ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅವಧಿ’ ಅಂಗಳದಲ್ಲಿ ಅನಲೆ : ವಿಭೀಷಣನಿಗೆ ಮಾತ್ರ ಮಗಳಲ್ಲ, ಇಡೀ ಕುಟುಂಬದ ಮಗಳು

(ಇಲ್ಲಿಯವರೆಗೆ…)

ರಾಜಶಾಸನವಿರ್ಪೊಡಂ,
ಸೋದರನ ಕೊಲೆಗೆ ಕಾರಣಮಪ್ಪ ದುರ್ಯಶಕೆ ಪೇಸುವೆನ್….
ಮನವಿರಲ್ ನೆರವಾಗು.
ಇರದಿರಲ್ ಲಂಕೆಯನುಳಿದು ಪೋಗು.
ಅನ್ಯ ವಾದಕ್ಕಿಲ್ಲಿ ಕೇಳ್ ಇನಿತುಂ ಅನುವಿಲ್ಲ….
ನನ್ನ ಮಾರ್ಗಂ ನನಗೆ; ನಿನ್ನದು ನಿನಗೆ
ಎಂದು ರಾವಣ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತಾನೆ.
ವಿಭೀಷಣ:
ಕಟ್ಟಕಡೆ ನಿರ್ಣಯವೊ?
ರಾವಣ:
ಕೊಟ್ಟ ಕೊನೆ ನಿರ್ಣಯಂ!
ವಿಭೀಷಣ:
ನಿನಗೊಳ್ಳಿತಕ್ಕೆ! ಸದ್ಬುದ್ಧಿ ಬರ್ಕ!
ತಂದೆಯ ತಪದ ಮೈಮೆಯಿಂದಪ್ಪೊಡಂ
ನಿನ್ನಾತ್ಮಕುದ್ಧಾರಮಿರ್ಕ !
ಪೋಪೆನಿಲ್ಲಿಂದೆ, ಬೀಳ್ಕೊಡಿಮ್!
ರಾವಣ:
ಎತ್ತಣ್ ಗೆ?
ವಿಭೀಷಣ:
ಅನಿಶ್ಚಿತಂ
ರಾವಣ:
ಕಡಲಾಚೆ ದಡದೆಡೆಗೊ?(ರಾವಣ ಈ ಮಾತಿನಲ್ಲಿ ವ್ಯಂಗ್ಯವಿದೆ; ಮುಂಗಾಣ್ಕೆಯಿದೆ)
ವಿಭೀಷಣ:
ಏನರ್ಥಮದಕೆ?
ರಾವಣ:
ಅರಿದಿದೆ ನಿನಗೆ;
ನೀಂ ಪೇಳಲಕ್ಕುಮಯ್!
ವಿಭೀಷಣ:
ನೀನಿನಿತು ಕೀಳ್ ಮನನ್ ಎಂದರಿದೆನಿಲ್ಲ ಇನ್ನೆಗಂ!
ರಾವಣ:
ಪರಸ್ಪರಮಲ್ತೆ ಪೇಳ್ ಆ ಅರಿವು!
ವಿಭೀಷಣ:
ನಮಸ್ಕಾರ
ಈ ಕ್ಷಣ, ಮೇಲಿನ ನಾಟಕದ ಕೊನೆಯ ಕ್ಷಣ, ನಮಸ್ಕರಿಸಿ ಮೇಲೆದ್ದ ವಿಭೀಷಣನ ಜೊತೆಯಲ್ಲಿ ಅನಲೆಯೂ ಎದ್ದುಬಿಡುತ್ತಾಳೆ! ಅವಳು ಎದ್ದುದನ್ನು ಕಂಡ ರಾವಣ, ವಾದದಲ್ಲಿ ಮುಳುಗಿಹೋಗಿದ್ದ ರಾಜೇಂದ್ರ, ದಾನವೇಂದ್ರ ರಾವಣ ತೆಕ್ಕನೆ ಎಚ್ಚೆತ್ತು ‘ತಂದೆ’ ರಾವಣನಾಗುತ್ತಾನೆ!
ಆಜ್ಞೆಯಿಂ ಸಾಧ್ಯಮಪ್ಪೊಡಂ ಇದನ್ ಬೇಡುವೆನ್.
ಅನಲೆಯಂ ಕೊಂಡೊಯ್ದು,
ಸುಕುಮಾರಿಯಂ ಕಠಿನಕೊಡ್ಡದಿರ್
ತಮ್ಮ ವಿಭೀಷಣನನ್ನೇ ಬೇಡುತ್ತಿದ್ದಾನೆ ರಾವಣ. ಆಗ ಅನಲೆ ಮಾತನಾಡಲೇಬೇಕಾದ ಸಂದರ್ಭ ಬರುತ್ತದೆ. ಏಕೆಂದರೆ ರಾವಣ ವಿಭೀಷಣನ ಶತ್ರುವಲ್ಲ, ಅಣ್ಣ. ಸೀತಾಪಹರಣದ ಕಳಂಕವಿಲ್ಲದಿದ್ದಲ್ಲಿ ವಿಭೀಷಣ ತನ್ನ ಅಣ್ಣನ ವಿಷಯದಲ್ಲಿ ಕಠಿಣನಾಗುವ ಸಂದರ್ಭ ಬಂದಿರಲೇ ಇಲ್ಲ. ಅದಕ್ಕೆ, ಆತನಿಗೆ ರಾವಣನ ಈ ಬೇಡಿಕೆ ವಿಚಿತ್ರವೆನಿಸುವುದಿಲ್ಲ. ಅದರಿಂದಲೇ ಆತ ಮೌನವಹಿಸುತ್ತಾನೆ; ಮೌನವೇ ಸಮ್ಮತಿ ಎಂಬಂತೆ! ಆಗ,
ಅನಲೆ:
ಮನ್ನಿಸೆನ್ನನ್;
ತಂದೆಯೊಡವೋಗಿ, ಧರ್ಮಮನ್ ಸೇವಿಪೆನ್
ರಾವಣ:
ಇಲ್ಲಿರ್ದೆ ಧರ್ಮಕೆ ಸೇವೆಗೆಯ್!
ಅನಲೆ:
ಧರ್ಮಮಂ ಪೊರಗಟ್ಟಿ ಸೇವಿಪ್ಪುದೆಂತು!
ರಾವಣ: (ಅನಲೆಯ ಕೈಹಿಡಿದು)
ನನ್ನನ್ನರಂ ನಿನ್ನನ್ನರುಳಿಯೆ, ಧರ್ಮಂ ಉದ್ಧಾರಮಾದಪುದೆ?
ನಿನ್ನಯ್ಯಗಿಂ ಮಿಗಿಲ್ ನೀನ್ ವೇಳ್ಕುಮೆನಗಲ್ತೆ?

ಅನಲೆ: (ರಾವಣನ ತರ್ಕದ ಮುಂದೆ, ಅನಲೆ ಸೋಲುತ್ತಾಳೆ.)
ಬೊಪ್ಪನಪ್ಪಣೆಯೆನಗೆ ಬಟ್ಟೆ
(ಎಂದು ತಾನು ಎಲ್ಲಿರಬೇಕೆಂಬುದನ್ನು ವಿಭೀಷಣನ ತೀರ್ಮಾನಕ್ಕೆ ಬಿಡುತ್ತಾಳೆ)
ವಿಭೀಷಣ:
ಪಿರಿಯಯ್ಯನೆಂಬುದೆ ದಿಟಂ,
ಮಗಳೆ ನೀನಿರಲ್ ವೇಳ್ಕುಂ ಅದೆ ನೀತಿ.
ಅನಲೆ:
ತೊರೆವೆನೆ ನಿನ್ನ ಸಾನ್ನಿಧ್ಯಮಂ?
ರಾವಣ: (ದೈನ್ಯದಿಂದ)
ನಿನಗೆ ತಡೆಯುಂಟೆ, ಪೇಳಕ್ಕ?
ನಿನ್ನಯ್ಯನ್ ಎಲ್ಲಿರ್ದೊಡಲ್ಲಿಗೆ, ಏಗಳಾದೊಡಂ,
ಪೋಗಿ ಬರಲನುಮತಿಯನ್
ಅಂತೆಯೇ ವಿಮಾನಮನ್ ಪುಷ್ಪಕವನ್ ಈವೆನ್!
ಎಂದು ಅನಲೆಯ ಬಳಿ ನಿಲ್ಲುತ್ತಾನೆ. ರಾವಣನ ಆ ದೈನ್ಯದಲ್ಲಿ, ಆತನ ಉದ್ಧಾರಕರವಾದ ಭಾವಬೀಜವನ್ನು ವಿಭೀಷಣ ಗುರುತಿಸಿ, ಹರ್ಷಿಸಿ ಅವರನ್ನು ಬೀಳ್ಕೊಳ್ಳುತ್ತಾನೆ. ಇಲ್ಲಿ ಅನಲೆಯ ಒಲವು ನಿಲುವುಗಳು ಸುಂದರವಾಗಿ ಅಭಿವ್ಯಕ್ತಿಗೊಂಡಿವೆ. ಆಕೆ ವಿಭೀಷಣನಿಗೆ ಮಾತ್ರ ಮಗಳಲ್ಲ, ಇಡೀ ಕುಟುಂಬದ ಮಗಳು. ಆದ್ದರಿಂದ ಕುಟುಂಬದ ಯಜಮಾನನಾದ ರಾವಣ ಅಧಿಕಾರದಿಂದ ಮಾತ್ರವಲ್ಲ, ಅನಲೆಯ ಮೇಲಿಟ್ಟಿದ್ದ ತನ್ನ ಪರಿಶುದ್ಧ ಪ್ರೀತಿಯಿಂದಲೂ ಗೆಲ್ಲುತ್ತಾನೆ. ಆತನ ಮನಃಪರಿವರ್ತನೆಯಲ್ಲಿ ಅನಲೆಯ ಪಾತ್ರ ದೊಡ್ಡದು. ಕವಿ ಕುವೆಂಪು ರಾಮಾಯಣವನ್ನು ರಾಮಾಯಣದರ್ಶನವನ್ನಾಗಿಸಿದ್ದೇ ಊರ್ಧ್ವಭಿಲಾಷೆಯಿಂದ (ಪಾಪಿಗುದ್ಧಾರಮಿಹುದೌ ಸೃಷ್ಠಿಯ ಮಹದ್ ವ್ಯೂಹರಚನೆಯೊಳ್). ಅದಕ್ಕೆ ಕವಿ ಮಾನಸಪುತ್ರಿಯಾದ ಅನಲೆ ನೆರವಾಗದಿರುತ್ತಾಳೆಯೆ!?

***

ಮುಂದೆ ಮತ್ತೆ ನಮಗೆ ಅನಲೆಯ ದರ್ಶನವಾಗುವುದು, ಯುದ್ಧ ಆರಂಭವಾದ ಮೇಲೆ ರಾವಣ, ಸೀತೆಯನ್ನು ಭೇಟಿಯಾದಾಗ. ಆದರೆ ಅದು ನಮಗೆ ತಿಳಿಯುವುದು ಮಂಡೋದರಿ-ರಾವಣರ ನಡುವೆ ನಡೆಯುವ ಸಂಭಾಷಣೆಯ ಮೂಲಕ. ಅವರಿಬ್ಬರ ಸಂಭಾಷಣೆಯ ನಡುವೆಯೂ ‘ಅನಲೆ’ ಎಂಬ ಹೆಸರು ಮಿಂಚಿನ ಸಂಚಾರವನ್ನುಂಟು ಮಾಡುತ್ತದೆ. ರಾವಣನ ಮನಸ್ಸನ್ನು ಆರ್ದವಗೊಳಿಸುತ್ತದೆ. ‘ಸೀತೆಯನ್ನು ಒಬ್ಬನೇ ಹೋಗಿ ಕಂಡಿದ್ದೇಕೆ?’ಎಂದು ಮಂಡೋದರಿ ಕಳವಳಗೊಳ್ಳುತ್ತಾಳೆ. ಸೀತೆಯ ರಕ್ಷಣೆಗೆ ಆಕೆಯೂ ತಪೋರಕ್ಷೆಯನ್ನು ಕಟ್ಟಿದ್ದಾಳೆ. ಆಕೆಯ ಕಳವಳವನ್ನು ನಿವಾರಿಸುತ್ತ ರಾವಣ, ‘ಇಂದ್ರಜಿತುವಿನ ಮಾಯೆಗೆ ಸಿಲುಕಿ ರಾಮಲಕ್ಷ್ಮಣ ಸಹಿತ ಕಪಿಸೇನೆಗೆ ಆದ, ಹಿಂದಿನ ದಿನದ ಸೋಲನ್ನು ಹೇಳಲು ಹೋಗಿದ್ದೆ. ಅಲ್ಲಿ ತ್ರಿಜಟೆಯಿದ್ದಳು, ಅನಲೆಯಿದ್ದಳು’ ಎನ್ನುತ್ತಾನೆ. ‘ಪೇಳ್ದಳ್ ಎನಗೆ ಅನಲೆ ಬೇರೊಂದು ಕಥೆಯಂ’ ಎಂದು ಮಂಡೋದರಿ ಅನಲೆಯ ಮಾತೆತ್ತಿದಾಗ, ರಾವಣ ಸಿಡಿಮಿಡಿಗೊಳ್ಳುವುದಿಲ್ಲ; ಬದಲಾಗಿ ತನ್ನ ಹೃದಯವನ್ನೇ, ಮನದಕುದಿತವನ್ನೇ ಮಂಡೋದರಿಯ ಮುಂದೆ ತೆರೆದಿಡುತ್ತಾನೆ. ಹಿಂದಿನ ರಾತ್ರಿ ತನಗೆ ಬಿದ್ದಿದ್ದ ಕನಸು, ಅದರಲ್ಲಿ ‘ವೇದವತಿ’ ಚಿತೆಗೆ ಬಿದ್ದದ್ದು, ನೋಡುತ್ತಾ ನೋಡುತ್ತಾ ಆ ವೇದವತಿಯೇ ಸೀತೆಯಂತೆ ಕಂಡಿದ್ದು ಅದರಿಂದ ತನಗಾದ ನಡುಕ ಎಲ್ಲವನ್ನೂ ಹೇಳುತ್ತಾನೆ. ಆ (ಸೀತೆಯೂ ಸತ್ತುಹೋದಳೆ ಎಂಬ) ಭಯದಿಂದಲೇ ಬೆಳಿಗ್ಗೆ ಆತ ಅಶೊಕವನಕ್ಕೆ ಹೋಗಿ ಮನಸ್ಸಿನ ಕಳವಳವನ್ನು ದೂರಮಾಡಿಕೊಂಡಿರುತ್ತಾನೆ, ರಾವಣ. ಆಗ, ಮಂಡೋದರಿ ‘ಅದು ನಿನ್ನಂತರಾತ್ಮದ ಶುದ್ಧ ಸಂದೇಶ, ಅದನ್ನು ದಿಕ್ಕರಿಸದರು’ ಎಂದು ಹೇಳುತ್ತ, ಅನಲೆ ತನಗೆ ಹೇಳಿದ್ದ ಘಟನೆಯನ್ನು ‘ಅದು ನಿಮ್ಮ ಕನಸಿಗಿಂತ ಮಿಗಿಲು’ ಎಂದು ಕೆಳಗಿನಂತೆ ಹೇಳುತ್ತಾಳೆ.
ತ್ರಿಜಟೆ ತನ್ನ ಕೈಂಕರ್ಯಮಂ ಮುಗಿಸಿ ಮಲಗಿದಳಂತೆ.
ದೇವಿ ಕಣ್ಮುಚ್ಚದೆಯೆ ಭೀಷ್ಮ ಮೌನವನಾಂತು
ತನ್ನೊಳಗೆ ತಾಂ ಪೊಕ್ಕ ಯೋಗಿನಿವೋಲಿರಲ್
ಕಂಡುದು ಅನಲೆಯ ಕಣ್ ಗೆ ಪರ್ಣಶಾಲೆಯ ತುಂಬಿದೊಂದನುಪಮಜ್ಯೋತಿ.
ರೋಮಾಂಚ ಕಂಚುಕಿತ ಗಾತ್ರೆ ನೋಡುತ್ತಿರಲ್,
ಬಾಹ್ಯಸಂಜ್ಞಾಶೂನ್ಯೆ ಆ ಸೀತೆ ತೊಡಗಿದಳ್
ಆರೊ ನುಡಿಸಿದವೊಲಾಗಿ ಸಂವಾದಮಂ.
ಆ ಪೂಜ್ಯೆ ಅಲ್ಲಿರ್ದಂ ಎಲ್ಲೆಲ್ಲಿಯುಂ ಚರಿಸುತಿರ್ದಂತೆ,
ಅಲ್ಲಿರ್ದಂ ಎಲ್ಲಮಂ ಕಾಣುತಿರ್ದಂತೆ,
ಮೇಣ್ ಅಲ್ಲಿ ತಾಟಸ್ಥ್ಯಮಂ ತಾಳ್ದಳೋಲಿರ್ದೊಡಂ ದೂರಮಿರ್ದು
ಇತರರ ಜಗತ್ ಕ್ರಿಯಾಚಕ್ರಮಂ ನಡೆಪವೋಲ್ ಆಚರಿಸುತಿರ್ದಳಂ
ಕಂಡು ಅನಲೆ ಮೆಯ್ಮರೆತಳಂತೆ ಭಯರಸವಶೆ!
ಅನಂತರಂ ಹದಿಬದೆಯ ಕಯ್ಯ ಸೋಂಕಿಗೆ ಅನಲೆ ಕಣ್ದೆರೆಯೆ,
ರಾಮಸತಿ ‘ಅಭೀತಯಾಗಲೆ ವತ್ಸೆ, ನೀಂ ಕಂಡ ದೈವಿಕಕೆ.
ನಿನ್ನಯ್ಯನುಪಕೃತಿಗೆ ಬರ್ದುಕಿತೌ ನನ್ನಯ್ದೆದಾಳಿ.
ಕಂಟಕಮೊಂದು ಕಳೆದುದೌ ಪ್ರಭು ರಾಮಚಂದ್ರಂಗೆ!’
ಎನುತೆ ಸಂತೈಕೆಯಂ ಪೇಳ್ದ
ಪಾವನೆಯ ಪದತಲಕೆ ನಮಿಸಿದಳಂತೆ ನಮ್ಮ ಅನಲೆ!
ಪತಿಯ, ಮೈದುನನ, ಮತ್ತವರ ಸೈನ್ಯಕ್ಕೆ ತಪೋರಕ್ಷೆ ಕಟ್ಟುವುದನ್ನು ಬಿಟ್ಟು ಸೀತೆ ಬೇರೆನನ್ನೂ ಮಾಡಲಾರಳು. ಅವಳೇ ಹೇಳಿದಂತೆ, ಅವಳು ಅಸ್ವತಂತ್ರಳು. ಆದರೆ ತಪಕೆ ಬಂಧನದ ಭೀತಿಯಿಲ್ಲ! (ತಪಸ್ಸು ಎಂಬುದನ್ನು ‘ಸತ್ಯ-ಅಹಿಂಸೆ’ಗೆ ಅನ್ವಯಿಸಿಕೊಂಡರೆ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಜಿಯ ಮಾರ್ಗವೂ ಇದೇ ಆಗಿತ್ತು ಅನ್ನಿಸುತ್ತದೆ). ಆ ಕ್ಷಣ, ಸೀತೆ ಅಲೌಕಿಕ ಸ್ಥಿತಿಯಲ್ಲಿದ್ದ ಹೊತ್ತು, ಅತ್ತ ರಾಮ ಸೈನ್ಯಕ್ಕೆ ಎದುರಾಗಿದ್ದ ಕಂಟಕ ದೂರವಾಗಿತ್ತು. ರಾಮನ ಜೀವಕ್ಕೆ ಬಂದ ಆಪತ್ತು ದೂರವಾಗಿತ್ತು. ಅದಕ್ಕೆ ಅನಲೆಯ ತಂದೆ ವಿಭೀಷಣನ ಸಹಾಯ ಹಸ್ತವಿತ್ತು. ಅದನ್ನೇ ಸೀತೆ ಅನಲೆಗೆ ಹೇಳಿದ್ದಾಳೆ. ಅನಲೆ ತಾನು ಕಂಡದ್ದನ್ನು ಮಂಡೋದರಿಗೆ ಹೇಳುವಲ್ಲಿಯೂ, ಮಂಡೋದರಿ ರಾವಣನಿಗೆ ಹೇಳುವಲ್ಲಿಯೂ, ಅನಲೆ-ಮಂಡೋದರಿಯರ ರಾವಣೋದ್ಧಾರದ ತುಡಿತವನ್ನು ಅರ್ಥ ಮಾಡಿಕೊಳ್ಳಬಹುದು. ಅದನ್ನೆ ತಿರುಚಿ, ರಾವಣನನ್ನು ಕೆರಳಿಸುವಂತೆ ಹೇಳಿ ಆತನ ಮೆಚ್ಚುಗೆ ಪಡೆಯುವವರಾಗಿದ್ದರೆ ಹಾಗೆ ಮಾಡಬಹುದಿತ್ತೇನೊ? ಆದರೆ ಅವರಿಬ್ಬರೂ ರಾವಣನ ಆತ್ಮೋದ್ಧಾರವೇ ತಮ್ಮ ಉದ್ಧಾರವೆಂದು ಭಾವಿಸಿದವರಾಗಿದ್ದಾರೆ. ಈ ವಿಷಯವನ್ನು ಅನಲೆಯಲ್ಲದೆ ಬೇರೆಯವರು ಹೇಳಿದ್ದು ಎಂದಿದ್ದರೆ ರಾವಣನ ಪ್ರತಿಕ್ರಿಯೆ ಹೇಗಿರುತ್ತಿತ್ತೊ? ಏನೊ? ಆದರೆ ಅನಲೆಯ ಹೆಸರೇ ಆತನನ್ನು, ಆತನ ಚಿಂತನಾಶಕ್ತಿಯನ್ನು ಮತ್ತೆ ಮತ್ತೆ ಊರ್ಧ್ವಮುಖಿಯನ್ನಾಗಿಸುತ್ತದೆ. ತಾನು ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಸರಿಸದೆಯೂ, ಅನಲೆಯ ಮೇಲಿನ ತನ್ನ ಪ್ರೇಮವನ್ನು ಕಡಿಮೆ ಮಾಡಿಕೊಳ್ಳದೆಯೂ, ಆಕೆಯ ವರದಿಗೆ ರಾವಣ ಕೆಳಗಿನಂತೆ ಪ್ರತಿಕ್ರಿಯಿಸುತ್ತಾನೆ.
(ಮುಂದುವರಿಯುತ್ತದೆ…)

‍ಲೇಖಕರು avadhi

17 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading