ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲಿ ನಮ್ಮೊಂದಿಗೆ ತೇಜಸ್ವಿ, ಕುವೆಂಪು, ಜೋಗಿ, ಕಾಯ್ಕಿಣಿ ಎಲ್ಲರೂ ನಡೆಯುತ್ತಿದ್ದರು..

ತಣ್ಣಗಿದ್ದ ಆ ನೀರ ತಂಪು ಸ್ಪರ್ಶ, ಥೇಟ್ ಬುದ್ಧನ ಮೌನದಂತೆಯೇ..!!

ಮದುವೆಯಾಗಿ ಇನ್ನೂ ಸರಿಯಾಗಿ ೬ ತಿಂಗ್ಳಾಗಿಲ್ಲ, ಅದೆಂತ ಅಷ್ಟ್ ಬೇಗ ಗಂಡನ್ನ ಬಿಟ್ಟು ತಿರ್ಗಕ್ ಹೊರ್ಟಿದ್ ನೀನು?’ ಅಂತೆಲ್ಲೋ ಅಮ್ಮನ ಗದರಿಕೆ ಕಿವಿ ತಲುಪುವುದರೊಳಗೆ , ಕೈಗೊಂದಿಷ್ಟು ದುಡ್ಡಿಟ್ಟು ’ಇನ್ನೂ ಬೇಕಾದ್ರೆ ಕೇಳು, ಸಂಕೋಚ ಪಟ್ಕೋಬೇಡ’ ಅಂತ ಯಾವತ್ತಿನ ಹಾಗೆ ಅಪ್ಪ ಹೇಳಿಯಾಗಿತ್ತು.. ೨ ವರ್ಷದ ಹಿಂದೆ ಅಕ್ಕನ ಮದುವೆಯ ಹೊತ್ತಿಗೆಲ್ಲೋ ಬ್ಯಾಚುಲರ್ಸ್ ಟ್ರಿಪ್ ಅಂತ ತಯಾರಿಸಿಟ್ಟಿದ್ದ ಪ್ಲಾನ್ ಅದು!  ಯಾವ್ಯಾವುದೋ ಕಾರಣಕ್ಕೆ ಸರ್ಕಾರೀ ಕೆಲಸದ ಹಾಗೆ ನೆನೆಗುದಿಗೆ ಬಿದ್ದಿತ್ತು.. ಬದುಕು ತಿರುವು ಪಡೆದ ಖುಶಿಗೆ ಎಲ್ಲಿಗಾದರೂ ಹೋಗಲೇಬೇಕು ಅನ್ನೋ ನನ್ನ ಇನ್ನಿಲ್ಲದ ರಗಳೆ ಸಹಿಸಲಾಗದೇ ಸರಿ ಹೋಗಣ ನಡಿ ಅಂತ ನಾನು ಅಕ್ಕ ಮತ್ತಿಬ್ಬರು ಫ಼್ರೆಂಡ್ಸ್ ಸೇರಿ ಹೊರಟಿದ್ದು ಭೂತಾನ್ ಅನ್ನೋ ಬುದ್ಧನ ನಾಡಿಗೆ. .

ಭಾರತದ ಹೆಗಲ ಮೇಲೊಂದು ಗುಬ್ಬಿಮರಿಯಂತೆ ಸುಮ್ಮನೆ ಕುಳಿತಿರೋ ಭೂತಾನ್ ಅನ್ನೊ ಆ ಪುಟ್ಟಗಿನ ದೇಶ ಜೀವ ಹೋಗುವಷ್ಟು ಆಕರ್ಷಿಸಿತ್ತು ನಮ್ಮನ್ನ. ಹೋಗೋದು ಅಲ್ಲಿಗೇ ಅಂತ ನಿರ್ಧಾರವಾದ ದಿನದಿಂದ ಮನೆಲಿರೋ ದೊಡ್ಡ ಭಾರತದ ನಕ್ಷೆಯ ಮುಂದೆ ನಿಂತು ’ನಾವ್ ಹೋಗ್ತಿರೋದ್ ಇಲ್ಲಿಗೇ’ ಅಂತ ಅದೆಷ್ಟು ಸಾವಿರ ಸಲ ಹೇಳಿದ್ದೇನೋ ನನ್ನ ಗಂಡನೇ ಬಲ್ಲ!

ಆ ಮೋಡ, ಬೆಟ್ಟ, ಹಸಿರು, ನೀರು, ನೆಲ ಜೊತೆಗೆ ಬುದ್ಧನೆಂಬೋ ಕುತೂಹಲ ಎಲ್ಲವೂ ಸೇರಿ ನಾಲ್ಕೂ ಜನರನ್ನು ಭೂತಾನ್ ಆಯಸ್ಕಾಂತೀಯ ರೀತಿಯಲ್ಲಿ ಸೆಳೆದಿತ್ತು. ’ಬರೀ ಹುಡ್ಗೀರೇ ಹೋಗ್ತಿದೀರ, ಹುಶಾರು’ ಅಂತನ್ನೋ ಎಲ್ಲ ಜೀವಗಳಿಗೆ ಸಮಾಧಾನ ಹೇಳಿ ಹೊರಡುವ ಹೊತ್ತಿಗೆ ಅದೇನೋ ವಿವರಿಸಲಾಗದ ವಿಭಿನ್ನ ಅನುಭವ ನನ್ನೊಳಗೆ.

ತೀರ್ಥಹಳ್ಳಿ ಅನ್ನೋ ಸಹ್ಯಾದ್ರಿಯ ಮಡಿಲಿನ ತುಂಗೆಯ ತೀರದಲ್ಲಿ ಮರಳಾಡಿಕೊಂಡಿದ್ದ ನಾನು, ಅಕ್ಕ ಹೀಗೆ ಒಟ್ಟಿಗೆ ವಿಮಾನದಲ್ಲಿ ಕೂತು ಭಾರತದಾಚೆಗಿನ ದೇಶಕ್ಕೆ ಹೋಗೋ ಆ ಕ್ಷಣವನ್ನ ಪದಗಳಲ್ಲಿ ಹಿಡಿದಿಡೋದು ಸ್ವಲ್ಪ ಕಷ್ಟ ನಂಗೆ.. ’ ಹೋಗ್ತಿರದು ಇಲ್ಲೇ ಪಕ್ದಲ್ಲಿರೋ ಭೂತಾನ್ ಗೆ, ಆಸ್ಟ್ರೇಲಿಯಾಗೋ, ಪ್ಯಾರಿಸ್ ಗೋ ಹೋಗೋ ತರ ಸ್ಕೋಪ್ ಕೊಡ್ತಿಯಲ್ಲೇ’ ಅನ್ನೋ ಗೆಳತಿ ಮಾತೆಲ್ಲಾ ಕಿವಿಯೊಳಗಿಳಿಯದೇ ತಲೆಯ ಮೇಲಿಂದಲೇ ಹಾದು ಹೋಗುವಷ್ಟರ ಮಟ್ಟಿಗಿನ ಭಾವಾನುಭವ ನಂದು.

ಬೆಂಗಳೂರಿಂದ ಹೊರಟು ಆಕಾಶಮಾರ್ಗವಾಗಿ ಕೊಲ್ಕತ್ತಾ ತಲುಪಿದ್ದಾಯ್ತು ಮೊದಲು. ಆ ಊರನ್ನೊಂದು ಸುತ್ತು ಹಾಕಿ, ಹೊಟ್ಟೆ ಬಿರಿಯುವಷ್ಟು ರಸಗುಲ್ಲಾ , ರಸಮಲೈ , ಗೋಲ್ಗಪ್ಪಾ ಜೊತೆಗೊಂದು ಗಲೀಜಾಗಿರೋ ಸಿ.ಸಿ.ಡಿ ಕಾಫಿ ಕುಡಿದು ಹಸಿಮರಾದ ರೈಲು ಹತ್ತುವಷ್ಟರಲ್ಲಿ ರಾತ್ರಿಯಾಗೋಗಿತ್ತು. ಮರುದಿನದ ಬೆಳಗು ತೆರೆದುಕೊಂಡಿದ್ದು ಈಶಾನ್ಯ ಭಾರತದ ಸ್ನಿಗ್ಧ ಪ್ರಕೃತಿ ಸೌಂದರ್ಯಕ್ಕೆ.

ಹಸೀಮರದಿಂದ ಭಾರತ-ಭೂತಾನ್ ಗಡಿಗೆ ಮುಕ್ಕಾಲು ಗಂಟೆ ಪ್ರಯಾಣ. ಮೊದಲ ಬಾರಿ ದೇಶದ ಗಡಿ ದಾಟಬೇಕಾದರೆ ನಡೆದೇ ದಾಟಬೇಕು ಅನ್ನೋ ಕನಸು ನನಸಾದದ್ದಕ್ಕೆ ಡಬಲ್ ಖುಶಿ ನಮ್ಗೆಲ್ಲಾ. ಸಾಧನೆ ಮಾಡಿದೋರ ತರ ನಾಲ್ಕೂ ಜನ ಕೈ ಕೈ ಹಿಡಿದು, ಬೂಮರಾಂಗ್ ಮಾಡಿಕೊಂಡು ಗೇಟ್ ದಾಟಿ ಒಳಹೋಗುವಷ್ಟರಲ್ಲಿ ಅಲ್ಲಿದ್ದ ಪೋಲೀಸರು ಬೈಯದಿದ್ದದ್ದು ನಮ್ಮ ಪುಣ್ಯ.

ಇಮ್ಮಿಗ್ರೇಶನ್ ಸೆಂಟರ್ ಅಲ್ಲಿ ನಮ್ಮಷ್ಟೇ ದೊಡ್ಡದಿದ್ದ ಬ್ಯಾಗ್ ಹೊತ್ತು ಹೋದ ನಾಲ್ಕು ಜನ ಹುಡುಗಿಯರನ್ನು ನೋಡಿ ಏನನ್ನಿಸಿತೋ ಅವರಿಗೆ ‘ಅಪ್ಪ ಅಮ್ಮ ನಿಮ್ಮಿಷ್ಟೇ ಜನನ್ನ ಹೇಗ್ ಬರಕ್ ಬಿಟ್ರು’ ಅನ್ನೋದೇ ಮೊದಲ ಪ್ರಶ್ನೆಯಾಗಿತ್ತು! ೧೮ ಆಗಿದಿಯಾ ಅಂತೆಲ್ಲಾ ಕೇಳ್ದಾಗ ಮುಖ ಮುಖ ನೋಡಿಕೊಳ್ಳೋ ಸರದಿ ನಮ್ಮದು. ಇಮ್ಮಿಗ್ರೇಶನ್ ಮುಗಿಸಿ ಫುನ್ಸುಲಿಂಗ್ ಇಂದ ಟಿಂಫು ಕಡೆ ಹೊರಟಾಗ ಗಂಟೆ ನಾಲ್ಕಾಗಿದ್ದೀತ್ತೇನೋ. ಅಲ್ಲಿತನಕ ಸದಾ ವಟಗುಟ್ಟುತ್ತಿದ್ದ ಬಾಯಿ ನಂತರ ಯಾಕೋ ತಂತಾನೇ ಸುಮ್ಮನಾಗಿಹೋಗಿತ್ತು. ಆ ತಿರುವು-ಮುರಿವಿನ ಹಾದಿ ಯಾವುದೋ ಬೇರೆ ಲೋಕಕ್ಕೆ ಕರೆದೊಯ್ಯುತ್ತಿರುವಂತೆ ಭಾಸವಾಗಿದ್ದು ಸುಳ್ಳಲ್ಲ.

ಮರುದಿನದ ಮುಂಜಾವು ಭೂತಾನ್ ನಲ್ಲಿ! ಹಿಂದಿನ ದಿನ ದಾರಿಯುದ್ದಕ್ಕೂ ಕಂಡಿದ್ದ ಅದೇ ಪುಟ್ಟ ಕಣ್ಣಿನ, ಪೂರ್ತಿ ನಗುವಿನ ಜನರ ನೆನೆಯುತ್ತಾ ಹೋಟೆಲಿನಿಂದ ಹೊರಗೆ ಕಾಲಿಟ್ಟರೆ ಸುತ್ತಲಿನವರೆಲ್ಲಾ ಹಂಗಿದ್ದವರೇ. ಅಚೀಚೆಯೆಲ್ಲಾ ಬೆಟ್ಟ, ಮಧ್ಯದಲ್ಲೊಂದು ಊರು, ಅಲ್ಲಿಷ್ಟು ಪುಟ್ಟ ಕಣ್ಣಿನ ತುಂಬಾ ಪ್ರೀತಿ ತುಂಬಿರುವ ಜನ. ನಂಗಂತೂ ಮಾತು ಪೂರ್ತಿಯಾಗಿ ಮರೆತೇಹೋಗಿತ್ತು.

ಸುಮ್ಮನೇ ಟಿಂಫುಗೊಂದು ಸುತ್ತು ಹಾಕಿ ನಮ್ಮ ಗೈಡ್ ನ ಮೀಟ್ ಮಾಡೋ ಹೊತ್ತಿಗೆ ಗಂಟೆ ಹನ್ನೊಂದಾಗಿತ್ತು. ’ನಿಮ್ಮ ಆಸಕ್ತಿಗಳೇನು ಅಂತ ಹೇಳಿ, ಆಮೇಲೆ ಎಲ್ಲಿಗೆ ಕರ್ಕೊಂಡು ಹೋಗ್ಬೇಕು ಅಂತ ಡಿಸೈಡ್ ಮಾಡ್ತೀನಿ’ ಅಂದ ಆ ಪುಣ್ಯಾತ್ಮ. ಉಳಿದವರೆಲ್ಲರೂ ಏನೇನೋ ಹೇಳ್ತಿದ್ರೆ ’ಬುದ್ಧ, ಬೆಟ್ಟ ಹಾಗೂ ನದಿ’ ಇದಿಷ್ಟೂ ನೋಡ್ಬೇಕು ನಾನು ಅಂತಂದಿದ್ದೆ. ಮೊದಲು ಸಾಗಿದ್ದು ಬುದ್ಧನೆಡೆಗೆ. ೧೬೯ ಅಡಿಯ ಬುದ್ಧ ಕಣ್ಣೆದುರು ಕುಳಿತು ತಪಸ್ಸು ಮಾಡುತ್ತಿರುವುದರ ಎದುರಿಗೆ ಏಕಾಏಕಿ ತಂದು ನಿಲ್ಲಿಸಿದಾಗ ಮನಸ್ಸದು ಸ್ತಬ್ಧ. ಅಲ್ಲಿ ಆ ನೀಲಾಕಾಶದ ನಡುವಲ್ಲಿ ಬುದ್ಧನಿದ್ದ ಮತ್ತು ಬುದ್ಧನ ಸುತ್ತ ಹಸಿರಿತ್ತು. ಬುದ್ಧನೆದುರಿಗೆ ಅಣುರೂಪಿಯಾಗಿ ನಾ ನಿಂತಿದ್ದೆ ಹಾಗೂ ನಮ್ಮಿಬ್ಬರ ನಡುವೆ ಮೌನವಿತ್ತು..

ಮಾತಿಗಿಳಿಯುವ ಧಾವಂತವಿಲ್ಲದೇ ಮೌನಿಯಾಗಿಯೇ ಅವನೆದುರಿನಿಂದ ನಡೆದುಹೋಗಿದ್ದೆ ನಾ! ಅಲ್ಲಿಂದ ಸಾಗಿದ್ದು ನೀರಿನೆಡೆಗೆ. ಆ ಸುತ್ತ ಹಬ್ಬಿರುವ ಬೆಟ್ಟಗಳ ನಡುವಲ್ಲಿ ಹುಟ್ಟಿ ಬರುವ ಆ ನೀರ ನಡಿಗೆಯಲ್ಲೂ ಬುದ್ಧನ ಮೌನ ಕಂಡಿದ್ದು ಸಹಜವೋ ಅಸಜವೋ ಗೊತ್ತಿಲ್ಲ ನಂಗೆ. ಮುಟ್ಟಿದರೆ ಕೈ ಮರಗಟ್ಟಿ ಹೋದೀತು ಎಂಬಷ್ಟು ತಣ್ಣಗಿದ್ದ ಆ ನೀರ ತಂಪು ಸ್ಪರ್ಶ ಇನ್ನೂ ಆವಿಯಾಗಿಲ್ಲ ಎದೆಯೊಳಗಿಂದ, ಥೇಟ್ ಬುದ್ಧನ ಮೌನದಂತೆಯೇ..

ಮರುದಿನಕ್ಕೆ ಕಾಯುತ್ತಿದ್ದದ್ದು ತತ್ಕ್ಸಂಗ್! ಅಥವಾ ಟೈಗರ್ಸ್ ನೆಸ್ಟ್. ಬೆಳಗ್ಗೆ ೭.೩೦ ಕ್ಕೆ ತಯಾರಾಗಿ ಹೊರಡಬೇಕಿದ್ದ ನಾವು ಹೊರಟಿದ್ದು ೧೦.೩೦ಕ್ಕೆ.. ತತ್ಕ್ಸಂಗ್ ನ ಬುಡ ತಲುಪಿ ಟ್ರೆಕ್ಕಿಂಗ್ ಶುರು ಮಾಡುವಾಗ ೧೨.೩೦. ಆ ಕಾಡು, ಸುತ್ತ ದಟ್ಟವಾಗಿ ಹರಡಿರುವ ಪಚ್ಚ ಹಸಿರಿನ ಬೆಟ್ಟ, ಹತ್ತುತ್ತಿದ್ದ ಹಾದಿ, ಜೊತೆಗೆ ಅಕ್ಕ ಬೇರೆ. ಎಲ್ಲವೂ ಸೇರಿ ಹೆಬ್ರಿಯ ಕಾಡಿನ ಮಧ್ಯದಲ್ಲಿರುವ ಅಜ್ಜಿಯ ಮನೆ ನೆನಪಾಗಿದ್ದು ಸುಳ್ಳಲ್ಲ. ಎಲ್ಲಿ ಕಾಡು ಕಂಡರೂ ನನ್ನಜ್ಜಿ ಮನೆಯಂತೆಯೇ ಅನಿಸೋಕೆ ಶುರುವಾಗೋದು  ನನ್ನ ಮಿತಿಯೂ ಹೌದು ಎಂಬುದು ನಾನಾಗಿಯೇ ಕಂಡುಕೊಂಡ ಸತ್ಯ. ಒಂದು ಬೆಟ್ಟ ಹತ್ತಿ, ಅದನ್ನು ಒಂದು ಸುತ್ತು ಬಳಸಿ ಮತ್ತೊಂದು ಬೆಟ್ಟದಲ್ಲಿರೋ ವಿಹಾರಕ್ಕೆ ತಲುಪಬೇಕು.

ಅಲ್ಲಿ ಪದ್ಮಸಂಭವ ತಪಸ್ಸು ಮಾಡಿದ ಜಾಗವಿದೆ. ಪದ್ಮಸಂಭವ ಬುದ್ಧನನ್ನು ಭೂತಾನಿಗೆ ಪರಿಚಯಿಸಿದವನು. ಭೂತಾನೀಯರ ಪಾಲಿಗೆ ಪ್ರತ್ಯಕ್ಷ ದೈವ. ಅಲ್ಲಿ ಸುಮಾರು ೧೩ ವಿಹಾರಗಳಿದೆ. ೧೦೦೦೦ ಅಡಿಗಳಷ್ಟು ಮೇಲೆ ನಿಂತು ಸೂರ್ಯಾಸ್ತವನ್ನು ನೋಡುವ ಆ ಘಳಿಗೆ ಪದಗಳಿಗೆ ನಿಲುಕದ್ದು. ’ಪ್ರಕೃತಿ ಪೂಜೆಗೆ ಬನ್ನಿ ಎಲ್ಲರು, ಪ್ರಕೃತಿ ಪೂಜೆಗೆ ಬನ್ನಿರಿ.. ಕಣ್ಣು ಹೃದಯಗಳೆಂಬ ಎರಡನು ಮಾತ್ರ ಇಲ್ಲಿಗೆ ತನ್ನಿರಿ ’. ಎದೆಯೊಳಗೆ ರಾಗವೊಂದು ಹುಟ್ಟಿಕೊಳ್ಳುತ್ತಿತ್ತು. ಬೆಟ್ಟವಿಳಿಯುವ ಹೊತ್ತಿಗೆ ಕಗ್ಗತ್ತಲು. ಆ ಗೈಡ್ ಪುಣ್ಯಾತ್ಮನೂ ಅಷ್ಟು ಕತ್ತಲಾದ ಮೇಲೆ ಬೆಟ್ಟವಿಳಿದಿರಲಿಲ್ಲವಂತೆ.. (ವರ್ಷಕ್ಕೆ ಸುಮಾರು ನೂರಕ್ಕೂ ಹೆಚ್ಚು ಬಾರಿ ಅಲ್ಲಿಗೆ ಹೋಗಿಬರುವವ ಆ ಗೈಡ್). ಆ ಕತ್ತಲಲ್ಲಿ ಆ ಕಾಡೊಳಗೆ ನಮ್ಮೊಂದಿಗೆ ತೇಜಸ್ವಿ, ಕುವೆಂಪು, ಜೋಗಿ, ಕಾಯ್ಕಿಣಿಯಾದಿಯಾಗಿ ಎಲ್ಲರೂ ನಡೆಯುತ್ತಿದ್ದರು.

ಹಾವು ಕವಲಿನ ನಡುವಿನಿಂದ ಮಿಂಚು ಹುಳಗಳಂತೆ ಅಡಿಗರ ಕವಿತೆ, ಕುಮಾರವ್ಯಾಸನ ಕಾವ್ಯ ಎಲ್ಲವೂ ಮಿಂಚುತ್ತಿದ್ದವು. ನನ್ನ ಅಕ್ಕನ ಬಾಲ್ಯದ ಕಥೆಗಳು, ಗೈಡ್ ನ ವಿಚಿತ್ರ ಅನುಭವಗಳು, ಅದ್ಯಾವುದೋ ನಾಟಕದ ಡೈಲಾಗ್, ಮತ್ಯಾವುದೋ ಕವನದ ಸಾಲು! ಪೂರ್ತಿಯಾಗಿ ಕೆಳಗಿಳಿದು ನಡೆದ ದಾರಿ ನೋಡಿದರೆ ಅಲ್ಲೊಂದು ನೆನಪ ದಾರಿ ಸುರುಳಿ ಸುತ್ತಿ ಮಲಗಿತ್ತು. ಹೊದಿಕೆಯಂತೆ ನಭದ ಆಂಖ್ಯಾತ ನಕ್ಷತ್ರಗಳು ಮತ್ತು ಮುಡಿಗಿಟ್ಟಂತೆ ಚಂದಿರ. ’ಇರಲಿ ಬಾ ಈ ಜಗದ ಜಂಜಡ ಬರಿಯ ಮಣ್ಣಿನ ಗಡಿಬಿಡಿ.. ಇಲ್ಲಿ ಸುಂದರ ಶಿವನ ಮಂದಿರ, ಭವ್ಯವಾಗಿದೆ ಈ ಗುಡಿ’..

ಭೂತಾನ್ ಪ್ರಜಾಪ್ರಭುತ್ವ ಹಾಗೂ ರಾಜನ ಆಡಳಿತ ಎರಡನ್ನೂ ಹೊಂದಿರುವ ದೇಶ. ಆ ದೇಶದ ಜನರಿಗೆ ರಾಜನ ಮೇಲಿರುವ ಅತೀವ ಪ್ರೀತಿ ಹಾಗೂ ಅದೊಂದು ಬಗೆಯ ಧನ್ಯತಾ ಭಾವ ಈ ಮೂರು ದಿನಗಳಲ್ಲಿ ನಮಗೆ ಅನುಭವಕ್ಕೆ ಬಂದಿತ್ತು. ರಾಜನ ಅರಮನೆಯನ್ನು ನೋಡಹೊರಟ ನಂಗೆ, ಅರಮನೆಯ ಬಗೆಗಿದ್ದ ಕಲ್ಪನೆಯೇ ಬೇರೆ. ಮೈಸೂರಿನ ಅರಮನೆಯನ್ನು ಕಂಡ ನಮಗೆ ಬೇರೆ ಕಲ್ಪನೆ ಮೂಡುವುದಾದರೂ ಹೇಗೆ? ಆ ಅರಮನೆಗಳು ಕಟ್ಟಿಕೊಡುವ ಭಾವವೇ ಭಿನ್ನ. ಕೆಂಪು, ಬಿಳಿಯ ಗೋಡೆಯ ಮೇಲೆ ಅದೇನೋ ಚಂದದ ಚಿತ್ತಾರಗಳು, ಅವರ ಕಲ್ಪನೆಯ, ಪುರಾಣದ ಕಥೆಗಳು, ಆ ಪದ್ಮಸಂಭವ ಮತ್ತು ಅವನೊಂದಿಗಿನ ಬುದ್ಧ.

ಎರಡೆರಡು ಅರಮನೆ ನೋಡಿ ವಿಸ್ಮಿತರಾಗಿ ಮುಂದೇನು ಅಂತ ನಿಂತಿದ್ದ ನಮ್ಮನ್ನು ಕರೆದುಕೊಂಡು ಹೋಗಿದ್ದು ಡೋಚುಲಾ ಪಾಸ್ ಎಂಬ ಸ್ವರ್ಗಕ್ಕೆ! ಅದೊಂದು ದೃಶ್ಯ ಕಾವ್ಯ. ೧೦೮ ಸ್ತೂಪಗಳಿದೆ ಅಲ್ಲಿ.. ಅಲ್ಲಿಂದ ಕಂಡ ಹಿಮಾಲಯ ಇಂದಿಗೂ ಕಣ್ಣ ಪಾಪೆಯಿಂದ ಸರಿದುಹೋಗಿಲ್ಲ. ಭೂತಾನಿನ ಇಡಿಯ ನಾಲ್ಕು ದಿನಗಳನ್ನ ಅಂಗೈಯಲ್ಲಿ ಬಚ್ಚಿಟ್ಟುಕೊಳ್ಳಬೇಕಾದರೆ ತೆರೆದಾಕ್ಷಣ ದೊಚುಲಾ ಪಾಸ್ ಕಾಣುವಂತಿರಬೇಕು ನಂಗೆ.

ಅಲ್ಲಿನ ಊಟ, ಅವರ ಉಡುಗೆತೊಡುಗೆಗಳು, ಆ ಬಗೆಯ ಶಾಂತತೆ ಎಲ್ಲವೂ ವಿಸ್ಮಯತೆಯೊಂದನ್ನು ಹುಟ್ಟುಹಾಕಿಬಿಟ್ಟಿವೆ. ಟೈಗರ್ ನೆಸ್ಟ್ ನಲ್ಲಿದ್ದ ಆ ಪುಟ್ಟ ಹುಡುಗನನ್ನು ನಿನ್ನೂರು ಯಾವುದು ಎಂದಿದ್ದಕ್ಕೆ ಅಂಚಿಗೆ ಕರೆದುಕೊಂಡು ಹೋಗಿ ಅದ್ಯಾವುದೋ ಪಕ್ಕದಲ್ಲಿದ್ದ ಬೆಟ್ಟ ತೋರಿಸಿ,’ ಅಲ್ಲಿ ಕಾಣುತ್ತಿದೆಯಲ್ಲ ಬೆಟ್ಟ, ಅದನ್ನು ದಾಟಿದರೆ ಸಿಗುವ ಬೆಟ್ಟದಲ್ಲಿ ನಮ್ಮ ಹಳ್ಳಿಯಿದೆ ’ ಎಂದಿದ್ದು ಇನ್ನೂ ಕಣ್ಣಿಗೆಕಟ್ಟಿದಂತಿದೆ.

ದಾರಿಯಲ್ಲಿ ಸಿಕ್ಕ ಆ ಪುಟ್ಟ ಕಂಗಳ ಹುಡುಗಿ ನಕ್ಕು ಕೈ ಬೀಸಿದ ಚಿತ್ರ, ನಮ್ಮೂರಿನ ಹಣ್ಣು ಇನ್ನೆಲ್ಲೂ ಸಿಗಲ್ಲ ಅಂತಂದು ಕೈಗಿಟ್ಟ ಸೇಬು, ಎದೆಯಿಂದ ಬೊಗಸೆ ತೆಗೆದು ಕೊಟ್ಟ ಪ್ರೀತಿ ಹಾಗೂ ಕಾಳಜಿ! ಇನ್ನು ಮನಃಪಟಲದಲ್ಲಿ ಇವೆಲ್ಲವೂ ಸ್ಥಿರ. ಭೂತಾನನ್ನು ಇರುವುದಕ್ಕಿಂತಲೂ ಚಂದವಾಗಿ ತೋರಿಸಿದ ಗೈಡ್ ಸೋನಮ್, much love to you!  ಅಂಗೈ ಗೆರೆಯಷ್ಟೇ ಸ್ಪಷ್ಟವಾಗಿರುವ ಚಂದದೊಂದು ಅನುಭವವನ್ನು ಕೈಗಿಟ್ಟ ಪ್ರಿಯಾಶಾ, ಅಮೃತಾ, ಕಾರ್ತು ಹಾಗೂ ಅಕ್ಕ. ಥ್ಯಾಂಕ್ಯೂಊಊಊ ಸಿಕ್ಕಾಪಟ್ಟೆ. ಮತ್ತೊಂದು ಪಯಣಕ್ಕೆ ಜೊತೆಯಾಗೋಣ ಸದ್ಯದಲ್ಲೇ..

‍ಲೇಖಕರು Avadhi GK

17 January, 2018

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. Dr.Mahendra

    ಆಪ್ತವಾಗಿದೆ ಬರಹ

    • Lahari Thanthri

      ಧನ್ಯವಾದ

  2. Dr.Srinivaschari Badiger

    ತುಂಬಾ ಚೆನ್ನಾಗಿದೆ

    • Lahari Thanthri

      ಧನ್ಯವಾದ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading