
ಕವಿ: ಕಿರಸೂರ ಗಿರಿಯಪ್ಪ
ಕೃತಿ: ನಾಭಿಯ ಚಿಗುರು
ಬಾಗಲಕೋಟೆಯ ಕಿರಸೂರಿನ ಗಿರಿಯಪ್ಪ ಕನ್ನಡ ಎಂ ಎ ನಂತರ ಸುರಪುರ ಡಾ ಗೂಗಲಗತ್ತಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
ಬೇಂದ್ರೆ, ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿರುವ ಇವರ ಮೊದಲ ಸಂಕಲನ ನಾಭಿಯ ಚಿಗುರು. ಈ ಕೃತಿ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದಿದೆ
ಬಿ ಶ್ರೀನಿವಾಸ ಅವರು ಈ ಕೃತಿಗೆ ಬರೆದ ಮುನ್ನುಡಿಯ ಒಂದಿಷ್ಟು ಮಾತು ಇಲ್ಲಿದೆ

ಬೇಡ ಬೇಡವೇಂದರೂ ನನಗೆ ಬಾಲ್ಯದ ಘಟನೆಯೊಂದು ನೆನಪಾಗುತ್ತಿದೆ .
ನಾನು ನಾಕನೇ ಕ್ಲಾಸಿನಲ್ಲಿ ಓದುತ್ತಿರುವಾಗ ಲೆಕ್ಕದ ಮಾಸ್ತರು ಕೊಟ್ಟ ಲೆಕ್ಕವನ್ನು ಅಲ್ಲಿಂದಲ್ಲೇ ಬಿಡಿಸುತ್ತಿದ್ದೆ. ಮಾಸಿದ ಅಂಗಿ, ಹರಿದ ಚೊಣ್ಣದಲ್ಲಿ ಮುಕಳಿ ಕಾಣುವುದನ್ನು ಯಾರೂ ನೊಡದಂತೆ ಪಾಟೀಚೀಲ ಇಳಿಬಿಟ್ಟುಕೊಂಡೇ ನಡೆಯುತ್ತಿದೆ.
ಇಂತಹ ನನ್ನ ಸುತ್ತಲೂ ಇಬತ್ತಿ ಹಚ್ಚಿದ ಹುಡುಗರು, ದಿನಾ ಸ್ನಾನ ಮಾಡಿ ಸ್ವಚ್ಚವಾಗಿ ಬರುವ ಹುಡುಗರು ಲೆಕ್ಕ ಬಿಡಿಸುವಾಗ ನನ್ನ ಸುತ್ತಲೂ ಬರುತ್ತಿದ್ದರು. ನನಗೆ ಒಳಗೊಳಗೇ ಖುಷಿಯಾಗುತ್ತಿತ್ತು.
ಅಂತದ್ದೇ ಖುಷಿ ಮತ್ತೆ ಈ ಕವಿತೆಗಳನ್ನು ಓದುವಾಗ ನನಗೆ ದಕ್ಕಿದೆ.
ಕನ್ನಡ ಕಾವ್ಯಲೋಕ ಗಿರಿಯಪ್ಪನ ಕವಿತೆಗಳಿಗಾಗಿ ಬೆರಗುಗಣ್ಣಿನಿಂದ ನೋಡುವ ಕಾಲ ಬಂದಿದೆ.
ಅವರದ್ದೇ ಕವಿತೆಯೊಂದರಲ್ಲಿ
ಹಳೆಯ ಪಳೆಯ ರೆಂಬೆ ಕಳಚಲು
ನಮ್ಮಗೆ ಹೊಸ ಭರವಸೆಯ
ನೆಲ ಸೃಷ್ಟಿಯಾಗಬೇಕು ….
ಅಂತಹದೊಂದು ಭೂಮಿಕೆಯನ್ನು ಗಿರಿಯಪ್ಪ ಈಗಾಗಲೇ ಸೃಷ್ಟಿಸಿಕೊಂಡಿದ್ದಾರೆ ಎಂಬುದಕ್ಕೆ
ಸಂಕಲನದ ತುಂಬ ಹಲವು ಪುರಾವೆಗಳು ಸಿಗುತ್ತವೆ.
ಸಹಜವಾಗಿ ಈ ಕಾಲದ ಎಲ್ಲಿ ಕವಿಗೂ ವರ್ತಮಾನವನ್ನು ಒಂದೇ ಹಿಡಿಕೆಯಲ್ಲಿ ಹಿಡಿದಿಡುವ ಧಾಮತವಿರುತ್ತದೆ. ನಾಳೆ ಬೆಳಗ್ಗೆಯೇ ಕ್ರಾಂತಿ ಸಂಭವಿಸಿಬಿಡುತ್ತದೆ ಎಂಬ ಭ್ರಮೆಯಲ್ಲಿ ಹೊಸಕಾಲದ ಬರಹಗಾರ ಬದುಕುವ ಘಟ್ಟವೊಂದಿರುತ್ತದೆ. ಸಾವಿರಾರು ವರ್ಷಗಳಿಂದ ಉಂಡ ಅಸಮಾನತೆ ನೋವು ಸಂಕಟಗಳೆಲ್ಲವೂ ಧುಮ್ಮಿಕ್ಕಿ ಅಕ್ಷರಗಳಾಗಿ ಕವಿತೆಯೆಂಬ ಹೆಸರು ಪಡೆದಾಗ ಕೇವಲ ಚೀತ್ಕಾರದ ಸದ್ದು ಕೇಳುವ ಅಪಾಯವಿರುತ್ತದೆ. ಮನುಷ್ಯ ಇತಿಹಾಸದುದ್ದಕ್ಕೂ ನೋವು ಸಂಕಟಗಳ ಜೊತೆಗೆ ವರ್ಣರಂಜಿತ ಬದುಕನ್ನೂ ಬದುಕಿದ್ದಾನೆ. ಕವಿಯಾದವನು ಈ ಎರಡನ್ನೂ ಒಟ್ಟಾಗಿ ಗ್ರಹಿಸಿಹಿಡಿದಿಡುವ
ಭಾವ- ಚಿತ್ರಗಳಿವೆಯಲ್ಲ ಅವು ದೀರ್ಘಕಾಲ ಮನಸ್ಸಲ್ಲಿ ಉಳಿದುಬಿಡುತ್ತವೆ. ಅಂತಹ ಅನೇಕ
’ಉಳಿಯುವ’ ಕವಿತೆಗಳನ್ನು ’ನಾಭಿಯ ಚಿಗುರು’ ವಿನಲ್ಲಿ ನೀಡಿದ್ದಾರೆ.
ಸುರಪುರದಂತಹ ಬಿರುಬಿಸಿಲ ನಾಡಿನಲ್ಲಿದ್ದುಕೊಂಡೇ ಕಾವ್ಯಕ್ಕೆ ಆಯಾ ಪ್ರದೇಶದ ಭಾಷಾ ಸೊಗಡು ,ಪದಬಳಕೆ ಮಾಡಿದ್ದರೆ ಕಾವ್ಯಕ್ಕೆ ಅನನ್ಯತೆಯೊಂದಿರುತ್ತಿತ್ತೇನೋ. ಕಾವ್ಯ ಸರ್ವಸ್ವತಂತ್ರ ಎಂಬುದು ಎಷ್ಟು ನಿಜವೋ – ಪ್ರದೇಶದದಿಂದ ಪ್ರದೇಶಕ್ಕೆ ಹಾರಿಬರುವ ಹಕ್ಕಿ ಹೊತ್ತುತರುವ ಕಾವ್ಯದಲ್ಲಿ – ಕವನದಿಂದ ಕವನಕ್ಕೆ ಭಿನ್ನವಾಗಿರುವುದೂ ಅಷ್ಟೇ ನಿಜ. ಆದ್ದರಿಂದ ಈ ಮಾತು.
ಕವಿತೆ ತನ್ನ ಅಸ್ತಿತ್ವವನ್ನುಳಿಸಿಕೊಳ್ಳಬೇಕೆಂದರೆ ಅದು ಯಾವಾಗಲೂ ಜನೋಪಯೋಗಿಆಗಿಯೂ ಆದರಾಚೆಗೂ ಮಿಕ್ಕಿರಬೇಕು ಎಂಬ ಮಾತಿದೆಯಲ್ಲ ಹಾಗೆಯೇ ಗಿರಿಯಪ್ಪನವರ ಕಾವ್ಯ – ತನ್ನ ಪರಿಧಿಯಾಚೆಗೂ ಮಿಕ್ಕಿದೆ. ಗಿರಿಯಪ್ಪನವರ ನಾಭಿಯ ಚಿಗುರು ಭರವಸೆ ಹುಟ್ಟಿಸಿದೆ.
-ಬಿ. ಶ್ರೀನಿವಾಸ.





0 Comments