ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅರಣ್ಯ ಕಾಂಡ’ ಬಹು ಹದವಾದ ‘ಸಂಗೀತ ನಾಟಕ’!

ಪ್ರೀತಿ ನಾಗರಾಜ್

ಅದೊಂದು ದೊಡ್ಡ ಚಿತ್ರ. ಆದರೆ ಅದನ್ನ ಬಿಡಿಬಿಡಿಯಾಗಿ ಚಲ್ಲಾಪಿಲ್ಲಿಯಾಗಿ ಅಲ್ಲಲ್ಲಿ ಚದುರಿ ಹೋಗಿರುವ ಚಿತ್ರದ ತುಂಡುಗಳನ್ನು puzzle ಆಟಕ್ಕೆ ಅಂತ ಗುಡ್ಡೆ ಹಾಕಿದ್ದಾರೆ. ಅದರ ಒಂದೊಂದು ತುಂಡನ್ನು ಜೋಡಿಸಿ ಅದು ಪಕ್ಕಾ ಹೊಂದಿಕೊಂಡು ಬಿಟ್ಟಾಗ ಎಂಥಾ ಖುಷಿ ಸಿಗತಿತ್ತು ನಮಗೆ! ಅಂತೆಯೇ ಹಿಂದೆಲ್ಲಾ ಪ್ರಖ್ಯಾತ ಮ್ಯಾಗಜೀನುಗಳಲ್ಲಿ ‘ಖೋಖೋ’ ಆಟದ ಮಾದರಿಯಲ್ಲಿ ಕಥೆಯ ಒಂದು ಹಂದರ ಒಬ್ಬ ಲೇಖಕರ ಕೈಲಿ ಹಾಕಿಸಿ ಮುಂದಿನದನ್ನ ಮತ್ತೊಬ್ಬರ ಕೈಲಿ ಬರೆಸುತ್ತಾ ಇದ್ದರು. ಆಗಲಂತೂ ತೀರದ ಕುತೂಹಲ. ಇವರು ಹೀಗೆ ಬರೆದರು, ಇನ್ನೊಬ್ಬರು ಹೇಗೆ ಬರೆಯುತ್ತಾರೋ ಅಂತ.. ಇರುವ ಲೇಖಕರಲ್ಲಿ ನಮ್ಮ ನೆಚ್ಚಿನವರಿದ್ದರಂತೂ ಅವರು ಏನು ಬರೆಯಬಹುದು ಎನ್ನುವುದನ್ನು ಯೋಚಿಸಿಯೇ ರೋಮಾಂಚನ ಆಗುತ್ತಿತ್ತು!

ಇದೇ ಸಾಧ್ಯತೆಯನ್ನ ರಂಗಭೂಮಿಗೆ ತಂದಿಟ್ಟರೆ? ಒಬ್ಬರು ಬರೆದ ಕಥೆಯ ಭಾಗವನ್ನ ಇನ್ನೊಬ್ಬರು ನಿರ್ದೇಶಿಸಿದರೆ? ಹೇಗಿದ್ದೀತು ಆ ಒಂದು ಪ್ರಯೋಗ? ಹೆಗ್ಗೋಡು ಪ್ರಸನ್ನ ಅವರು ಮೊದಲಿಗೆ ‘ಅಯೋಧ್ಯಾ ಕಾಂಡ’ ಬರೆದು ನಿರ್ದೇಶಿಸಿದರು. ನಾಟಕ ಹೊಸತನವನ್ನೇ ಉಸಿರಾಡಿತು. ರಾಮ ಹೃದ್ಯನಾದ ರಾಮ, ಅಸಹಾಯಕ ದಶರಥ, ಅಣ್ಣನ ಹಿಂದೆ ಹೊರಟು ನಿಲ್ಲುವ ಲಕ್ಷ್ಮಣ, ಗಂಡನ ಹೆಜ್ಜೆಗೆ ಹೆಜ್ಜೆ ಇರಿಸುವ ಸೀತೆ, ತನ್ನ ಕೂಸು ಭರತ ರಾಜನಾಗಬೇಕೆಂಬ ಸರಳ ಆಸೆಯ ಕೈಕೇಯಿ, ತಾನಾಡಿಸಿದ ಕೂಸಲ್ಲವೇ ರಾಮ ಎಂದು ಕೈಕೇಯಿಯ ಆಸೆಗೆ ಇಂಬು ಕೊಡುವ ಮಂಥರೆ ಹೀಗೆ ಒಂದು ಬಹು ಪರಿಚಿತ, ಆದರೂ ಕುತೂಹಲ ಹುಟ್ಟಿಸುವ ಕಥಾ ಹಂದರ ತನ್ನ ನಾವೀನ್ಯತೆಯಿಂದ ಪ್ರೇಕ್ಷಕರನ್ನು ಸೋಜಿಗಗೊಳಿಸಿತ್ತು.
ಈಗ ‘ಅರಣ್ಯ ಕಾಂಡ’ ನಮ್ಮ ಮುಂದಿದೆ. ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಇಂಡಿಯನ್ ಥಿಯೇಟರ್ ಫೌಂಡೇಶನ್ ಪ್ರಸ್ತುತಪಡಿಸುತ್ತಿರುವ ಈ ನಾಟಕದ ರಚನೆ ಪ್ರಸನ್ನ ಹೆಗ್ಗೋಡು ಅವರದ್ದು.

ಇದರ ಮೊತ್ತ ಮೊದಲ ಶೋ ಶನಿವಾರ ಸಂಜೆ ಕಿರುರಂಗಮಂದಿರದಲ್ಲಿ ನಡೆಯಿತು. ಇದನ್ನ ಒಂದು ‘ಅದ್ಭುತ ಪ್ರಯೋಗ’ ಎನ್ನುವುದು ತೀರಾ ಸಣ್ಣ ವಿವರಣೆಯಾದೀತು. ಸಳಸಳನೆ ಸರಿದುಹೋಗುತ್ತಿರುವ ನೀರಿನ ಝರಿ ಯಾವುದೋ ಕೊಲ್ಲಿಯೊಳಗೆ ನುಗ್ಗುತ್ತಾ ಎತ್ತರದಿಂದ ಬೀಳುವಾಗ ಮೈನವಿರೇಳಿಸುವ ಜಲಪಾತದ ಹಾಗೆ ಆಗಿಬಿಡುತ್ತದಲ್ಲ? ಅದಕ್ಕೆಲ್ಲಿತ್ತು ಅಷ್ಟೊಂದು ಶಕ್ತಿ? ಅದು ನೀರಿನದೇ ಅಥವಾ ಎತ್ತರದ್ದೇ? ಅಥವಾ ಆ ನೀರನ್ನು ತನ್ನತ್ತ ಸೆಳೆದುಕೊಳ್ಳುವ ನೆಲದ ಶಕ್ತಿಯೇ? ಎನ್ನುವ ಹಾಗೆ ನಾಟಕದ ಶಕ್ತಿಯ ಮೂಲವನ್ನು ಹುಡುಕುತ್ತಲೇ ಇರುವುದೇ ಒಂದು ಸುಖ ಅನ್ನಿಸುತ್ತದೆ.

‘ಅರಣ್ಯ ಕಾಂಡ’ ಬಹು ಹದವಾದ ‘ಸಂಗೀತ ನಾಟಕ’! ರಂಗದ ಮೇಲೆ ಎಲ್ಲರೂ ಅಭಿನಯ ಪರಿಣಿತರು.. ಉತ್ತಮ ಹಾಡುಗಾರರು.. ಪ್ರೇಕ್ಷಕರ ನಾಡಿಮಿಡಿತ ಕರಗತವಾಗಿದೆ ಎನ್ನುವಷ್ಟು ಖಚಿತತೆಯ ಅಭಿನಯ, ಅಂತೆಯೇ ಜೊತೆಗೇ ನಡೆಯುವ ಹಾಡುಗಾರಿಕೆ. ಸಮಾಧಾನಿ ರಾಮ, ದೈವತ್ವದ ತುತ್ತತುದಿಗೆ ಹೋಗುವುದು ತನ್ನ ಮೌಲ್ಯಗಳಿಂದ. ರಾಮನ ಮಡದಿ ಸೀತೆ, ಅರಮನೆಯಲ್ಲೆ ಆಳುಕಾಳುಗಳ ಮುಚ್ಚಟೆಯಲ್ಲೇ ಬೆಳೆದರೂ ತನ್ನ ಗಂಡನ ನೆರಳಾಗಿ ಕಾಡಿಗೆ ಹೋಗುವವಳು. ಸೌಮ್ಯ ಸ್ವಭಾವದ ಹೆಣ್ಣು.

ಲಕ್ಷ್ಮಣ ಇವರಿಬ್ಬರನ್ನೂ ಕಾಪಾಡಲೆಂದು ಬಂದವ. ತನ್ನಣ್ಣ ಅತ್ತಿಗೆಯ ಕೂದಲೂ ಕೊಂಕಬಾರದು ಎನ್ನುವುದಷ್ಟೇ ಅವನ ಗುರಿ. ಅವರೆಲ್ಲರ ಕಾಡಿನ ವಾಸದ ನಡುವೆ ಬಂದು ಹೋಗುವ ಮಾರೀಚ, ಜಟಾಯು, ಮತ್ತೆ ಅತ್ಯಂತ ಪ್ರಧಾನವಾದ ಶೂರ್ಪನಖಿ.. ಯಾರನ್ನ ನೋಡುವುದು ಯಾರನ್ನ ಬಿಡುವುದು? ಪ್ರತಿಯೊಬ್ಬ ಕಲಾವಿದರೂ ಅತ್ಯಂತ ಮೇರು ಪ್ರದರ್ಶನ ನೀಡಿದಾಗ ಪ್ರೇಕ್ಷಕರಿಗೆ ರಸದೌತಣ ಗ್ಯಾರಂಟಿ ಎನ್ನಲು ಅರಣ್ಯ ಕಾಂಡವೇ ಸಾಕ್ಷಿ.

ಸಂಗೀತದಲ್ಲಿ ವಿಭಿನ್ನತೆ, ನಟನೆಯಲ್ಲಿ ಹೊಸತನ.. ಸರಳ ರಂಗಪರಿಕರಗಳು, ಕೇವಲ ಎರಡು ಪರದೆಗಳಲ್ಲಿ ನಿರ್ಧಾರವಾಗುವ ರಂಗಸಜ್ಜಿಕೆ, ಅನುಶ್ ಶೆಟ್ಟಿ, ಮುನ್ನಾ ಇಬ್ಬರ ಸಂಗೀತ… ಜೊತೆಗೆ ನಟರ ಹಾಡುಗಾರಿಕೆ ಕೂಡಿದ ಅಭಿನಯ, ಕೋಡಂಗಿ ಮಾತನಾಡುವಾಗಲೂ ತೂಕ ಕಳೆದುಕೊಳ್ಳದೆ ಧ್ವನಿಸುವ ಮಾನವ ಮಿತಿಗಳ ಮಾತುಗಳು…. ಮಾತುಗಳು ಮನಸ್ಸಿನೊಳಗೆ ಇಳಿಯುತ್ತಲೇ ನಗೆ, ಮಾರ್ದವತೆ, ಭಾವುಕತೆ, ತರ್ಕ ಹೀಗೆ ಏನೇನೋ ಹುಟ್ಟಿಸುತ್ತವೆ..
ಜೊತೆಗೆ ಎಷ್ಟೋ ಹಾಡುಗಳು ಹಾಗೇ ಮನಸ್ಸಿನಲ್ಲೇ ಉಳಿದುಬಿಡುತ್ತವೆ…

ನಾಟಕದ ತಾಜಾತನ, ಪಾತ್ರಗಳ ನಡುವಿನ ಮಾತುಗಳಂತೂ ಎಂಥೆಂಥಾ ತರಂಗಗಳನ್ನೇ ಎಬ್ಬಿಸುತ್ತವೆ. ಪ್ರೇಕ್ಷಕರಾಗಿ ನಾಟಕ ನಿಮ್ಮನ್ನು ಬಿಡುವುದೇ ಇಲ್ಲ. ಹಾಗೇ ನಿಮ್ಮ ಜೊತೆ ಉಳಿದುಬಿಡುತ್ತದೆ.

ಇಂಥ ನಾಟಕ ಈವತ್ತಿನ ತುರ್ತಾಗಿತ್ತು. ಕೊಡಬೇಕಿತ್ತು ರಂಗಭೂಮಿ ಇಂಥದೊಂದು ಘನತೆಯ ಉತ್ತರ. ಇದು ‘ರಂಗಭೂಮಿ’ಯ ಮುಖ್ಯ ಗೆಲುವು.

Pic courtesy: Rajesh Basavanna

‍ಲೇಖಕರು Admin

19 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading