ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರಿಗೆ ಕೃತಜ್ಞತೆಗಳು..

k puttaswamy

ಕೆ ಪುಟ್ಟಸ್ವಾಮಿ 

ದೇಜಗೌ ನಿಧನರಾಗಿದ್ದಾರೆ.

ನಾನು ಅವರನ್ನು ಎಂದೂ ಭೇಟಿಯಾಗಿದ್ದಿಲ್ಲ. ದಿವಂಗತ ಶಂಕರೇಗೌಡರ ಎಪ್ಪತ್ತನೆ ಹುಟ್ಟುಹಬ್ಬದ ಸಮಾರಂಭಕ್ಕೆ ಮಂಡ್ಯಕ್ಕೆ ಬಂದಿದ್ದ ಅವರನ್ನು ದೂರದಿಂದ ನೋಡಿದ್ದೆ. ಆ ವೇಳೆಗೆ ಅವರ ಬಗ್ಗೆ ಸಾಕಷ್ಟು ಆರೋಪಗಳನ್ನು ಕೇಳಿದ್ದೆ. ಅವರು ಕುವೆಂಪು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡರು; ಕುವೆಂಪು ಭಜನಾ ಮಂಡಳಿಯನ್ನು ಸ್ಥಾಪಿಸಿದರು ಎಂಬುದೊಂದು.

ಮೈಸೂರು ವಿಶ್ವ ವಿದ್ಯಾಲಯವನ್ನು ಒಕ್ಕಲಿಗರ ಅಡ್ಡೆಯಾಗಿ ಪರಿವರ್ತಿಸಿದರು ಎಂಬುದು ಮತ್ತೊಂದು.

ಚಿತ್ರ ಕ್ರುಪೆ: ಲೀಲಾ ಅಪ್ಪಾಜಿ

ಚಿತ್ರ ಕ್ರುಪೆ: ಲೀಲಾ ಅಪ್ಪಾಜಿ

ಆದರೆ ನನ್ನ ಆರಂಭದ ಓದನ್ನು ರೂಪಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಅವರು ಅಗ್ರಗಣ್ಯರಾಗಿದ್ದರು ಎಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. ನಾನು ಎನ್. ನರಸಿಂಹಯ್ಯ ಅವರ ಕಾದಂಬರಿಗಳನ್ನು ಓದುವುದಕ್ಕೂ ಮೊದಲು ಆರನೇ ತರಗತಿಯಲ್ಲಿರುವಾಗ ಅವರ ’ಕನ್ನಡ ಕಡುಗಲಿ ಕುಮಾರರಾಮ’ ಎಂಬ ಕೃತಿಯನ್ನು ಅದೆಷ್ಟುಬಾರಿ ಓದಿದೆನೋ ಲೆಕ್ಕವಿಲ್ಲ. ಅದು ಆ ಕಾಲಕ್ಕೆ ಹೈಸ್ಕೂಲು ವಿದ್ಯಾರ್ಥಿಗಳಿಗೆ ನಾನ್ ಡೀಟೇಲ್ಡ್ ಪಠ್ಯವಾಗಿತ್ತು.

ಸಹಪಾಠಿಯೊಬ್ಬರ ಮನೆಯಲ್ಲಿ ದೊರೆತ ಪುಸ್ತಕ. ಅದು ಅವರಣ್ಣನದು. ಕಂಪಿಲರಾಯನ ಮಗ ಕುಮಾರರಾಮನ ಸಾಹಸ, ಅವನ ನೆಚ್ಚಿನ ಕುದುರೆ ಬೊಲ್ಲ, ಅವನನ್ನು ಮೋಹಿಸಿ ತಿಸ್ಕೃತಗೊಳ್ಳುವ ಚಿಕ್ಕಮ್ಮ- ಕಂಪಿಲರಾಯನ ಮೂರನೆ ಹೆಂಡತಿ ಮಾತಂಗಿನಿ, ಆಕೆಯ ಚಾಡಿಯಿಂದ ಕುಮಾರರಾಮನಿಗೆ ವಿಧಿಸುವ ಮರಣದಂಡನೆ ಸುಲ್ತಾನನ ದರ್ಬಾರಿನಲ್ಲಿ ಪುಟಿದು ನಿಲ್ಲುವ ಸಾಹಸಿ, ಕೊನೆಯ ಯುದ್ಧದಲ್ಲಿ ಗಾಯಗೊಂಡ ಅವನ್ನು ರಣರಂಗದಿಂದ ಹೊತ್ತೊಯ್ಯುವ ನೆಚ್ಚಿನ ಕುದುರೆ ಬೊಲ್ಲನ ಸ್ವಾಮಿನಿಷ್ಠೆ- ಹೀಗೆ ಸಾಲು ಸಾಲು ಚಿತ್ರಗಳು ಇನ್ನೂ ನೆನಪಿನಲ್ಲಿವೆ- ನಲವತ್ತೆಂಟು ವರ್ಷಗಳು ಸಂದರೂ.

ಅನಂತರ ಏಳನೇ ತರಗತಿಯಲ್ಲಿರುವಾಗ ಮೇರಿ ಕ್ಯೂರಿಯ ಜೀವನಚರಿತ್ರೆ ಸಿಗಬೇಕೇ? ಅದೂ ದೇಜಗೌ ಅವರದ್ದು. ಆ ಪುಸ್ತಕ ಓದಿದ ನಂತರ ಮೇಡಂ ಕ್ಯೂರಿ ನನ್ನ ಮೇಲೆ ಗಾಢ ಪ್ರಭಾವ ಬೀರಿದಳು,. ಕ್ಯೂರಿ ಮೇಡಂ ಬಗ್ಗೆ ಬೇರೆ ಸಾಕಷ್ಟು ಓದಿರುವೆನಾದರೂ ದೇಜಗೌ ಪುಸ್ತಕ ಕೊಟ್ಟ ಮುದ ಯಾವುದರಿಂದಲೂ ದಕ್ಕಿಲ್ಲ.

ಮುಂದೆ ಕೃಷಿ ಪದವಿ ಸೇರಿದಾಗ ಎರಡನೇ ಟ್ರೈಮೆಸ್ಟರ್ ಬ್ರೇಕ್‌ನಲ್ಲಿ ಎಂಟುವಾರ ರಜೆ ಸಿಕ್ಕಿತ್ತು. ನಮಗೆ ಇಂಗ್ಲಿಷ್ ವ್ಯಾಕರಣ ಹೇಳಿಕೊಡುತ್ತಿದ್ದ ಪ್ರೊ. ಎಚ್ ಎ ರಾಮಕೃಷ್ಣ ಅವರ ಬಳಿ ಹೋಗಿ ಇಂಗ್ಲಿಷ್ ಇಂಪ್ರೂವ್ ಮಾಡಿಕೊಳ್ಳಲು ಸರಳವಾದ ಸಾಹಿತ್ಯ ಕೃತಿಗಳ ಪಟ್ಟಿ ಕೊಡುವಂತೆ ಕೇಳಿದಾಗ ಅವರು ಟೇಲ್ಸ್  ಫ್ರಂ ಶೇಕ್‌ಸ್ಪಿಯರ್, ದಿ ಗೈಡ್, ಇತ್ಯಾದಿಗಳನ್ನು ಪಟ್ಟಿ ಮಾಡಿಸುತ್ತಾ ಮೊದಲು ಹೋರಾಟದ ಬದುಕು ಓದು; ಲೈಬ್ರರಿಯಲ್ಲಿ ಸಿಗುತ್ತೆ ಎಂದು ರೆಕಮೆಂಡ್ ಮಾಡಿದರು. ದಪ್ಪ ದಪ್ಪ ಇಂಗ್ಲಿಷ್ ಪುಸ್ತಕಗಳನ್ನು ಎರವಲು ಪಡೆದು ಊರಿನ ಗೆಳೆಯರಿಗೆ ದಂಗು ಬಡಿಸಲು ಹಾಕಿಕೊಂಡಿದ್ದ ಸಂಚನ್ನು ಹೀಗೆ ವಿಫಲಗೊಳಿಸಿದರು ಅವರು.

ದೇಜಗೌ ಅವರ ಆತ್ಮ ಕತೆ ಹೋರಾಟದ ಬದುಕನ್ನು ಊರಿಗೆ ಕೊಂಡೊಯ್ದು ಓದಿ ನಾನೇ ದಂಗು ಬಡಿದು ಹೋದೆ. ಅವರ ಬಡತನ, ಹಿನ್ನೆಲೆ ನಮಗಿಂತಲೂ ಘೋರವಾಗಿತ್ತು. ಕುರಿಕಾಯಲು ಹೋಗುತ್ತಿದ್ದ ಹುಡುಗನೊಬ್ಬ ಅಕ್ಷರದ ಸಂಪರ್ಕಕ್ಕೆ ಬಂದದ್ದು, ದುಡಿದೂ ದುಡಿದೂ ಅಂಧರಾದ ತಂದೆ, ಕಿತ್ತು ತಿನ್ನುವ ಬಡತನದಲ್ಲೂ ಕಲಿಕೆಯ ಬತ್ತದ ಉತ್ಸಾಹ, ಕನ್ನಡವನ್ನು ಕಟ್ಟಲು ಮಾಡಿದ ಹೋರಾಟ, ಆಡಳಿತದಲ್ಲಿ ತಂದ ಸುಧಾರಣೆ ಇವೆಲ್ಲಕ್ಕಿಂತ ಮುಖ್ಯವಾಗಿ ಕನ್ನಡವನ್ನು ಕನ್ನಡಿಸುವ ಅವರ ಮೋಹಕ ಸಾಹಿತ್ಯ ಶೈಲಿ ನನ್ನನ್ನು ಗಾಢವಾಗಿ ಸೆಳೆದವು.

ಟಾಲ್ಸ್ಟಾಯ್‌ನನ್ನು ಕನ್ನಡಕ್ಕೆ ಪರಿಚಯಿಸಿದ ಅವರ ಪ್ರತಿಭೆ ನಿಜವಾಗಲೂ ಮೇಲ್ಮಟ್ಟದ್ದು. ಅವರ ಅನುವಾದಿತ ಕೃತಿಗಳನ್ನು ಅಭ್ಯಾಸ ಮಾಡುತ್ತಾ ನನ್ನ ಬರಹವನ್ನೂ ಸುಧಾರಿಸಿಕೊಂಡಿದ್ದೇನೆ. ಆದರೆ ನಾವು ಬೆಳೆದಂತೆಲ್ಲಾ ಅವರ ಬಗ್ಗೆ ಬರೀ ನೆಗೆಟಿವ್ ಮಾತುಗಳೇ ಕೇಳಿ ಬಂದುದರಿಂದ ಅವರ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲಾಗಿಲ್ಲ. ಕುಲಪತಿಯಾದ ತಮ್ಮ ಮಗನ ಮೇಲೆ ಆರೋಪಗಳು ಬಂದಾಗ ಅವರು ಅದರ ವಿರುದ್ಧ ನಿರಶನ ಕುಳಿತದ್ದು ಧೃತರಾಷ್ಟ್ರ ಪ್ರೇಮದಂತೆ ಕಂಡಿತ್ತು.

ಆದರೆ ಅವುಗಳಾಚೆಗೆ ನಮ್ಮ ಓದನ್ನು ಪ್ರೇರೇಪಿಸಿದ, ವಿಸ್ತರಿಸಿದ, ಕನ್ನಡ ಭಾಷೆ ಮತ್ತು ನಾಡಿನ ಬಗ್ಗೆ ಅಭಿಮಾನವುಕ್ಕಿಸಿದ ಅವರಿಗೆ ಕೃತಜ್ಞತೆಗಳು ಸಲ್ಲಲೇಬೇಕು.

‍ಲೇಖಕರು Admin

4 June, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading