ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮಿತಾವ್ ಘೋಷ್, ಬೊಮ್ಮ, ವಿವೇಕ ರೈ..

ಖ್ಯಾತ ಸಾಹಿತಿ ಅಮಿತಾವ್ ಘೋಷ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದಿದೆ. ಇದೇ ಮೊದಲ ಬಾರಿಗೆ ಆಂಗ್ಲ ಸಾಹಿತಿ ಜ್ಞಾನಪೀಠ ಗೌರವಕ್ಕೆ ಪಾತ್ರರಾಗಿದ್ದಾರೆ. ಅಮಿತಾವ್ ಘೋಷ್ ಅವರ ಅಧ್ಯಯನದ ಹಸಿವು ಎಂತಹದ್ದು ಎನ್ನುವುದನ್ನು ಅವರ ಕೃತಿಗಳು ಸೂಚಿಸುತ್ತವೆ. ‘ಬಮ್ಮ’ ಎನ್ನುವ ಒಂದು ಹೆಸರಿನ ಕಾರಣಕ್ಕಾಗಿ ಈಜಿಪ್ಟ್ ನಿಂದ ಮಂಗಳೂರಿನವರೆಗೆ ಅಲೆದ ಅಮಿತಾವ್ ಘೋಷ್ ನಿಜಕ್ಕೂ ಈ ಪ್ರಶಸ್ತಿಗೆ ಅರ್ಹರು.

ಹೀಬ್ರೂ ಕಡತದಲ್ಲಿದ್ದ ಬಮ್ಮ ಎನ್ನುವ ಹೆಸರಿನ ಹಿನ್ನೆಲೆ ಹುಡುಕಲು ಅವರು ಮಂಗಳೂರಿಗೆ ಬಂದು ಭೇಟಿಯಾದದ್ದು ಪ್ರೊ ಬಿ ಎ ವಿವೇಕ ರೈ ಅವರನ್ನು. ತುಳುವಿನ ಮಹತ್ವದ ವಿದ್ವಾಂಸರಾದ ವಿವೇಕ ರೈ ಅವರು ಇಂದಿನ ‘ಪ್ರಜಾವಾಣಿ’ಯಲ್ಲಿ ತಮ್ಮ ಹಾಗೂ ಅಮಿತಾವ್ ಘೋಷ್ ನಂಟನ್ನು ಬರೆದಿದ್ದಾರೆ

ಆದರೆ ಈ ಹಿಂದೆಯೇ ‘ಮುಂಗಾರು’ವಿಗೆ ಅವರು ಬರೆಯುತ್ತಿದ್ದ ‘ಗಿಳಿಸೂವೆ’ ಅಂಕಣದಲ್ಲಿ ಅವರು ಅಮಿತಾವ್ ಘೋಷ್ ಅವರ ಹುಡುಕಾಟ ಹಾಗೂ ಅದರ ಫಲವಾಗಿ ಬಂದ ಕೃತಿಯ ಬಗ್ಗೆ ಬರೆದಿದ್ದರು. ಬಮ್ಮ ಎನ್ನುವ ಹೆಸರು ಬಮ್ಮ ಅಲ್ಲ ಬೊಮ್ಮ ಎನ್ನುವ ತೀರ್ಮಾನಕ್ಕೆ ತಲುಪಿದ್ದನ್ನೂ ಹೇಳಿದ್ದರು.

ಅಮಿತಾವ್ ಅವರಿಗೆ ಪ್ರಶಸ್ತಿ ಘೋಷಣೆಯಾದ ಹೊತ್ತಲ್ಲಿ ‘ಅವಧಿ’ ೧೯೯೨ರಲ್ಲಿ ಗಿಳಿಸೂವೆ ಕೃತಿಯಲ್ಲಿ ಪ್ರಕಟವಾದ ಬೊಮ್ಮನ ಶೋಧದಲ್ಲಿ ಪ್ರಾಚೀನ ನಾಡೊಂದರಲ್ಲಿ ಲೇಖನವನ್ನು ಮತ್ತೆ ನಿಮ್ಮ ಓದಿಗಾಗಿ ನೀಡುತ್ತಿದೆ.

ಬಿ ಎ ವಿವೇಕ ರೈ 

1990ರ ಮೇ ತಿಂಗಳ ಒಂದು ದಿನ ಸಂಜೆ ಮನೆಗೆ ಬಂದಾಗ ದೊರೆತ ಸಂದೇಶ ‘ಅಮಿತಾಬ್’ ಎನ್ನುವವರ ಫೋನ್ ಬಂದಿತ್ತು. ಮಂಗಳೂರಿನ ಇಂತಹ ಹೊಟೇಲ್‍ನಲ್ಲಿ ಇದ್ದಾರಂತೆ. ನಿಮ್ಮನ್ನು ಭೇಟಿಯಾಗಲು ಇಚ್ಛಿಸುತ್ತಾರಂತೆ’. ಆ ಹೆಸರು ವ್ಯಕ್ತಿಯ ರೂಪದಲ್ಲಿ ನನಗಂತೂ ತೀರಾ ಅಪರಿಚಿತ. ಮನೆಯಲ್ಲಿ ಮಕ್ಕಳೇನೋ ಸಿನಿಮಾ ನಟ ಅಮಿತಾಬ್ ಇರಬಹುದೆಂದು ಉತ್ಸಾಹಗೊಂಡಿದ್ದರು. ಸಂಪರ್ಕಿಸಿ ಭೇಟಿಯಾದಾಗ ಗೊತ್ತಾದದ್ದು ಆ ವ್ಯಕ್ತಿ ಕಲ್ಕತ್ತಾದಿಂದ ಬಂದ ಅಮಿತಾವ್ ಘೋಷ್ ಎನ್ನುವ ತರುಣ ವಿದ್ವಾಂಸ ಹಾಗೂ ಸಾಹಿತಿ ಎಂದು.

ಕಲ್ಕತ್ತಾದಲ್ಲಿ ಹುಟ್ಟಿ ದಿಲ್ಲಿ ಮತ್ತು ಆಕ್ಸ್ ಫರ್ಡ್ ಗಳಲ್ಲಿ ವಿದ್ಯಾಭ್ಯಾಸ ನಡೆಸಿ ಸಾಮಾಜಿಕ ಮಾನವ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದು ದಿಲ್ಲಿ ಮತ್ತು ಅಮೇರಿಕಾದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪಕ ಆಗಿದ್ದು ಈಗ ಹುಟ್ಟೂರು ಕಲ್ಕತ್ತಾದಲ್ಲಿ ನೆಲೆಸಿರುವ ಅಮಿತಾವ್ ಘೋಷ್ ಇಂಗ್ಲಿಷ್‍ನಲ್ಲಿ ಎರಡು ಕಾದಂಬರಿಗಳನ್ನು ರಚಿಸಿದ್ದಾರೆ. – ‘The Circle of Reason’ ಮತ್ತು ‘The Shadow Lines’. ಇವುಗಳಲ್ಲಿ ಎರಡನೆಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಅಮಿತಾವ್ ಮಂಗಳೂರಿಗೆ ಬಂದ ಉದ್ದೇಶ ಒಂದು ವಿಚಿತ್ರ ಶೋಧಕ್ಕಾಗಿ.

ತಮ್ಮ ಸಂಶೋಧನೆಯ ಸಮಸ್ಯೆಯೊಂದನ್ನು ಬಿಡಿಸಲು ಮುಖ್ಯವಾಗಿ ನನ್ನ ನೆರವನ್ನು ಪಡೆಯಲು ಮಂಗಳೂರಿಗೆ ಬಂದಿರುವುದಾಗಿ ತಿಳಿಸಿದರು. ಸುಮಾರು 12ನೇ ಶತಮಾನದಲ್ಲಿ ಮಂಗಳೂರಿನಿಂದ ಈಜಿಪ್ಟಿಗೆ ರವಾನೆಗೊಂಡ ಗುಲಾಮನೊಬ್ಬನ ಹೆಸರು, ಹಿನ್ನೆಲೆಗಳ ಶೋಧ ಅಮಿತಾವ್ ರ ಮಂಗಳೂರು ಪ್ರವಾಸದ ಉದ್ದೇಶವಾಗಿತ್ತು. ಅಮಿತಾವ್ ಈ ವಿಷಯದಲ್ಲಿ ವಿಶೇಷ ಸಂಶೋಧನೆಯನ್ನು ನಡೆಸಿದ್ದರು. ಅರೆಬಿಕ್ ಪರ್ಷಿಯನ್ ಭಾಷೆಗಳಲ್ಲಿ ಅವರಿಗೆ ವಿಶೇಷ ಪ್ರಾವೀಣ್ಯ ಇತ್ತು.

ಮಂಗಳೂರಿನಲ್ಲಿ ವ್ಯಾಪಾರಕ್ಕಾಗಿ ನೆಲೆಸಿದ್ದ ಅಬ್ರಹಾಂ ಬೆನ್ ಈಜೂ ಎಂಬ ಯಹೂದ್ಯ ವರ್ತಕನಿಗೆ ಈಜಿಪ್ಟ್ ನ ಆಡೆನ್‍ನಲ್ಲಿ ನೆಲೆಸಿದ್ದ ಅವನ ಸ್ನೇಹಿತ ಖಲಾಫ್ ಇಶಾಕ್ ಬರೆದ ಪತ್ರವೊಂದರಲ್ಲಿ ಉಲ್ಲೇಖಗೊಂಡ ಮಂಗಳೂರಿನ ವ್ಯಕ್ತಿ/ಗುಲಾಮನೊಬ್ಬನ ಹೆಸರು ಹಿನ್ನೆಲೆಗಳನ್ನು ಶೋಧಿಸುವುದು ಅಮಿತಾಬ್ ಅವರ ಉದ್ದೇಶವಾಗಿತ್ತು. ಆ ಗುಲಾಮನ ಹೆಸರನ್ನು ಜೂಡೋ ಅರೆಬಿಕ್ ಭಾಷೆಯಲ್ಲಿ ಹೀಬ್ರೂ ಲಿಪಿಯಲ್ಲಿ ಬರೆಯಲಾಗಿತ್ತು. ಪ್ರಾಚೀನ ಅರೆಬಿಕ್ ಭಾಷೆಯ ತಮ್ಮ ಪಾಂಡಿತ್ಯದಿಂದ ಅಮಿತಾಬ್ ಆ ಶಬ್ದವನ್ನು BAMMA (ಬಮ್ಮ) ಎಂದು ಊಹಿಸಿದ್ದರು. ಗುಲಾಮನ ಕಥನದ ವೃತ್ತಾಂತ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ನಾನು ಮಧ್ಯೆ ಪ್ರವೇಶಿಸಿ ಆ ಹೆಸರು ‘ಬಮ್ಮ’ ಅಲ್ಲ ‘ಬೊಮ್ಮ’ ಆಗಿರಬಹುದು ಎಂದು ಸೂಚಿಸಿದೆ. ತುಳುವ ಸಂಸ್ಕೃತಿಯಲ್ಲಿ ‘ಬೊಮ್ಮ’ ಶಬ್ದದ ಬಳಕೆಯ ಕುರಿತು ವಿವರಗಳನ್ನು ಕೊಟ್ಟೆ. ತುಳುವ ಕುಟುಂಬ ಪದ್ಧತಿ, ಭೂತಾರಾಧನೆಯ ಸಂಸ್ಕೃತಿಗಳ ವಿವರಣೆಗಳನ್ನು ಕೊಟ್ಟು ‘ಬೊಮ್ಮ’ ಅಥವಾ ‘ಬೆರ್ಮೆರ್’ ಎನ್ನುವ ಪರಿಕಲ್ಪನೆಯು ಸಂಸ್ಕೃತದ ಬ್ರಹ್ಮನ ಪರಿಕಲ್ಪನೆಗಿಂತ ಭಿನ್ನ ಎಂಬುದನ್ನು ತಿಳಿಸಿ ಯೋಧಸಂಸ್ಕೃತಿಯ ಸ್ಥಳೀಯ ಆರಾಧನಾ ರೂಪವಾಗಿ ‘ಬೆರ್ಮೆರ್’ ಅಥವಾ ‘ಬೊಮ್ಮ’ ದೈವದ ಮಾಹಿತಿಗಳನ್ನು ಒದಗಿಸಿದೆ.

ಆಕಸ್ಮಿಕವಾಗಿ ಆ ದಿನ ದೂರದರ್ಶನದಲ್ಲಿ ಪ್ರಸಾರಗೊಂಡ ‘ಕೋಟಿ-ಚೆನ್ನಯ’ ತುಳು ಸಿನೆಮಾವನ್ನು ಅಮಿತಾವ್ ಮತ್ತು ನಾನು ಹೊಟೇಲಿನ ಕೊಠಡಿಯಲ್ಲಿ ವೀಕ್ಷಿಸುತ್ತಿದ್ದಾಗಲೇ ತುಳುನಾಡಿನ ‘ಬೆರ್ಮೆರ್’ ದೈವದ ಸ್ಪಷ್ಟ ಚಿತ್ರವನ್ನು ಗ್ರಹಿಸಲು ಅವರಿಗೆ ಸಾಧ್ಯವಾಯಿತು. ಅರೆಬಿಕ್ ಕಡತದಲ್ಲಿದ್ದ ‘ಬಮ್ಮ’ (ಬೊಮ್ಮ) ಸಂಸ್ಕೃತದ ‘ಬ್ರಹ್ಮ’ದಿಂದ ನಿಷ್ಪನ್ನವಾದುದು ಎನ್ನುವ ವಿದ್ವಾಂಸರ ವಿವರಣೆಗಿಂತ ಭಿನ್ನವಾಗಿ ತುಳುವ ಸಂಸ್ಕೃತಿಯ ‘ಬೊಮ್ಮ’ ಪರಿಕಲ್ಪನೆಯ ವಿಶಿಷ್ಟತೆಯನ್ನು ಯೋಧರೂಪದ ಆಕೃತಿಯನ್ನು ‘ಕೋಟಿ ಚೆನ್ನಯ’ ಸಿನೆಮಾದಲ್ಲಿ ಕಾಣಲು ಅವರಿಗೆ ಸಾಧ್ಯವಾಯಿತು. ಅಮಿತಾವ್ ಜೊತೆಗೆ ಮಂಗಳೂರಿನ ಹಳೆಯ ಬಂದರಿನಿಂದ ದೋಣಿಯಲ್ಲಿ ಬೆಂಗರೆಗೆ ಪ್ರಯಾಣ ಮಾಡಿದ್ದು; ಮಂಗಳೂರು ಪರಿಸರದ ಕೆಲವು ಐತಿಹಾಸಿಕ ಸ್ಥಳಗಳಲ್ಲಿ ಓಡಾಡಿದ್ದು ಇಂತಹ ಕೆಲವು ನೆನಪುಗಳು ಸ್ಮೃತಿಪಟಲದ ಒಳಪದರನ್ನು ಸೇರಿದ ಎರಡು ವರ್ಷಗಳ ಬಳಿಕ ಮತ್ತೆ ಆಕಸ್ಮಿಕವಾಗಿ ಕೈ ಸೇರಿದ ಗ್ರಂಥವೊಂದು ಗತಕಾಲದ ಕುರಿತ ಆಲೋಚನೆಗಳಿಗೆ ಹೊಸ ಬಣ್ಣ ಆಕಾರಗಳನ್ನು ಕೊಟ್ಟಿತು.

ಅಮಿತಾವ್ ಘೋಷ್ ಅವರ ಇತ್ತೀಚಿನ ಗ್ರಂಥ ‘In An Antique Land’ (Granta Books – London – 1992) ಎರಡು ವಾರಗಳ ಹಿಂದೆ ನನ್ನ ಕೈ ಸೇರಿದಾಗ ಅಮಿತಾವ್ ಅವರ ಹೊಸ ಕಾದಂಬರಿ ಇರಬಹುದೆಂದು ಭಾವಿಸಿ ಓದಲು ತೊಡಗಿದೆ. ಸಾಹಿತ್ಯ ಕೃತಿಗಳನ್ನು ಪ್ರಕಾರಗಳ ರೂಪದಲ್ಲಿ ವರ್ಗೀಕರಿಸಿ ಅಧ್ಯಯನ ಮಾಡುವ ಕ್ರಮದ ಬಗ್ಗೆ ನನಗಿರುವ ಸಂದೇಹ ಈ ಕೃತಿಯ ಓದಿನಿಂದ ಇನ್ನಷ್ಟು ಬಲವಾಯಿತು. ಪ್ರವಾಸಿಗನ ಕಥನದ ರೂಪದಲ್ಲಿ ಮುಚ್ಚಿಹೋದ ಇತಿಹಾಸವನ್ನು ಅನಾವರಣ ಮಾಡುವ ‘In An Antique Land’ ಕೃತಿಯು ಈಜಿಪ್ಟ್ ದೇಶದ ಖಾಸಗಿ ಬದುಕಿನ ಮಾಂತ್ರಿಕ ಮತ್ತು ಆಪ್ತ ಜೀವನಚರಿತ್ರೆಯನ್ನು ಉಪಾಖ್ಯಾನಗಳು ಮತ್ತು ಲವಲವಿಕೆಯ ವಿವರಗಳ ಸಹಿತ ಅವಲೋಕಿಸುತ್ತದೆ. ಈ ದೇಶವನ್ನು ಸಂದರ್ಶಿಸಿದ ಇಬ್ಬರು ಭಾರತೀಯರ ಕತೆ ‘In An Antique Land’ ಕೃತಿಯ ವಸ್ತು. ಮೊದಲನೆಯ ಭಾರತೀಯನೆಂದರೆ ಯಹೂದ್ಯ ವರ್ತಕನೊಬ್ಬನ ಗುಲಾಮನಾಗಿದ್ದು ಆತನ ಪತ್ರಗಳ ಅಂಚುಗಳಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ. ಇನ್ನೊಬ್ಬ ಭಾರತೀಯ ಈ ಕೃತಿಯು ಲೇಖಕ ಅಮಿತಾವ್ ಘೋಷ್, ಇತಿಹಾಸದ ಅಡಿಟಿಪ್ಪಣಿಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ದಾಖಲೆಗೊಂಡ ಗುಲಾಮನೊಬ್ಬನ ಕತೆಯನ್ನು ಅನ್ವೇಷಿಸುತ್ತಾ 1980ರಲ್ಲಿ ಈಜಿಪ್ಟಿಗೆ ಬಂದವರು. 10 ವರ್ಷಗಳ ಕಾಲ ಮತ್ತೆ ಮತ್ತೆ ತಮ್ಮ ಅನ್ವೇಷಣೆಯನ್ನು ಮುಂದುವರಿಸಿದವರು.

‘In An Antique Land’ ಕೃತಿಯಲ್ಲಿ ಒಟ್ಟು ಆರು ಅಧ್ಯಾಯಗಳಿವೆ. ಮೊದಲನೆಯದು ಪ್ರಸ್ತಾವನೆ, ಕೊನೆಯದು ಉಪಸಂಹಾರ, ಲಟಾಈಫಾ (Lataifa), ನಶಾವಿ (Nashawy), ಮಂಗಳೂರು ಇವು ಮೂರು ಪ್ರಮುಖ ಅಧ್ಯಾಯಗಳು. ಉಪಸಂಹಾರದ ಮೊದಲು ‘going back’ ಎಂಬ ಚಿಕ್ಕ ಅಧ್ಯಾಯವೊಂದಿದೆ. ಗ್ರಂಥದ ಕೊನೆಯಲ್ಲಿ ಸುಮಾರು 40 ಪುಟಗಳಷ್ಟು ವಿವರವಾದ ಸಂಶೋಧನಾ ಟಿಪ್ಪಣಿಗಳಿವೆ. ಬಹಳ ಅಮೂಲ್ಯವಾದ ಮಹತ್ವದ ಅಪೂರ್ವ ದಾಖಲೆಗಳ ಉಲ್ಲೇಖಗಳು ಈ ಟಿಪ್ಪಣಿಗಳಲ್ಲಿವೆ. ಪ್ರಾಚೀನ ದಾಖಲೆಗಳ ಅಧಿಕೃತ ಉಲ್ಲೇಖಗಳು ಮತ್ತು ವಿವರಗಳು ಈ ಟಿಪ್ಪಣಿಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ದೊರೆಯುತ್ತವೆ. ಈ ದೃಷ್ಟಿಯಿಂದ ಇದೊಂದು ಮಹತ್ವದ ಆಕರಗ್ರಂಥವೂ ಹೌದು.

ಈಜಿಪ್ಟಿಗೆ ರವಾನೆಗೊಂಡ ಮಂಗಳೂರಿನ ಗುಲಾಮ ಆಧುನಿಕ ಇತಿಹಾಸದಲ್ಲಿ ಮೊದಲು ಕಾಣಿಸಿಕೊಂಡದ್ದು 1942ರಲ್ಲಿ ಹೀಬ್ರೂ ಪತ್ರಿಕೆಯಲ್ಲಿ. 1942ರಲ್ಲಿ E. Strauss ಎಂಬ ವಿದ್ವಾಂಸರು ‘New Sources for the History of Middle Eastern Jews’ ಎಂಬ ಲೇಖನದಲ್ಲಿ ಈ ವಿಷಯವನ್ನು ಉಲ್ಲೇಖಿಸಿದ್ದಾರೆ. ಈಜಿಪ್ಟ್ ನ ಆಡೆನ್ ಬಂದರಿನಲ್ಲಿ ಇದ್ದ ಖಲಾಫ್ ಇಬ್‍ನ್ ಇಶಾಕ್ ಎಂಬ ವರ್ತಕನು ಭಾರತದ ಪಶ್ಚಿಮ ಕರಾವಳಿಯ ಬಂದರು ಮಂಗಳೂರಿನಲ್ಲಿದ್ದ ಅಬ್ರಹಾಂ ಬೆನ್‍ಈಜೂ ಎಂಬ ತನ್ನ ವರ್ತಕ ಮಿತ್ರಗೆ ಕ್ರಿ.ಶ. 1148ರಲ್ಲಿ ಬರೆದ ಪತ್ರದಲ್ಲಿ ಅನೇಕ ವಿವರಗಳ ಬಳಿಕ ಕೊನೆಯಲ್ಲಿ ಗುಲಾಮನ ಹೆಸರಿನ ಉಲ್ಲೇಖವನ್ನು ಮಾಡಿದ್ದಾನೆ.

ಮತ್ತೆ ಇದೇ ಗುಲಾಮನ ಉಲ್ಲೇಖ ಬರುವುದು Prof. S.D. Goitein ಅವರು ಅನುವಾದಿಸಿ ಸಂಪಾದಿಸಿದ ‘Letters of Medievel Jews Traders’(1973) ಸಂಕಲನದಲ್ಲಿ ಸೇರ್ಪಡೆಗೊಂಡ ಇನ್ನೊಂದು ಪತ್ರದ ಮೂಲಕ. ಇದು ಕ್ರಿ.ಶ. 1139ರಲ್ಲಿ ಖಿಲಾಫ್ ಇಬ್‍ನ್ ಇಶಾಕ್ ಆಡೆನ್‍ನಿಂದ ಮಂಗಳೂರಿನಲ್ಲಿದ್ದ ತನ್ನ ಸ್ನೇಹಿತ ಅಬ್ರಹಾಂ ಬೆನ್ ಈಜೂವಿಗೆ ಬರೆದ ಇನ್ನೊಂದು ಪತ್ರ. ಆ ಪತ್ರದ ಕೊನೆಯಲ್ಲಿ ಒಂದು ಅಡಿಟಿಪ್ಪಣಿಯ ರೂಪದಲ್ಲಿ ಗುಲಾಮನ ಉಲ್ಲೇಖ ಬರುತ್ತದೆ. ಬೆನ್ ಈಜೂವಿನ ಭಾರತೀಯ ಗುಲಾಮ ಹಾಗೂ ವ್ಯಾಪಾರೀ ಏಜೆಂಟ್ ತನ್ನ ಕುಟುಂಬದ ಒಬ್ಬ ಗೌರವಸ್ಥ ಸದಸ್ಯನಾಗಿದ್ದ ಎನ್ನುವ ವಿಷಯ ಈ ಪತ್ರದಿಂದ ತಿಳಿದುಬರುತ್ತದೆ. ವ್ಯಾಪಾರದ ಸಂಸ್ಕೃತಿಯಲ್ಲಿ ಕಾಣಿಸಿಕೊಳ್ಳುವ ಈ ಪತ್ರದ ಕೊನೆಯಲ್ಲಿ ಅಡಿಟಿಪ್ಪಣಿಯ ರೂಪದಲ್ಲಿ ಗುಲಾಮನ ಹೆಸರು ಬಂದಿರುವುದನ್ನು ಲೇಖಕ ಅಮಿತಾವ್ ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ವ್ಯಾಪಾರದಂತೆ ವ್ಯಾಪಾರಿಗಳ ಪತ್ರದಲ್ಲೂ ಗುಲಾಮರದ್ದು ತೀರಾ ಕೊನೆಯ ಸ್ತರ. ಸಮಸ್ತವನ್ನು ಹೊರುವ ಗುಲಾಮರು ನೆಲಕ್ಕೆ ಅಂಟಿಕೊಂಡೇ ಇರುವ ಸಾಂಕೇತಿಕ ರೂಪವಾಗಿ ಈ ಪತ್ರಗಳಲ್ಲಿಯೂ ಗುಲಾಮರಿಗೆ ಅಡಿಟಿಪ್ಪಣಿಯ ರೂಪದಲ್ಲಿಯೇ ಸ್ಥಾನ.

ಪತ್ರದ ಕೊನೆಯಲ್ಲಿ ತನ್ನ ಹೆಸರನ್ನು ಮಾತ್ರ ದಾಖಲಿಸಿಕೊಂಡ 12ನೇ ಶತಮಾನದ ಗುಲಾಮನ ಶೋಧ ನಡೆಸುತ್ತಾ ಸಾಮಾಜಿಕ ಮಾನವವಿಜ್ಞಾನಿ ಮತ್ತು ಸಾಹಿತಿ ಅಮಿತಾವ್ ಘೋಷ್ ಈಜಿಪ್ಟಿನ ಗ್ರಾಮ ಲಟಾಈಫಾದಲ್ಲಿ ನೆಲೆಸಿ ತಮ್ಮ ಅನ್ವೇಷಣೆಯನ್ನು ಆರಂಭಿಸುತ್ತಾರೆ. 800 ವರ್ಷಗಳ ಬಳಿಕದ ಈಜಿಪ್ಟಿನ ಹಳ್ಳಿಗಳು ತಮ್ಮ ಖಾಸಗಿ ಬದುಕನ್ನು ಬಿಚ್ಚುವ ಬಗೆಗಳನ್ನು ಅಮಿತಾವ್ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಅಬುಆಲಿಯ ದೊಡ್ಡ ಗಂಟಲು ಬೃಹತ್ ದೇಹಾಕಾರ ಜಿಪುಣತನ ಇವನ್ನು ವಿವರಿಸುತ್ತಾ ತೀರಾ ವ್ಯಾವಹಾರಿಕವಾಗಿ ಒಂದು ಜನಾಂಗದ ವಿಶಿಷ್ಟ ಪ್ರತಿನಿಧಿಯಾಗಿ ಆತನನ್ನು ಕಾಣುತ್ತಾರೆ.

ಕೈರೋ ಈಜಿಪಿಟ್ ನ ಒಂದು ರೂಪಕ ಎಂದು ಆರಂಭಿಸುತ್ತಾ ಅದರ ಇತಿಹಾಸ, ಭೂಗೋಳ, ಸ್ವಭಾವಗಳನ್ನು ವರ್ಣಿಸುತ್ತಾರೆ. ಶೇಖ್‍ಮೂಸಾ ಲಟಾಈಫಾದಲ್ಲಿ ಲೇಖಕರ ಜೊತೆಗೆ ಸಾಹಚರ್ಯವನ್ನು ಹೊಂದುವ ಇನ್ನೊಬ್ಬ ಮುಖ್ಯ ವ್ಯಕ್ತಿ. ಶೇಖ್‍ಮೂಸಾ ಮತ್ತು ಅವನ ಕುಟುಂಬ, ಅವನ ಗಂಡು ಮಕ್ಕಳು ಮತ್ತು ಸೊಸೆಯರು ಇವರ ಮೂಲಕ ಈಜಿಪ್ಟ್ ಸಂಸ್ಕೃತಿಯ ಹೊಸ ಜಗತ್ತೊಂದನ್ನು ಲೇಖಕರು ಪ್ರವೇಶಿಸುತ್ತಾರೆ. ಉತ್ಸಾಜ್ ಮುಸ್ತಾಫಾ ಮತ್ತು ಅಮಿತಾವ್ ಘೋಷ್ ಅವರ ಮುಖಾಮುಖಿ ಸ್ವಾರಸ್ಯಕರವಾದುದು. ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದ ಮುಸ್ತಾಫಾ ದಿನಕ್ಕೆ ಐದು ಬಾರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವವನು. ಭಾರತದ ಬಗ್ಗೆ ಎಲ್ಲವನ್ನೂ ಓದಿಕೊಂಡಿದ್ದೇನೆ ಎನ್ನುತ್ತಾ ಅಮಿತಾವ್ ಜೊತೆಗೆ ವಾಗ್ವಾದಕ್ಕೆ ಇಳಿಯುವವನು.

ಭಾರತದಲ್ಲಿ ಗಂಡನೊಬ್ಬ ಸತ್ತಾಗ ಅವನ ಹೆಂಡತಿಯನ್ನು ಜೀವಂತ ಸುಡುತ್ತಾರೆ, ಇಂದಿರಾಗಾಂಧಿಯ ಮಗ ಸಂಜಯಗಾಂಧಿ ಮುಸ್ಲಿಮರಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಿದ – ಈ ರೀತಿ ಭಾರತದ ಧರ್ಮ, ಪದ್ಧತಿಗಳನ್ನು ಕುರಿತು ತನ್ನ ಪಾಶ್ರ್ವಿಕ ತಿಳುವಳಿಕೆಯಿಂದ ಲೇಖಕರ ಜೊತೆ ಮಾತಿನ ಜಗಳಕ್ಕೆ ಇಳಿಯುವವನು. ಜಬೀರ್‍ನು ಅಮಿತಾವ್ ಜೊತೆಗೆ ಚರ್ಚಿಸುತ್ತಾ ಭಾರತದಲ್ಲಿ ಸುನ್ನತಿ ಮಾಡದೆ ಜನ ಹೇಗೆ ಇರುತ್ತಾರೆ ಎಂದು ಆಶ್ಚರ್ಯಪಡುವವನು. ಸಾಮಾನ್ಯವಾಗಿ ಜನರು ತಮ್ಮ ಸಂಭಾಷಣೆಗಳಲ್ಲಿ ಕಾಮ, ರಾಜಕೀಯ, ಧರ್ಮ ಇವನ್ನು ಚರ್ಚಿಸುತ್ತಾರೆ. ಆದ್ದರಿಂದಲೇ ಜಬೀರ್ ತನ್ನ ಗೆಳೆಯರೊಂದಿಗೆ ಪಿಸುಗುಟ್ಟುತ್ತಾನೆ: ಅಮಿತಾವ್‍ಗೆ ಕಾಮ ಎಂದರೆ ಏನೆಂದು ಗೊತ್ತಿಲ್ಲ. ಧರ್ಮ ಎಂದರೆ ಏನೆಂದು ಗೊತ್ತಿಲ್ಲ. ರಾಜಕೀಯ ಅಂದರೆ ಏನೆಂದು ಗೊತ್ತಿಲ್ಲ. ಅವನು ಒಂದು ಮಗುವಿನಂತೆ. ಹಾಗಾಗಿ ಆತ ಸದಾ ಮಗುವಿನಂತೆ ಪ್ರಶ್ನೆಗಳನ್ನು ಕೇಳುತ್ತಾ ಇರುತ್ತಾನೆ. ಅವನಿಗೆ ಯಾವುದೇ ಉತ್ತರ ಗೊತ್ತಿರುವುದಿಲ್ಲ. ಹೀಗೆ ಅನ್ವೇಷಕ ಅಮಿತಾವ್ ಕೇಳುವ ಪ್ರಶ್ನೆಗಳು ಜಬೀರ್‍ಗೆ ಮುಗ್ಧ ಮಗುವಿನ ಬಾಲಿಶ ಪ್ರಶ್ನೆಗಳು ಎನ್ನಿಸುತ್ತವೆ. ಹೀಗೆ ಸಂಸ್ಕೃತಿಗಳ ಅಪರಿಚಿತತೆ ಮತ್ತು ಭಿನ್ನತೆಗಳೇ ಒಂದು ಸಂಸ್ಕೃತಿಯ ಜನರನ್ನು ಇನ್ನೊಂದು ಸಂಸ್ಕೃತಿಯವರ ಪಾಲಿಗೆ ಮಗುವನ್ನಾಗಿಸುತ್ತವೆ, ಮುಗ್ಧರನ್ನಾಗಿಸುತ್ತವೆ. ಹೀಗಾಗಿ ಈಜಿಪ್ಟ್ ನ ಹುಡುಗ ಜಬೀರ್‍ನ ಪಾಲಿಗೆ ಭಾರತದ ಪ್ರೌಢ ಅಮಿತಾವ್ ಆರು ವರ್ಷದ ಮಗುವಿನಂತೆ.

ಇಂತಹ ಸನ್ನಿವೇಶದಲ್ಲಿ ಭಾರತೀಯ ಅಮಿತಾವ್‍ನ ಗೌರವವನ್ನು ಹೆಚ್ಚಿಸಿದ್ದು ಮಾಚ್ರೌಕ್‍ನು ಪಕ್ಕದ ಪಟ್ಟಣದಿಂದ ತಂದ ಭಾರತದಿಂದ ಆಮದಾದ ನೀರಿನ ಪಂಪೆಂದು. ನೀರಿನ ಪಂಪಿನ ಬಗ್ಗೆ ಏನೂ ಪರಿಜ್ಞಾನ ಇಲ್ಲದಿದ್ದ ಅಮಿತಾವ್‍ನನ್ನು ಮಾಚ್ರೌಕ್ ಬಳಗದವರು ಆತ ಭಾರತೀಯ ಎನ್ನುವ ಕಾರಣಕ್ಕಾಗಿ, ಭಾರತೀಯ ವಸ್ತುಗಳ ಅಧಿಕೃತ ವಕ್ತಾರ ಎಂದು ಭಾವಿಸುವ ಸ್ವಾರಸ್ಯಕರ ಘಟನೆಯೊಂದು ನಡೆಯುತ್ತದೆ. ಜಬೀರ್ ಕೂಡಾ ಭಾರತದಿಂದ ಆಮದಾದ ನೀರಿನ ಪಂಪನ್ನು ಕೊಳ್ಳಲು ಪಕ್ಕದ ಪಟ್ಟಣಕ್ಕೆ ಹೋಗುವಾಗ ನೀರಿನ ಪಂಪಿನ ಬಗ್ಗೆ ಏನೂ ತಿಳಿಯದ ಭಾರತೀಯ ಅಮಿತಾವ್‍ನನ್ನು ತಜ್ಞನ ರೂಪದಲ್ಲಿ ಕರೆದೊಯ್ಯುತ್ತಾನೆ. ಈ ಸಂದರ್ಭದಲ್ಲಿ ಲೇಖಕರ ವಿವರಣೆ ಮಾರ್ಮಿಕವಾಗಿದೆ: ‘ನನ್ನ ದೇಶದ ನೀರಿನ ಪಂಪೆಂದು ನನಗೆ ಇಂತಹ ಗೌರವವನ್ನು ತಂದುಕೊಟ್ಟಿತು. ಒಂದು ವೇಳೆ ನನ್ನ ದೇಶ ಇದಕ್ಕಿಂತ ದೊಡ್ಡ, ಇದಕ್ಕಿಂತ ಉತ್ತಮ ಮತ್ತು ಇದಕ್ಕಿಂತ ಪ್ರಭಾವಶಾಲಿಯಾದ ಕಾರುಗಳನ್ನು, ಟ್ರ್ಯಾಕ್ಟರುಗಳನ್ನು ಅಥವಾ ಅದಕ್ಕಿಂತ ಇನ್ನೂ ಹೆಚ್ಚಾಗಿ ಹಡಗುಗಳನ್ನು ಟ್ಯಾಂಕುಗಳನ್ನು ರಫ್ತು ಮಾಡುತ್ತಿದ್ದರೆ ಜಬೀರನ ಕಣ್ಣುಗಳಲ್ಲಿ ನನ್ನ ಗೌರವ ಎಷ್ಟು ಎತ್ತರಕ್ಕೆ ಏರುತ್ತಿತ್ತು?’ ಆಧುನಿಕ ಜಗತ್ತಿನಲ್ಲಿ ಯಂತ್ರನಾಗರಿಕತೆಯು ಜನರಿಗೆ ಪ್ರತಿಷ್ಠೆಯನ್ನು ತಂದುಕೊಡುವ ರೀತಿಯನ್ನು ಲೇಖಕರು ನವುರಾದ ವ್ಯಂಗ್ಯದ ಮೂಲಕ ಪ್ರಕಟಿಸುತ್ತಾರೆ.

‘ನಶಾವಿ’ ಎನ್ನುವ ಅಧ್ಯಾಯದಲ್ಲಿ ಅಮಿತಾವ್ 1988ರಲ್ಲಿ ಮತ್ತೆ ಲಟಾಈಫಾಕ್ಕೆ ಬಂದದ್ದು ಮತ್ತು ಅಲ್ಲಿಂದ ನಶಾವಿಗೆ ಹೋಗಿ ನೆಲೆವೂರಿದ ಅನುಭವಗಳನ್ನು ಕೊಡುತ್ತಾರೆ. ನಶಾವಿಯಲ್ಲಿ ಅಮಿತಾವ್ ಭೇಟಿಯಾದ ಉತ್ಸಾಜ್ ಸಬ್ರಿ ಪ್ರಭಾವಶಾಲಿ ಮಾತುಗಾರ, ಮಧ್ಯಯುಗೀನ ಈಜಿಪ್ಟ್ ಇತಿಹಾಸದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾತ. ಅಮಿತಾವ್ ಹೋದಲ್ಲೆಲ್ಲ ಸಾಮಾನ್ಯವಾಗಿ ಅಲ್ಲಿನ ಜನ ಕೇಳುತ್ತಿದ್ದ ಪ್ರಶ್ನೆಗಳೆಂದರೆ ಭಾರತದಲ್ಲಿ ಸತ್ತವರನ್ನು ಸುಡುತ್ತಾರೆಯೇ, ದನಗಳನ್ನು ಪೂಜಿಸುತ್ತಾರೆಯೇ – ಇಂತಹವು. ಉತ್ಸಾಜ್ ಸಬ್ರಿಯ ಆಪ್ತರ ಸಮೂಹದಲ್ಲಿ ಭಾರತ ಮತ್ತು ಈಜಿಪ್ಟ್ ಗಳ ಐತಿಹಾಸಿಕ ಸಂಬಂಧಗಳ ಚರ್ಚೆ ನಡೆಯುತ್ತದೆ. ಆದರೆ ಲೇಖಕರಿಗೆ ಹೆಚ್ಚು ಮುಖ್ಯವಾಗುವುದು ಅಲ್ಲಿನ ಜನರ ಖಾಸಗಿ ಬದುಕು ಮತ್ತು ಅದರಿಂದ ಅಭಿವ್ಯಕ್ತಗೊಳ್ಳುವ ವಿಶಿಷ್ಟ ನಡವಳಿಕೆಗಳು. ನಶಾವಿಯಲ್ಲಿ ಭೇಟಿಯಾದ ಜಗ್‍ಲೋನ ಸ್ವಭಾವವನ್ನು ವರ್ಣಿಸುತ್ತಾ ಒಮ್ಮೆ ಆತ ತಾನು ಪ್ರೇಮಿಸಿದ ಹೆಣ್ಣಿನ ಮನೆಯ ಮುಂದೆ ಕಿಟಕಿಯ ಬಳಿ ಮೊಣಕಾಲೂರಿ ಅವಳ ಉಸಿರಾಟದ ಶಬ್ದವನ್ನು ಕೇಳುತ್ತಾ ಇಡೀ ರಾತ್ರಿಯನ್ನು ಕಳೆದ ವಿವರವೊಂದನ್ನು ಕೊಡುತ್ತಾರೆ.

‘ಮಂಗಳೂರು’ ಎನ್ನುವ ಅಧ್ಯಾಯದಲ್ಲಿ ಬೆನ್‍ಈಜೂ ಮಂಗಳೂರಿಗೆ ಬಂದ ಸಂದರ್ಭ, ಆ ಕಾಲದ ಪ್ರವಾಸಿಗರು ಮಂಗಳೂರು ಮತ್ತು ಮಲಬಾರಿನ ಬಗ್ಗೆ ಕೊಟ್ಟಿರುವ ದಾಖಲೆಗಳ ಚಿತ್ರಣಗಳು ದೊರೆಯುತ್ತವೆ. 1990ರ ಬೇಸಿಗೆಯ ಒಂದು ದಿನ ಅಮಿತಾವ್ ಘೋಷ್ ಮಂಗಳೂರಿನಲ್ಲಿ ನನ್ನನ್ನು ಭೇಟಿ ಮಾಡಿದ ಸಂದರ್ಭವನ್ನು ಕಥನದ ಶೈಲಿಯಲ್ಲಿ ವಿವರಿಸಿದ್ದಾರೆ. ನಮ್ಮ ಸಂಭಾಷಣೆ, ಕೋಟಿಚೆನ್ನಯ ಸಿನೆಮಾವನ್ನು ಟಿ.ವಿ.ಯಲ್ಲಿ ನೋಡಿದ್ದು, ‘ಬೊಮ್ಮ’ ಬೆರ್ಮೆರ್ ಬಗೆಗಿನ ವಿವರಣೆ ಇವೆಲ್ಲ ಸಂಶೋಧನೆ ಮತ್ತು ಬರವಣಿಗೆಯ ಮಿಶ್ರಣದ ರೀತಿಯಲ್ಲಿ ಕಾಣಿಸಿಕೊಂಡಿವೆ. ಬೆನ್‍ಈಜೂವಿಗೆ ಪತ್ರ ಬರೆದ ಸಂದರ್ಭದಲ್ಲಿ ಬೊಮ್ಮ ಈಜಿಪ್ಟ್ ನ ಅಡೆನ್‍ನಲ್ಲಿದ್ದ. ಪ್ರವಾಸ ಮತ್ತು ವ್ಯಾಪಾರದ ಉದ್ದೇಶಗಳನ್ನು ಜೊತೆ ಮಾಡಿ ಬೆನ್‍ಈಜೂ ಬೊಮ್ಮನನ್ನು ಮಂಗಳೂರಿನಿಂದ ಈಜಿಪ್ಟ್ ಗೆ ರವಾನಿಸಿದ. ಬೊಮ್ಮ ಮಂಗಳೂರಿಗೆ ತೆರಳಿದಾಗ ಅನೇಕ ಬೆಲೆಬಾಳುವ ವಸ್ತುಗಳನ್ನು ತರುತ್ತಾನೆ. 93 ದೀನಾರುಗಳಷ್ಟು ಬೆಲೆಬಾಳುವ ವಸ್ತುಗಳ ದೊಡ್ಡ ಮೊತ್ತವನ್ನೇ ತಂದ ಹಾಗೆ ಉಲ್ಲೇಖ ದೊರೆಯುತ್ತದೆ.

ಬಟ್ಟೆಗಳು, ಮನೆಯ ಪಾತ್ರೆಗಳು, ಬೆನ್‍ಈಜೂ ಮತ್ತು ಅವನ ಕುಟುಂಬದವರಿಗೆ ಉಡುಗೊರೆಗಳು ಇವೆಲ್ಲ ಅದರಲ್ಲಿ ಸೇರಿರುತ್ತವೆ. ಬೆನ್‍ಈಜೂ ತಾನು ಮಂಗಳೂರಿನಲ್ಲಿ ವ್ಯಾಪಾರಿಯಾಗಿ ನೆಲೆಯೂರಿದ ಕೂಡಲೇ ಬೊಮ್ಮನನ್ನು ತನ್ನ ವ್ಯಾಪಾರದ ಏಜೆಂಟ್ ಮತ್ತು ಸಹಾಯಕನಾಗಿ ತೆಗೆದುಕೊಂಡ ಹಾಗೆ ಕಾಣಿಸುತ್ತದೆ. ಹಾಗಾಗಿ ಬೊಮ್ಮನು ಬೆನ್ ಈಜೂವಿನ ಗುಲಾಮ ಆಗಿದ್ದ ಎನ್ನುವ ಪದ ಪ್ರಯೋಗ ಸಂಪೂರ್ಣ ಸರಿಯೆನ್ನಿಸುವುದಿಲ್ಲ ಎನ್ನುತ್ತಾರೆ ಅಮಿತಾವ್. ಈ ಸಂದರ್ಭದಲ್ಲಿ ಗುಲಾಮತನದ ಕುರಿತ ಚರ್ಚೆಯನ್ನು ನಡೆಸುತ್ತಾರೆ. ಮಧ್ಯಯುಗೀನ ಇತಿಹಾಸದಲ್ಲಿ ಗುಲಾಮ ಪದ್ಧತಿಯ ವಿವರಗಳನ್ನು ಅಪೂರ್ವ ಅಧಿಕೃತ ದಾಖಲೆಗಳ ಮೂಲಕ ಚರ್ಚಿಸಿದ್ದಾರೆ. ಬೊಮ್ಮನು ತುಳುನಾಡಿನ ಮೊಗವೀರ ಜನಾಂಗದವನಾಗಿರಬಹುದೇ ಎನ್ನುವ ಊಹೆಯೊಂದನ್ನೂ ಅಮಿತಾವ್ ಮುಂದಿಡುತ್ತಾರೆ. ಆಧುನಿಕ ಮಂಗಳೂರಿನಲ್ಲಿ ಮೊಗವೀರ ಸಂಸ್ಕೃತಿ ಮತ್ತು ಬೊಬ್ಬರ್ಯ ಭೂತದ ಆರಾಧನಾ ಸಂಕೀರ್ಣವು ಪ್ರಾಚೀನ ಸಂಕೇತಗಳನ್ನು ಕಳೆದುಕೊಂಡು ವೈದಿಕ ಹಿಂದೂ ಧರ್ಮವಾಗಿ ರೂಪಾಂತರ ಹೊಂದುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.

ಅಮಿತಾವ್ ಮತ್ತೆ ಈಜಿಪ್ಟ್ ಗೆ ಹೋದಾಗ ಈಜಿಪ್ಟ್ ಮುಸ್ಲಿಂ ಮತೀಯತೆಗೆ ಹೆಚ್ಚು ಹೆಚ್ಚು ಚಲಿಸುತ್ತಿರುವುದನ್ನು ಗಮನಿಸುತ್ತಾರೆ. ಜೊತೆಗೆ ಮುಸ್ಲಿಂ ದೇಶಗಳೇ ಪರಸ್ಪರ ಯುದ್ಧ ಮಾಡುವ ಸಂದರ್ಭಗಳನ್ನೂ ತಿಳಿಸುತ್ತಾರೆ. ಧರ್ಮ ಮತ್ತು ರಾಜಕಾರಣ ತನ್ನ ಹೊರ ಮೈಯಲ್ಲಿ ಮನುಷ್ಯರನ್ನು ಗುಲಾಮರನ್ನಾಗಿಸುತ್ತದೆ. ಈ ದೃಷ್ಟಿಯಿಂದ ಗುಲಾಮತನ ಎನ್ನುವುದು ಮಧ್ಯಯುಗೀನ ಕಾಲದ ಭಾರತ ಈಜಿಪ್ಟ್ಗಳಿಗೆ ಮಾತ್ರ ಸೀಮಿತವಾದುದಲ್ಲ. ಆಧುನಿಕ ಸಂದರ್ಭದಲ್ಲಿ ಅನೇಕ ಬಾರಿ ಧರ್ಮ ಮತ್ತು ರಾಜಕಾರಣ ಇವು ಬೌದ್ಧಿಕ ದಾಸ್ಯವನ್ನು ಉಂಟುಮಾಡುತ್ತವೆ. ಹನ್ನೆರಡನೆಯ ಶತಮಾನದಲ್ಲಿ ಮಂಗಳೂರಿನಿಂದ ಈಜಿಪ್ಟ್ ನ ಆಡೆನ್‍ಗೆ ವ್ಯಾಪಾರದ ಏಜೆಂಟ್ ಆಗಿ ಹೋದ ಬೊಮ್ಮನನ್ನು ಇತಿಹಾಸಕಾರರು ‘ಗುಲಾಮ’ ಎಂದು ಭಾವಿಸುತ್ತಾರೆ. ಆದರೆ ಆಧುನಿಕ ಕಾಲದಲ್ಲಿ ಈಜಿಪ್ಟ್ ನ ಹಳ್ಳಿಗಳ ಅಂತರಾಳವನ್ನು ಪ್ರವೇಶಿಸಿದ ಅಮಿತಾವ್, ವಿದ್ಯಾವಂತರು ಹೆಚ್ಚು ಮತಾಂಧರಾಗುತ್ತಿರುವುದನ್ನು ಗಮನಿಸುತ್ತಾರೆ. ಯಂತ್ರನಾಗರಿಕತೆಯನ್ನು ಬೆಳವಣಿಗೆ ಎಂದು ಭಾವಿಸುವ ಮನೋಧರ್ಮವು ಬಲವಾಗುತ್ತಿರುವುದು ‘ಅಭಿವೃದ್ಧಿಶೀಲ ದೇಶಗಳು’ ಎಂದು ಪಾಶ್ಚಾತ್ಯ ದೇಶಗಳಿಂದ ಕರೆಯಲ್ಪಡುವ ಭಾರತ ಮತ್ತು ಈಜಿಪ್ಟ್ ಗಳ ದುರಂತ. ಈ ದೇಶಗಳ ಸೃಜನಶೀಲ ಶಕ್ತಿಗಳು ಬೌದ್ಧಿಕ, ಮತೀಯ ಮತ್ತು ಯಂತ್ರ ನಾಗರಿಕತೆಯ ಗುಲಾಮತನವನ್ನು ಅಪ್ಪುತ್ತಾ ಬರುತ್ತವೆ ಎನ್ನುವ ಧ್ವನಿ ಈ ಕೃತಿಯ ಉದ್ದಕ್ಕೂ ವ್ಯಕ್ತವಾಗುತ್ತದೆ. ಇರಾಕ್ ಯುದ್ಧದ ಸಂದರ್ಭದಲ್ಲಿ ಅಲ್ಲಿದ್ದ ಸುಮಾರು ಮೂರು ಮಿಲಿಯ ಈಜಿಪ್ಟಿಯನರು ತಮ್ಮ ಟಿ.ವಿ. ಸೆಟ್‍ಗಳನ್ನು ಬೆನ್ನ ಮೇಲೆ ಹೊರುತ್ತಾ ಕಾಲ್ನಡಿಗೆಯಲ್ಲಿ ಮರಳಿ ಊರಿಗೆ ಬರುವ ಪ್ರಯಾಸಕರ ಪ್ರಯಾಣದ ಚಿತ್ರವನ್ನು ಈಜಿಪ್ಟ್ ನ ಹಳ್ಳಿಯಲ್ಲಿ ಅಮಿತಾವ್ ಜನರ ಜೊತೆಗೆ ಟಿ.ವಿ.ಯಲ್ಲಿ ನೋಡುವ ಸನ್ನಿವೇಶದೊಂದಿಗೆ ಈ ಕೃತಿ ಮುಕ್ತಾಯವಾಗುತ್ತದೆ. ಲೇಖಕರು ಹೇಳುತ್ತಾರೆ: ‘ಅಲ್ಲಿ ಗುಂಪುಗಳ ಹೊರತಾಗಿ ಯಾರ ಮುಖವೂ ಕಾಣಿಸುತ್ತಿಲ್ಲ. ನಬೀರ್ ಇತಿಹಾಸದ ಅನಾಮಧೇಯತ್ವದಲ್ಲಿ ಕಣ್ಮರೆಯಾಗಿ ಹೋಗಿದ್ದಾನೆ.’

ಇತಿಹಾಸದ ಗರ್ಭದಲ್ಲಿ ಅನಾಮಧೇಯರಾಗಿ ಉಳಿಯುವ ಜನರ ಖಾಸಗಿ ಬದುಕುಗಳ ಒಳಗೆ ಪ್ರವೇಶಿಸಿ ಅನ್ವೇಷಣೆ ಮಾಡಿ ಅಲ್ಲಿನ ಅದ್ಭುತ ಜಗತ್ತುಗಳನ್ನು ಅನಾವರಣ ಮಾಡುವ ಕೃತಿ ‘In An Antique Land’. ಅದು ಮಂಗಳೂರಿನ ಬೊಮ್ಮ ಆಗಿರಬಹುದು. ಈಜಿಪ್ಟ್ ನ ನಬೀರ್ ಆಗಿರಬಹುದು. ಆದ್ದರಿಂದಲೇ ಇದು ಕೇವಲ ದಾಖಲೆಗಳ, ಉಲ್ಲೇಖಗಳ, ಸಂಗತಿಗಳ ಸಂಗ್ರಹ ಅಲ್ಲ; ಪತ್ರಗಳ ಅಂಚುಗಳಲ್ಲಿ, ಇತಿಹಾಸದ ಅಡಿಟಿಪ್ಪಣಿಗಳಲ್ಲಿ, ಈಜಿಪ್ಟಿನ ಹಳ್ಳಿಗಳ ಖಾಸಗಿ ಬದುಕಿನಲ್ಲಿ ಕಾಣಿಸಿಕೊಳ್ಳುವ ಅಪೂರ್ವ ಸಂಗತಿಗಳನ್ನು ಗುರುತಿಸುವ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಅನ್ವೇಷಣೆಯ ಕಥನ. ಹೀಗಾಗಿಯೇ ಈ ಕೃತಿಯು ಮಾನವವಿಜ್ಞಾನ, ಇತಿಹಾಸ ಸಂಶೋಧನೆ, ಪ್ರವಾಸ ಕಥನ, ಕಾದಂಬರಿ – ಇವೆಲ್ಲವನ್ನು ಒಳಗೊಂಡೂ ಇವೆಲ್ಲವುಗಳ ಸಮಷ್ಟಿಗಿಂತ ಹೆಚ್ಚಿನ ಆಯಾಮಗಳನ್ನುಳ್ಳ ಮಹತ್ತ್ವ್ವದ ಗ್ರಂಥ.

15 ಜನವರಿ 1992, ‘ಗಿಳಿಸೂವೆ’ ಕೃತಿಯಿಂದ  

 

‍ಲೇಖಕರು Avadhi

15 December, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading