ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಲೋಕದ ಸಂತ..

                               
ಡಾ ಕೆ ರಘುನಾಥ್
ನವೋದಯ ಸಾಹಿತ್ಯದ ಮೇರು ವ್ಯಕ್ತಿಗಳಲ್ಲಿ ಗೋವಿಂದ ಪೈ ಅವರ ಸಾಧನೆ ಮತ್ತು ಸಿದ್ಧಿಗಳು ಅನನ್ಯವಾದವುಗಳು.  ಬಹು ಭಾಷಾಕೋವಿದರಾಗಿ ಹೊಸಗನ್ನಡ ಕಾವ್ಯ ನಿರ್ಮಾಪಕರಲ್ಲಿ ಒಬ್ಬರಾಗಿ ಸಂಶೋಧನ ಲೋಕದ ಅಗ್ರಗಣ್ಯರಾಗಿ, ಪ್ರಗತಿಶೀಲ ಚಿಂತಕರಾಗಿ,  ಆರಂಭಕಾಲದ ಗದ್ಯಕಾರರಾಗಿ, ಅವರದ್ದು ಬಹುಮುಖಿ ವ್ಯಕ್ತಿತ್ವ.   ಇಂತಹವರಿಗೆ ಮೊದಲ ರಾಷ್ಟ್ರ ಕವಿಯಪಟ್ಟ ಹುಡುಕಿಕೊಂಡು ಬಂದದ್ದು, ಅದೂ ಮದ್ರಾಸ್ ಸರ್ಕಾರದಿಂದ ಔಚಿತ್ಯ ಪೂರ್ಣವಾಗಿದೆ.
ಅವರ ಕಡೆಗಾಲದಲ್ಲಿ ಅವರನ್ನು ಅರಸಿ ಬಂದ ಮೈಸೂರು ವಿಶ್ವವಿದ್ಯಾಲಯದ ಗೌರವ ಡಿಲಿಟ್ ಪದವಿಯನ್ನು ನಯವಾಗಿಯೇ ನಿರಾಕರಿಸಿದ ಅಪರೂಪದ ವ್ಯಕ್ತಿ.  ಅಂತಹವರು ಕನ್ನಡಕ್ಕೆ ದೊರಕಿದ್ದು ಅಲಭ್ಯ ಲಾಭ.  ಏಕೆಂದರೆ ನವೋದಯದ ಹಲವು ಲೇಖಕರಂತೆ ಅವರ ಮಾತೃಭಾಷೆ ಕನ್ನಡವಲ್ಲ ಬದಲಾಗಿ ಕೊಂಕಣಿ.  ಆದರೆ ಆ ಮಾತೆಯ ಮೊಲೆಯಲ್ಲಿ ಹಾಲಿಲ್ಲದ ಪ್ರಯುಕ್ತ ತಾನು ಕನ್ನಡ ತಾಯಿಯ ಮಡಿಲಿನಲ್ಲಿ ಬಿದ್ದುದಾಗಿಯೂ, ಆ ಮಾತೆಯ ಅಮೃತವಾಹಿನಿಯನ್ನು ಉಂಡು ತಾನು ಬೆಳೆದಿರುವುದಾಗಿಯೂ,  ಕನ್ನಡ ತಾಯಿಯ ಋಣವನ್ನು ಏಳೇಳು ಜನ್ಮಗಳು ಎತ್ತಿ ಬಂದರೂ ತೀರಿಸಲು ಸಾಧ್ಯವಿಲ್ಲವೆಂಬ ಅರ್ಥದ ಮಾತುಗಳನ್ನು ಅವರು ಮುಂಬಯಿಯಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಲ್ಲಿ ಹೃದಯಸ್ಪರ್ಶಿಯಾಗಿ ಹೇಳಿಕೊಂಡಿದ್ದಾರೆ.
ಇಂತಹ ಗೋವಿಂದ ಪೈ ಗಳು ಹುಟ್ಟಿದ್ದು 1883 ರಲ್ಲಿ ಮಂಜೇಶ್ವರದಲ್ಲಿ. ಅವರು ಕೊನೆಯವರೆಗೂ ಮಂಜೇಶ್ವರ ಗೋವಿಂದ ಪೈ, ದಕ್ಷಿಣ ಕನ್ನಡ ಎಂದು ತಮ್ಮ ವಿಳಾಸವನ್ನು ಬರೆದುಕೊಳ್ಳುತ್ತಿದ್ದರು.   ಮಂಜೇಶ್ವರ ಕೇರಳಕ್ಕೆ ಸೇರಿದ್ದನ್ನು ಅವರ ಆತ್ಮ ಎಂದೂ ಒಪ್ಪಿರಲಿಲ್ಲ.  ಅವರ ವಿದ್ಯಾಭ್ಯಾಸ ನಡೆದದ್ದು ಮಂಗಳೂರು ಮತ್ತು ಮದರಾಸುಗಳಲ್ಲಿ. ಅವರ ತಂದೆಯವರ ಅನಾರೋಗ್ಯದ ಪ್ರಯುಕ್ತ ಉನ್ನತ ವಿದ್ಯಾಭ್ಯಾಸವನ್ನು ಪೂರೈಸಲಾಗದೇ ಮಧ್ಯದಲ್ಲಿಯೇ ಬಿಟ್ಟುಬರಬೇಕಾಯಿತು.  ಹಾಗೆ ಬಂದು ನೆಲೆನಿಂತದ್ದು ತನ್ನ ತಾಯಿಯ ತವರೂರಾದ ಮಂಜೇಶ್ವರದಲ್ಲಿ.   ಹಾಗಾಗಿ ಅವರು ಮಂಜೇಶ್ವರದ ಗೋವಿಂದ ಪೈ ಆದರು.  ಅವರಿರುವವರೆಗೆ  ಕನ್ನಡದ ಸಾಹಿತಿಗಳಿಗೆ ಅದು ತೀರ್ಥಯಾತ್ರಾ ಕ್ಷೇತ್ರವಾಗಿತ್ತು.  “ಅಲ್ಲಿ ಈಗ ಗೋವಿಂದ ಪೈಗಳು ಇಲ್ಲ, ಅಲ್ಲಿ ಇನ್ನು ಕನ್ನಡಿಗರಿಗೆ ಕೆಲಸವಿಲ್ಲ” ಎಂದಿದ್ದಾರೆ ಬನ್ನಂಜೆಯವರು.  1963 ಸೆಪ್ಟೆಂಬರ್ ನಲ್ಲಿ ಅವರು ಮಂಗಳೂರಿನಲ್ಲಿ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರೂ, ಕನ್ನಡ ಸಾರಸ್ವತಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿದರು.
ಈ ನಡುವೆ ಅವರಿಗೆ ಸಂಗಾತಿಯಾಗಿ ದೊರೆತವರು ಕೃಷ್ಣಾಬಾಯಿಯವರು.  ಆದರೆ ಅವರು ಬಹಳ ಕಾಲ ಉಳಿಯಲಿಲ್ಲ.  ಅವರ ನಲವತ್ತಮೂರನೇ ವಯಸ್ಸಿನಲ್ಲಿ ತಮ್ಮ ಚಿರಕಾಲದ ಅನಾರೋಗ್ಯದಿಂದ ಬಳಲಿ, ಇವರನ್ನು ತಬ್ಬಲಿಯಾಗಿಸಿ ಹೊರಟು ಹೋದರು.  ಆದರೆ ಇವರ ಎದೆಯಲ್ಲಿ ಅವರು ‘ನಂದಾದೀಪವಾಗಿ’ ಉಳಿದರು. ನಿತ್ಯ ಅವರ ಭಾವ ಚಿತ್ರಕ್ಕೆ ಅವರ ತೋಟದ ಹೂವು ಅವರ ಮುಡಿಗೇರುತಿತ್ತು.  ಅವರ ಮೊದಲ ಕವಿತಾ ಸಂಕಲನ “ಗಿಳಿವಿಂಡು” (1930), ಕೃಷ್ಣೆ ಮತ್ತು ಕೃಷ್ಣರಿಗೆ ಅರ್ಪಿತವಾಗಿದೆ. ಕೃಷ್ಣೆಯಲ್ಲಿನ ಅನುರಾಗವೇ ಕೃಷ್ಣಾನುರಾಗವಾಗಿ ಮಾರ್ಪಟ್ಟಿದೆ ಎಂದು ಶ್ರೀನಿವಾಸ ಹಾವನೂರರು ಇದನ್ನು ಗುರುತಿಸಿದ್ದಾರೆ.
ಹೀಗೆ ಪ್ರಾರಂಭವಾದ ಅವರ ಕಾವ್ಯ ಯಾತ್ರೆ 1962 ರವರೆಗೂ ಮುಂದುವರೆದು ಹೊರಳು ದಾರಿಯಲ್ಲಿ ಸಾಗಿ ಖಂಡಕಾವ್ಯಗಳಾಗಿ, ‘ಹೃದಯ ರಂಗ’ ವಾಗಿ, ‘ನಂದಾದೀಪ’ವಾಗಿ ಕನ್ನಡ ಕಾವ್ಯಲೋಕವನ್ನು ಶ್ರೀಮಂತಗೊಳಿಸಿತು.   ಅವರ ಮೊದಲ ರಚನೆ ಪ್ರಾರಂಭವಾಗಿದ್ದು 1900 ರಲ್ಲಿ.  ಸುವಾಸಿನಿ ಎಂಬ ಪತ್ರಿಕೆಗೆ ‘ಸುವಾಸಿನಿ’ ಎಂಬ ಹೆಸರಿನಿಂದಲೇ ಐದು ಕಂದ ಪದ್ಯಗಳನ್ನು ಬರೆದು ಕಳುಹಿಸಿ ಅದಕ್ಕಿಟ್ಟಿದ್ದ ಐದು ರೂಪಾಯಿಗಳ ಬಹುಮಾನವನ್ನು ಪಡೆದುಕೊಂಡರು.  1911 ರ ಸುಮಾರಿಗೆ ಅವರು ಬರೋಡಾದ ನವಸಾರಿ ಯಲ್ಲಿದ್ದಾಗ “ಆಗೋದು ಹೋಗೋದು ದೇವರ ಇಚ್ಛೆ ಹೂಡೋದು ಬಿತ್ತೋದು ನನ್ನಿಚ್ಛೆ, ಪ್ರಾಸವನೀಗಲೇ ತೊಡೆದು ಬಿಡುವುದೇ ನಿಶ್ಚಯಂ” ಎಂಬ ಕ್ರಾಂತಿಕಾರಕವಾದ ತೀರ್ಮಾನವನ್ನು ತೆಗೆದುಕೊಂಡರು.
ಆಗ ಇಡೀ ಕನ್ನಡ ಪಂಡಿತಲೋಕವೇ ’ಹುಲಿ ಹುಲಿ’ ಎಂದು ಅವರ ಮೇಲೆ ಮುಗಿಬಿದ್ದಿತು. ಅದಕ್ಕೆ ಹೆದರದ ಅವರು “ಇಂದಿನ ಮೇಕೆಯ ದಾರಿಯೇ ನಾಳಿನ ಆನೆಯ ದಾರಿಯಾದೀತು” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.  ಅವರು ಅಂದು ನುಡಿದ ಭವಿಷ್ಯ ಆನಂತರ ಕನ್ನಡ ಕಾವ್ಯ ಲೋಕದ ಹೆದ್ದಾರಿಯಾಯಿತು.  ಆದರೆ ಇದು ಕೇವಲ ಛಂದೋ ಪ್ರಯೋಗಕ್ಕೆ ಸಂಬಂಧಪಟ್ಟ ವಿಷಯ ಮಾತ್ರವಲ್ಲ, ಅದರ ವಸ್ತುವಿಗೂ ಸಂಬಂಧಪಟ್ಟಿದ್ದು.  ಹಾಗೆ ಅವರು ಬರೆದ ಕವಿತೆಯ ಶೀರ್ಷಿಕೆ ‘ಹೊಲೆಯನು ಯಾರು’.  ‘ಯಾರು ಇನ್ನೊಬ್ಬರನ್ನು ಹೊಲೆಯರು ಎಂದು ಕರೆಯುತ್ತಾರೋ ಅವರೇ ಹೊಲೆಯರು ಗುಣದಿಂದ ಹೊಲೆತನವಲ್ಲದೆ ಹುಟ್ಟಿನಿಂದಲ್ಲ.’ ಎಂಬ ಪುರೋಗಾಮಿಯಾದ ನಿಲುವನ್ನು ಆ ಕಾಲಕ್ಕೇ ವ್ಯಕ್ತಪಡಿಸಿದ್ದಾರೆ.
ಕನ್ನಡ ಕಾವ್ಯ ಪರಂಪರೆಯಲ್ಲಿಯೇ ಕುಲವನ್ನು ನಿರಾಕರಿಸುವ, ಹುಟ್ಟಿನ ಆಧಾರದ ಮೇಲೆ ಕುಲವನ್ನು ನಿರ್ಧರಿಸುವುದನ್ನು ತಿರಸ್ಕರಿಸುವ ಧೋರಣೆ ಆದಿ ಕವಿ ಪಂಪನಿಂದ ಹಿಡಿದು ಪ್ರಕಟವಾಗುತ್ತಲೇ ಬಂದಿದೆ.  ಆದರೆ ನಿರ್ಧಿಷ್ಟ ತಾತ್ವಿಕ ಹಿನ್ನೆಲೆಯಲ್ಲಿ ಪ್ರಕಟವಾದದ್ದು ಇದೇ ಮೊದಲು. ಗಾಂಧೀಪ್ರಣೀತ ಚಿಂತನೆಯ ಹಿನ್ನೆಲೆಯಲ್ಲಿ ಪ್ರಕಟವಾದ ಅವರ ಈ ಧೋರಣೆ ಮುಂದೆ 1946 ರಲ್ಲಿ ಏಕಲವ್ಯ ನನ್ನು ಕುರಿತು ಬರೆದ ಅವರ “ಹೆಬ್ಬೆರೆಳು’ ನಾಟಕದಲ್ಲಿ ಘನೀಕೃತ ರೂಪವನ್ನು ಪಡೆದಿದೆ. ಆರ್ಯರು ಅನಾರ್ಯರನ್ನು ಸಮಾನವಾದ ನೆಲೆಯಲ್ಲಿ ಸ್ವೀಕರಿಸದೇ ಹೋದರೆ ಭಾರತಕ್ಕೆ ಭವಿಷ್ಯವಿಲ್ಲ ಎಂಬ ಚಿಂತನೆ ಇದರಲ್ಲಿ ಪ್ರಕಟವಾಗಿದೆ. ಇಲ್ಲಿಯವರೆಗೆ ಏಕಲವ್ಯನನ್ನು ಕುರಿತು ಪ್ರಕಟವಾಗಿರುವ ಹಲವಾರು ನಾಟಕಗಳಲ್ಲಿ (ಟಿ.ಪಿ. ಕೈಲಾಸಂ ಅವರ “ಪರ್ಪಸ್’, ಕುವೆಂಪು ಅವರ ‘ಬೆರೆಳ್ಗೆ ಕೊರಳ್, ಸಿದ್ಧಲಿಂಗಯ್ಯನವರ ‘ಏಕಲವ್ಯ’ ಇತ್ಯಾದಿ.)
ಈ ನಾಟಕ  ಇಂದಿಗೂ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ ಎಂದು ಇದನ್ನು  ವಿವರವಾಗಿ ಪರಿಶೀಲಿಸಿರುವ ನಾಟಕ ನಿರ್ದೇಶಕ ಶ್ರೀ ಬಿ.ವಿ. ರಾಜಾರಾಂ ಹೇಳಿದ್ದಾರೆ.  ಇದರಲ್ಲಿ ಗ್ರೀಕ್ ನಾಟಕಗಳ ಗೊಂದಳವನ್ನು ಬಳಸಿಕೊಂಡಿದ್ದಾರೆ.  ಹಿಂದೂಧರ್ಮದಲ್ಲಿ ಬೇರುಬಿಟ್ಟಿದ್ದು ಅದಕ್ಕೆ ಒಳಗಿನವರಾಗಿ ವರ್ಣಾಶ್ರಮಧರ್ಮವನ್ನು ಆಧರಿಸಿದ ಶ್ರೇಣೀಕರಣವನ್ನು ನಿರಾಕರಿಸಿ, ಸಮಾನತೆಯ ಕಹಳೆಯನ್ನು ಮೊಳಗಿಸಿದ ಮೊದಲಿಗರಲ್ಲಿ ಗೋವಿಂದ ಪೈ ಅವರಿಗೆ ಅಗ್ರ ಸ್ಥಾನ ಸಲ್ಲುತ್ತದೆ.  ಕುವೆಂಪು ನಂತರ ಇವರ ಉತ್ತರಾಧಿಕಾರಿಗಳಾದರು.
ಜಡ್ಡು ಗಟ್ಟಿದ್ದ ವೈದಿಕಧರ್ಮಕ್ಕೆ ಕಾಯಕಲ್ಪವನ್ನು ಒದಗಿಸುವ ನೆಲೆಯಲ್ಲಿ ಅವರು ರಚಿಸಿದ ಎರೆಡು ಖಂಡಕಾವ್ಯಗಳಾದ ‘ಗೋಲ್ಗೋಥ ಮತ್ತು ವೈಶಾಖಿ’ ಗಳು ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತವೆ.  1930 ರಲ್ಲಿ ಪ್ರಕಟವಾದ ‘ಗಿಳಿವಿಂಡು’ ಕವಿತಾ ಸಂಕಲನದಲ್ಲೇ ವ್ಯಕ್ತವಾಗಿರುವ ಅವರ ಈ ಭೂಮಿಕೆ (ಯೇಸು ಕೃಷ್ಣ-ಕವಿತೆಯಲ್ಲಿ ಅವರಿಬ್ಬರ ನಡುವೆ ಇರುವ ಸಾಮ್ಯಗಳನ್ನು ಗಮನಿಸಿ ಯದುನಾಥ ಯೂದನಾಥನಲ್ಲವೇ ಎಂದು ಪ್ರಶ್ನಿಸಿದ್ದಾರೆ) ಪ್ರಕಾಶಗೊಂಡು ಗೋಲ್ಗೋಥ(1937) ದಲ್ಲಿ  ಸಾಕಾರಗೊಂಡಿದೆ.  ತನ್ನನ್ನು ಶಿಲುಬೆಗೇರಿಸಿದ ಅವರನ್ನು ಕುರಿತು ಮೊದಲಿಗೆ “ಎಲಿ ಎಲೀ ಲಮಾ ಸಬಕ್ತಾನಿ” ( ದೇವರೇ ದೇವರೇ ಯಾಕೆನ್ನ ಕೈಬಿಟ್ಟೆ) ಎಂದು ಮೊರೆಯಿಟ್ಟರೂ ಕಡೆಗೆ  “ ಅವರು ಏನೆಸಗುತ್ತಿದ್ದಾರೆಂದು ಅವರರಿಯರು ಅವರನ್ನು ಕ್ಷಮಿಸು” ಎಂದು ದೇವಪುತ್ರ ದೇವರಲ್ಲಿ ಪ್ರಾರ್ಥನೆ ಮಾಡುತ್ತಾನೆ.  ಅವನು ಅಮೃತ ಪುತ್ರನೇ, ಏಕೆಂದರೆ ಕವಿ ಯೇಸುವನ್ನು “ಮರಣ ವೃಕ್ಷದಲಿ ಬಿಟ್ಟ ಅಮೃತ ಫಲ” ಕ್ಕೆ ಹೋಲಿಸಿದ್ದಾರೆ. ಅನ್ಯ ಧರ್ಮಕ್ಕೆ ಸೇರಿದ ಯೇಸುವನ್ನು ಹೀಗೆ ಅಮೃತ ಫಲವೆಂದು   ಕರೆಯುವುದರ ಹಿಂದಿರುವ ಧೋರಣೆ ಅತ್ಯಂತ ಉದಾತ್ತವಾದುದು.
ಅವರ ಇನ್ನೊಂದು ಖಂಡಕಾವ್ಯವಾದ ‘ವೈಶಾಖಿ’ ಯಲ್ಲಿನ ಒಂದು ಪ್ರಸಂಗ ಮೇಲೆ ಕಾಣಿಸಲಾದ ಯೇಸುವಿನ ಕೊನೆಯ ದಿನಗಳ ಪ್ರಸಂಗದೊಂದಿಗೆ ಸಾಮ್ಯವನ್ನು ಪಡೆದಿದೆ.  ವೈಶಾಖ ಪೂರ್ಣಿಮೆಯ ಹಿಂದಿನದಿನ ಚುಂದನ ಎಂಬ ಕುಂಬಾರನೊಬ್ಬನಿಂದ ಭಿಕ್ಷೆಯನ್ನು ಸ್ವೀಕರಿಸುತ್ತಾನೆ.  ಅದು ‘ಸೂಕರ ಮದ್ದವ’ (ಹಂದಿ ಮಾಂಸ- ಈಗ ಅದೊಂದು ಅಣಬೆ ಎಂದು ಗೊತ್ತಾಗಿದೆ.) ವಾಗಿದ್ದು, ಅದರಿಂದ ಬುದ್ಧನ ‘ಬುಸಗುತ್ತಕ್ಕೆ’ (ಆಮಶಂಕೆ) ಕಾರಣವಾಗಿ ಬುದ್ಧ ನರಳುವಂತಾಗುತ್ತದೆ.  ತನ್ನ ಶಿಷ್ಯರು ಚುಂದನನ ಮೇಲೆ ಕೋಪಗೊಂಡು ಅವನನ್ನು ನಿಂದಿಸಬಹುದು ಎಂಬ ಭೀತಿಯಿಂದ ಬುದ್ಧ ತನ್ನ ಪ್ರಿಯ ಶಿಷ್ಯನಾದ ಆನಂದನನ್ನು ಕರೆದು ಚುಂದನನ್ನು ನಿಂದಿಸದಿರಿ ಎಂದು ವಿನಂತಿಸಿಕೊಳ್ಳುತ್ತಾನೆ.
ಮೇಲಿನ ಎರಡೂ ಪ್ರಸಂಗಗಳಲ್ಲಿ ಪ್ರಕಟವಾಗುವುದು ಪೂರ್ವ ಪಶ್ಚಿಮಗಳ ಧರ್ಮಗಳ ನೇತಾರರಲ್ಲಿ ಉದಾತ್ತವಾದ ಮನೋಧರ್ಮ, ತನಗೆ ಕೇಡೆಸಗಿದವರನ್ನು ಕೂಡ ಕ್ಷಮಾ ಗುಣದಿಂದ ಮನ್ನಿಸಿಬಿಡುವ, ಅವರಿಗೆ ಕೇಡುಂಟಾಗದಂತೆ ಕಾಳಜಿ ವಹಿಸುವ ಧೀರೋದ್ಧಾತ್ತವಾದ ಚಿಂತನೆ.  ಇದನ್ನು ಗ್ರಹಿಸಿ ಕಂಡಿರಿಸುವಲ್ಲಿ ಪ್ರಕಟವಾಗುವ ಗೋವಿಂದ ಪೈ ಅವರ ಮನೋಧರ್ಮವು ಅತ್ಯಂತ ಉದಾತ್ತವಾದುದು ಇತರತ್ರ ಕಾಣದಂತಹದ್ದು.
ಅವರ ಬಹುಭಾಷಾ ಪ್ರಭುತ್ವ ಎರಡು ಧಾರೆಗಳಲ್ಲಿ ಹರಿಯಿತು.  ಅವುಗಳನ್ನು ನಮ್ಮ ಅನುಕೂಲಕ್ಕಾಗಿ, ಸೃಜನಶೀಲ ಮತ್ತು ಸೃಜನೇತರ ಎಂದು ಕರೆಯಬಹುದು.  ಸೃಜನಶೀಲ ಧಾರೆಯ ಭಾಗವಾಗಿ ಅವರು ಇನ್ನಿತರ ಭಾಷೆಗಳಿಂದ ಕನ್ನಡಕ್ಕೆ ತಂದದ್ದನ್ನು ಕಾವ್ಯಗಳ ರೂಪದಲ್ಲಿ ನಾಟಕಗಳ ರೂಪದಲ್ಲಿ ಗಮನಿಸಬಹುದಾಗಿದೆ.  ನಿದರ್ಶನಕ್ಕೆ ಇಂಗ್ಲಿಷ ಭಾಷೆಯಿಂದ ವಡ್ರ್ಸವರ್ತ್,ಶೆಲ್ಲಿ ಮುಂತಾದವರ ಕವಿತೆಗಳನ್ನು, ಅವರ ಬಂಗಾಳಿ ಜ್ಞಾನ ರವೀಂದ್ರರ ಕವಿತೆಗಳನ್ನು, ಅವರ ಜರ್ಮನ್ ಭಾಷೆಯ ಜ್ಞಾನ ‘ಕೊಳಗುಳದ ಮನವಿ’ ಕವಿತೆಯ ಅನುವಾದಕ್ಕೂ, ಅವರ ಜಪಾನಿ ಭಾಷೆಯ ಜ್ಞಾನ ‘ನೋ’ ನಾಟಕಗಳ ಅನುವಾದಕ್ಕೂ, ಅವರ ಉರ್ದು ಭಾಷಾ ಜ್ಞಾನ ‘ಹಿಂದೂಸ್ಥಾನ್ ಹಮಾರ’ ಎಂಬ ಪ್ರಸಿದ್ಧವಾದ ಇಕ್ಬಾಲರ ಕವಿತೆಯ ಕನ್ನಡ ಅವತಾರಕ್ಕೂ ಕಾರಣವಾಗಿದೆ.  ಇವು ಕೆಲವು ನಿದರ್ಶನಗಳು ಮಾತ್ರ.  ಇವು ಕೇವಲ ಮೂಲ ಕೃತಿಗಳ ಪಡಿಯಚ್ಚುಗಳಾಗಿ ಉಳಿಯದೆ ಕನ್ನಡದಲ್ಲಿ ಪುನರ್ಜನ್ಮ ಪಡೆದಂತೆ ರೂಪು ತಾಳಿವೆ. ಕನ್ನಡ ಭಾಷಾ ಸಂಸ್ಕೃತಿಯಲ್ಲಿ ಆಳವಾಗಿ ಬೇರು ಬಿಟ್ಟ ಸುಸಂಸ್ಕೃತ ಮನಸ್ಸೊಂದು ಅನ್ಯ ಭಾಷಾ ಸಂಸ್ಕೃತಿಗಳೊಂದಿಗೆ ನಡೆಸಿದ ಸಂವಾದದ ಫಲವಾಗಿದೆ.  ಹೀಗೆ ಏಕೀಕೃತ ಸಂಸ್ಕತಿಯಿಂದ ಬಹುಮುಖೀ ಸಂಸ್ಕೃತಿಯೆಡೆಗೆ  ನಡೆಸುವ ಜೈವಿಕ ಯಾತ್ರೆಯ ಫಲವಾಗಿದೆ.
ಅವರ ಸೃಜನೇತರ ಧಾರೆಯಲ್ಲಿ ಅದು ಸಂಶೋಧನೆಯ ಸ್ವರೂಪವನ್ನು ಪಡೆದುಕೊಂಡಿದೆ.  ಉದಾಹರಣೆಗೆ ಅವರ ಗ್ರೀಕ್ ಭಾಷಾ ಜ್ಞಾನ ಮೊತ್ತಮೊದಲ ಬಾರಿಗೆ ಕನ್ನಡ ಭಾಷೆಯ ಪ್ರಾಚೀನತೆಗೆ ಸಾಕ್ಷಿಯನ್ನು ಒದಗಿಸಿತಲ್ಲದೆ, ತುಳುನಾಡಿಗೂ ಗ್ರೀಕ್ ದೇಶಕ್ಕೂ ನಡುವೆ ಇದ್ದ ವಾಣಿಜ್ಯ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತದೆ.  ಅವರ ಮಾತೃಭಾಷೆಯ ಜ್ಞಾನ ಕೊಂಕಣಿ ಒಂದು ಪ್ರತ್ಯೇಕ ಭಾಷೆಯೆಂದು, ಮರಾಠಿಯ ಉಪಭಾಷೆಯಲ್ಲವೆಂದೂ, ಮರಾಠಿಗಿಂತಲೂ ಪ್ರಾಚೀನವಾದ ಭಾಷೆಯೆಂದು ಆಧಾರ ಸಮೇತ ಮಂಡಿಸಲು ಅನುವು ಮಾಡಿಕೊಟ್ಟಿತು ಅಲ್ಲದೆ ಅದು ಅವರ ಸಾರಸ್ವತ ಜನಾಂಗದ ಮೂಲವನ್ನು ಶೋಧಿಸುವಲ್ಲಿ ಪ್ರಚೋದನೆಯನ್ನು ನೀಡಿತು. ಪಂಜಾಬು ಮೂಲದಿಂದ ಬಂದ ಅವರು ಬಿಹಾರಕ್ಕೆ ಆಗಮಿಸಿ ಅಲ್ಲಿಂದ ಗೋವೆಗೆ ಬಂದು ಗೋವೆಯಿಂದ ಪೋರ್ಚುಗೀಸರ ಕಾಟವನ್ನು ತಾಳಲಾರದೇ ದಕ್ಷಿಣಕ್ಕೆ ಬಂದು ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೆಲೆಯೂರಿದ್ದನ್ನು ಸಾಧಿಸಿ ತೋರಿಸಿಕೊಟ್ಟಿದ್ದು ಇಂದಿಗೂ  ಪ್ರಮಾಣವತ್ತಾಗಿ ಉಳಿದಿದೆ.
ಅವರ ತುಳು ಭಾಷಾ ಜ್ಞಾನ ತುಳುನಾಡಿನ ಮೂಲ ಚೂಲಗಳನ್ನು ಮೊದಲಬಾರಿಗೆ ಶೋಧಿಸಲು ಅವರನ್ನು ಹಚ್ಚಿತು.   ‘ಇತಿಹಾಸದ ಇರುಳಲ್ಲಿ ತುಳುನಾಡು’ ಎನ್ನುವ ಲೇಖನ 1928 ರಷ್ಟು ಹಿಂದೆಯೇ ಪ್ರಕಟವಾಯಿತು.  ಅದರಲ್ಲಿ ಅವರು ತುಳು ಎಂದರೆ ‘ಮುಳುಗು’ ಎಂದು ಇರುವ ಅರ್ಥವನ್ನು ಶೋಧಿಸಿ, ಕಡಲಿನಲ್ಲಿ ಮುಳುಗುವ ಮೊಗೇರರು ಈ ನಾಡಿನ ಮೂಲ ನಿವಾಸಿಗಳಲ್ಲಿ ಒಬ್ಬರೆಂದೂ ಮೊದಲು ತುಳು ನಾಡಿಗೆ ‘ಸಾತಿಯ ಪುತ್ರ’ ಎಂಬ ಹೆಸರಿದ್ದುದನ್ನು ಅವರು ತೋರಿಸಿಕೊಟ್ಟಿದ್ದಾರೆ.  ಹೀಗೆ ತುಳುವರಿಗೇ ತುಳುವಿನ ಅಸ್ಮಿತೆಯನ್ನು ಉಂಟುಮಾಡಿದ ಶ್ರೇಯಸ್ಸು ಗೋವಿಂದ ಪೈ ಅವರಿಗೆ ಸಲ್ಲಬೇಕು.  ಅಲ್ಲದೆ ‘ತೌಳವ ಮಾತೆ’  ಎಂಬ ಭಾವಗೀತೆಯನ್ನು ರಚಿಸಿ, ತುಳುವರ ಇತಿಹಾಸದ ಮೇಲೆ, ಸಮಕಾಲೀನ ಸ್ಥಿತಿಯ ಮೇಲೆ, ಧಾರ್ಮಿಕ ಸೌಹಾರ್ದತೆಯ ಮೇಲೆ, ಬೆಳಕು ಚೆಲ್ಲಿದ್ದಾರೆ.  ಈ ಕವಿತೆಯನ್ನು ಎಷ್ಟು ಜನ ತುಳುವರು ಬಲ್ಲರು ಎಂಬುದು ಚಿದಂಬರ ರಹಸ್ಯವಾಗಿದೆ.
ಅವರ ಕನ್ನಡ ಭಾಷಾ ಪ್ರೇಮವು ಅನನ್ಯವಾದುದು.  ಅದು ಅವರನ್ನು ಕನ್ನಡ ಭಾಷೆಯ ಸಾಹಿತ್ಯದ ಶೋಧನೆಗೆ ಕರೆದೊಯ್ಯಿತು.  ಕ್ರಿಸ್ತ ಶಕದ ಪ್ರಾರಂಭದಿಂದಲೇ ಕನ್ನಡ ಭಾಷೆ ಮತ್ತು ಸಾಹಿತ್ಯಗಳು ಅಸ್ತಿತ್ವದಲ್ಲಿದ್ದುವೆಂದು ಹಲ್ಮಿಡಿ ಶಾಸನದ ಕಾಲ ಎರಡನೆಯ ಶತಮಾನವೆಂದೂ, ವಡ್ಡಾರಾಧನೆಯ ಕಾಲ ಆರನೆಯ ಶತಮಾನವೆಂದೂ, ಕವಿರಾಜಮಾರ್ಗದ ಕಾಲ ಏಳನೆಯ ಶತಮಾನವೆಂದೂ ಅವರು ಅವರಿಗೆ ದೊರೆತ ಆಧಾರಗಳಮೇಲೆ ತೋರಿಸಿಕೊಟ್ಟಿದ್ದಾರೆ (ಇಂದಿನ ವಿದ್ವಾಂಸರುಗಳಲ್ಲಿ ಅವುಗಳ ಬಗ್ಗೆ ಭಿನ್ನಾಭಿಪ್ರಾಯವಿದೆ.  ಅದರಂತೆ ಪಂಪ, ರನ್ನ, ಕುಮಾರ ವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ, ಮುದ್ದಣನವರೆಗೂ ಕಾಲ ನಿರ್ಣಯವನ್ನು ಅವರು ಕಾಲ ನಿರ್ಣಯವನ್ನು ಮಾಡಿದ್ದಾರೆ.  ಅದರಲ್ಲಿ ರತ್ನಾಕರವರ್ಣಿ ಮತ್ತು ಮುದ್ದಣರನ್ನು ತುಳುನಾಡು ಕನ್ನಡಕ್ಕೆ ಕೊಟ್ಟ ಕೊಡುಗೆ ಎಂದು ಸಾಧಿಸಿದ್ದಾರೆ.  ಮುದ್ದಣನ ‘ಜೋಗುಳ’ ಮೊದಲ ಪ್ರಬಂಧವೆಂದೂ, ಪಂಜೆಯವರ ‘ನನ್ನ ಚಿಕ್ಕತಾಯಿ’ (1900) ಕನ್ನಡದ ಮೊದಲ ಸಣ್ಣ ಕತೆಯೆಂದೂ, ‘ಕೇಸರೀ ವಿಲಾಸ’ (1895) ಮೊದಲ ಕನ್ನಡ ಕಾದಂಬರಿಯೆಂದೂ (ಶ್ರೀನಿವಾಸ ಹಾವನೂರರು ಅದು ತೆಲಗು ಭಾಷೆಯ ಅನುವಾದವೆಂದು ಈಚೆಗೆ ತೋರಿಸಿಕೊಟ್ಟಿದ್ದಾರೆ. ಒಂಭತ್ತನೇ ಶತಮಾನದ ಕನ್ನಮಯ್ಯ ಮೊದಲ ಕನ್ನಡ ನಾಟಕಾರನೆಂದೂ ಸಾರಿದ್ದಾರೆ.
 
ಪ್ರಾಚೀನ ಕರ್ನಾಟಕದ ಇತಿಹಾಸವನ್ನು ಕುರಿತು ಅದರಲ್ಲೂ ಶಾತವಾಹನ,  ಮತ್ತು ಕದಂಬ ಹಾಗೂ ಗಂಗರ ಇತಿಹಾಸವನ್ನು ಮೊದಲ ಬಾರಿಗೆ ಲೇಖಿಸಿದ ಶ್ರೇಯಸ್ಸು ಗೋವಿಂದ ಪೈಗಳಿಗೆ ಸಲ್ಲಬೇಕು.  ಆ ವರೆಗೆ ಲಭ್ಯವಿದ್ದ ಎಲ್ಲಾ ಭಾಷೆಗಳಲ್ಲಿನ ಶಾಸನಗಳನ್ನು ಆಧರಿಸಿ (ಪ್ರಾಕೃತ. ಪಾಲಿ, ಸಂಸ್ಕೃತ, ಮರಾಠಿ, ಕನ್ನಡ, ತಮಿಳು, ಒರಿಯಾ ಇತ್ಯಾದಿ) ಇಂದಿನ ಇತಿಹಾಸಕಾರರಿಗೆ ಅವುಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಅವರನ್ನು ಅಭ್ಯಾಸ ಮಾಡದೇ ಮುಂದೆ ಹೋಗುವಂತಿಲ್ಲ.  ಇಂಗ್ಲಿಷ್ ನಲ್ಲಿ ಬರೆದ ಐತಿಹಾಸಿಕ ಲೇಖನಗಳು ಅವರನ್ನು ಅಖಿಲಭಾರತ ವಿದ್ವಾಂಸ ಮಂಡಳಿಯಲ್ಲಿ ರಾರಾಜಿಸುವಂತೆ ಮಾಡಿತು.  ಗ್ರೀಕ್ ಪ್ರಹಸನದಲ್ಲಿ ಕನ್ನಡ ಶಬ್ದಗಳಿವೆ ಎಂಬುದನ್ನು ಇವರು ಗುರುತಿಸಿದ್ದನ್ನು ಈಚೆಗೆ ಶಿವಪ್ರಸಾದ ರೈ ಎನ್ನುವವರು ತುಳು ಎಂದು ತೋರಿಸಿಕೊಟ್ಟಿದ್ದಾರೆ.  ಇಷ್ಟಾದರೂ ಅವರು ಮಾಡಿದ ಸಾಧನೆ ನಗಣ್ಯವಾದುದಲ್ಲ.  ಇದರೊಂದಿಗೆ ಅವರು ಬರೆದ ‘ಕನ್ನಡಿಗರ ತಾಯಿ ಕವಿತೆಯ’ ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ, ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮ ದಾತೆಯೇ’ ‘ತನು ಕನ್ನಡ ಮನ ಕನ್ನಡ, ನುಡಿ ಕನ್ನಡ’ ಎಂಬುದರ ಮೂಲಕ ಕನ್ನಡ ತಾಯಿಗೆ ನಮನ ಸಲ್ಲಿಸಿ ಕನ್ನಡಿಗರು ನಿರಂತರವಾಗಿ ಅವರಿಗೆ ಕೃತಜ್ಞರಾಗಿ ಇರುವಂತೆ ಮಾಡಿದ್ದಾರೆ.
ನಮ್ಮಲ್ಲಿ ಈಚೆಗೆ ಕನ್ನಡ ಭಾಷಾಭಿಮಾನಿಗಳು, ತುಳು ಪ್ರೇಮಿಗಳು, ಕೊಂಕಣಿ ಭಕ್ತರು ಎಲ್ಲೆಲ್ಲೂ  ಕಂಡುಬರುತ್ತಾರೆ.  ಅವರಿಗೆ ತಮ್ಮ ಭಾಷೆ ಸಾಹಿತ್ಯ, ಇತಿಹಾಸಗಳ ಬಗ್ಗೆ ಇರುವ ಜ್ಞಾನ ನಿಗೂಢವಾದುದು ಇಂತಹವರು ಇಂದು ಮುಂದೂ ಎಂದೆಂದೂ ಗೋವಿಂದ ಪೈಗಳಿಂದ ಕಲಿಯಬೇಕಾದ ಪಾಠ ಬಹಳವಿದೆ.  ಒಂದು ಭಾಷೆಯ ಬಗೆಗಿನ ಪ್ರೇಮ ಇನ್ನೊಂದು ಭಾಷೆಯ ಬಗ್ಗೆ ನಮ್ಮನ್ನು ಕುರುಡರನ್ನಾಗಿ ಮಾಡಬೇಕಾದ ಅಗತ್ಯವಿಲ್ಲ ಎಂಬುದಕ್ಕೆ ಪೈ ಅವರೇ ಜೀವಂತ ಸಾಕ್ಷಿ.  ಭಾಷಾ ಭಾಂಧವ್ಯಕ್ಕೆ ಮಾದರಿ.  ಸಾಂಸ್ಕೃತಿಕ ರಾಯಭಾರಿ ಎಂದು ಇವರನ್ನು ಕರೆಯದೇ ಇನ್ನಾರನ್ನು ಕರೆಯಬೇಕು?
ಕಡಲಿನ ತಡಿಯಲ್ಲಿದ್ದ ಅವರು ಬೀಸಿದರೆ ಬೀಸಬೇಕು ಬಲೆಯನ್ನು ಕಡಲಿಗೆ ಎಂದು ಮಹತ್ವಾಕಾಂಕ್ಷೆಯಿಂದ ಪ್ರಾಚೀನ ಭಾರತದ ಇತಿಹಾಸಕ್ಕೂ ಲಗ್ಗೆ ಹಾಕಿದರು.  ಕ್ರಿಸ್ತ ಪೂರ್ವ ಮೂರನೆಯ ಶತಮಾನದಲ್ಲಿ ಇದ್ದ ಚಂದ್ರಗುಪ್ತ ಮೌರ್ಯ ತನ್ನು ಗುರು ಭದ್ರಬಾಹುವಿನೊಡನೆ ಹನ್ನೆರೆಡು ವರುಷಗಳ ಕ್ಷಾಮ ಬರುತ್ತದೆಂದು ಮುಂಗಂಡು ದಕ್ಷಿಣದ ಕಡೆಗೆ ಆಗಮಿಸಿದನೆಂಬ ಇತಿಹಾಸ ಪ್ರಸಿದ್ಧ ಸಂಗತಿಯ ಬಗ್ಗೆ ಗೋವಿಂದ ಪೈ ಅವರು ಸಂಶೋಧನೆ ನಡೆಸಿ ಅವನು ಚಂದ್ರಗುಪ್ತ ಮೌರ್ಯನಲ್ಲವೆಂದು ಉಜ್ಜಯನಿಯ ದೊರೆ ಸಂಪ್ರತಿ ಚಂದ್ರಗುಪ್ತನೆಂದು ಅವನ ಕಾಲ ಕ್ರಿಸ್ತ ಪೂರ್ವ250 ಎಂದೂ ವಿಸ್ತರಿಸಿದರು.  ಇದು ಭಾರತದ ಹಾಗೂ ಕರ್ನಾಟಕದ ಇತಿಹಾಸಗಳ ಮೇಲೆ ಪರಿಣಾಮ ಬೀರಿತು.  ಅಲ್ಲದೆ ಕನಿಷ್ಕವಂಶದ ಬಗೆಗೆ ಸಂಶೋಧನೆ ಮಾಡಿ ಶಕೆಯ ಕಾಲವನ್ನು ನಿರ್ಧರಿಸಿದರು. ಹೀಗಾಗಿ ಗೋವಿಂದ ಪೈ ಅಂದರೆ ಕಾಲನಿರ್ಣಯ, ಕಾಲ ನಿರ್ಣಯವೆಂದರೆ ಗೋವಿಂದ ಪೈ ಎಂಬ ಮಾತು ಪ್ರಚಲಿತಕ್ಕೆ ಬಂತು.  ಇದು ಕೇವಲ ರಾಜ ವಂಶಗಳಿಗೆ ಮಾತ್ರ ಮೀಸಲಾಗದೇ ಇತಿಹಾಸ ಪುರುಷರಾದ ಬುದ್ಧ, ಪೈಗಂಬರ್ ಮುಂತಾದವರಿಗೂ ಅನ್ವಯಿಸುತ್ತದೆ. ಬುದ್ಧ ಹುಟ್ಟಿದ್ದು ಕ್ರಿಸ್ತ ಪೂರ್ವ 581, ನಿರ್ವಾಣಗೊಂಡಿದ್ದು ಕ್ರಿಸ್ತ ಪೂರ್ವ 501, ವೈಶಾಖ ಶುಕ್ಲಪೂರ್ಣಿಮೆಯ ದಿನಗಳೇ ಎಂದು ಪತ್ತೆ ಮಾಡಿದ್ದಾರೆ.  
ಹೀಗೆ ಭಾರತದ ಇತಿಹಾಸಕ್ಕೂ ಕೈಹಚ್ಚಿದ ಗೋವಿಂದ ಪೈಗಳು ಕೇವಲ ಗತವೈಭವದಲ್ಲಿ ಮುಳುಗದೆ ವರ್ತಮಾನದ ಭಾರತಕ್ಕೂ ತಮ್ಮ ಸೃಜನಶೀಲ ಸಾಹಿತ್ಯದ ಮೂಲಕ ಸ್ಪಂದಿಸಿದ್ದಾರೆ.  ‘ಚಿತ್ರಭಾನು’ ಅಥವ ‘1942’ ಎನ್ನುವ ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದ ಯುವಕನೊಬ್ಬನ ಬಲಿದಾನದ ಚಿತ್ರವನ್ನು, ಅವನ ತಾಯಿಯ ಧೈರ್ಯವನ್ನು ಅದರಲ್ಲಿ ವಿಶಿಷ್ಟವಾದ ರೀತಿಯಲ್ಲಿ ಚಿತ್ರಿಸಿದ್ದಾರೆ.  ಅದರೊಂದಿಗೆ ಬ್ರಿಟಿಷರ ಕ್ರೌರ್ಯವನ್ನು ಬಯಲಿಗೆಳೆದಿದ್ದಾರೆ.  ಶ್ರೀನಿವಾಸ ಹಾವನೂರರು ಈ ನಾಟಕವನ್ನು ಕೃಷ್ಣಕುಮಾರ ಕಲ್ಲೂರರ ‘ಜಾಗೃತ ರಾಷ್ಟ್ರ’ ಎಂಬ  ನಾಟಕದೊಂದಿಗೆ ಇರುವ ಸಾಮ್ಯವನ್ನು ಗುರುತಿಸಿದ್ದಾರೆ. ಈಚೆಗೆ ಸಭೀಹಾ ಭೂಮಿಗೌಡ ಪೈಗಳು ನಾಟಕದಲ್ಲಿ ತಂದಿರುವ ಕಾಲೈಕ್ಯ ಮತ್ತು ಕ್ರಿಯೈಕ್ಯಗಳಿಂದ ವಿಶೇಷವಾದದ್ದೇನೂ ಇಲ್ಲಿ ಸಾಧಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.  ಇಂದಿನ ರಂಗಭೂಮಿಯ ಪರಿಕಲ್ಪನೆಯನ್ನು ಅರವತ್ತು ವರುಷಗಳಿಗೂ ಮೊದಲಿನ ನಾಟಕಕ್ಕೂ ಅನ್ವಯಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಭವವಾಗುತ್ತದೆ.  ಆದರೆ ಅದಕ್ಕೂ ಮುನ್ನವೇ ಪೈಗಳು ‘ಮಾತೃಭೂಮಿರಿಷ್ಟಕ’, ‘ಭಾರತ ಭಾಗ್ಯವಿಧಾತ’ ಮುಂತಾದ ಕವಿತೆಗಳ ಮೂಲಕ ತಮ್ಮ ಸ್ವಾತಂತ್ರ್ಯ ಚಳವಳಿಯ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.
ಅಂದಿನ ಸ್ವಾತಂತ್ರ್ಯದ ಅದಿದೈವವಾದ ಗಾಂಧೀಜಿಯವರ ಬಗೆಗೆ ಅವರಿಗೆ ಅಪಾರವಾದ ಭಕ್ತಿ.  ‘ಮಹಾತ್ಮರ ಉಪವಾಸ’ ಎಂಬ ಕವಿತೆಯಿಂದ (1921) ಪ್ರಾರಂಭವಾಗಿ ಅದರ ತರುವಾಯ ‘ಮಹಾತ್ಮ ನೀ ಇನ್ನಿನಿಸು ದಿನ ಇರಬೇಕಿತ್ತು’ (1948) ಎನ್ನುವ ಕವಿತೆಯ ವರೆಗೂ ಅವರ ಮಹಾತ್ಮಗಾಂಧಿಯನ್ನು ಕುರಿತ ಕಾವ್ಯ ರಚನೆ ನಡೆದಿದೆ.  ಗಾಂಧೀಜಿಯವರ ಕೊನೆಯ ದಿನವನ್ನು ಕುರಿತು ಕಾವ್ಯ ರಚನೆಯನ್ನು ಪ್ರಾರಂಭಿಸಿದರಾದರೂ ಅದನ್ನು ಪೂರೈಸಲಾಗಲಿಲ್ಲ.
ಆದರೆ ಅವರದು ಗಾಂಧಿಯನ್ನು ಕುರಿತ ಕುರುಡು ಭಕ್ತಿಯಾಗಿರಲಿಲ್ಲ, ಭಾರತದ ಇಬ್ಭಾಗಕ್ಕೆ ಗಾಂಧಿ ಒಪ್ಪಿಗೆ ಇತ್ತದ್ದು ಅವರಿಗೆ ಸಹನೆಯಾಗಲಿಲ್ಲ.  ಆದರೆ ಅದು ಗಾಂಧಿಯವರನ್ನು ಕುರಿತ ಗೌರವಕ್ಕೆ ಧಕ್ಕೆ ಬರಲಿಲ್ಲ.  ಸ್ವಾತಂತ್ರ್ಯ ಬಂದಾಗ ಎಲ್ಲರಂತೆ ಸಂಭ್ರಮಿಸಿ ಅವರು ಸ್ವಾಗತಿಸಿದರೂ ನಂತರದ ಎರಡೇ ವರುಷಗಳಲ್ಲಿ ಅವರಿಗೆ ಭ್ರಮನಿರಸನ ಉಂಟಾಯಿತು.  ಅವರಿರುವವರೆಗೂ ಅದು ಮುಂದು ವರೆಯಿತೇ ಹೊರತು ಕಡಿಮೆಯಾಗಲಿಲ್ಲ.  ಪ್ರತಿ ವರುಷದ ಸ್ವಾತಂತ್ರೋತ್ಸವದ ಸಂದರ್ಭದಲ್ಲೂ ಅವರು ಈ ನೋವನ್ನು , ಅಸಹಾಯಕತೆಯನ್ನು ವಿಷಾದದಿಂದ ತೋಡಿಕೊಂಡಿದ್ದಾರೆ.  ಅದರಂತೆ ಕಾಸರಗೋಡು ಕೇರಳದ ಪಾಲಾದದ್ದು ಅವರಿಗೆ ಅಪಾರವಾದ ನೋವನ್ನು ತಂದಿತು.  ಅವರಿರುವವರೆಗೂ ಮಂಜೇಶ್ವರ ದಕ್ಷಿಣ ಕನ್ನಡ ಎಂದೇ ಅವರು ಬರೆಯುತ್ತಿದ್ದರು.
ಹೀಗೆ ಭೂತದಿಂದ ವರ್ತಮಾನಕ್ಕೆ ವರ್ತಮಾನದಿಂದ ಭೂತಕ್ಕೆ ಲಾಲಿಯಾಡುವ ಅವರ ಸಾಹಿತ್ಯ ಮತ್ತು ಸಂಶೋಧನೆಗಳು ಕನ್ನಡದ ಮಟ್ಟಿಗೆ ಅಪೂರ್ವವಾದ ಸಾಧನೆಗಳಾಗಿವೆ.  ಆದರೆ ಅವರಿಗೆ ತಮ್ಮ ಸಾಧನೆಯ ಬಗ್ಗೆ, ಕಾವ್ಯದ ಬಗ್ಗೆ ಯಾವುದೇ ಭ್ರಮೆಗಳಿರಲಿಲ್ಲ.  ಎಲ್ಲಿಂದಲೋ ಹಾರಿ ಬಂದ ಗಿಳಿಗಳು ಕೆಲಕಾಲ ತೋಟದಲ್ಲಿ ತಂಗಿದ್ದ ಮಾತ್ರಕ್ಕೆ ಅವು ಆ ತೋಟಿಗನದಾಗುವುವೇ ಎನ್ನುವ ನಿರ್ಲಿಪ್ತತೆಯನ್ನು ಅವರು ತಮ್ಮ ‘ಗಿಳಿವಿಂಡು’ ಸಂಕಲನದ ಮುನ್ನಡಿಯಲ್ಲಿ ಪ್ರಕಟಿಸಿದ್ದರು.   1962 ರಲ್ಲಿ ಜಿ.ಪಿ. ರಾಜರತ್ನಂ ರವರು ಅದರ ಪುನರ್ ಮುದ್ರಣಕ್ಕೆ ಅನುಮತಿ ಕೋರಿ ಅವರಿಗೆ ಪತ್ರ ಬರೆದಾಗ ಅವರಿಗೇ ವಿಶಿಷ್ಟವಾದ ನೇರಳೇ ಬಣ್ಣದ ಶಾಯಿಯಲ್ಲಿ ಪತ್ರಬರೆದು ಅದೇ ಅಭಿಪ್ರಾಯವನ್ನು ಪುನರುಚ್ಛರಿಸಿ ತಮ್ಮ ಹಿಂಜರಿಕೆಯನ್ನು ವ್ಯಕ್ತ ಪಡಿಸಿದ್ದರು.  ಅವರ ಮಟ್ಟಿಗೆ ಕಾವ್ಯ ಎನ್ನುವುದು ‘ಸ್ವಾಂತ ಸುಖಾಯ’ಕ್ಕೆ ಮಾತ್ರ.
ಅವರ ‘ಎಣ್ಣೆ ಬಟ್ಟಲು’ ಎನ್ನುವ ಕಥನ ಕವಿತೆಯೊಂದರಲ್ಲಿ  ನಾರದನು ವಿಷ್ಣುವಿಗೆ ತನ್ನ ಮೆಚ್ಚಿನ ಭಕ್ತನಾರು ಎಂದು ಕೇಳಿದಾಗ ಅವನು ಒಬ್ಬ ರೈತಾಪಿಯನ್ನು ತೋರಿಸುತ್ತಾನೆ.  ಅದಕ್ಕೆ ನಾರದ ಅವನನ್ನು ಭವಿ ಎಂದು ತಿರಸ್ಕರಿಸುತ್ತಾನೆ.  ಆಗ ವಿಷ್ಣು ನಾರದನ ಕೈಗೆ ಒಂದು ಎಣ್ಣೆ ಬಟ್ಟಲನ್ನು ಕೊಟ್ಟು ಅದನ್ನು ಚೆಲ್ಲದಂತೆ ನೋಡಿಕೋ ಎಂದು ಹೇಳುತ್ತಾನೆ.  ದಿನವೆಲ್ಲಾ ತಿರುಗಾಡಿ ಬಂದ ನಾರದನನ್ನು ನೀನು ಎಷ್ಟುಸಲ ನನ್ನನ್ನು ನೆನೆದೆ ಎಂದು ಕೇಳುತ್ತಾನೆ.  ಆಗ ನಾರದ ‘ಅದು ಹೇಗೆ ಸಾಧ್ಯ ಒಂದು ಸಲವೂ ಇಲ್ಲ’ ಎನ್ನುತ್ತಾನೆ.  ಆ ರೈತನಾದರೋ  ತನ್ನ ಹೊಲ ಮನೆಗಳ ಚಿಂತೆಯಲ್ಲಿ ದಿನಕ್ಕೆ ಎರಡು ಸಲವಾದರೂ ನನ್ನನ್ನು ನೆನೆಯುತ್ತಾನೆ.  ಯಾರು ನಿಜವಾದ ಭಕ್ತರು? ಎಂದು ನಾರದನನ್ನು ಪ್ರಶ್ನಿಸುತ್ತಾನೆ ಆಗ ನಾಚಿಕೆಯಿಂದ ನಾರದ ತಲೆತಗ್ಗಿಸುತ್ತಾನೆ.  ಮಾಡಬೇಕಾದ ಕೆಲಸವನ್ನು ಬಿಟ್ಟು ಸದಾ ದೇವರ ಸ್ಮರಣೆಯಲ್ಲಿ ಮುಳುಗುವವರೆಗೆ ಪೈ ಅವರು ಕೊಟ್ಟ ಉತ್ತರ ಇದು.
1950 ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮುಂಬಯಿಯಲ್ಲಿ ನಡೆದಾಗ ಅದರ ಅಧ್ಯಕ್ಷತೆ ವಹಿಸಬೇಕೆಂದು ಒಪ್ಪಿಸಲು ಡಿ.ವಿ.ಜಿ. ಮತ್ತು ಎಂ.ಆರ್. ಶ್ರೀ ಅವರು ಶಿವರಾಮ ಕಾರಂತರ ಬಳಿ ಬಂದು ‘ಅವರು ಒಪ್ಪಿಯಾರೆ? ಎಂದು ಕೇಳಿದರು. ನೀವು ಹೋಗಿ ಕೇಳಿ ಅವರನ್ನು, ಅವರು ಒಪ್ಪಿದರೂ ಒಪ್ಪಬಹುದು’ ಎಂದರು ಕಾರಂತರು. ಆಗ ಕಾರಂತರು ಕೊಟ್ಟ ಭರವಸೆಯ ಮೇಲೆ ಅವರು ಮಂಜೇಶ್ವರಕ್ಕೆ ಬಂದು ಗೋವಿಂದ ಪೈ ಗಳಲ್ಲಿ ತಮ್ಮ ಮನವಿಯನ್ನು ಸಲ್ಲಿಸಿದರು.  ಎಂ. ಆರ್. ಶ್ರೀ ಅವರ ವಿನಯ ಮತ್ತು ಆತ್ಮೀಯತೆಗೆ ಮಾರು ಹೋದ ಅವರು ಬೇರೆ ದಾರಿಯಿಲ್ಲದೆ ಒಪ್ಪಿಕೊಂಡರು.  ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಪದವಿಯನ್ನು ಏರುವ ಮುನ್ನ ಒಮ್ಮೆ ಸಭೆಯಲ್ಲಿದ್ದವರ ಕಡೆಗೆ ಕಣ್ಣಾಡಿಸಿದರು.  ಆಗ ಅವರ ಕಣ್ಣಿಗೆ ಕರ್ನಾಟಕ ಕುಲಪುರೋಹಿತ ಶ್ರೀ ಆಲೂರ ವೆಂಕಟರಾಯರು ಕಂಡರು.  ನೇರವಾಗಿ ಅವರ ಬಳಿಗೆ ಹೋಗಿ ಅವರ ಕಾಲಿಗೆ ನಮಸ್ಕರಿಸಿದರು.  ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ ಹರಿಯಿತು.  ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸ ದಲ್ಲಿಯೇ ಇದೊಂದು ನ ಭೂತೋ ನ ಭವಿಷ್ಯತಿ ಯಾದ ಘಟನೆ.  ಅವರ ವಿನಮ್ರ ವ್ಯಕ್ತಿತಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ.
ಶ್ರೀನಿವಾಸ ಹಾವನೂರರ ಹೇಳಿಕೆಯಂತೆ ಅವರ ಸಂಶೋಧನ ಲೇಖಗಳ ಒಟ್ಟು ಮೊತ್ತ ಮೂರು ಸಾವಿರದ ಐನೂರು ಅಚ್ಚಿನ ಪುಟಗಳಷ್ಟು.  ಅವು ಈಗ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಕನ್ನಡ ಮತ್ತು ಇಂಗ್ಲಿಷ್ ಗಳಲ್ಲಿ ಎರಡು ಸಂಪುಟಗಳಾಗಿ ಹೊರಬಂದಿವೆ. ಹಾಗೆ ಹೊರಬಂದಾಗ ಹಾ.ಮಾ. ನಾಯಕರು ಅದನ್ನು ಇಪ್ಪತ್ತನೇ ಶತಮಾನದ ಮಹಾನ್ ಘಟನೆ ಎಂದೇ ವರ್ಣಿಸಿದ್ದರು.
ಗೋವಿಂದ ಪೈ ಗಳಾದರೋ ತಮ್ಮನ್ನು ತಾವು’ಮಹಾನ್ ಸೋಮಾರಿ’ ಯೆಂದು, ತಾವು ಲೇಖನಿ ಹಿಡಿಯುವುದೇ ‘ಆಟಿಗೊಮ್ಮೆ, ಸೋಣಕ್ಕೊಮ್ಮೆ’ ಎಂದು ಕರೆದು ಕೊಂಡಿದ್ದಾರೆ.  ಅಂತಹವರೇ ಮಹಾನ್ ಸೋಮಾರಿಯಾದರೆ ಉಳಿದವರ ಪಾಡೇನು? ಅವರ ಬಹುತೇಕ ಪುಸ್ತಕಗಳು ಪ್ರಕಟವಾದ್ದು ಅವರ ಮರಣಾನಂತರವೇ.  ಅಲ್ಲಲ್ಲಿ ಚದುರಿಹೋಗಿದ್ದ ಅವರ ಕೃತಿಗಳನ್ನು ಪಟ್ಟಿಮಾಡಿ, ಪುಸ್ತಕದ ರೂಪದಲ್ಲಿ, ಸಂಪುಟಗಳ ರೂಪದಲ್ಲಿ ಹೊರಗೆ ತಂದ ಶ್ರೇಯಸ್ಸು ಕಾವ್ಯಾಲಯದ ಪ್ರಕಾಶಕರಿಗೆ, ಗೋವಿಂದ ಪೈ ಸಂಶೋಧನ ಕೇಂದ್ರಕ್ಕೆ , ಅವರ ಸಮಗ್ರ ವಾಙ್ಮಯ ಸೂಚಿಯನ್ನು ಹೊರತಂದ ಭಗೀರಥ ದ್ವಯರಾದ ಶ್ರೀನಿವಾಸ ಹಾವನೂರ ಮತ್ತು ಎಮ್. ವಿ. ನಾಯಕ್ ಅವರಿಗೆ ಸಲ್ಲಬೇಕು.
ಮಂಜೇಶ್ವರ ಗೋವಿಂದ ಪೈ ಅವರನ್ನು ನೆನೆಸಿಕೊಂಡಾಗ ಪಕ್ಕದಲ್ಲಿದ್ದ ಕಡಲು ಅದರ ಆಳ ಮತ್ತು ವಿಸ್ತಾರಗಳು, ಅವರ ಕೃಷ್ಣೆ ತೀರಿಕೊಂಡಾಗ ಅವರ ನೆನಪಿಗಾಗಿ ಬರೆದ ಮೂವತ್ತೈದು ‘ಗೊಮ್ಮಟ ಜಿನಸ್ತುತಿ’ ಪದ್ಯಗಳು ನೆನಪಿಗೆ ಬರುತ್ತವೆ.  ಕಡಲನ್ನು ಕಡಲಿನ ಜೊತೆಗಲ್ಲದೆ, ಗೊಮ್ಮಟನನ್ನು ಗೊಮ್ಮಟನ ಜೊತೆಗಲ್ಲದೆ, ಗೋವಿಂದ ಪೈ ಗಳನ್ನು ಗೋವಿಂದ ಪೈ ಗಳ ಜೊತೆಗಲ್ಲದೆ ಇನ್ನಾರನ್ನು ಹೋಲಿಸಲು ಸಾಧ್ಯ? ಕನ್ನಡಕ್ಕೆ ಪೈ ಒಬ್ಬರೇ ಎನ್ನುವಂತೆ ಕನ್ನಡಕ್ಕೆ ಗೋವಿಂದ ಪೈ ಒಬ್ಬರೇ! ಅವರು ಕನ್ನಡದ ಮೊದಲ ಉಮರ್ ಖಯಾಂ.
1900 ರಲ್ಲಿ ಪ್ರಾರಂಭಿಸಿ 1962 ರವರೆಗೆ ಅರವತ್ತೆರೆಡು ವರುಷಗಳ ಕಾಲ ನಿರಂತರವಾಗಿ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಗೋವಿಂದ ಪೈ ಅವರು 1963 ರಲ್ಲಿ ಅದನ್ನು ತಮ್ಮ ಮರಣದ ಮೂಲಕ ನಿಲ್ಲಿಸಿದರೂ ಅವರು ಪ್ರಾರಂಭಿಸಿದ ಕನ್ನಡ ಸಾರಸ್ವತ ಯಾತ್ರೆಯನ್ನು ಮುಂದುವರೆಸುವುದು ನಮ್ಮಲ್ಲರ ಹೊಣೆಗಾರಿಕೆಯಾಗಿದೆ. ಅದೇ ಬಹುಷಃ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಶಬ್ದಾಂಜಲಿ.
 

‍ಲೇಖಕರು Avadhi Admin

23 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading