ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳ ಕಾಲು ಸೋಲದಿರಲಿ..

ಫಾತಿಮಾ ರಲಿಯಾ

**

ಕವಿಯತ್ರಿ ಫಾತಿಮಾ ರಲಿಯಾ ಅವರ ಹೊಸ ಕವನ ಸಂಕಲನ ‘ಅವಳ ಕಾಲು ಸೋಲದಿರಲಿ’ ಬಿಡುಗಡೆಯಾಗಿದೆ.

ಉಡುಗೊರೆ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಗೆ ಕವಯತ್ರಿ ಬರೆದ ಮಾತುಗಳು ಇಲ್ಲಿವೆ.

**

ಹಗೂರಾಗಿಸುವ ಕವಿತೆಗಳು.

**

ಕವಿತೆಗಳನ್ನು ‘ಆತ್ಮದ ತುಣುಕು’ಗಳು ಅನ್ನುತ್ತಾರೆ. ನನಗೆ ಇಂತಹ ದೊಡ್ಡ ದೊಡ್ಡ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ, ಅರಗಿಸಿಕೊಳ್ಳುವುದು ಇನ್ನೂ ಕಷ್ಟ. ಆದರೆ ಪದ್ಯಗಳು ನನ್ನ ನಿತ್ಯ ಸಂಗಾತಿಗಳು ಅಂತ ಮಾತ್ರ ನಿಸ್ಸಂದೇಹದಿಂದ ಹೇಳಬಹುದು. ನಾನು ಕಥೆಗಳನ್ನು, ಲಲಿತ ಪ್ರಬಂಧಗಳನ್ನು ಬರೆದರೂ, ದುಗುಡಗಳನ್ನೆಲ್ಲಾ ಹೊರ ಚೆಲ್ಲಿ ಒಂದು ನಿರಾಳತೆಯನ್ನು ಎದೆಯೊಳಗೆಳದುಕೊಳ್ಳಬೇಕು, ಕಾಡುವ ಬೇಗುದಿಗಳ ಬೇಲಿ ಬಿಚ್ಚಿ ಹಾರಲು ಬಿಡಬೇಕು, ಹತ್ತಿಯಂತೆ ಹಗೂರಾಗಬೇಕು ಅಂತ ಅನ್ನಿಸುವಾಗೆಲ್ಲಾ ನನ್ನ ಕೈ ಹಿಡಿದು ನಡೆಸುವುದು ಕವಿತೆಗಳೇ.

ಹಾಗಾಗಿಯೇ ನನ್ನ ಎಲ್ಲಾ ಹಿತೈಷಿ ಹಿರಿಯರ ಸಲಹೆಗಳನ್ನು ಮೀರಿ ಇದರ ಸ್ವಪಕ್ರಾಶನಕ್ಕೆ ಮುಂದಾಗಿದ್ದು. ಈ ಸಂಕಲನದ ಮೂಲಕ ಮೂರನೇ ತರಗತಿಯಿಂದ ಶುರುವಾದ ನನ್ನ ಕವಿತೆಗಳೊಂದಿಗಿನ ಸಹಪಯಣಕ್ಕೆ ಒಂದು ಮೂರ್ತ ರೂಪ ಸಿಗುತ್ತದೆ ಎಂದು ಭಾವಿಸುತ್ತೇನೆ. ಕವಿತೆಗಳು ನಿಜಕ್ಕೂ ಆತ್ಮದ ತುಣುಕುಗಳೇ ಆಗಿದ್ದರೆ ಈ ಕವನ ಸಂಕಲನ ನನ್ನ ಪಾಲಿಗೆ, ಅಲ್ಲಲ್ಲಿ ಚದುರಿ ಬಿದ್ದಿರುವ, ಎಲ್ಲಿಂದೆಲ್ಲಿಗೋ ಬೆಸೆಯುವ ನಿಸ್ತಂತು ಸಂವಹನದ ತುಣುಕಗಳನ್ನು ಆಯುವ, ಅಪ್ಪಿಕೊಳ್ಳುವ ಒಂದು ಚಂದದ, ಆಪ್ತ ಕನಸು.

ಈ ಸಂಕಲನಕ್ಕೆ ಬೆನ್ನುಡಿ ಬರೆದಿರುವ ಅಕ್ಷತಾ ಹುಂಚದಕಟ್ಟೆ ಅವರಿಗೆ, ನನ್ನ ಹಿಂದಿನ ಎರಡೂ ಪುಸ್ತಕಗಳನ್ನು ಸ್ವೀಕರಿಸಿರುವ ಓದುಗರಿಗೆ, ಸದಾ ನನ್ನ ಬೆನ್ನ ಹಿಂದೆ ನಿಲ್ಲುವ ಹಿರಿ-ಕಿರಿ ಸ್ನೇಹಿತರಿಗೆ, ನನ್ನೆಲ್ಲಾ ಪ್ರಯತ್ನಗಳಿಗೆ ಬೆಂಬಲವಾಗಿ ನಿಂತಿರುವ ಕುಟುಂಬಕ್ಕೆ, ಸ್ವಪ್ರಕಾಶನ ಮಾಡಲು‌ ಧೈರ್ಯ ತುಂಬಿರುವ ಅನಂತ್ ಕುಣಿಗಲ್ ಅವರಿಗೆ, ರಾಜೇಂದ್ರ ಪ್ರಸಾದ್ ಅವರಿಗೆ, ಕುಂಟಾಡಿ ನಿತೇಶ್ ಅವರಿಗೆ, ತಾಂತ್ರಿಕ ವಿಚಾರಗಳನ್ನು ಕಲಿಯಲು ನೆರವಾದ ವಿಜಯ್ ಹನಕೆರೆಯವರಿಗೆ, ಈ ಸಂಕಲನವನ್ನು ಪ್ರಕಟಿಸುವಲ್ಲಿ ಅಗತ್ಯ ಸಲಹೆ ಸೂಚನೆ ನೀಡಿದ ಸಹ ಬರಹಗಾರ ಮಿತ್ರರಿಗೆ ಧನ್ಯವಾದಗಳು. ಹಾಗೆಯೇ ಈ ಪುಸ್ತಕವನ್ನು ಓದಲೆಂದು ಕೈಗೆತ್ತಿಕೊಂಡ ನಿಮಗೆ ರಾಶಿ ಪ್ರೀತಿ.

‍ಲೇಖಕರು Admin MM

29 February, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading