ಖಾರಿ ಬಾವೊಲಿ
ಏಷ್ಯಾದ ಅತಿ ದೊಡ್ಡ ಮಸಾಲೆ ಮಾರುಕಟ್ಟೆ ದೆಹಲಿಯಲ್ಲಿ !
ಚೈತ್ರಿಕಾ ನಾಯ್ಕ ಹರ್ಗಿ
ಪಾಶ್ಚಾತ್ಯರು ಸಮುದ್ರದ ಮೂಲಕ ಭಾರತಕ್ಕೆ ಬಂದು ವ್ಯಾಪಾರವನ್ನು ಆರಂಭಿಸಿದರು. ಮುಖ್ಯವಾಗಿ ಮಸಾಲೆ ಪದಾರ್ಥಗಳ ವ್ಯಾಪಾರ ಎಂಬಲ್ಲಿಂದ ಆರಂಭಗೊಂಡು, 1947 ರಲ್ಲಿ ಬ್ರಿಟಿಷರು ವಾಪಸ್ಸು ಇಂಗ್ಲೆಂಡಿಗೆ ಹೋಗುವಾಗ ತಮ್ಮ ಜೊತೆಗೆ ಭಾರತದ ಜೀರಿಗೆ, ಚಕ್ಕೆ (ದಾಲ್ಚಿನಿ), ಕಾಳು ಮೆಣಸು, ಅರಿಶಿಣ, ಕೊತ್ತಂಬರಿಯನ್ನು ಕೊಂಡೊಯ್ದರು ಎಂಬಲ್ಲಿಗೆ ಸಾಂಬಾರ ಪದಾರ್ಥಗಳಿಂದ ಆರಂಭವಾದ ವಸಾಹತೀಕರಣಗೊಂಡ ಭಾರತದ ಇತಿಹಾಸ ಸ್ವಾತಂತ್ರ್ಯ ಹೊಂದುವುದರೊಂದಿಗೆ ಕೊನೆಗೊಳ್ಳುತ್ತದೆ.
ಅಬ್ಬಾ ಮಸಾಲೆಯೆ ! ಇಷ್ಟಲ್ಲಕ್ಕೆ ಕಾರಣವಾದೆಯಾ ! ಎಂದುಕೊಂಡು ಕರ್ನಾಟಕದಲ್ಲಿ ಪಾಶ್ಚಾತ್ಯರ ಹೆಜ್ಜೆ ಗುರುತು ನೋಡಿದರು ಮೊದಲು ಕಾಣುವುದು ಪಾಶ್ಚಾತ್ಯರ ಸಾಂಬಾರ ಪದಾರ್ಥಗಳ ವ್ಯಾಪಾರವೆ. ಪಶ್ಚಿಮ ಘಟ್ಟದಲ್ಲಿ ಹರಿಯುವ ಶರಾವತಿ ನದಿ ತಟದ ಊರು, ಅರಬ್ಬಿ ಸಮುದ್ರಕ್ಕೆ ಹತ್ತಿರವಾದ ಗೇರುಸೊಪ್ಪೆಯ ರಾಣಿಯೊಬ್ಬಳು ಕಾಳು ಮೆಣಸಿನ ರಾಣಿ ಎಂದೆ ಪ್ರಸಿದ್ಧಳಾಗಿದ್ದಳು ಎಂದು ಅನೇಕ ಪೋರ್ಚುಗೀಸ್ ಪ್ರವಾಸಿಗರು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.
ಫ್ರೆಂಚರು, ಡಚ್ಚರು, ಬ್ರಿಟಿಷರು ಪೂರ್ವದ ರಾಷ್ಟ್ರಗಳೆಡೆ ಮೊದಲು ವ್ಯಾಮೋಹಿತರಾಗಿದ್ದೆ ಅಲ್ಲಿನ ಮಾಸಾಲೆ ಪದಾರ್ಥಗಳಿಗೆ. ಮಾಂಸಾಹಾರವೆ ಮುಖ್ಯವಾಗಿರುವ ಯುರೋಪಿಯನ್ನರಿಗೆ ಮಾಂಸವನ್ನು ಕೆಡದಂತೆ ಸಂರಕ್ಷಿಸಲು ಮತ್ತು ರುಚಿಯನ್ನು ಹೆಚ್ಚಿಸಲು ಮಸಾಲೆ ಪದಾರ್ಥಗಳು ಮುಖ್ಯವಾಗಿತ್ತು. ಅಂದಿನ ಕಾಲಕ್ಕೆ ನಾಣ್ಯಗಳು ಇನ್ನೂ ಚಾಲ್ತಿಯಲ್ಲಿ ಇರದಿದ್ದಾಗ ಜಗತ್ತಿನ ವಿವಿಧೆಡೆಗಳಲ್ಲಿ ಸಾಂಬಾರ ಪದಾರ್ಥಗಳನ್ನು ಹಣದ ರೂಪದಲ್ಲಿ ವ್ಯವಹಾರಕ್ಕೆ ಬಳಸುತ್ತಿದ್ದರು ಎಂಬುದು ಕೂಡ ಅಚ್ಚರಿಯ ಸಂಗತಿ !.
ಮಸಾಲೆ ಪದಾರ್ಥಗಳಿಗೆ ಇಷ್ಟೆಲ್ಲಾ ಹೆಸರಾದ ಭಾರತದಲ್ಲಿ ಪಾಶ್ಚಾತ್ಯರ ಆಗಮನಕ್ಕೂ ಮುನ್ನವೇ ದೊಡ್ಡ ದೊಡ್ಡ ಮಸಾಲೆ ಮಾರುಕಟ್ಟೆಗಳು ಇದ್ದವು. ಹಾಗೆ ಇಂದು ಏಷ್ಯಾದ ಅತೀ ದೊಡ್ಡ ಸಗಟು (ಹೋಲ್ ಸೇಲ್ ) ಮಸಾಲೆ ಮಾರುಕಟ್ಟೆ ‘ಖಾರಿ ಬಾವೊಲಿ’ ಇರುವುದು ಕೂಡ ಭಾರತದಲ್ಲಿ !. ಮುಖ್ಯವಾಗಿ ದೇಶದ ರಾಜಧಾನಿ ದೆಹಲಿಯಲ್ಲಿ. ಷಹಜಹಾನ್ ನ ಹೆಂಡತಿಯರಲ್ಲಿ ಒಬ್ಬಳಾದ ಫತೇಪುರಿ ಬೇಗಂನಿಂದ ನಿರ್ಮಿತವಾದ ‘ಫತೇಪುರಿ ಮಸೀದಿಯ’ ಸುತ್ತ ಇರುವ ಮಾರುಕಟ್ಟೆಯೆ ‘ಖಾರಿ ಬಾವೊಲಿ’. ಇದು ಈಗ ಹಳೆ ದೆಹಲಿ ಪ್ರದೇಶಕ್ಕೆ ಒಳಪಟ್ಟಿದೆ.
‘ಖಾರಿ ಬಾವೊಲಿ’ ಯು ಷಾ ಸೂರಿಯ ಮಗ ಖ್ವಾಜಾ ಅಬ್ದುಲ್ಲಾ ಲಜರ್ ಖುರೇಷಿ ಯಿಂದ 1551 ರಲ್ಲಿ ನಿರ್ಮಿಸಲ್ಪಟ್ಟಿತು. ಖಾರಿ ಎಂದರೆ ಉಪ್ಪು, ಬಾವೊಲಿ ಎಂದರೆ ಮೆಟ್ಟಿಲುಗಳಿರುವ ಬಾವಿ ಎಂದರ್ಥ. ನೀರು ಸಂಗ್ರಹಕ್ಕಾಗಿ ನಿರ್ಮಿತವಾದ ಇಂತಹ ಸುಮಾರು ಬಾವಿಗಳು ದೆಹಲಿಯಲ್ಲಿ ಇಂದಿಗೂ ಇವೆ. ಇದು ಉಪ್ಪು ನೀರಿನಿಂದ ತುಂಬಿದ ಅಗಲದ ಬಾವಿಯಾಗಿದ್ದು, ಪ್ರಾಣಿಗಳ ಮೈ ತೊಳೆಯಲು ಮತ್ತು ಇತರ ಕೆಲಸಕ್ಕೆ ಇದನ್ನು ಉಪಯೋಗಿಸುತ್ತಿದ್ದರು. ಆದರೆ ಈಗ ಖಾರಿ ಬಾವೊಲಿಯ ಯಾವುದೇ ಕುರುಹುಗಳು ಸಿಗದೆ ಹೆಸರು ಮಾತ್ರ ಉಳಿದುಕೊಂಡಿದೆ.
ಮೊದಲಿನಿಂದಲೂ ವ್ಯಾಪಾರ ಕೇಂದ್ರವಾಗಿ ರೂಪುಗೊಂಡಿದ್ದ ಖಾರಿ ಬಾವೊಲಿ ಷಹಜಹಾನ್ ನ ಕಾಲದಲ್ಲಿ ಮತ್ತೆ ಮುನ್ನೆಲೆಗೆ ಬಂದಿತು. ನಂತರದಲ್ಲಿ ಕಾಶ್ಮೀರಿ, ಮಧ್ಯ ಪ್ರದೇಶ, ರಾಜಸ್ಥಾನಿ., ಪಂಜಾಬಿ ವ್ಯಾಪಾರಿಗಳಿಂದ ದೊಡ್ಡ ಪ್ರಮಾಣದಲ್ಲಿ ವಹಿವಾಟಿಗೆ ತನ್ನನ್ನು ತೆರೆದುಕೊಂಡಿತು.
1936 ರಲ್ಲಿ ಬ್ರಿಟಿಷರ ಪಂಜಾಬ್ ಪ್ರಾಂತ್ಯದ ಮಂತ್ರಿಯಾಗಿದ್ದ ಚೌಧರಿ ಛೊಟ್ಟು ರಾಮ್ ಎಂಬಾತ ಅಲ್ಲಿನ ಸಾಲಗಾರ ವ್ಯಾಪಾರಿಗಳ ಪರವಾನಗಿ ರದ್ದು ಮಾಡಿ ಪಂಜಾಬ್ ಪ್ರಾಂತ್ಯದಿಂದ ಹೊರದಬ್ಬುತ್ತಾನೆ. ಆಗ ಬೀದಿಗೆ ಬಿದ್ದ ಅಗರ್ ವಾಲ್ ವ್ಯಾಪಾರಿಗಳು ದೇಶದಲ್ಲೆಡೆ ವ್ಯಾಪಾರಕ್ಕಾಗಿ ಹೋಗಿ ಅಲ್ಲೆ ನೆಲೆಗೊಳ್ಳುತ್ತಾರೆ. ಹಾಗೆ ದೆಹಲಿಗೆ ಬಂದ ವ್ಯಾಪಾರಿಗಳು ಮುಖ್ಯವಾಗಿ ಚಾಂದನಿ ಚೌಕ್, ಖಾರಿ ಬಾವೊಲಿ, ನಯಿ ಸಡಕ್, ಸರ್ದಾರ್ ಬಜಾರ್, ಜಾವರಿ ಬಜಾರ್ ನಲ್ಲಿ ನೆಲೆಕಂಡುಕೊಳ್ಳುತ್ತಾರೆ. ನಂತರ ಈ ವ್ಯಾಪಾರಿಗಳಿಗೆಲ್ಲ ಚಾಂದಿನಿ ಚೌಕದ ಸುತ್ತ ಮುತ್ತ ಪ್ರದೇಶಗಳು ದೆಹಲಿಯಲ್ಲಿ ಮುಖ್ಯ ವ್ಯಾಪಾರ ಸ್ಥಾನವಾಯಿತು. ಅದರಲ್ಲಿ ಪ್ರಮುಖವಾಗಿ ಖಾರಿ ಬಾವೊಲಿ.
ದೇಶದಲ್ಲಿ ಸಿಗುವ ಅಕ್ಕಿ ತಳಿಗಳು, ವಿವಿಧ ಟೀ, ಮಸಾಲೆ ಪದಾರ್ಥ, ಬೇಳೆ-ಕಾಳು, ಡ್ರೈ ಫ್ರೂಟ್ಸ್ ಹಾಗೂ ಎಲ್ಲೂ ಸಿಗದ ಅಪರೂಪದ ಆಯುರ್ವೇದದ ಗಿಡ ಮೂಲಿಕೆಗಳು ಇಲ್ಲಿ ಸಿಗುತ್ತವೆ. ಪಾಕಿಸ್ತಾನ, ಆಫ್ರಿಕಾ, ಅಫಘಾನಿಸ್ತಾನದ ಮಸಾಲೆ, ಕರ್ಜೂರ ಇತರೆ ಎಲ್ಲಾ ಮಸಾಲೆಗಳನ್ನು ಇಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ.
ಸಾಲುಗಟ್ಟಿ ನಿಂತ ತಳ್ಳು ಗಾಡಿಗಳು, ಎಲ್ಲಾ ಮಸಾಲೆ ಪದಾರ್ಥಗಳನ್ನು ತುಂಬಿದ ರಾಶಿ ರಾಶಿ ಗೋಣಿ ಚೀಲ ಮೂಟೆಗಳು, ಜನಜಂಗುಳಿಯಿಂದ ಕೂಡಿರುವ ಖಾರಿ ಬಾವುಲಿ ಬಾನುವಾರದಂದು ಸ್ವಲ್ಪ ಶಾಂತವಾಗಿದ್ದು, ಅನೇಕ ತಲೆಮಾರುಗಳಿಂದ ಒಂದೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ಕುಟುಂಬಗಳನ್ನು ಇಲ್ಲಿ ನೋಡಬಹುದು. ಬಾಯಿಚಪ್ಪರಿಸುವ ವಿವಿಧ ರೀತಿಯ ದೇಸಿ ತಿನಿಸುಗಳು ವಿಶೇಷವಾಗಿ ಇಲ್ಲಿ ಸಿಗುತ್ತವೆ. ಇಷ್ಟೆಲ್ಲ ಪ್ರಸಿದ್ಧ ಪಡೆದಿರುವ ಮಾರುಕಟ್ಟೆ ಈ ಕಾಲಕ್ಕೆ ತಕ್ಕಂತೆ ನವೀಕರಣ ಗೊಂಡಿಲ್ಲ. ಸ್ಪೈಸ್ ಬೋರ್ಡ್ ಆಫ್ ಇಂಡಿಯಾ ಈ ಕಡೆ ಗಮನಹರಿಸಿಲ್ಲ, ಇನ್ನು ಸರಿಯಾದ ಚರಂಡಿ ಇಲ್ಲದಿರುವುದು ಬೇಸರ ತರಿಸುತ್ತದೆ.
ಭಾರತ ಮಸಾಲೆ ಪದಾರ್ಥಗಳ ರಾಣಿ ಎಂದರೆ ತಪ್ಪಿಲ್ಲ. ನಾವು ಬೆಳೆದ 86% ನಾವೆ ಬಳಸಿದರೆ ಮತ್ತೆ ಉಳಿದಿದ್ದು ರಫ್ತಾಗುತ್ತದೆ. ನಮ್ಮ ಹಳೆ ಗೆಳೆಯರೆ ಈಗಲೂ ನಮ್ಮ ಸಾಂಬಾರು ಪದಾರ್ಥಗಳ ದೊಡ್ಡ ಬೇಡಿಕೆದಾರರು. ಬ್ರಿಟನ್, ಅಮೇರಿಕಾ ಮತ್ತು ಇತರ ಯುರೋಪ್ ರಾಷ್ಟ್ರಗಳು ಇದರಲ್ಲಿ ಪ್ರಮುಖವಾದವು.
ಇದನ್ನೆಲ್ಲಾ ನೋಡಿಕೊಳ್ಳುವ ‘ಸ್ಪೈಸ್ ಬೋರ್ಡ್ ಆಫ್ ಇಂಡಿಯಾ’ ಕೇರಳದ ಕೊಚ್ಚಿಯಲ್ಲಿದೆ. ಭಾರತದ ಸಾಂಬಾರು ಪದಾರ್ಥಗಳ ಬೆಲೆ, ರಫ್ತು ಪ್ರಮೋಷನ್, ಆಮದು ಹಾಗೆ ಇವುಗಳ ಮಾರುಕಟ್ಟೆ ಬೆಲೆಯನ್ನು ಇದು ನಿಗದಿಗೊಳಿಸುತ್ತದೆ. ಭಾರತ ಸರ್ಕಾರದ ‘ಮಿನಿಸ್ಟ್ರಿ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಅಡಿಯಲ್ಲಿ ಈ ಮಂಡಳಿ ಕಾರ್ಯ ನಿರ್ವಹಿಸುತ್ತದೆ.
ನಾಲಿಗೆ ರುಚಿ ತಣಿಸುವ ಸಾಂಬಾರ ಪದಾರ್ಥದ ಅಗಾಧತೆ ಒಮ್ಮೆ ಕಣ್ತುಂಬಿಕೊಳ್ಳಬೇಕು ಎಂದರೆ ಒಮ್ಮೆ ಖಾರಿ ಬಾವೊಲಿ ಗೆ ಭೇಟಿ ನೀಡಬೇಕು.






ಮಾಹಿತಿಪೂರ್ಣವಾದ ಲೇಖನ