ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಎಂಬ ತ್ಯಾಗದ ನೆರಳು..

ಅನಿಲ್ ಎಂ ಚಟ್ನಳ್ಳಿ

**

ಅಪ್ಪ ಎಂಬ ಆಲದ ಮರದ ಕೆಳಗೆ ಆಡುತ್ತ ಬೆಳೆಯುವ ಮಕ್ಕಳಿಗೆ ಕತ್ತೆತ್ತಿ ನೋಡುವ ಪುರುಸೊತ್ತು ಸಿಗುವುದಿಲ್ಲ. ಇವತ್ತು ಅಪ್ಪಂದಿರ ದಿನದ ನೆನಪಿನಲ್ಲಿ ಅಪ್ಪನೊಂದಿಗಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಾಗ ಅಪ್ಪ ಬದಲಾಗಿದ್ದಾನೆ ಅನಿಸಿತು. ಹೌದು ಅಪ್ಪ ಬದಲಾಗುತ್ತಾನೆ. ತೀರಾ ಹಟ ಹಿಡಿದರೆ ಅಪರೂಪಕ್ಕೊಮ್ಮೆ ಐಸ್ ಕ್ಯಾಂಡಿ ಕೊಡಿಸುತ್ತಿದ್ದ ಅಪ್ಪ ಮೊಮ್ಮಕ್ಕಳಿಗೆ ಕೆಳಿದ್ದನ್ನೆಲ್ಲ ಕೊಡಿಸುತ್ತಾನೆ. ಸ್ಕೂಲಲ್ಲಿದ್ದಾಗ ಮಾರ್ಕ್ಸು ಕಮ್ಮಿ ಬಂದರೆ ಮಕ್ಕಳಿಗೆ ಗದರುತ್ತಿದ್ದ ಅಪ್ಪ ಈಗ ಓದು ಬರಹ ಅಂತ ಮೊಮ್ಮಕ್ಕಳ ಮೇಲೆ ಒತ್ತಡ ಹೇರಬೇಡಿ ಎಂದು ಮಕ್ಕಳಿಗೆ ಬುದ್ಧಿಮಾತು ಹೇಳುತ್ತಾನೆ. ಒಂದಕ್ಕೊಂದೆ ಎರಡಕ್ಕೆರಡೆ ಮಾತನಾಡುತ್ತಿದ್ದ ಅಪ್ಪನೊಂದಿಗೆ, ಮಕ್ಕಳು ಪ್ರಾಯಕ್ಕೆ ಬಂದ ಮೇಲೆ ಒಂದಿಷ್ಟು ಸಲುಗೆ ಬೆಳೆಯುತ್ತದೆ. ಅಮ್ಮನ ಸೆರಗಿನ ಮರೆಯಲ್ಲಿ ನಿಂತು ತಮ್ಮ ಅಪೀಲುಗಳನ್ನು ಸಲ್ಲಿಸುತ್ತಿದ್ದ ಮಕ್ಕಳು ಈಗ ಅಪ್ಪನೊಂದಿಗೆ ಲೋಕಾಭಿಮರಾಗಿ ಹರಟುತ್ತಾರೆ. 

ಮಗಳನ್ನು ಮದುವೆ ಮಾಡಿ ಕಳುಹಿಸುವಾಗ ಮೊದಲ ಬಾರಿ ಅಪ್ಪನ ಕಣ್ಣಲ್ಲಿ ನೀರಾಡುತ್ತದೆ. ವಯಸ್ಸಾದಂತೆಲ್ಲ ಅಪ್ಪನ ಗಂಭೀರ ಮುಖಭಾವ ಸಡಿಲಗೊಳ್ಳುತ್ತದೆ, ಸಿಡುಕಿನ ಸ್ವಭಾವ ಕಡಿಮೆಯಾಗಿ ಸಹನಾಶೀಲನಾಗುತ್ತಾನೆ, ಮೊಮ್ಮಕ್ಕಳೊಂದಿಗೆ ಆಡುತ್ತ ಮತ್ತೆ ಮಗುವಾಗುತ್ತಾನೆ. ಮಗ ದೊಡ್ಡವನಾಗಿ ಕುಟುಂಬದ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದನ್ನು, ಗಂಡನ ಮನೆಗೆ ಹೋದ ಮಗಳು ಸಂಸಾರವನ್ನು ಸಲೀಸಾಗಿ ಸರಿದೂಗಿಸಿಕೊಂಡು ಹೋಗುವುದನ್ನೂ ನೋಡಿ ಅಪ್ಪ ಖುಷಿಪಡುತ್ತಾನೆ, ಒಳಗೊಳಗೇ ನಿರಾಳತೆಯ ಭಾವ ಅನುಭವಿಸುತ್ತಾನೆ.  ಅಮ್ಮ ನೀರಿನ ಝರಿಯಂತೆ. ಕಾಲ‌, ಪರಿಸ್ಥಿತಿಗಳು ಎಲ್ಲವನ್ನೂ ಮೀರಿ ಹುಟ್ಟಿನಿಂದ ಅನಂತದವರೆಗೆ ಮಕ್ಕಳಿಗಾಗಿ ಅವಳಲ್ಲಿ ಒಲವು ಒಂದೇ ಸಮನೆ ಒಸರುತ್ತಲೇ ಇರುತ್ತದೆ. ಆದರೆ ಚಿಕ್ಕಂದಿನಲ್ಲಿ ಮಕ್ಕಳಿಗೆ ಹತ್ತಲಾಗದ ಹಿಮಾಲಯದಂತೆ ಕಾಣುವ ಅಪ್ಪ ಕಾಲಕಳೆದಂತೆಲ್ಲ ಕರಗಿ ತಾನೆ ಮಕ್ಕಳೆಡೆಗೆ ಹರಿದು ಬರುತ್ತಾನೆ. ಅಪ್ಪ ಬದಲಾಗುತ್ತಾನೆ.

‍ಲೇಖಕರು Admin MM

20 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading