ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಿವ್ಯಕ್ತಿ ಸ್ವಾತಂತ್ರ್ಯ- ಅಕಾಲಿಕ ಮರಣ

-ನಾ ದಿವಾಕರ

ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಎರಡು ವಿಭಿನ್ನ ವಿದ್ಯಮಾನಗಳು ಒಟ್ಟೊಟ್ಟಿಗೆ ಸಾಗುತ್ತಿವೆ. ಒಂದು ಕಡೆ ಸಾಂವಿಧಾನಿಕ ಆಶಯಗಳನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ಕಾಪಾಡುವ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಭ್ರಾತೃತ್ವ ಮತ್ತು ಪ್ರಾಮಾಣಿಕತೆಯನ್ನು ಮೂಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ. ಮತ್ತೊಂದೆಡೆ ಇದೇ ಸಾಂವಿಧಾನಿಕ ಚೌಕಟ್ಟಿನ ಒಳಗೇ ಸಮಾಜದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸುವ, ದ್ವೇಷ, ಅಸೂಯೆಗಳನ್ನು ಸೃಷ್ಟಿಸುವ, ಅಸಹನೆಯನ್ನು ಹೆಚ್ಚಿಸುವ ಪ್ರಯತ್ನಗಳೂ ನಡೆಯುತ್ತಿವೆ. ಈ ಬೆಳವಣಿಗೆ ಭಾರತಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗದು. ವಿಶ್ವದಾದ್ಯಂತ ಕಂಡುಬರುತ್ತಿರುವ ವಾಸ್ತವ ಇದು. ಅನೇಕ ಇಸ್ಲಾಮಿಕ್ ರಾಷ್ಟ್ರಗಳಲ್ಲೂ ಸಹ ಈ ಎರಡೂ ಬಣಗಳ ನಡುವಿನ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ ಭಾರತದಂತಹ ಬಹುಸಂಸ್ಕೃತಿ ರಾಷ್ಟ್ರದಲ್ಲಿ ಇಂತಹ ವೈಪರೀತ್ಯಗಳು ಗಂಭೀರ ಸವಾಲುಗಳನ್ನು ಸೃಷ್ಟಿಸುತ್ತವೆ. ಸ್ವಾತಂತ್ರ್ಯಪೂರ್ವದಿಂದಲೂ ನಮ್ಮ ದೇಶದಲ್ಲಿ ಈ ಧೋರಣೆಗಳು ಪ್ರಧಾನವಾಗಿ ವ್ಯಕ್ತವಾಗುತ್ತಲೇ ಬಂದಿವೆ. ರಾಷ್ಟ್ರೀಯ ಮುಖ್ಯವಾಹಿನಿಯಲ್ಲೇ ಈ ಧೋರಣೆಗಳು ಸ್ಪಷ್ಟವಾಗಿ ಗೋಚರಿಸಿವೆ.

ಕೆಲವು ವಿಶಿಷ್ಟ ಸಂದರ್ಭಗಳಲ್ಲಿ, ರಾಜಕೀಯ ಸನ್ನಿವೇಶಗಳಿಗೆ ಬಲಿಯಾಗಿ ಈ ಎರಡೂ ಧೋರಣೆಗಳನ್ನು ಪ್ರತಿನಿಧಿಸುವ ಜನಸಮುದಾಯಗಳು ಒಂದೇ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದನ್ನೂ ಇತಿಹಾಸದಲ್ಲಿ ಕಾಣಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ಈ ಎರಡು ಬಣಗಳ ವೈರುಧ್ಯಗಳು ಭಾರತೀಯ ಸಮಾಜದಲ್ಲಿ ಶಾಶ್ವತವಾದ ಬಿರುಕು ಮೂಡಿಸುವಂತಹ ಪರಿಸ್ಥಿತಿ ಉಂಟುಮಾಡಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸಾಮಾಜಿಕ-ಸಾಂಸ್ಕೃತಿಕ ಮತ್ತು ಸಾಮುದಾಯಿಕ ನೆಲೆಗಟ್ಟಿನಲ್ಲಿ ವ್ಯಕ್ತವಾಗುವ ಈ ಭಿನ್ನ ಧೋರಣೆಗಳು ರಾಜಕೀಯ ವಿದ್ಯಮಾನಗಳಿಗೆ ಪೂರಕವಾಗಿ ಪರಿಣಮಿಸಿದಾಗ ಒಂದು ನಿದರ್ಿಷ್ಟ ಆಯಾಮವನ್ನೇ ಪಡೆಯುತ್ತವೆ. ಎಪ್ಪತ್ತರ ದಶಕದ ಸಾಮಾಜಿಕ ಅಭ್ಯುದಯದ ಆಶಯಗಳು ಮತ್ತು 1990ರ ದಶಕದ ಧಾಮರ್ಿಕ ಪ್ರಚೋದನೆಯ ಆಶಯಗಳನ್ನು ತುಲನಾತ್ಮಕವಾಗಿ ನೋಡಿದಾಗ ಈ ಸಮಸ್ಯೆಯನ್ನು ಗ್ರಹಿಸಬಹುದು. ಸಮುದಾಯ ಮತ್ತು ಸಂಸ್ಕೃತಿಯ ಸಂಘರ್ಷಎಪ್ಪತ್ತರ ದಶಕದಲ್ಲಿ ಭಾರತೀಯ ಸಮಾಜ ಕಂಡ ಬೆಳವಣಿಗೆಗಳು ಒಂದು ರೀತಿಯಲ್ಲಿ ದೇಶದ ಸಾಮಾಜಿಕ ಚೌಕಟ್ಟನ್ನು ಮಾತ್ರವಲ್ಲದೆ ರಾಜಕೀಯ ಚಿತ್ರಣವನ್ನೂ ಬದಲಿಸಿದ್ದವು. ಎರಡು ದಶಕಗಳ ಸ್ವಾತಂತ್ರ್ಯದ ಫಲಾನುಫಲಗಳು ಕೆಲವೇ ನಿದರ್ಿಷ್ಟ ವರ್ಗಗಳ ಪಾಲಾಗುತ್ತಿದ್ದುದನ್ನು ಮೌನವಾಗಿಯೇ ಸಹಿಸುತ್ತಿದ್ದ ಜನಸಮುದಾಯಗಳು ಹಠಾತ್ತನೆ ಜಾಗೃತವಾಗಿದ್ದವು. ಸಮಾಜದ ಹಿಂದುಳಿದ, ಶೋಷಿತ ವರ್ಗಗಳು ತಮ್ಮ ಸಾಂವಿಧಾನಿಕ ಮತ್ತು ಮಾನವೀಯ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತವಾದವು. ಸಮಾಜವಾದದ ಹೆಸರಿನಲ್ಲಿ ಬಂಡವಾಳಶಾಹಿಗಳು ಸೃಷ್ಟಿಸಿದ್ದ ಪರಾವಲಂಬಿ ವ್ಯವಸ್ಥೆಯ ಒಳ ಹುಳುಕುಗಳು ಜನತೆಯ ಗಮನಕ್ಕೆ ಬರಲಾರಂಭಿಸಿದವು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಪ್ರಭುತ್ವ ಗ್ರಹಿಸಿದ ರೀತಿಗೂ ಜನಸಮುದಾಯಗಳು ಗ್ರಹಿಸಿದ ರೀತಿಗೂ ಅಪಾರ ವ್ಯತ್ಯಾಸವಿದ್ದುದು ಜನಸಾಮಾನ್ಯರ ಗಮನಕ್ಕೆ ಬಂದಿತ್ತು. ಪರಿಣಾಮ, ಜನತೆ ತಮ್ಮ ಹಕ್ಕೊತ್ತಾಯಗಳಿಗಾಗಿ ಪ್ರತಿಭಟಿಸತೊಡಗಿದರು. ಸಾಂವಿಧಾನಿಕ ಹಕ್ಕುಗಳಿಗಾಗಿ ಪ್ರತಿಪಾದಿಸತೊಡಗಿದರು. ಆಳ್ವಿಕರ ಕೃತ್ರಿಮಗಳನ್ನು ಬಯಲಿಗೆಳೆಯಲಾರಂಭಿಸಿದರು. ಇದೇ ವೇಳೆ ಅಲ್ಲಿಯವರೆಗೂ ಸುಪ್ತವಾಗಿದ್ದ ಅನೇಕ ಹೊಸ ಚಿಂತನೆಗಳು ಜನಸಾಮಾನ್ಯರನ್ನು ತಲುಪಲಾರಂಭಿಸಿದವು. ಅಂಬೇಡ್ಕರ್ ಚಿಂತನೆ, ಬೌದ್ಧ ಧರ್ಮದ ಚಿಂತನೆ, ಎಡಪಂಥೀಯ ವಿಚಾರಧಾರೆ, ಲೋಹಿಯಾ ಚಿಂತನೆಗಳು ಜನತೆಗೆ ತಲುಪಿದ್ದವು. ಕಮ್ಯುನಿಸ್ಟ್ ಸಿದ್ಧಾಂತದ ವಿಭಿನ್ನ ಸ್ವರೂಪಗಳು ವ್ಯಕ್ತವಾಗತೊಡಗಿದವು. ಸಂಸದೀಯ ಮಾರ್ಗವನ್ನು ತ್ಯಜಿಸಿ ಪ್ರಭುತ್ವವನ್ನು ನೇರವಾಗಿ ಪ್ರತಿರೋಧಿಸುವ ಸಶಸ್ತ್ರ ಹೋರಾಟಗಳು ರೂಪುಗೊಂಡವು. ಪ್ರಭುತ್ವ ಪ್ರೇರಿತ ಮಾಧ್ಯಮಗಳು ಈ ಸಶಸ್ತ್ರ ಹೋರಾಟಗಳನ್ನು ನಕ್ಸಲೀಯರೊಂದಿಗೆ ಮಾತ್ರ ಸಮೀಕರಿಸಿದರೂ ದೇಶದ ಈಶಾನ್ಯ ರಾಜ್ಯಗಳಲ್ಲಿ ಇನ್ನೂ ಪ್ರಬಲ ಹೋರಾಟಗಳು ರೂಪುಗೊಂಡಿದ್ದನ್ನು, ಇಂದಿಗೂ ಸಕ್ರಿಯವಾಗಿರುವುದನ್ನು ಅಲಕ್ಷಿಸಲಾಗುವುದಿಲ್ಲ.

ಈ ಎಲ್ಲಾ ಹೋರಾಟಗಳ ಮೂಲ ಇರುವುದು ಬಂಡವಾಳದ ಕ್ರೋಢೀಕರಣ, ಉತ್ಪಾದಕೀಯ ಶಕ್ತಿಗಳ ನಿರ್ಲಕ್ಷ್ಯ ಮತ್ತು ಬಂಡವಾಳದ ಹಂಚಿಕೆಯಲ್ಲಿಯೇ. ಹಾಗಾಗಿ ದೇಶದ ಸಾಮಾಜಿಕ-ಆಥರ್ಿಕ ವ್ಯವಸ್ಥೆಯಿಂದ ಅಸಂತುಷ್ಟರಾದ ಜನಸಮುದಾಯಗಳು ಈ ಹೋರಾಟಗಳ ಬೆನ್ನೆಲುಬಾದವು. ಈ ಸಂದರ್ಭದಲ್ಲಿ ಪ್ರಭುತ್ವದ ಮುಂದೆ ಎರಡು ಆದ್ಯತೆಗಳಿದ್ದವು. ಒಂದು ಪ್ರಜೆಗಳ ಆಶೋತ್ತರಗಳ ಈಡೇರಿಕೆಗಾಗಿ ವ್ಯವಸ್ಥೆಯನ್ನು ಬದಲಿಸುವುದು. ಎರಡನೆಯದು ಪ್ರತಿರೋಧದ ದನಿಯನ್ನು ಹತ್ತಿಕ್ಕುವ ಮೂಲಕ ಇರುವ ವ್ಯವಸ್ಥೆಯನ್ನೇ ವ್ಯವಸ್ಥಿತವಾಗಿ ಬಲಪಡಿಸುವುದು. ಭಾರತದ ಆಳ್ವಿಕರು ಮತ್ತು ಪ್ರಭುತ್ವ ಆಯ್ದುಕೊಂಡಿದ್ದು ಎರಡನೆಯ ಆದ್ಯತೆಯನ್ನು. ಪರಿಣಾಮ ತುತರ್ುಪರಿಸ್ಥಿತಿ. ತುತರ್ುಪರಿಸ್ಥಿತಿಯ ಸಂದರ್ಭದಲ್ಲಿ ಭಾರತ ಕಂಡ ವಿಪ್ಲವಕಾರಿ ಸನ್ನಿವೇಶ ಭಾರತದ ರಾಜಕೀಯ ಚಿತ್ರಣವನ್ನು ಬದಲಾಯಿಸಿತೇ ಹೊರತು, ಪ್ರಭುತ್ವದ ಲಕ್ಷಣಗಳನ್ನಾಗಲೀ, ಸಾಮಾಜಿಕ ಲಕ್ಷಣಗಳನ್ನಾಗಲೀ ಬದಲಾಯಿಸಲಿಲ್ಲ. ತದ್ವಿರುದ್ಧವಾಗಿ ಈ ಸ್ಥಾಪಿತ ಪ್ರಭುತ್ವ ಲಕ್ಷಣಗಳು ಇನ್ನೂ ಪ್ರಬಲವಾದವು. ಸಾಮಾಜಿಕ ಚೌಕಟ್ಟು ಮತ್ತಷ್ಟು ಬಿಗಿಯಾಗಲಾರಂಭಿಸಿತು.

ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ರಾಜಕೀಯ ಅನಿವಾರ್ಯತೆಗೆ ಬಲಿಯಾಗಿ ಕೇವಲ ಘೋಷಣೆಯ ವಸ್ತುಗಳಾಗಿ ಪರಿಣಮಿಸಿದವು. ಈ ಘೋಷಣೆಗಳನ್ನು ಕಾರ್ಯರೂಪಕ್ಕೆ ತರುವ ಕೆಲವೇ ಪ್ರಯತ್ನಗಳು ನಡೆದಿತ್ತಾದರೂ ಮತೀಯ ಅಸ್ಮಿತೆಗಳ ಉನ್ಮಾದ ಈ ಪ್ರಯತ್ನಗಳನ್ನು ಹೊಸಕಿ ಹಾಕುವುದರಲ್ಲಿ ಯಶಸ್ವಿಯಾಗಿತ್ತು. ಜನತೆಯ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಆಡಳಿತ ಯಂತ್ರ ಅನುಸರಿಸುವ ಕಾನೂನಾತ್ಮಕ ಕ್ರಮಗಳಿಗಿಂತಲೂ, ಧರ್ಮ, ಜಾತಿ ಮತ್ತು ಭಾಷೆಗಳು ಸೃಷ್ಟಿಸುವ ಭಾವನಾತ್ಮಕ ಉನ್ಮಾದವೇ ಹೆಚ್ಚು ಪರಿಣಾಮಕಾರಿ ಎಂಬ ವಾಸ್ತವವನ್ನು ರಾಜಕೀಯ ಪಕ್ಷಗಳು ಗ್ರಹಿಸಿದ್ದವು. ಈ ಗ್ರಹೀತಗಳ ನೇರ ಪರಿಣಾಮವನ್ನು ಜಾತಿವಾರು ಪಕ್ಷಗಳ ಸ್ಥಾಪನೆ ಮತ್ತು ಹಿಂದುತ್ವವಾದಿ ರಾಜಕಾರಣದಲ್ಲಿ ಕಾಣಬಹುದು.ದ್ವೇಷದ ಬೀಜಗಳ ಬಿತ್ತನೆ1980-90ರ ದಶಕದಲ್ಲಿ ಸಂಭವಿಸಿದ ರಾಜಕೀಯ ಘಟನೆಗಳು ದೇಶದ ರಾಜಕೀಯದಲ್ಲಿ ಮೂಡಿಸಿದ ಬದಲಾವಣೆಗಳು ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರವನ್ನೂ ಅಷ್ಟೇ ಪ್ರಭಾವಶಾಲಿಯಾಗಿ ಬಾಧಿಸಿದ್ದನ್ನು ಕಾಣಬಹುದು. ಉಲ್ಬಣಿಸಿದ ಕಾಶ್ಮೀರ ಸಮಸ್ಯೆ, ಸಿಖ್ ಮೂಲಭೂತವಾದಿಗಳ ಖಾಲಿಸ್ತಾನ್ ಚಳುವಳಿ, ಇಂದಿರಾ-ರಾಜೀವ್ ಅವರ ಹತ್ಯೆ, ಈಶಾನ್ಯ ರಾಜ್ಯಗಳ ಪ್ರತ್ಯೇಕತೆಯ ಕೂಗು, ಅಯೋಧ್ಯಾ ವಿವಾದ ಈ ಎಲ್ಲಾ ಬೆಳವಣಿಗೆಗಳು ಪ್ರಭುತ್ವಕ್ಕೆ ಸವಾಲಾಗಿ ಪರಿಣಮಿಸಿದ್ದವು. ಈ ವಿದ್ಯಮಾನಗಳು ದೇಶದ ಸಾಮಾಜಿಕ ಚೌಕಟ್ಟಿನಲ್ಲೂ ಹೊಸ ಧೋರಣೆ, ಮನೋಭಾವಗಳನ್ನು ಸೃಷ್ಟಿಸಿದ್ದವು. ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯಿಂದ ಪ್ರಭುತ್ವವೂ ಈ ವಿದ್ಯಮಾನಗಳನ್ನು ಮತ್ತಷ್ಟು ಕ್ಲಿಷ್ಟಗೊಳಿಸಿತೇ ಹೊರತು ಪರಿಹರಿಸುವ ಮಾರ್ಗಗಳನ್ನು ಕಂಡುಕೊಳ್ಳಲಿಲ್ಲ. ಸಾಮುದಾಯಿಕ ಅಸ್ಮಿತೆಗಳು ಮಾನವೀಯ ಮೌಲ್ಯಗಳನ್ನು ಮೀರಿ ನಿಂತವು. ರಾಷ್ಟ್ರದ ಪರಿಕಲ್ಪನೆಯನ್ನೇ ಪ್ರಶ್ನಿಸುವಂತಿದ್ದ ಈ ಬೆಳವಣಿಗೆಗಳನ್ನು ಪ್ರಾಮಾಣಿಕವಾಗಿ ಎದುರಿಸಿ ಪರಿಹಾರ ಮಾರ್ಗಗಳನ್ನು ಕುರಿತು ಯೋಚಿಸಿದ್ದರೆ ಭಾರತೀಯ ಪ್ರಭುತ್ವ ಒಂದು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಮುನ್ನಡೆಯಬಹುದಿತ್ತು. ಆದರೆ ಈ ಚಳುವಳಿಗಳು ಸೃಷ್ಟಿಸಿದ ಸಾಮಾಜಿಕ ಪ್ರಕ್ಷುಬ್ಧತೆ ಸೌಹಾರ್ದತೆಗೆ ಧಕ್ಕೆ ತಂದಿದ್ದೇ ಅಲ್ಲದೆ ದೇಶದಲ್ಲಿ ಭಾರತೀಯತೆಯ ಪರಿಕಲ್ಪನೆಯನ್ನೇ ಬುಡಮೇಲು ಮಾಡಲು ಮುಂದಾಗಿದ್ದವು. ಇದಕ್ಕೆ ಪರಿಹಾರವಾಗಿ ಆಳುವ ವರ್ಗಗಳು ಉತ್ತರ ಕಂಡುಕೊಂಡಿದ್ದು ಮತೀಯ ರಾಜಕಾರಣದಲ್ಲಿ. ಅಥವಾ ಜಾತಿ ರಾಜಕಾರಣದಲ್ಲಿ. ಈ ಎರಡೂ ರಾಜಕೀಯ ಧೋರಣೆಗಳು ಜನಮಾನಸದಲ್ಲಿ ಬಿತ್ತಿದ ಪ್ರತ್ಯೇಕತೆಯ ಭಾವ ದ್ವೇಷಾಸೂಯೆಗಳಲ್ಲಿ ಪರ್ಯವಸಾನಗೊಂಡಿದ್ದನ್ನು ಕಳೆದ ಎರಡು ದಶಕಗಳಲ್ಲಿ ಕಂಡಿದ್ದೇವೆ. ಬಾಬ್ರಿ ಮಸೀದಿ, ಕೋಮು ಗಲಭೆಗಳು, ಭಯೋತ್ಪಾದನೆ, ಗುಜರಾತ್ ದಂಗೆಗಳು, 26/11 ಇವೆಲ್ಲವೂ ಈ ಬೆಳವಣಿಗೆಗಳ ಕೂಸುಗಳು.  ನಾವು-ಅವರು ಎಂಬ ಪರಿಕಲ್ಪನೆ ಒಂದೆಡೆ,  ಅನ್ಯ ರನ್ನು ಸೃಷ್ಟಿಸುವ ಹತಾಶ ಮನೋಭಾವ ಒಂದೆಡೆ. ಇವೆಲ್ಲದರ ನೇರ ಪರಿಣಾಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅಕಾಲಿಕ ಮರಣ. ಇದಕ್ಕೆ ಬಲಿಯಾಗುತ್ತಿರುವುದು ವ್ಯಕ್ತಿಗಳಲ್ಲ, ಭಾರತದ ಸಾಂಸ್ಕೃತಿಕ ನೆಲೆಗಟ್ಟು ಮತ್ತು ಸೌಹಾರ್ದತೆಯ ಪರಂಪರೆ.

‍ಲೇಖಕರು avadhi

23 October, 2011

1 Comment

  1. D.RAVIVARMA

    divakar sir,it is wonderful and thought provoking, dont you think that our teachers, jagasdugurulu, and the intelectuals of our society kept the society in dark. or they have not awekened us about the reality of the life, though a part of the people have made attempt for social revolution,and cultural revolution, but unfortunately it is not reached the uneducated mass. the political system wants the people to be uneducated,un awared, therby they can cheat the people i n the name of religion,caste,community, dharma, and etc., but i am surprising who is going bell the cat, communists also lost the ground, and the intelectuals are living in the dream of capitalists,provided by the state, the youth are in confusion status, neitjer they are aware of political situation. nor social crisis, one of my friend has donated 10.000 to ramamandir trust at ayodya. i asked whwreis ayodya, he said he dont know any thing i had sinciar regard to rama, so i had donated. this is where our highly educated people stand. of corsr i ned not blame him. on the othrt hand, i blame the system of education, and the cvheating role played by the political parties, abd exploiting the innocent minds of the people in the name of religion,caste,community,area, some time i feel very bad of reading newspaper,articles, iam not in a position either to react with the situation, nor in a position accept the the reality of the present situation. but your writings on the social issues are really thought provoking, and the question of the present crisis. d,ravi varma hospet.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading