ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನನ್ನೇ ನೋಡ್ತಿದ್ದೇನೆ ತನು..

ನಂದಿನಿ ಹೆದ್ದುರ್ಗ

ಅಮ್ಮನನ್ನೇ ನೋಡ್ತಿದ್ದೇನೆ ತನು..

ಮೂರು ಹಾಸಿಗೆಯನ್ನು ಆಯಾತಾಕಾರಕ್ಕೆ ಹಾಕಿರುವ ಅಪ್ಪ ಅಮ್ಮನ ಈ ಕೋಣೆಯಲ್ಲಿ ನಾನೂ ಹೋದಾಗಲೆಲ್ಲ ಕಿಟಿಕಿ ಪಕ್ಕದ ಮಂಚವನ್ನು ಅಮ್ಮ ನನಗಾಗಿ ಬಿಟ್ಟುಕೊಡುತ್ತಾಳೆ.ನಾನು ಹೊದಿಯುವ ಕೌದಿ ಅಲ್ಲೇ ಮೇಲೆ ಸಜ್ಜಾದಲ್ಲಿ ಮಡಿಸಿಟ್ಟು ಬಂದಿರುತ್ತೇನೆ.

ಹೀಗೆ ಈ ಬದಿಯ ಮಂಚದಲ್ಲಿ ನಾನು ಮಲಗಿ ಎದುರಿನ ಪುಟಾಣಿ ಮಂಚ ದಲ್ಲಿ ಮಲಗಿರುವ ಅಮ್ಮನನ್ನೇ ನೇರ ನೋಡುವಾಗೆಲ್ಲ ಅಮ್ಮ ಈ ಲೋಕದ ಹೆಣ್ಣುಗಳೆಲ್ಲರಿಗಿಂತಲೂ ವಿಪರೀತ ಸುಂದರಿ ಅನಿಸಲಿಕ್ಕೆ ಶುರುವಾಗಿದೆ ತನು.

ಒಂದೆರಡು ಮಾಮೂಲು ‌ಮದ್ದು ಕುಡಿವ ಅಮ್ಮ ಬೆಳಗಿಂದ ಸಂಜೆ ತನಕ ಕೆಲಸ ಮಾಡುತ್ತಲೇ ಇರ್ತಾಳೆ.ಅದು ಮಾತ್ರವಲ್ಲ. ಯಾರಿಗೆ ಏನು ಬೇಕು ಎನ್ನುವ ಕರಾರುವಕ್ಕು ಜ್ಞಾನ, ನಾಯಿ ದನ ಬೆಕ್ಕೆ ಬಳ್ಳಿ ಗಿಡ ಎಲ್ಲಕ್ಕೂ ಅಮ್ಮ ಅಮ್ಮನಾಗಿಬಿಟ್ಟಿರುತ್ತಾಳೆ ಈ ಹೊತ್ತಿಗೆ. ನಾಕಾರು ದಿನ ಅಮ್ಮ ಮನೆಯಿಂದ ಆಚೆ ಇದ್ದಾಗಲೆಲ್ಲ ಅಮ್ಮ ಹಾಯುತ್ತಿದ್ದಾಗಲೆಲ್ಲ ಹೊಮ್ಮುತ್ತಿದ್ದ ಬೆವರಗಂಧ ಇಲ್ಲದೆ ಗಿಡಬಳ್ಳಿಗಳ ಎದೆ ಎಷ್ಟೆಲ್ಲ ತಡಕಾಡಿರಬಹುದು.

ನಂಗೊಂದು‌ ಅಚ್ಚರಿ ಇದೆ ತನು.

ಈ  ಅಮ್ಮ ಎನ್ನುವ ಜಗತ್ತಿನ  ಶಾಪಗ್ರಸ್ಥ ದೇವತೆಯರೆಲ್ಲರೂ  ತಮ್ಮ ಯೌವನದ ನಿಗಿನಿಗಿ ದಿನಗಳಲ್ಲಿ ಹೊಳೆಯುವ ಸೌಂದರ್ಯಕ್ಕೆ ಒಡತಿಯರಾಗಿದ್ದಾಗ ಅವರವರ ಮಗಳಂದಿರ ವೈರತ್ವದ ಸತ್ವಪರೀಕ್ಷೆ ಎದುರಿಸಲೇ ಬೇಕಾಗ್ತದೆ. 

ಜಗದ ಮಗಳುಗಳೆಗೆಲ್ಲರಿಗೂ ಪಕ್ಕಾ ಪ್ರತಿಸ್ಪರ್ಧಿ ಎನಿಸುವ ಈ ಅಮ್ಮ ತನ್ನ ಪ್ರೀತಿಯ ಅಪ್ಪನಿಂದ ತನ್ನನ್ನು ದೂರ ಮಾಡುತ್ತಿರುವ ಜಗತ್ತಿನ ಏಕಮಾತ್ರ ಕ್ರೂರಿ ಎನಿಸುವ ನಿರ್ಧಾರಕ್ಕೆ ಬಂದುಬಿಡುತ್ತಾರೆ.ಒಂದೈದಾರು ವರ್ಷ ಉಳಿಯುವ ಈ ಭಾವ ಪೂರ್ಣ ಕರಗಿ ಅಮ್ಮ ಈ ಜಗತ್ತಿನ ಹೆಣ್ಣುಗಳಲೆಲ್ಲ ಅಪರೂಪದ ಚೆಲುವೆ ಕಾರುಣ್ಯಮಯಿ ಎನಿಸುವ ಕಾಲಕ್ಕೆ ಮಗಳು ಮಾಗುತ್ತಾ ಬಂದಿರುತ್ತಾಳೆ.ಅವಳ ಕಣ್ಣಕೆಳಗೆ ನಾಕಾರು ಕಿರುಗೆರೆಗಳು ಅವಳ ಕಣ್ಣಿಗೆ ಮಾತ್ರ ಸ್ಪಷ್ಟವಾಗಿ ಕಂಡು ಅಮ್ಮನನ್ನೇ ಸಮಯ ಸಿಕ್ಕಾಗಲೆಲ್ಲ ನೋಡುತ್ತಾಳೆ.ಅದು ಹೇಗೆ ಅಮ್ಮನ ಕಣ್ಣೂ ಮನಸ್ಸು ಅಷ್ಟು ಶುಭ್ರವಾಗಿಯೇ ಉಳಿಯಿತು ಎಂಬುದು ಈ ಜಗದ ಮಹದಚ್ಚರಿ ಎನಿಸುತ್ತದೆ.ತುಂಬು ಪ್ರಾಯದಲ್ಲಿರುವ ಮಗಳೂ, ಪ್ರಾಯ ಮುಗಿಯುತ್ತಿರುವ ನಾನೂ ವೃದ್ಧಾಪ್ಯಕ್ಕೆ ಅಡಿಯಿರಿಸಿರುವ ಅಮ್ಮನಷ್ಟು ಚಂದ ಯಾಕೆ ಕಾಣ್ತಿಲ್ಲ ಅಂತ ತಲೆಬಿಸಿಯಾಗ್ತದೆ.

ತನು..ಇದೆಲ್ಲವೂ ನಂಗೆ ಮಾತ್ರ ಅನಿಸುವುದಾ.ಅಥವಾ ಈ ಲೋಕದ ಹೆಣ್ಣುಮಕ್ಕಳಿಗೆಲ್ಲರಿಗೂ ಹೀಗಾಗ್ತದಾ?

ಉಹು ಗೊತ್ತಿಲ್ಲ.

ಆದರೆ ಅಮ್ಮ ಈಚೀಚೆಗೆ ಚೆಲುವೆಯಾಗ್ತಿದ್ದಾಳೆ ಎನ್ನುವುದು ಮಾತ್ರ ಸತ್ಯ ..

ಯಾಕೆ ಹೆಣ್ಣು ಮಾತ್ರ ಇಷ್ಟೊಂದು ಎಮೊಷನಲ್ ಆಗ್ತಾಳೆ .

ಅಮ್ಮನಿಗೆ ತಾನು ‌ಬಯಸಿದ್ದ ,‌ ಪ್ರತಿ ಹೆಣ್ಣೂ ಬಯಸುವ ಬೆಚ್ಚನೆಯ ಪ್ರೀತಿ ಸಿಕ್ಕಿತ್ತಾ?

ಒಳಗೊಂದು ಒಲುಮೆಯಿದ್ದಾಗ ಬೆಳಕು ಗೂಡುಕಟ್ಟಿಕೊಳ್ತದೆ ಮೊಗದಲ್ಲಿ ಎನ್ನುವ ಮಾತಿನಲ್ಲಿ ನಂಬಿಕೆ ಇರುವವಳು ನಾನು.

ಅವನಿರುವವರೆಗೂ ನನ್ನ ಕಣ್ಣುಗಳಲ್ಲಿ ವಾಸ್ತವ್ಯ ಹೂಡಿದ್ದ ತುಂಟತನ ಈಗ‌ ಮರೆಯಾಗಿದೆ.ಹಾಗಿದ್ದರೆ ಅವನು‌ ನಿಜವಾಗಿಯೂ ಮರೆಯಾಗಿ ಹೋದನೇ ತನು?

ಉಹು.ಇಲ್ಲ.. ಹೋಗಿಲ್ಲ.

ಲೋಕದ ಹೆಣ್ಣುಗಳೆಲ್ಲರೂ ಅವನ ಹಿಂದೆ ಬೀಳಬಹುದು.,ಮೊದಲೇ ಮೆತ್ತನೆ ಮನಸ್ಸಿನವ ಅವಳಿಗೂ ಇವಳಿಗೂ ಇನ್ನೊಬ್ಬಳಿಗೂ ಒಲವು ಹಂಚಬಹುದು ಅಂತೇನೋ ಹಬ್ಬಿಕೊಳ್ಳುವ ಸಂದೇಹದ ಬಳ್ಳಿ ನನ್ನ ಕಣ್ಣಿನಲ್ಲಿ ಅರಳಿಕೊಂಡಿದ್ದ ಹೂವಿನ ಬಣ್ಣ ಕಳೆಯುತ್ತಿದೆ.

ತನು.

ಅವನ ಗಂಡುತನಕ್ಕೂ ಮಿಗಿಲಾಗಿ  ಅಮ್ಮತನವೇ ಆಕರ್ಷಕ‌ ಅನಿಸುತ್ತಿರುವ  ಈ ಹೊತ್ತಿನಲ್ಲಿ 

ಅವನೆದೆಯ ಬೆಚ್ಚನೆ ತಾವಿಗಾಗಿ ಕಾಯುವ ನಾನು ನಿಜಕ್ಕೂ ಅಲ್ಲಿ ಪಡೆಯುವುದೇನು?

ನಮ್ಮ ನಡುವಿನದ್ದು ಪ್ರೇಮವಾ ಅಕ್ಕರೆಯಾ?

ಎಷ್ಟೊಂದು ಪ್ರಶ್ನೆಗಳನ್ನು ಹೊತ್ತು ಬಳಲುತ್ತಿಯಾ ನಿನ್ನ ಪುಟ್ಟ ಹೃದಯದಲ್ಲಿ ಅನ್ನುವ ಅವನ ನಿತ್ಯದ ನವುರು ಗದರುವಿಕೆ ಹೊಮ್ಮಿಸುವ ಅಕ್ಕರೆಗೆ ಶರಣಾಗಿದ್ದೇನೆ.

ನನ್ನ ಅಮ್ಮನಂತೆ ಅವನಿಗೂ ಅಮ್ಮಂದಿರ ದಿನದ ಶುಭಾಶಯಗಳು ಹೇಳಬೇಕು ಅನಿಸ್ತಿದೆ.

ನಾನು ವಯಸ್ಸಾದ ಮೇಲೆ ಅಮ್ಮನಷ್ಟು ಚಲುವೆಯಾಗಿ ಉಳಿತೀನಾ ?

ಅವನು ಆಚೀಚೆ ಹೆಣ್ಮಕ್ಳಿಗೆ ಅಮ್ಮನಾಗೋದು ಬೇಡ ಅಂತ ಬೇಡಿಕೊ ತನು..

‍ಲೇಖಕರು avadhi

14 May, 2023

1 Comment

  1. Kotresh Arsikere

    ಬಹಳ ಚೆಂದದ ಬರಹ.ತುಂಬಾ ಆಪ್ತವಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading