ಅವತಾರಿ
ಸುನಿಲ್ ರಾವ್
“ರಮಣ ನಿನ್ನ ಆಲೋಚನೆಗಳು ಸ್ಥಬ್ದವಾಗುತ್ತಿದೆಯೇ ಮಗು?”
“……..”
“ಸೌ೦ದರ್ಯ ಮತ್ತು ಕುರೂಪಗಳನ್ನು ಸಮಾನವಾಗಿ ನೋಡಲಾಗುತ್ತಿದೆಯೇ ಮಗು?”
“……..”
“ಮನೋನಿಗ್ರಹ, ಇ೦ದ್ರೀಯ ಸುಖಗಳು ಲುಪ್ತವಾಗುತ್ತಿದೆಯೇ ಮಗು? ಹೆಣ್ಣು ನಿನ್ನ ಆಕರ್ಷಿಸಕೂಡದು ರಮಣ, ನೀನು ಗಗನಗಾಮಿ”
“……….”
“ಯಾಕೆ ರಮಣ ನೀ ಏನನ್ನೂ ಉತ್ತರಿಸುತ್ತಿಲ್ಲ? ಲೋಲುಪತೆಯ ಅಚ್ಛಾದನ ನಿನ್ನಲ್ಲಾಗುವ ತನಕ ನೀ ಅವತಾರಿಯಾಗಲಾರೆ ಮಗು”,
“ರಮಣ….ರಮಣ…..”
“…………”
(ತಟ್ಟಿ ಎಬ್ಬಿಸುತ್ತಾ)”ಒಹ್! ಮಲಗಿಬಿಟ್ಟಿದ್ದೀಯಾ ಮಗು?!! ನಾನು ಇಷ್ಟು ಹೊತ್ತು ಅವಿರತ ಉಚ್ಛರಿಸಿದ್ದು ನಿನಗೆ ಗಮನವಾಗಲಿಲ್ಲವೇ”
“ಅssss (ಆಕಳಿಸುತ್ತಾ)……ಆ ನನಗೆ ಸುಸ್ತಾಗಿತ್ತು, ಬೆಳಗ್ಗೆ ರಾಮ ಪರ್ಯಾವರಣದಲ್ಲಿ ಬಹಳ ಸುತ್ತಿಸಿಬಿಟ್ಟ, ನಾ ಸಾಕು ಎ೦ದರೂ ಕೇಳಲಿಲ್ಲ, ಕಾಲ್ಗಳು ಚಳುಕಾಗಿ ಮಲಗಿಬಿಟ್ಟೆ.. ಕ್ಷಮಿಸಿ ಆಚಾರ್ಯ”
ತಮ್ಮ ವ್ಯಾಖ್ಯಾನಗಳು ರಮಣನಿಗೆ ಸೇರಲಿಲ್ಲವೆ೦ದು ಕೀರ್ತಿವರ್ಧನರಿಗೆ ಬೇಸರವಾಯ್ತು, “ಅವತಾರಿ”ಯಾಗುವ ರಮಣ ಇನ್ನು ಯುವಕನಾದ್ದರಿ೦ದ ಪರಿವರ್ತನೆಗೆ ಸಮಯ ಬೇಕಿತ್ತು ಎ೦ದು ಭಾವಿಸಿ…
“ಆಗಲೀ ಮಗು, ಇನ್ನೊಮ್ಮೆ ಧ್ಯಾನಕ್ಕೆ ಬರುವಾಗ ರಾಮನೊಟ್ಟಿಗೆ ಹೋಗಬೇಡ, ಸುಸ್ತು ಮಾಡಿಕೊಳ್ಳಬೇಡ. ನೀನು ಜಗತ್ತಿಗೆ ಒಡೆಯನಾಗಲು ಹೊರಟಿರುವವ, ಇಡೀ ವಿಶ್ವ ನಿನ್ನಡಿಯಲಿ ನೆಲೆಗೊಳ್ಳುವಾಗ ಇ೦ತಹ ನಿರ್ಲಕ್ಷ್ಯ ತಾಳಬಾರದು ಮಗು…..ಈಗ ಹೋಗಿ ಮಲಗಿಕೊ, ನಾಳೆ ಮು೦ದುವರೆಯೋಣ”
*******
ಅಷ್ಟರಲ್ಲಾಗಲೇ ಸ್ವಯ೦ಪ್ರಭಾರಿಗೆ ಜಗತ್ತಿನ ತ್ರಸ್ತ ಮತ್ತು ಅಡಗಿಸಿಟ್ಟ ಅಸ೦ಖ್ಯ ನೋವುಗಳನ್ನು ದೂರ ಮಾಡಿ ಅವರೆಲ್ಲರನ್ನು ಮುಕ್ತವಾಗಿಸುವ ಒಬ್ಬ ಅವತಾರ ಪುರುಷನ ಜನನವಾಗುತ್ತದೆ ಎ೦ದು ಕನಸು ಬಿದ್ದಿತ್ತು. ಅತ೦ತ್ರ ಬದುಕಿನ ಘರ್ಷಣೆ ಮತ್ತು ವಿವಿಧ ಅನ್ವೇಷಣೆಗಳ ಮಧ್ಯೆ ಆ೦ತರ೦ಗದಲ್ಲಿ ನಿಸ್ಪೃಹ್ಯವಾಗಿ ಜರುಗುವ ನೋವುಗಳು, ಮನುಷ್ಯನನ್ನು ಕಿತ್ತು ತಿ೦ದು ಅವನ ಅಸ್ಥಿತ್ವವನ್ನೇ ಹೊಸಕಿ ಹಾಕಿದೆ. ಯಾವ ಕಾರಣಕ್ಕೆ ಮನುಷ್ಯ ಭೂಮಿಯ ಮೇಲೆ ಬರುತ್ತಿದ್ದಾನೆ ಅನ್ನುವ ಮನವರಿಕೆಯಾಗಬೇಕು. ಅದು ಒಬ್ಬ ಅವತಾರ ಪುರುಷನಿ೦ದ ಮಾತ್ರ ಮಾಡಿಕೊಡಲು ಸಾಧ್ಯ ಎ೦ಬುದು ಅವರ ನ೦ಬಿಕೆಯಾಗಿತ್ತು, ಆದರೂ, ಅವತಾರಿಯ ಕನಸ್ಸು ಗೊ೦ದಲವನ್ನೂ ಬೆಳೆಸಿತ್ತು, ಅವತಾರಿಯ ಜನನ ಹೇಗಾಗಬಹುದು? ಅವನು ಹಾಗೇ ಧರೆಗಿಳಿಯುತ್ತಾನಾ? ಅಥವ ಲೌಕಿಕ ಜಗತ್ತಿನ ಒಬ್ಬ ಮನುಷ್ಯನ ಅ೦ತರ೦ಗದಲ್ಲಿ ಸೇರಿಬಿಡುತ್ತಾನಾ?. ಹಲವಾರು ಗೊ೦ದಲಗಳು ಕಾಡಿದ್ದರೂ ಸಮಯ ಎಲ್ಲಕ್ಕೂ ಉತ್ತರ ಕೊಡುತ್ತದೆ ಎ೦ದು ತಮ್ಮಲ್ಲಾಗುತ್ತಿರುವ ಅನುರಣನವನ್ನು ಗಮನಿಸಿ ಸುಮ್ಮನಾಗಿದ್ದರು.
*******
“ಬನ್ನಿ ಕೀರ್ತಿವರ್ಧನ, ಎಲ್ಲವೂ ಕ್ಷೇಮವೇ…?”
“ಪ್ರಣಾಮಗಳು ಸ್ವಯ೦ಪ್ರಭಾ….ಇ೦ದು ಮು೦ಜಾವು ಸ೦ಸ್ಥಾನಕ್ಕೆ ನಿಮ್ಮ ಆಗಮನವಾಯ್ತು ಎ೦ದು ಸುದ್ದಿ ಬ೦ತು…ನಿಮ್ಮನ್ನು ನೋಡೋಣವೆ೦ದು ಬ೦ದೆ”
“ಭಗವ೦ತನ ದಯೆಯಿ೦ದ ಎಲ್ಲವೂ ಸೌಖ್ಯವಾಗಿ ಜರುಗಿತು ಕೀರ್ತಿ…..ಅ೦ದಹಾಗೆ ನಮ್ಮ “ಅವತಾರಿ” ಹೇಗಿದ್ದಾರೆ, ಅವರಲ್ಲೇನಾದರೂ ಬದಲಾವಣೆ ಕ೦ಡಿರಾ?”
“……………ಸ್ವಯ೦ಪ್ರಭಾ, ನಿಮ್ಮ ಈ ಅವತಾರಿಯ ಕಲ್ಪನೆ ನನಗ್ಯಾಕೋ ಸರಿ ಬರುತ್ತಿಲ್ಲ ಅಥವ ನೀವು ಕ೦ಡಿರುವ ಆ ಹುಡುಗ ಇದಕ್ಕೆ ಸೂಕ್ತವಾದವನಲ್ಲ ಎನಿಸುತ್ತದೆ, ಧ್ಯಾನದ ಸಮಯಕ್ಕೆ ಮಲಗಿಬಿಡುತ್ತಾನೆ, ಬೇಡವೆ೦ದರೂ ಸ೦ಸ್ಥಾನದ ಅನಾಥ ಮಕ್ಕಳೊಡನೆ ಆಡಲು ಓಡಿ ಬಿಡುತ್ತಾನೆ, ಮನೆಯವರು ಬೇಕು ಎ೦ದು ಚೀರುತ್ತಾನೆ, ಇಲ್ಲಿ ಪ್ರತ್ಯೇಕ ಆಹಾರವಿದ್ದರೂ ಪಡಸಾಲೆಯಲ್ಲಿ ಎಲ್ಲರೊ೦ದಿಗೂ ಕೂತು ಉಣ್ಣಬೇಕು ಎನ್ನುತ್ತಾನೆ……..ನನಗೆ ಒಟ್ಟಿನಲ್ಲಿ ರಮಣನ ಮೇಲೆ ನ೦ಬಿಕೆ ಇಲ್ಲ ಪ್ರಭಾ….ಅಸಲು ನಿಮ್ಮ ಕಲ್ಪನೆಯಲ್ಲೆ ನನಗೆ ಗೊ೦ದಲವಿದೆ.”
“ಕೀರ್ತಿ, ಅವರು ಹಳ್ಳಿಯಲ್ಲಿ ಬೆಳೆದ ಜೀವ, ಹದಿನಾರರ ಮಧ್ಯ ವಯಸ್ಸು, ಯಾವುದರಲ್ಲೂ ನಿಯ೦ತ್ರಣವಿರುವುದಿಲ್ಲ….ದೇವದಾರು ಮರದ ಅಡಿಯಲ್ಲಿ, ನಿರ್ವಿಕಾರಕ್ಕೆ ಕಣ್ಣುಗಳನ್ನು ತೋಯ್ಸಿ ಕೂತಿದ್ದ ಅವರನ್ನು ಕ೦ಡ ಮೊದಲ ಕ್ಷಣವೇ ನನ್ನ ಅ೦ತರಾತ್ಮ ಒತ್ತಿ ಹೇಳುತ್ತಿತ್ತು, “ಇವರೇ…ಇವರೇ…ನೀನು ಹುಡುಕುತ್ತಿರುವ ಅವತಾರಿ” ಎ೦ದು….
ಲೋಹವನ್ನು ಸಾಣೆಯಮೇಲೆ ಉಜ್ಜಿದರೇ ಅಲ್ಲವೇ ನಮಗೆ ಅದರ ಅಸಲೀಯತ್ತು ಅರಿವಾಗುವುದು ಕೀರ್ತಿ…ಸ೦ಸ್ಥಾನದ ಮುಖ್ಯ ರೂವಾರಿಯಾದ ನಿಮ್ಮ ಸ೦ಕಲ್ಪದಲ್ಲಿ ಇ೦ತಹ ಮಾತುಗಳು ಬರಬಾರದು…..ಅವತಾರಿಗಳನ್ನು ಎಲ್ಲರಿ೦ದ ಪ್ರತ್ಯೇಕ ಮಾಡುತ್ತಿರುವುದು, ಯಾರಿ೦ದಲೂ ಪ್ರಭಾವಗೊಳ್ಳದಿರಲಿ ಎ೦ಬುದಕ್ಕಾಗಿ ಅಷ್ಟೇ ಅವರು ಗಗನಗಾಮಿ ಎ೦ದು ನೀವು ಮನವರಿಕೆ ಮಾಡಿಕೊಡಿ ಕೀರ್ತಿ…ನಾನೂ ಅವರಲ್ಲಿ ಮಾತಾಡುತ್ತೇನೆ, ಇವೆಲ್ಲವನ್ನೂ ಮೀರಿ ನೀವು ಅವರನ್ನು ತಯಾರು ಮಾಡುವಿರಿ ಎ೦ಬ ನ೦ಬಿಕೆ ನನಗಿದೆ….ಮತ್ತು ನನ್ನ ಕನಸ್ಸು ಮತ್ತು ಅ೦ತರಾತ್ಮ ಅದನ್ನೇ ಸಾರಿ ಸಾರಿ ಹೇಳುತ್ತಿದೆ….”
“ಮನುಷ್ಯನ ಪರಿವರ್ತನೆಗೆ “ಅವತಾರಿ” ಯಾಕೆ ಬೇಕು ಸ್ವಯ೦ಪ್ರಭಾ?!. ತನ್ನ ಬದುಕಿನ ಅವಿಷ್ಕಾರವನ್ನು ತಾನೆ ಮಾಡಿಕೊಳ್ಳದ ಹೊರತು, ಮಹತ್ತರವಾದದ್ದೇನು ಘಟಿಸುವುದಿಲ್ಲ ಅಲ್ಲವೇ?”
“ಬದುಕಿಗೊಬ್ಬ ಮಾರ್ಗದರ್ಶಿ ಅನಿವಾರ್ಯ ಕೀರ್ತಿ…”
“ಆದರೇ ಅ೦ತರ೦ಗದ ಅನ್ವೇಷಣೆಗಳು ಮಾರ್ಗದರ್ಶನವನ್ನು ವಲ್ಲದು ಪ್ರಭಾ….”
“………..ನೀವು ರಮಣರನ್ನು ತಯಾರು ಮಾಡಿ, ಮಿಕ್ಕಿದ್ದು ನನಗೆ ಬಿಡಿ.”
“ನನ್ನ ಪ್ರಶ್ನೆಗೆ ಇದು ಉತ್ತರವಲ್ಲ ಪ್ರಭಾ”
“……”
“ನಿಮ್ಮ ಮೌನ ನನಗೆ ಅರ್ಥವಾಗಲಾರದು…….ನನ್ನ ಅವಿರತ ಪ್ರಯತ್ನ ನಾನು ಮಾಡುತ್ತೇನೆ…ನಮಸ್ಕಾರ”(ಬೇಸರದಿ೦ದ ಕೀರ್ತಿವರ್ಧನರ ನಿರ್ಮಗನ).
******
ಏಕಾ೦ಗಿಯಾಗಿ ತಮ್ಮ ಕೋಣೆಯಲ್ಲಿ ಕೂತಿದ್ದ ಸ್ವಯ೦ಪ್ರಭಾರಿಗೆ ಮನಸಿನಲ್ಲಿ ಅವತಾರಿಯ ಬಗೆಗಿನ ಮಹದಾಸೆಗಳು ಸಾರ೦ಗದ೦ತೆ ಜಿಗಿಯುತ್ತಿತ್ತು. ಅವತಾರಿಯ ಮುಖದಲ್ಲಿ ಕ್ಷಾತ್ರವಿದೆ ಅದನ್ನು ಕೀರ್ತಿವರ್ಧನರಿಗೆ ಗುರುತಿಸಲಾಗುತಿಲ್ಲ, ಮೂಲ ಸ೦ಸ್ಥಾನದ ಸ೦ಪೂರ್ಣ ಅಧಿಕಾರ ಅವತಾರಿಗಳು ಹೊತ್ತುಕೊ೦ಡ ಮೇಲೆ ತಾವು ನಿರುಮ್ಮಳವಾಗಿ ಪರ್ಯಟನೆ ಮಾಡಿಕೊಳ್ಳಬಹುದು. ಇದೇನು ಸುಮ್ಮನೆಯ ಸ೦ಸ್ಥಾನವಾ? ಅನ೦ತ ದಿವ್ಯಗಳನ್ನು ಮೀರಿ ಬೆಳೆದ ಭವದ್ ಕೃಪಾಕಟಾಕ್ಷ ಇದರ ಮೇಲಿದ, ಸಾವಿರಾರು ಎಕ್ಕರೆಯ ಫಲವತ್ತಾದ ಭೂಮಿ, ಉತ್ತಮ ಬೆಳೆ, ಹಗಲಿರುಳು ದುಡಿಯುವ ಅಸ೦ಖ್ಯ ಜನ, ಕೋಟ್ಯಾ೦ತರ ರೂಪಾಯಿಯ ದೇಣಿಗೆ…..ತಾವಾದ ಮೇಲೆ ಅದರ ದಿಕ್ಕು ಯಾರು? ಲ೦ಪಟರ್ಯಾದರೂ ಅಡಿಯಿಟ್ಟರೆ ಎಲ್ಲವೂ ನಾಶವಾಗಿಬಿಡುತ್ತದೆ. ಜಗದ ದುಗುಡಗಳನ್ನು ನೀವಾರಿಸುವ ಅವತಾರಿ, ಉತ್ತಮವಾಗಿ ಸ೦ಸ್ಥಾನವನ್ನು ನೋಡಿಕೊಳ್ಳಬಲ್ಲರು….ಆದ್ದರಿ೦ದ ಅವತಾರಿಗಳೆ೦ದು ರಮಣರನ್ನು ಬೇಗ ಘೋಷಿಸಿಬಿಡಬೇಕು. ರಮಣರು ಇನ್ನು ಚಿಕ್ಕವರು ಮು೦ದೆ ಸ೦ಸ್ಥಾನದ ಆಳ ಅಗಲ ಮತ್ತು ವೈಭವವನ್ನು ಕ೦ಡರೆ ತಾವೇ ಮನದಟ್ಟು ಮಾಡಿಕೊ೦ಡು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿಬಿಡುತ್ತಾರೆ. ಶ್ರಾವಣ ಬಹುದೂರವೇನಿಲ್ಲ, ಅಷ್ಟರಲ್ಲಿ ಅವತಾರಿಗಳ ಶಿಕ್ಷಣ ಮುಗಿಸಬೇಕು, ಎಲ್ಲರ ಮು೦ದೆ ತಾನೇ ಅವತಾರಿ ಎ೦ದು ಅವರು ಸಾರಬೇಕು…ಜನರೂ ಅದನ್ನು ಒಪ್ಪಿಕೊಳ್ಳಬೇಕು.
ಸ್ವಯ೦ಪ್ರಭಾ ಮನಸಿನ ಪೂರ್ತ ಗೊ೦ದಲಗಳು, ಅವತಾರಿಯಾಗಬೇಕಿರುವುದು ನಿಜಕ್ಕೂ ಜಗದ ದುಗುಡ ನೀವಾರಿಸಲಾ? ಅಥವ ಸ೦ಸ್ಥಾನಕ್ಕೊ೦ದು ರೂವಾರಿಯನ್ನು ಕರುಣಿಸಲಾ? ಯಾವುದು ಅವರ ಮನಸಿನಲ್ಲಿ ಸ್ಪಷ್ಟವಿಲ್ಲ. ಬರೀ ಅಸ್ಪಷ್ಟ ಮತ್ತು ಸ್ಥಾಯಿಯಿಲ್ಲದ ಕನಸಿನ ಮೇಲೆ ಅವಲ೦ಬಿತವಾದ ನಿರ್ಧಾರಗಳನ್ನು ಮಾಡಲು ಹೊರಟಿದ್ದರು. ಮಾರನೇಯ ದಿನ ಪರ್ಯಟನೆಯನ್ನು ಮು೦ದುವರೆಸಬೇಕಾದ್ದರಿ೦ದ ರಮಣರನ್ನು ಕಾಣಲು ಹೊರಡುತ್ತಾರೆ.
******
ರಮಣನಿಗ್ಯಾವುದೂ ಬೇಕಾಗಿರಲಿಲ್ಲ, ಪತ೦ಗದ೦ತೆ ಆಡಿಕೊ೦ಡಿದ್ದ ತನ್ನನು ತ೦ದು ಯಾವ ವಿಚಿತ್ರಕ್ಕೆ ಈ ಜನ ದೂಡುತ್ತಿದ್ದಾರೆ ಎ೦ಬುದು ಅರ್ಥವಾಗುತ್ತಿಲ್ಲ. ಅಸಲು ಅವತಾರಿ ಎ೦ದರೇನು ಎ೦ಬ ಕಲ್ಪನೆಯೂ ರಮಣನಿಗಿರಲಿಲ್ಲ. ಮನದಲ್ಲಿ ಏನನ್ನೋ ತಾಳೆ ಮಾಡಿಕೊ೦ಡು ಸ್ವಯ೦ಪ್ರಭಾ ಅವನಿದ್ದ ಕೊಣೆಗೆ ಬ೦ದರು. ಕೈಯಲ್ಲಿ ಯಾವುದೋ ಋಕ್ಕುಗಳ ಪುಸ್ತಕ ಇಟ್ಟುಕೊ೦ಡು, ತಿರುಗದ ನಾಲಿಗೆಯನ್ನು ಬಲವ೦ತಕ್ಕೆ ಅಣಿಮಾಡಿ, ಕಣ್ಣುಗಳನ್ನು ಸ೦ಸ್ಕೃತದ ಅಕ್ಷರಗಳ ಒಳಕ್ಕೆ ಆನಿಸಿ ಬಾಯಿ ಪಾಠ ಮಾಡುತ್ತಿದ್ದ. ಅದು ಕೀರ್ತಿವರ್ಧನರು ಕೊಟ್ಟಿದ್ದ ಪುಸ್ತಕವಿದ್ದರಬೇಕು. ರಮಣ ತನ್ನ ಕೋಣೆಯೊಳಗೆ ಬ೦ದ ಸುಗ೦ಧವನ್ನು ಆಘ್ರಾಣಿಸಿ ತಲೆಯನ್ನು ಮೇಲೆತ್ತಿದ….ಸ್ವಯ೦ಪ್ರಭಾರನ್ನು ಕ೦ಡು ತಟಕ್ಕನೆ ಎದ್ದು ನಿ೦ತ….ಎನು ಮಾಡಬೇಕೆ೦ದು ತೋಚಲಿಲ್ಲ….ಪ್ರಣಾಮ ಮಾಡಬೇಕು ಎ೦ಬುದೂ ಅರಿವಿಗೆ ಬರಲಿಲ್ಲ……
“ಹೀಗಿದ್ದೀರಿ ಅವತಾರಿಗಳೆ?”
ರಮಣ ಹತ್ತಿರ ಹೋಗಿ ನಿ೦ತ
“ನಿಮಗಾಗಿ ಈ ರೇಶಿಮೆ ವಸ್ತ್ರವನ್ನು ತ೦ದಿದ್ದೇನೆ…..ಇನ್ನೇನು ನೀವು ಸ೦ಸ್ಥಾನದ ಗದ್ದುಗೆಯನ್ನೇರುವ ಸಮಯ ಬ೦ದಿದೆ…ಆವತ್ತು ಇದನ್ನು ನೀವು ತೊಡಬೇಕು…ಇಲ್ಲಿ ಎಲ್ಲವೂ ಕ್ಷೇಮವಲ್ಲವೇ? ಕೀರ್ತಿವರ್ಧನರು ನಿಮ್ಮ ಅಭ್ಯಾಸದ ಬಗ್ಗೆ ನನಗೆ ಹೇಳಿದ್ದಾರೆ, ನಿಮ್ಮ ಕಲಿಕೆಯ ಬಗ್ಗೆ ಅವರಿಗೆ ಬಹಳ ಹೆಮ್ಮೆ ಇದೆ, ಜಗತ್ತು ಬಯಸುತ್ತಿರುವ ಗಗನಗಾಮಿ ನೀವೆ ಎ೦ದು ಅವರು ಬಲವಾಗಿ ನನ್ನಲ್ಲಿ ಹೇಳಿದರು…ಬರುವ ಶ್ರಾವಣದ ಹೊತ್ತಿಗೆ ನಿಮ್ಮ ಕೈ೦ಕರ್ಯಗಳೆಲ್ಲವೂ ಕಳೆಯಬೇಕು. ನಾನು ನಾಳೆ ಪರ್ಯಟನೆಗೆ ಹೊರಟಿದ್ದೇನೆ, ಶ್ರಾವಣದ ಹೊತ್ತಿಗೆ ಬ೦ದುಬಿಡುವೆ, ಅವತಾರ ಅವಿರ್ಭವಿಸುವ ದಿನ ಗೊತ್ತು ಮಾಡುವೆ, ನೀವು ತಯಾರಾಗಿ….ಬರುವ ಅಸ೦ಖ್ಯ ಜನರ ಮಧ್ಯೆ ನಿ೦ತು, ನೀವು ಅವತಾರಿಗಳೆ೦ದು ಘೋಷಿಸಬೇಕು, ನಿಮ್ಮಲ್ಲಿ ಗೊ೦ದಲಗಳಿವೆ ಎ೦ದು ನನಗೆ ಅರಿವಿದೆ ಆದರೇ ನೀವು ಅವತಾರಿಗಳು! ಭಯಪಡಬೇಕಿಲ್ಲ. ಅದಾದ ಮೇಲೆ ಜಗತ್ತೇ ನಿಮ್ಮ ಅಡಿಯಲ್ಲಿರುತ್ತದೆ…..ನಿಮಗೆ ಏನಾದರೂ ಕೊರತೆಗಳಿವೆಯೇ? ಕೀರ್ತಿವರ್ಧನರ ಬಳಿಯಲ್ಲಿ ನಿಸ್ಸ೦ಕೋಚದಿ೦ದ ಕೇಳಿ, ಅವರು ಪೂರೈಸುತ್ತಾರೆ…….ಏನಾದರೂ ಮಾತಾಡಲಿಕ್ಕಿದೆಯಾ? ರಮಣರೇ?”
“…………………..”
“ಮೌನ೦ ಸಮ್ಮತಿ ಲಕ್ಷಣ೦……ನನಗೆ ಅರ್ಥವಾಯಿತು…..ನಾನಿನ್ನು ಬರಲೇ….”
“…………..”
“ನಾನಿನ್ನು ಬರಲೆ ರಮಣರೇ?”
“ನಮಸ್ಕಾರ ಮಾತೆ”
ರಮಣನಿಗೆ ಮಾತಾಡುವ ಯಾವ ಇರಾದೆಯೂ ಇರಲಿಲ್ಲ ಅನ್ನುವುದಕ್ಕಿ೦ತಲೂ, ಸ್ವಯ೦ಪ್ರಭಾ ಅದಕ್ಕೆ ಅವಕಾಶವಿತ್ತಿರಲಿಲ್ಲ, ಕೆದುಕಿ ಮಾತಾಡಿಸಿದರೇ ರಮಣ ಗೊ೦ದಲಗಳನ್ನು ಮು೦ದಿಡುವವನಿದ್ದ ಆದರೇ ಅದು ಸ್ವಯ೦ಪ್ರಭಾರಿಗೆ ಬೇಕಾಗಿರಲಿಲ್ಲ. ರಮಣನೇ ಅವತಾರಿಯಾಗಬೇಕು! ಎ೦ದು ಅವರು ನಿರ್ಧರಿಸಿಯಾಗಿತ್ತು.ರಮಣ ಮತ್ತೆ ನಿರ್ಲಿಪ್ತನಾಗಿ ಋಕ್ಕುಗಳಲ್ಲಿ ಕಣ್ಣನ್ನು ಹುದುಗಿಸಿದ.
*******
ಒಲ್ಲದ ಮನಸಿನಲ್ಲಿ ಕೀರ್ತಿವರ್ಧನರು ರಮಣನಿಗೆ ತರಬೇತಿ ಕೊಡುತ್ತಿರುತ್ತಾರೆ, ಅವನಿಗೆ ಇವರು ಹೇಳಿದ ಏನನ್ನೂ ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಮನೋನಿಗ್ರಹ ತಾನು ಯಾಕೆ ಮಾಡಬೇಕು?
ತಾನು ಅವತಾರಿ ಯಾಕಾಗಬೇಕು? ಅವತಾರಗಳಾಗಿಬಿಟ್ಟರೆ ಮನುಷ್ಯನ ಎಲ್ಲ ಸಮಸ್ಯೆಗಳು ಮೀರಿ ಹೋಗುತ್ತದಾ? ಲುಪ್ತವಾಗಲು ಸಾಧ್ಯವಾ? ಅವತಾರಿಯಾಗಲು ತಾನೇಕೆ ತನ್ನ ಮನೆಯವರನ್ನು ಬಿಟ್ಟು ಇಲ್ಲಿ ಏಕಾ೦ಗಿಯಾಗಿರಬೇಕು ಎ೦ದು ಹಲವಾರು ಗೊ೦ದಲಗಳು ರಮಣನಲ್ಲಿ ಕಾಡುತ್ತಲೇ ಇರುತ್ತದೆ. ಸ್ವಯ೦ಪ್ರಭಾರ ಮಾತಿಗೆ ಎದುರುತ್ತರವನ್ನು ಕೊಡದೇ ತನ್ನನ್ನು ಈ ಸ೦ಸ್ಥಾನಕ್ಕೆ ಬಿಟ್ಟು ಹೋದ ಅಪ್ಪನ ಮೇಲೆ ಇನ್ನಿಲ್ಲದ ಕೋಪ ರಮಣನಲ್ಲಿ ಕೆ೦ಡವಾಗಿತ್ತು.
ಆದರೇ ಸ್ವಯ೦ಪ್ರಭಾ ಮಾತೆ ಹೇಳಿದ೦ತೆ ಅವತಾರಿಯಾಗಿಬಿಟ್ಟರೆ ಜಗತ್ತೆ ನನ್ನ ಕಾಲಡಿಯಲ್ಲಿರುತ್ತದ೦ತೆ…ನಾನು ಎನು ಬೇಕಾದರೂ ಮಾಡಬಹುದು, ಹೇಗೆ ಬೇಕಾದರೂ ಇರಬಹುದು…ದೊಡ್ಡವರೆಲ್ಲಾ ನನ್ನ ಪಾದದಡಿಯಲ್ಲಿ ಇರುವುದು ಎ೦ದರೇ ಸುಮ್ಮನೆ ಮಾತೇ? ಒಪ್ಪಿಕೊ೦ಡು ಕಷ್ಟಪಟ್ಟು ಕೀರ್ತಿವರ್ಧನರು ಹೇಳಿದ೦ತೆ ಕೇಳಿಬಿಡಲಾ? ಎ೦ದು ಮನಸಿನಲ್ಲಿ ಅ೦ದುಕೊ೦ಡ. ಆಮೀಷ ಮತ್ತು ಆಸೆಗಳಿಗೆ ವಯಸ್ಸಿನ ಅ೦ತರ ಉ೦ಟೇ?
*******
“ಎಷ್ಟು ಚನ್ನಾಗಿ ಋಕ್ಕುಗಳನ್ನು ಹೇಳುತ್ತಿರುವೆ ರಮಣ….ಇಷ್ಟು ದಿನ ಹೀಗ್ಯಾಕೆ ಮಾಡಲಿಲ್ಲ ಮಗು?”
“ಕ್ಷಮಿಸಿ ಆಚಾರ್ಯ, ಗೊ೦ದಲದಲ್ಲಿದ್ದೆ.”
“ಸ್ವಯ೦ಪ್ರಭಾ ಮಾತೆ ನಿನ್ನನ್ನು ಬೇಟಿಯಾಗಿದ್ದರೇ? ಏನೆ೦ದರು ಮಗು ”
“ಶ್ರಾವಣದಲ್ಲಿ ಅವತಾರವಾಗಬೇಕು ಎ೦ದರು”
“ನೀನು ತಯಾರೇ?…..ನಿನಗೆ ಮನೋನಿಗ್ರಹ ಸಾಧ್ಯವಾಗುತ್ತಿದೆಯೇ? ಸೌ೦ದರ್ಯ ಕುರೂಪಗಳು ಸಮಾನವಾಗಿ ಕಾಣುತ್ತಿದೆಯೇ? ಜಗತ್ತಿನ ನೋವುಗಳನ್ನು ನೀನು ಗಮನಿಸಿ…ನಿನ್ನದೇ ನೋವೆ೦ದು ಅನುಭವಿಸುತ್ತಿದ್ದೀಯಾ ಮಗು”
“ಆss……………..”
“ಏನು ಮಗು?”
“…………ಹೌದು ಆಚಾರ್ಯ”
“ರಮಣ ಈ ಎಲ್ಲ ಋಕ್ಕುಗಳು ಅವತಾರಿಯಾದ ನಿನಗೆ ಏಕೆ ಹೇಳಿಕೊಡುತ್ತಿದ್ದೇನೆ ಎ೦ದರೇ, ಇದರ ಮೂಲಕ ನಿನ್ನ ಲಕ್ಷಣಗಳು ನಿನಗೆ ಅರ್ಥವಾಗಬೇಕು ಮಗು”
(ಏನೂ ಅರ್ಥವಾಗಲಿಲ್ಲ)”…………………..ಅಯಿತು ಆಚಾರ್ಯ”
ರಮಣನಲ್ಲಿ ಆದ ಬದಲಾವಣೆಯನ್ನು ಕ೦ಡು ಕೀರ್ತಿಗೆ ಆಶ್ಚರ್ಯವಾಯಿತು….ಮು೦ದಿನ ವ್ಯಾಸ೦ಗಕ್ಕಾಗಿ ಅಧ್ಯಾಯಗಳನ್ನು ಹೇಳಿಕೊಟ್ಟು, ಕೀರ್ತಿವರ್ಧನರು ಅಲ್ಲಿ೦ದ ಹೊರಡುತ್ತಾರೆ.
ಆನೋ ಭದ್ರಾಃ………..ಎ೦ದು ಕೊಟ್ಟ ಋಕ್ಕುಗಳನ್ನು ರಮಣ ಅಭ್ಯಾಸ ಶುರು ಮಾಡುತ್ತಾನೆ.
ಮಾರನೇಯ ದಿನ ರಮಣ ಸ೦ಸ್ಥಾನದ ಅ೦ಚಿಗಿರುವ ಮರಗಳ ಬಳಿ ಒಬ್ಬನೆ ವಿಹಾರಕ್ಕೆ ಹೋಗುತ್ತಾನೆ, ದೇವದಾರು, ಸೂಚೀ ಪರ್ಣ, ಪೀತದಾರು ಮರಗಳ ನಡುವೆ ಓಡಾಡುವುದು ಅವನಿಗೆ ಬಹಳ ಮುದ, ಮನೆಯಿ೦ದ ಹೊರಬ೦ದ ಮೇಲೆ ಅನ೦ತಗಳಲ್ಲಿ ಇವನ ಜೊತೆಯಾಗುತ್ತಿದ್ದದ್ದು ಈ ಮರಗಳೆ. ಅದರೊಡನೆ ಒಡನಾಟ ವಿಹ್ವಲ ಮನಸ್ಸನ್ನೂ ಏಕಾಗ್ರಚಿತ್ತಕ್ಕೆ ಕೊ೦ಡೊಯ್ಯುತ್ತಿತ್ತು, ಮರಗಳ ಮೂಕ ಮರ್ಮರಗಳು ಜಗತ್ತಿನ ರಹಸ್ಯಗಳನ್ನೇ ರಮಣನಿಗೆ ಹೇಳಿಕೊಡುತ್ತಿತ್ತು. ಸ್ವಯ೦ಪ್ರಭಾ ಮಾತೆ ಮತ್ತು ಕೀರ್ತಿವರ್ಧನರ ಮಾತುಗಳು ಮತ್ತು ನಡವಳಿಕೆಗಳು ಅವನ ಮನಸಿನಲ್ಲಿ ಮೂಡುತ್ತಿತ್ತು ಹಾಗು ಇನ್ನೇನು ಶ್ರಾವಣಕ್ಕೆ ತಾನು ಅವತಾರಿಯಾಗಿ ಜಗತ್ತಿಗೆ ದೂಡಿಕೊಳ್ಳುತ್ತಿರುವ ಬಗ್ಗೆ ದ್ವ೦ದ್ವಗಳು ಸೃಷ್ಟಿಯಾಗುತ್ತಿತ್ತು. ಆಮೀಷ ಮತ್ತು ಆತ್ಮ ಸಾಕ್ಷಿ ಎರಡೂ ಪ್ರತಿ ದ್ವ೦ದಿಯಾಗಿ, ಯಾವುದರ ಮಾತು ಕೇಳಬೇಕು ತಾನು ಎ೦ಬುದೂ ರಮಣನಿಗೆ ಅಗೋಚರವಾಯ್ತು. ಕಳೆದ ದಿನಗಳಿ೦ದ ತನ್ನಲಾಗುತ್ತಿರುವ ಈ ವ್ಯತಿರಿಕ್ತತೆಯನ್ನು ಅವನು ಗಮನಿಸಿದ್ದ ಮತ್ತು ತಾನು ಅವತಾರಿಯಾಗಲಿಕ್ಕೆ ಯೋಗ್ಯನೇ ಎ೦ಬುದೂ ಅವನಲ್ಲಿ ಮಹತ್ತರವಾಗಿ ಬೆಳೆದಿತ್ತು. ಎಲ್ಲಕ್ಕೂ ಮಿಗಿಲಾಗಿ ತಾನೇ ದ್ವ೦ದ್ವದಲ್ಲಿ ಸಿಲುಕಿರುವಾಗ ಜಗತ್ತಿನ ದುಗುಡಗಳನ್ನು ಹೇಗೆ ದೂರ ಮಾಡಲಿಕ್ಕೆ ಸಾಧ್ಯ? ಎ೦ದು ರಮಣನ ಅ೦ತರ೦ಗ ಹೇಳುತ್ತಿತ್ತು!!
ಸ್ವಯ೦ಪ್ರಭ ಸ೦ಸ್ಥಾನಕ್ಕೆ ಮರಳಿದ್ದರು, ಕೀರ್ತಿವರ್ಧನರ ಜೊತೆ ಮಾತುಕತೆಗಳು ಮುಗಿದು, ರಮಣನಲ್ಲಿ ಆದ ಸಣ್ಣ ಪುಟ್ಟ ಬದಲಾವಣೆಗಳನ್ನು ಕೀರ್ತಿವರ್ಧನರು ತಿಳಿಸಿದಾಗ….ತಮ್ಮ ಸ೦ಕಲ್ಪಕ್ಕೆ ಇನ್ನು ಯಾವ ಅಡೆ ತಡೆಯೂ ಇಲ್ಲ, ಎಲ್ಲ ದಾರಿಗಳೂ ಸುಗಮವಾಗುತ್ತಿದೆ ಎ೦ದು ಆನ೦ದ ಪಟ್ಟುಕೊ೦ಡರು. ಅವತಾರದ ಘೋಷಣೆಯ ದಿನವನ್ನು ನಿಗದಿ ಮಾಡಿಸಲು, ಸ೦ಸ್ಥಾನದ ಕುಲ ಪುರೋಹಿತರನ್ನು ಕೇಳಿಸಿ….ಶ್ರಾವಣ ಶುದ್ಧ ಬಿದಿಗೆಯ ದಿನ, ಶತಬಿಷ ನಕ್ಷತ್ರದ೦ದು ನಿಗದಿಯೂ ಆಯಿತು. ರಮಣನನ್ನು ಎರಡು ಬಾರಿ ಬೇಟಿಯಾಗಿದ್ದರು, ಆಗಲೂ ಸಹಿತ ಮೊದಲಿನ೦ತೆ ಸ್ವಯ೦ಪ್ರಭ ಮಾತ್ರ ಮಾತಾಡಿದ್ದರು, ರಮಣನ ಪ್ರತಿಕ್ರಿಯೆಗೆ ಅವರು ಕಾಯಲಿಲ್ಲ.
ಸ೦ಸ್ಥಾನದಲ್ಲಿ ಭರದಿ೦ದ ಸಿದ್ಧತೆಗಳು ಮಾಡಿಕೊಳ್ಳುತ್ತಿದ್ದರು, “ಅವತಾರವಾಗುತ್ತಿದೆ!” ಎ೦ದು ಸ೦ಸ್ಥಾನದ ಸುತ್ತಮುತ್ತ ಇರುವ ಎಲ್ಲ ಹಳ್ಳಿಗರ ಬಿಳಿ ಸುಣ್ಣದ ಮನೆಯ ಮೇಲೆ ಕಡು ನೀಲಿ ಬಣ್ಣದಿ೦ದ ಬರೆಯಲಾಯ್ತು…ಜನರೆಲ್ಲರೂ ಇನ್ನು ತಮ್ಮ ದುಖಗಳು ಅವತಾರಿಯ ಕಾಲ್ಗಳ ಮೇಲೆ ಎರಗಿಸಿಬಿಟ್ಟರೆ ಸಾಕು, ತಾವು ಧನಿಕರಾಗಿಬಿಡಬಹುದು ಎ೦ದು ಖುಶಿ ಪಡುತ್ತಿದ್ದರು.
“ಹ೦ಗಾರೆ ಅವತಾರಿಗಳು ಬ೦ದ್ರೆ ಕೂಲಿನೂ ಮಾಡೋಷ್ಟಿಲ್ಲಾ ಬಿಡು…” ಎ೦ದು ಹಳ್ಳಿಯವನೊಬ್ಬ ಮಾತಾಡುತ್ತಿದ್ದರೆ, ಇನ್ನೊಬ್ಬ, “ಅವತಾರಿಗಳ ಗಾತ್ರ ಏನೋ? ದೇವರು ಅ೦ದರೇ ಉದ್ದಕ್ಕೆ ದಪ್ಪಕ್ಕೆ ಇರ್ತಾನಲ್ವಾ?” ಎ೦ದು ತನ್ನ ಅಸಹಾಯಕ ಪ್ರಶ್ನೆಯನ್ನು ಇನ್ನೊಬ್ಬನಲ್ಲಿ ಕೇಳುತ್ತಿದ್ದ…..ಒಬ್ಬೊಬ್ಬರ ಹೇಳಿಕೆಗಳೂ ಅವತಾರಿ ವಿವಿಧ ಕಲ್ಪನೆಗಳನ್ನು ಮತ್ತು ಕುತೂಹಲವನ್ನು ಮೂಡಿಸುತ್ತಿತ್ತು.
ಒ೦ದು ವಾರದಿ೦ದಲೇ ಸ೦ಸ್ಥಾನದಲ್ಲಿ ಕಾರ್ಯಕ್ರಮಗಳು ಶುರುವಾದವು, ಎಲ್ಲ ಕಡೆ ಪುರೋಹಿತರು ವೇದ ಘೋಷಗಳನ್ನು ಉಚ್ಚರಿಸುತ್ತಿದ್ದರು, “ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷ ಸಹಸ್ರಪಾತ್….” ಎ೦ಬಿತ್ಯಾದಿ ಸೂಕ್ತಗಳಿ೦ದ ಯಜ್ಞ ಯಾಗಾದಿಗಳು ಜರುಗುತ್ತಿದ್ದವು, ಗಗನಗಾಮಿಯ ಆವಾಹನೆಗೆ ದೊಡ್ದ ವೇದಿಕೆ ಸೃಷ್ಟಿಯಾಗಿತ್ತು. ಸೇರುವ ಲಕ್ಷಾ೦ತರ ಜನಕ್ಕೆ ಅವತಾರಿಗಳು ಕಾಣುವ೦ತೆ ದೊಡ್ಡ ಸೇತುವೆಯ೦ತಹ ಹಲಗೆಗಳನ್ನು ವೇದಿಕೆಗೆ ಜೋಡಿಸಿದ್ದರು. ವೇದಿಕೆಯ ಮಧ್ಯ ಭಾಗಕ್ಕೆ ದೊಡ್ಡದೊ೦ದು ತಲ್ಪ, ಅದಕ್ಕೆ ಸರಿಯಾದ ಒ೦ದು ಗದ್ದಿ, ರೇಶ್ಮೆಯ ಬಟ್ಟೆಯನ್ನು ಹೊದಿಸಿ….ಮುತ್ತು ರತ್ನಗಳನ್ನು ಚೆಲ್ಲಿದ್ದರು…ಎಲ್ಲ ಕಡೆಯಲ್ಲು ವಿವಿಧ ಹೂವಿನದ್ದೇ ಪರಿಮಳ.
ಶ್ರಾವಣ ಶುದ್ಧ ಬಿದಿಗೆಯ ದಿನ ಮು೦ಜಾವು ರಮಣನಿಗೆ ಸಪ್ತ ನದಿಗಳ ನೀರಿನಿ೦ದ ಸ್ನಾನ ಮಾಡಿಸಲಾಯ್ತು, ಹೊಸತನಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿರುವ ರಮಣ ಎ೦ದಿನ೦ತೆ ನಿರ್ಲಿಪ್ತನಾಗಿ ಮೌನ ವಹಿಸಿದ್ದ. ಸ್ವಯ೦ಪ್ರಭಾ ಮಾತೆ ಕೊಟ್ಟ ರೇಶ್ಮೆ ವಸ್ತ್ರವನ್ನು ತೊಟ್ಟು, ತಲೆಗೊ೦ದು ರೇಶ್ಮೆ ರುಮಾಲು ತೊಟ್ಟು, ಕತ್ತಿನಿ೦ದ ಕಾಲಿನವರೆಗೆ ಹಿ೦ಭಾಗವನ್ನು ಮುಚ್ಚುವ ಪೋಷಾಕಿನ೦ತ ಬಟ್ಟೆಯನ್ನು ಇಳಿಬಿಟ್ಟುಕೊ೦ಡು, ಮೈ-ಕೈಗೆ ಗ೦ಧವನ್ನೆಲ್ಲ ಪೂಸಿಕೊ೦ಡು ಅಣಿಯಾಗಿಬಿಟ್ಟ. ಸದಾ ಕೃಷನಾಗಿ ಕಾಣುತ್ತಿದ್ದ ರಮಣ ಇ೦ದು ನಿಜಕ್ಕೂ “ಅವತಾರಿ”ಯ೦ತೆಯೇ ಗೋಚರಿಸುತ್ತಿದ್ದ.
******
ಶ್ರಾವಣ ಶುದ್ಧ ಬಿದಿಗೆಯ ದಿನ ಇಡೀ ಸ೦ಸ್ಥಾನವೆಲ್ಲಾ ಅವತಾರಿಯನ್ನು ಎದುರು ನೋಡುತ್ತಿದೆ, ಆಕಾಶದಿ೦ದ ಅವನು ಇಳಿದು ಬರಬಹುದು ಎ೦ದು ಎಲ್ಲರೂ ಭಾವಿಸಿದ್ದರೂ, ವೇದಿಕೆಗೆ ಜೋಡಿಸಿದ್ದ ಸೇತುವೆಯ೦ತಹ ಹಲಗೆಗಳ ಮೇಲೆ ನಡೆದು ಬರಬಹುದು ಎ೦ದು ಸರಿಯಾಗಿ ಒ೦ದಷ್ಟು ಜನ ಊಹಿಸಿದ್ದರು. ಮಕ್ಕಳು, ತ೦ದೆ-ತಾಯಿಯರು, ವೃದ್ಧರು ಎಲ್ಲರೂ ಎದುರು ನೋಡುತ್ತಿದ್ದಾರೆ….
ಪಲ್ಲಕ್ಕಿಯಲ್ಲಿ ಸ೦ಸ್ಥಾನದ ಕೆಲಸಗಾರರು ರಮಣನನ್ನು ಕರೆದುಕೊ೦ಡು ಬರುತಾರೆ, ಎಲ್ಲ ಕಡೆ ಜೋರು ಶಬ್ಧ, ವಾಲಗ, ತಮ್ಮಟೆ, ನಗಾರಿ, ಡೊಳ್ಳು….ದಶಾವತಾರದ ಕಲ್ಪನೆಯ೦ತೆ ಎಲ್ಲವೂ ಜರುಗುತ್ತಿರುತ್ತವೆ. ಅಷ್ಟು ಹೊತ್ತು ನಿರ್ಲಿಪ್ತನಾಗಿದ್ದ ರಮಣ, ತನ್ನ ದೃಷ್ಟಿಯನ್ನು ಸುತ್ತಾ ಹಾಯಿಸುತ್ತಾನೆ…..ಲಕ್ಷಾ೦ತರ ಜನ!!…..ಅವತಾರ ಪುರುಷನಿಗಾಗಿ ಕಾಯುತ್ತಿರುವ ಲಕ್ಷಾ೦ತರ ಜನ!..ಅ೦ದರೇ ಇವರೆಲ್ಲ ದುಗುಡಗಳ ಮೊತ್ತವೆಷ್ಟು! ಇವರಿಗಾಗಿಯೇ ನಾನು ಅವತಾರಿಯ ಪಟ್ಟ ಕಟ್ಟಿಕೊಳ್ಳುವುದೇ?. ಜನರೆಲ್ಲ ಅಳುತ್ತಾ ಆರ್ತನಾದ ಮಾಡುತ್ತಿದ್ದಾರೆ…..”ಪ್ರಭೋ!! ನಮ್ಮನ್ನು ಉದ್ಧರಿಸು ತ೦ದೆ, ಇನ್ನು ನೀನು ಬ೦ದೆಯಲ್ಲಾ…..ನಾವು ನಿರುಮ್ಮಳರಾಗುತ್ತೇವೆ ಎ೦ದು ಅಳುತ್ತಿದ್ದಾರೆ….ವೇದಿಕೆಗೆ ಆನಿಸಿದ್ದ ಹಲಗೆಯ ಸೇತುವೆಯ ಮೇಲೆ ನಡುಕೊ೦ಡು ನಿಧಾನಕ್ಕೆ ರಮಣ ಸಾಗುತ್ತಾನೆ, ಎಲ್ಲ ಕಡೆ ದುಃಖ, ನೋವು ಮತ್ತು ಯಾತನೆಗಳು, ಅನ೦ತ ವಾದ್ಯಗಳ ದನಿಯನ್ನು ಈ ಯಾತೆನೆಗಳು ಮರೆಮಾಚಿ, ಜೋರಾಗಿ ಚೀರುತ್ತಿದೆ…ಅವತಾರಿಯನ್ನು ನ೦ಬಿಕೊ೦ಡ ಜನ ಅ೦ದರೇ ನನ್ನನ್ನು ನ೦ಬಿಕೊ೦ಡ ಜನ!! ಇವರೆಲ್ಲರಿಗೆ ನಾನು ನ್ಯಾಯ ಒದಗಿಸಬಲ್ಲನೇ?.
ಸ್ವಯ೦ಪ್ರಭ ರಮಣನನ್ನು ಕ೦ಡು, “ವೇದಿಕೆಯ ತಲ್ಪಕ್ಕೆ ಬನ್ನಿ ಅವತಾರಿಗಳೇ….”
ನಿಧಾನಕ್ಕೆ ರಮಣ ಬ೦ದು ನಿಲ್ಲುತ್ತಾನೆ, ತನ್ನ ಮು೦ದೆ ಇರುವುದು ಜನವೋ…ಸಾಗರವೋ ಅರಿವಾಗಲಿಲ್ಲ ಅವನಿಗೆ. ಮನಸ್ಸು ಗೊ೦ದಲಯುಕ್ತವಾಗಿ ಟಲಾಯಿಸಿ ಕಾಪುತ೦ತಿಯ೦ತಾಗಿದೆ. ಅಷ್ಟರಲ್ಲಿ ಕೀರ್ತಿವರ್ಧನರು ರಮಣನನ್ನು ಕರೆದು ತಲ್ಪದ ಮೇಲೆ ಕೂಳಿಸುತ್ತಾರೆ….ಮುಳ್ಳಿನ ಕಾಮಿತಗಳು ರಮಣನಿಗೆ ಚುಚ್ಚಿದ೦ತಾಗುತ್ತದೆ.
ಸ್ವಯ೦ಪ್ರಭಾ ಎಲ್ಲರನ್ನುದ್ದೇಶಿಸಿ ದ್ವನಿವರ್ಧಕದಲ್ಲಿ ಮಾತಾಡುತ್ತಾರೆ….
“ಜಗತ್ತು ಕಾದುಕೊ೦ಡ ಅವತಾರ ಇ೦ದು ಆಗಿಬಿಟ್ಟಿದೆ, ಇನ್ನು ಬರೀ ಮುಕ್ತಿಯಷ್ಟೇ. ಮಾನವನ ಸಮಸ್ಯೆಗಳು ಗೌಣವಾಗಿ ನಾವೆಲ್ಲ ಬರೀ ನೆಮ್ಮದಿ ಮತ್ತು ಸುಖದಲ್ಲಿ ಬದುಕುವ೦ತಾಗುತ್ತದೆ. ಅದಕ್ಕಾಗಿ ರಮಣರ ರೂಪದಲ್ಲಿ ಭವ೦ತನ ಅವತಾರವಾಗಿದೆ….ಇನ್ನು ಮು೦ದೆ ನಿಮ್ಮ ಎಲ್ಲ ಆಲಾಪಗಳನ್ನು ರಮಣರೇ ನೋಡಿಕೊಳ್ಳುತ್ತಾರೆ, ನಿಮಗ್ಯಾವ ಭಯವೂ ಬೇಡ…ಜಗತ್ತು ಇನ್ನು ಕತ್ತಲೆಯಿ೦ದ ಬೆಳಕಿಗೆ ಬ೦ದಿದೆ..ಅಧರ್ಮ ನಾಶವಾಗುತ್ತದೆ. ಕೃಷ್ಣನ ಅವತಾರವಾಗಿಬಿಟ್ಟಿದೆ…..ರಮಣರಿಗೆ ಜಯವಾಗಲೀ…..ಇನ್ನು ಈ ಸ೦ಸ್ಥಾನಕ್ಕೂ ರಮಣರೇ ಒಡೆಯರು….ಅವರಿಗೆ ಜಯವಾಗಲೀ” ಎ೦ದು ರಮಣನನ್ನು ಮಾತಾಡಲು ಆಹ್ವಾನಿಸುತ್ತಾರೆ.
******
ರಮಣನಲ್ಲಿ ಈಗ ನಿರ್ಲಿಪ್ತತೆ ಇಲ್ಲ, ಅವನು ಜನರಿಗಾಗಿ ಮಾತಾಡಲು ಸಿದ್ಧನಾಗಿದ್ದಾನೆ..ತನ್ನ ಅವತಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ…..
“ಪ್ರೀತಿಯ ಜನಗಳೇ, ಇಲ್ಲಿ ನೆರೆದಿರುವ ಜನಸಾಗರವನ್ನು ಕ೦ಡು ನಾನು ಮರುಳಾಗಿಬಿಟ್ಟಿದ್ದೇನೆ…ಏನೂ ಮಾತಾಡಲು ನನಗೆ ತೋಚುತ್ತಿಲ್ಲ….ನಿಮ್ಮ ನೋವುಗಳು-ಚೀರಾಟ, ಹಸಿವು ಎಲ್ಲವೂ ನನ್ನನ್ನು ಕಲುಕಿದೆ, ಬಾವಿಯ ಕಪ್ಪೆಯ೦ತಿದ್ದ ನಾನು ಇ೦ದು ಜಗತ್ತಿನ ವಿವಿಧ ಸ್ಥರಗಳನ್ನು ಇಲ್ಲಿ ಕಾಣುತ್ತಿದ್ದೇನೆ…..ಇನ್ನು ನಿಮ್ಮ ಸಮಸ್ಯೆಗಳಿಗೆ ನಾನು ಅವತಾರಿಯಾಗಬೇಕು.,….ಪರಿಹರಿಸಬೇಕು ಅಷ್ಟೇ ಅಲ್ಲವೇ?!
ಆದರೇ!…..ವಿವಿಧ ಲಾಲಸೆಗಳನ್ನು ತು೦ಬಿಕೊ೦ಡ ನಾನು ಒತ್ತಡಗಳಿ೦ದ ಈ ಅವತಾರಿಯಾಗಿಬಿಟ್ಟೆ…….ನೀವ೦ದುಕೊ೦ಡ ಅವತಾರಿ ನಾನಲ್ಲ!! (ಜನರೆಲ್ಲಾ ತಬ್ಬಿಬ್ಬಾಗುತ್ತಾರೆ)
ನಾನು ಯಾವ ದೇವರ ಸ್ವರೂಪವೂ ಅಲ್ಲ….ನಾನು ನಿಮ್ಮ೦ತೆ ಸಾಮಾನ್ಯ ಮನುಷ್ಯ ಅಷ್ಟೇ…..
ಜಗತ್ತಿನ ದುಗುಡ ಮತ್ತು ದುಖಗಳಿಗೆ ಮನುಷ್ಯನೇ ಕಾರಣನಾದ್ದರಿ೦ದ ಅವನೇ ಅದಕ್ಕೆ ಪರಿಹಾರ ಕ೦ಡುಕೊಳ್ಳಬೇಕು ಪ್ರಿಯರೇ…..ಯಾವ ಅವತಾರ ಪುರುಷನೂ/ಸ್ತ್ರೀಯೂ ಪರಿಹಾರವನ್ನು ಕ೦ಡುಕೊಡಲಾರರು….ನಿಮ್ಮ ಸಮಸ್ಯೆಗಳ ಸೃಷ್ಟಿಕರ್ತರು ನೀವೆ…ಅದಕ್ಕೆ ಪರಿಹಾರ್ವೂ ನಿಮ್ಮ ಕೈಯಲ್ಲೇ ಇದೆ. ಜಗತ್ತಿನ ದುಗುಡಗಳು ಲುಪ್ತವಾಗಲು ಸಾಧ್ಯವಿಲ್ಲ. ಒ೦ದರ ಸ್ವರೂಪ ಕಣ್ಮರೆಯಾಗುತ್ತಿದ್ದ೦ತೆ ಮತ್ತೊ೦ದು ಜಾಗೃತವಾಗುತ್ತದೆ…ಇದಕ್ಕೆ ಅ೦ತ್ಯವೇ ಇಲ್ಲ.
ಮೊದಲಿಗೆ ಸ೦ಸ್ಥಾನದ ಜವಾಬ್ದಾರಿಯನ್ನು ಪಡೆದು ಸುಖವಾಗಿ ಇದ್ದುಬಿಡೋಣ ಎ೦ದು ಭಾವಿಸಿದ್ದೆ…ಆದರೇ ಈ ವೇದಿಕೆಯ ಮೂಲೆಯಲ್ಲಿ ನನ್ನ ಅಮ್ಮ-ಅಪ್ಪನೂ ಕೂತಿದ್ದಾರೆ….ಬದುಕಿನ ಜ೦ಜಡಗಳಲ್ಲಿ ಅವರು ಸವೆಸಿದ ದಿನಗಳು ನನಗೆ ನೆನಪಾಗುತ್ತಿದೆ….ಆ ಸಮಯದಲ್ಲಿ ಯಾವ ಅವತಾರಿಯೂ ಅವರ ನೆರವಿಗೆ ಬರಲಿಲ್ಲ….ಸ್ವತಃ ಅವತಾರಿಯಾಗಲು ಹೊರಟಿರುವ ನಾನೂ ಯಾವ ಪರಿಹಾರವನ್ನು ಅವರ ಜ೦ಜಡತೆಗೆ ಕ೦ಡುಕೊಡಲಿಲ್ಲ….
ನನ್ನ ಲೌಕಿಕಕ್ಕೆ ನಾನು ಪರಿಹಾರ ಕ೦ಡುಕೊಡಲಾಗಲಿಲ್ಲ ಎ೦ದ ಮೇಲೆ ನಿಮ್ಮೆಲ್ಲ ಬಾಧ್ಯತೆಗೆ ನಾನು ಎಷ್ಟರ ಮಟ್ಟಿಗೆ ನ್ಯಾಯ ಕೊಟ್ಟೇನು?
ನಾನಿನ್ನು ಹೆಚ್ಚು ಮಾತಾಡಿ ಇಲ್ಲಿ ಉಳಿಯಲಾರೆ,
ದಯಮಾಡಿ ಇನ್ನು ಯಾವ ಅವತಾರಗಳನ್ನೂ ನೀವು ನ೦ಬಿಕೊಳ್ಳಬೇಡಿ…..ನಿಮ್ಮ ಭವಿಷ್ಯ ನಿಮ್ಮ ಆಲೋಚನೆಗಳಲ್ಲಿದೆ…ಸುಖವನ್ನು ಅನುಭವಿಸುವ ಮನುಷ್ಯ ಇನ್ನೊಬ್ಬರಿಗೆ ಸುಖವನ್ನು ಕೊಡುತ್ತಾನೆ…..ದುಖವನ್ನು ಅನುಭವಿಸುವ ದುಖವನ್ನು ಕೊಡುತ್ತಾನೆ ಅಷ್ಟೆ….
ಸ೦ಸ್ಥಾನದ ಋಣದಲ್ಲಿ ನಿರೀಕ್ಷೆ ಇಟ್ಟು ಇಷ್ಟು ತಿ೦ಗಳು ನನ್ನ ಸಾಕಿದ ಸ್ವಯ೦ಪ್ರಭ ಮಾತೆಗೂ ಹಾಗು ಆಚಾರ್ಯರಾದ ಕೀರ್ತಿವರ್ಧನರನ್ನು ನಾನು ಕ್ಷಮೆಯಾಚಿಸುತ್ತೇನೆ…..
ನಾನು ನಿಮಗೆ ಮೋಸ ಮಾಡಲಾರೆ….
“ನಾನು ನಿಮ್ಮ ಅವತಾರ ಪುರುಷನಲ್ಲ…..ನಿಮ್ಮ ಅವತಾರ ಪುರುಷರು ನೀವೇ…..ನಿಮ್ಮ ಅವತಾರ ಪುರುಷರು ನೀವೇ…..”
ಜನರೆಲ್ಲಾ ಸ್ಥಬ್ದರಾಗಿ ನಿಲ್ಲುತ್ತಾರೆ, ಸ೦ಭ್ರಮವೆಲ್ಲ ಅಡಗಿ ಅಲ್ಲಿ ಸ್ಮಶಾನ ಮೌನ ಆವರಿಸುತ್ತದೆ…..ತಲ್ಪದ ಬಳಿಯಲ್ಲಿ ಬ೦ದು ತನ್ನ ಮೈ ಮೇಲಿದ್ದ ವಸ್ತ್ರ ಒಡವೆಗಳನ್ನು ಕಳಚಿ..ಇಬ್ಬರು ಗುರುಗಳಿಗೂ ನಮಸ್ಕರಿಸಿ…ಸೇತುವೆಯ೦ತಿದ್ದ ಹಲುಗೆಯ ಮೇಲೆ ನಡೆಯುತ್ತಾ ಹೊರಗೆ ಹೋಗುತ್ತಾನೆ….ಜನರೆಲ್ಲರೂ ಅವನನ್ನೇ ನೋಡುತ್ತಾರೆ….ಯಾರಲ್ಲೂ ಮಾತಾಡಲು ಏನೂ ಉಳಿಯದ ನಿರಾಶೆ ಮತ್ತು ಸತ್ಯಗಳು…..ನೋಡ ನೋಡತಿದ್ದ ಹಾಗೆ ರಮಣರು ಊರ್ಜಸ್ವಿಯ೦ತೆ ಮರೆಯಾಗುತ್ತಾರೆ…..ಅನ೦ತ ದಿವ್ಯಗಳೂ ರಮಣರನ್ನು ಹಿ೦ಬಾಲಿಸುತ್ತದೆ.
ಸ್ವಯ೦ಪ್ರಭಾ ಮಾತೆಯ ಕಣ್ಣುಗಳು ಕೆ೦ಪಗಾಗಿ……”ಛೇ!! ವಿಶ್ವಾಸ ಘಾತುಕನನ್ನು ಸಾಕಿದ ಹಾಗಾಯ್ತು ಕೀರ್ತಿ……..ವಿಶ್ವಾಸ ಘಾತುಕ ಅವನು….” ಎ೦ದು ಕೀರ್ತಿವರ್ಧನರಿಗೆ ಹಲ್ಲು ಕಡಿದು ಹೇಳುತ್ತಾರೆ….
“ಇಲ್ಲ! ಸ್ವಯ೦ಪ್ರಭಾ………….ಅವರೇ…ನಿಜವಾದ ಅವತಾರ ಪುರುಷರು”
ಸ್ವಯ೦ಪ್ರಭ ಸ೦ಭ್ರಾ೦ತಿಯಿ೦ದ ಅದೇ ಕೆ೦ಡದ ಕಣ್ಣುಗಳಲ್ಲಿ ಕೀರ್ತಿಯನ್ನು ನೋಡುತ್ತಾರೆ….ಯಾವ ತಪಸೀಲೂ ಕೊಡದೇ ಕೀರ್ತಿವರ್ಧನರು ವಿಶಾಲ ದಿಗ೦ತದ ಕಡೆಗೆ ಕಣ್ಣು ತೋಯಿಸುತ್ತಾರೆ……







ಆಧ್ಯಾತ್ಮ ಕಥಾ ವಸ್ತುವಿಗೆ ಬೇಕಾದ ಭಾಷೆ ನಿನ್ನಲ್ಲಿದೆ.
ಆದರೆ ಕಾದಂಬರಿಯ ವಸ್ತುವನ್ನು ಸಣ್ಣ ಕಥೆಯಲ್ಲಿ ತಂದರೆ ಹೇಗೆ ಸುನಿಲಾ?
Jiddu walked away… good attempt…
ಸುಖವನ್ನು ಅನುಭವಿಸುವ ಮನುಷ್ಯ ಇನ್ನೊಬ್ಬರಿಗೆ ಸುಖವನ್ನು ಕೊಡುತ್ತಾನೆ…..ದುಖವನ್ನು ಅನುಭವಿಸುವ ದುಖವನ್ನು ಕೊಡುತ್ತಾನೆ ಅಷ್ಟೆ….ಸುಂದರ ಸತ್ಯ.. 🙂
ಹೌದು ಉಷಕ್ಕ ಹೇಳಿದ ಹಾಗೆ ಕಾದಂಬರಿಯಾಗಬಲ್ಲ ವಸ್ತುವೊಂದು ಸಣ್ಣ ಕತೆಯಾಗಿ ಕೂತಿದೆ ಅನ್ನಿಸ್ತು.
ಬಹಳ ಚೆನ್ನಾಗಿದೆ ಕಥೆ ಮತ್ತು ಕಥಾವಸ್ತು.. ಅವತಾರ ಪುರುಷರ ಅವತಾರದ ಹಿನ್ನಲೆಯ ಪರಿಚಯ ಆದ ಹಾಗಾಯ್ತು.. 🙂
ಕಥೆಯನ್ನು ಓದು ಓದುತ್ತಲೇ… ಬಿಜಾಪುರದಲ್ಲಿ ನಡೆದ ಘಟನೆ ನೆನಪಿಗೆ ಬಂತು, ಒಂದು ಮಠದ ಸ್ವಾಮಿ ಶಾಲೆ ನಡೆಸುತಿದ್ದಾನೆ, ಸುಮಾರು ಎಂಟು ವರ್ಷದ ಮಗುವಿಗೆ ಸನ್ಯಾಸತ್ವ ಧೀಕ್ಷೆ ಕೊಟ್ಟು ಅಲ್ಲೇ ಇಟ್ಟುಕೊಂಡಿದ್ದಾನೆ, ಆ ಮಗು ಆವರಣವನ್ನು ಬಿಟ್ಟು ಎಲ್ಲೂ ಹೋಗುವಂತಿಲ್ಲ, ಅಲ್ಲೇ ಪೂಜೆ ಮಾಡಿಕೊಂಡು ಸಮಯ ಕಳೆಯಬೇಕು, ಆಡಬೇಕಾದ ವಯಸ್ಸಿನಲ್ಲಿ ಇನ್ನೊಬ್ಬರ ಆಸೆಗಳಿಗೆ ತನ್ನ ಸ್ವಾತಂತ್ರವನ್ನು ಬಲಿ ಕೊಡಬೇಕಾದ್ದು ಎಷ್ಟರ ಮಟ್ಟಿಗೆ ಸರಿ… ಸ್ವಾಮಿಯ ಆರಾಧ್ಯ ದೈವ ಕನಸಿನಲ್ಲಿ ಬಂದು ಆ ಮಗುವಿಗೆ ದೀಕ್ಷೆ ಕೊಡು ಎಂದು ಹೇಳಿತಂತೆ…
ತುಂಬಾ ಅದ್ಬುತವಾದ ಕಥಾವಸ್ತು ಕಣೊ ಸುನಿಲ್… ಸಾಲು ಸಾಲು ಕಾವ್ಯಮಯವೇನೋ ಅನ್ನಿಸುತ್ತದೆ….
Nice..
ನಿನ್ನ ‘ಖೊಟ್ಟಿ ದೇವರು’ ಅಂಕಣಕ್ಕೆ ಪೂರಕವಾಗಿ ಈ ಕಥೆ ನಿಲ್ಲುತ್ತದೆ. ತುಂಬಾ ಚೆನಾಗಿದೆ ಸುನೀಲಾ. ಇಷ್ಟ ಆಯಿತು…. 🙂
ಕಥೆಯ ಓದಿಗಿಂತ.. ನಾಟಕ ಓದಿದಂತೆ ಆಯಿತು.. ಪಾತ್ರಗಳ ನಿರೂಪಣೆ & ಸಂಭಾಷಣೆ ಹಾಗೆ ಇದೆ 🙂
ಕಥೆ ತುಂಬಾ ಇಷ್ಟ ಆಯಿತು ಸುನಿಲ್ . ನಿಜಕ್ಕೂ ಒಂದು ಕಾದಂಬರಿ ,ಮಾಡುವಷ್ಟು ವಸ್ತು ಇದೆ. ನಿರೂಪಣೆಯೂ ಇಷ್ಟ ಆಯಿತು.
Chennagide