ಅಮೃತಾ ಹೆಗಡೆ ಅಂಕಣ- ಶ್ರವಣ ಸಾಧನ ಎಲ್ಲರಿಗೆ ಕಂಡರೇನು ತಪ್ಪು..?

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

29

ಅದೊಂದು ವಿಚಿತ್ರ ಮನಸ್ಥಿತಿ. ಅಥರ್ವನ ಕಿವಿಗಳನ್ನ ಮುಚ್ಚಿಟ್ಟರೆ ದಿವ್ಯ ಸಮಾಧಾನ ನನಗೆ. ಅಥರ್ವ ಧರಿಸಿರುವ ಪ್ರೋಸೆಸರ್‌ನ್ನ ಯಾರೂ ಗಮನಿಸಿಲ್ಲವೆಂದರೆ ಮನಸ್ಸಿಗೆ ಅದೇನೋ ಅದ್ಭುತ ನೆಮ್ಮದಿ. ಹೀಗಾಗಿ ಮೈಸೂರಿನ ಜನತಾನಗರದ ಹೊರತಾಗಿ ಅದೆಲ್ಲಿಗೆ ಅಥರ್ವನನ್ನು ಕರೆದುಕೊಂಡು ಹೋಗುವುದಾದರೂ ಅಥರ್ವನ ತಲೆಗೊಂದು ಕಿವಿ ಮುಚ್ಚವಂಥ ಟೋಪಿ ಹಾಕಿಬಿಡುತ್ತಿದ್ದೆ. ಅದನ್ನು ಅವನು ತನ್ನ ಕೈಯ್ಯಾರ ತೆಗೆಯುವಹಾಗಿಲ್ಲ. ಟೋಪಿ ಬಿಚ್ಚಿದರೆ ಅಮ್ಮನ ಗರಂ ನೋಟ ಅವನನ್ನ ಎಚ್ಚರಿಸುತ್ತಿತ್ತು. 

ಮನೆಯಿಂದ ಹೊರಗೆ ಕಾಲಿಡುವ ಮೊದಲು ಚಪ್ಪಲಿ ಹಾಕುವುದಕ್ಕೂ ಸ್ವಲ್ಪ ಮುಂಚೆ ಟೋಪಿ ಹಾಕಿ ಕಿವಿಗಳನ್ನು ಮುಚ್ಚುವುದು ನನ್ನ ಅಭ್ಯಾಸವಾಗಿಹೋಗಿತ್ತು. ಅದಕ್ಕಾಗಿಯೇ ಬೇರೆ ಬೇರೆ ಥರಹದ ಟೋಪಿಗಳನ್ನೂ ಕೊಂಡಿದ್ದೆ. ಚಳಿ, ಮಳೆ, ಶಕೆ ಏನೇ ಇರಲಿ ಅದಕ್ಕೆ ಹೊಂದುವ ಟೋಪಿ ಮಾತ್ರ ಸದಾಕಾಲ ಅವನ ತಲೆಯನ್ನ ಮುಚ್ಚಿರುವಂತೆ ನೋಡಿಕೊಳ್ಳುತ್ತಿದ್ದೆ.

ಒಮ್ಮೆ ನಾನು ಮೈಸೂರಿನಿಂದ ಬೆಂಗಳೂರಿಗೆ ಹೊರಟ ಸಂದರ್ಭವದು. ಫೆಬ್ರವರಿ ತಿಂಗಳ ಮಟ ಮಟ ಮಧ್ಯಾಹ್ನ 2 ಗಂಟೆಗೆ ಬಸ್‌ನಿಲ್ದಾಣದಲ್ಲಿ ಅಥರ್ವನನ್ನ ಎತ್ತಿಕೊಂಡು ಬಸ್‌ಏರಿದ್ದೆ. ಬಿಸಿಲ ಧಗೆ ಬೇರೆ. ಬೆವರು ಕೆನ್ನೆಯಗುಂಟ ಇಳಿಯುತ್ತಿತ್ತು. ಬಸ್‌ ಏರುವ ಭರದಲ್ಲಿ ಅಥರ್ವ ತನ್ನ ಟೊಪ್ಪಿ ತೆಗೆದು ಕೆಳಗೆ ಎಸೆದಿದ್ದನೋ ಏನೋ, ಗಮನಿಸಿರಲೇ ಇಲ್ಲ ನಾನು. ಬಸ್‌ ಏರಿ ಕುಳಿತು ಬ್ಯಾಗ್‌ ಮೇಲಿಟ್ಟು ಅಥರ್ವನ ಪಕ್ಕದಲ್ಲಿ ಕುಳಿತಿದ್ದೇ, ‘ಅಮ್ಮಾ ತೋಪಿ ಇನ್ನ. ಎನ್ನ ನೋತಾಎ’ (ಅಮ್ಮಾ ಟೋಪಿ ಇಲ್ಲ. ಎಲ್ಲರೂ ನೋಡ್ತಾರೆ) ಎನ್ನುತ್ತಾ, ತನ್ನ ಕಿವಿಗಳನ್ನು ತಾನು ಮುಚ್ಚಿಕೊಂಡು, ನನ್ನನ್ನು ಆತಂಕದಿಂದ ನೋಡತೊಡಗಿದ್ದ. ಒಮ್ಮೆ ಗದರಿದೆ. ಸುತ್ತಮುತ್ತ ಹುಡುಕಿದೆ. 

ಟೋಪಿ ಇಲ್ಲವೇ ಇಲ್ಲ. ಎಲ್ಲೋ ಬಿದ್ದುಹೋಗಿತ್ತು. ಮಗುವನ್ನೆತ್ತಿಕೊಂಡು, ಬ್ಯಾಗ್‌ ನೇತಾಡಿಸಿಕೊಂಡು ಬಸ್‌ ಏರುವ ಭರದಲ್ಲಿ ಅಥರ್ವನ ಟೋಪಿ ಮಾಯವಾಗಿದ್ದು ನನಗೆ ಗೊತ್ತಾಗಲೇ ಇಲ್ಲ. ‘ಹೋಗಲಿ ಬಿಡು ಅಥರ್ವ, ಬೇರೆ ಹೊಸ ಟೋಪಿ ತಗೋಳ್ಳೋಣ ಆಯ್ತಾ ?’ ಎನ್ನುತ್ತಾ ಅವನನ್ನ ನೋಡಿದರೆ, ಅವನ ಎರಡೂ ಪುಟಾಣಿ ಕೈಗಳು ಅವನ ಕಿವಿಗಳಿಂದ ಕೆಳಗಿನ್ನೂ ಇಳಿದಿರಲೇ ಇಲ್ಲ. ‘ಪುಟ್ಟ ಯಾಕೆ ಕಿವಿ ಮುಚ್ಚಿಕೊಂಡಿದ್ದೀಯಾ, ಕೈ ಕೆಳಗಿಳಿಸು’ ಎಂದೆ ಮತ್ತೊಮ್ಮೆ. ಅಮ್ಮಾ ಎನ್ನ ನೋತಾಎ (ಅಮ್ಮಾ ಎಲ್ಲರೂ ನೋಡ್ತಾರೆ) ಎಂಬ ಉತ್ತರ ಅವನಿಂದ ಇನ್ನೊಮ್ಮೆ! ‘ನಿನ್ನ ಕಿವಿಗಳನ್ನ, ನೀ ಹಾಕೊಂಡಿರೋ ಪ್ರೋಸೆಸರ್‌, ಹಿಯರಿಂಗ್‌ ಏಡ್‌ಗಳನ್ನ ಯಾರೂ ನೋಡ್ಬಾರ್ದಾ..?’ ಕೇಳಿದೆ ನಾನು. ಊಹೂಂ ಅಂತ ತಲೆ ಅಲ್ಲಾಡಿಸಿದ. 

ಯಾಕೋ ಕಸಿವಿಸಿಯಾಯ್ತು. ಅಥರ್ವನ ಈ ಮಾತುಗಳು ನನ್ನ ವರ್ತನೆಗಳ ಜತೆಯೇ ಅಡಗಿ ಬೆಚ್ಚಗೆ ಕುಳಿತಿದ್ದ ನನ್ನವೇ ಕೀಳರಿಮೆಯನ್ನ ನನಗೇ ಅರ್ಥಮಾಡಿಸಿದ್ದವು. ನಮ್ಮ ಪಿ.ಎ.ಡಿ.ಸಿ ಶಾಲೆಯ ಸುತ್ತಮುತ್ತಲಿನ ಜನ, ಜನತಾ ನಗರದ ಮಂದಿ, ಮೈಸೂರಿನ ಸಾರ್ವಜನಿಕರೆಲ್ಲ ನಮ್ಮ ಕಿವುಡು ಮಕ್ಕಳನ್ನ ವಿಷೇಶವಾಗಿ ಗಮನಿಸಲಾರರು. ‘ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೀಚ್‌ ಅಂಡ್‌ ಹಿಯರಿಂಗ್‌’ ಎಂಬ ದೊಡ್ಡ ಸಮುದ್ರವನ್ನೇ ಒಡಲಲ್ಲಿ ಇಟ್ಟುಕೊಂಡಿರೋ ಈ ಊರಿನ ಜನರಿಗೆ ಕಿವುಡು ಮಕ್ಕಳನ್ನ ನೋಡಿ ಗೊತ್ತಿದೆ. ಆದರೆ, ಬೆಂಗಳೂರಿಗೆ ಹೋದಾಗ, ಹೋಗಿ ಬರುವ ಬಸ್‌ನಲ್ಲಿ, ರಸ್ತೆಯಲ್ಲಿ, ಅಂಗಡಿಗಳಲ್ಲಿ ಅಥರ್ವನ ಕಿವಿಗಳನ್ನು ಸೂಕ್ಷ್ಮವಾಗಿ ಗಮನಿಸುವವರನ್ನು, ಆಗಾಗ ಕುತೂಹಲದಿಂದ ಬಗ್ಗಿ ಬಗ್ಗಿ ನೋಡುವವರನ್ನೋ, ಬಿಟ್ಟು ಬಿಡದೆ ನೋಟದಲ್ಲಿಯೇ ಕಾಡುವವರನ್ನು ಬಹಳವಾಗಿ ಕಂಡಿದ್ದೆ ನಾನು. ಹೀಗಾಗಿ ಕಿವಿಯ ಮೇಲಿರುವ ಶ್ರವಣ ಸಾಧನಗಳು ಜನರಿಗೆ ಕಾಣಬಾರದೆಂಬ ಕಾರಣಕ್ಕೆ ಸದಾ ಅವುಗಳನ್ನು ಟೋಪಿಯಡಿಯಲ್ಲಿ ಮುಚ್ಚಿಬಿಡುತ್ತಿದ್ದೆ.

ಟೋಪಿ ಹಾಕಿ ಅಥರ್ವನ ತಲೆಪೂರ್ತಿ ಮುಚ್ಚಿಬಿಟ್ಟರೆ, ಎಲ್ಲಿಲ್ಲದ ಸಮಾಧಾನ. ಬೆಂಗಳೂರಿನಲ್ಲಿ ಮನೆಯಿಂದ ಹೊರಬೀಳಬೇಕೆಂದರೆ ಅಥರ್ವನ ಕಿವಿಗಳು ಟೋಪಿಯೊಳಗೆ ಅವಿತಿರುವಂತೆ ಸಾದಾ ನೋಡಿಕೊಳ್ಳುತ್ತಿದ್ದೆ. ವಿನಯ್‌ಗೂ ಇದನ್ನೇ ಅಭ್ಯಾಸ ಮಾಡಿಸಿದ್ದೆ. ನನ್ನ ಮಗುವೊಂದು ಶ್ರವಣದೋಷ ಹೊಂದಿರುವ ಮಗು ಎಂದು ಸಮಾಜದೆದುರು ಧೈರ್ಯವಾಗಿ ಒಪ್ಪಿಕೊಳ್ಳಲು ಇನ್ನೂ ಮನಸ್ಸೇಕೋ ಹಿಂಜರಿಯುತ್ತಲೇ ಇತ್ತು. 

ಆದರೆ, ಈ 3 ವರ್ಷದ ಬಾಲೆಯೊಳಗೆ ಸ್ವತಃ ನಾನೇ, ಕೀಳರಿಮೆ ಬೆಳೆಸುತ್ತಿದ್ದುದು ನನ್ನರಿವಿಗೇ ಬಂದಿರಲಿಲ್ಲ.  ಯಾರಿಗೂ ನಿನ್ನ ಪ್ರೋಸೆಸರ್‌ತೋರಿಸಬೇಡ ಎಂದು ಆಗಾಗ ಹೇಳುತ್ತಾ, ಟೋಪಿ ಸರಿಪಡಿಸುತ್ತಿರುವ ನನ್ನ ವರ್ತನೆಯಿಂದ,  ಮಗುವಿನ ಮೇಲೆಯೂ ಪ್ರಭಾವ ಬೀರುತ್ತಿದೆ ಎಂಬುದರ ಕಲ್ಪನೆಯೇ ನನಗಿರಲಿಲ್ಲ. 

ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸುವಾಗಲೂ ಪ್ರೋಸೆಸರ್‌ನ್ನ ಆದಷ್ಟು ಅವಾಯ್ಡ್‌ ಮಾಡಿಯೇ ಕ್ಲಿಕ್ಕಿಸುತ್ತಿದ್ದುದನ್ನೂ ಕೂಡ ನನ್ನ ಮಗು ಗಮನಿಸಿಬಿ‌ಟ್ಟಿದ್ದ. ಫೋಟೋದಲ್ಲಿ ಎಲ್ಲಿಯಾದರೂ ತನ್ನ ಪ್ರೋಸೆಸರ್‌ ಕಾಣಿಸುತ್ತಿದ್ದರೆ, ‘ಅಮ್ಮಾ ಫೋಟೋ ಚನ್ನಾಗಿಲ್ಲ, ಪ್ರೋಸೆಸರ್‌ ಕಾಣಿಸ್ತಿದೆ’ ಅನ್ನುತ್ತಿದ್ದ. ಅದು ಕೂಡ ನೆನಪಾಯ್ತು ನನಗೆ. ಛೆ! ಹಿರಿಯರ ವರ್ತನೆ ಮಕ್ಕಳ ಮೇಲೆ ಇಷ್ಟು ಗಾಢವಾಗಿ ಪ್ರಭಾವ ಬೀರಬಲ್ಲದೇ..?! ಇಷ್ಟೊಂದು ಸೂಕ್ಷ್ಮಗಳನ್ನು ಮಕ್ಕಳು ಗಮನಿಸಿ ಅರ್ಥ ಅರ್ಥೈಸಿಕೊಳ್ಳಬಲ್ಲರೇ..? ಆಶ್ಚರ್ಯವಾಯ್ತು.

ಇದೊಂದು ಮುಚ್ಚಿಟ್ಟುಕೊಳ್ಳಬೇಕಾದ ವಸ್ತು, ಯಾರಿಗೂ ತೋರಿಸಬಾರದಂಥ ವಸ್ತು. ತೋರಿಸಿದರೆ ತನಗೆ ಅವಮಾನವಾಗುತ್ತೆ ಎಂಬ ಭಾವವನ್ನ ಅವನಲ್ಲಿ ಅವನಲ್ಲಿ ಬಿತ್ತಿದ್ದೇ ನಾನು. ಆ ಸಂದರ್ಭ ಅದನ್ನು ಸ್ಪಷ್ಟಪಡಿಸಿಬಿಟ್ಟಿತ್ತು. ಇದು ಅಪಾಯಕಾರಿ, ಇಲ್ಲಿಂದಲೇ ಈ ಮುಚ್ಚಿಡುವ ಅಭ್ಯಾಸವನ್ನ ಬಿಟ್ಟುಬಿಡಬೇಕು ಎಂದು ಆ ಕ್ಷಣ ನಿರ್ಧರಿಸಿಬಿಟ್ಟೆ.

‘ನೋಡಲಿ, ಎಲ್ಲರೂ ನೋಡಲಿ ನನ್ನ ಮಗನ ಕಿವಿಗಳನ್ನು. ನೋಡಿ, ನೋಡಿ ಕುತೂಹಲ ತಾಳಲಾರದೆ ಪ್ರಶ್ನೆ ಕೇಳಿದರೆ, ಉತ್ತರ ಕೊಟ್ಟರಾಯಿತು. ಹೌದು ನನ್ನ ಮಗುವೊಬ್ಬ ಕಿವುಡ. ಅವನು ಕೇಳಿಸಿಕೊಳ್ಳುವುದಕ್ಕಾಗಿ ವ್ಯವಸ್ಥೆ ಮಾಡಿಯಾಗಿದೆ. ಅವನು ಎಲ್ಲರಂತೆ ಕೇಳಿಸಿಕೊಂಡು ಎಲ್ಲರಂತೆ ಮಾತಾಡಿ ಬದುಕಬೇಕೆಂದೇ ಅಲ್ಲವೇ ಇಷ್ಟೆಲ್ಲ ಮಾಡುತ್ತಿರುವುದು..? ಅವನು ಧರಿಸಿರುವ ಶ್ರವಣ ಸಾಧನ ಎಲ್ಲರಿಗೆ ಕಂಡರೇನು ತಪ್ಪು..? ಇದರಲ್ಲಿ ಅವಮಾನದ ಪ್ರಶ್ನೆಯೇ ಇಲ್ಲ’ ನನ್ನೊಳಗೇ ನಾನು ಸಮಾಧಾನ ಮಾಡಿಕೊಂಡೆ.

‘ಪುಟ್ಟಾ, ಚಳಿ ಆದಾಗ, ಟೋಪಿ ಬೇಕಿನಿಸಿದಾಗ ಮಾತ್ರ ಹೇಳು ಕಂದ, ನಾನು ನಿನಗೆ  ಟೋಪಿ ಹಾಕಿಕೊಡುತ್ತೇನೆ. ನೀನು ನಿನ್ನ ಕಿವಿಯ ಮೇಲಿರುವ ಪ್ರೋಸೇಸರ್‌, ಹಿಯರಿಂಗ್‌ಏಡ್‌ಗಳನ್ನ ಮುಚ್ಚಿಕೊಳ್ಳಬೇಕೆಂದೇನಿಲ್ಲ ಕಂದ. ಅವುಗಳೇ ನಿನ್ನ ಕಿವಿಗಳು. ಪರವಾಗಿಲ್ಲ. ಆರಾಮಾಗಿ ಕುಳಿತುಕೊ. ಯಾರಾದರೂ ಇದೇನು ಅಂತ ಕೇಳಿದರೆ, ಇದು ಪ್ರೋಸೆಸರ್‌. ಇದು ಹಿಯರಿಂಗ್‌ಏಡ್‌. ಇವು ನನಗೆ ಕೇಳಿಸಿಕೊಳ್ಳಲು ಬೇಕು ಅಂತ ಖುಷಿಯಲ್ಲಿಯೇ ಹೇಳು. ಎಂದು ಅವನಿಗೂ ಹೇಳಿಕೊಟ್ಟು, ನಾನೂ ಮನಸ್ಸು ಗಟ್ಟಿಮಾಡಿಕೊಂಡೆ. ಇನ್ನೆಂದೂ ಸುಕಾಸುಮ್ಮನೆ ಅವನ ಕಿವಿಗಳನ್ನ ಅಡಗಿಸುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ ನಾನು. ಇಂದಿಗೂ ಅವನಲ್ಲಿ ಇದರಬಗ್ಗೆ ಕೀಳರಿಮೆಯ ಕಣ ಕೂಡ ಬಾರದಂತೆ ಎಚ್ಚರವಹಿಸುತ್ತಿದ್ದೇನೆ.

ಸಾಮಾನ್ಯವಾಗಿ ಮಕ್ಕಳಿಗೆ ಕುತೂಹಲ ಜಾಸ್ತಿ. ಅಥರ್ವನನ್ನ ಹೊಸದಾಗಿ ಕಂಡ  ಚಿಕ್ಕಮಕ್ಕಳಿಗೆಲ್ಲ ಅಚ್ಚರಿಯಾಗೇ ಆಗುತ್ತೆ. ಕಿವಿಯ ಹಿಂದಿನ ತಲೆಗೆ ಅಂಟಿಕೊಂಡಿರುವ ಹೊಸ ರೀತಿಯ ಉಪಕರಣ ಕಂಡಾಗ ಅದರ ಬಗ್ಗೆ ಪ್ರಶ್ನೆ ಕೇಳಿಯೇ ಕೇಳುತ್ತಾರೆ ಅವರು. ಹಾಗೆ ಅವರು ಪ್ರಶ್ನೆ ಕೇಳಿದಾಗ, ಅದೊಂದು ಇಯರ್‌ಫೋನ್‌, ಸುಮ್ಮನೆ ಏನೋ ಹಾಕೊಂಡಿದಾನೆ. ಅದರಬಗ್ಗೆ ಕೇಳ್ಬಾರ್ದು. ಸುಮ್ನಿರು ಆಮೇಲ್‌ಹೇಳ್ತೀನಿ ಎಂದು ಅವರವರ ಅಮ್ಮಂದಿರು ತಮ್ಮ ಮಕ್ಕಳನ್ನ ಸುಮ್ಮನಿರಿಸೋದನ್ನ ಬೆಂಗಳೂರಿನಲ್ಲೇ ಅತಿ ಹೆಚ್ಚು ಕಂಡಿದ್ದೆ. ಅಂಥ ಸಂದರ್ಭ ಎದುರಾದಾಗ, ನಾನು ಅಥರ್ವನನ್ನ ಅವರ ಬಳಿ ಕರೆದೊಯ್ದು ಅವನು ಧರಿಸಿರುವ ಪ್ರೋಸೆಸರ್‌ನ್ನ ಹತ್ತಿರದಿಂದ ತೊರಿಸಿ, ಅದರ ಭಾಗಗಳನ್ನೆಲ್ಲ ಪರಿಚಯಿಸಿ, ಏತಕ್ಕಾಗಿ ಅಥರ್ವ ಅದನ್ನ ಹಾಕಿಕೊಂಡಿದ್ದಾನೆ ಎಂಬುದನ್ನೂ ವಿವರಿಸುತ್ತೇನೆ.

ಸಂಪೂರ್ಣವಾಗಿ ಮಕ್ಕಳಿಗೆ ಅರ್ಥವಾದರೆ, ಖಂಡಿತಾ ಅವರು ಮತ್ತೆ ಮತ್ತೆ ಪ್ರಶ್ನೆ ಕೇಳಲಾರರು ಮತ್ತು ಅಥರ್ವನ ಬಗ್ಗೆ ಅವರೂ ತಿರಸ್ಕಾರ ತೋರಿಸಲಾರರು. ಇದು ನನ್ನ ಅನುಭವ. ನನ್ನ ಈ ಹೊಸ ಅಭ್ಯಾಸದಿಂದ ಅಥರ್ವನಲ್ಲಿ, ತನ್ನ ಪ್ರೋಸೆಸರ್‌ಬಗ್ಗೆ ಪ್ರೀತಿ ಬೆಳೆದಿದ್ದನ್ನು ಕಂಡೆ.  ಅದನ್ನ ಅವನು ಜೋಪಾನ ಮಾಡಿಕೊಳ್ಳುವ ಪರಿ ಕಂಡು ಬೆರಗಾದೆ. 

ಇದೆಲ್ಲವೂ ಹೌದು, ಆದರೆ ಒಂದು ನಿಮಿಷ ಕೂಡ ಅಥರ್ವನ ಬಿಟ್ಟಿರದೇ, ಅವನ ಜತೆಯಲ್ಲಿಯೇ ಇದ್ದು, ಅವನು ಸ್ವತಂತ್ರವಾಗಿ ಮಾತನಾಡುವ ಅವಕಾಶಗಳನ್ನೇ ಕೊಡದೇ, ಪ್ರತಿಯೊಂದನ್ನೂ ನಾನೇ ಹೇಳಿಕೊಟ್ಟು ಎಲ್ಲವನ್ನೂ ಹೇಳಿಸುವುದು ನನಗೆ ಅಭ್ಯಾಸವಾಗಿಹೋಗಿತ್ತು. ಆದರೆ, ಮಗನಿಗೆ ಭಾಷೆ ಕಲಿಸುವ ತವಕದಿಂದಾಗಿ ನನ್ನಿಂದ ಇಲ್ಲೊಂದು ತಪ್ಪಾಗುತ್ತಿದೆ ಎಂಬುದನ್ನ ಗಮನಿಸಿರಲೇ ಇಲ್ಲ ನಾನು. ಯಾರು ಏನೇ ಪ್ರಶ್ನೆ ಕೇಳಿದರೂ, ಅವರಿಗೆ ಉತ್ತರಿಸುವ ಮುಂಚೆ ನನ್ನ ಮುಖ ನೋಡಿ, ನಾನು ಹೇಳಿಕೊಟ್ಟದ್ದನ್ನ ಹೇಳಲು ಕಾಯುತ್ತಿರುತ್ತಿದ್ದ. ಪ್ರತಿಕ್ರಿಯೆಗಳಿಗೆ ನನ್ನನ್ನೇ ಅವಲಂಬಿಸಲು ಆರಂಭಿಸಿಬಿಟ್ಟಿದ್ದ ಅಥರ್ವ.

ಸ್ವತಂತ್ರವಾಗಿ ತನಗೆ ತೋಚುತ್ತಿದ್ದುದನ್ನು ಬಂದಹಾಗೆ ಧೈರ್ಯವಾಗಿ ಮಾತನಾಡುತ್ತಿದ್ದ ಈ ಪೋರನಿಗೆ ಬರಬರುತ್ತಾ ಏನಾಯ್ತು, ಏಕೆ ಹೀಗಾಯ್ತು ಅರ್ಥವಾಗಿರಲಿಲ್ಲ ನನಗೆ. ಇದು ಹೀಗೆಯೇ ಅಭ್ಯಾಸವಾದರೆ ಮುಂದೆ ನಾರ್ಮಲ್‌ ಸ್ಕೂಲ್‌ನಲ್ಲಿ ಕಷ್ಟ ಎಂಬ ಪರಿವೆ ಜಾಗೃತವಾಯ್ತು ನನ್ನಲ್ಲಿ. ಈ ಬಗ್ಗೆ ಪಿ.ಎ.ಡಿ.ಸಿ ಮುಖ್ಯ ಶಿಕ್ಷಕಿ ಪರಿಮಳಾ ಆಂಟಿಯವರ ಸಲಹೆ ಕೇಳಿದ್ದೆ. ‘ಅವನಿಗೆ ಮಾತನಾಡಲು ಅವಕಾಶ ಕೊಡಿ ಅಥರ್ವ ಅಮ್ಮಾ, ಪ್ರತಿಯೊಂದಕ್ಕೂ ನೀವು ಮಾತು ಹೇಳಿಕೊಡಬೇಡಿ. ಸ್ವತಂತ್ರವಾಗಿ ಮಗು ಯೋಚಿಸಿ ಅದಕ್ಕೆ ತೋಚಿದ್ದನ್ನು ಮಾತನಾಡಲು ಅನುವು ಮಾಡಿಕೊಟ್ಟರಷ್ಟೇ, ಮಗುವಿನ ಬಾಯಲ್ಲಿ ನೈಸರ್ಗಿಕವಾಗಿ ಸಂಭಾಷಣೆ ಬರಲು ಸಾಧ್ಯ’. ಎಂದರು ಅವರು. ನನ್ನಿಂದ ಆಗುತ್ತಿರುವ ತಪ್ಪು ಅರ್ಥವಾಯ್ತು. ಸರಿಪಡಿಸಿಕೊಂಡೆ.

ಅಥರ್ವನಿಗೆ ಎಲ್ಲವನ್ನೂ ಹೇಳಿಕೊಟ್ಟು ಹೇಳಿಸುವದನ್ನ ಬಿಟ್ಟು, ಅವನು ಮಾತನಾಡಿ ಮುಗಿಸಿದ ಮೇಲೆ ಅವನು ಏನೇನು ಮಾತನಾಡಿದ್ದಾನೆ ಎಂಬುದನ್ನ ಜನರಿಗೆ ಹೇಳತೊಡಗಿದ್ದೆ. ಏನು ಮಾಡಲಿ? ಅಥರ್ವ ಮಾತನಾಡಿದ್ದು ಯಾರಿಗೂ ಅರ್ಥವೇ ಆಗುತ್ತಿರಲಿಲ್ಲವಲ್ಲ, ಅವನ ಉಚ್ಛಾರಗಳ ಅರ್ಥಗಳನ್ನು ಪಿ.ಎ.ಡಿ.ಸಿ ಶಾಲೆಯ ಹೊರತಾಗಿರುವ ಎಲ್ಲರಿಗೂ ಹೇಳುವುದು ಅನಿವಾರ್ಯವಾಗಿತ್ತು. ಆದರೆ, ಇಲ್ಲೂ ಒಂದು ಹೊಸ ಸಮಸ್ಯೆ ಎದುರಾಗಬಹುದೆಂದು ಎಣಿಸಿರಲಿಲ್ಲ ನಾನು. ತನ್ನ ಮಾತು ಯಾರಿಗೂ ಅರ್ಥವಾಗೋದಿಲ್ಲ, ತನ್ನ ಮಾತುಗಳನ್ನ ಇತರರಿಗೆ ಅರ್ಥ ಮಾಡಿಸುವುದು ಅಮ್ಮನ ಜವಾಬ್ಧಾರಿ ಎಂದುಕೊಂಡುಬಿಟ್ಟ ನಮ್ಮ ಪೋರ.

ಒಮ್ಮೆ ಅಂಗಡಿಗೆ ಹೋದಾಗ, ಅಥರ್ವ ತನಗೇನೇನು ಬೇಕು ಅನ್ನೋದನ್ನ ಅಂಗಡಿಯಾಕೆಯ ಬಳಿ ಹೇಳಿ, ಅಮ್ಮಾ ಏತಾಎ ಇಇ (ಅಮ್ಮ ಹೇಳ್ತಾರೆ ಇರಿ) ಅಂದು ನನ್ನ ಮುಖ ನೋಡಿ, ‘ಅಮ್ಮಾ ಹೇಇ’ (ಅಮ್ಮಾ ಹೇಳಿ) ಅಂದ. ಅಥರ್ವನ ಈ ವರ್ತನೆ ಹೊಸತಾಗಿತ್ತು. ಆಶ್ಚರ್ಯವಾಗಿತ್ತು ನನಗೆ. ನಾನು ಅವನೇನು ಮಾತನಾಡಿದ ಎಂಬುದನ್ನ ಅಂಗಡಿಯವರಿಗೆ ಹೇಳಿ, ಅಥರ್ವನ ಕಡೆ ತಿರುಗಿ ಕೇಳಿದೆ. ‘ಅಮ್ಮಾ ಹೇಳ್ತಾರೆ ಇರಿ ಅಂದ್ಯಾಲ್ಲಾ.. ಯಾಕೆ  ಪುಟ್ಟಾ..?’ ಎಂದು. ‘ಶುಮ್ಮೆ’ (ಸುಮ್ಮನೆ) ಎಂದು ನಕ್ಕ. ಅದೂ ಕೂಡ ಹೊಸತಾಗಿತ್ತು.

‘ಸುಮ್ಮನೆ’ ಎಂಬುದನ್ನೂ ಮಾತಿನಲ್ಲಿ ಉಪಯೋಗಿಸುತ್ತಿದ್ದಾನೆ ಎಂಬುದೂ ಕೂಡ ಸಂತಸದ ಸಂಗತಿಯಾಗಿತ್ತು. ಆದರೆ, ಅಂದಿನಿಂದ ಯಾರ ಬಳಿ ತಾನು ಏನು ಮಾತನಾಡಿದರೂ, ತನ್ನ ಮಾತು ಮುಗಿದ ಮೇಲೆ ‘ಅಮ್ಮಾ ಹೇಳ್ತಾರೆ ಇರಿ’ ಎಂದು ಹೇಳಿ, ನನ್ನಿಂದ ಹೇಳಿಸುವುದನ್ನ ಶುರು ಮಾಡಿದ್ದ. ತನ್ನ ಮಾತು ಯಾರಿಗೂ ಅರ್ಥವಾಗುವುದಿಲ್ಲ, ಎಂದು ಯೋಚಿಸಿಯೇ ಹೀಗೆ ಹೇಳುತ್ತಿದ್ದಾನೆ ಎಂಬುದು ಖಾತರಿಯಾಗಿತ್ತು ನನಗೆ. ಅಂದಿನಿಂದ ಅವನಿಗೆ ಹೆಚ್ಚು ಮಾತನಾಡುವ ಅವಕಾಶ ಕೊಡತೊಡಗಿದೆ. ನೀನೇ ಇನ್ನೊಮ್ಮೆ ಹೇಳು, ನಿಧಾನವಾಗಿ ಹೇಳು, ಸ್ಪಷ್ಟವಾಗಿ ಹೇಳು ಅವರಿಗೆ ಗೊತ್ತಾಗುತ್ತೆ ಎಂದು ಅವನಬಳಿಯೇ ಮತ್ತೆ ಮತ್ತೆ ಹೇಳಿಸುತ್ತಿದ್ದೆ. ಬುದ್ಧ್ಯಾಪೂರ್ವಕವಾಗಿ ನಾನು ನನ್ನ ಭಾಷಾಂತರ ಕೆಲಸ ನಿಲ್ಲಿಸಿಬಿಟ್ಟೆ. ಇಂಥ ಅದೆಷ್ಟೋ ಸೂಕ್ಷ್ಮ ಸಂಗತಿಗಳೆಲ್ಲ ಕಲಿಕೆಯ ಈ ಅವಧಿಯಲ್ಲಿ ಕಾಣಿಸಿಕೊಂಡು, ಪರಿಹಾರ ಸಿಕ್ಕಾಗ ಸುಧಾರಿಸಿಕೊಂಡವು. 

ಪಿ.ಎ.ಡಿ.ಸಿ ಶಾಲೆಯ ಸ್ಕೂಲ್‌ಡೇ  ಕೂಡ ನಡೆದು, ಅಥರ್ವ ಒಂದು ಗುಂಪು ನೃತ್ಯದಲ್ಲಿ ಹೆಜ್ಜೆಯನ್ನೂ ಹಾಕಿದ್ದ.  ಅಥರ್ವನದೇ ವಯಸ್ಸಿನ ಪುಟಾಣಿ ಮಕ್ಕಳ ಆ ನೃತ್ಯ ನೋಡುಗರ ಮೆಚ್ಚುಗೆ ಪಡೆದುಕೊಂಡಿತ್ತು. ‘ಬಾಬಾ ಚಂದಮಾಮ ಮುತ್ತು ಕೊಡುವೆ ಬಾ ಬಾ’ ಹಾಡು ಕೇಳಿಸಿಕೊಂಡು, ಹಾಡಿಗೆ ತಕ್ಕಂತೆ ಹೆಜ್ಜೆಹಾಕಿ ಸೈ ಎನಿಸಿಕೊಂಡಿದ್ದರು ನಮ್ಮ ಚಿಣ್ಣರು.

ಪಿ.ಎ.ಡಿ.ಸಿ ಶಾಲೆಯಲ್ಲಿ ನಡೆಯುವ ’ಸ್ಕೂಲ್‌ಡೇ’ಗೆ ಅದರದ್ದೇ ಆದ ಖ್ಯಾತಿ ಇದೆ. ನಮ್ಮ ಈ ಮಾತನಾಡುವ ಕಿವುಡು ಮಕ್ಕಳು ನಡೆಸಿಕೊಡುವ ಕಾರ್ಯಕ್ರಮ ನೋಡಲು ಸುತ್ತಮುತ್ತಲಿನ ಬಡವಾಣೆಗಳಿಂದಲೂ ಜನ ಬರುತ್ತಾರೆ. ಸಭಾಭವನದಲ್ಲಿ ಕಿಕ್ಕಿರಿದು ಪ್ರೇಕ್ಷಕರು ಸೇರುತ್ತಾರೆ. ಆ ಎಲ್ಲ ಜನರೆದುರು ನಮ್ಮ ಪುಟಾಣಿಗಳು ಕುಣಿದು, ಹಾಡಿ, ನಾಟಕಗಳನ್ನೂ ಮಾಡಿ ರಂಜಿಸಿ, ತಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನ ಸಾಬೀತುಮಾಡುತ್ತಾರೆ.

2019ರ ಏಪ್ರಿಲ್‌ಮೊದಲ ವಾರದಲ್ಲಿ ಬೇಸಿಗೆ ರಜಾ ಆರಂಭವಾಗುವ ಕಾರಣ, ಸ್ಕೂಲ್‌ಡೇ ಮುಗಿದಿದ್ದೇ ಪರೀಕ್ಷೆಗಳ ಗದ್ದಲ ಆರಂಭವಾಗಿತ್ತು. ಪರೀಕ್ಷಾ ಕೊಠಡಿಯಲ್ಲಿ ಸಾಲಾಗಿ ಕುಳಿತು ಪರೀಕ್ಷೆ ಬರೆಯುತ್ತಿರುವ ಮಕ್ಕಳನ್ನ ನೋಡೋದೇ ಚೆಂದ. 3 ವರ್ಷದ ನನ್ನ ಮಗ ಅಥರ್ವ ರೈಟಿಂಗ್‌ಪ್ಯಾಡ್‌ಕೈಯ್ಯಲ್ಲಿ ಹಿಡಿದು ನಗುನಗುತ್ತಾ ನನಗೆ ಬಾಯ್‌ಬಾಯ್‌ಮಾಡಿ, ಪರೀಕ್ಷಾ ಕೊಠಡಿಯೊಳಗೆ ಹೋಗೋದನ್ನ ನೋಡಿ ನನ್ನ ಮನಸ್ಸು ತನ್ನ ಖುಷಿಯ ಗರಿ ಬಿಚ್ಚುತ್ತಿತ್ತು. ಪರೀಕ್ಷೆ ಮುಗಿದಿದ್ದೇ, ಒಂದು ತಿಂಗಳ ಬೇಸಿಗೆ ರಜಾ ಆರಂಭವಾಯ್ತು.  

ನನ್ನ ಈ ಮಾತನಾಡುವ ಮಗನನ್ನ ನಮ್ಮೂರಿಗೆ ಕರೆದೊಯ್ದು ಎಲ್ಲರಿಗೂ ತೋರಿಸಲು ತವಕಿಸುತ್ತಿದ್ದುದಕ್ಕೋ ಏನೋ ರಜಾ ಶುರುವಾದ ಮೇಲೆ ಒಂದು ದಿನ ಕೂಡ ತಡ ಮಾಡಲು ನಾನು ಸಿದ್ಧಳಿರಲಿಲ್ಲ.  ಮೈಸೂರಿನಿಂದ ಶಿರಸಿಯ ಬಸ್ಸು ಹತ್ತಿಯೇ ಬಿಟ್ಟೆ. ಅಥರ್ವನ ಕಿವಿ ಸಮಸ್ಯೆ ನಮಗೆ ತಿಳಿದಾಗಿನಿಂದ ನಾನು ಮತ್ತು ನನ್ನ ಮಗ ಊರಿಗೆ ಹೋಗಿರಲೇ ಇಲ್ಲ. ನಾನು ತವರಿಗೆ ಹೋಗದೆ ಎರಡು ವರ್ಷ ಸಮೀಪಿಸುತ್ತಿತ್ತು. ತವರೂರ ಜನರ ಕುತೂಹಲ, ಅಕ್ಕರೆ, ಕಾಳಜಿ, ಸಹಾನುಭೂತಿಯಂಥ ವಿವಿಧ ಸಂವೇದನೆಗಳನ್ನ ಅತೀ ಹತ್ತಿರದಿಂದ ಕಂಡೆ. ಮಾತನಾಡುತ್ತಿದ್ದ ಅಥರ್ವನನ್ನ ನೋಡಿ ಅವರೆಲ್ಲ ಖುಷಿಪಟ್ಟಿದ್ದನ್ನು ಕಂಡು ನನ್ನ ಕಂಗಳು ತುಂಬಿತುಂಬಿ ಬಂದಿದ್ದವು. 

2019ರ ಏಪ್ರಿಲ್‌25ಕ್ಕೆ ಅಥರ್ವನಿಗೆ ಇಂಪ್ಲಾಂಟ್ ಆಗಿ ಒಂದು ವರ್ಷವಾಗಿತ್ತು. ಅಥರ್ವ ಶಬ್ಧ ಜಗತ್ತಿಗೆ ಪ್ರವೇಶ ಮಾಡಿ ವರ್ಷ ತುಂಬಿತ್ತು. ನನ್ನ ತವರಲ್ಲೇ ಕೇಕ್‌ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದೆವು. ಊರಿನಲ್ಲಿದ್ದಾಗ ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಿದ್ದ ಅಥರ್ವ ಆ ಭಾಗದ ಗ್ರಾಮ್ಯ ಕನ್ನಡವನ್ನೂ ಅರ್ಥಮಾಡಿಕೊಂಡಿದ್ದಲ್ಲದೇ, ತಾನೂ ಅಲ್ಲಿಯ ಕೆಲವು ಪದಗಳನ್ನು ಉಪಯೋಗಿಸಿ ಮಾತನಾಡತೊಡಗಿದ್ದ. 

ಊರಿನಲ್ಲಿಯೇ ಅಷ್ಟೂ ರಜಾವನ್ನೂ ಕಳೆಯದೆ, ಕೇವಲ ಹತ್ತು ದಿನಕ್ಕೇ ನಾವು ಬೆಂಗಳೂರಿಗೆ ವಾಪಾಸ್ ಬಂದೆವು. ಶಿರಸಿಯಿಂದ ಬೆಂಗಳೂರಿಗೆ ಬರುವಾಗಲೇ ನಿಶ್ಚಯಿಸಿಕೊಂಡಿದ್ದೆ.  ಯಾವುದಾದರೂ ಬೇಸಿಗೆ ಶಿಬಿರಕ್ಕೆ ಅಥರ್ವನನ್ನ ಸೇರಿಸಬೇಕು ಎಂದು. ನಾರ್ಮಲ್‌ ಶಾಲೆಯಲ್ಲಿ, ನಾರ್ಮಲ್‌ ಮಕ್ಕಳ ಜತೆ, ಅಥರ್ವ ಕಾಲ ಕಳೆಯಬೇಕು. ಅವನು ಅಲ್ಲಿ ಅಮ್ಮನನ್ನು ಬಿಟ್ಟು ಇದ್ದು, ಸ್ವಂತವಾಗಿ ತಾನೇ ಮಾತನಾಡಿ ನಿಭಾಯಿಸಲಿ ಎಂಬುದೇ ನನ್ನ ಉದ್ದೇಶವಾಗಿತ್ತು. ಅದಾಗಲೇ ವಿನಯ್‌ಮನೆಯ ಹತ್ತಿರದ ಎಲ್ಲ ಸಮ್ಮರ್‌ ಕ್ಯಾಂಪ್‌ಗಳನ್ನೂ ವಿಚಾರಿಸಿಟ್ಟಿದ್ದ. ‘ಲಿಟಲ್‌ ಎಲ್ಲಿ’ ಎಂಬ ಕಿಂಡರ್‌ ಗಾರ್ಡನ್‌ ಪ್ರೀಸ್ಕೂಲ್‌ನಲ್ಲಿ ನಡೆಯುತ್ತಿದ್ದ ಸಮ್ಮರ್‌ ಕ್ಯಾಂಪ್‌ಗೆ ಸೇರಿಸೋಣ ಎಂದು ವಿನಯ್‌ ನಿಶ್ಚಯಿಸಿದ್ದ. ಅಥರ್ವನನ್ನ ಕರೆದುಕೊಂಡು ಅಲ್ಲಿಗೆ ಹೋದೆವು.

ಸ್ಕೂಲ್‌ನ ಗೇಟ್‌ ತೆಗೆದು ಒಳಹೋಗುತ್ತಿದ್ದಂತೆ, ನೋಟೀಸ್‌ ಬೋರ್ಡ್‌‌ನಲ್ಲಿ ಅಂಟಿಸಲಾದ ಸಮ್ಮರ್‌ ಕ್ಯಾಂಪ್‌ ಕುರಿತಾದ ಮಾಹಿತಿ ನೋಡಿದೆ. 20 ದಿನಗಳ ಆ ಸಮ್ಮರ್‌ಕ್ಯಾಂಪ್‌ನ ಮೊದಲ 10 ದಿನಗಳು ಅದಾಗಲೇ ಅಲ್ಲಿ ಮುಗಿದೇ ಹೋಗಿದ್ದವು. ಛೇ! ಎನ್ನುತ್ತಲೇ ಮುಂದಡಿ ಇಟ್ಟೆವು. ಅಲ್ಲಿ ನಮ್ಮನ್ನು ಎದುರಾಗಿದ್ದೇ ಪೂರ್ಣಿಮಾ ಮ್ಯಾಮ್‌. ರಾಜರಾಜೇಶ್ವರಿ ನಗರದ `ಲಿಟಲ್‌ ಎಲ್ಲಿ’ ಬ್ರಾಂಚ್‌ನ ಮುಖ್ಯಸ್ಥೆ. ಅವರಿಗೆ ಅಥರ್ವನನ್ನ ಪರಿಚಯಿಸಿ, ಅವನ ಕುರಿತು ಎಲ್ಲವನ್ನೂ ಹೇಳಿ, ನಿಮ್ಮ ಸಮ್ಮರ್‌ ಕ್ಯಾಂಪ್‌ಗೆ ಅಥರ್ವನನ್ನೂ ಸೇರಿಸಿಕೊಳ್ತೀರಾ ಎಂಬ ಕೋರಿಕೆ ಇಟ್ಟೆವು.  ಸಮ್ಮರ್‌ ಕ್ಯಾಂಪ್‌ಅರ್ಧ ಮುಗಿದೇ ಹೋಗಿದೆಯಲ್ಲ, ಎಂದು ಅವರು ಹೇಳುತ್ತಿದ್ದಂತೆ, ಪರವಾಗಿಲ್ಲ ಮ್ಯಾಮ್‌ ಅರ್ಧ ಮಾತ್ರ ನಾವು ಪೇ ಮಾಡ್ತೀವಿ.

ಅಥರ್ವನನ್ನ ಕ್ಯಾಂಪ್‌ಗೆ ಸೇರಿಸಿಕೊಳ್ಳಿ ಎಂಬ ಕೋರಿಕೆ ಇಟ್ಟೆ. ತಕ್ಷಣ ಅವರು ನನಗೇನೂ ಹೇಳದೇ, ಅಥರ್ವನನ್ನ ಕರೆದು ತಮ್ಮ ಪಕ್ಕ ನಿಲ್ಲಿಸಿಕೊಂಡು ಕನ್ನಡದಲ್ಲೇ ಮಾತನಾಡಿಸತೊಡಗಿದರು. ಅದೇ ಮೊದಲ ಬಾರಿ ಅವರು ಅಥರ್ವನನ್ನ ನೋಡುತ್ತಿದ್ದರೂ, ಅವನ ಮಾತುಗಳು ಅವರಿಗೆ ಅರ್ಥವಾಗತೊಡಗಿದ್ದವು. ಎರಡು ನಿಮಿಷ ಅಥರ್ವನೊಂದಿಗೆ ನನ್ನ ಸಹಾಯವನ್ನೇ ಪಡೆಯದೇ ಮಾತನಾಡಿದರು ಪೂರ್ಣಿಮಾ ಮ್ಯಾಮ್‌.  ಎದೆಯಾಳದಿಂದ ಸಂತಸ ಬುಗ್ಗೆ ಏಳುತ್ತಿದ್ದ ಅನುಭವ ನನಗೆ, ಖುಷಿಗೆ ಕಣ್ಣುಗಳು ತೇವಗೊಂಡವು.  

ಅವರಿಗೇನನ್ನಿಸಿತೋ ಏನೋ.  ಅಥರ್ವನ ಹೆಗಲು ತಬ್ಬಿಕೊಂಡ ಅವರು, ‘ನೀವು ಪೇ  ಮಾಡೋದೇ ಬೇಡ. ನಿಮ್ಮ ಅಥರ್ವನನ್ನ ನೋಡ್ತಾ ಇದ್ರೆ ತುಂಬಾ ಖುಷಿಯಾಗುತ್ತೆ. ಇನ್ನು ಹತ್ತು ದಿನಗಳು ಮಾತ್ರ ಉಳಿದಿರೋ ಈ ಸಮ್ಮರ್‌ಕ್ಯಾಂಪ್‌ಗೆ ಅಥರ್ವ ಹಾಗೆಯೇ ಬರಲಿ ಪರವಾಗಿಲ್ಲ. ದಿನಾ ಬೆಳಗ್ಗೆ 10 ಗಂಟೆಗೆ ಕಳಿಸಿಕೊಡಿ 12ಕ್ಕೆ ಕರೆದುಕೊಂಡು ಹೋಗಿ’ ಎಂದುಬಿಟ್ಟರು !  

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. ಸುಮತಿ

  ಪ್ರೀತಿಯ ಅಮೃತ, ನಿಮ್ಮ ಲೇಖನ ಮಾಲಿಕೆ ತಪ್ಪಿಸಿಕೊಳ್ಳದೆ ಓದುತ್ತೇನೆ.
  ಅಥರ್ವ ನನ್ನ ಮಗನೇ ಆಗಿಬಿಟ್ಟಿದ್ದಾನೆ.
  ಅಷ್ಟು ಆಪ್ತವಾಗಿ ಬರೆಯುತ್ತೀರಿ.
  ಲೇಖನದಲ್ಲಿನ ನಿಮ್ಮ narrative ತುಂಬಾ ಸೊಗಸಾಗಿದೆ. ಧನ್ಯವಾದಗಳು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: