ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ ಹೊಸ ಬುಕ್: ಗುಲ್ಜಾರ್ ಅವರ 'ದಸ್ತಕ್'

ಕವಿ: ಗುಲ್ಜಾರ್

ಅನುವಾದ: ಲಕ್ಷ್ಮೀಕಾಂತ ಇಟ್ನಾಳ  

ಕೃತಿ: ದಸ್ತಕ್..

‘ಅವಧಿ’ ಓದುಗರಿಗೆ ಸಾಕಷ್ಟು ಪರಿಚಿತರಾದ ಲಕ್ಷ್ಮೀಕಾಂತ ಇಟ್ನಾಳ ಅವರು ಗುಲ್ಜಾರ್ ಕಾವ್ಯಕ್ಕೆ ಗಜಲ್ ಗೆ ಮಾರು ಹೋದವರು. ತುಂಬು ಪ್ರೀತಿಯಿಂದ ಅವರ ಕಾವ್ಯವನ್ನು ಕನ್ನಡಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲ ಗುಲ್ಜಾರ್ ಅವರೊಂದಿಗೆ ಕುಳಿತು ತಮ್ಮ ಅನುವಾದದ ಆಯ್ದ ಭಾಗವನ್ನು ಅವರಿಗೆ ಓದಿ ಹೇಳಿ ಅವರ ಪರೀಕ್ಷೆ ಗೆದ್ದು ಬಂದಿದ್ದಾರೆ. ವೃತ್ತಿಯಿಂದ ಎಂಹಿನಿಯರ್ ಆಗಿದ್ದ ಲಕ್ಷ್ಮೀಕಾಂತ್ ಬರಹ ಲೋಕಕ್ಕೆ ತೆತ್ತುಕೊಂಡವರು. ಇವರ ರಾಜಾಸ್ಥಾನ ಪ್ರವಾಸ ಕಥನ, ಮೀನಾಕುಮಾರಿ ಬದುಕಿನ ಗಾಥೆ ಅವಧಿಯಲ್ಲಿಯೇ ಧಾರಾವಾಹಿಯಾಗಿ ಅವಧಿಯಲ್ಲಿ ಪ್ರಕಟವಾಗಿದೆ. ಮನ ಗೆದ್ದಿದೆ.

 

ಜಯಂತ ಕಾಯ್ಕಿಣಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ

ಜಯಂತ ಕಾಯ್ಕಿಣಿ

‘ಗುಲ್ಝಾರ್’- ಎಂಬುದು ಬರಿ ಪದವಲ್ಲ, ಹೆಸರಲ್ಲ, ವಿಶೇಷಣವೂ ಅಲ್ಲ. ಅದು ಕಳೆದ ಐದು ದಶಕಗಳಿಂದ ನಮ್ಮ ಮನಸ್ಸನ್ನು, ಸಂವೇದನೆಯನ್ನು ಲಾಲಿಸುತ್ತ, ಪಾಲಿಸುತ್ತಾ ಬಂದ ಒಂದು ಆವರಣ. ಅದು ಬಿಮಲ್ ರಾಯ್ ಅವರ ಚಿತ್ರಗಳಿಂದ ಹಿಡಿದು ಈಚಿನ ‘ಕಜರಾ…ರೆ’, ‘ಬೀಡಿ ಜಲೈಲೆ’ಗಳ ತನಕ, ಸಿನಿಮಾ ಬಿಂಬಗಳಿಗೊಂದು ಧ್ವನಿ ರಮ್ಯತೆಯನ್ನು, ಅಪ್ಪಟ ಕಲ್ಪನಾಶೀಲತೆಯೊಂದಿಗೆ ದಯಪಾಲಿಸಿದ, ಹಿಂದೀ ಕಾವ್ಯ ಪ್ರಪಂಚವನ್ನು ಮಾನವೀಯ ಕಳಕಳಿಯ ಹೊಸ ಸೊಲ್ಲುಗಳಿಂದ ಜೀವಂತಗೊಳಿಸಿದ ಒಂದು ಬಹುರೂಪಿ ಚೈತನ್ಯದ ಪಯಣ.

ಎಂದಿಗೂ ಮಾಯದ ದೇಶವಿಭಜನೆಯ ಗಾಯವನ್ನು ಎದೆಗೊತ್ತಿಕೊಂಡೇ, ಮನುಷ್ಯ ಸಂಬಂಧಗಳ ಬೆಚ್ಚನೆ ನಂಟಿನ ರೂಹುಗಳಿಗಾಗಿ ಪರಿತಪಿಸುತ್ತಾ ತನ್ನ ಕಲೆಯನ್ನು ಜೀವನ ಕಲೆಯಾಗಿ ಪರಿವರ್ತಿಸುತ್ತ ಬಂದ ಗುಲ್ಝಾರ್ ರ ಋಣದಲ್ಲಿ ಇಡೀ ದೇಶವೇ ಇದೆ. ಇಂಥದೊಂದು ಋಣದ ಒಂದು ಕಿಂಚಿತ್ ಸಂಕೇತಾತ್ಮಕ ಸಂದಾಯದ ಕ್ಷಣ ಈಗ ಈ ಮೂಲಕ ಕನ್ನಡದಲ್ಲಿ, ಧಾರವಾಡದ ಗೆಳೆಯ ಲಕ್ಷ್ಮೀಕಾಂತ ಇಟ್ನಾಳರ ಮೂಲಕ ಆಗುತ್ತಿರುವುದು ಒಂದು ಹೃದ್ಯವಾದ ವಿದ್ಯಮಾನವಾಗಿದೆ. ಗುಲ್ಝಾರ್ ರ ಆಯ್ದ ಕವಿತೆ, ಗೀತೆ, ಗಝಲ್ ಮತ್ತು ಚಿತ್ರಗೀತೆಗಳನ್ನು ಕನ್ನಡಕ್ಕೆ ತರುವ ಈ ಪ್ರಾಮಾಣಿಕ ಸಾಹಸಕ್ಕೆ, ಪ್ರಯತ್ನಕ್ಕೆ ಅವರನ್ನು ಅಭಿನಂದಿಸುತ್ತೇನೆ.

ಈ ಎರಡು ಸಂಕಲನಗಳ ಮೊದಲ ಓದುಗನಾಗುವ ಅವಕಾಶ ಕಲ್ಪಿಸಿದ ಅವರ ವಿಶ್ವಾಸಕ್ಕೆ ಋಣಿಯಾಗಿದ್ದೇನೆ.
‘ಗುಲ್ಝಾರ್’ ಶಬ್ದದ ಅರ್ಥ ‘ಹೂತೋಟ’, ಉಪವನ. ಅಕ್ಷರಶಃ ಇದೊಂದು ನಾನಾ ನಮೂನೆಯ ಗಿಡ, ಮರ, ಬಳ್ಳಿ, ಎಳೆ ಬಿಸಿಲು, ಮಳೆ, ಮಂಜುಗಳ ನಿಬಿಡ ಉಪವನವೇ ಹೌದು. ಇಲ್ಲಿ ಪ್ರತೀ ಗಿಡ ತನ್ನದೇ ಆದ ಮೌನದಲ್ಲಿ ಕಂಪಿಸುತ್ತಿರುವಾಗಲೇ ಇತರ ಗಿಡಮರಗಳೊಂದಿಗೆ ಒಂದು ಸಂಯುಕ್ತವಾದ ಸಂವಾದದಲ್ಲಿ ಇರುವಂಥ ಭಾಸವಾಗುತ್ತದೆ. ನಾವು ಮಾತನಾಡತೊಡಗಿದರೆ ಅವು ಸ್ಥಬ್ಧವಾಗಬಹುದು. ಅವುಗಳನ್ನು ಆಲಿಸುವುದರಲ್ಲೇ ನಮ್ಮ ಆರೋಗ್ಯ ಇದೆ, ರಸಿಕತೆಯ ರಹಸ್ಯವೂ ಇದೆ.

ನಾವಿದ್ದಲ್ಲಿಯೇ ಹಾದು ಹೋಯಿತು ಆಕಾಶ
ಸೃಷ್ಟಿಯಿಂದ ಸಂಪತ್ತೊಂದನ್ನು ಲೂಟಿ ಮಾಡಿಕೊಂಡು ಹೊರಟಿತ್ತದು…..
–(ಖುಲ್ ಜಾ ಸಿಮ್ ಸಿಮ್)
ಕಾಡಿನಲ್ಲಿ ನದಿಯ ಕಂಠವು
ಮಾತಾಡಿ ಮಾತಾಡಿ ಬಿದ್ದುಹೋದಂತಿದೆ
ಈಗದರ ದನಿ ಭಾರವಾಗಿದೆ –(ಎಷ್ಟೊಂದು ಉದ್ದವಿದೆಯಲ್ಲಾ…)

ಒಣ ರೆಂಬೆಗಳು ತಮ್ಮ ಬೆರಳುಗಳಿಗೆ
ಬೆಳ್ಳಗೆ ಹತ್ತಿ ಬಟ್ಟೆಯ ಬ್ಯಾಂಡೇಜನ್ನು ಕಟ್ಟಿಕೊಂಡಿದ್ದವು
ಈಗೆರಡು ತಿಂಗಳ ಹಿಂದಷ್ಟೆ ಶಿಶಿರವು ಅವನ್ನು ಸುಲಿದುಬಿಟ್ಟಿತ್ತು! –(ಮನಾಲಿ)

ಅಕ್ಷರಗಳೆಲ್ಲ ಎಲೆಯುದುರಿದ ಒಣಟೊಂಗೆಯಂತಾಗಿವೆ –(ಪುಸ್ತಕಗಳು)

ನಮ್ಮ ಪ್ರೀತಿಯ ಕೀರ್ತಿನಾಥ ಕುರ್ತಕೋಟಿಯವರು ಹೇಳುವ ಕಾವ್ಯದಲ್ಲಿ ಆಗಬೇಕಾದ ‘ಪ್ರಕೃತಿಯ ಮಾನವೀಕರಣ’ಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆಗಳು ಬೇಕಿಲ್ಲ. ನಮ್ಮಲ್ಲಿ ‘ವರ್ಣನೆ’ಯೇ ಕಾವ್ಯ ಎಂಬ ತುಂಬಾ ಪ್ರಾಥಮಿಕ ಹಂತದ ಭಾವನೆ ಎಷ್ಟೋ ಕಾವ್ಯಾಥರ್ಿಗಳಲ್ಲಿ ಇನ್ನೂ ಇದೆ.

ಅಗೋ ಅಲ್ಲಿ ಬಹು ಎತ್ತರದ ದೇವದಾರು ಮರವಿತ್ತು ಮೊದಲು
ಅದು ಮೋಡಗಳನ್ನು ತನ್ನ ಎಲೆಗಳಿಗೆ ರುಮಾಲಿನಂತೆ ಸುತ್ತುತ್ತ
ಕೆಲವೊಮ್ಮೆ ಶಾಲಿನಂತೆ ಮೈತುಂಬ ಹೊದೆಯುತ್ತಿತ್ತು.
ಗಾಳಿಯನ್ನು ಬಾಹುಗಳಿಂದ ತಡೆಯುತ್ತ
ಅತ್ತಿತ್ತ ತೂಗುತ್ತ ಅದಕ್ಕೆ ಹೇಳುತ್ತಿತ್ತು
ಈ ಕಾಲುಗಳು ನೆಲೆಯೂರದಿದ್ದಲ್ಲಿ ನಿನ್ನೊಂದಿಗೆ ಬರುತ್ತಿದ್ದೆ.

ಬೀಟೆಯ ಕೊರಳಿಂದ ಇಂಪಾದ ಸಿಳ್ಳು ಹೊರಟಾಗೆಲ್ಲ
ಬಾನಾಡಿಗಳು ಕೊಂಬೆಯಲ್ಲಿ ಕೂತು ನಕಲು ಮಾಡಿ ನಗುತ್ತಿದ್ದವು

ಈ ಕಡೆಗೊಂದು ಬೇವಿತ್ತು
ಬೆಳದಿಂಗಳೊಂದಿಗೆ ಅನುರಾಗದಲ್ಲಿತ್ತು — (ಹಸಿರು ಕ್ಷಣಗಳು)

ಇದನ್ನು ಓದುವಾಗ ನನಗೆ ಕುವೆಂಪು ಅವರಿಗೆ ಮರದ ಮೇಲಿನ ಪುಟ್ಟ ಹಕ್ಕಿಯ ಉಲಿ, ಧ್ಯಾನಸ್ಥ ಮರದ ಮಂತ್ರೋದ್ಘಾರದಂತೆ ಕೇಳಿಸಿದ್ದು, ಕೆ.ವಿ. ತಿರುಮಲೇಶ್ ಗೆ – ವಲಸೆ ಹಕ್ಕಿಗಳು ಬಂದಾಗ ಮರಗಳು ತಮ್ಮ ಮೌನ ಮುರಿದಂತೆ- ಕೇಳಿಸಿದ್ದು ನೆನಪಾಗುತ್ತದೆ.

ಸಿಪ್ಪೆ ಸುಲಿದಂತೆ ಸುಲಿದ ಬೆಟ್ಟವೊಂದು
ಬೀಳುತ್ತಿರುವ ಆ ಮರವನ್ನು
ತಡೆಯಲದೆಷ್ಟು ಪ್ರಯತ್ನ ಮಾಡಿತ್ತು
ಆದರೆ ಕೆಲ ಮನುಷ್ಯರು
ಬೆಟ್ಟದಿಂದ ಕಸಿದುಕೊಂಡು, ಹೆಗಲುಕೊಟ್ಟು
ಕಾಲುದಾರಿಯಲ್ಲಿ ಸಾಗಿಸಿಯೇಬಿಟ್ಟರು- ಕೊರೆವ ಕಾರಖಾನೆಗೆ. — (ಬೆಟ್ಟದಳಲು)

ಇಟ್ನಾಳರ ಭಾಷಾಂತರ ಪಾರದರ್ಶಕವಾಗಿರುವುದರಿಂದಲೇ ಈ ಸಾಲುಗಳ ನಿರಾಭರಣ ಸೌಂದರ್ಯ ಆವರಿಸುವಂತಾಗಿದೆ. ‘ಕೊರೆವ ಕಾರಖಾನೆಗೆ’ ಎನ್ನುವ ಬಳಕೆ ಎಷ್ಟು ಹೊಸತಾಗಿದೆ. ಇದೇ ಥರ ಇಟ್ನಾಳರು ಗವ್ಗತ್ತಲು, ಬಾವುಗಾಲು – ಇಂಥ ಯುಕ್ತ ಪದಗಳನ್ನು ಅಲ್ಲಲ್ಲಿ ಪೋಣಿಸಿದ್ದಾರೆ.

‘ನೇಕಾರ’, ‘ದಿನಚರಿ’, ‘ಅಗ್ಗಿಷ್ಟಿಕೆ’, ‘ಟೋಬಾ ಟೇಕ್ಸಿಂಗ್’ (ಮಾಂಟೋ), ‘ಚಿಲಕದ ಸದ್ದು’, ‘ಚಿತ್ರ’, ‘ಅದು ನೀನೇ ತಾನೇ’, ‘ಮನೆಯ ಮೇಲಂತಸ್ತಿನಲ್ಲಿ ಯಾರೂ ವಾಸವಿಲ್ಲ ಈಗ’, ‘ಮುಂಗಾರು’….. ಇಂಥ ಕವಿತೆಗಳ ಸಾಂದ್ರತೆ, ತೀವ್ರತೆ ಮತ್ತು ‘ವಾಚ್ಯವಾಗದ ಸರಳತೆ’- ಗಹನತೆಯ ಕಡೆಗೆ ನಮ್ಮನ್ನು ನೂಕುವಂತಿವೆ. ತಪ್ಪು ತಿಳುವಳಿಕೆಯಿಂದಾದ ಮನಸ್ತಾಪದ ಕಂದಕ, ಅದರ ದಾರುಣ ಮೌನ, ಅದನ್ನು ಸರಿಪಡಿಸಬೇಕೆಂಬ ಇಕ್ಕೆಲದ ಹತಾಶ ಹಂಬಲ-ಗುಲ್ಝಾರರ ಕವಿತೆಗಳ ಸ್ಥಾಯೀ ಭಾವವಾಗಿದೆ. ನಿಸರ್ಗ ಸಹಜವಾಗಿ ನಮಗೆ ಸಿಕ್ಕಿರುವ ಸಂಯುಕ್ತ ಸಹಬಾಳ್ವೆಯ ಸಮಾಧಾನವನ್ನು, ಮನುಷ್ಯ ತಾನೇ ಜಾತಿ, ಮತ, ಧರ್ಮಗಳ ನರಕ ಸೃಷ್ಟಿಸಿಕೊಂಡು, ನಾಶಮಾಡುತ್ತಿರುವ ಅತ್ಯಂತ ಉದ್ವಿಗ್ನ ಪರಿಸ್ಥಿತಿ-ಗುಲ್ಝಾರ್ರ ಸಾಲುಗಳ ಹಿನ್ನೆಲೆ ಸಂಗೀತದಂತೆ ಅನುರಣಿಸುತ್ತದೆ.

ಆದರೆ ಈ ದುರ್ಬಲ ಗೋಡೆಯ ಆ ಬದಿಯಲ್ಲಿ
ಅದೇನದು! ನೀರವತೆ ನೆಲೆಗೊಂಡಿದೆಯಲ್ಲಾ
ಯಾರದು? ಆಚೆ ಅಂಗಳದಲ್ಲಿ ಮೌನವಾಗಿ
ಗೋಡೆಗೆ ಕಿವಿಯಾನಿಸಿ ಕುಳಿತಂತಿದೆಯಲ್ಲಾ! — (ದೇವಾ-2)

ಮತ್ತೆ ಮತ್ತೊಂದು ಬೀದಿ
ಮತ್ತೊಂದು ಪೆಟ್ಟು
ಮತ್ತೊಂದು ದಲಿತ ಗಿಡ! — ( ಕಾಡು ಗಿಡಗಳು…)

ನಿನ್ನೆ ರಾತ್ರಿ ಬೆಂಕಿಬಿದ್ದ ಆ ಗಲ್ಲಿಯೊಳಗ
‘ನಮ್ಮಂದಿ’ ಯಾರೂ ನೆಲೆಸಿರಲಿಲ್ಲ
ಶಾಲೆಯೊಂದು ಕಟ್ಟುವಾಗಲೇ ಸುಟ್ಟು ಬೂದಿಯಾಗಿದೆ
ನಮ್ಮ ಹುಡುಗರ್ಯಾರೂ ಹೆಸರು ಹಚ್ಚಿರಲಿಲ್ಲ. — (ಮೂರನೇ ಜಗತ್ತು)

ಲಕ್ಷ್ಮೀಕಾಂತರು ಸೂಕ್ತವಾಗಿ ಅಲ್ಲಲ್ಲಿ ಧಾರವಾಡದ ಒಕ್ಕಣಿಕೆ ಬಳಸೋದು ಕೆಲವು ಸಾಲುಗಳನ್ನು ಇನ್ನೂ ಹತ್ತಿರಕ್ಕೆ ತಂದಿದೆ. ‘ಮಣ್ಣು’ ಕವಿತೆಯಲ್ಲಿ ಇದು ತುಂಬಾ ನಾಟಕೀಯವಾದ ದಾರುಣತೆಯನ್ನು ತಣ್ಣಗೆ ಅನುಭವಕ್ಕೆ ತರುತ್ತದೆ. ಗುಲ್ಝಾರ್ ರ ಉದ್ದ ಕವಿತೆಗಳು, ‘ಪ್ರಕರಣ’ ರೂಪಿ ಕವಿತೆಗಳು ವಾಚಾಳಿಯಾಗಿವೆ. ಸಂಭಾಷಣೆಗಳನ್ನು ಒಳಗೊಂಡ ಕವಿತೆಗಳು ಅನುವಾದದಲ್ಲಿ ಇನ್ನೂ ಜಾಳಾಗುವ ಅಪಾಯವಿರುತ್ತದೆ. ಆದರೆ, ಅಲ್ಲೆಲ್ಲ ಧಾರವಾಡದ ಭಾಷೆ ಅದಕ್ಕೊಂದು ಬಂಧವನ್ನು ತಂತಾನೆ ದಯಪಾಲಿಸಿದೆ! ಆದರೆ, ಮೆಹರೂಲಿ ಯನ್ನು ಅವರು ಹುಬ್ಬಳ್ಳಿ ಮಾಡಿದ್ದು ಖುಶಿ ಕೊಟ್ಟರೂ ಅದು ಸಮಂಜಸವೇ?- ಅನ್ನುವ ಸಂದೇಹ ನನ್ನಲ್ಲಿದೆ.

ಉರ್ದು, ಹಿಂದಿ ಕವಿತೆಗಳ ಅನುವಾದಕ್ಕೆ ಉತ್ತರ ಕರ್ನಾಟಕದ ಕವಿಗಳಿಗೆ ಅನುಕೂಲ ಹೆಚ್ಚು. ಏಕೆಂದರೆ ಎಷ್ಟೆಲ್ಲ ನುಡಿಗಟ್ಟುಗಳು ಆ ಭಾಷೆಯಲ್ಲಿ ಅಂತರ್ಗತಾಗಿಯೇ ಇರುತ್ತವೆ. ಹೀಗಾಗಿ ಈ ಅನುವಾದದಲ್ಲಿ ಅಲ್ಲಲ್ಲಿ ಮಿಂಚುವ ‘ನಮಿ’, ‘ವಾಟ್ನಿ’, ‘ಬಟವಡೆ’, ‘ಜಮೆ’, ‘ಜಬಾನು’, ‘ಮಜಕೂರು’, ‘ಮುಕ್ಕಾಂ’… ಇಂಥ ಪದಗಳು ಸಹಜವಾಗಿಯೇ ಮೂಲಕ್ಕೆ ಇಂಬು ಕೊಡುತ್ತವೆ.

ಇದೆಂಥ ಪ್ರೇಮವಿದು ನನಗೆ ಈ ಉದರ್ು ಜಬಾನಿಗೆ
ಶಬ್ದಗಳಿವು ನಾಲಿಗೆ ಮೇಲೆ ಅದ್ಹೇಗೆ ಅರಳುತ್ತವೆಂದರೆ
ಸುಪಾರಿಯಲ್ಲಿ ಕಿಮ್ಮತ್ತಿನ ಖಿಮಾಮಿನ ಘಮಲು ಪಸರಿಸಿದಂತೆ – (ಉರ್ದು)

ಇಟ್ನಾಳರು ಅಲ್ಲಲ್ಲಿ ಸೂಕ್ಷ್ಮವಾಗಿ ಮೂಲಕ್ಕೆ ಅಪಚಾರವಾಗದಂತೆ ತುಸು ರಚನಾತ್ಮಕವಾಗಿ ಹಿಗ್ಗಿಸಿದ್ದೂ ಚೆನ್ನಾಗಿದೆ. ಉದಾಹರಣೆಗೆ:

ಯಾದ್ ಭರಿ ಪುರವಾಯಿ-ನೆಪ್ಪಲಿ ನೆಂದ ಮೂಡಗಾಳಿ
ಬಾರಿಶ್ ಕಾ ಬರ್ಬತ್-ಮಳೆಯ ಮೇಳಗಳು
ತುಝೆ ದೇಖೂಂ ಕೈಸೆ- ಕಣ್ಣು ನಿನ್ನ ಧರಿಸುವುದು ಹೇಗೆ
ದರ್ದ ಭೀ ಭುಝ್ ಜಾಯೇಗಿ- ಈ ನೋವೂ ಸಹ ನಿಧನವಾಗುವುದು
ಮುರಾದೋಂಕೆ ಮಂಝಿಲ್ ಸೆ ದೂರ್-ಬಯಕೆಗಳ ಬಿಡಾರ ದೂಡಿ

ನಾನು ಹಿಂದಿ, ಉರ್ದು ಕವಿತೆಗಳನ್ನು ಓದಿದ್ದು ತುಂಬಾ ಕಡಿಮೆ. ಆದರೆ ಓದಿದ ಅಲ್ಪಸ್ವಲ್ಪ ಕವಿತೆಗಳಿಂದಾಗಿ, ಹಿಂದಿ-ಉರ್ದು ಕಾವ್ಯದಲ್ಲಿ ಒಂದು ಬಗೆಯ ಹುಸಿ ರಮ್ಯತೆಯೇ ಜಾಸ್ತಿ. ‘ವಾಹ್ ವಾಹ್’ಕ್ಕಾಗಿ ಹೊಸೆದ, ದಿನನಿತ್ಯದ ಅನಿರ್ವಚನೀಯದಿಂದ ದೂರವಾದ ಚತುರೋಕ್ತಿಗಳೇ ಜಾಸ್ತಿ- ಎಂದು ನನ್ನ ಅಭಿಪ್ರಾಯವಿತ್ತು. ಆದರೆ ಮುಂಬಯಿಯ ನನ್ನ ನಿಡುಗಾಲದ ಬಂಧು ಮುಕುಂದ ಜೋಷಿಯ ಮೂಲಕ ಆಧುನಿಕ ಹಿಂದೀ ಕಾವ್ಯದ ಕೆಲ ಪುಟಗಳನ್ನು ಓದುವಂತಾಯಿತು. ನಿರ್ಮಲ ವರ್ಮಾ, ವಿಜಯಕುಮಾರ್, ಶ್ರೀವಾಸ್ತವ ಮುಂತಾದವರ ಒಕ್ಕಣಿಕೆ ಅತ್ಯಂತ ಆಧುನಿಕವೆಂದು ಮನವರಿಕೆಯಾಯಿತು. ಈ ಗುಲ್ಝಾರ್ ರ ಕವಿತೆಗಳನ್ನು ಓದುತ್ತಾ ಈಗ ನನಗೆ, ಅವರ ಕುರಿತೂ ಕೂಡ ಇದ್ದ ಆ ಪೂರ್ವಗ್ರಹ ಕಡಿಮೆ ಆದಂತಾಗಿದೆ. ಏಕೆಂದರೆ ಇಲ್ಲಿ ರಮ್ಯತೆ ಅನ್ನುವುದು ಶೈಲಿಗೆ ಅಥವಾ ಆತ್ಮಲೋಲುಪತೆಗೆ ಸಂಬಂಧಿಸಿದ ಸಂಗತಿಯಾಗದೇ ಪಲಾಯನವಾದವೂ ಆಗದೆ…… ಸಮಾಜದ ಬಿರುಕುಗಳನ್ನು ತುಂಬಲು ಬೇಕಾದ ನಂಟಿನ ದಾಹವಾಗಿ ನಮ್ಮನ್ನು ಆವರಿಸುತ್ತದೆ. ಈ ನಂಟು ಕೇವಲ ಗಂಡು ಹೆಣ್ಣಿನ ನಂಟಾಗದೆ, ಬದುಕಿನ ಕುರಿತಾದ ನಂಟಾಗುತ್ತದೆ.

ಪುಟ ತಿರುವಿದಾಗೆಲ್ಲ ಎಂಥ ಸ್ವಾದವಿತ್ತು ನಾಲಿಗೆಗೆ — (ಪುಸ್ತಕಗಳು)

ತಮ್ಮ ಧರ್ಮಕ್ಕಾಗಿ ಪ್ರತಿಯೊಬ್ಬರ ಕೈಲೂ ಕಲ್ಲುಗಳಿವೆ.
ದೇವರ ಜಾತಿಯನ್ನು ನಿಷ್ಕರ್ಷಿಸಲು ಬಂದಿದ್ದರು ಅವರೆಲ್ಲ! — (ದಂಗೆ-1)

ಬೆಂಕಿಗೆ ಕಾಡಿನ ಗಾಳಿ ಬಲು ಮೆಚ್ಚು ಆದರೂ
ಈಗ ಬಡವರ ಗುಡಿಸಲುಗಳಿಗೆ ಗಂಟುಬಿದ್ದಿದೆ
ಜನರ ಕೈಯಲ್ಲೀಗ ಬೆಂಕಿಯಿಲ್ಲ
ಬೆಂಕಿಯ ಬಾಹುಗಳಲ್ಲೀಗ ಕೆಲ ಜನರಿದ್ದಾರೆ! — (ದಂಗೆ-5)

ಯಾಕೆ ಈ ವಿಧವೆ ದಿನವೂ
ಸೈನಿಕನ ಧಿರಿಸನ್ನು ಹೀಗೆ ತೊಳೆಯುವಳು — (ತ್ರಿವೇಣಿ)

ಎದೆಯಲ್ಲಿ ಒಂದಿಷ್ಟು ನೋವನ್ನು ಸಂಭಾಳಿಸುತ್ತೇನೆ ಹೀಗೆ
ಆಭರಣಗಳ ಸಂಭಾಳಿಸುವ ಹಾಗೆ ಯಾರೋ — (ಗುರುತು)

ಈ ಸಾಲುಗಳ ಬೇಗುದಿ ಖಂಡಿತ ರಮ್ಯತೆಯಾಗಲು ಶಕ್ಯವಿಲ್ಲ. ಸರಹದ್ದಿನಾಚೆ ಬಿಟ್ಟು ಬಂದಿರುವ ಗಲ್ಲಿ, ಮನೆ, ಗೆಳೆಯರನ್ನು, ಬಂಧುಗಳನ್ನು ಹೇಗಾದರೂ ತಲುಪಬೇಕೆನ್ನುವ ತಹತಹ, ಅಂಥ ನರಕ ಮತ್ತೆ ಎಲ್ಲೂ ಎಂದೂ ಆಗಬಾರದು ಎನ್ನುವ ಪ್ರಾರ್ಥನೆ ಗುಲ್ಝಾರ್ ರ ಬರವಣಿಗೆಯ ಜೀವಾಳವಾಗಿದೆ. ಹೀಗಾಗಿ ಇವು, ಬರೆದ ತಾರೀಕಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿವೆ. ಜರೂರಿನದಾಗಿವೆ.

ಹೀಗೆ ತಾವು ಇಷ್ಟೊಂದು ಭಯ ಭಕ್ತಿಯಿಂದ ಆರಾಧಿಸುವ ಗುಲ್ಝಾರ್ ರ 75 ಆಯ್ದ ಕವಿತೆಗಳ ಜೊತೆಗೆ ಲಕ್ಷ್ಮೀಕಾಂತ ಇಟ್ನಾಳರು ಒಂದು ಹೆಜ್ಜೆ ಮುಂದಿಟ್ಟು ಅವರ 51 ಆಯ್ದ ಹಾಡುಗಳನ್ನೂ ಹೆಚ್ಚು ಕಮ್ಮಿ ಆ ಹಾಡುಗಳ ಲಯದಲ್ಲಿ ಕನ್ನಡಕ್ಕೆ ತಂದಿದ್ದಾರೆ. ಅವರ ಈ ಸಾಹಸಕ್ಕಾಗಿ ಅವರನ್ನು ಪರಮವೀರ ಚಕ್ರಕ್ಕೆ ಶಿಫಾರಸ್ಸು ಮಾಡಬಹುದಾಗಿದೆ. ಏಕೆಂದರೆ, ಕವಿತೆಗಳ ಅನುವಾದವೇ ಬಲು ಕ್ಲಿಷ್ಟಕರವಾದುದು. ಮೂಲದ ಧ್ವನಿ, ಅವ್ಯಕ್ತಗಳ ಜೊತೆ ಕಾವ್ಯಾನುವಾದ ಅತೀ ಸವಾಲಿನ ಕೆಲಸ. ಆದರೆ, ಗುಲ್ಝಾರ್ರ ಹಾಡಿಗೆ ಬಂದಾಗ ಅದು ಇನ್ನೂ ಕಡಿದಾದ, ದುರ್ಗಮ ದಾರಿ. ಏಕೆಂದರೆ, ಸಿನಿಮಾ ಹಾಡುಗಳಿಗೆ ಒಂದು ಅಮೂರ್ತದ ಕಾವ್ಯದೀಕ್ಷೆ ಕೊಟ್ಟ ಕವಿಗಳಲ್ಲಿ ಗುಲ್ಝಾರ್ ಅಗ್ರಗಣ್ಯರು.

ಸಾಹಿರ್, ಶೈಲೇಂದ್ರ, ಕೈಫಿ ಆಝ್ಮಿ, ರಾಜೇಂದ್ರ ಕೃಷ್ಣ ಅಂತಹ ಮಹತ್ವದ ಕವಿಗಳ ಜಾಯಮಾನವನ್ನು ಅಷ್ಟೇ ತಿಳುವಳಿಕೆ ಮತ್ತು ಪ್ರಯೋಗಶೀಲತೆಯೊಂದಿಗೆ ಮುಂದುವರೆಸಿ, ಹೊಸ ಹುಡುಗ, ಹುಡುಗಿಯರು ತನ್ನ ಸಂಗಾತಿಯನ್ನು ಇಂಪ್ರೆಸ್ ಮಾಡಲು ನಾನು ಗುಲ್ಝಾರ್ ರ ಹಾಡುಗಳನ್ನು ಮಾತ್ರ ಇಷ್ಟಪಡುತ್ತೇನೆ – ಎಂದು ಹೇಳುವಷ್ಟರಮಟ್ಟಿಗೆ ಒಂದು ಹೊಸ ಮಾದರಿಯನ್ನು ಗುಲ್ಝಾರ್ ಹಾಡುಗಳು ಸೃಷ್ಟಿಸಿದವು. ಚೆಸ್ ಆಡುವವರು ಬಹು ಬುದ್ಧಿವಂತರು ಎನ್ನುವಂತೆ ಗುಲ್ಝಾರ್ ಹಾಡುಗಳನ್ನು ಕೇಳುವವರು ಅಭಿರುಚಿಯುಳ್ಳ, ಶಾಣ್ಯಾ ಜನ ಎನ್ನುವಷ್ಟು ದೇಶದ ಮನಸ್ಸನ್ನು ಪ್ರಭಾವಿಸಿದ ಹಾಡುಗಳು ಅವರವು.

ಬಿಮಲ್ ರಾಯ್ರಿಂದ ಹಿಡಿದು ವಿಶಾಲ ಭಾರದ್ವಾಜ್ ತನಕ ವಿವಿಧ ಶೈಲಿಯ ಸುಮಾರು ನಾಲ್ಕು ತಲೆಮಾರಿನ ಚಿತ್ರಗಳಿಗೆ ಗುಲ್ಝಾರ್ ಬರೆದ ಹಾಡುಗಳು ಈ ಐವತ್ತು ವರುಷಗಳ ಹಿಂದೀ ಚಿತ್ರಗಳ ಸಾಕ್ಷಿ ಪ್ರಜ್ಞೆಯಂತೆ ಕೆಲಸ ಮಾಡಿದೆ. ಆ ಹಾಡಿನ ಹಂಗಿಲ್ಲದೆ ಗುಂಗಿಲ್ಲದೆ ನಮ್ಮ ಯಾವ ನೆನಪುಗಳೇ ಇಲ್ಲ. ಈ ಹಾಡುಗಳು ನಮ್ಮ ಭಾವ ಜೀವನದ ಅಂತ:ಸತ್ವವಾಗಿವೆ. ಬಹುತೇಕ, ಬರೆದ ಅನುಕ್ರಮದಲ್ಲೇ ಜೋಡಿಸಲಾಗಿರುವ ಈ ಹಾಡುಗಳನ್ನು ಓದುತ್ತಾ ಹೋದಂತೆ ನಾವು ನಮ್ಮದೇ ಬದುಕನ್ನು ಮತ್ತೆ ಹೊಸದಾಗಿ ಮೊದಲಿಂದ ಅದರೆಲ್ಲ ಬಣ್ಣ, ರುಚಿ, ಗಂಧ, ಆದ್ರ್ರತೆಯೊಂದಿಗೆ ಅನುಭವಿಸಿದಂತಾಗುತ್ತದೆ. ನಮ್ಮ ಪಯಣದಲ್ಲಿನ ಈ ಹಾಡುಗಳ ಪಾತ್ರ ಮನದಟ್ಟಾಗುತ್ತದೆ.
ಇಂಥ ಹಾಡುಗಳನ್ನು, ಮೂಲದ ಲಯವಿನ್ಯಾಸವನ್ನು ಇಟ್ಟುಕೊಂಡೆ ಭಾಷಾಂತರಿಸುವುದು ರಾತ್ರಿ ಕಂಡ ಬಾವಿಯಲ್ಲಿ ಹಗಲೇ ಬೀಳುವ ಕೆಲಸ. ಏಕೆಂದರೆ ಪ್ರತಿ ಹಿಂದೀ ಹಾಡಿನ ಪ್ರೇಮಿಗೂ ಆ ಹಾಡಿನ ಒಕ್ಕಣಿಕೆ ಚಲನೆ, ಭಾವವಿನ್ಯಾಸ, ಅದರ ಇತರ ಮ್ಯೂಸಿಕ್ ಮತ್ತು ಆಲಾಪಗಳೊಂದಿಗೇ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಅನುವಾದ ಓದಲು ಆರಂಭಿಸಿದ್ದೇ, ಅದರ ರೆಕಾರ್ಡ್ ಮನಸ್ಸಲ್ಲಿ ಶುರುವಾಗಿಬಿಟ್ಟಿರುತ್ತದೆ. ಮಜಾ ಅಂದರೆ, ನನ್ನಂಥ ಹಿಂದಿ ಹಾಡಿನ ಪ್ರೇಮಿ ಕನ್ನಡಿಗರಿಗೆ ಮೂಲದ ಹಾಡಿನ, ಅದರಲ್ಲೂ ಗುಲ್ಝಾರ್ ರ ಹಾಡಿನ ಹೆಚ್ಚಿನ ಸಾಲುಗಳು ಅರ್ಥವೇ ಆಗಿರಲಿಲ್ಲ. ಏಕೆಂದರೆ ಅವು ಅಷ್ಟು ಸಾಂದ್ರವಾದ, ಅಪರಿಚಿತವಾದ, ಆದರೆ ಕೇಳಲು ಇಂಪಾದ, ಪದಪುಂಜಗಳಿಂದ ತುಂಬಿರುತ್ತಿದ್ದವು. ದಿಲ್ ಢೂಂಢತಾ ಹೈ ಫಿರ್ ವಹಿ ಯಂಥ ಹಾಡುಗಳು ನನಗಂತೂ ಬೇಂದ್ರೆಯವರ ಜೋಗಿ ಯಷ್ಟೆ ಈಗಲೂ ತ್ರಾಸು ಕೊಡುವ ರಚನೆಗಳು.

ಆರಂಭದ ಸಾಲುಗಳು ಅರ್ಥವಾದರೆ ಸಾಕು, ಇಡೀ ಹಾಡು ಅರ್ಥವಾದಂಥ ಹುಂಬ ಸಂತೋಷ. ಯಾರಾ ಸಿಲಿ ಸಿಲಿ ಅಂದ್ರೆ ಏನು ಅಂತ ಈಗಲೂ ಗೊತ್ತಿಲ್ಲ. ಇದಕ್ಕೆಲ್ಲ ಒಂದು ದೊಡ್ಡ ಪರಿಹಾರವೆಂಬಂತೆ ಇಟ್ನಾಳ, ಗುಲ್ಝಾರ್ ರ ಎಲ್ಲಾ ಮಹತ್ವದ ಹಾಡುಗಳನ್ನು ಇಲ್ಲಿ ಭಾಷಾಂತರಿಸಿದ್ದಾರೆ ಮತ್ತು ಮೂಲದೊಂದಿಗೇ ಕೊಟ್ಟಿದ್ದಾರೆ. ಇದು ಗುಲ್ಝಾರ್ ಹಾಡುಗಳನ್ನು ಅರ್ಥಮಾಡಿಕೊಂಡು ಆಸ್ವಾದಿಸುವ ಒಂದು ವಿನೂತನ ಮತ್ತು ಅಮೂಲ್ಯ ಅವಕಾಶವಾಗಿದೆ. ‘ಬೋಲೆರೆ ಪಪಿಹರಾ’ ಕೇಳಿದವರೆಲ್ಲ ಅದು ಕೋಗಿಲೆಯನ್ನೇ ಉದ್ದೇಶಿಸಿದ ಹಾಡು ಅಂದುಕೊಂಡು ಬಿಟ್ಟಿರುತ್ತೇವೆ. ‘ಪಪಿಹಾ’ ಅಂದರೆ ಮಳೆಗೆ ಕಾಯುವ ಚಾತಕಪಕ್ಷಿ! ಎಂದು ನನಗೆ ಈ ಅನುವಾದದಿಂದ ತಿಳಿಯಿತು. ಹೀಗಾಗಿ ಪೂರ್ವಸ್ಮೃತಿಯೊಂದಿಗೆ ಈ ಹಾಡುಗಳ ಅನುವಾದವನ್ನು ಹೊಸದಾಗಿ ಓದುವುದೇ ಒಂದು ವಿಶೇಷವಾದ ಅನುಭವ.
ಗುಲ್ಝಾರ್ ರ ಹಾಡುಗಳಲ್ಲಿರುವ ಸೂಕ್ಷ್ಮ ವಿನೋದವೂ ಈ ಓದಿನಲ್ಲಿ ಒಂದು ಕಾವ್ಯ ರೂಪದಲ್ಲಿ ನಮಗೆ ಸಿಗುತ್ತದೆ. ಸುಮ್ಮನೆ ಭಾವಾಭಿವ್ಯಕ್ತಿಯಾಗಿ ಗುನುಗುನಿಸಿದ ಹಾಡುಗಳಲ್ಲಿ ಎಷ್ಟೊಂದು ಅರ್ಥಪೂರ್ಣವಾದ ಜೀವನ ಜಿಜ್ಞಾಸೆ ಇದೆ, ಪ್ರತಿಮೆ ರೂಪಕಗಳಿವೆ ಎಂಬುದನ್ನು ಈ ಓದಿನಲ್ಲಿ ನಾವು ಪಡೆಯಬಹುದಾಗಿದೆ. ಜೊತೆಗೆ ಇಟ್ನಾಳ ಕೆಲವು ವಿಶೇಷ ಹಾಡುಗಳ ರಚನೆಯ ಹಿನ್ನೆಲೆಯ ಕುತೂಹಲಕಾರಿ ಪ್ರಸಂಗಗಳನ್ನೂ ಅಲ್ಲಲ್ಲಿ ಕೊಟ್ಟಿದ್ದಾರೆ. ಹೀಗಾಗಿ ಇದೊಂದು ಆಸಕ್ತಿಕರ ಸಂಕಲನವಾಗಿದೆ.

ಹಾಥೋಂ ಸೆ ಛೂ ಕೆ ಇಸೆ ರಿಶ್ತೋಂ ಕಾ ಇಲ್ಜಾಮ್ ನ ದೋ
ಕರ ಸೋಕಿ ಅದಕೆ ಸಂಬಂಧದ ಕೋಳ ತೊಡಿಸದಿರು – (ಕಂಡಿಹೆನಾ ಕಂಗಳ…)

ಆಪ್ ಕೀ ಬದಮಾಶಿಯೋಂ ಕೆ ಯೆ ನಯೇ ಅಂದಾಜ ಹೈ
ಇದುವೆ ನಿನ್ನ ಕೀಟಲೆತನದಾ ಮುದ್ದು ಮಾದರಿಯಾಗಿದೆ
-(ನಿನ್ನ ಕಣ್ಣಲೇನೋ ಒಂದು..)
ಥೋಡಾ ಸಾ ಹಸಾಕೆ, ಥೋಡಾ ಸಾ ರುಲಾ ಕೆ
ತುಸು ಅಳು ಕಳಿಸಿ, ನಗು ಮರುಕಳಿಸಿ – (ಬರಲಿರುವ ಕ್ಷಣವು …)

ಆಬುದಾನಾ ಢೂಂಢತಾ ಹೈ ಆಶಿಯಾನಾ ಢೂಂಢತಾ ಹೈ
ಹೊಟ್ಟೆಪಾಡನು ಹುಡುಕುತಿರುವ, ಪುಟ್ಟಗೂಡನು ಬಯಸುತಿರುವ
-(ಏಕಾಂಗಿ)

ಹೀಗೆ ನೋಡಲು ಸರಳ ಅನಿಸುವ ಸಾಲುಗಳ ಅನುವಾದ ಅಷ್ಟು ಸರಳವಲ್ಲ. ಆದರೂ ಇಟ್ನಾಳ ಆದಷ್ಟು ಮೂಲಕ್ಕೆ ನಿಷ್ಠರಾಗಿ ಅದನ್ನು ತುಂಬಾ ವಿಶ್ವಾಸದಿಂದಲೇ ನಿಭಾಯಿಸಿದ್ದಾರೆ. (ಬಡೀ ವಫಾಸೆ ನಿಭಾಯಿ ತುಮ್ನೆ ಹಮಾರಿ ಥೋಡಿಸಿ ಬೇವಫಾಯಿ!) ಹೀಗಾಗಿ ರಾಗ ಮಾಧುರ್ಯ ಮತ್ತು ಭಾಷೆಯ ಅಪರಿಚಿತತೆಯಿಂದಾಗಿ ನಮ್ಮಿಂದ ಮರೆಯಾಗಿದ್ದ ಗುಲ್ಝಾರ್ ರ ಕಾವ್ಯ ವಿವರಗಳು ನಿಚ್ಚಳವಾಗಿ ನಮಗೆ ಕಾಣುವಂತಾಗಿದೆ.

ತೊರೆದೋಡಿ ಬಂದೆವು ಆ ಓಣಿ ಅಂಗಳ
ಅಲ್ಲಿ ಪದ ಪದಗಳಲ್ಲು ಪದುಮ ಅರಳುತಿತ್ತು
ನಕ್ಕರಲ್ಲಿ ಕೆನ್ನೆಗಳಲಿ, ಗುಳಿಯೊಂದು ಬೀಳುತಿತ್ತು
ನಿನ ಸೊಂಟ ಕಸುವಲ್ಲಿ, ನದಿಯೆ ತಾ ತಿರುಗುತಿತ್ತು
ನಿನ ನಗು ಕೇಳಿ ಕೇಳಿ ತೆನೆಯೆ ತಾ ಮಾಗುತಿತ್ತು
ನಿನ ಹಿಮ್ಮಡಿಯಿಂದ ಹುಡಿಬೆಳಕು ಹಾರುತಿತ್ತು –(ತೊರೆದೋಡಿ ಬಂದೆವು)
ನಿನ್ನ ಕಣ್ಣಿಂದ ಜಾರಿದ ಇಬ್ಬನಿ
ನನ್ನ ಕಣ್ಣಲ್ಲಿ ನಿಂತ ಹಾಗಿದೆ. –(ನಲುಗಿದ ನೋವಿನ…)

ರೆಂಬೆ ಮೇಲೆ ಬಿಸಿಲು ಬರಲು
ಕೈಯ ನೀಡಿ ಕುಲುಕಲು
ನೆರಳು ಛಂಗನೆ ನೆಲಕೆ ಜಿಗಿದು
ನಗುತ ಕರೆವುದು ಮುಟ್ಟಲು – (ಗಾಳಿ ಮೇಲೆ ಬರೆ ನೀ…)

ನೀನೆಲ್ಲಿ ತಿರುಗಿ ಮರೆಯಾದೆಯಲ್ಲೆ
ಆ ತಿರುವು ಇನ್ನೂ ನಿಂತಿರುವುದಲ್ಲೆ
ಈ ಕಾಲುಗಳಲಿ ಅರಿಯೆನೆಷ್ಟೋ
ಸುಳಿಗಳು ಸಿಲುಕಿ ನಿಂದಿರುವೆನಿಲ್ಲೆ – (ನೂರಾರು ದಾರಿಯಲಿ..)

ಅಂಗ ಅಂಗದಲ್ಲಿ ಸುಡುತಿವೆ ನೋವಿನ ಕಿಡಿಗಳು
ಹೊಸಕಿದ ಹೂಗಂಧದಲಿ ಗುಂಪಾದ ಚಿಟ್ಟೆಗಳು
ಇರುಳೆಲ್ಲ ಮದರಂಗಿ, ಕಾಲಡಿಯಲಿ ಬಿಕ್ಕುತಿಹುದು
ಮಾಡಲೇನು, ಹೇಳಲ್ಹೇಗೆ, ಉರುಳದೇಕೆ ಇರುಳಿದು
ಎದೆವುರಿಯು, ಜೀವನಿಗಿಯು -(ಎದೆವುರಿಯು ಜೀವನಿಗಿಯು…)

ಎತ್ತದಿರು ಇನ್ನೂ ನನ್ನ ಗೆಳೆಯನ ಶವವನ್ನು
ಬೆಚ್ಚಗಿದೆ ಇನ್ನೂ ಈ ಮಣ್ಣು, ದೇಹವೂ ಇನ್ನೂ -(ವಿದಾಯ…)

ಹಸಿ ಹಸಿ ಮನಸೊಂದು ದಿಂಬಿನಡಿಗಿರಬಹುದು
ಅದ ಕಳುಹಿಸು, ನನ್ನ ಸರಂಜಾಮು ಮರಳಿಸು –(ನನ ಒಂದಿಷ್ಟು ಸರಂಜಾಮು..)

ಹೂವಾಗುವಳು ಹೆಸರೆತ್ತಿದರವಳು
ಪರಿಮಳದಿಂದಲೆ ಕಾಣುವಳವಳು
ತಾಯತ ಮಾಡಿ ಧರಿಸುವೆನವಳ
ಪವಾಡದ ಥರ ದೊರಕಿದರವಳು – (ನಡೆ ನೆರಳ ನೆರಳಲಿ)
ಯಾರೋ ಎಲ್ಲೋ ಇದ್ದರೆ ಚೆನ್ನ
ನನ್ನವರೆಂದು ಹೇಳಲು ಗೆಳೆಯಾ
ಹತ್ತಿರವಿರದಿರೆ ದೂರವೆ ಇರಲಿ
ಆದರೂ ಯಾರೋ ನನ್ನವರು -(ಯಾರೋ ಎಲ್ಲೋ ಇದ್ದರೆ ಚೆನ್ನ)

ಒಡೆದು ಹೋದ ಬಳೆಗಳಿಂದ
ಸಿಂಗರಿಸಲೆ ಮುಂಗೈಗಳನು
ಕಳೆದು ಬಂದ ಓಣಿಗಳಲಿ
ಏನು ಮರೆತು ಬಂದಿಹೆನೊ -(ಗೆಳೆಯಾ ಹಸಿ ಹಸಿ)

ಇಷ್ಟು ಸರಳ ಸುಂದರ ತೀವ್ರ ಪಂಕ್ತಿಗಳೇ ಸಾಕು ಓದಿನ ತೃಷೆಯನ್ನು ಹೆಚ್ಚಿಸಲು, ‘ನನ್ಹಾ ಮುನ್ಹಾ ಸಪನಾ’ಗೆ ‘ಚಿಕ್ಕಾಲಿ ಕನಸು’ ಎಷ್ಟು ಮುದ್ದಾಗಿದೆ.

ಅನುವಾದ ಅಂದರೆ ಇನ್ನೊಬ್ಬನ ಪ್ರೇಯಸಿಯನ್ನು ಶಾಪಿಂಗ್ಗೆ ಕರೆದುಕೊಂಡು ಹೋದ ಹಾಗೆ. ಅದರ ಕಷ್ಟ ಸುಖಗಳೇ ಬೇರೆ. ಅಥವಾ, ಅತ್ತರನ್ನು ಒಂದು ಬಾಟಲಿಯಿಂದ ಇನ್ನೊಂದು ಬಾಟಲಿಗೆ ವರ್ಗಾಯಿಸಿದ ಹಾಗೆ. ಚೂರು ಸುಗಂಧ ದ್ರವ್ಯ ಹಾರಿ ಹೋಗುವುದು ಅನಿವಾರ್ಯ. ಈ ಕಸುಬಿಗೆ ಒಂದು ಅಂತಸ್ಥವಾದ ನಿಸ್ವಾರ್ಥ ಬೇಕು. ಮೂಲದ ಕುರಿತು, ಕಾವ್ಯದ ಕುರಿತು ಅಪಾರವಾದ ಅನುರಕ್ತಿ ಬೇಕು. ಮತ್ತು ಪದೇ ಪದೇ ತಿದ್ದಿತೀಡಿ ಮೂಲದ ಆತ್ಮದ ಸನಿಹ ಸಾಗುವ ತಾಳ್ಮೆ ಬೇಕು.

ಲಕ್ಷ್ಮೀಕಾಂತ ಇಟ್ನಾಳರ ಈ ಅವಳಿ (ಜೈಹೋ, ದಸ್ತಕ್) ಸಂಕಲನಗಳಲ್ಲಿ ಈ ಗುಣಗಳು ಪ್ರತಿಫಲಿಸುತ್ತಿವೆ. ಧಾರವಾಡದ ತಮ್ಮ ಮಿಚಿಗನ್ ಕಂಪೌಂಡಿನ ಮಾವಿನ ಮರಗಳ ಹಣ್ಣನ್ನು ನಮಗೆ ತಿನಿಸುವಷ್ಟೇ ಅಕ್ಕರೆಯಿಂದ ಅವರು ನಮ್ಮನ್ನು ಗುಲ್ಝಾರ್ ರ ನಿಬಿಡವಾದ ಅಷ್ಟೇ ವೈವಿದ್ಯಮಯವಾದ, ಚೈತನ್ಯಶಾಲಿಯಾದ ತೋಟದಲ್ಲಿ ಅಡ್ಡಾಡಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಈ ಎರಡು ಪುಸ್ತಕಗಳಲ್ಲಿ ಮೂಲ ಪಠ್ಯವನ್ನು ಪಕ್ಕದಲೇ ಕೊಟ್ಟಿರುವುದು ಅವರ ಪ್ರಾಂಜಲತೆಗೆ ನಿದರ್ಶನವಾಗಿದೆ. ಇದು ಓದುಗರ ರಚನಾತ್ಮಕ ಸ್ಪಂದನಕ್ಕೆ ಪ್ರಚೋದನೆ ನೀಡುವಂತಿದೆ.

ಈ ‘ದಿನ-ರಾತ್ರಿ’ ಗಳು ಹೇಗೆ ಚದುರಿ ಬಿದ್ದಿವೆ ಎಂದರೆ.
ಮುತ್ತಿನ ಹಾರವೊಂದು ಹರಿದು ಬಿದ್ದಂತೆ! — (ತ್ರಿವೇಣಿ)

ಚದುರಿ ಬಿದ್ದಿರುವ ಎಲ್ಲರನ್ನೂ ಎಲ್ಲವನ್ನೂ ಅಂತಃಕರಣದ ಸೂತ್ರದಲ್ಲಿ ಮರಳಿ ಪೋಣಿಸುವ ಸೂತ್ರವೇ ಕಾವ್ಯ. ತಮ್ಮ ಬರವಣಿಗೆ, ವ್ಯಕ್ತಿತ್ವ, ಘನವಾದ ಮಾತು, ಚಿತ್ರಪಟಗಳ ಮೂಲಕ ಇಂಥದೊಂದು ಸೂತ್ರವನ್ನು ಕಲ್ಪಿಸುತ್ತಲೇ ಬಂದಿರುವ ನಮ್ಮೆಲ್ಲರ ಸಂವೇದನೆಯ ಮಹಾ ಪೋಷಕ ಗುಲ್ಝಾರ್ ಸಾಬ್ ಗೆ ನಮಸ್ಕಾರ.

‍ಲೇಖಕರು admin

27 December, 2016

2 Comments

  1. ಸಂಗಮೇಶ ಡಿಗ್ಗಿ ಸಂಗಾಮಿತ್ರ

    ಸರ್, ನನಗೆ ಈ ಪುಸ್ತಕ ಬೇಕೆ. ಎಲ್ಲಿ ಸಿಗುತ್ತೆ ಅಂತ ತಿಳಿಸುವಿರಾ…?
    ಪೋಸ್ಟ್ ಮಾಡಲು ಸಾಧ್ಯವಾಗಬಹುದಾ..?
    8553550012 ಈ ನಂಬರ್ ಗೆ ಕಾಲ್ ಮಾಡಿ ಹೇಳಿ ಅಡ್ರೆಸ್ ಕಳುಹಿಸುತ್ತೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading