ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಮತ್ತು ಆತ್ಮೀಯ ಪ್ಲಾಸ್ಟಿಕ್..

ಸುಹಾನ್ ಶೇಕ್

ಮೊನ್ನೆ ಅಪ್ಪ ದಿನಂಪ್ರತಿ ಬುತ್ತಿ ತಕ್ಕೊಂಡು ಹೋಗುವ ಪ್ಲಾಸ್ಟಿಕ್ ಕವರ್ ಇದ್ದಕ್ಕಿದ್ದ ಹಾಗೆ ಮಹತ್ವ ಕಳೆದುಕೊಂಡು ಒಂದು ಬದಿಯಲ್ಲಿ ಕೇಳುವವರೇ ಇಲ್ಲ ಅನ್ನುವ ಹಾಗೆ ಬಿದ್ದಿತ್ತು.

ಇಷ್ಟು ದಿನ ಬಿಸಿ ಬಿಸಿ ಬುತ್ತಿ ಜೊತೆಗೊಂದು ತಣ್ಣನೆಯ ನೀರನ್ನು ಹೊತ್ತ ಬಾಟಲಿಯನ್ನು‌ ಸಾಗಿಸುತ್ತಿದ್ದ ಪ್ಲಾಸ್ಟಿಕ್ ಕವರ್ ಅಂದು ನಿರ್ಜಿವವಾಗಿ ಬಿದ್ದಿತ್ತು. ಅಪ್ಪನ ಕೈಯಲ್ಲಿ ಭದ್ರವಾಗಿ ಕೂರುತಿದ್ದ ಪ್ಲಾಸ್ಟಿಕ್ ಕವರ್ ಅಪ್ಪನ ಜೊತೆಗಿದ್ದು, ಮೊದಲು ಇದ್ದ ಬಣ್ಣವನ್ನು ಕಳೆದುಕೊಂಡು ಅರ್ಧಂಬರ್ಧ ಬಿಳಿ ಬಣ್ಣಕ್ಕೆ ತಿರುಗಿತ್ತು. ಪ್ರೀತಿಯೊಂದು ಗಾಢವಾಗಿ ನೆಲೆನಿಂತ ಹಾಗೆ.!

ಅಪ್ಪನಿಗೆ ಆ ಪ್ಲಾಸ್ಟಿಕ್ ಅನ್ನು ಬಿಟ್ಟು ಹೋಗುವುದು ಇಷ್ಟ ಇಲ್ಲ. ಆ ಪ್ಲಾಸ್ಟಿಕ್ ಕವರ್ ಗೆ ಅಪ್ಪನ ಜೊತೆ ಹೋಗದೆ ಬೇರೆ ಮಹತ್ವ ಇಲ್ಲ. ಲೇಟಾಗಿ ಕೊಟ್ಟ ಬುತ್ತಿ, ನೀರಿನ ಬಾಟಲ್ ಬಿಟ್ಟು ಬಂದ ದಿನ, ಕೆಲಸದ ವಹಿವಾಟಿನ ವ್ಯಥೆಯ ಮಾತನ್ನೆಲ್ಲಾ ಕಿವಿಯಾಗಿ ದಾರಿ ಉದ್ದಕ್ಕೂ ಆಲಿಸುತ್ತಿದ್ದ ಪ್ಲಾಸ್ಟಿಕ್ ಕವರ್ ಇಂದು ನಿರ್ಜೀವವಾಗಿದೆ.

ಅಪ್ಪನಿಗೆ ಒಂದೇ ಆಸೆ, ಹೇಗಾದರೂ ಮಾಡಿ ಬುತ್ತಿಯನ್ನು ಈ ಪ್ಲಾಸ್ಟಿಕ್ ಕವರ್ ನೊಳಗೆ ಹಾಕಿ ಅಧಿಕಾರಿಗಳ ಕಣ್ತಪ್ಪಿಸಿ ಕೆಲಸಕ್ಕೆ ಹೋಗಬೇಕು ಅನ್ನುವುದು. ಅಪ್ಪನ ಜೊತೆಗಿದ್ದು ಪರಿಪಕ್ವವಾದ ಪ್ಲಾಸ್ಟಿಕ್ ಕವರ್ ಗೆ ಹೇಗಾದರೂ ಮಾಡಿ ಬುತ್ತಿಗಲ್ಲದೇ ಇದ್ರು ಅಪ್ಪನ ಕಳ್ಳ ಕಿಸೆಯೊಳಗಾದ್ರು ಕೂಸು ಆಗಿ ಸಾಗಬೇಕು ಅನ್ನುವುದು.

ಬುತ್ತಿ, ನೀರು, ಸಂಜೆಯ ಮೇಲೆ ಮಕ್ಕಳಿಗೆ ತಿಂಡಿ, ವಾರದ ಕೊನೆಗೆ ಕೊಳೆಯಾದ ಕೆಲಸದ ಬಟ್ಟೆ ಎಲ್ಲವನ್ನೂ ಎಷ್ಟು ಭಾರವಾದ್ರೂ ಸಹಿಸಿಕೊಂಡು, ಪ್ರೀತಿಯೊಂದು ಮುಗಿಯದ ಪ್ರಣಯದ ಹಾಗೆ ಇದ್ದ ಪ್ಲಾಸ್ಟಿಕ್ ಕವರ್ ಅನ್ನು ಇಂದು ‌ಬಲವಂತವಾಗಿ ದೂರ ಮಾಡುವ ಪರಿಸ್ಥಿತಿಯೊಂದು ಬಂದಿದೆ.

ಅಪ್ಪನೊಂದಿಗೆ ಆತ್ಮೀಯವಾಗಿದ್ದ ಪ್ಲಾಸ್ಟಿಕ್ ಅಲ್ಲೇ ಇದೆ, ಬುತ್ತಿ ಹೊತ್ತು ಸಾಗುವ ಕರ್ತವ್ಯಕ್ಕಾಗಿ ಕಾಯುತ್ತಿದೆ. ಮಾಗಿದ ಬಣ್ಣ, ಹೊಳಪು ಕಳೆದುಕೊಂಡು ನೆರಿಗೆ ಬಿದ್ದ ದೇಹ, ಆದ್ರೂ ಬಾಳಿಕೆ ಬರುತ್ತೇನೆ ಹೆಚ್ಚು ದಿನ ಬ್ಯಾನ್ ಮಾಡದಿರಿ ಅನ್ನುತ್ತಿದೆ ಅದೇ ಪ್ಲಾಸ್ಟಿಕ್ ಕವರ್…

‍ಲೇಖಕರು avadhi

23 October, 2019

1 Comment

  1. T S SHRAVANA KUMARI

    ಇದೇನು ಹೀಗೆ ಹೇಳುತ್ತಿದ್ದೀರಿ. ದಯವಿಟ್ಟು ಅವರಿಗೊಂದು ಬಟ್ಟೆಯ ಚೀಲ ಕೊಡಿಸಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading