ಮಲ್ಲಿಗೆಯಂಥ ಘಮಲಿನ ಸಿಂಚನ…

ಅರ್ಚನಾ ಯಳಬೇರು
ಕನ್ನಡ ಪ್ರಾಧ್ಯಾಪಕ ಡಾ.ಮಲ್ಲಿನಾಥ ತಳವಾರ ಎರಡನೇ ಗಜಲ್ ಕೃತಿ ʻಮಲ್ಲಿಗೆ ಸಿಂಚನʼ, ಗಜಲ್ ಹೂದೋಟಕ್ಕೆ ಅನ್ವರ್ಥವಾಗಿದೆ. ಮಲ್ಲಿಗೆ ಹೂಗಳು ಕಂಪನ್ನು ಪಸರಿಸುವಂತೆ ಗಜಲ್ ಗಳು ಘಮಘಮಿಸುತ್ತಿವೆ. ಇವರ ಗಜಲ್ ಗಳು ಪ್ರೀತಿ ಪ್ರೇಮದ ಮುನ್ನುಡಿ, ಸಮಾಜದ ಒಳಿತು ಕೆಡುಕುಗಳಿಗೆ ಕನ್ನಡಿ.. ಪ್ರತಿ ಗಜಲ್ ನಲ್ಲೂ ಒಳಾರ್ಥವನ್ನು ಹುದುಗಿಸಿ ಬರೆಯುವುದರಲ್ಲಿ ಎತ್ತಿದ ಕೈ.. ಗಜಲ್ ಕಟ್ಟುವ ಕಲೆ ಇವರಿಗೆ ಕರಗತವಾಗಿದೆ.
ಗಜಲ್ ನ ಪಾರಿಭಾಷಿಕ ಶಬ್ದಾರ್ಥವನ್ನು ಒಳಗೊಂಡಿದ್ದಲ್ಲದೆ, ಅನೇಕ ಮಹಾನ್ ಗಜಲ್ ಕಾರರ ಷೇರ್ ನ ಉದಾಹರಣೆಯ ಮೂಲಕ ಗಜಲ್ ಕಲಿಕಾರ್ಥಿಗಳಿಗೆ ಬಹು ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ. ಈ ಗಜಲ್ ಗಳಲ್ಲಿ ಗೇಯತೆ, ಮೃದುತ್ವ, ಸಾಮಾಜಿಕ ಕಳಕಳಿ ಎದ್ದು ಕಾಣುತ್ತಿವೆ. ವಿವಿಧ ಪ್ರಕಾರಗಳ ಗಜಲ್ ಗಳು ಮಲ್ಲಿಗೆ ಸಿಂಚನದಲ್ಲಿ ಸುವಾಸನೆ ಬೀರುತ್ತಿವೆ. ಅದರ ಘಮದ ಅಮಲನ್ನು ಮನತುಂಬಿಕೊಳ್ಳಲು ಓದುಗರ ಮುಂದಿಟ್ಟಿದ್ದಾರೆ..
ಇಲ್ಲಿನ ಕೆಲವು ಮಿಸ್ರಾಗಳು ರಸಾನುಭೂತಿ ನೀಡುವಂತವು. ಅವುಗಳಲ್ಲಿ ಕೆಲವು ಮಿಸ್ರಾಗಳು..
‘ಹಣವಂತರ ಓಲೈಕೆಗೆ ಸಿದ್ಧವಾಗುತಿವೆ ಬೃಹತ್ ವೇದಿಕೆಗಳು
ಗಳಿಕೆಯ ಹಿಂದಿರುವ ಅಂಧದ ಕರಾಮತನ್ನು ಗುರುತಿಸುವುದಿಲ್ಲ’
ಈ ಮಿಸ್ರಾವು ಅಂಧಕಾರದಲ್ಲಿ ಸಮಾಜವು ಮುಳುಗಿರುವ ಬಗೆಯನ್ನು ಎತ್ತಿ ತೋರಿಸುತ್ತಿದೆ. ಈ ಗಜಲ್ ನ ಪ್ರತಿ ಮಿಸ್ರಾವು ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ.
ನಾಡೋಜ ಡಾ.ಗೀತಾ ನಾಗಭೂಷಣ ರವರಿಗೆ ಬರೆದ ಗಜಲ್ ನ ಪ್ರತಿ ಮಿಸ್ರಾಗಳು ಎದೆಗೆ ನಾಟುವಂತಿದೆ.
‘ಅಸಹಾಯಕತೆಯನ್ನು ಸದೆ ಬಡಿದು ನಿಂತವರು ನೀವು
ಶೋಷಣೆಯ ವಿರುದ್ಧವಾಗಿ ಸಟೆದು ನಿಂತವರು ನೀವು’
ಪ್ರತಿಯೊಬ್ಬ ಅಸಹಾಯಕ ಹೆಣ್ಣಿನ ಮನಸಿನ ಕನ್ನಡಿಯಂತಿದೆ. ಪ್ರತಿಯೊಬ್ಬ ಹೆಣ್ಣು ಕೂಡ ಸಮಾಜದ ಕರಾಳತೆಯನ್ನು ಮೆಟ್ಟಿ ನಿಲ್ಲಿರೆಂಬ ಸಂದೇಶವನ್ನು ಅವರ ಮೂಲಕ ಸಾರುತ್ತಿದೆ.
ಪ್ರಕೃತಿ ಮಾತೆಯ ಆರಾಧನೆಯು ಈ ಗಜಲ್ ನಲ್ಲಿ ಅದ್ಭುತವಾಗಿದೆ.
‘ಕಾದ ಇಳೆಗೆ ತಂಪಾದ ಅಪ್ಪುಗೆ ನೀಡುತಿರುವನು ಮಳೆರಾಯ
‘ಮಲ್ಲಿ’ ಪ್ರೀತಿಯ ತಂಗಾಳಿ ಸೇವಿಸಲು ಬೇಕು ನಮಗೆ ಹಸಿರು’

ನಮ್ಮೆಲ್ಲರ ಜನ್ಮದಾತೆ ತಾಯಿ. ಮಮತೆಗೆ ಪರ್ಯಾಯ ಪದವೇ ಮಾತೆ. ಮಾತೆಯ ಮುಂದೆ ಮಗುವಿನ ರೋದನದಂತೆ ಮೂಡಿ ಬಂದಿದೆ ಈ ಗಜಲ್.
‘ಹಸಿ ಮಾಂಸದ ಮುದ್ದೆಯನ್ನು ಕಂಡು ಖುಷಿ ಪಟ್ಟವಳು ನೀನು
ನಿನ್ನ ಋಣ ತೀರಿಸಲಾಗದೆ ‘ಮಲ್ಲಿ’ಯ ಮನವು ಗೋರಿಯನ್ನು ಅಗೆಯುತಿದೆ ಮಾ’
ಈ ಮಿಸ್ರಾದಲ್ಲಿ ಒಳಾರ್ಥವನ್ನು ಅಡಗಿಸಿದ್ದನ್ನು ನೋಡಬಹುದು. ಈ ಗಜಲ್ ನ ಪ್ರತಿ ಪದಗಳೂ ಮೌನವಾಗಿ ರೋಧಿಸಿದಂತಿದೆ. ತಾಯಿ ಎಂಬ ಪದವೇ ಗೌರವ ಸೂಚಕ. ಅಂಥ ಮಾತೆಗೆ ನುಡಿನಮನ ಸಲ್ಲಿಸಿದಂತಿದೆ ಈ ಗಜಲ್.
‘ಯಂತ್ರಗಳ ನಾಡಿ ಮಿಡಿತ ಅರಿತ ಹೃದಯವಂತರು
ಕತ್ತೆಯ ರೂಪದಲ್ಲಿ ದುಡಿಸಿಕೊಳ್ಳುವವರು ಮನುಷ್ಯರೇ ಅಲ್ಲ’
ಗಜಲಿನ ಈ ಮಿಸ್ರಾದಲ್ಲಿ ಕಾರ್ಮಿಕರ ಹೃದಯವಂತಿಕೆಯನ್ನು ಎತ್ತಿ ಹಿಡಿದಿದ್ದಾರೆ. ಹಾಗೆಯೇ ದುಡಿಸಿಕೊಳ್ಳುವವನ ಮನುಷ್ಯತ್ವಕ್ಕೆ ಕನ್ನಡಿಯನ್ನಿರಿಸಿದ್ದಾರೆ.
ಒಬ್ಬ ತಾಯಿಯ ಮನದ ಆಕ್ರಂದನ ಇಲ್ಲಿ ಮುಗಿಲು ಮುಟ್ಟಿದಂತಿದೆ. ನೋವುಗಳಿಗೆ ಆಸರೆಯಾದವಳು ಹೆಣ್ಣು ಎಂಬುದನ್ನು ನಿರೂಪಿಸುವಂತೆ ಹೆಣ್ಣಿನ ಮನವನ್ನು ಬಿಚ್ಚಿಟ್ಟಿದ್ದು ಈ ಗಜಲ್ ನಲ್ಲಿ.
‘ನಿನ್ನ ಜನನವು ನನಗೆ ಸಾವಿನ ಸವಿರುಚಿ ತೋರಿಸಿತು ಕಂದ.
ಬಂಜೆಯ ಭಾರವಾದ ಪಟ್ಟ ಬಿಸಿ ಒಡಲಿನಿಂದ ಕಳಚಿತು ಕಂದ’
ಹೆಣ್ಣಿನ ಒಡಲನ್ನು ಬಗೆದಿಟ್ಟಂತೆ ಕಣ್ಣೆದುರಿಗಿರಿಸಿದ್ದಾರೆ. ತಾಯ್ತನವೆಂಬುದು ಬಂಜೆಯ ಪಟ್ಟಕ್ಕೆ ಮುಕ್ತಿಯಿದೆ ಎಂಬುದನ್ನು ಬಿಂಬಿಸಿದ್ದಾರೆ. ಮನಮುಟ್ಟುವ ಅನೇಕ ಗಜಲ್ ಗಳು ಈ ಕೃತಿಯಲ್ಲಿವೆ.






0 Comments