ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅವನು ಗಜಲ್-ಅವಳು ಶಾಯರಿ' – ವೈ ಕೆ ಸಂಧ್ಯಾಶರ್ಮ

ವೈ ಕೆ ಸಂಧ್ಯಾಶರ್ಮ

ವಿಶಿಷ್ಟ ಕಾವ್ಯಾನುಭವದಲ್ಲಿ ತೇಲಿಹೋದ ಒಂದು ಹೊಸ ಅನುಭವ ನೀಡಿದ `ಅವನು ಗಜಲ್-ಅವಳು ಶಾಯರಿ’ ನಾಟಕ ವಿನಯ್ ಶಾಸ್ತ್ರಿ ನಿರ್ದೇಶನದಲ್ಲಿ, ಬೆಂಗಳೂರಿನ ಕೆ.ಎಚ್. ಕಲಾಸೌಧದಲ್ಲಿ ಪ್ರದರ್ಶಿತವಾಯಿತು. ನವಿರಾದ ಹಾಸ್ಯದ ಸರಳ ನಾಟಕ ಪ್ರಸಂಗ. ಮೊದಲಿನಿಂದ ಕಡೆಯವರೆಗೂ ಕುತೂಹಲ ಕಾಯ್ದಿರಿಸಿಕೊಂಡು ಬಂದಂಥ ಪ್ರೇಮ ಕಥೆಯ ಹೂರಣವನ್ನು ಒಳಗೊಂಡ ಭಿನ್ನ ಬಗೆಯ ಪ್ರಯೋಗ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಕವಿತೆಯಲ್ಲಿಯೇ ಸಂಭಾಷಿಸುವ ಹುಡುಗ-ಹುಡುಗಿ ವಿರುದ್ಧ ಧ್ರುವಗಳು. ಹುಡುಗನಿಗೆ ಕ್ರಾಂತಿ, ಸಮಾನತೆ, ಸಾಮಾಜಿಕ ಕಳಕಳಿ, ಹೋರಾಟ-ಬಂಡಾಯಗಳ ಮನೋಭಾವ. ಅವನ ಪಕ್ಕದ ಮನೆ ಹುಡುಗಿ ಪುರುಷ ದ್ವೇಷಿ, ಗಂಡಸರು ಕಪಟಿಗಳು,ವಂಚಕರು,ಸ್ವಾರ್ಥಪರರು ಎಂಬ ಧೋರಣೆಯಿಂದ ಅವಳಿಗೆ ಗಂಡಸರೆಂದರೆ ಮಹಾ ದ್ವೇಷ.

ಹುಡುಗನ ತಾಯ್ತಂದೆಗಳು ಅವನಿಗೆ ಮದುವೆ ಮಾಡಲು ಪ್ರಯತ್ನಿಸುತ್ತಲೇ ಇದ್ದು ವಿಫಲರಾಗಿರುತ್ತಾರೆ. ಕಾರಣ ಅವನ ಬಂಡಾಯದ ವ್ಯಗ್ರ ಬಿಗಿ ನಡವಳಿಕೆ ಮತ್ತು ಅವನಾಡುವ ವಿಚಿತ್ರ ಕಾವ್ಯಭಾಷೆ ಕಂಡು ಹೆಣ್ಣು ಹೆತ್ತವರು ಹೆಣ್ಣು ಕೊಡಲು ನಿರಾಕರಿಸುತ್ತಿರುತ್ತಾರೆ. ಆಗ ಪಕ್ಕದ ಮನೆಗೆ ಹೊಸದಾಗಿ ಬಂದ ಆ ವಿಚಿತ್ರ ಹುಡುಗಿಯೂ ಗಂಡಸರನ್ನು ಕುಟುಕುವ ಕವಿತೆಗಳಲ್ಲಿಯೇ ಸಂಭಾಷಿಸುವ ಪರಿಪಾಠದವಳು. ತಾತ್ವಿಕವಾಗಿ ಇಬ್ಬರಿಗೂ ಮೊದಲ ದಿನ ಘರ್ಷಣೆಯುಂಟಾಗಿ ಹಾವು-ಮುಂಗಸಿಯಂತಾಡಿದರೂ, ಪರಸ್ಪರ ನಿಷ್ಠುರ ಕಾವ್ಯ ಮಾಧುರ್ಯ ಬಂಧುರದಲ್ಲಿ ಸಿಲುಕಿ, ಯೌವ್ವನ ಸಹಜ ಆಕರ್ಷಣೆಯಿಂದ ಮನಸೋತು ಪ್ರೇಮಪಾಶದಲ್ಲಿ ಬಂಧಿತರಾಗುವುದು ಈ ಪ್ರಸಂಗದ ತಿರುವು.

ಅವರಿಬ್ಬರ ಅನುರಾಗ ಚೆಂದದ ಕವಿತೆಗಳ ಗಾಯನದಲ್ಲಿಯೇ ಪಲ್ಲವಿಸುತ್ತದೆ. ಅವರಿಬ್ಬರ ತಾಯಂದಿರಿಗೆ ಸದ್ಯ ತಮ್ಮ ವಿಚಿತ್ರ ಮಕ್ಕಳು ಮದುವೆಗೆ ಸಮ್ಮತಿಸಿದರೇ ಸಾಕು ಎಂಬ ಕಾತುರ. ತಂದೆಯಂದಿರಿಗೆ ಮಾತಿನ ಚಕಮುಕಿಯಲ್ಲಿ ತಿಕ್ಕಾಟ. ಹೀಗಾಗಿ ಅವಳ ತಂದೆಯ ವಿರೋಧ. ಅವನಂತೆಯೇ ಅವನ ಬಂಡಾಯದ ಗೆಳೆಯರಿಬ್ಬರು ಮೊದಲು ಅವನಂತೆ ಬಿರುಸಿನ ಭಾಷಣ ಮಾಡುತ್ತಿದ್ದವರು, ಅವನಲ್ಲಿ ಬದಲಾವಣೆ ಕಂಡು, ಅವನ ಪ್ರೇಮಪ್ರಕರಣದಿಂದ ಪ್ರಭಾವಿತರಾಗಿ ತಾವೂ ವಯಸ್ಸಿನ ಅಯಸ್ಕಾಂತಕ್ಕೊಳಗಾಗಿ ಮೆತ್ತಗಾಗುತ್ತಾರೆ. ಇದನ್ನು ನಿರ್ದೇಶಕರು ಬಹು ಮಾರ್ಮಿಕವಾಗಿ ನಿರೂಪಿಸಿದ್ದಾರೆ. ಇಡೀ ನಾಟಕ ಕಾವ್ಯಮಯವಾಗಿ, ನಗೆಯುಕ್ಕಿಸುವ ಸಂಭಾಷಣೆಗಳಿಂದ ಹಗುರಾಗಿ ಸಾಗುತ್ತ ಸುಖಾಂತ್ಯ ಕಾಣುತ್ತದೆ. ಅವನು ಗಜಲ್-ಅವಳು ಶಾಯರಿಯಂತೆ ಪರಸ್ಪರ ಹೊಂದಿಕೊಂಡು, ಕವಿತೆಯಲ್ಲಿಯೇ ಬಾಳನೌಕೆ ಸಾಗಿಸುತ್ತ ವೃದ್ಧ ದಂಪತಿಗಳಾಗಿ ಹಾಡುಹಕ್ಕಿಗಳಂತೆಯೇ ಸಾರ್ಥಕ ಬದುಕು ನಡೆಸುವುದು ಇಲ್ಲಿನ ವೃತ್ತಾಂತ.

ನಾಟಕವನ್ನು ಕುತೂಹಲದ ಸಾಂಗತ್ಯದಲ್ಲಿ ರಚಿಸಿರುವ ಎನ್.ಸಿ. ಮಹೇಶ್, ತಮ್ಮ ಕವಿತಾ ಕೌಶಲ್ಯದ ಸಂಭಾಷಣೆಯಲ್ಲಿ ಪ್ರೇಕ್ಷಕರನ್ನು ಸೆರೆ ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆನ್ನಬಹದು. ಅಷ್ಟೇ ಜಾಣ್ಮೆಯಿಂದ ನಾಟಕ ನಿರ್ದೇಶಿಸಿರುವ ವಿನಯ್ ಅವರಿಗೆ ತಮ್ಮ ಕೆಲಸದ ಬಗ್ಗೆ ಹೊಸ ಪರಿಕಲ್ಪನೆಗಳಿವೆ ಎಂಬುದು ಸ್ಪಷ್ಟವಾಗುತ್ತದೆ. ಪ್ರತಿಯೊಂದು ಪಾತ್ರಗಳೂ ನಾಟಕದ ಗೆಲುವಿಗೆ ಕಾರಣರೆನ್ನಬಹುದು. ವಿಶೇಷವಾಗಿ ನಾಯಕ ಚಿದಾನಂದ(ಪ್ರದೀಪ್),ಅವನ ತಂದೆ(ಶ್ಯಾಮಾ)ಅವನ ತಾಯಿ(ದೀಪಿಕಾ) ಶಾಯರಿ(ನಿತ್ಯಾ) ಮತ್ತು ಅವಳ ತಾಯಿ(ವಾಣಿ ಹೆಗಡೆ) ಗಮನ ಸೆಳೆಯವರು. ರಂಗಸಜ್ಜಿಕೆ ಆಕರ್ಷಕವಾಗಿದ್ದು,ಬೆಳಕಿನ ಸಂಯೋಜನೆ ಉತ್ತಮವಾಗಿತ್ತು, ಹಾಗೂ ಪ್ರಸಾಧನ,ವೇಷಭೂಷಣಗಳು ಪಾತ್ರಗಳ ವ್ಯಕ್ತಿತ್ವವನ್ನು ಸೂಕ್ತವಾಗಿ ಅಭಿವ್ಯಕ್ತಿಸಿದವು. ಅಭಿನಯ-ವ್ಯಾಸ್ಪ್ಸ್ ಹವ್ಯಾಸೀ ನಾಟಕ ತಂಡ.

‍ಲೇಖಕರು avadhi

14 March, 2014

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. bharathi b v

    ನಾನು ನೋಡಿ ತುಂಬ ಇಷ್ಟಪಟ್ಟ ನಾಟಕಗಳಲ್ಲಿ ಇದೂ ಒಂದು. ತುಂಬ ಲವಲವಿಕೆಯ ನಾಟಕ. ಬರಹ ಚೆನ್ನಾಗಿದೆ ಸಂಧ್ಯಾ ಮೇಡಮ್ ….

  2. Kumar

    Hi,
    I liked the play and very humorous one. As mentioned above, starting to end you will enjoy. Very entertaining play.
    Regards
    Kumar

  3. Prakash

    I very much agree with Sandhya madam review. As the play name represents ” Avanu Gazal Avalu Shayari “, you will enjoy if you are an shayari lover. Each character having it’s own weight age and performed nicely. Every sequence make us feel happy and increase the curiacity. Story line is good, provide us the 70’s or 80’s feel. Overall play is every awesome.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading