ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಮ್ಮ ಪ್ರಶಸ್ತಿ’ಯ ನೆಪದಲ್ಲಿ ಜೋಗಿ ಬರೆದದ್ದು..

ಪೊರೆವ ತಾಯಿ, ತೊರೆವ ತಾಯಿ, ಕೊಲ್ಲಬಲ್ಲ ಮಹಾತಾಯಿ

ಜೋಗಿ

ಗೆಳೆಯನ ಅಮ್ಮ ಕಾಯಿಲೆ ಬಿದ್ದಿದ್ದಾರೆ. ಎದ್ದು ನಡೆದಾಡುವ ಶಕ್ತಿಯೂ ಇಲ್ಲ. ಮಗನೇ ಅವರ ಆರೈಕೆ ಮಾಡಬೇಕು. ಮಗ ಅದನ್ನು ಪ್ರೀತಿಯಿಂದಲೇ ಮಾಡುತ್ತಿದ್ದಾನೆ. ತಾಯಿಯೇ ದೇವರು, ಮಾತೃದೇವೋ ಭವ, ನಮ್ಮಮ್ಮ ಅಂದ್ರೆ ನಂಗಿಷ್ಟ ಮುಂತಾದ ಮಾತುಗಳು ಕೃತಕವಾಗಿ ಕಾಣಿಸುವ ಕ್ಷಣ. ಸುಮಾರು ಎರಡು ವರುಷದಿಂದ ಅವನಾಗಲೀ ಅವನ ಹೆಂಡತಿಯಾಗಲೀ ಮನೆ ಬಿಟ್ಟು ಆಚೆ ಹೋಗಿಲ್ಲ. ಅಮ್ಮನನ್ನು ಬಿಟ್ಟು ಹೋಗುವಂತಿಲ್ಲ. ಅಮ್ಮನನ್ನು ನೋಡಿಕೊಳ್ಳುವುದಕ್ಕೆ ಉಳಿದ ಮಕ್ಕಳಿಗೆ ಪುರುಸೊತ್ತಿಲ್ಲ. ಅವರು ಅವರ ಗಂಡ, ಮಕ್ಕಳು, ಸ್ಕೂಲು, ತೋಟ ಎಂಬಿತ್ಯಾದಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ವೃದ್ಧಾಪ್ಯ ಕೆಟ್ಟದ್ದು ಅಂತ ನಾನು ಯಾವತ್ತೋ ಹೇಳಿದ್ದ ಮಾತನ್ನು ಗೆಳೆಯ ನೆನಪಿಸಿಕೊಂಡ. ನೂರು ವರುಷ ಬದುಕುವ ಆಶೆ ಒಳ್ಳೆಯದಲ್ಲ. ಕೊನೆಯ ದಿನಗಳಲ್ಲಿ ನಾವು ಕ್ರಿಮಿಗಳಂತೆ ಬದುಕುತ್ತೇವೆ. ನಮ್ಮ ದೇಹ ಮತ್ತು ಮನಸ್ಸು ನಮ್ಮ ಮಾತು ಕೇಳುವ ಮೊದಲೇ ಹೊರಟು ಹೋಗುವುದು ನಮಗೂ ಒಳ್ಳೆಯದು ನಮ್ಮ ಮಕ್ಕಳಿಗೂ ಒಳ್ಳೆಯದು. ಇರುವ ಅವಧಿಯಲ್ಲಿ ಚೆನ್ನಾಗಿ ತಿಂದುಡು ಸುತ್ತಾಡುತ್ತಾ ಬದುಕು ಅಂತ ಹೇಳಿದ್ದನ್ನು ಅವನ ಹೆಂಡತಿಯೂ ಮರೆತಿರಲಿಲ್ಲ.

ಅದೇನೇ ಆದರೂ ಅಮ್ಮ. ತೊರೆಯುವಂತಿಲ್ಲ. ಮೊನ್ನೆ ಸೇಡಂಗೆ ಹೋದರೆ ಅಲ್ಲಿ ಮಹಿಪಾಲ್ ರೆಡ್ಡಿ ಮುನ್ನೂರು ಅಮ್ಮನ ಹೆಸರಲ್ಲಿ ಹನ್ನೆರಡನೇ ವರುಷದ ಪ್ರಶಸ್ತಿ ಕೊಡುತ್ತಿದ್ದರು. ಪ್ರಶಸ್ತಿಗಳು ಕೃತಿಗಿಂತ ದೊಡ್ಡವಲ್ಲ, ಆದರೆ ಅಮ್ಮನ ಹೆಸರಿನ ಪ್ರಶಸ್ತಿ ಮಾತ್ರ ಕೃತಿಗೆ ಸಮನಾದದ್ದು ಅನ್ನಿಸಿತು. ತುಂಬ ಭಾವುಕವಾಗಿ ಮಾತಾಡಿದ್ದಕ್ಕೆ ನಟರಾಜ್ ಹುಳಿಯಾರ್ ಬೇಜಾರು ಮಾಡಿಕೊಂಡರು. ಹೆಣ್ಮಕ್ಕಳು ಬೇಡ ಅಂತ ಭ್ರೂಣಹತ್ಯೆ ಮಾಡುವ ದೇಶ ಇದು. ಇಲ್ಲಿ ಅಮ್ಮನ ಬಗ್ಗೆ ಅತೀ ಭಾವುಕತೆ ಸರಿಯಾ ಅಂತ ಪ್ರಶ್ನಿಸಿದರು. ಇವೆಲ್ಲವನ್ನು ನೆನದಾಗ ನೆನಪಾದದ್ದು ಮೂವರು ಅಮ್ಮಂದಿರು. ಅವರ ವಿಚಿತ್ರ ಕತೆ. ಅವರ ಗರ್ವ, ಛಲ ಮತ್ತು ದಿಟ್ಟತನದ ಪ್ರಸಂಗ.

ಆ ಹುಡುಗ ವಿದ್ಯೆ ಕಲಿಯುತ್ತಿರಲಿಲ್ಲ. ತನ್ನ ಜೊತೆಗಾರರು ಆಶ್ರಮಕ್ಕೆ ಹೋಗುವುದನ್ನು ವೇದಪಾಠ ಕಲಿಯುವುದನ್ನು ನೋಡುತ್ತಿದ್ದ. ತನಗೂ ಅದನ್ನೆಲ್ಲ ಕಲಿಯಬೇಕು ಅನ್ನಿಸಿತು. ಅವನು ಗೌತಮನ ಆಶ್ರಮಕ್ಕೆ ಹೋಗುತ್ತಾನೆ. ಗೌತಮ ಅವನ ಗೋತ್ರ ಕೇಳುತ್ತಾನೆ. ಗೋತ್ರ ಗೊತ್ತಿಲ್ಲದ ಆತ ತಾಯಿಯ ಬಳಿ ಬಂದು ನನ್ನ ಗೋತ್ರ ಯಾವುದು ಎಂದು ವಿಚಾರಿಸುತ್ತಾನೆ.

ಅದಕ್ಕೆ ತಾಯಿ ಹೇಳುತ್ತಾಳೆ. ನಾನು ಹಲವಾರು ಮನೆಗಳಲ್ಲಿ ಕೆಲಸ ಮಾಡುತ್ತಾ ಇದ್ದವಳು. ಆ ಅವಧಿಯಲ್ಲಿ ಬಸುರಾದೆ. ಹೀಗಾಗಿ ನಿನ್ನ ತಂದೆ ಯಾರೆಂದು ನನಗೆ ಗೊತ್ತಿಲ್ಲ. ನೀನು ಗುರುಗಳ ಬಳಿ ಅದನ್ನೇ ಹೇಳು.

ಅವನು ನೇರವಾಗಿ ಗುರುಗಳ ಬಳಿ ಬಂದು ಅಮ್ಮ ಹೇಳಿದ್ದನ್ನು ಹೇಳುತ್ತಾನೆ. ಶಿಷ್ಯಂದಿರೆಲ್ಲ ಅವನನ್ನು ನೋಡಿ ನಗುತ್ತಿದ್ದರೆ, ಗುರುಗಳು ಅವನ ಸತ್ಯಸಂಧತೆಯನ್ನೂ ಅವನ ಅಮ್ಮನ ನೇರವಂತಿಕೆಯನ್ನು ಮೆಚ್ಚಿಕೊಳ್ಳುತ್ತಾರೆ. ಅವನಿಗೆ ಸತ್ಯಕಾಮ ಅಂತ ಹೆಸರಿಡುತ್ತಾರೆ. ಜಾಬಾಲಳ ಮಗ ನೀನು, ಜಾಬಾಲಿ ಅನ್ನುತ್ತಾರೆ. ಹೀಗೆ ಅಮ್ಮನ ಹೆಸರಿನಿಂದ ಒಬ್ಬ ಋಷಿ ಹುಟ್ಟಿಕೊಳ್ಳುತ್ತಾನೆ.

ಮಗನಿಗೆ ಸತ್ಯಸಂಧತೆ ಕಲಿಸಿದ, ಆ ಮೂಲಕ ಜಗತ್ತನ್ನು ಗೆಲ್ಲುವುದನ್ನು ಕಲಿಸಿದ ತಾಯಿ ಜಾಬಾಲ. ಪೊರೆಯುವ ತಾಯಿ ಅವಳು. ಅಮ್ಮನ ಹೆಸರಿನಿಂದಲೇ ಅವನೂ ಹೆಸರಾದ. ಅವನ ಮೂಲಕ ಅಮ್ಮನಿಗೂ ಹೆಸರು ಬಂತು. ಹೀಗೆ ಮಕ್ಕಳನ್ನು ಪೊರೆಯಬಲ್ಲ ಅಮ್ಮ ಆ ಸಭೆಯಲ್ಲಿ ನೆನಪಾದಳು.

ಮತ್ತೊಬ್ಬಳು ನಮಗೆಲ್ಲ ಗೊತ್ತಿರುವ ಕುಂತಿ. ಮದುವೆಗೆ ಮುಂಚೆ ಅಮ್ಮನಾದವಳು. ಮಗನನ್ನು ಗಂಗೆಯಲ್ಲಿ ತೇಲಿಬಿಟ್ಟವಳು. ಸತ್ಯಕ್ಕೆ ಅಂಜಿದವಳು. ಅವಳ ಮಗ ಕರ್ಣ ದಾನಶೂರನಾದ. ಅವನಿಗೆ ಅಮ್ಮನಿಗಿಂತ ಮಿಗಿಲಾಗಿ ಕಂಡದ್ದು ಗೆಳೆತನ. ಗಂಗೆಯ ಉಡಿಯಲ್ಲಿ ತೇಲಿಕೊಂಡು ರಥಿಕನೊಬ್ಬನ ಕೈಗೆ ಸಿಗುವ ಕರ್ಣ, ಮುಂದೊಂದು ದಿನ ತನ್ನ ಹುಟ್ಟಿನ ಸತ್ಯ ತಿಳಿಯುತ್ತಾನೆ. ಆ ಸತ್ಯ ಅವನನ್ನು ಬಾಧಿಸುವುದಿಲ್ಲ. ತನ್ನ ಸ್ಥಿತಿಯ ಬಗ್ಗೆ ಅವನಿಗೆ ಹೀನಾಯ ಅನ್ನಿಸುತ್ತಿಲ್ಲ. ಅಮ್ಮ ಬೇಕು ಅಂತಲೂ ಅವನಿಗೆ ಆ ಕ್ಷಣ ಅನ್ನಿಸಿಲ್ಲ. ಹೀಗೆ ತನ್ನ ಅಗತ್ಯವನ್ನು ಮಗ ಮೀರುವಂತೆ ಮಾಡಿದವಳು, ತಾಯಿಯ ಬಂಧನದಿಂದ ಮಗನನ್ನು ಪಾರು ಮಾಡಿದವಳು ಕುಂತಿ. ಅವಳೊಂದಿಗೇ ಇರುತ್ತಿದ್ದ ಕರ್ಣ ಕೂಡ ರಾಜ್ಯದಾಹದ ಕುದಿಗೆ ಸಿಲುಕುತ್ತಿದ್ದನೇನೋ? ಅವನು ಯಾವತ್ತೂ ಏನನ್ನೂ ಬಯಸಲಿಲ್ಲ. ಕೊಡುವುದನ್ನು ಕಲಿತ, ಪಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಲಿಲ್ಲ. ಧುರ್ಯೋದನನ ಜೊತೆಗಿದ್ದೂ ಅವನಂತಾಗಲಿಲ್ಲ. ಅಂಥದ್ದೊಂದು ಬದುಕನ್ನು ಕೊಟ್ಟವಳೂ ತಾಯಿಯೇ. ಕುಂತಿ ಅವನನ್ನು ತೊರೆದು ದೊಡ್ಡವನನ್ನಾಗಿ ಮಾಡಿದಳು.

ಜಾಬಾಲ ಪೊರೆದ ತಾಯಿ, ಕುಂತಿ ತೊರೆಯ ತಾಯಿ. ಈ ಮಧ್ಯೆ ಸಂಹಾರ ಮಾಡಿದ ಅಮ್ಮ ಒಬ್ಬಳಿದ್ದಾಳೆ. ಜಗಜ್ಜನನಿ ಅನ್ನಿಸಿಕೊಂಡವಳು, ಮರ್ದಿನಿ ಕೂಡ ಆಗುವ ವಿಚಿತ್ರ ಕತೆ ಇದು. ಅವನೊಬ್ಬ ರಾಕ್ಷಸ ತನಗೆ ಅಮ್ಮನಿಂದಲ್ಲದೇ ಮತ್ಯಾರಿಂದಲೂ ಸಾವು ಬರಬಾರದು ಅಂತ ವರ ಕೇಳಿಕೊಳ್ಳುತ್ತಾನೆ. ಅಮ್ಮ ಕೊಲ್ಲುವುದಿಲ್ಲ ಅನ್ನುವ ಖಾತ್ರಿ ಅವನಿಗೆ. ಆ ವರ ಅವನಿಗೆ ಸಿಕ್ಕಿಬಿಡುತ್ತದೆ. ಅದರಿಂದಾಗಿ ಮೆರೆಯಲು ಆರಂಭಿಸುತ್ತಾನೆ. ಅವನನ್ನು ಕೊಲ್ಲಲು ಶ್ರೀಕೃಷ್ಠ ಯತ್ನಿಸಿ ಸೋಲುತ್ತಾನೆ. ಕೊನೆಗೆ ಜಗಜ್ಜನನಿಯ ಅಂಶದಿಂದ ಹುಟ್ಟಿದ ಸತ್ಯಭಾಮೆ ಅವನನ್ನು ಸಂಹರಿಸುತ್ತಾಳೆ. ಆತನ ಹೆಸರು ನರಕಾಸುರ. ಅವನ ಉಪಟಳ ಮಿತಿಮೀರಿದಾಗ ಹೀಗೆ ತಾಯಿ ಯಾವುದೋ ರೂಪದಲ್ಲಿ ಬಂದು ಸಂಹಾರ ಮಾಡುತ್ತಾಳೆ. ಸಂಹರಿಸುವುದು ಕೂಡ ಅಮ್ಮನ ಕರ್ತವ್ಯದ ಒಂದು ಭಾಗ. ರಕ್ಷಿಸುವುದು, ದೂರವಿಡುವುದು, ಮುಗಿಸುವುದು- ಮೂರೂ ಅವಳಿಗೆ ಗೊತ್ತು.

ಈ ಮೂವರು ಅಮ್ಮಂದಿರ ಜೊತೆಗೇ ನೆನಪಾಗುವವಳು ಕಯಾದು. ಗರ್ಭದಲ್ಲಿರುವ ಮಗನಿಗೆ ಹರಿನಾಮದ ರುಚಿ ಹತ್ತಿಸಿದವಳು. ಅವಳು ಕಲಿಸಿದ ಆ ಅಕ್ಷರ ಪ್ರಹ್ಲಾದನನ್ನು ಕಾಪಾಡುತ್ತಾ ಹೋಗುತ್ತದೆ. ಅದರಿಂದಾಗಿಯೇ ಅವನು ತನ್ನ ಸುತ್ತಲಿನ ರಾಕ್ಷಸತ್ವವನ್ನು ದಾನವೀಯತೆಯನ್ನು ಹಿಮ್ಮೆಟ್ಟಿಸುತ್ತಾ ಹೋಗುತ್ತಾನೆ. ಅಪ್ಪನ ನಿರಂಕುಶತ್ವಕ್ಕೆ ಸವಾಲಾಗುತ್ತಾನೆ. ರಾಕ್ಷಸರ ನಡುವೆ ಇದ್ದೂ ರಾಕ್ಷಸನಾಗದೇ ಹೋಗುತ್ತಾನೆ. ಶರಣಾಗದ ಹೊರತು ದೇವನಾಗಲಾರೆ ಅನ್ನುವುದನ್ನು ಕಲಿಸಿದವನೇ ಪ್ರಹ್ಲಾದ. ಶರಣಾಗಲಾರೆ ಹರಿಗೆ ಅಂದವನು ಹಿರಣ್ಯಕಶಿಪು. ತಂದೆಯನ್ನು ಧಿಕ್ಕರಿಸಿದ ಪ್ರಹ್ಲಾದ, ಅಮ್ಮನ ವಿರುದ್ಧ ಮಾತಾಡಲಿಲ್ಲ. ಕಯಾದು ಕೂಡ ಮಗನಿಗೆ ಜನ್ಮ ಇತ್ತ ನಂತರ ಏನನ್ನೂ ಹೇಳಲಿಲ್ಲ. ಎಲ್ಲವೂ ಗರ್ಭದಲ್ಲಿಯೇ ಮುಗಿದಿತ್ತು. ಅಗರ್ಭ ಜ್ಞಾನಿಯಾಗಿದ್ದ ಪ್ರಹ್ಲಾದ.

ಅಮ್ಮನ ಸ್ಮರಣೆ ಹೀಗೆ ಮುಂದುವರಿಯುತ್ತಾ ಹೋಗುತ್ತದೆ. ನಮ್ಮ ಪುರಾಣಗಳಲ್ಲಿ ಅಮ್ಮ ಮಗನ ಸಂಬಂಧ ಹೀಗೆ ಎಲ್ಲ ಆಯಾಮಗಳನ್ನೂ ಪಡಕೊಂಡಿದೆ. ಮಗನನ್ನು ಕೊಂದ ತಾಯಿಯಿರುವ ಹಾಗೆಯೇ ತಾಯಿಯನ್ನು ಕೊಂದ ಮಗನಿದ್ದಾನೆ. ಅವನು ಪರಶುರಾಮ. ಅಪ್ಪನ ಅಪ್ಪಣೆಯ ಮೇರೆಗೆ ತಾಯಿಯನ್ನು ಸಾಯಿಸುತ್ತಾನೆ. ಮತ್ತೆ ಅವಳನ್ನು ಬದುಕಿಸಿಕೊಡು ಅಂತ ಕೇಳುತ್ತಾನೆ. ತಾಯಿಗೆ ಜನ್ಮ ಕೊಟ್ಟ ಪರಶುರಾಮ, ಅವಳ ಮಗನಾ ಅಮ್ಮನಾ?

ಇಳಿವಯಸ್ಸಿನಲ್ಲಿ ಅಮ್ಮ ಅಪ್ಪನಿಗೆ ಮರುಬದುಕು ಕೊಡುವವರು ಮಕ್ಕಳೇ. ಹೀಗೆ ಮರುಹುಟ್ಟು ಕೊಡುತ್ತಲೇ ಮಗ ತಂದೆಯೂ ತಾಯಿಯೂ ಆಗುತ್ತಾನೆ. ಮಗಳು ಕೂಡ ಅಮ್ಮನಾಗುತ್ತಾಳೆ. ತನ್ನಮ್ಮನಿಗೆ ತಾನು ಅಮ್ಮನಾಗುವ ಪುಳಕದಲ್ಲಿ ಹೆಣ್ಮಕ್ಕಳು ಮೈಮರೆಯುತ್ತಾರೆ.

ನಿಜಕ್ಕೂ ವಯಸ್ಸಾದವರಿಗೆ ಬೇಕಾಗಿರುವುದು ಮಕ್ಕಳಲ್ಲ, ಮೊಮ್ಮಕ್ಕಳು. ಯಾಕೆಂದರೆ ಆ ವೃದ್ಧಾಪ್ಯದಲ್ಲಿ ತಮ್ಮ ತಾರುಣ್ಯದಲ್ಲಿ ಕಂಡಂಥ ಜೀವಗಳು ಬೇಕು. ಈ ವಿಚಿತ್ರ ತಾಕಲಾಟದಲ್ಲಿ, ಸಮೀಕರಣದಲ್ಲಿ ಬದುಕು ಸಾಗುತ್ತಿರುತ್ತದೆ. ಹಾಗೆ ಸಾಗುವ ಬದುಕಿನ ಈ ತುದಿಯಲ್ಲಿ ತಾರುಣ್ಯ, ಆ ತುದಿಯಲ್ಲಿ ತಾಯ್ತನ.

ನಡುವೆ ಹಿಮಗಿರಿಯ ಕಂದರ.

 

 

‍ಲೇಖಕರು G

2 December, 2012

3 Comments

  1. ಡಿ. ಎಸ್.ರಾಮಸ್ವಾಮಿ

    ಎಂದಿನಂತೆ ಸಭ್ಯತೆ ಮೀರದ ಚಿಂತನೆಗೆ ಹಚ್ಚಬಲ್ಲ ಅಗತ್ಯದ ಬರಹ. ಜೋಗಿಯೂ ಪೊರೆಯುತ್ತಿದ್ದಾರೆ ನಮ್ಮನ್ನೆಲ್ಲ- ಅವರೂ ಒಂದರ್ಥದಲ್ಲಿ ತಾಯಿಯೇ! ಹಾಗಾಗಿ ಅಮ್ಮ ಪ್ರಶಸ್ತಿಗೆ ಅವರಿಗಿಂತ ಹೆಚ್ಚಿನ ಅರ್ಹರು ಯಾರು?

  2. shanta Rao

    ನಮಸ್ಕಾರ ಸರ್, ಸೇಡಮಲ್ಲಿ ಭಾವುಕರಾಗಿ ಮಾತಾಡಿದ್ರಿ,ನಿಜ. ಸರ್,ನಾನು ಎರಡೂ ರೀತಿಯ ಅಮ್ಮಂದಿರನ್ನ ನೋಡಿದ್ದೀನಿ.ಏಳು ವರ್ಷಗಳಿಂದ ವೃದ್ಧಾಶ್ರಮದಲ್ಲಿ,ಮಗ ಒಂದಿಲ್ಲಾ ಒಂದು ದಿನ ಬಂದು ತನ್ನನ್ನು ಮನೆಗೆ ಕರೆದುಕೊಂಡು ಹೋಗ್ತಾನೆ,ಮೊಮ್ಮಕ್ಕಳೊಂದಿಗೆ ಮನೇಲಿ ಸಂತೋಷದಿಂದ ಕಾಲಕಳೆಯಬಹುದು ಎಂದು ಮಗನ ನಿರೀಕ್ಷೆಯಲ್ಲಿಯೆ ಉಮ್ಮಗರ್ಾ ವೃದ್ಧಾಶ್ರಮದಲ್ಲಿರುವ ತಾಯಿ ದೇವರು.
    ಏಡ್ಸ ರೋಗ ಪೀಡಿತಳ ಮಗ ಆನಂದನದು ಮೇಲಿನ ತಾಯಿಯ ಗತಿನೇ. ತಾಯಿಗಾಗಿ ಸದಾ ಹಂಬಲಿಸುತ್ತಿರುವ ಮಗು. ಅವನದು ಒಂದೇ ಬೇಡಿಕೆ ಅಮ್ಮಾ, ನನ್ನನ್ನ ಅವ್ವನ ಹತ್ರ ಕರ್ಕೊಂಡು ಹೋಗು,ನನ್ನ ಅವ್ವನ ಸರಿಯಾಗಿ ನೋಡ್ಕೊಳ್ತೀನಿ,ಅವ್ಳಿಗಿ ದವಾಖಾನಿಗಿ ಕರ್ಕೊಂಡು ಹೋಗ್ತೀನಿ, ಆದರೆ ಆ ತಾಯಿ ತನ್ನ ಮಗುನ ನೋಡೊದಿಕ್ಕೆ ನಿರಾಕರಿಸ್ತಾಳೆ ಸರ್. ಮಗನ ನೆನಪು ಅವ್ಳಿಗೆ ಬರೋದೆ ಇಲ್ಲಾ. ಏನಂತೀರಾ ಸರ್ ಇದಕ್ಕೆ

  3. JOGI

    The young man knows the rules but the old man knows the exceptions!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading