ಪುಟ್ಟಾರಾಧ್ಯ ಸಿದ್ದರಾಜ್
Common Kingfishers – Community Health Indicators.
ಕಿಂಗ್ ಫಿಷರ್ ನಾ ಹತ್ತಿದ ಮೊದಲ ಫ್ಲೈಟು. ಇನ್ನೂ ಅಂಡ್ರಾಯ್ಡ್ ಬಂದಿರದ ಎಲ್ಲವೂ ಸಮಾಧಾನದಲ್ಲಿ ನಡೆಯುವಂಥ ಕಾಲ ಎನ್ನಬಹುದು. ಏರ್ಪೋರ್ಟಿಗೆ ಬಿಎಂಟಿಸಿಯ ವೋಲ್ವೋ ಸರ್ವಿಸ್ ಆಗಿನ್ನೂ ಶುರುವಾಗಿತ್ತು. ಸ್ನೇಹಿತರ ಜೊತೆ ಬಸ್ಸು ಹಿಡಿಯಲು ನಿಂತಿದ್ದ ನನ್ನನ್ನು ಬಸ್ಸಿನ ಕಂಡಕ್ಟರ್ ಕಂಡು ಬೆದರಿ ನಂಬದೇ ಟಿಕೆಟ್ ತೋರಿಸಲು ಕೇಳಿದ್ದರು. ಅವರು ಬಸ್ಸಿನ ಟಿಕೆಟ್ ಕೇಳಿದ್ದರೆ ಮುಗಿಯುತ್ತಿತ್ತೇನೋ ಆದರೆ ಕೇಳಿದ್ದು ವಿಮಾನದ ಟಿಕೆಟ್( ನಂಬಿಕೆ ಬರದೆ). ಬೆದರು ಬೊಂಬೆಗೆ ಸಡಿಲವಾದ ಬಟ್ಟೆ ತೊಡಿಸಿದಂತೆ ಕಾಣುತ್ತಿದ್ದ ನನ್ನನ್ನು ಕಂಡು ಅವರಿಗೆ ಅನುಮಾನ ಬಂದಿದ್ದರೆ ಅದು ಸಹಜವು ಇರಬಹುದು. ಮುಂದೆ ಹೋಗುತ್ತಾ ಈವರೆಗೆ ಕಾರಣಾಂತರಗಳಿಂದ ಮಿಂಚುಳ್ಳಿಯನ್ನು ಕಂಡೇ ಇರಲಿಲ್ಲ( ದುರದೃಷ್ಟ). ಹಾಗಾಗಿ ಮೊದಲ ಕಿಂಗ್ ಫಿಷರ್ ಭೇಟಿಯಾದದ್ದು ಏರ್ಪೋರ್ಟಿನಲ್ಲಿ. ಜೀವವಿರದ ಕಿಂಗ್ ಫಿಷರ್ ಹತ್ತಿಳಿದು ಬಂದು ಹತ್ತು ವರ್ಷವಾದರೂ ಜೀವಂತ ಕಿಂಗ್ ಫಿಷರ್ ಕಂಡದ್ದು ಮೊನ್ನೆ ಮೊನ್ನೆಯಷ್ಟೇ.
ಒಮ್ಮೆ ಕಂಡ ಮೇಲೆ ಅದನ್ನ ಎಲ್ಲ ಕಡೆ ಕಂಡೆ, ಊರಲ್ಲಿ , ಬೆಂಗಳೂರಲ್ಲಿ ಹೀಗೆ. ಮಿಂಚುಳ್ಳಿ ಸಾಮಾನ್ಯ ಎಲ್ಲರ ಪ್ರಿಯ ಆದ್ದರಿಂದ ಸಾಕಷ್ಟು ಚಿತ್ರಗಳು, ವಿವರಗಳು ತಿಳಿದೇ ಇರುತ್ತವೆ. ಆದ್ದರಿಂದ ಹೆಚ್ಚು ವಿವರ ಹಾಕದೆ ಅದರಲ್ಲಿ ಕೆಲವನ್ನಷ್ಟೇ ಇಲ್ಲಿ ಹಾಕುವೆ. ಇದರಲ್ಲೂ ಬಹಳ ವಿಧಗಳಿದ್ದು ಇದು ನೀಲಿ ಮಿಂಚುಳ್ಳಿ.ಅದೇನು ಬಣ್ಣ, ಜಿಗಿತ, ಹಿಡಿತ, ಹಾರುವಿಕೆ ಎಲ್ಲವೂ ಸುಂದರ. ಸಾಮಾನ್ಯವಾಗಿ ಎಲ್ಲ ಮಿಂಚುಳ್ಳಿ ಗಳು ತಂತಮ್ಮ ಪ್ರದೇಶವನ್ನು (Territory) ಗುರುತು ಹಾಕಿಕೊಂಡು ಬೇರೆಯ ಮಿಂಚುಳ್ಳಿ ಗಳಿಗೆ ಒಳ ಬರಲು ಬಿಡದೆ ಕಾಯುತ್ತವೆ. ಹಾಗೆಯೇ ಈ ನೀಲಿ ಮಿಂಚುಳ್ಳಿ ಕೂಡ. ಆಕಸ್ಮಾತ್ ಬೇರೆ ಹಕ್ಕಿ ಬಂದರೆ ಜಗಳಕ್ಕೆ ಬಿದ್ದಿದ್ದೇ ತಡ ಆ ಹಕ್ಕಿಯ ಕೊಕ್ಕನ್ನು ಹಿಡಿದು ನೀರಿನಲ್ಲಿ ಮುಳುಗಿಸುತ್ತವೆ ಎಂದು ಓದಿ ಗಾಬರಿಯಾಯಿತು ( ಕಣ್ಣಾರೆ ಕಂಡಿಲ್ಲ ಇನ್ನೂ). ನಾ ಒಮ್ಮೆ ಊರ ಕಟ್ಟೆಯಲ್ಲಿ ಈಜು ಕಲಿಯಲು ಬಿದ್ದು ಒದ್ದಾಡುತ್ತಾ ಇರಬೇಕಾದರೆ ಅಪ್ಪನಿಗೆ ಈ ವಿಷಯ ಯಾರೋ ಮುಟ್ಟಿಸಿದ್ದೆ ತಡ, ಅಪ್ಪ ಅಲ್ಲಿಗೆ ಬಂದವರೇ ನನ್ನ ರೆಟ್ಟೆ ಹಿಡಿದು ಹೀಗೆ ಮಿಂಚುಳ್ಳಿಯಂತೆ ಮೂರು ಬಾರಿ ನೀರಿಗೆ ಅದುಮಿ ಹೊರಗೆ ಬಿಟ್ಟಿದ್ದು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ.. ( ಆಗೆಲ್ಲ ನೀರಿಗೆ ಹೋಗಲು ಮನೆಯಲ್ಲಿ ಅನುಮತಿ ಇರಲಿಲ್ಲ ಕಾರಣ ಮುಳುಗಿ ಹೋಗಿ ಬಿಡುವನೇನೋ ಎಂಬ ಭಯವಿದ್ದಿರಬಹುದು).
ಮುಂದುವರೆದು ಹುಟ್ಟಿದ ಮರಿಗಳಲ್ಲಿ ಕಾರಣಾಂತರಗಳಿಂದ ಹೆಚ್ಚು ಮರಿಗಳು ಉಳಿಯುವುದು ಕಷ್ಟ ಇದೆ. ಮರಿಗಳು ಮೊದ ಮೊದಲಿಗೆ ಡೈವ್ ಹೊಡೆದು ವಾಪಸಾಗಲು ಬರದೆ, ಚಳಿಗೆ, ಆವಾಸಸ್ಥಾನ ಹಾಳಾಗಿ ಹೀಗೆ ಬಹಳಷ್ಟು ಸತ್ತು ಹೋದರೂ ಸ್ವಲ್ಪ ಉಳಿಯುವ ಮರಿಗಳು ಬೆಳೆದು ಸಂತಾನೋತ್ಪತ್ತಿ ನಡೆದು ಅವುಗಳ ಸಂಖ್ಯೆ ಚೆನ್ನಾಗಿಯೇ ಇದೆ. ಮತ್ತೊಂದು ಗಮನಿಸಿ, These common kingfishers are very important members of ecosystem and indicators of freshwater community health. ಈ ನೀಲಿ ಮಿಂಚುಳ್ಳಿ ಕಂಡಲ್ಲಿ ಮತ್ತಷ್ಟು ನೀರಿನ ಪಕ್ಷಿಗಳು ಹೇರಳವಾಗಿ ಕಂಡು ಬರುತ್ತವೆ ಕಾರಣ ಇವುಗಳಿಗೆ ಉತ್ತಮ ನೀರು , ಮರಗಳು , ನೀರಿನ ದಂಡೆಯಿರಬೇಕು.ಈ ಪಕ್ಷಿಗಳು ಇವೆ ಎಂದರೆ ನೀರಿನ ಗುಣಮಟ್ಟ ಚೆನ್ನಾಗಿದೆ ಎಂದೇ ತಿಳಿಯಬಹುದು ಕಾರಣ ಅವುಗಳಿಗೆ ಮೀನುಗಳು ಚೆನ್ನಾಗಿ ಕಂಡು ಬೇಟೆಯಾಡಲು ಸುಲಭ ಆದ್ದರಿಂದ ನೀರು ತಿಳಿಯಾಗಿದ್ದರೆ ಮಾತ್ರ ಇವು ಸುಖವಾಗಿ ಬೇಟೆಯಾಡಬಹುದು. ಕೆರೆಗಳನ್ನು , ಕಟ್ಟೆ, ನದಿಗಳನ್ನು ಅಳೆಯಲು ಇದು ಒಂದು ಮಾಪಕ. ಈ ನೀಲಿ ಮಿಂಚುಳ್ಳಿ ಕಂಡದ್ದು ಬೆಂಗಳೂರಿನ ಕಸವನಹಳ್ಳಿ ಕೆರೆಯಲ್ಲಿ ಮುಂದಿನ ವರ್ಷ ಇದೇನಾದರೂ ಇಲ್ಲಿ ಕಾಣ ಹೋದಲ್ಲಿ ಕಸವನಹಳ್ಳಿ ಕೆರೆ ಹಾಳಾಗಿದೆ ಎಂದೇ ಅರ್ಥ.( ಅಲ್ಲಿ ಈಗಾಗಲೇ ಬೃಹತ್ ಅಪಾರ್ಟ್ಮೆಂಟ್ ಗಳಿಂದ ಕೊಳಚೆ ನೀರು ಬಿಟ್ಟು ಹಾಳು ಮಾಡಿದ್ದಾರೆ ಎಂಬ ಸುದ್ದಿ ಕೇಳಿದೆ )
ಮುಂದೆ ಬೇರೆ ವಿಧದ ಮಿಂಚುಳ್ಳಿ ಕಂಡಾಗ ಅವುಗಳ ಬಗ್ಗೆ ಮತ್ತಷ್ಟು ಬರೆಯುವೆ.
ನೀಲಿ ಮಿಂಚುಳ್ಳಿ – Common Kingfisher/River Kingfisher. Kasavanahalli Lake, Bangalore.
ಬಸ್ಸು ನಿಲ್ದಾಣ…
ಎನ್ ಶೈಲಜಾ ಹಾಸನ ಬಸ್ಸು ನಿಲ್ದಾಣ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರ ಜೀವನದಲ್ಲೂ ಈ ಬಸ್ಸು ನಿಲ್ದಾಣ...
0 Comments