಅದೇ ಮಹಮದ್ ಚಳುವಳಿ..” ಇತ್ಯಾದಿ ಇತ್ಯಾದಿ…
ಒಮ್ಮೊಮ್ಮೆ ಅಭ್ಯರ್ಥಿಗಳು ಕೆಲವು ನುಡಿಗಟ್ಟುಗಳನ್ನು ಅಕ್ಷರಶ: ಅರ್ಥ (ಅಂದರೆ ಅನರ್ಥ) ಮಾಡಿಕೊಂಡಿರುತ್ತಾರೆ. ಅಮೇರಿಕದ ಅಧ್ಯಕ್ಷ ಫ್ರ್ಯಾಂಕ್ಲಿನ್ ರೂಸವೆಲ್ಟ್ ವಿದೇಶ ನೀತಿಗೆ ಸಂಬಂಧಿಸಿ ಅಳವಡಿಸಿಕೊಂಡಿದ್ದ “ಬಿಗ್ ಸ್ಟಿಕ್ ಪಾಲಿಸಿ” ಯ ಕುರಿತ ಪ್ರಶ್ನೆಗೆ ಇಂಥ ಉತ್ತರಗಳ ಉದಾಹರಣೆ ನಾನು ಮೌಲ್ಯಮಾಪನೆ ಮಾಡುವಾಗ ಸಾಮಾನ್ಯವಾಗಿ ನಾಲ್ಕೈದಾದರೂ ಸಿಗುತ್ತವೆ. “ಮೃದುವಾದ ಮಾತಾಡು, ಆದರೆ ಒಂದು ದೊಡ್ಡ ದೊಣ್ಣೆಯನ್ನು ಇಟ್ಟುಕೊಂಡಿರು, ನೀನು ಬಲು ದೂರ ಹೋಗುತ್ತೀ” ಎಂಬುದೊಂದು ಪಶ್ಚಿಮ ಆಫ್ರಿಕದ ಗಾದೆಮಾತು ಎಂದು ಹೇಳಿ ಅದನ್ನು ತನ್ನ ಸರಕಾರದ ನಿಷ್ಠುರ ವಿದೇಶ ನೀತಿಯ ಸೂತ್ರವಾಗಿ ಅಳವಡಿಸಿಕೊಂಡ ರೂಸವೆಲ್ಟ್ ಕುರಿತ ಪ್ರಶ್ನೆಯಲ್ಲಿ ಬಿಗ್ ಸ್ಟಿಕ್ ಪಾಲಿಸಿ ಎಂಬುದು ಪ್ರಶ್ನೆ ಪತ್ರಿಕೆಯಲ್ಲಿ “ದೊಡ್ಡ ದೊಣ್ಣೆ ನೀತಿ” ಎಂದು ಅನುವಾದಿಸಲ್ಪಟ್ಟಿರುತ್ತದೆ. ಅದನ್ನು ಅಕ್ಷರಶ: ಅರ್ಥೈಸಿಕೊಂಡು ರೂಸವೆಲ್ಟರು ತಮ್ಮ ಆಡಳಿತಗಾರರಿಗೆಲ್ಲರಿಗೂ ಒಂದೊಂದು ದೊಡ್ಡ ದೊಣ್ಣೆಯನ್ನು ನೀಡಿರುತ್ತಿದ್ದರು.
ತಾವೂ ಒಂದು ದೊಡ್ಡ ದೊಣ್ಣೆಯನ್ನು ಇಟ್ಟುಕೊಂಡಿದ್ದರು. ಆ ದೊಡ್ಡ ದೊಣ್ಣೆ ಅಥವ ಕೋಲಿನಿಂದ ತಪ್ಪಿತಸ್ಥರನ್ನು ಹೊಡೆದು ಹದ್ದುಬಸ್ತಿನಲ್ಲಿ ಇಡಲಾಗುತ್ತಿತ್ತು ಇತ್ಯಾದಿ ಬರೆಯುವವರಿದ್ದಾರೆ.ಆ “ದೊಡ್ಡ ದೊಣ್ಣೆ”ಯು ಎಷ್ಟು ಉದ್ದವಿತ್ತು ಎಷ್ಟು ದಪ್ಪವಿತ್ತು ಎಂದು ಅದನ್ನು ಸ್ವತ: ಕಣ್ಣಾರೆ ನೋಡಿ ಬಂದವರಂತೆ ವಿವರಿಸಿದವರೂ ಇದ್ದಾರೆ. ಹಾಗೆಯೇ ಅಮೇರಿಕಾ ಮತ್ತು ರಷ್ಯಗಳು ಎರಡನೆಯ ಮಹಾಯುದ್ಧದ ನಂತರ ಹಲವು ದಶಕಗಳ ವರೆಗೆ ನೇರ ಯುದ್ಧವಿಲ್ಲದೇ ಸೈದ್ಧಾಂತಿಕವಾಗಿ ಕಮ್ಯುನಿಜಂ ಪರ ಮತ್ತು ವಿರುದ್ಧದ ಎರಡು ಕ್ಯಾಂಪುಗಳ ನೇತೃತ್ವ ವಹಿಸಿದ್ದ, ಹಗೆತನವೆನ್ನುವದು ಒಳಗೊಳಗೇ ಇದ್ದು ಪರೋಕ್ಷ ಯುದ್ಧದ ರೂಪ ತಾಳಿದ್ದ ವಿದ್ಯಮಾನವನ್ನು Cold War ಎಂದು ಕರೆಯಲಾಗಿದೆಯಷ್ಟೇ. ಯಾವ ತಯಾರಿಯೂ ಇಲ್ಲದೇ ಪರೀಕ್ಷೆ ಬರೆಯಲು ಬಂದ ಒಬ್ಬ ಮಹಾನುಭಾವ ಅದರ ಕುರಿತು “ಶೀತಲ ಯುದ್ಧವು ಅತ್ಯಂತ ತಂಪಾದ ಪ್ರದೇಶದಲ್ಲಿ ನಡೆದ ಭೀಕರ ಯುದ್ಧವಾಗಿದೆ. ಆ ಚಳಿಯನ್ನು ತಡೆದುಕೊಳ್ಳಲಾಗದೇ ನಡುಗಿಯೇ ಲಕ್ಷಗಟ್ಟಲೆ ಜನ ಸತ್ತರು” ಎಂದು ಬರೆದರೆ, “ಅದು ಪರ್ವತ ಪ್ರವೇಶದಲ್ಲಿ ಸಾವಿರಾರು ಅಡಿ ಎತ್ತರದಲ್ಲಿ ಮೈನಸ್ ನಲವತ್ತು ಡಿಗ್ರಿ ಸೆಲ್ಸಿಯಸ್ ಟೆಂಪರೇಚರ್ ಇರುವಲ್ಲಿ ನಡೆದ ಘನಘೋರ ಯುದ್ಧವಾಗಿತ್ತು ಆ ವಾತಾವರಣ ಬಹಳ ಎಂದರೆ ಬಹಳ ಶೀತಲ ಇದ್ದುದರಿಂದ ಅದಕ್ಕೆ “ಶೀತಲ ಯುದ್ಧ” ಎಂದೇ ಹೆಸರು ಬಂದಿದೆ” ಎಂದು ಇನ್ನೊಬ್ಬ ಬರೆದಿದ್ದ…!
ಈ ನಡುವೆ ರಾಷ್ಟ್ರಕೂಟರ ಕಾಲದಲ್ಲಿ ರೈತರು ಜೋಳ, ಗೋದಿ ಮತ್ತು ಮ್ಯಾಂಗನೀಜ್ ಬೆಳೆಯುತ್ತಿದ್ದರು ಎಂದು ಬರೆಯುವವರಿದ್ದಾರೆ, ಬಾದಾಮಿ ಚಾಲುಕ್ಯರ ಕಾಲದಲ್ಲಿ ಓಪನ್ ಯೂನಿವರ್ಸಿಟಿಗಳು ನೂರಾರು ಇದ್ದವು, ಕೇವಲ ಐಹೊಳೆ ಒಂದರಲ್ಲೇ ಹದಿನೈದು ವಿಶ್ವವಿದ್ಯಾಲಯಗಳಿದ್ದವು ಎಂದು ಲೆಕ್ಕ ಹಾಕಿದವರಿದ್ದಾರೆ, ರಾಜರು ಯಾವಾಗಲೂ ರಾಣಿಯರ ಸಂಗಡವೇ ಇರುತ್ತಿದ್ದರು ಎಂದು ಬರೆದು ಆನಂದಿಸುವವರಿದ್ದಾರೆ. ಇವರೆಲ್ಲ ಏನೋ ಒಂದು ಬರೆದಿರುತ್ತಾರೆ. ಇನ್ನು ಕೆಲವರಿರುತ್ತಾರೆ, ಅವರು ಇಪ್ಪತ್ತೈದು ಮೂವತ್ತು ಪುಟ “ಬರೆದಿರುತ್ತಾರೆ” ಆದರೆ ಏನು ಬರೆದಿರುತ್ತಾರೆ? ಅದನ್ನು ಓದಲಾಗುವದಿಲ್ಲ. ಸುಮ್ಮನೇ ಪೆನ್ನನ್ನು ಒಂದು ಕೋನದಲ್ಲ್ಲಿ ಹಿಡಿದು ಅಕ್ಷರಗಳಂತೆ ಕಾಣುವ ಒಂದು ವಿನ್ಯಾಸವನ್ನು ಸೃಷ್ಟಿಸುತ್ತ ಹೋಗುವ ಪ್ರತಿಭಾವಂತರವರು. ಅಲ್ಲಿಯ ಒಂದೇ ಒಂದು ಶಬ್ದವನ್ನು ನೀವು ಓದಲಾರಿರಿ. ಏಕೆಂದರೆ ಅಲ್ಲಿ ಯಾವ ಶಬ್ದವೂ ಇರುವದಿಲ್ಲ!
ಇನ್ನು ಕೆಲವರು ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಯನ್ನೇ ಹೊರಳ್ಯಾಡಿಸಿ ತಿರುಗ್ಯಾಡಿಸಿ ಜಗ್ಗಿ ನೂಕಿ ಪುನ: ಪುನ: ಸೃಷ್ಟಿಸುವ ಸೃಷ್ಟಿಕರ್ತರು. “ಜಗತ್ತಿನ ಪ್ರಥಮ ಮತ್ತು ದ್ವಿತೀಯ ಮಹಾಯುದ್ಧಗಳ ನಡುವಿನ ಅವಧಿಯ ಯುರೋಪಿನ ರಾಜಕೀಯ ಶಕ್ತಿ ಸಮತೋಲನವನ್ನು ಚರ್ಚಿಸಿರಿ” ಎಂಬ ಪ್ರಶ್ನೆ ಇದ್ದರೆ ಅವರು. “ಮಹಾಯುದ್ಧದಲ್ಲಿ ಯುರೋಪ ಶಕ್ತಿ ಸಮತೋಲನ ಎಂದು ಹೇಳಬಹುದು. ಏಕೆಂದರೆ ಅವಧಿಯು ಪ್ರಥಮ ಜಗತ್ತಿನ ಯುದ್ಧ ಎಂದು ಹೇಳಿದರೆ ಮತ್ತು ಯುರೋಪಿನಲ್ಲಿ ಪ್ರಥಮವೆಂದು ಹೇಳಬಹುದು. ಆದ್ದರಿಂದ ಶಕ್ತಿ ಸಮತೋಲನವು ಪ್ರಥಮ ಎಂದು ಹೇಳಬಹುದು ಮತ್ತು ಈ ಒಂದು ಶಕ್ತಿ ಸಮತೋಲನವೆಂದು ಹೇಳಬಹುದು. ಏಕೆಂದರೆ ಯುರೋಪಿನಲ್ಲಿ ಯುದ್ಧಗಳು ಪ್ರಥಮ ಯುದ್ಧವೆಂದು ಹೇಳಬಹುದು ಆದ್ದರಿಂದ ಈ ಒಂದು ಎರಡನೆಯ ದ್ವಿತೀಯ ಯುದ್ಧ ಎಂದು ಹೇಳಿದರೆ ಮಹಾಯುದ್ಧಗಳ ನಡುವಿನ ಅವಧಿಯ ಯುರೋಪ್ ಎಂದು ಹೇಳಬಹುದು” ಇತ್ಯಾದಿ ನಾಲ್ಕರಿಂದ ಐದು ಪುಟಗಳಲ್ಲಿ ಹಾವೂ ಸಾಯದಂತೆ ಕೋಲೂ ಮುರಿಯದಂತೆ ಸಾಗಿ ಹೋಗಿರುತ್ತಾರೆ.
ಇಮ್ಮಡಿ ಪುಲಿಕೇಶಿಯದೋ ಕೃಷ್ಣದೇವರಾಯನದೋ ಸೈನ್ಯ ಸಾಧನೆಯ ಕುರಿತು ವಿವರವಾಗಿ ಬರೆಯಿರಿ ಎಂಬಂಥ ಪ್ರಶ್ನೆ ಏನಾದರೂ ಸಿಕ್ಕಿತೋ ಪರೀಕ್ಷಾರ್ಥಿಗಳಿಗೆ ಹಬ್ಬ. ಉತ್ತರ ಪತ್ರಿಕೆಯ ಪುಟಪುಟದಲ್ಲೂ ರಣಕಹಳೆಗಳು ಮೊಳಗುತ್ತವೆ. ನಗಾರಿಗಳು ಸದ್ದು ಹೊರಡಿಸುತ್ತವೆ. ಆನೆಗಳು, ಒಂಟೆಗಳು,ಕತ್ತಿ ಗುರಾಣಿ ಹಿಡಿದು ಕಲಿತನದಿಂದ ಕಾದಿದ ವೀರರ ಸೆಣಸಾಟ, ಕೊನೆಕೊನೆಗೆ ಕುದುರೆಗಳ ಖುರಪುಟದಿಂದ ಮೇಲೆದ್ದ ಧೂಳು ಉತ್ತರಪತ್ರಿಕೆಯ ಹಾಳೆಗಳ ಅಕ್ಷರಗಳನ್ನೇ ಮಂಕಾಗಿಸಿ ನಿಮ್ಮ ಕಣ್ಣು ಮೂಗನ್ನೇ ತುಂಬಿಕೊಳ್ಳುತ್ತದೆಯೇನೋ ಎನ್ನಿಸತೊಡಗಿ ತುಸು ಅಂಕಗಳನ್ನು ಬಿಸಾಕಿ ಮುನ್ನಡೆಯುತ್ತೀರಿ, ಅಷ್ಟೇ.
ವೇದ ಕಾಲದ ಆರ್ಯರು ಇಂದ್ರ, ವರುಣ, ಅಗ್ನಿ,ಉಷಸ್, ಎಚ್ ಟೂ ಓ ಮೊದಲಾದವುಗಳನ್ನು ಪೂಜಿಸುತ್ತಿದ್ದರು ಎಂದು ಬರೆದಿದ್ದಳೊಬ್ಬ ಪಿ ಯು ಸಿ ಕನ್ಯೆ .ಏನೇ ಹಾಗೆಂದರೆ? ಎಂದು ಕೇಳಿದರೆ “ಎಚ್ ಟೂ ಓ ಅಂದ್ರೆ ವಾಟರ್ ಸರ್” ಎಂದಿದ್ದಳು. ನಮ್ಮ ಎಲ್ಲ ಎಂ.ಎ.ವಿದ್ಯಾರ್ಥಿಗಳಿಗೂ ಕೃಷ್ಣದೇವರಾಯ ಕೇ.ಡಿ. ರಾಯ. ಅವನ ಹೆಸರನ್ನು ಅವರು ಸಂಕ್ಷಿಪ್ತಗೊಳಿಸುವದೇ ಹಾಗೆ. ದೇವಾಲಯವನ್ನು ದೇವಲಾಯವೆಂದು ಬರೆಯುವವರು ಒಂದು ಬ್ಯಾಚ್ ನಲ್ಲಿ ಇಬ್ಬರಾದರೂ ಇರುತ್ತಾರೆ.
ಇನ್ನು ಬಾಹ್ಯ ಪರೀಕ್ಷೆಗಳ ಉತ್ತರಪತ್ರಿಕೆಗಳಲ್ಲಿ ಬರೆಯಬಹುದಾದ್ದನ್ನು ಕಷ್ಟ ಪಟ್ಟು ಬರೆದು ಕೊನೆಯಲ್ಲಿ “ನಾನು ಬಡವ. ಕರುಣಾಳುಗಳಾದ ತಾವು ನನಗೆ ಮಾರ್ಕ್ಸ್ ನೀಡಿ ಪಾಸ್ ಮಾಡಬೇಕು” ಎಂದೋ, “ಸರ್, ನನಗೆ ಪರೀಕ್ಷೆಯ ಸಮಯದಲ್ಲಿ ಮೈ ಹುಷಾರಿಲ್ಲದೇ ಹೋಗಿದೆ. ಆದ್ದರಿಂದ ದಯವಿಟ್ಟು ಕರುಣೆ ತೋರಿ ಪಾಸ್ ಮಾಡಬೇಕು” ಎಂದೋ ಬರೆದುಕೊಂಡ ಅಹವಾಲುಗಳಿಗೆ ಕೊರತೆ ಇಲ್ಲ. ಒಮ್ಮೆ ನಾನು ಮತ್ತು ನನ್ನ ಸಹೋದ್ಯೋಗಿಗಳಿಬ್ಬರು ಬಾಹ್ಯ ಎಂ.ಎ. ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತ ಕುಳಿತಿದ್ದವು. ನಮಗ್ಯಾರಿಗೂ ಆಗ ಇನ್ನೂ ಮದುವೆ ಆಗಿರಲಿಲ್ಲ. ಒಬ್ಬ ಹುಡುಗಿಯ ವಿವಿಧ ವಿಷಯದ ಪೇಪರಗಳು ನಮ್ಮ ಮಧ್ಯೆ ಹಂಚಿ ಹೋಗಿದ್ದವು. ಎಲ್ಲ ನಾಲ್ಕೂ ಪೇಪರ್ ಗಳ ಕೊನೆಯಲ್ಲೂ ಆಕೆ ಬರೆದಿದ್ದಳು. “ಸರ್, ನಮ್ಮ ಮನೆಯಲ್ಲಿ ನನ್ನನ್ನು ನಮ್ಮ ಸೋದರಮಾವನಿಗೆ ಕೊಟ್ಟು ಮದುವೆಮಾಡಬೇಕೆಂದು ನಿರ್ಧಾರ ಮಾಡಿದ್ದಾರೆ. ಆದರೆ ನನ್ನ ಸೋದರಮಾವನು ಡಬ್ಬಲ್ ಗ್ರ್ಯಾಜುಯೇಟ್ ಇದ್ದಾನೆ. ತಾನು ಮದುವೆಯಾಗುವ ಹುಡುಗಿಯೂ ಡಬ್ಬಲ್ ಗ್ರ್ಯಾಜುಯೇಟ್ ಇರಬೇಕು ಎನ್ನುತ್ತಿದ್ದಾನೆ. ಉಳಿದ ಎಲ್ಲವೂ ಏನೂ ತೊಂದರೆ ಇಲ್ಲ ಸರ್. ಅವನ ಜೊತೆ ಮದುವೆ ಆಗುವದು ನನಗೂ ಇಷ್ಟ. ಆದ್ದರಿಂದ ತಾವು ದಯವಿಟ್ಟು ನನ್ನನ್ನು ಪಾಸ್ ಮಾಡಿ ನಾನು ಡಬ್ಬಲ್ ಗ್ರ್ಯಾಜುಯೇಟ್ ಆಗುವಂತೆ ಮಾಡಿದರೆ ತಮ್ಮ ಉಪಕಾರವನ್ನು”….ಹೀಗೆಲ್ಲ ಬರೆದಿದ್ದಳು.
ನನ್ನ ಸಹೋದ್ಯೋಗಿ ನನ್ನತ್ತ ನೋಡಿ ನಗುತ್ತ “ಸರ್. ನಾವು ಇಲ್ಲಿ ಮೂವರು ಇದ್ದೀವಿ, ನಮಗೂ ಹೆಂಗೂ ಇನ್ನೂ ಮದುವೆ ಆಗಿಲ್ಲ. ನಮಗೆ ನಮ್ಮನ್ನು ಮದುವೆಯಾಗುವವಳು ಡಬ್ಬಲ್ ಗ್ರ್ಯಾಜುಯೇಟ್ ಆಗಿರಬೇಕು ಎಂಬ ಹಟ ಏನೂ ಇಲ್ಲ, ಆದ್ದರಿಂದ ನೀನು ನಿನ್ನ ಸೋದರಮಾವನನ್ನು ಬಿಟ್ಟು ನಾವು ಮೂವರಲ್ಲಿ ಯಾರನ್ನಾದರೂ ಮದುವೆಯಾಗುತ್ತೀಯೋ ಹೇಗೆ ವಿಚಾರ ಮಾಡಿ ನೋಡು, ಪಾಸ್ ಮಾಡುತ್ತೇವೆ” ಎಂದು ಹೇಳಿ ಕಳಿಸೋಣವೇ?” ಎಂದರು. ಮನಸಾರೆ ನಕ್ಕು ಮತ್ತೆ ಉತ್ತರಪತ್ರಿಕೆಗಳ ಮೌಲ್ಯಮಾಪನವೆಂಬ ಯಜ್ಞವನ್ನು ಮುಂದುವರಿಸಿದೆವು.
ಅಶೋಕ್ ಶೆಟ್ಟರ್ ಕಾಲಂ : ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!
ನಿಮಗೆ ಇವೂ ಇಷ್ಟವಾಗಬಹುದು…




ಅಂಕಲ್ ಎಂತೆಂತಾ creative students ಇರ್ತಾರೆ ಇವ್ರು ವರ್ಷದಲ್ಲಿ ನಾಲಕ್ಕೆ ನಾಲಕ್ಕ ತಿಂಗಳು ಓದಿದ್ರೂ guarantee 85% ತೆಗೀತಾರೆ ಆದ್ರೂ ಓದಲ್ಲಾ ಒಟ್ನಲ್ಲಿ ನಿಮಗೆ free entertainment ಕೊಡ್ತಾರೆ.ಎಲ್ಲಿಯ ಬುಧ್ಧ ಎಲ್ಲಿಯ ಚೆನ್ನಯ್ಯ,ಯಾವ ಜನಾಂಗ ಅದಾವ ಜನನಾಂಗ, ಮಹಮದ್ ರಿಗೂ ಅಂಬೇಡ್ಕರಿಗೂ ಅದೆಲ್ಲಿಯ ನಂಟು,ರೂಸೆವೆಲ್ಟ್ ರ ಸ್ಟಿಕ್ ಗೂ ಇವರ ದೊಣ್ಣೆಗೂ ಅದೇನು ಬಂಧವೋ, ಹೊಲದಲ್ಲಿ ಮಂಗನೀಜ಼್ ಬೆಳೆಯುವ ರಾಷ್ಟ್ರಕೂಟರು,ಕೋಲ್ಡ್ ಏರಿಯಾ ಲಿ ನಡೆಯುವ ಕೋಲ್ಡ್ ವಾರ್, ಅಂತೂ ಸೋದರಮಾವನ ಸೊಸೆಗೆ ಆಫರ್ ಕೊಡುವ ಮೌಲ್ಯಮಾಪಕರು,,, ಅಂಕಲ್ ಲೇಖನ ಹೊಟ್ಟೆ ತುಂಬಾ ನಗುವಂತೆ ಮಾಡಿತು ಥ್ಯಾಂಕ್ಸ್..
ತುಂಬಾ ತಮಾಷೆಯಾಗಿದೆ, ರಾಜರುಗಳ ಬಗ್ಗೆ ಬರೆಯುವಾಗ ನಾವೆಲ್ಲ ತಪ್ಪದೆ ಬರೆಯುತ್ತಿದ್ದ ಕೆಲವಾರು ಸಾಲುಗಳಿದ್ದವು. ಅವನು ಸರ್ವಧರ್ಮ ಸಹಿಷ್ಣುವಾಗಿದ್ದನು, ಸಾಲುಮರ ನೆಡಿಸಿದ್ದನು, ದೇವಾಲಯ, ಕೆರೆಕಟ್ಟೆ ಕಟ್ಟಿಸಿದ್ದನು… ಆದರೆ ಕೃಷ್ಣದೇವರಾಯನನ್ನು ನಾವೆಂದೂ ಕೇ.ಡಿ.ರಾಯ ಮಾಡಿರಲಿಲ್ಲ! 🙂
nanu kooda nimma 2012 mattu 2013 ne salina student sir adre naneanu e tarhada answer bardilla sir adre final yearge nima subject ellavalla antha beajaru sir adrunu nivu bareda e ondu blog mujugara annsutea ododikke sir.
ಸರ್, ನಮ್ಮ ನಡುವೆಯು ಇಂಥ ಭೂಪರು ಕುಮಾರಿಯರು ಇದ್ದರು. “ಒಬ್ಬನಂತೂ ಎಸ್..ಎಸ್.ಎಲ್. ಸಿ. ಪರೀಕ್ಷೆಯ ಉತ್ತರ ಪತ್ರಿಕೆಯ ಕೊನೆಯಲ್ಲಿ ನನ್ನೆಲ್ಲ ಶಸ್ತ್ರಾಸ್ತ್ರ ಗಳನ್ನೂ ನಿಮ್ಮ ಪಾದರವಿಂದಗಳಿಗೆ ಅಡವಿಟ್ಟು ಶರಣಾಗಿದ್ದೇನೆ. ಇದು ನನ್ನ ಜನ್ಮದ ಕೊನೆಯ ಯುಧ್ಧ , ಹುಲ್ಲುಕಡ್ಡಿ ಆಸರೆಯಂತೆ ಪಾಸು ಮಾರ್ಕ್ ನೀಡಿ ನನ್ನ ಮೇಲೆತ್ತುವಿರೆಂದು ಭಾವಿಸಿ ಇಲ್ಲಿಂದಲೇ ನಿಮಗೆ ಅಡ್ಡ ಬೀಳುತ್ತೇನೆ.” ಎಂದು ಬರೆದು ಕೊಕ್ಕೊಕ್ಕೋ ಎಂದು ಹಾಲ್ ನಿಂದ ಎದ್ದು ಬಂದಿದ್ದ. ಸರ್, ಲೇಖನ ತುಂಬಾ ಚೆನ್ನಾಗಿದೆ.
ಶೆಟ್ಟರ್ ಸಾರ್,ತುಂಬಾ ತಮಾಷೆಯಾಗಿದೆ.ಬೆಳ್ ಬೆಳಿಗ್ಗೆ ಯಾಕೋ ಮೂಡು ಕೆಟ್ಟು ಹೋಗಿತ್ತು.ಈಗ ಸರಿ ಹೋಯಿತು. 😀
**ನನಗಂತೂ ಯಾವುದೇ ರಾಜನ ಆಡಳಿತದ ಬಗ್ಗೆ ಕೇಳಿದರೆ ಹಾಲು ಕುಡಿದಷ್ಟು ಖುಷಿಯಾಗುತ್ತಿತ್ತು.ಯಾಕೆಂದರೆ ನನ್ನ ಉತ್ತರಗಳಲ್ಲಿ ಬರುವ ಪ್ರತಿಯೊಬ್ಬ ರಾಜನೂ ತನ್ನ ಪ್ರಜೆಗಳನ್ನು ತನ್ನ ಮಕ್ಕಳೆಂದೇ (?) ಭಾವಿಸಿದ್ದ.ರಸ್ತೆಯ ಇಕ್ಕೆಲಗಳಲ್ಲಿ ಮರ ನೆಡಿಸಿದ್ದ.ಊರಿಗೊಂದು ಕೆರೆ ಕಟ್ಟಿಸಿದ್ದ ಮತ್ತು ಅವರವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿಯೇ ಇರ್ತಿತ್ತು..
ಪುಣ್ಯಕ್ಕೆ ಆಯಾ ರಾಜ ಹುಟ್ಟಿದ ಮತ್ತು ಸತ್ತ ಇಸವಿಗಳು ಮಾತ್ರ ಬದಲಾಗುತ್ತಿದ್ದವು. 😉 🙂
-Rj
Ashok shettar sir,
Awesome. I enjoyed it while reading this funniest article.
Could not control laughing 🙂
ನಕ್ಕು ನಕ್ಕು ಸುಸ್ತಾಯಿತು! 🙂
Super aagidey. “Heegu Unte” anisitu…:)
good one. Enjoyed it.
Wav!!! the funniest one. unable to write anything more because i am laughing and writing disturbs that
🙂 ಒಂದು ಪುಟಕ್ಕೆ ಮೀರದಂತೆ ಬರೆಯಿರಿ ಅಂತ ಎರಡೇ ಸಾಲಿನ ಉತ್ತರದ ಪ್ರಶ್ನೆ ಬಂದಾಗ ನಾನೂ ಹೀಗೇ ವಿಚಿತ್ರವಾಗಿ ಬರೆದು ಪುಟ ತುಂಬಿಸಿ ತಿದ್ದುವವರ ಬಯ್ಗುಳಗಳಿಗೆ ಪಾತ್ರಳಾಗುತ್ತಿದ್ದೆ 🙂
ಈ ಲೇಖನ ಅದ್ಬುತವಾಗಿದೆ ಸಾರ್ . ನಾನೂ ಸಹ ಚರಿತ್ರೆ ಮತ್ತು ರಾಜ್ಯಶಾಸ್ತ್ರಗಳನ್ನು ಓದಿದ ವಿದ್ಯಾರ್ಥಿ (PUC -ಆರ್ಟ್ಸ್) ಆದುದರಿಂದ ತುಂಬಾನೇ ಮಜಾ ಬಂತು . ಎಂದೂ ಕಚೇರಿಯಲ್ಲಿ ಜೋರಾಗಿ ನಗದ ನಾನು, ಇಂದು ನಾನೂ ಜೋರಾಗಿ ನಕ್ಕು …..ನನ್ನ( Boss )ಮೇಲಧಿಕಾರಿಯವರಿಗೂ ನಿಮ್ಮ ಲಿಂಕ್ ಕಳುಹಿಸಿ ಸ್ಟ್ರೆಸ್ ದೂರ ಮಾಡಿಕೊಳ್ಳಲು ಸಹಾಯ ಮಾಡಿದ್ದೇನೆ! ;). ಆದ್ರೆ ನಾನಂತೂ ಯಾವತ್ತೂ ಈ ರೀತಿ ಉತ್ತರ ಬರೆಯಬೇಕೆಂದು ಯೋಚನೆಯೂ ಹೊಳೆದಿರಲಿಲ್ಲ! ಮುಂಚೆನೇ ಹೊಳೆದಿದ್ದರೆ ಇನ್ನೂ ಹೆಚ್ಹಿನ ಅಂಕ ಬರುತ್ತಿತ್ತೇನೋ! 😛
“ಹಸು” ಬಗ್ಗೆ ಪ್ರಬಂಧ ಉರುಹೊಡೆದಿದ್ದವಗೆ ಪರೀಕ್ಷೆಯಲ್ಲಿ “ಬೆಟ್ಟದ ಸಾಲು” ಬಗ್ಗೆ ಪ್ರಬಂಧ ಬರೆಯುವ ಪ್ರಶ್ನೆ ಬಂದಾಗ ..ಬೆಟ್ಟದ ಸಾಲು ಎಂದರ ಎತ್ತರ ಪ್ರದೇಶ, ಎತ್ತರ ಪ್ರದೇಶದ ಬೆಟ್ಟದ ಸಾಲು ಬಲು ಎತ್ತರಕ್ಕೆ ಹಬ್ಬಿರುತ್ತದೆ, ಅದು ಮೋಡಗಳನ್ನು ತಡೆದು ಮಳೆ ಸುರಿಸುವ ಸಾಮರ್ಥ್ಯ ಹೊಂದಿರುತ್ತವೆ..ಅಂತಹ ತಪ್ಪಲು ಪ್ರದೇಶದಲ್ಲಿ ಹುಲ್ಲಿ ಹುಲುಸಾಗಿ ಬೆಳೆದು ಹುಲ್ಲುಗಾವಲಾಗಿರುತ್ತದೆ..ಆ ಹುಲ್ಲುಗಾವಲಿಗೆ ಮಂದೆ ಮಂದೆ ಹಸುಗಳು ಮೇಯಲು ಬರುತ್ತವೆ…..ಈ ನಂತರ ಉರು ಹೊಡೆದಿದ್ದ..”ಹಸು” ಪ್ರಬಂಧ ಮುಂದುವರೆಯಿತು….
ಇಂತಹ ಹಲವು ನಮಗೂ ಅನುಭವವಾಗಿವೆ….ಚನ್ನಾಗಿದೆಶೆಟ್ಟರ್ ಸರ್
ha haa
ha…ha…ha…ha..ha..ha..hha..ha…ha..ha…ha..
Hahahahaha .. majavaagide ….nakku nakku sustaaythu ashok …
ಸರ್ಹ್ಹ, ತುಂಬಾ ಚೆನ್ನಾಗಿದೆ. ಹ್ಹ ಹ್ಹ ನಮ್ಮ ಸ್ನೇಹಿತನೊಬ್ಬ ಉತ್ತರ ಪತ್ರಿಕೆಯ ಕೊನೆಗೆ ದೇವರ ಬರೀತಿದ್ದ
ನಾನು ಎಸ್ಸೆಲ್ಸಿ ಆದ್ದರಿಂದ ನಮ್ಮದೇನಿದ್ದರೂ ಕಟಾನುಕಟಿ ಪಾಸು. ಹಿಂಗೆಲ್ಲ ಶಬ್ದಶಃ ಇತಿಹಾಸ ರಚಿಸುವ ತಾಪತ್ರಯ ನನಗ ಬರಲಿಲ್ಲಪ್ಪ. ಆದರೂ ನನಗೆ ಖುಷಿ ಕೊಟ್ಟ ವಿಷಯ ಅಂದ್ರೆ… ಮೊದಲ ಉತ್ತರ. ರಾಮಜನ್ಮಭೂಮಿಯಂಥ ಚರಿತ್ರೆಯೊಂದನ್ನು ಆ ಹುಡುಗಿ ಸೃಷ್ಟಿಸಿಲ್ಲ ನೋಡಿ. ಹಂಗಾಗಿ ಬುದ್ಧ ಯಾವ ಕಾಲದ ಕತೆಯೊಳಗೂ ಸೇರಿಕೊಳ್ಳಬಲ್ಲ ಅನ್ನೋದನ್ನ ಸಾಕ್ಷಾತ್ಕರಿಸಿದ್ದಾಳೆ.. ಅಂಥದ್ದೊಂದು ಘಟನೆ ಬುದ್ಧನ ಜೀವನದಲ್ಲೂ ಬರುತ್ತದೆ. ಅಲ್ಲಿ ಚನ್ನಯ್ಯ ಬರೋದಿಲ್ಲ ಒಬ್ಬ ವೇಶ್ಯೆ ಬರುತ್ತಾಳೆ. ಆಕೆ ಈಗ ಜಾನಪದದಲ್ಲಿ ಪದವಿ ಪಡೆದಿರಬಹುದು.
nakkoo nakkoo saakytu. Travlling nalli oLLe time pass aaytu
ಸರ್ ಲೇಖನ ಬಹಳ ಚೆನ್ನಾಗಿದೆ, ಬಹಳ ನಗು ಬಂತು
ಸರ್, ಮಸ್ತ್. ಬಿ.ಎ ಪೇಪರನ್ಯಾಗೂ ಬಾರಿ ಬಾರಿ ಬಂದಿರತಾವೂ. ಆದರ ನಿಮ್ಮ ಕೆಟ್ಟ ನಸಿಬ ಅಂದ್ರ ನಿಮಗ ಯಾರೂ ಪೇಪರನ್ಯಾಗ ರೊಕ್ಕ ಇಟ್ಟಿರುದಿಲ್ಲಾ ನಮ್ಮ ಪೇಪರನ್ಯಾಗ ಇರತಾವೂ.
I am laughing out so loud, could not hold it. Unfortunately there is no body with me now with whom I can share these and enjoy together! Wonderful! All these examples are so good because they are from your own experiences and not exaggerated. Thank you!
Vidya Gadagkar
ಹೋಓಓಓಓಓ….. ಎಲ್ಲಕ್ಕ್ಕಿಂತ ಉಡುಪಿ ಶೆಟ್ಟರಹುಡುಗೀ ಉತ್ತರ ಅಧ್ಭುತ !!