
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.
ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.
ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.
‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.
24
3 ತಾಸುಗಳ ಕಾಲ ಅಥರ್ವನಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿ ಆಪರೇಶನ್ ಥಿಯೇಟರ್‌ನಿಂದ ಹೊರಬಂದ ಡಾಕ್ಟರ್ ದತ್ತಾತ್ರಿ ಸರ್‌ನಮ್ಮಿಬ್ಬರನ್ನು ಒಟ್ಟಿಗೆ ಕರೆದರು. ‘ನಿಮ್ಮ ಮಗುವಿನ ಕಾಕ್ಲಿಯರ್‌ನರ ತುಂಬಾ ಆರೋಗ್ಯಕರವಾಗಿದೆ. ನರದೊಳಗೆ ಎಲೆಕ್ಟ್ರೋಡ್ಸ್ ಹಾಕುತ್ತಿದ್ದಂತೆ, ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಅವನು ಮುಂದೆ ಚೆನ್ನಾಗಿ ಕೇಳಿಸಿಕೊಳ್ತಾನೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆಲ್‌ದ ಬೆಸ್ಟ್’ ಹೀಗೆ ನಗುಮುಖದಲ್ಲಿ ವೈದ್ಯರು ನಮಗೆ ಕೊಟ್ಟ ಧೈರ್ಯವಿದೆಯಲ್ಲ. ನೂರಾನೆಯ ಬಲ ಕೊಟ್ಟಹಾಗಿತ್ತು ನಮ್ಮ ಪಾಲಿಗೆ.
ಆವತ್ತು ಏಪ್ರಿಲ್ 25, 2018. ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ನಡೆದು ಅದಾಗಲೇ 20 ದಿನಗಳು ಕಳೆದಿದ್ದವು. ನಮ್ಮಲ್ಲಿತ್ತು ಸಂಭ್ರಮ, ಕಾತುರ, ಚಡಪಡಿಕೆ. ಹೊಟ್ಟೆಯೊಳಗೆಲ್ಲ ಚಿಟ್ಟೆ ಹಾರುತ್ತಿರುವ ಅನುಭವ. ಅಂತೂ ಅಥರ್ವನ ಕಿವಿಗೆ ಪ್ರೋಸೆಸರ್ (ಕಿವಿಯ ಹೊರಭಾಗದಲ್ಲಿ ಹಾಕುವ ಶ್ರವಣ ಸಾಧನ) ಹಾಕಿ, ಇಂಪ್ಲಾಂಟ್‌ನ್ನ ಆಕ್ಟಿವೇಟ್ ಮಾಡುವ ಸ್ವರ್ಣ ಸಮಯ ಬಂದೇಬಿಟ್ಟಿತ್ತು. ಎಷ್ಟೋ ದಿನಗಳಿಂದ ಬಯಸಿದ್ದ ಸಂದರ್ಭ ಆವತ್ತು ನಮ್ಮ ಪಾಲಿಗೆ ಒದಗಿಬಂದಿತ್ತು. ನಾವಿಬ್ಬರೇ ಅಲ್ಲ ಇಡೀ ಜಗತ್ತು ಕೂಡ ನಮ್ಮೊಂದಿಗೆ ಖುಷಿಯಾಗಿದೆ ಎಂಬ ಭಾವವದು. ಏಕೆಂದರೆ ನಮ್ಮ ಮಗು ಆವತ್ತು ಪ್ರಪ್ರಥಮ ಬಾರಿಗೆ ಕೇಳಿಸಿಕೊಳ್ಳಲಿದ್ದ..!
ಇದೇ ಖುಷಿಯಲ್ಲಿಯೇ ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದೆವು. ಏಪ್ರಿಲ್‌ತಿಂಗಳಲ್ಲವೇ..? ನಮ್ಮ ಪಿ.ಎ.ಡಿ.ಸಿ ಸ್ಕೂಲ್‌ಗೆ ಬೇಸಿಗೆ ರಜಾ ಇತ್ತು. ಆದರೆ ಸ್ವಿಚ್ ಆನ್ ಮಾಡಿದ ಮೇಲೆ ಪ್ರತಿ ದಿನ ವಿಶೇಷ ಥೆರಪಿ ತರಗತಿ ನಡೆಯಲಿರುವ ಕಾರಣ, ನಾನು ಮೈಸೂರಿನಲ್ಲಿಯೇ ಇರುವುದು ಅನಿವಾರ್ಯ. ಹೀಗಾಗಿ ಅಲ್ಲೇ ಉಳಿಯುವ ಎಲ್ಲ ತಯಾರಿಯಲ್ಲಿಯೇ ಹೊರಟಿದ್ದೆ.
ಸಮಯಕ್ಕೆ ಸರಿಯಾಗಿ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ತಲುಪಿದೆವು. ಆಡಿಯಾಲಾಜಿಸ್ಟ್ ಶೈಲಜಾ ಶುಕ್ಲಾ ಸ್ವಿಚ್ ಆನ್ ಮಾಡಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಸರ್ಜರಿ ಮಾಡಿದ್ದ ವೈದ್ಯರಾದ ಡಾಕ್ಟರ್ ದತ್ತಾತ್ರಿ ಸರ್ ಕೂಡ ಆಗ ನಮ್ಮೊಂದಿಗಿದ್ದರು. ಕಂಪ್ಯೂಟರ್ ಮೂಲಕ ಅಥರ್ವನ ಶ್ರವಣೇಂದ್ರಿಯದೊಳಗೆ ತೂರಿಸಲಾದ ಎಲೆಕ್ಟ್ರೋಡ್‌ಗಳನ್ನು ಪರೀಕ್ಷಿಸಿ ನೋಡಿದ ಅವರಿಬ್ಬರೂ, ಎಲೆಕ್ಟ್ರೋಡ್ ರೆಸ್ಪಾನ್ಸ್ ತುಂಬಾ ಚೆನ್ನಾಗಿದೆ ಎಂಬ ಅಭಿಪ್ರಾಯಪಟ್ಟರು.

ನನ್ನ ಮಡಿಲಮೇಲೆಯೇ ಕುಳಿತಿದ್ದ ಅಥರ್ವ ಕುತೂಹಲದಿಂದ ಎಲ್ಲವನ್ನೂ ನೋಡುತ್ತಲೇ ಇದ್ದ. ನನ್ನ ಹೃದಯಬಡಿತವೂ ನನಗೇ ಕೇಳಿಸುವಷ್ಟು ನಾನು ಭಾವೋದ್ರೇಕಗೊಂಡಿದ್ದೆ.
ಅವನ ತಲೆಗೆ ಅಂಟಿಕೊಂಡಿದ್ದ ಪ್ರೊಸೆಸರ್ ಆಕ್ಟಿವೇಟ್ ಆಗುತ್ತಿದ್ದಂತೆ, ಅಥರ್ವ ಸಣ್ಣಗೆ ನಡುಗತೊಡಗಿದ. ಅವನ ಹೃದಯ ಪುಟಿಯತೊಡಗಿತ್ತು. ಮೈ ಬೆವರತೊಡಗಿತ್ತು. ಹೆದರಿ ಅಳುತ್ತಿದ್ದ..! ಏನಾಗುತ್ತಿದೆ ಎಂಬುದು ನನಗೂ ಅರ್ಥವಾಗಿಲ್ಲ. ಸ್ವಿಚ್ ಆನ್ ಆಗುತ್ತಿದ್ದಂತೆ, ಶಾಕ್ ತಗುಲಿದಂತೆ ಬೆಚ್ಚಿದ್ದ. ‘ಏಕೆ.. ಹೀಗಾಗುತ್ತಿದೆ..? ಅಥರ್ವನಿಗೆ ಏನಾಯ್ತು…?’ ಗಾಬರಿ ಬೆರೆತ ದನಿಯಲ್ಲೇ ವೈದ್ಯರನ್ನು ಕೇಳಿದೆ ನಾನು ‘ಮೊಟ್ಟಮೊದಲ ಬಾರಿಗೆ ಅವನು ಶಬ್ಧ ಕೇಳಿಸಿಕೊಂಡಿದ್ದಾನಲ್ವಾ..? ಅದಕ್ಕಾಗಿ ಅವನಿಗೆ ಭಯವಾಗಿದೆ ಅಷ್ಟೆ. ಅಭ್ಯಾಸವಾಗ್ತಾ ಹೋದಂತೆ ಈ ಭಯ ದೂರಾಗುತ್ತೆ. ನೀವು ಹೆದರಬೇಡಿ’ ಧೈರ್ಯ ನೀಡಿದರು ವೈದ್ಯರು. ಹೆದರುತ್ತಿದ್ದ ಅಥರ್ವನನ್ನು ತಬ್ಬಿ ಹಿಡಿದು, ನಿಧಾನವಾಗಿ ಮಾತನಾಡಿಸಿ ಅವನನ್ನು ತಹಬಂದಿಗೆ ತಂದೆವು.
‘ಶಬ್ಧ ಕೇಳಿದರೆ, ಹೀಗೆ ಶಾಕ್ ತಗುಲಿದಂತಾಗುತ್ತಾ ಮ್ಯಾಮ್.?’ ಮತ್ತೊಮ್ಮೆ ಶೈಲಜಾ ಒಬ್ಬರಿಗೇ ಕೇಳಿಸಿವಂತೆ ಕೇಳಿದೆ. ‘ಹೌದು. ಅಥರ್ವ ಅಮ್ಮಾ, ನೀವೇ ಯೋಚಿಸಿ. ನಿಶ್ಯಬ್ಧವಾಗಿರುವ ಒಂದು ವಾತಾವರಣದಲ್ಲಿ ಒಮ್ಮೆಲೇ ಜೋರಾದ ಶಬ್ಧ ಬಂದುಬಿಟ್ಟರೆ, ನಿಮಗೆ ಭಯವಾಗುವುದಿಲ್ಲವೇ..? ಹೃದಯಬಡಿತ ಹೆಚ್ಚುವುದಿಲ್ಲವೇ..? ಇನ್ನೂ ಶಬ್ಧಗಳನ್ನೇ ಕೇಳಿಸಿಕೊಳ್ಳದ ಮಗು ಅದು, ಅದಕ್ಕೀಗ ಶಬ್ಧ ಪ್ರಪಂಚ ಪರಿಚಯವಾಗುತ್ತಾ ಇದೆ. ಅದಕ್ಕಾಗಿಯೇ ಹೀಗೆ. ಅಷ್ಟೆ. ಮತ್ತೇನಿಲ್ಲ. ಧೈರ್ಯವಾಗಿರಿ.’ ಅವರ ಮಾತು ಕೇಳಿ, ಸಮಾಧಾನವಾಯಿತು ನನಗೆ.
ಅಷ್ಟರಲ್ಲಾಗಲೇ, ವೈದ್ಯರು ವಿನಯ್‌ನ್ನ ಕರೆದು ಅಭಿನಂದಿಸುತ್ತಿದ್ದರು. ನಾನೂ ಹೋಗಿ ಅವರನ್ನ ಸೇರಿಕೊಂಡೆ. ‘ಕಂಗ್ರಾಜುಲೇಶನ್ಸ್ ಅಮೃತಾ, ವಿನಯ್. ನಿಮ್ಮ ಮಗುವಿಗೆ ಈಗ ಕಿವಿ ಕೇಳಿಸುತ್ತಿದೆ. ಇಲ್ಲಿಗೆ ವೈದ್ಯರ ಕೆಲಸ ಮುಗಿಯಿತು. ಇನ್ನೇನಿದ್ದರೂ ಆಡಿಯಾಲಾಜಿಸ್ಟ್, ಹಾಗೂ ನಿಮ್ಮ ಕೆಲಸ. ಆಡಿಯಾಲಾಜಿಸ್ಟ್ ಹೇಳಿದಂತೆ, ಮಗುವಿಗೆ ಥೆರಪಿ ಕೊಡುತ್ತಾ ಹೋಗಿ. ರಿಸಲ್ಟ್ ಬಹುಬೇಗ ಸಿಗುತ್ತೆ. ಆದಷ್ಟು ಬೇಗ ನಿಮ್ಮ ಮಗು ಮಾತನಾಡಲಿ.’ ನಮ್ಮಿಬ್ಬರನ್ನೂ ಕರೆದು ಶುಭಹಾರೈಸಿದರು ಡಾ. ದತ್ತಾತ್ರಿ ಸರ್. ಎಲ್ಲರಿಗೂ ಧನ್ಯವಾದ ಹೇಳಿ ಅಲ್ಲಿಂದ ಜನತಾನಗರದ ನಮ್ಮ ಮನೆಗೆ ಹೊರಟೆವು. ಕೊಲಂಬಿಯಾ ಏಷಿಯಾದಿಂದ ಆಟೋ ಹತ್ತಿ, ಜನತಾನಗರದ ಕಡೆ ಹೊರಟಿತ್ತು ನಮ್ಮ ಸವಾರಿ.
‘ಅಥರ್ವ, ಇದು ಆಟೋ. ಆಟೋ ಶಬ್ಧ ಕೇಳಿಸುತ್ತಿದೆಯಾ..? ಆಟೋ ಹೇಗೆ ಶಬ್ಧ ಮಾಡುತ್ತಿದೆ? ಟುರ್‌ರ್‌ರ್‌ರ್ ಟುರ್‌ರ್‌ರ್ ಅಂತ ಶಬ್ಧ ಮಾಡುತ್ತಿದೆ. ನಾನು ಅಮ್ಮ. ಇವರು ಅಪ್ಪ. ನೀನು ಅಥರ್ವ. ‘ಮಾತನಾಡತೊಡಗಿದೆ. ವಿನಯ್ ನನ್ನ ಸಂಭ್ರಮ ನೋಡುತ್ತಾ ಸುಮ್ಮನೆ ಕುಳಿತಿದ್ದ. ಸಂತೋಷಕ್ಕೆ ಅವನ ಬಾಯಿಯಲ್ಲಿ ಮಾತೇ ಬರುತ್ತಿರಲಿಲ್ಲವೋ ಏನೋ. ನಾನಂತೂ ಬಡಬಡಿಸತೊಡಗಿದ್ದೆ. ಅಥರ್ವ ಗಿಟಿಗಿಟಿ ನಗುತ್ತಿದ್ದ.
ಮನಸ್ಸಿನಲ್ಲಿದ್ದ ಸಂತೋಷಕ್ಕೋ ಏನೋ ಇಡೀ ಜಗತ್ತು ಸುಂದರವಾಗಿ ಕಾಣಿಸುತ್ತಿತ್ತು. ನಮ್ಮ ಕಣ್ಣಮುಂದಿದ್ದ ಎಲ್ಲರೂ ನಗುತ್ತಿರುವಂತೆ ಭಾಸವಾಗುತ್ತಿತ್ತು. ನನ್ನ ಮಗುವಿಗೂ ಈಗ ಕಿವಿ ಕೇಳಿಸುತ್ತಿದೆ. ನನ್ನ ಮಗುವೂ ಮುಂದೆ ಎಲ್ಲರಂತೆ ಮಾತನಾಡುತ್ತೆ. ಮನಸ್ಸಿನಲ್ಲಿ ನೂರು ಬಾರಿ ಹೇಳಿಕೊಂಡಿದ್ದೆ. ಈ ಎರಡು ಸಂಗತಿಗಳನ್ನ ನೆನೆಸಿಕೊಂಡಷ್ಟೂ ರೋಮಾಂಚನವಾಗುತ್ತಿತ್ತು. ವಾಟ್ಸಾಪ್, ಫೇಸ್‌ಬುಕ್‌ನಂಥ ಸೋಷಿಯಲ್‌ಮೀಡಿಯಾಗಳಲ್ಲಿ ನನ್ನ ಗೆಳತಿಯರು, ಸಂಬಂಧಿಕರು, ಪರಿಚಯಸ್ತರು ತಮ್ಮ ತಮ್ಮ ಮಕ್ಕಳು ಮಾತನಾಡಿದ, ಹಾಡಿದ ವೀಡೀಯೋಗಳನ್ನೆಲ್ಲ ಶೇರ್‌ಮಾಡಿಕೊಂಡು ಸಂತಸ ಪಡುವಾಗ, ನನ್ನೆದೆ ಇರಿದ ಅನುಭವವಾಗುತ್ತಿತ್ತು. ನನಗೆ ಈ ಭಾಗ್ಯ ಇಲ್ಲವಲ್ಲ, ನನಗೇ ಯಾಕೆ ಇಂಥ ಶಿಕ್ಷೆ ಎಂಬ ಕೊರಗು ಚುಚ್ಚುತ್ತಿತ್ತು. ಇದೇ ಕಾರಣಕ್ಕೆ ಅವೆಲ್ಲದರ ಬಳಕೆಯನ್ನೇ ಬಿಟ್ಟುಬಿಟ್ಟಿದ್ದೆ. ಆದರೆ ಈಗ ಮತ್ತೊಮ್ಮೆ ಅದನ್ನೆಲ್ಲ ಬಳಸುವ ಯೋಚನೆ ತಲೆಯಲ್ಲಿ ಬಂತು. ನನ್ನ ಮಗುವಿಗೂ ಕೇಳಿಸುತ್ತೆ ಎಂದು ಸಾರಿ ಸಾರಿ ಇಡೀ ಜಗತ್ತಿಗೆ ಹೇಳುವ ಆಸೆಯಾಯ್ತು.
ಮನೆಗೆ ಬಂದಿದ್ದೇ, ವಿನಯ್ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡುತ್ತಿದ್ದರೆ, ನಾನು ಅಡುಗೆ ಮನೆಯಿಂದ ಒಂದೊಂದೇ ಪಾತ್ರೆಗಳನ್ನು ತಂದು ಅಥರ್ವನ ಮುಂದೆ ಇಟ್ಟುಕೊಂಡು ಶಬ್ಧ ಮಾಡುತ್ತಾ ಕುಳಿತಿದ್ದೆ. ಅವನ ಹಿಂದೆಯಿಂದ ಚಪ್ಪಾಳೆ ತಟ್ಟುತ್ತಿದ್ದೆ. ಕಿಟಕಿ, ಬಾಗಿಲು, ಗೋಡೆ ಬಡಿಯುತ್ತಿದ್ದೆ. ಹುಚ್ಚಿಯಂತೆ ಮಾತನಾಡುತ್ತಿದ್ದೆ. ಕೆಲವಕ್ಕೆ ಪ್ರತಿಕ್ರಿಯಿಸಿದ್ದ. ಹಲವಕ್ಕೆ ಪ್ರತಿಕ್ರಿಯಿಸಲೇ ಇಲ್ಲ. ಆದರೂ ಬೇಸರವಾಗಿಲ್ಲ ನನಗೆ. ಶೈಲಜಾ ಹೇಳಿದ್ದರಲ್ಲ ‘ಇವತ್ತೇ ಅವನಿಗೆ ನಿಮ್ಮ ಮಾತುಗಳೆಲ್ಲ ಕೇಳಿಸೋದಿಲ್ಲ. ಶಬ್ಧಗಳು ಮಾತ್ರ ಕೇಳಿಸುತ್ತವೆ. ಇನ್ಮೇಲೆ ಅವನಿಗೆ ಒಂದೊಂದೇ ಶಬ್ಧಗಳನ್ನು ಪರಿಚಯ ಮಾಡಿಸುತ್ತಾ ಬರಬೇಕು’ ಎಂದು. ಅವರ ಮಾತು ನೆನಪಿತ್ತು. ಆದರೂ ನನಗೇ ಅರಿವಿಲ್ಲದಂತೆ ನಾನು ನನ್ನ ಕೆಲಸ ಆರಂಭಿಸಿಬಿಟ್ಟಿದ್ದೆ. ಅಂಥ ಎಕ್ಸೈಟ್‌ಮೆಂಟ್‌ನ್ನ ನಾನು ನನ್ನ ಜೀವನದಲ್ಲಿ ಹಿಂದೆಂದೂ ಅನುಭವಿಸಿರಲಿಲ್ಲ..!
ಮರುದಿನ ವಿನಯ್ ಬೆಂಗಳೂರಿಗೆ ಹೊರಡುವಾಗ ಹೇಳಿದೆ. ‘ಇನ್ನು ಹದಿನೈದು ದಿನಕ್ಕೊಮ್ಮೆ ಬಂದರೆ ಸಾಕು. ಏಕೆಂದರೆ ನೀನು ಬಂದು ಹೋದಮೇಲೆ ಎರಡು ದಿನ ನಿನ್ನ ನೆನಪಲ್ಲೇ ಇರ್ತಾನೆ ಅಥರ್ವ. ಕಲಿಸುವುದು ಕಷ್ಟ.’ ‘ಅರ್ಥವಾಯ್ತು. ಆಗಲಿ. ಹಾಗೇ ಮಾಡ್ತೀನಿ’ ಅಂದು ಹೊರಟುಹೋದ.

ಮಗು ಬೆಳಗ್ಗೆ ಇನ್ನೂ ಎದ್ದಿರಲಿಲ್ಲ. ನಿದ್ದೆಯಲ್ಲಿ ಇರುವಾಗಲೇ ಕಿವಿಗೆ ಪ್ರೊಸೆಸರ್ ಹಾಕಿ, ಕರೆದು ಕರೆದು ಎಬ್ಬಿಸಿದೆ. ಪ್ರೊಸೆಸರ್ ಕಿವಿಗೆ ಹಾಕುತ್ತಿದ್ದಂತೆ ಒಮ್ಮೆ ನಡುಗಿದ. ಮೈಯಲ್ಲಾ ಬೆವತುಹೋಯ್ತು. ಅವನಿಗೆ ಶಬ್ಧದಿಂದ ಭಯವಾಗಿದೆ ಎಂಬುದು ತಿಳಿಯಿತು. ನಿಧಾನವಾಗಿ ಮಾತನಾಡುತ್ತಾ ಎತ್ತಿಕೊಂಡು ಹೊರಬಂದೆ. ‘ಅಥರ್ವ ನೋಡು. ಬೆಳಗಾಗಿದೆ. ಸೂರ್ಯ ಬಂದಿದ್ದಾನೆ. ರಾತ್ರಿ ಮುಗಿದುಹೋಯ್ತು. ಬೆಳಗಾಗಿದೆ ಈಗ. ಅವನು ಸೂರ್ಯ. ಸೂರ್ಯನನ್ನು ತೋರಿಸು’ ಅವನ ಕೈಬೆರಳನ್ನು ಸೂರ್ಯನ ಕಡೆ ಹಿಡಿಯುತ್ತಾ ‘ಇವನು ಸೂರ್ಯ’ ಎಂದೆ. ಮುದ್ದು ಮುಖದಲ್ಲಿ ನಕ್ಕ. ಅವನನ್ನ ಬಚ್ಚಲುಮನೆಗೆ ಕರೆದೊಯ್ದು, ಎಲ್ಲವನ್ನೂ ವಿವರಿಸುತ್ತಲೇ ಹಲ್ಲು ಉಜ್ಜಿಸಿದೆ. ಹಾಲು ಕೊಟ್ಟು ವಿವರಿಸಿದೆ. ತಿಂಡಿಕೊಟ್ಟು ವಿವರಿಸಿದೆ. ಸ್ನಾನ ಮಾಡಿಸಿ ವಿವರಿಸಿದೆ. ಬಟ್ಟೆ ಹಾಕುತ್ತಾ ವಿವರಿಸಿದೆ. ಸ್ಕೂಲ್‌ಗೆ ಹೋಗುವಾಗ ರಸ್ತೆಯಲ್ಲಿಯೂ ಸುತ್ತ ಮುತ್ತ ತೋರಿಸಿ ವಿವರಿಸಿದೆ.
ಶಾಲೆಗೆ ರಜಾ ಇದ್ದ ಕಾರಣ, ಶೈಲಜಾ ಒಬ್ಬರೇ ಸ್ಕೂಲ್‌ನಲ್ಲಿ ನಮಗಾಗಿ ಕಾಯುತ್ತಾ ಇದ್ದರು. ಮೊದಲ ದಿನದ ಥೆರಪಿ ತರಗತಿ ಆರಂಭವಾಗಿತ್ತು. ಎಲ್ಲಕ್ಕಿಂತ ಮೊದಲು ‘ಆ, ಈ ,ಊ ,ಸ್, ಶ್, ಮ್’ ಇಷ್ಟು ಶಬ್ಧಗಳನ್ನ ಅವನು ಕೇಳಿಸಿಕೊಳ್ಳುತ್ತಿದ್ದಾನಾ ಎಂಬ ಬಗ್ಗೆ ಅವರು ಪರೀಕ್ಷಿಸಿದರು. ‘ಆ..’ ಎನ್ನುತ್ತಾ ವಿಮಾನಿನ ಚಿತ್ರ ತೋರಿಸಿದರು. ‘ಈ..’ ಎನ್ನುತ್ತಾ ಟೂತ್ ಬ್ರಶ್, ‘ಊ..’ ಅನ್ನುತ್ತಾ ರೈಲು, ‘ಶ್’ ಅನ್ನುತ್ತಾ ಕುಕ್ಕರ್ ಹಾಗೂ ‘ಸ್.’ ಎನ್ನುತ್ತಾ ಹಾವಿನ ಚಿತ್ರಗಳನ್ನು ಅವನ ಮುಂದಿಟ್ಟರು. ಇದೆಲ್ಲ ಶಬ್ಧಗಳನ್ನು ಅವನು ಕೇಳಿಸಿಕೊಂಡು, ಅವರು ಯಾವ ಶಬ್ಧ ಮಾಡುತ್ತಾರೋ ಅದರ ಚಿತ್ರವನ್ನು ಅವನು ಮುಟ್ಟಿ ತೋರಿಸಬೇಕು. ಅವರು ಶಬ್ಧ ಮಾಡಿದಾಗಲೆಲ್ಲ, ಕೇಳಿಸಿಕೊಂಡಂತೆ ಅಭಿನಯಿಸುತ್ತಾ ನಾನೇ ಮೊದಲು ಚಿತ್ರಗಳನ್ನು ತೋರಿಸಿದೆ. ಆ ನಂತರ ಅವನೂ ಅನುಕರಿಸಿದ. ಆದರೆ, ಮೊದಲ ದಿನವಲ್ಲವೇ…? ಸಧ್ಯಕ್ಕೆ ಅವನು ಶಬ್ಧ ಬರುತ್ತಿದೆ ಎಂಬುದನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತಿದ್ದಾನೆ. ಈ ಎಲ್ಲ ಶಬ್ಧಗಳ ನಡುವಿನ ವ್ಯತ್ಯಾಸ ಅವನಿಗೆ ತಿಳಿಯುತ್ತಿಲ್ಲ ಅನ್ನೋದು ಗೊತ್ತಾಯ್ತು ನನಗೆ. ಈ ಶಬ್ಧಗಳ ವ್ಯತ್ಯಾಸ ತಿಳಿಯುವವರೆಗೆ ಮನೆಯಲ್ಲಿ ಇದೇ ರೀತಿ ಅಭ್ಯಾಸ ಮಾಡಿಸುವಂತೆ ಶೈಲಜಾ ಸಲಹೆಕೊಟ್ಟರು, ನಾನು ನೋಟ್ ಮಾಡಿಕೊಂಡೆ.
ಕಾಕ್ಲಿಯರ್ ಇಂಪ್ಲಾಂಟ್ ಆದ ಮಕ್ಕಳಿಗೆ ಎಲ್ಲಕ್ಕಿಂತ ಮೊದಲು ಈ ಶಬ್ಧಗಳನ್ನೇ ಅಭ್ಯಾಸ ಮಾಡಿಸುವುದಕ್ಕೂ ಒಂದು ಉದ್ದೇಶವಿದೆ. ‘ಆ, ಈ ,ಊ ,ಸ್, ಶ್, ಮ್’ ಇವುಗಳನ್ನು ‘ಲಿಂಗ್ ಸೌಂಡ್ಸ್’ ಅಂತ ಕರೆಯಲಾಗುತ್ತದೆ. ಲಿಂಗ್‌ಎಂಬುದು ಓರ್ವ ವ್ಯಕ್ತಿಯ ಹೆಸರು. ಲಿಂಗ್‌ಎಂಬ ವಿಜ್ಞಾನಿ, ಶ್ರವಣದೋಷವಿರುವವರಿಗೆ ಶಬ್ಧಗಳ ಪರಿಚಯ ಮಾಡಿಸುವುದಕ್ಕಾಗಿ, ಮತ್ತು ಅವರು ಎಷ್ಟರ ಮಟ್ಟಿಗೆ ಕೇಳಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಪರೀಕ್ಷಿಸುವುದಕ್ಕಾಗಿ, ಇವುಗಳನ್ನ ಡಿಸೈನ್ ಮಾಡಿದ್ದಾರೆ. ‘ಆ, ಈ ,ಊ ,ಸ್, ಶ್, ಮ್’ ಈ ಆರು ಶಬ್ದಗಳನ್ನು ವ್ಯಕ್ತಿ ಸರಿಯಾಗಿ ಕೇಳಿಸಿಕೊಂಡ ಅಂತಾದಲ್ಲಿ, ಆತನಿಗೆ ಎಲ್ಲ ಶಬ್ಧಗಳ ಆವರ್ತನಗಳೂ (frequency) ಕೇಳಿಸುತ್ತಾ ಇವೆ ಎಂದು ನಾವು ಅರ್ಥೈಸಿಕೊಳ್ಳಬಹುದು. ಹೀಗಾಗಿ ಕಾಕ್ಲಿಯರ್ ಇಂಪ್ಲಾಂಟ್ ಫಲಾನುಭವಿಗೆ ಸರಿಯಾಗಿ ಕೇಳಿಸುತ್ತಿದೆಯಾ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಈ ಶಬ್ಧಗಳನ್ನ ಮೊದಲು ಅಭ್ಯಾಸ ಮಾಡಿಸಲಾಗುತ್ತದೆ. ಒಂದು ವೇಳೆ, ಇವುಗಳಲ್ಲಿ ಯಾವುದಾದರೂ ಒಂದು ಶಬ್ಧ ಕೇಳಲಿಲ್ಲವೆಂದರೂ, ಅದಕ್ಕೆ ತಕ್ಕಂತೆ ಮತ್ತೊಮ್ಮೆ ಇನ್ಸ್ಟ್ರುಮೆಂಟ್ ಅನ್ನು ಹೊಂದಿಸಲಾಗುತ್ತದೆ. ಈ ಕಾರಣಕ್ಕಾಗಿ ಈ ಶಬ್ಧಗಳಿಗೆ ಇಷ್ಟು ಪ್ರಾಮುಖ್ಯತೆ ಇದೆ.
ಆ ನಂತರ ಒಂದು ಆಟಿಕೆಯ ಶಬ್ಧವನ್ನು ಅಥರ್ವನಿಗೆ ಪರಿಚಯಿಸಲಾಯಿತು. ಆಟಿಕೆಯನ್ನು ಅವನ ಕೈಯಲ್ಲೇ ಕೊಟ್ಟು ಶಬ್ಧ ಮಾಡಿಸಿದರು. ಆ ನಂತರ ಶೈಲಜಾ ಮತ್ತು ನಾನು ಇಬ್ಬರೂ ಅಥರ್ವನ ಎದುರು ಸ್ವಲ್ಪ ದೂರ ದೂರ ಕುಳಿತೆವು. ಈಗ ಅವನು ಶಬ್ಧ ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದನ್ನು ಗುರುತಿಸಬೇಕು. ಇಬ್ಬರೂ ಅವನಿಗೆ ಕಾಣದಂತೆ ಒಬ್ಬರಾದ ಮೇಲೆ ಒಬ್ಬರು ಆಟಿಕೆಯ ಶಬ್ಧ ಮಾಡಿದೆವು. ಶಬ್ಧ ಎಲ್ಲಿಂದ ಬರುತ್ತಿದೆ ಎಂಬುದನ್ನು ಆತ ಗುರುತಿಸುವ ಚಟುವಟಿಕೆ ಅದು. ಅಥರ್ವನ ಸ್ಪಂದನೆ ತುಂಬಾ ಚೆನ್ನಾಗಿತ್ತು. ಶಬ್ಧ ಎಲ್ಲಿಂದ ಬರುತ್ತಿದೆ ಎಂಬುದನ್ನ ತುಂಬಾ ಚೆನ್ನಾಗಿ ಗುರುತಿಸುತ್ತಿದ್ದ. ಖುಷಿಯಾಯಿತು ನನಗೆ. ಮನೆಯಲ್ಲಿಯೂ ಅವರ ಮಾಡಿಸಿದ ಎಲ್ಲ ಚಟುವಟಿಕೆಗಳನ್ನೂ ಮಾಡಿಸಿದೆ.

ದೀಪಾ ಅಕ್ಕಾ, ರತ್ನಾ ಆಂಟೀ, ಹಿರಿಯ ತಾಯಂದಿರ ಸಲಹೆಗಳನ್ನೆಲ್ಲ ಒಂದು ಪುಸ್ತಕದಲ್ಲಿ ನೋಟ್ ಮಾಡಿಟ್ಟುಕೊಂಡಿದ್ದೆನಲ್ಲ, ಅದೆಲ್ಲವನ್ನೂ ಈಗ ಪ್ರಯೋಗಕ್ಕೆ ಇಳಿಸಿದ್ದೆ. ಒಂದೇ ಒಂದು ನಿಮಿಷ ಪೋಲಾಗದಂತೆ ಎಚ್ಚರ ವಹಿಸಿ ಅಥರ್ವನಿಗೆ ಪಾಠ ಮಾಡಿದೆ. ಇಲ್ಲಿ ಪಾಠ ಅಂದರೆ, ಕುಳಿತು ಬರೆದು ಓದಿಸುವುದು ಮಾತ್ರ ಅಲ್ಲ. ನಮ್ಮ ದಿನ ನಿತ್ಯ ಜೀವನ. ನಾವು ಇಡೀ ದಿನ ಏನೆಲ್ಲ ಚಟುವಟಿಕೆ ಮಾಡುತ್ತೀವೋ ಅದೆಲ್ಲವನ್ನೂ ಮಗುವಿಗೆ ಹೇಳುತ್ತಿರುವುದು. ಮಗು ಎಚ್ಚರವಿದ್ದಷ್ಟೂ ಹೊತ್ತು, ಅವನೊಂದಿಗೆ ಇರುವುದು. ಅವನೇನು ಮಾಡುತ್ತಿದ್ದಾನೋ, ಏನನ್ನು ಆಡುತ್ತಿದ್ದಾನೋ ಅದರಬಗ್ಗೆ ಅವನಿಗೆ ವಿವರಿಸುವುದು. ಈಗಂತೂ ಅವನು ಚೆನ್ನಾಗಿ ಕೇಳಿಸಿಕೊಳ್ಳುತ್ತಿದ್ದಾನೆ ಎಂಬ ಸಮಾಧಾನ ಬೇರೆ ಇತ್ತಲ್ಲ. ನನ್ನ ಉತ್ಸಾಹಕ್ಕೀಗ ಚುರುಕು ಹೊತ್ತಿಕೊಂಡಿತ್ತು.
ಇಂಪ್ಲಾಂಟ್‌ಆಕ್ಟಿವೇಟ್‌ಆಗಿ ಹದಿನೈದು ದಿನಗಳೊಳಗೇ ಶಬ್ಧಕ್ಕೆ ಪ್ರತಿಕ್ರಿಯೆ ನೀಡಲು ಆರಂಭಿಸಿಬಿಟ್ಟ ನಮ್ಮ ಅಥರ್ವ. ‘ಅಥರ್ವ’ ಅಂದರೆ ಸಾಕು ಈಗ ನನ್ನ ಮಗ ತಿರುಗಿ ನೋಡುತ್ತಿದ್ದ. ತಾನು ಅಥರ್ವ ಎಂಬುದು ಅವನಿಗೆ ಈಗ ಅರ್ಥವಾಗಿತ್ತು. ಒಮ್ಮೆಯಂತೂ ಅವನ ಪಾಡಿಗೆ ಅವನು ಹಾಲ್‌ನಲ್ಲಿ ಹಾಸಿದ್ದ ಚಾಪೆಯ ಮೇಲೆ ಮಲಗಿಕೊಂಡು ಏನೋ ಆಟಿಕೆ ಹಿಡಿದು ಆಡುತ್ತಿದ್ದ. ನನ್ನ ಕೈಲಿದ್ದ ಪಾತ್ರೆ ಜಾರಿ ನೆಲಕ್ಕೆ ಬಿದ್ದುಬಿಡ್ತು. ಆಟದಲ್ಲಿ ಮಗ್ನನಾಗಿದ್ದ ಅಥರ್ವ ಶಬ್ಧದಿಂದ ಭಯಗೊಂಡು ಕಿಟಾರನೆ ಕಿರುಚಿದ. ಓಡಿಹೋಗಿ ಅವನನ್ನೆತ್ತಿಕೊಂಡು ಸಮಾಧಾನ ಮಾಡಿ, ಆ ಶಬ್ಧ ಹೇಗೆ ಬಂತು ಎಂಬುದನ್ನು ಹೇಳತೊಡಗಿದೆ. ಅವನು ಭಯದಲ್ಲಿ ಅಳುತ್ತಿದ್ದರೆ, ನನಗೆ ಖುಷಿ. ಶಬ್ಧ ಕೇಳಿಸಿಕೊಂಡು ಬೆಚ್ಚಿ ಅಳುತ್ತಿದ್ದಾನೆ ಎಂಬ ಸಂಗತಿ ನನಗೆ ನಿಧಿ ಸಿಕ್ಕಷ್ಟು ಸಂತೋಷ ನೀಡುತ್ತಿತ್ತು.
ಮೇ ಎರಡನೇ ವಾರದಲ್ಲಿ ನಮ್ಮ ಪಿ.ಎ.ಡಿ.ಸಿ ಶಾಲೆಯೂ ಆರಂಭವಾಯ್ತು. ಈಗ ಶಾಲೆಯ ಎಲ್ಲ ಚಟುವಟಿಕೆಗಳ ಜತೆ, ವಾರಕ್ಕೆ ಮೂರು ದಿನ ಶೈಲಜಾ ನಡೆಸಿಕೊಡುತ್ತಿದ್ದ ವಿಶೇಷ ಥೆರಪಿ ತರಗತಿಗಳೂ ನಮಗೆ ಸಿಗುತ್ತಿದ್ದವು. ಮಾತು, ಪಾಠ, ತರಬೇತಿ, ಅಭ್ಯಾಸದೊಳಗೆ ನಾವು ಮುಳುಗಿಕೊಂಡೆವು. ಒಂದೊಂದೇ ದಿನ ಕಳೆಯತೊಡಗಿತು.
| ಇನ್ನು ಮುಂದಿನ ವಾರಕ್ಕೆ |






0 Comments