-ಬಸವರಾಜ ಮುದನೂರ್
ಅಪ್ಪ ಚಿತ್ರದುರ್ಗಕ್ಕೆ ಬಾರದೇ ಬಹುಕಾಲವೇ ಕಳೆದಿತ್ತು. ಮೊನ್ನೆ ದಿಢೀರ್ ಕರೆ ಮಾಡಿ ‘ನಾಳೆಯೇ ಚಿತ್ರದುರ್ಗಕ್ಕೆ ಬರುತ್ತಿದ್ದೇನೆ. ಮೊಮ್ಮಕ್ಕಳಾದ ವಿನಯ-ವಿವೇಕರ ಮೇಲೆ ಖ್ಯಾಲ್ ಆಗ್ಯಾದ’ ಅಂದರು. ನಮ್ಮ ಖುಷಿಗೆ ಪಾರವೇ ಇರಲಿಲ್ಲವಾದರೂ ದೂರ ಪ್ರಯಾಣದ ಬಗ್ಗೆ ಸಹಜ ಆತಂಕ ಮೂಡಿತು. ನನ್ನೂರು ಶಹಾಪುರದಿಂದ ಚಿತ್ರದುರ್ಗಕ್ಕೆ ಸುಮಾರು ಮುನ್ನೂರೈವತ್ತು ಕಿಲೋ ಮೀಟರ್ ಕ್ರಮಿಸಬೇಕು. ಯೋಚಿಸಿದಾಗ ಮನಸು ತಡೆಯಲಿಲ್ಲ. ‘ಸ್ಲೀಪರ್ ಕೋಚ್ ಬಸ್ ಪ್ರಯಾಣವೇ ಬೆಟರ್’ ಎಂದು ಹೇಳಲೆತ್ನಿಸಿದೆನು. ಅಪ್ಪ ಮಾತ್ರ ‘ಇಲ್ಲ ಕಾರಲ್ಲೇ ಬರುತ್ತೇವೆ; ನೋ ಪ್ರಾಬ್ಲಮ್. ಜತೆಗೆ ಸಲಾದಪುರ ಸತೀಶ ಇರುತ್ತಾನೆ’ ಎಂದು ಬಿಟ್ಟರು.
ನಮ್ಮೂರ ಪ್ರಯಾಣದ ಬಳಿಕ ನಾವೇ ದಿನವಿಡೀ ವಿಶ್ರಾಂತಿ ಪಡೆಯುತ್ತೇವೆ. ಅಪ್ಪ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗಿ ಇಪ್ಪತ್ತು ವರ್ಷಗಳೇ ಉರುಳಿವೆ. ನಮ್ಮೂರಿಂದ ದುರ್ಗಕ್ಕೆ ಬಂದು ಹೋಗುವುದು, ಇಲ್ಲಿನ ಓಡಾಟ ಸೇರಿ ಸುಮಾರು ಎಂಟು ನೂರು ಕಿಲೋ ಮೀಟರ್ ಸುತ್ತಾಟ ಆಗುತ್ತದೆ. ಎಂಭತ್ತು ವರ್ಷದ ಅಪ್ಪ ಎಂಟು ನೂರು ಕಿಲೋ ಮೀಟರ್ ಸಂಚರಿಸಬೇಕಲ್ಲ ಎಂಬುದನ್ನು ನೆನೆದೇ ನಾನು ಸುಸ್ತಾಗಿದ್ದೆನು. ಅಪ್ಪ ಮಾತ್ರ ಯಾವುದೇ ಅಳುಕು ಅಂಜಿಕೆಯಿಲ್ಲದೆ ಎಂದಿನ ಗತ್ತಿನಲ್ಲೇ ಪ್ರಯಾಣಕ್ಕೆ ಸಿದ್ಧರಾಗಿದ್ದರು. ಅಂದುಕೊಂಡಂತೆ ದುರ್ಗಕ್ಕೆ ಬಂದೇ ಬಿಟ್ಟರು.
ಬೆಳಗ್ಗೆ ತಿಂಡಿ ಸೇವಿಸಿ 10ಗಂಟೆ ಸುಮಾರಿಗೆ ಊರು ಬಿಟ್ಟವರು ಸಂಜೆ ಹೊತ್ತು ಮುಳುಗುವ ವೇಳೆಗೆ ದುರ್ಗಕ್ಕೆ ಆಗಮಿಸಿದರು. ಮನೆ ಪ್ರವೇಶಿಸುತ್ತಲೇ ‘ದುರ್ಗಾಸ್ತಮಾನ ಸಮಯಕ್ಕೆ ದುರ್ಗಕ್ಕೆ ಬಂದೆವು ನೋಡು’ ಎಂದರು. ಬಾಗಿಲಲ್ಲಿ ನಿಂತು ತಾತ ಎಂದು ಕೂಗಿದ ವಿವೇಕ, ವಿನಯನನ್ನು ಕರೆಯಲು ಒಳಕ್ಕೆ ಓಡಿದನು. ಅಪ್ಪನಿಗೆ ಕುಡಿಯಲು ನೀರು ನೀಡಿ ಬಿಸಿ ನೀರಿನಲ್ಲಿ ಕೈ-ಕಾಲು ಮುಖ ತೊಳೆದುಕೊಳ್ಳಲು ಹೇಳಿದಾಗ ‘ನೀರು ಕಾಯಿಸುವುದೇನು ಬೇಡ’ ಎಂದರು. ಸೋಲಾರ್ ನೀರಿದೆ; ಬಿಸಿನೀರು ಬರುತ್ತದೆಂದಾಗ ಮುಖ ಮಾರ್ಜನ ಬಳಿಕ ಮಾತಿಗೆ ಕುಳಿತರು. ವಿನಯ-ವಿವೇಕರನ್ನು ಬರಸೆಳೆದು ಕೆನ್ನೆ ಸವರಿ ಮುದ್ದು ಮಾಡಿದರು. ಪತ್ನಿ ಭಾವನಾ ‘ಅರಾಮಾಗಿ ಬಂದ್ರಾ ತಾತ’ ಎಂದು ಕೇಳಿದಾಗ ‘ಸಿರಗುಪ್ಪ, ಸಿಂಧನೂರು ಬಳಿ ರೋಡ್ ಕೆಟ್ಟಿದೆ; ತಗ್ಗು ದಿನ್ನೆಗಳಲ್ಲಿ ಕಾರು ಸಂಚರಿಸುವ ವೇಳೆ ಎತ್ತಿ ಹಾಕಿದಂತಾಗಿ ಮೈ ಅಕನಕ್ ಆಯ್ತಮ್ಮ. ರಸ್ತೆಯಷ್ಟೇ ಹಾಳಾದ ಸರ್ಕಾರವನ್ನು ಬೈದುಕೊಳ್ಳುತ್ತಲೇ ಬಂದೆವು’ ಎಂದರು.

ರಾತ್ರಿ ಊಟದ ಬಳಿಕ ಬೇಗ ನಿದ್ರೆಗೆ ಜಾರಬಹುದೆಂದು ಹಾಸಿಗೆ ಸಿದ್ಧಪಡಿಸಲಾಗಿತ್ತು. ಆದರೆ ಅಪ್ಪ ಮಾತ್ರ ಮೊಮ್ಮಕ್ಕಳ ಜತೆ ಆಟ, ಪಾಠದಲ್ಲಿ ಮುಳುಗಿದರು. ತೂಗುಮಂಚದಿ ಜೋಕಾಲಿ, ವಿನಯ-ವಿವೇಕ ನಡುವೆ ಜುಗಲ್ ಬಂದಿ, ಬ್ಯಾಂಗಲ್ ಬಂಗಾರಿ ಸಾಂಗ್ ಗೆ ವಿವೇಕನ ಡ್ಯಾನ್ಸ್, ವಿನಯನ ಮಾತು-ಕಥೆ ಜೋರಿತ್ತು. ದೇಶ-ವಿದೇಶದ ಕಥೆಗಳು, ಸೈಕಲ್ ಸವಾರಿ, ಫುಟ್ ಬಾಲ್ ಆಟ, ಗೆಳೆಯರ ಗ್ಯಾಂಗ್, ಶಾಲೆಯಲ್ಲಿ ಯುವ ತರಂಗ ಕಾರ್ಯಕ್ರಮ, ಓದು -ಬರಹದ ವಿವರ ಹೀಗೆ ಸಾಗಿತ್ತು. ಮಕ್ಕಳ ಮಾತು ಕೇಳಿಸಿಕೊಳ್ಳುತ್ತಲೇ ಅಪ್ಪ ಪಾಠ ಶುರು ಮಾಡಿದರು. ‘ಅತಿಯಾಗಿ ಟಿವಿ, ಮೊಬೈಲ್ ನೋಡಿದರೆ ಕಣ್ಣಿಗಷ್ಟೇ ಅಲ್ಲ, ಬುದ್ಧಿ, ನೆನಪಿನ ಶಕ್ತಿ ಮೇಲೆ ದುಷ್ಪರಿಣಾಮ ಆಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದರಿಂದ ಏನೂ ಪ್ರಯೋಜನವಿಲ್ಲ. ಅಮೂಲ್ಯ ಸಮಯ ವ್ಯರ್ಥ ಆಗುತ್ತದೆ’.
‘ಕಳೆದು ಹೋದ ಸಮಯ ಮತ್ತೆ ಮರಳಿ ಬಾರದು. ಈಗ ನೀನು ಐದನೇ ತರಗತಿ ಓದುತ್ತಿದ್ದೀಯಲ್ಲ ವಿನಯ; ಮರಳಿ ಒಂದನೇ ತರಗತಿಗೆ ಹೋಗಿ ಓದಲಾದೀತೆ?’. ‘ಇಲ್ಲ ತಾತ’ ಎಂದು ಉತ್ತರಿಸಿದ ವಿನಯನಿಗೆ ‘ಜಾಣ ನೀನು. ಇಷ್ಟು ಚಿಕ್ಕ ವಯಸ್ಸಿಗೆ ದೇಶ-ವಿದೇಶಗಳ ವಿಷಯಗಳನ್ನೆಲ್ಲ ತಿಳಿದುಕೊಂಡಿದ್ದೀಯಲ್ಲ; ನೀನು ದೊಡ್ಡ ವ್ಯಕ್ತಿಯಾಗುವ ಎಲ್ಲಾ ಲಕ್ಷಣಗಳಿವೆ. ನಿನಗೆ ವಿದೇಶಗಳ ಬಗ್ಗೆ ಹೆಚ್ಚಿನ ಆಸಕ್ತಿಯಿದ್ದಂತಿದೆ.
ವಿದೇಶದಲ್ಲೇ ವಿದ್ಯಭ್ಯಾಸ ಮಾಡುವ ಅವಕಾಶ ನಿನಗೆ ಸಿಗಲಿ ಎಂದು ಹಾರೈಸುತ್ತಲೇ ಎಲ್ಲಾ ದೇಶ-ಧರ್ಮಗಳ ಬಗ್ಗೆ ಪ್ರೀತಿ-ಗೌರವ ಭಾವನೆ ಇರಬೇಕು. ಜ್ಞಾನಾರ್ಜಾನೆಗಾಗಿ ತಿಳಿದುಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ನಮ್ಮ ಮನೆ, ಪರಿಸರ, ನಮ್ಮ ದೇಶ, ಧರ್ಮ, ಆಚಾರ-ವಿಚಾರ, ನಮ್ಮತನ ಬಿಟ್ಟು ವ್ಯಾಮೋಹಕ್ಕೆ ಶರಣಾಗಬಾರದು’ ಎಂದೆಲ್ಲ ಹೇಳುತ್ತ ತಿಳಿವಳಿಕೆ ನೀಡುತ್ತಿದ್ದರು. ವಿವೇಕ ‘ನಾನಿನ್ನು ಮೊಬೈಲ್ ನೋಡಲ್ಲ’ ಎಂದಾಗ ಮನೆಯಲ್ಲಿ ಚಪ್ಪಾಳೆ ಸದ್ದು ಹೊರಹೊಮ್ಮಿತು. ರಾತ್ರಿ 11ಗಂಟೆ ದಾಟಿದ್ದು ಗೊತ್ತೇ ಆಗಲಿಲ್ಲ.
ತಡವಾಗಿ ಮಲಗಿದ ಅಪ್ಪ ಎಂದಿನಂತೆ ಮುಂಜಾನೆ 4ಗಂಟೆಗೆ ಸರಿಯಾಗಿ ಎದ್ದಿದ್ದರು. ವ್ಯಾಯಾಮ, ಯೋಗ, ಧ್ಯಾನದಲ್ಲಿ ತಲ್ಲೀನರಾಗಿದ್ದರು. ಬ್ರಹ್ಮೀ ಸಮಯವನ್ನು ಅಪ್ಪ ಅಪ್ಪಿ ತಪ್ಪಿಯೂ ತಪ್ಪಿಸಿಕೊಳ್ಳುವುದಿಲ್ಲ ಎಂಬುದು ನನಗೆ ಚನ್ನಾಗಿ ಗೊತ್ತು. ಅಪ್ಪ ಸೂರ್ಯೋದಯದವರೆಗೆ ಮಲಗಿದ್ದು ನಾವ್ಯಾರೂ ಎಂದೂ ಕಂಡಿದ್ದೇ ಇಲ್ಲ. ಶಾಲಾ-ಕಾಲೇಜು ದಿನಗಳಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆ ನಮ್ಮನ್ನು ಎಬ್ಬಿಸಿ ಓದಲು ಅಣಿಗೊಳಿಸುತ್ತಿದ್ದರು. ಬೆಳಗ್ಗೆ ಎಷ್ಟು ಪ್ರಶಾಂತವಾಗಿರುತ್ತದೆ, ಬೆಳಗಿನ ಜಾವ ಓದಿದ್ದು ತಲೆಗೆ ಹತ್ತುತ್ತದೆ; ಜೀವನದಲ್ಲಿ ಮರೆಯದೆ ನೆನಪಿಟ್ಟುಕೊಳ್ಳುತ್ತೀರಿ ಎಂದು ಹೇಳಿದ್ದು ಸ್ಮೃತಿಪಟಲದಲ್ಲಿ ಸುಳಿದಾಡ ತೊಡಗಿತ್ತು. ಅಷ್ಟರಲ್ಲೇ ಎದ್ದು ಕುಳಿತ ಭಾವನಾ ‘ನನ್ನೆಡೆಗೆ ನೋಡಿ ನೀವು ಒಂದು ದಿನ ತಡವಾಗಿ ಮಲಗಿದರೆ ಬೆಳಗ್ಗೆ ವಾಕಿಂಗ್ ಬಿಡುತ್ತೀರಿ. ತಾತ ನೋಡ್ರಿ ಅಲ್ಲಿ’ ಎಂದು ನನ್ನ ರೇಗಿಸಿದಳು.
ಐದಾರು ವರ್ಷಗಳ ಹಿಂದೆ ದುರ್ಗಕ್ಕೆ ಬಂದಾಗ ಬೆಳಗ್ಗೆ ಎದ್ದು ಕೋಟೆ, ಆಡುಮಲ್ಲೇಶ್ವರದತ್ತ ವಾಕಿಂಗ್ ಹೊರಡುತ್ತಿದ್ದ ಅಪ್ಪ ಈಸಲ ವಾಕಿಂಗ್ ಹೊರಡಲಿಲ್ಲ. ಎಪ್ಪತ್ತರ ವಯಸ್ಸಿನಲ್ಲೂ ಅಪ್ಪ ನಮ್ಮೊಂದಿಗೆ ಏಳುಸುತ್ತಿನ ಕೋಟೆ ಸುತ್ತಿದ್ದರು. ಏಕನಾಥೇಶ್ವರಿ ದೇಗುಲ, ಗಾಳಿಗೋಪುರ, ಮೂಲ ಮುರುಘಾಮಠ, ಸಂಪಿಗೆ ಸಿದ್ದೇಶ್ವರ ದೇಗುಲದಿಂದ ಒನಕೆ ಓಬವ್ವನ ಕಿಂಡಿವರೆಗೆ ವಿರಾಮವಿಲ್ಲದೆ ನಡೆದಿದ್ದರು. ಈಗ ವಾಕಿಂಗ್ ಬಿಟ್ಟಿದ್ದು ಮನೆ ಬಳಿಯೇ ಸುತ್ತಾಡುತ್ತಾರೆ. ವಿನಯನ ಜತೆಗೆ ಮನೆ ಅಂಗಳಕ್ಕೆ ಬಂದವರೇ ‘ಅರೇ ಈ ಮನೆಯ ಬಳಿ ಥೇಟು ನಮ್ಮೂರ ವಾತಾವರಣವೇ ಇದೆಯಲ್ಲ’ ಎಂದು ಹುಬ್ಬೇರಿಸಿದರು.
‘ಮನೆಯ ಗೇಟಿನ ಬಲಕ್ಕೆ ಸೀತಾಫಲ, ಎಡಕ್ಕೆ ಹೊಂಗೆ ಮರಗಳಿವೆ. ಎರಡೂ ಸಹ ತಂಪು ಮತ್ತು ಕಣ್ಮನಕೆ ಬಲು ಇಂಪು. ಶಹಾಪುರದ ಬೆಟ್ಟದಲ್ಲಿ
ನೈಸರ್ಗಿಕವಾಗಿ ಸೀತಾಫಲ ಬೆಳೆದಷ್ಟು ಬೇರೆಲ್ಲೂ ಬೆಳೆಯಲ್ಲ. ನಮ್ಮೂರ ಸೀತಾಫಲದ ರುಚಿ ಯಾವೂರ ಹಣ್ಣಿನಲ್ಲೂ ಸಿಗಲ್ಲ. ಅದೇ ರೀತಿಯ ಸೀತಾಫಲ ಇಲ್ಲಿ ಕಂಡು ಬೆರಗಾಯಿತು. ಅರೆರೇ ದನ-ಕರುಗಳು ಈ ಸಿಟಿಯಲ್ಲಿ ಓಡಾಡುತ್ತಿವೆಯಲ್ಲ ‘ ಎಂದಾಗ ಹಿಂಭಾಗದ ಖಾಲಿ ಸೈಟಿನಲ್ಲಿ
ಹಸುಗಳ ಹಿಂಡೇ ಮಲಗಿರುವುದನ್ನು ತೋರಿಸಿದ ವಿನಯ ‘ಹಿಂಭಾಗದಲ್ಲೇ ಜೋಗಿಮಟ್ಟಿ ವನ್ಯಧಾಮ ಕಾಣುತ್ತದೆ’ ಎಂದನು. ಪರಿಸರ ಕಂಡು ಖುಷಿಯಾದ ಅಪ್ಪ ‘ಇದು ಯಾವ ಬಡಾವಣೆ’ ಎಂದು ಕೇಳಿದಾಗ ‘ಮೊದಲು ನಾವಿದ್ದದ್ದು ಪ್ರಶಾಂತ ನಗರ, ಈಗಿರುವುದು ಟೀಚರ್ಸ್ ಕಾಲೋನಿ ಎಂದನು’. ‘ಓಹ್, ಪ್ರಶಾಂತ ನಗರದಲ್ಲಿ ಪ್ರಶಾಂತವಾಗಿಯೇ ಇದ್ದಿರಿ. ಟೀಚರ್ಸ್ ಕಾಲೋನಿ ಅಂದ್ರೆ ನಮ್ಮ ಕಾಲೋನಿ. ಆರು ತಿಂಗಳಿಂದ ಇಲ್ಲಿಗೆ ಬಂದ ಬಳಿಕ ನಿಮ್ಮ ಅಪ್ಪನೂ ಓದು-ಬರಹ ಹೆಚ್ಚಿಸಿದ್ದಾನೆ ನೋಡು ಹೇಗಿದೆ ಪ್ರಭಾವ’ ಎಂದು ನಕ್ಕರು ಅಪ್ಪ.
‘ಒಂದು ರೊಟ್ಟಿ ತೆಗೆದುಕೊಂಡು ಬಾ ಇಲ್ಲಿ’ ಎಂದು ಹೇಳಿ ವಿನಯನ ಕೈಯಿಂದಲೇ ಹಸುವಿಗೆ ರೊಟ್ಟಿ ತಿನ್ನಿಸಿದರು. ‘ನಮ್ಮ ಅಪ್ಪ ಸಹ ಇದೇ ರೀತಿ ಪ್ರಾಣಿ-ಪಕ್ಷಿಗಳಿಗೆ ಆಹಾರ ಹಂಚುತ್ತಿದ್ದರು’ ಎಂದು ಸಂತಗುಣದ ಲಿಂಗಪ್ಪ ತಾತನನ್ನು ನೆನದರು. ‘ಊಟಕ್ಕೆ ಕೂಡುವ ಮುನ್ನ ಒಂದು ತುತ್ತು ಪಕ್ಷಿಗಳಿಗೆ
ತೆಗೆದಿಡುತ್ತಿದ್ದರು. ಆ ಒಂದು ತುತ್ತು ಅನ್ನಕ್ಕಾಗಿ ಮನೆ ಅಂಗಳಕ್ಕೆ ನಿತ್ಯ ಗುಬ್ಬಿಗಳ ಹಿಂಡು ಬರುತ್ತಿತ್ತು. ಆದರೆ ಅವೇ ಗುಬ್ಬಿಗಳು ಬರುತ್ತವೋ ಅಥವಾ ಬೇರೆ ಗುಬ್ಬಿಗಳು ಬರುತ್ತವೆಯೋ ಎಂಬುದು ನಿಮ್ಮ ದೊಡ್ಡಪ್ಪ ರಮೇಶನಿಗೆ ಕನ್ ಫ್ಯೂಸನ್ ಇತ್ತು. ಅದೊಂದ್ಸಲ ನಾವಿಲ್ಲದ ಸಮಯ ಗುಬ್ಬಿಯೊಂದನ್ನು ಹಿಡಿದು ಹಸಿರು ಬಣ್ಣ ಹಚ್ಚಿ ಬಿಟ್ಟಿದ್ದನು. ಬಳಿಕ ನೋಡಿದರೆ ಅದೇ ಗುಬ್ಬಿಯ ಹಿಂಡು ನಿತ್ಯ ಆಹಾರಕ್ಕಾಗಿ ಬರುವುದು ಖಚಿತವಾಯಿತೆಂದು ಹೇಳಿ ತಾತನಿಂದ ಬೈಸಿಕೊಂಡಿದ್ದೆನೆಂಬ ಕಥನ ಕೇಳಿದ ವಿನಯ ದೊಡ್ಡಪ್ಪ ಬೈಸಿಕೊಂಡಿದ್ದರೆಂಬ ವಿಷಯ ತಿಳಿದು ಅಚ್ಚರಿಗೊಂಡನು.
ಮನೆಯೊಳಕ್ಕೆ ಬರುತ್ತಲೇ ‘ಸುತ್ತಲೂ ಖಾಲಿ ಸೈಟುಗಳಿದ್ದಲ್ಲಿ ಹುಳು-ಉಪಡಿಗಳಿರುತ್ತವೆ ಹುಷಾರು’ ಎಂದು ನಮಗೆ ಎಚ್ಚರಿಸಿದರು. ನಾನು ಹಾಲು ಕುಡಿಯುತ್ತಿರುವುದನ್ನು ಗಮನಿಸಿ ಪ್ರಶ್ನಿಸಿದರು. ಗಂಟಲು ನೋವಿದ್ದು ವೈದ್ಯರು ಕಾಫಿ ಕುಡಿಯದಂತೆ ಹೇಳಿದ್ದಾರೆಂದಾಗ ‘ಹಾಲಿನಲ್ಲಿ ಸ್ವಲ್ಪ ಶುಂಟಿ ಕಲಿಸಿ ಕುಡಿ. ಗಂಟಲು ನೋವು ಕಡಿಮೆ ಆಗುತ್ತದೆ. ಅರಿಶಿಣದಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ. ಕಫಾ ಸಹ ಆಗೋದಿಲ್ಲ’ ಎಂದು ಸಲಹೆ ನೀಡಿದರು. ಮೂರು ದಿನದಲ್ಲಿ ಗಂಟಲು ನೋವು ಮಾಯವಾಯಿತು!
ನಿತ್ಯ ದಿನಚರಿಯಂತೆ ಸಮಯಕ್ಕೆ ಸರಿಯಾಗಿ ಸ್ನಾನ ಪೂರೈಸಿದರು. ಹಣೆಯ ಮೇಲೆ ವಿಭೂತಿ ಧರಿಸಿ ಗಂಟೆಕಾಲ ಶ್ರದ್ಧೆ ಭಕ್ತಿಯ ಪೂಜೆಗೈದರು. ಪೂಜೆ ಬಳಿಕ ಮಟ್ಟಸವಾಗಿ ಧೋತ್ರ ತೊಟ್ಟು, ನೆಹರು ಶರ್ಟ್, ಮೇಲೊಂದು ವೇಸ್ ಕೋಟ್ ಧರಸಿ ಶಿಸ್ತಿನಿಂದ ತಿಂಡಿಗೆ ಕುಳಿತರು. ಅಪ್ಪನಿಗೆ ಭಾವನಾ ತಿಂಡಿಗೆಂದು ಇಡ್ಲಿ ಬಡಿಸಿದಳು. ತಿಂಡಿ ಸೇವಿಸುತ್ತಲೇ ‘ಆಹಾರ ಕ್ರಮ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಆದಷ್ಟು ಜೋಳದ ರೊಟ್ಟಿ -ಕಾಯಿಪಲ್ಯ, ಮುದ್ದೆಯನ್ನೇ ಸೇವಿಸುವುದು ಒಳಿತು. ತಿಂಡಿ ಎಂಬುದು ಮನುಷ್ಯನನ್ನು ಟೊಳ್ಳು ಮಾಡುತ್ತದೆ. ಈಗಿನ ಎಣ್ಣೆ, ಮಸಾಲಾ, ಜಂಕ್ ಫುಡ್, ಬೇಕರಿ ಪದಾರ್ಥಗಳು ಎಲ್ಲವೂ ಆಸ್ಪತ್ರೆಗಳಿಗೆ ಲಾಭ ಮಾಡುವಂತಿವೆ. ಮಕ್ಕಳು ಗಟ್ಟಿಯಾಗಿರಲು ನಮ್ಮ ಶೈಲಿಯ ಆಹಾರವನ್ನೇ ರೂಢಿ ಮಾಡಿಸಬೇಕೆಂದು ಹೇಳಿ ಮೊಮ್ಮಕ್ಕಳಿಗೂ ಎಂಥ ಆಹಾರ ದೇಹಕ್ಕೆ ಒಳಿತೆಂದು ಮನವರಿಕೆ ಮಾಡಿದರು. ಆಹಾರ ಪದ್ಧತಿ ಕೆಟ್ಟಿದ್ದೇ ಅನಾರೋಗ್ಯ ಹೆಚ್ಚಳಕ್ಕೆ ಮುಖ್ಯ ಕಾರಣ. ನಮ್ಮ ಉತ್ತರ ಕರ್ನಾಟಕದಲ್ಲಿ ಇನ್ನೂ ಊಟ ಕೆಟ್ಟಿಲ್ಲ. ರೊಟ್ಟಿ ತಿಂದು ಗಟ್ಟಿಮುಟ್ಟಾಗಿರ್ತಾರೆಂದರು’. ವಿನಯ ‘ನಾನೂ ಇನ್ಮೇಲೆ ರೊಟ್ಟಿ ತಿನ್ನುತ್ತೇನೆ, ಚಿಪ್ಸ್ ತಿನ್ನುವುದು ಬಿಡುತ್ತೇನೆಂದನು’, ವಿವೇಕ ಮಾತ್ರ ಸೈಲೆಂಟ್!.
ಎಂದೂ ಶಾಲೆ ಬಿಡದ ವಿನಯ-ವಿವೇಕ ತಾತ ಬಂದರೆಂಬ ಕಾರಣಕ್ಕೆ ರಜೆ ಹಾಕಿ ಮನೆಯಲ್ಲೇ ಉಳಿದರು. ತಾತನೊಂದಿಗೆ ಕಾಲ ಕಳೆದರು ನೆಂಟರಿಷ್ಟರ ಮನೆಗಳಿಗೆ, ದೇಗುಲಗಳಿಗೆ ಹೋಗಿ ಬಂದರು. ಅಷ್ಟರಲ್ಲೇ ಅಪ್ಪನಿಗೆ ಊರಿಂದ ಬ್ಯಾಂಕ್ ಮ್ಯಾನೇಜರ್ ಒಬ್ಬರಿಂದ ಕಾಲ್ ಬಂತು. ಜಮೀನಿನ ಕೆಲಸದ ಬಗ್ಗೆ ಮಾವ ಕಾಲ್ ಮಾಡಿದರು. ಅಪ್ಪನ ಆಪ್ತ ಗೆಳೆಯರೊಬ್ಬರು ಅನಾರೋಗ್ಯದಿಂದ ಕಲಬುರಗಿಯಲ್ಲಿ ಆಸ್ಪತ್ರೆಗೆ ಅಡ್ಮಿಟ್ ಆಗಿರುವ ವರ್ತಮಾನ ತಿಳಿಯಿತು. ಸಂಜೆ ವೇಳೆಗೆ ಅಪ್ಪ ಊರ ಕಡೆ ಹೊರಡಲು ಅಣಿಯಾದರು. ನಾನು ಸಂಕ್ರಾಂತಿ ಸಮಯದಲ್ಲಿ ಮತ್ತೊಮ್ಮೆ ದುರ್ಗಕ್ಕೆ ಬರುತ್ತೇನೆಂದು ಹೇಳುತ್ತಲೇ ಬೆಳಗಿನ ಪ್ರಯಾಣಕ್ಕೆ ಸಿದ್ಧಗೊಂಡಿದ್ದರು. ನಾನು ರಾತ್ರಿ ಮನೆಗೆ ಬಂದಾಗಲೇ ಅಪ್ಪ ಬಂದಷ್ಟೇ ದಿಡೀರನೇ ಊರಿಗೆ ಹೊರಟಿದ್ದಾರೆಂದು ತಿಳಿಯಿತು.
ಇನ್ನೊಂದೆರಡು ದಿನ ಇದ್ದು ಹೋಗಬಹುದಿತ್ತೆಂದು ಹೇಳಲು ಹೋದೆನು. ‘ಇಲ್ಲ ಬ್ಯಾಂಕು, ಜಮೀನಿನ ಕೆಲಸಗಳು ಬಂದಿವೆ. ನನ್ನ ಸ್ನೇಹಿತ ರಾಮಚಂದ್ರಪ್ಪಗೆ ಬೇರೆ ಆರೋಗ್ಯ ಸರಿಯಿಲ್ಲವಂತೆ ಮಾತಾಡಿಸಲು ಹೋಗಬೇಕು. ನಿಮ್ಮ ಸ್ನೇಹಿತರು ಯಾರಿಗೂ ಭೇಟಿ ಆಗಲು ಆಗಲಿಲ್ಲ. ನಾಳೆ ಬೆಳಗ್ಗೆ ಭೇಟಿಯಾಗಿ, ಹಾಗೇ ಊರಿಗೆ ಹೊರಡುತ್ತೇನೆ’ ಎಂದರು. ಎಂದಿನಂತೆ ದಿನ ಆರಂಭಿಸಿದ ಅಪ್ಪ ಅಂಗಳದಲ್ಲಿ ವಾಕಿಂಗ್ ವೇಳೆ ವಿನಯನ ಸೈಕಲ್ ನೋಡಿ ‘ಸೈಕಲ್ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಾನು ಶಿಕ್ಷಕನಾಗಿದ್ದಾಗ ಅಟ್ಲಸ್ ಸೈಕಲ್ ನಲ್ಲೇ ಶಾಲೆಗೆ ಹೋಗುತ್ತಿದ್ದೆನು. ರಮೇಶ, ಮಲ್ಲಿಕಾರ್ಜುನ ದೊಡ್ಡಪ್ಪ ಅವರಿಗೆ ಕೇಳು ಸೈಕಲ್ ಎಷ್ಟು ನೀಟಾಗಿರುತ್ತಿತ್ತು. ವಸ್ತುಗಳನ್ನು ನಾವು ಜೋಪಾನವಾಗಿ ಬಳಸಬೇಕು. ನಾವು ವಸ್ತುಗಳನ್ನು ಕಾಯ್ದರೆ ಅವು ನಮ್ಮನ್ನು ಕಾಯುತ್ತವೆಂದು ಹೇಳುತ್ತಲೇ ಸೈಕಲ್ ಓಡಿಸುವಾಗಿ ಮೈಯೆಲ್ಲಾ ಕಣ್ಣಾಗಿರಬೇಕು. ನಾವು ಹೇಗೆ ಚಲಿಸುತ್ತಿದ್ದೇವೆಂಬುದರ ಜತೆಗೆ ಎದುರಿನವರು ಹೇಗೆ ಹೊರಟಿದ್ದಾರೆಂಬುದರ ಕಡೆಗೂ ಗಮನವಿರಬೇಕಾಗುತ್ತದೆ’ ಎಂದು ತಿಳಿ ಹೇಳಿದರು.
ಶಹಾಪುರಕ್ಕೆ ಬಂದಿದ್ದ ನನ್ನ ಸ್ನೇಹಿತರನ್ನು ನೆನದ ಅಪ್ಪ ಭೇಟಿ ಮಾಡುವ ಇರಾದೆ ವ್ಯಕ್ತ ಪಡಿಸಿದರು. ತಿಂಗಳ ಹಿಂದೆ ಫೋನ್ ನಲ್ಲಿ ಮಾತಾಡಿದಾಗ ದುರ್ಗಕ್ಕೆ ಬಂದಾಗ ಮನೆಗೆ ಬನ್ನಿ ಎಂದಿದ್ದ ಹಿರಿಯ ಪತ್ರಕರ್ತ ಶ. ಮಂಜುನಾಥ್ ಅವರನ್ನು ನೆನೆದರು. ಹಿರಿಯ ಪತ್ರಕರ್ತ ಶ. ಮಂಜುನಾಥ್ ಹಾಗೂ ಚಂದ್ರು ಅವರ ಮನೆ ಭೇಟಿಗೆ ನಿಗದಿ ಮಾಡಿದೆನು. ಮೇಲಂತಸ್ತಿನಲ್ಲಿರುವ ಚಂದ್ರು ಮನೆಗೆ ಅಪ್ಪ ಅನಾಯಾಸವಾಗಿ ಹತ್ತಿ ಬಂದರು. ಚಂದ್ರು ಮನೆಗೆ ಗೆಳೆಯರಾದ ಮಹೇಶಬಾಬು, ಸಿದ್ಧರಾಜು ಮತ್ತು ಕಿರಣ್ ಆಗಮಿಸಿ ಅಪ್ಪನನ್ನು ಭೇಟಿಯಾದರು. ಕಾಫಿ ಕುಡಿಯುತ್ತಲೇ ಎಲ್ಲರ ಕ್ಷೇಮ ವಿಚಾರಿಸಿದ ಅಪ್ಪ ಸ್ನೇಹ ಬಂಧನ ಹೀಗೆ ಇರಲಿ. ನಮ್ಮ ಬಸುಗೆ ದುರ್ಗದಲ್ಲಿ ನೀವೆ ಬಂಧು-ಬಳಗ ಎಂದು ಹೇಳಿದರು. ಏಕಾಏಕಿ ಅನಾರೋಗ್ಯಕ್ಕೀಡಾದ ಅತ್ತೆಯನ್ನು ಚಂದ್ರು ಜತನದಿಂದ ನೋಡಿಕೊಳ್ಳುತ್ತಿರುವುದು ತಿಳಿದು ಭೇಷ್ ಎಂದರು.
ಕಾರಿನಲ್ಲಿ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಹೊತ್ತು ತಂದಿದ್ದ ಅಪ್ಪ ಎಲ್ಲರಿಗೂ ಒಂದೊಂದು ಪುಸ್ತಕಗಳನ್ನು ನೀಡಿದರು. ಓದುವ ಒಲವಿಗಾಗಿ, ಓದಿನ ಖುಷಿಗಾಗಿ, ಓದಿನ ಹರಿವು ಸಾಗರವಾಗಲಿ… ಹೀಗೆ ಒಂದೊಂದು ಪುಸ್ತಕದ ಮೊದಲ ಪುಟಗಳಲ್ಲಿ ಬರೆದು ಕನ್ನಡದಲ್ಲೇ ತನ್ನ ಹಸ್ತಾಕ್ಷರ ಹಾಕಿ ಪುಸ್ತಕಗಳನ್ನು ನೀಡುವ ಮೂಲಕ ಓದು ಪತ್ರಿಕಾ ವೃತ್ತಿಯ ಜೀವಾಳ ಎಂಬುದನ್ನು ಮನದಟ್ಟು ಮಾಡಿಕೊಟ್ಟರು.
ನಮ್ಮ ಹಳೇ ಮನೆಯ ಕೋಣೆಯೊಂದರಲ್ಲಿ ಮಣ್ಣಿನ ಗೋಡೆಗೆ ಎರಡೆರಡು ಸಲಾಕೆ ಹೊಡೆದು ಫ್ಲೈವುಡ್ ಮಾದರಿ ಕಟ್ಟಿಗೆ ಪಳಿಗಳನ್ನಿರಿಸಿ ಅವುಗಳ ಮೇಲೆ ಸಾಲಾಗಿ ಪುಸ್ತಕಗಳನ್ನು ಜೋಡಿಸಿದ್ದು, ಧೋತ್ರೆ ಜವಳಿ ಅಂಗಡಿಯಿಂದ ರಟ್ಟಿನ ಬಾಕ್ಸ್ ಗಳನ್ನು ತಂದು ಬುಕ್ಸ್ ಗಳನ್ನು ಜೋಪಾನವಾಗಿಡುತ್ತಿದ್ದ ಪರಿ ನೆನಪಾಯಿತು. ಅಪ್ಪ ಅದೆಷ್ಟು ಪುಸ್ತಕ, ಮ್ಯಾಗ್ ಜಿನ್ ಗಳು , ಪತ್ರಿಕೆಗಳನ್ನು ಸಂಗ್ರಹಿಸಿದ್ದರು. ನಿತ್ಯ ಸಂಯುಕ್ತ ಕರ್ನಾಟಕ, ವಿಜಯಕರ್ನಾಟಕ ಪತ್ರಿಕೆ ತಾವೂ ಓದಿ ನಮಗೂ ಓದಲು ಹೇಳುತ್ತಿದ್ದುದು ಕಣ್ಮುಂದೆ ಸರಿದಾಡಿತು.

ಹಿರಿಯ ಪತ್ರಕರ್ತ ಶ.ಮಂಜುನಾಥ್ ಅವರ ಮನೆಗೆ ಹೋದಾಕ್ಷಣ ಹಾಲ್ ನಲ್ಲಿದ್ದ ದಂಪತಿಯ ಬಾವಚಿತ್ರ ಕಂಡು ‘ನಿಮ್ಮ ಅಪ್ಪ-ಅಮ್ಮನ ಚಿತ್ರಗಳೇ’ ಎನ್ನುತ್ತ ಕೈಮುಗಿದರು. ‘ನಮ್ಮ ಅಪ್ಪ ಅಮ್ಮನ ಚಿತ್ರಗಳಲ್ಲ ಅಪ್ಪಾಜಿ; ಈ ಮನೆಯ ಮಾಲೀಕರ ಚಿತ್ರಗಳಿವು. ನಾವೀ ಮನೆಯಲ್ಲಿ ಬಾಡಿಗೆಗಿದ್ದೇವೆ. ಪರಿಚಿತರೇ ಆಗಿದ್ದು ಫೋಟೋಗಳನ್ನು ಹಾಗೇ ಉಳಿಸಿಕೊಂಡಿದ್ದೇವೆ. ನಾವೂ ಸಹ ಹಿರಿಯರ ಚಿತ್ರಗಳಿಗೆ ನಿತ್ಯ ಕೈ ಮುಗಿಯುತ್ತೇವೆ’ ಎಂದು ಮಂಜುನಾಥ್ ಅವರು ಹೇಳಿದಾಗ ಅಪ್ಪ ಭಾವುಕರಾದರು. ‘ಈ ಸಂಸ್ಕಾರ ಉಳಿಯಬೇಕು, ಬೆಳೆಯಬೇಕು. ನಾನೀಗ ಊರಿಗೆ ಹೊರಟಿದ್ದೇನೆ ಮತ್ತೊಮ್ಮೆ ಬಂದಾಗ ನಿಮ್ಮಂಥವರ ಜತೆ ಹೆಚ್ಚು ಸಮಯ ಕಳೆಯುತ್ತೇನೆ’ ಎಂದು ಹೇಳಿ ಊರಿನತ್ತ ಹೊರಟರು.
ಹೊಸಪೇಟೆ ರಸ್ತೆಗೆ ತೆರಳುವ ಮದ್ಯೆ ಯುಟ್ಯೂಬ್ ನಲ್ಲಿ ನಾನು ವೀಕ್ಷಿಸಿದ ತತ್ವಪದ ತೋರಿಸಿದೆನು. ‘ಹಳ್ಳದ ದಂಡ್ಯಾಗ ಮೆಯ್ತಾವ ಮೂರು ಎಮ್ಮೆಗಳು. ಒಂದು ಗೊಡ್ಡಾಯ್ತಲ್ಲ, ಎರಡು ಇಯ್ದೆ ಇಲ್ಲ…’ ಪದ ಕೇಳುತ್ತಿದ್ದಂತೆ ಇದು ನಮ ಕಲಬುರಗಿಯ ಕಡೆ ಹೆಚ್ಚಾಗಿ ಹಾಡುವ ಬಕ್ಕು ಪದಗಳು ಅಂತ ತತ್ವಪದ. ರಾಂಪುರದ ಬಕ್ಕಯ್ಯ ಮುತ್ಯ ಹಾಡಿದ ಪದಗಳಿವು. ಒಂದು ಅರ್ಧ ಸತ್ಯ, ಎರಡು ಪೂರ್ಣ ಸುಳ್ಳು ಈ ಜಮಾನಾದಲ್ಲಿವೆ ಎಂಬುದು ಈ ತತ್ವಪದದ ಸಾರ. ಇದೆಲ್ಲಿ ಸಿಕ್ಕಿತೆಂದರು’. ಯುಟ್ಯೂಬ್ ನಲ್ಲಿ ಎಂದು ಹೇಳಿದಾಗ ‘ಪರವಾಗಿಲ್ಲ ಹಳೇ ಬೇರು ಹೊಸ ಚಿಗುರು ಬೆರೆತಿರುವುದು ಶ್ರೇಷ್ಠ ಸಂಗತಿ’ ಎಂದು ಸಂಭ್ರಮಿಸಿದರು.
ನಾವು ಹೊಸಪೇಟೆಯ ರಸ್ತೆಯವರೆಗೆ ಹೋಗಿ ಅಪ್ಪನಿಗೆ ಬೀಳ್ಕೊಟ್ಟೆವು. ಎರಡು ದಶಕದಿಂದ ಚಿತ್ರದುರ್ಗ ಸೇರಿರುವ ನನಗೆ ಅಪ್ಪನ ಸನಿಹ ಸಾಂಗತ್ಯ ಕಳೆದುಕೊಂಡ ಭಾವ ಸದಾ ಕಾಡುತ್ತಲೇ ಇರುತ್ತದೆ. ಎರಡು ದಿನ ರಜೆ ಹಾಕಿ ಊರಿಗೆ ಹೋದಾಗ ಸಂಬಂಧಿಕರು, ಸ್ನೇಹಿತರು ಎಂದು ಸುತ್ತುವುದರಲ್ಲೇ ಕಾಲ ಕಳೆಯುತ್ತದೆ. ಅಪ್ಪ ಎರಡು ದಿನಕ್ಕೆ ದುರ್ಗಕ್ಕೆ ಬಂದಿದ್ದರಾದರೂ ನಮ್ಮ ಜೀವನಕ್ಕಾಗುವಷ್ಟು ಬದುಕಿನ ಪಾಠ ಹೇಳಿದರು. ಅಪ್ಪನ ಜೀವನ ಪದ್ಧತಿ, ಜೀವನೋತ್ಸಾಹ ನನಗೆಂದೂ ಜೀವನಗೀತೆ. ನನ್ನ ಪಾಲಿಗೆ ಅಪ್ಪ ಅಂದರೆ ಭಗವದ್ಗೀತೆ!.
ತಾತ ಬೇಗ ಊರಿಗೆ ಹೊರಟರೆಂದು ವಿವೇಕ ಮುನಿಸಿಕೊಂಡಿದ್ದನು. ಸಂಜೆ ವೇಳೆಗೆ ಉರಿಚಳಿಯೇ ಆವರಿಸಿತು. ನಿದ್ದೆಯಲ್ಲೂ ತಾತ ತಾತಾ ಎಂದು ಕನವರಿಸತೊಡಗಿದನು. ಫೋನ್ ಮಾಡಿಕೊಟ್ಟಾಗ ತಾತನ ಜತೆ ಜಗಳ ಕಾದನು. ‘ಇಷ್ಟೊಂದು ಹಣ್ಣು ತಂದಿಟ್ಟು ಹಾಗೇ ಹೋಗಿದ್ದಿಯಲ್ಲ. ಭಾಳ ದಿನ ರಜೆ ಇದ್ದಾಗ ಬರಬೇಕಲ್ಲವೇ’ ಎಂದು ಜೋರು ಮಾಡಿದನು. ‘ಸಂಕ್ರಾಂತಿ ವೇಳೆಗೆ ಮತ್ತೆ ಬರುತ್ತೇನೆ’ ಎಂದು ಸಮಾಧಾನ ಹೇಳಿದಾಗ ‘ಬರಲೇಬೇಕು’ ಎಂದು ತಾತಗೆ ಆರ್ಡರ್ ಮಾಡಿದನು. ವಿವೇಕನ ಜತೆ ನಾವೆಲ್ಲಾ ಶುಭ ಸಂಕ್ರಾಂತಿಗೆ ಕಾತುರದಿಂದ ಕಾದಿದ್ದೇವೆ…






ಸಾಂಸ್ಕೃತಿಕ ಪರಂಪರೆಯ ಅಪೂರ್ವ ಚೇತನ ಅಪ್ಪನ ಕುರಿತು ತಮ್ಮ ಬರಹ ಓದಿ ತುಂಬಾ ಖುಷಿಯಾಗಿ ಮನಸ್ಸು ಭಾವುಕತೆಗೆ ಒಳಗಾಯಿತು ಸರ್. ಮನೆಯಲ್ಲಿ ಮೊಮ್ಮಕ್ಕಳಿಗೆ ಹೇಳಿದ ಬುದ್ದಿಮಾತು. ಆಹಾರ ಕುರಿತು ಹೇಳಿದ ವಿಚಾರಗಳು, ತಮ್ಮ ಸ್ನೇಹಿತರ ಮನೆಗೆ ಬೇಟಿ ನೀಡಿ ಆಡಿದ ಮಾತುಗಳು. ಇವತ್ತಿನ ಯಾಂತ್ರಿಕ, ಔಪಚಾರಿಕ ಜೀವನ ಸಾಗಿಸುತ್ತಿರುವ ಮನುಷ್ಯನಿಗೆ ಅಪ್ಪನ ಭಾವನಾತ್ಮಕ ಮನುಷ್ಯ ಪ್ರೀತಿಯ ವ್ಯಕ್ತಿತ್ವ ಮತ್ತು ಅವರ ವಿಚಾರಗಳು ತುಂಬಾ ಅಗತ್ಯವಾಗಿವೆ ಸರ್. ನೀಮಗೆ ಅರಾಮ ಇಲ್ಲದಾಗ ನಾನು ವಿಜಯಪುರದ ಅಕ್ಕಮಹಾದೇವಿ ವಿ.ವಿಯಲ್ಲಿ ಮೌಲ್ಯಮಾಪನ ಕಾರ್ಯದಲ್ಲಿದ್ದೆ ಸರ್. ಬಂದ ಮೇಲೆ ಮನೆಗೆ ಬರಬೇಕು ಎಂದು ಮಲ್ಲು ಸರ್ ಅವರಿಗೆ ಪೋನ್ ಮಾಡಿದಾಗ ನೀವು ಊರಿಗೆ ಹೋಗಿದ್ದಿರಿ. ನೀವು ಈ ಬಾರಿ ಊರಿಗೆ ಬಂದಾಗ ಪೋನ್ ಮಾಡ್ರಿ ಸರ್. ಬೇಟಿಯಾಗುತ್ತೇನೆ.
Basavaraj Mudanur